Homeಕರ್ನಾಟಕವಾಕಿಂಗ್‌ನಲ್ಲಿ ಸಿಕ್ಕವರು; ವ್ಯವಸ್ಥೆಯ ಶೋಷಣೆಯ ನಡುವೆ ಉಸಿರು ಬಿಗಿಹಿಡಿದವರು ಇವರು!

ವಾಕಿಂಗ್‌ನಲ್ಲಿ ಸಿಕ್ಕವರು; ವ್ಯವಸ್ಥೆಯ ಶೋಷಣೆಯ ನಡುವೆ ಉಸಿರು ಬಿಗಿಹಿಡಿದವರು ಇವರು!

- Advertisement -
- Advertisement -

ಬೆಳಗಿನ ವಾಕಿಂಗ್‌ಗಾಗಿ ಮನೆಯ ಗೇಟನ್ನು ದಾಟುವಾಗ ಸಮಯ 6.30. ಅದಕ್ಕಾಗಿ ದಿನವೂ ತೆರಳುವ ಕೆರೆ ಏರಿಯತ್ತ ಕಾಲುಗಳು ತಂತಾನೆ ಶರೀರವನ್ನು ಎಳೆದುಕೊಂಡು ಹೋಗುತ್ತಿದ್ದವು. ಒಂದು ಸೈಕಲ್ ನನ್ನನ್ನು
ಸವರಿಕೊಂಡು ಹೋಯಿತು. ’ಯಾರಪ್ಪ ಇವನು, ಬೆಳಗ್ಗೆ ಬೆಳಗ್ಗೆ ಆಕ್ಸಿಡೆಂಟ್ ಮಾಡುತ್ತಿದ್ದನಲ್ಲ’ ಎಂದು ಸವಾರನತ್ತ ಗಮನ ಹರಿಸಿದೆ. ಅದೊಂದು ಸಣ್ಣ ಮಗು, 12-13 ವರ್ಷ ವಯಸ್ಸಿರಬಹುದು. ಅವನ ಹಳೆಯ ಸೈಕಲ್ ಹ್ಯಾಂಡಲ್‌ಗೆ ಒಂದು ದೊಡ್ಡ ಚೀಲ ನೇತಾಡುತ್ತಿತ್ತು, ಅದು ತುಂಬಿತ್ತು, ಭಾರವೂ ಇರಬಹುದು. ಅವನು ಬಹುಮಹಡಿಯ ಕಟ್ಟಡದ ಗೇಟುನ್ನು ತಳ್ಳಲಾರಂಭಿಸಿದ್ದ. “ಏ ನಿಲ್ಲಪ್ಪ” ಎಂದೆ.

ನನ್ನತ್ತ ನೋಡಿದಾಗ ತುಸು ಭಯದಿಂದ ಇರುವಂತೆ ಕಂಡಿತು. “ನಿಲ್ಲು ನಿನ್ನೊಂದಿಗೆ ಮಾತಾಡಬೇಕು” ಎಂದೆ. ಹತ್ತಿರ ಹೋದೆ, ತಪ್ಪಿತಸ್ಥನ ಮುಖಭಾವ ಕಾಣುತ್ತಿತ್ತು ಆ ಎಳೆಯ ಮುಖದಲ್ಲಿ. “ಹೆದರಬೇಡ” ಎನ್ನುತ್ತಾ ಅವನ ಚೀಲ ನೋಡಿದೆ. ದಿನಪತ್ರಿಕೆಗಳಿಂದ ತುಂಬಿತ್ತು. ಜನ ಬೆಳಗಿನ ಹೊಂಗನಸುಗಳನ್ನು ಕಾಣುವ ಸಮಯದಲ್ಲಿ ದಿನಪತ್ರಿಕೆ ಹಂಚುವ ಹುಡುಗ ತನ್ನ ಕರ್ತವ್ಯಕ್ಕೆ ಹಾಜರಾಗಿದ್ದ. ಆಟ ಆಡುವ ಚಿಕ್ಕ ಮಗುವಿಗೆ ಹೊಟ್ಟೆ ತುಂಬಿಸಿಕೊಳ್ಳುವ ಜವಾಬ್ದಾರಿ. ಧೈರ್ಯಗೆಡದಂತೆ ಅವನನ್ನು ಸಮಾಧಾನಪಡಿಸಿದೆ. “ನಿನ್ನ ಹೆಸರೇನು?” ಶಾಂತವಾಗಿ ಕೇಳಿದೆ. “ಜೀವನ್” ಎಂದು ಉತ್ತರಿಸಿದ. ಪ್ರಶ್ನೆಗಳನ್ನು ಕೇಳುತ್ತ ಹೋದೆ.

ಜೀವನ್

ಆಳುಕಿನಿಂದಲೆ ಉತ್ತರಿಸಲಾರಂಭಿಸಿದ. ಅವನು ಏಳನೆಯ ಕ್ಲಾಸ್‌ನಲ್ಲಿ ಓದುತ್ತಿದ್ದ. ಅವ್ವ ಮನೆಗೆಲಸ ಮಾಡುವವಳು, ಇಬ್ಬರು ತಂಗಿಯರು ಅವನ ಅವ್ವನ ಮಡಿಲಲ್ಲಿ. “ಈ ಕೆಲಸದಿಂದ ಎಷ್ಟು ಹಣ ಸಿಗುತ್ತದೆ” ಕೇಳಿದೆ. “ತಿಂಗಳಿಗೆ ಸಾವಿರ ರೂಪಾಯಿ” ಅಂದ. ಅದರಲ್ಲಿ ನೂರು ರುಪಾಯಿ ತಾನಿಟ್ಟುಕೊಂಡು ಉಳಿದದ್ದನ್ನು ಅಮ್ಮನಿಗೆ ಕೊಡುವುದಾಗಿ ಹೇಳಿದ. ಅವನ ಬಗ್ಗೆ ಇನ್ನೂ ತಿಳಿಯುವ ಕುತೂಹಲ. ಆದರೆ ಅವನು ಹೆದರಲಾರಂಭಿಸಿದ್ದ. “ಫೋಟೋ ತೆಗೆಯಲಾ” ಅಂದದ್ದಕ್ಕೆ “ಬಿಟ್ಟುಬಿಡಿ ಸರ್” ಎಂದು ಓಡಲಾರಂಭಿಸಿದ. “ಹತ್ತಿರ ಬಾರಪ್ಪ” ಎಂದು ಸಮಾಧಾನಪಡಿಸಿ ಫೋಟೋ ತೆಗೆದೆ.

ಇನ್ನೂರು ಮೀಟರು ನಡೆಯುವುದರಲ್ಲಿ ಇನ್ನೊಬ್ಬ ಎದುರಾದ. ಅವನೂ ಪೇಪರ್ ಹಾಕುವ ಹುಡುಗನೇ. ಅವನನ್ನು ನಿಲ್ಲಿಸಿದೆ. ಇವನು ಅವನಿಗಿಂತ ಸ್ವಲ್ಪ ಎತ್ತರಕ್ಕಿದ್ದ, ಸ್ವಲ್ಪ ದೊಡ್ಡವನು. ಎಂಟನೆಯ ಕ್ಲಾಸ್‌ನಲ್ಲಿ ಓದುತ್ತಿದ್ದ. ಅವನ ಹೆಸರು ಅಕುಲ್. ತಂದೆ ಇಲ್ಲ. ಅಕ್ಕ ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾಳೆ. ಇವರಿಬ್ಬರಲ್ಲದೆ ಅವ್ವನ ಮಡಿಲಲ್ಲಿ ಇನ್ನೂ ಒಂದು ಪಾಪು ಇದೆಯಂತೆ.

ಮನೆಗೆಲಸ ಅಮ್ಮನ ಕಾಯಕ. ನಾಲ್ಕು ಸಾವಿರ ಮನೆ ಬಾಡಿಗೆ ಕೊಡುತ್ತಾರಂತೆ. ಸರಕಾರಿ ಶಾಲೆಯಲ್ಲಿ ಅವನ ಓದು; ಫೀ ಇಲ್ಲವಂತೆ. ಅವನೂ ತನ್ನ ಗಳಿಕೆಯಲ್ಲಿ ರೂ.900 ತನ್ನ ಮಮ್ಮಿಗೆ ಕೊಟ್ಟು ನೂರು ರೂಪಾಯಿ ತನ್ನ ಖರ್ಚಿಗೆ ಇಟ್ಟುಕೊಳ್ಳುತ್ತಾನಂತೆ. ಸೆಕೆಂಡ್ ಹ್ಯಾಂಡ್ ಸೈಕಲ್ ಅವನದು. ಸೀಟು ಕಿತ್ತುಹೋಗಿ ಕಬ್ಬಿಣ ಕಾಣುತ್ತಿತ್ತು. ಅವನು ಕುಳಿತರೆ ಅದು ತೊಂದರೆ ಕೊಡುವಂತಿತ್ತು. “ಸೈಕಲ್ ಯಾಕೆ ಹೀಗಿದೆ” ಎಂದೆ. “ರಿಪೇರಿ ಮಾಡಿಸಬೇಕು, ಮಾಡಿಸಲು ಹಣ ಇಲ್ಲ” ಎಂದ. ಪರ್ಸಿಗಾಗಿ ಜೇಬು ತಡಕಾಡಿದೆ. ನೋಟೊಂದನ್ನು ಅವನ ಕೈಯಲ್ಲಿ ಇಡಲುಹೋದೆ, “ಬೇಡಬೇಡ” ಎಂದು ದೂರಸರಿದ. ಒತ್ತಾಯ ಮಾಡಿ ಅದನ್ನು ನೀಡಬೇಕಾಗಿ ಬಂತು. ಚಿಕ್ಕ ಮಗುವಿನ ಸ್ವಾಭಿಮಾನ ನನ್ನನ್ನು ಅಚ್ಚರಿಗೊಳಿಸಿತ್ತು. ಅವನ ಬಗ್ಗೆ ಗೌರವ ಹೆಚ್ಚಾಯಿತು, ಮನಸಿನಲ್ಲಿ ಅವನ ಸ್ವಾಭಿಮಾನಕ್ಕೆ ಸಲಾಂ ಹೇಳಿದೆ.

ಅಕುಲ್

ಒಂದು ಕಿಲೋಮೀಟರ್ ನಡೆದಿರಬಹುದು; ರಸ್ತೆಯ ಕಸವನ್ನು ಎತ್ತುವ ಗಾಡಿ ಕಂಡಿತು. ಅವನನ್ನೂ ಮಾತಾಡಿಸುವ ಮನಸ್ಸಾಯಿತು. ಚಾಲಕನ ಸೀಟಿನಲ್ಲಿದ್ದ ಅವನಿಗೆ ಹೊರಬರಲು ಕೇಳಿಕೊಂಡೆ. ಅವನು ಹಿಂದುಳಿದ ಯಾದಗಿರಿಯ ಬಸವಲಿಂಗ. 25 ವರ್ಷ ಆತನಿಗೆ, ನೋಡಲು ಕುಳ್ಳಗೆ, ತೆಳ್ಳಗೆ ಇದ್ದ. ಈಗಾಗಲೇ ಮೂರು ಮಕ್ಕಳ ತಂದೆ. ಸಂಬಳ 12,888 ರೂ; ಪಿಎಫ್ ಮತ್ತು ಇಎಸ್‌ಐ ಎಂದು ಮುರಿದುಕೊಂಡು, ಕೈಗೆ ಹನ್ನೆರಡು ಸಾವಿರ ರೂಪಾಯಿ ಬರುತ್ತದಂತೆ. “ಇಎಸ್‌ಐ ಕಾರ್ಡ್ ಕೊಟ್ಟಿದ್ದಾರಾ” ಎಂದೆ. “ಯಾವದು ಇಲ್ಲ” ಎಂದ. ಅವನ ಅಮ್ಮ ಬೀದಿ ಕಸಗುಡಿಸುವ ಸತ್ಯಕ್ಕ. ಅವರಿಗೂ ಅವನಷ್ಟೇ ಸಂಬಳ. ತನ್ನ ಹಾಗೂ ತಾಯಿಯ ಸಂಬಳದಲ್ಲಿ ಜೀವನಕ್ಕೇನು ಕಷ್ಟವಿಲ್ಲ ಎಂದ. ಐದು ಸಾವಿರ ಮನೆ ಬಾಡಿಗೆ ಕೊಡುತ್ತಾರಂತೆ. ಹೆಂಡತಿ ಬಗಲಲ್ಲಿರುವ ಮಕ್ಕಳನ್ನು ನೋಡಿಕೊಂಡು ಅಡಿಗೆ ಮಾಡುತ್ತಾಳಂತೆ. ತಾಯಿ ಮಗ ಮನೆಯನ್ನು ನಸುಕಿನಲ್ಲಿಯೇ ಬಿಡುತ್ತಾರಂತೆ. ಬೆಳಗಿನ ತಿಂಡಿ ಹೊಟೇಲ್‌ನಲ್ಲಿ. ದಿನಕ್ಕೆ ಎಂಬತ್ತು ರೂಪಾಯಿ ಅದಕ್ಕೆ ಖರ್ಚು ಆಗುವದಂತೆ. ಹೆಸರಿನ ಮೂಲಕ ಗೆಸ್ ಮಾಡಿದ್ದು ತಪ್ಪಾಗಿ ಆತ ಲಿಂಗಾಯಿತನಾಗಿರದೆ, ದಲಿತ ಸಮುದಾಯಕ್ಕೆ
ಸೇರಿದವನಾಗಿದ್ದ; ಇನ್ನೊಂದಿಷ್ಟು ಪ್ರಶ್ನೆ ಕೇಳಿ ಮುಂದೆ ನಡೆದೆ.

ಹೊಸ ಬಡಾವಣೆ ಅದು; ಹೊಸಹೊಸ ಮನೆಗಳು; ಮನೆಗಳಿಗೆ ತಕ್ಕಂತೆ ಹೊಸದಾಗಿ ಟಾರು ಹಾಕಿದ ರಸ್ತೆ. ರಸ್ತೆ ಸ್ವಚ್ಛವಾಗಿತ್ತು; ಸ್ವಚ್ಛವಾದ ರಸ್ತೆ ಕಂಡರೆ ಮನಸ್ಸು ಉಲ್ಲಸಿತವಾಗುತ್ತೆ. ಅದಕ್ಕೆ ಕಾರಣೀಭೂತರನ್ನು ಮನದಲ್ಲಿ ವಂದಿಸುತ್ತಲಿದ್ದೆ. ಆಗಲೇ ಕಾಣಿಸಿಕೊಂಡದ್ದು, ಹಸಿರು ಸೀರೆ ಮತ್ತು ಬಿ.ಎಂ.ಸಿ. ಎಂದು ಸಿಕ್ಕಾ ಹಾಕಿದ, ಕೆಂಪು ಅಂಗಿಯನ್ನು ಧರಿಸಿದ್ದ ಮಧ್ಯ ವಯಸ್ಸು ದಾಟಿದ ಮಹಿಳೆ. ಆಕೆಯೇ ಆ ರಸ್ತೆಯ ನಿರ್ವಾಹಕಿ. “ನಿನ್ನೊಂದಿಗೆ ಮಾತಾಡಬೇಕು ಬಾರಮ್ಮ” ಎಂದೆ. ಹೆದರುತ್ತಲೆ ಹತ್ತಿರವಾದಳು. “ನಿನ್ನ ಹೆಸರೇನಮ್ಮ” ಕೇಳಿದೆ. “ಯಾಕೆ ಸಾಮಿ ನಾನೇನು ತಪ್ಪು ಮಾಡಿರುವೆ” ಅಂದದ್ದಕ್ಕೆ, “ಇಲ್ಲಮ್ಮ. ನೀನು ಚೆನ್ನಾಗಿ ಕೆಲಸ ಮಾಡುತ್ತೀ, ಅದಕ್ಕಾಗಿ ನಿನಗೊಂದು ಥ್ಯಾಂಕ್ಸ್ ಹೇಳೋಣವೆಂದು ಕರೆದೆ”. ಅನುಮಾನದಿಂದಲೇ ನೋಡುತ್ತಿದ್ದಳು. ಗೊತ್ತಿಲ್ಲದವರು ಯಾರೂ ತನ್ನನ್ನು ಮನುಷ್ಯಳ ರೀತಿಯಲ್ಲಿ ಕಂಡು ಮಾತಾಡಿಸಿಲ್ಲವೆಂದು ನಂತರ ಹೇಳಿದಳು. ತಮಿಳುನಾಡಿನ ’ಪಂಚಮ’ ಜನಾಂಗ ಅವಳದು. “ವಯಸ್ಸೆಷ್ಟು?” ಎಂದೆ, “ಗೊತ್ತಿಲ್ಲ ಸಾಮಿ”. “ಮಕ್ಕಳು?”, “ಇದ್ದಾರೆ ಸಾಮಿ, ಮೊಮ್ಮಕ್ಕಳೂ ಇದ್ದಾರೆ, ಹೆಣ್ಣು ಮಕ್ಕಳ ಇಬ್ಬರ ಗಂಡಂದಿರು ಬಿಟ್ಟುಹೋಗಿದ್ದಾರೆ, ಮಕ್ಕಳನ್ನು ತಾಯಂದಿರೆ ಸಾಕುತ್ತಾರೆ, ನೆಲಮಂಗಲದಲ್ಲಿ ಮನೆಗೆಲಸ ಮಾಡಿಕೊಂಡಿದ್ದಾರೆ” ಎಂದಳು. “ನಿನಗೆ ಸಂಬಳ ಎಷ್ಟು” ಕೇಳಿದೆ, “18000 ರೂಪಾಯಿ” ಎಂದಳು. “ಓಹೋ ಚನ್ನಾಗಿದೆಯಲ್ಲ” ಎಂದು ಹುರಿದುಂಬಿಸುವಂತೆ ನುಡಿದೆ. “ಸಾಲಲ್ಲ ಬುದ್ಧಿ, ನಾಲ್ಕು ಸಾವಿರ ಬಾಡಿಗೆ ಕಟ್ಟುತ್ತೇನೆ. ದಿನಾಲು ಇಲ್ಲಿಗೆ ಬರಲು ಬಸ್ ಚಾರ್ಜ್ ಕೊಡಬೇಕು, ಬೆಳಗ್ಗೆ ಆರು ಗಂಟೆಗೆ ಹಾಜರಿ ಹಾಕಲು ಇಲ್ಲಿರಬೇಕು. ಮನೆಯಲ್ಲಿ ಅಡಿಗೆ ಮಾಡಲಾಗುವದಿಲ್ಲ. ಬೆಳಗಿನ ತಿಂಡಿ ಹೋಟೆಲಿನಲ್ಲಿಯೇ ತಿನ್ನಬೇಕು. ಅದಕ್ಕೆ 40-50 ರೂಪಾಯಿ ಹೋಗುತ್ತದೆ” ಎಂದು ಕಷ್ಟಗಳನ್ನು ಹೇಳಿಕೊಂಡಳು. ಯಾರೋ ಸಾಹೇಬರು ಮನೆ ಕೊಡಿಸುವರೇನೋ ಎಂಬ ದೂರಿನ ಆಸೆಯೂ ಅವಳ ಕಣ್ಣಲ್ಲಿದೆ. “ಇವತ್ತಿನ ತಿಂಡಿ ನನ್ನ ಕಡೆಯಿಂದ” ಎಂದೆ. ಕೃತಜ್ಞತಾಭಾವದಿಂದ ನಗೆಬೀರಿದಳು.

ಬಸವಲಿಂಗ

75ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಅಣಿಯಾಗುತ್ತಿದೆ ಭಾರತ ದೇಶ. ವೈಭವದಿಂದ ಆಚರಿಸಲು ಸರಕಾರವು ನಿರ್ಧರಿಸಿದೆ. ಅದಕ್ಕಾಗಿ ರೈಲು, ಬಸ್ಸು, ಮೆಟ್ರೋ ರೈಲುಗಳಿಗೆ ಶೃಂಗರಿಸಲು ಯೋಜನೆ ಸಿದ್ಧವಾಗುತ್ತಿದೆ. ಆ ನಿಟ್ಟಿನಲ್ಲಿ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಬಿಡುಗಡೆ ಮಾಡಲಾಗಿದೆ. ಅಂತಹ ಚಿತ್ರವೊಂದು ಕಣ್ಮುಂದೆ ಬಂತು. ರಾಜಧಾನಿಗಳಲ್ಲಿ ಇಂತಹ ಮಹತ್ವದ ದಿನವನ್ನು ವೈಭವಯುತವಾಗಿ ಆಚರಿಸಲು ನಿರ್ಧರಿಸಿರುವುದನ್ನು ಪತ್ರಿಕೆಗಳಲ್ಲಿ ಓದಿದ್ದು ಮನಪಟಲದ ಮೇಲೆ ಮೂಡಿಬಂತು.

ಅಷ್ಟರಲ್ಲಿ ಬುಲ್ಡೋಜರಿನ ಕರ್ಕಶ ಶಬ್ದ ಕಿವಿಯನ್ನು ಹೊಕ್ಕಿತು. ತಿರುಗಿ ನೋಡಿದೆ, ಚರಂಡಿಗೆ ಕಾಂಕ್ರಿಟ್ ಸ್ಲಾಬ್‌ಗಳನ್ನು ಅಳವಡಿಸುವ ಕೆಲಸವಾಗುತ್ತಿದೆ. ಚರಂಡಿ ರಿಪೇರಿ ಆರು ತಿಂಗಳ ಹಿಂದೆಯೇ ಆಗಿತ್ತು. ಹೊಸ ಕಾಂಕ್ರೀಟ್ ಗೋಡೆಗಳನ್ನು ಹಾಕಲು ಈಗಿರುವ ಹಳೆಯ ಗೋಡೆಗಳನ್ನು ಕೆಡವುತ್ತಲಿತ್ತು ಬುಲ್ಡೋಜರ್. ಸ್ಥಳೀಯ ಶಾಸಕರ ಪರ್ಸೆಂಟೇಜ್ ಕಾಮಗಾರಿಗಳು ಎಂದಿತು ಮನಸ್ಸು. ಎಲ್ಲರೂ ತಿನ್ನುವವರೆ, ಇಲ್ಲಿ ಇಷ್ಟಾದರೂ ಮಾಡುತ್ತಾನಲ್ಲ ಎಂದು ಅಸಹಾಯಕತೆಯಿಂದ ಅವನನ್ನು ಅಭಿನಂದಿಸಿದೆ. ಕೆರೆ ಏರಿ ಸಿಕ್ಕಿತು. ಅದಕ್ಕೆ ಗೇಟುಗಳನ್ನು ಅಳವಡಿಸಿದ್ದಾರೆ. ಕಾಯಲು ಪೊಲೀಸರನ್ನು ನೇಮಿಸಿದ್ದಾರೆ. ಗೇಟನ್ನು ತೆಗೆದು ಒಳಗೆ ಹೆಜ್ಜೆ ಇಟ್ಟೆ. ಎದುರುಗಡೆ ಇಬ್ಬರು ಕಂಡರು.

ವಾಕಿಂಗ್‌ನಲ್ಲಿ ಕಂಡವರ ಕೊನೆಯ ಕಂತನ್ನು ಓದಿಬಿಡಿ!

ಕಾವಲು ಕಾಯುತ್ತಿದ್ದವರಿಗೆ “ನೀವು ಪೊಲೀಸಿನವರಾ” ಎಂದೆ. “ಇಲ್ಲ ಸರ್ ನಾವು ಹೋಂ ಗಾರ್ಡ್ಸ್” ಎಂದರು. ಮಾತಿಗೆ ನಿಂತೆ. ಹೆಸರು ಬಿ.ಆರ್ ಶ್ರೀನಿವಾಸಮೂರ್ತಿ ಮತ್ತು ಬಲರಾಮ ರಾಯ ಪಟೇಲ ಎಂದು ಪರಿಚಯಿಸಿಕೊಂಡು. “ಎಷ್ಟು ವರ್ಷದಿಂದ ನೀವು ಇಲ್ಲಿ ಕೆಲಸ ಮಾಡುತ್ತಿದ್ದೀರಾ” ಕೇಳಿದೆ. “ಮೂರು ವರ್ಷಗಳಾಗುತ್ತ ಬಂದಿದೆ” ಎಂದರು. “ಮಕ್ಕಳು ಮರಿ ಇದ್ದಾರೆಯೇ?” ಪ್ರಶ್ನಿಸಿದೆ. “ಇದ್ದಾನೆ ಸರ್, ಬಿ.ಬಿ.ಎಂ. ಮಾಡುತ್ತಿದ್ದಾನೆ” ಎಂದರು ಅಭಿಮಾನದಿಂದ ಶ್ರೀನಿವಾಸಮೂರ್ತಿ.

ಮಾಲಿಂಗಮ್ಮ

“ತುಂಬಾ ಸಂತೋಷ, ಅವನನ್ನು ಚೆನ್ನಾಗಿ ಓದಿಸಿ” ಎಂದೆ. ಅದಕ್ಕವರು “ವಾರ್ಷಿಕ 1,30,000 ರೂಪಾಯಿ ಕಾಲೇಜು ಫೀಸು” ಎಂದರು. ನನ್ನ ಮಗನನ್ನು ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿಸಿದ್ದು ನೆನಪಾಯಿತು; ಹೆಚ್ಚೆಂದರೆ 18000 ಸಾವಿರ ಫೀಸ್ ಕಟ್ಟಿರಬಹುದು. ಮಗಳ ಮೆಡಿಕಲ್ ಕಾಲೇಜಿನ ಫೀಸೂ ಆಷ್ಟಿರಲಿಲ್ಲ. 20 ಸಾವಿರದೊಳಗೆ ಇರಬಹುದು. ಶಿಕ್ಷಣ ಇಷ್ಟೊಂದು ದುಬಾರಿಯಾಗಿದೆಯಾ ಎಂದು ಕಸಿವಿಸಿಗೊಂಡೆ.

“ಬಿ.ಬಿ.ಎಂ.ಗೆ ಅಷ್ಟೊಂದು ಫೀಸ್ ಇದೆಯಾ?” ಆಶ್ಚರ್ಯಚಕಿತನಾಗಿ ಕೇಳಿದೆ. “ಅಷ್ಟೇ ಅಲ್ಲ ಸರ್, ಎಕ್ಸಾಮಿನೇಷನ್ ಫೀಸ್, ಅವನ ಯುನಿಫಾರ್ಮ್, ಹೋಗಿಬರುವ ಖರ್ಚು ಎಲ್ಲ ಸೇರಿ ಒಟ್ಟು ಎರಡು ಲಕ್ಷದ ಹತ್ತಿರ ಬರುತ್ತದೆ” ಅಂದರು. “ಹಾಗಿದ್ದರೆ ನಿಮಗೆ ಸಂಬಳ ಎಷ್ಟು” ಎಂದೆ. “ಸರ್, ಈಗ 14000ದ ಹತ್ತಿರ ಬರುತ್ತಿದೆ, ಮುಂದಿನ ತಿಂಗಳಿಂದ 18000 ಆಗುತ್ತದೆ” ಎಂದರು ಸಂತೋಷದಿಂದ. ಅವರ ಗಳಿಕೆ ಕೇಳಿ ತುಸು ಗಾಬರಿಯಾದೆ. ಬೇರೆ ಇನ್ಕಮ್ ಏನಾದರೂ ಇರಬಹುದಾ ಎಂದುಕೊಂಡು

“ಯಾವೂರು ನಿಮ್ಮದು?” ಎಂದೆ. “ಬೆಟ್ಟದ ಕೋಟೆ ಹಳ್ಳಿ” ಎಂದರು. “ಜಮೀನು ಏನಾದರೂ ಇರಬೇಕಲ್ಲ” ಎಂದೆ. “ಇಲ್ಲ ಸರ್, ನಾವು ವೈಷ್ಣವ ಬ್ರಾಹ್ಮಣರು, ಯಾವ ಜಮೀನೂ ಇಲ್ಲ” ಎಂದು ಉತ್ತರಿಸಿದರು. ವರ್ಣಾಶ್ರಮದ ವ್ಯವಸ್ಥೆಯಲ್ಲಿ ಎಲ್ಲರಿಗಿಂತ ಮೇಲಿದ್ದವರು ಅವರು. ಸಂಪತ್ತನ್ನು ಗಳಿಸುವ, ಕೂಡಿಹಾಕುವ ಹಕ್ಕು ಅವರಿಗೆ ಮಾತ್ರ ಎಂದು ಮನುಧರ್ಮಶಾಸ್ತ್ರದಲ್ಲಿ ಓದಿದ್ದೆ. “ಮೂರ್ತಿಯವರೇ ನೀವು ಪೂಜಾರಿಗಳಾಗಿ ಹೆಚ್ಚು ದುಡಿಯಬಹುದಲ್ಲವೇ” ಪ್ರಶ್ನಿಸಿದೆ. “ಸರ್ ನಾವೂ ವೈಷ್ಣವ ದೇವಸ್ಥಾನದ ಅರ್ಚಕರೇ. ಬೆಟ್ಟದ ಕೋಟೆ ಶ್ರೀನಿವಾಸ ದೇವಸ್ಥಾನದ ಅರ್ಚಕ ಹುದ್ದೆ ನಮ್ಮ ಮನೆತನಕ್ಕೆ ಬಳುವಳಿಯಾಗಿ ಬಂದಿದೆ. ಆದರೆ ನಮ್ಮ ಅಣ್ಣತಮ್ಮಂದಿರ ಕುಟುಂಬಗಳು ಬೇರೆಬೇರೆಯಾಗಿ ಬಹಳ ವರ್ಷಗಳಾಗಿವೆ. ನನಗೆ ಆರು ವರ್ಷಕ್ಕೊಮ್ಮೆ ಪೂಜಾರಿಯ ಸರದಿ ಬರುವದು. ಅದನ್ನು ನಂಬಿಕೊಂಡು ಜೀವನ ಮಾಡಲಾಗದು, ಆದ್ದರಿಂದ ನಾನು ಕೈಗೆ ಸಿಕ್ಕ ಕೆಲಸವನ್ನು ಮಾಡುತ್ತೇನೆ” ಎಂದರು. ಕಡಿಮೆ ಆದಾಯದ ಅವರ ಜೀವನದ ಬಗ್ಗೆ ಯೋಚಿಸಿದೆ. ಅವರೆ ಮುಂದುವರೆಸಿ ಹೇಳಿದರು: “ಮಗನ ಓದಿಗೆ ಹೇಗೋ ಸಂಪಾದನೆ ಮಾಡುತ್ತೇವೆ. ಜೀವನ ನಿರ್ವಹಣೆಗೆ ಅಲ್ಲಿಲ್ಲಿ ಸಿಗುವ ಗೃಹಪ್ರವೇಶ, ಗಣಪತಿ ಪೂಜೆ, ಮತ್ತಿತರ ಸಣ್ಣಪುಟ್ಟ ಪೂಜೆಗಳನ್ನು ನನ್ನ ಶಿಫ್ಟ್ ಮುಗಿದ ನಂತರ ಮಾಡುವೆ” ಎಂದರು. “ಅಂತಹವುಗಳು ತಿಂಗಳಲ್ಲಿ ಎಷ್ಟು ಬಾರಿ ಸಿಗುತ್ತವೆ?” ಮರು ಪ್ರಶ್ನೆ ನನ್ನಿಂದ. “ನಾಲ್ಕಾರು ಬಾರಿ ಸಿಗಬಹುದು” ಎಂದರು. “ಒಂದು ಪೂಜೆಗೆ ಎಷ್ಟು ಕೊಡುತ್ತಾರೆ” ಎಂದೆ. “ಗೃಹ ಪ್ರವೇಶಕ್ಕೆ ಎರಡು ಸಾವಿರ ಉಳಿದ ಪೂಜೆಗಳಿಗೆ ಐದು ಅಥವಾ ಆರು ನೂರು” ಎಂದರು.

“ನಮಸ್ಕಾರ ಮತ್ತೊಮ್ಮೆ ಸಿಗೋಣ” ಎಂದು ವಿದಾಯ ಹೇಳಿದೆ.

ಬಡತನ ಸರ್ವವ್ಯಾಪಿ. ವಿಶ್ವಗುರು, ಫೈವ್ ಟ್ರಿಲಿಯನ್ ಎಕಾನಮಿ, ಜಗತ್ತಿನಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂದು ಬರಿ ಬಾಯಿಬಡಿದುಕೊಂಡರೆ, ಸಮಸ್ಯೆಗಳು ಕಾಣದಂತೆ ಪರದೆ ಎಳೆದರೆ ದೇಶ ಉದ್ಧಾರ ಆದಂತೆಯೇ? ಸರ್ವರಿಗೂ ಶಿಕ್ಷಣ, ಉದ್ಯೋಗ, ಉದ್ಯೋಗಕ್ಕೆ ತಕ್ಕ ಸಂಬಳ, ದುಡಿಯುವ ಕೈಗಳಿಗೆ ಶಕ್ತಿ, ಜನರ ಅರೋಗ್ಯ ಕಾಪಾಡುವದು ಸರಕಾರದ ಕರ್ತವ್ಯ ಅಲ್ಲವೆ?

ಬಲರಾಮ ರಾಯ ಪಟೇಲ ಮತ್ತು ಬಿ ಆರ್ ಶ್ರೀನಿವಾಸಮೂರ್ತಿ

ಶೋಷಣೆ ಮುಕ್ತ, ಸ್ವಹಿತಮುಕ್ತ ನಾಯಕತ್ವ ಇಂದಿನ ಅವಶ್ಯಕತೆ ಅಲ್ಲವೇ? ದೇವರು, ಮಂದಿರ ನಿರ್ಮಾಣ, ಧರ್ಮಧರ್ಮಗಳಲ್ಲಿ ವೈಷಮ್ಯ ಬಿತ್ತಿ ಭಾವನಾತ್ಮಕವಾಗಿ ಆಳುವ ಸರಕಾರ ಬೇಕೇ? ಜನರಲ್ಲಿ ಮೌಢ್ಯ ಬಿತ್ತಿ, ಅವರನ್ನು ಶೋಷಣೆಗೊಳಪಡಿಸಿದರೆ ಒಂದು ವರ್ಗ ಮಾತ್ರ ಬದುಕಬಹುದಲ್ಲವೇ? ಅದನ್ನು ಒಂದು ಕಾಲದಲ್ಲಿ ಬ್ರಾಹ್ಮಣ ಮತ್ತು ಕ್ಷತ್ರಿಯರ ಮಾಡುತ್ತಿದ್ದರಲ್ಲವೇ? ಇಂದು ಪ್ರಜಾಪ್ರಭುತ್ವ ಹೆಸರಿನಲ್ಲಿಯೂ, ಅದು ನಾಯಕರ ಮತ್ತು ಆಡಳಿತಗಾರ ಹೆಸರಿನಲ್ಲಿ ಮುಂದುವರೆದಿದೆ. ಅವರಿಗೆ ಬೆನ್ನೆಲುಬಾಗಿ ಕೆಲವು ನೀಚ ಉದ್ದಿಮೆದಾರರು ಹಿಂದಿನ ವೈಶ್ಯರಂತೆ ಬಡವನ ರಕ್ತ ಹೀರುತ್ತಿದ್ದಾರೆ. ಯಾರು ಉತ್ತರಿಸುವರು? ಮನೆ ಹತ್ತಿರ ಬಂತು; ಕಾಂಪೌಂಡ್ ಗೇಟ್ ತೆಗೆದು ಒಳನಡೆದೆ.

ಜಿ ಬಿ ಪಾಟೀಲ

ಜಿ ಬಿ ಪಾಟೀಲ
ಬಸವನ ಬಾಗೇವಾಡಿಯ ಜಿ.ಬಿ.ಪಾಟೀಲ್ ಅವರು ಬೆಂಗಳೂರಿನಲ್ಲಿ ಯಶಸ್ವಿ ಉದ್ಯಮಿಯಾಗಿದ್ದೂ, ಸಾಮಾಜಿಕ ಹಾಗೂ ರಾಜಕೀಯ ಸಂಗತಿಗಳಲ್ಲಿ ನಿರಂತರ ಆಸಕ್ತಿ ಹೊಂದಿದ್ದವರು. ಸದ್ಯ ಜಾಗತಿಕ ಲಿಂಗಾಯಿತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯರಾಗಿದ್ದಾರೆ.


ಇದನ್ನೂ ಓದಿ: ಉಡುಪಿ: ಹಿಜಾಬ್‌ ತೀರ್ಪಿನ ಬಳಿಕ 400ಕ್ಕೂ ಹೆಚ್ಚು ಮುಸ್ಲಿಂ ಹೆಣ್ಣುಮಕ್ಕಳು ತರಗತಿಯಿಂದ ಹೊರಕ್ಕೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...