HomeI AM GAURIಶಾಸ್ತ್ರೀಯ – 3: ಜನರ ಸರದಾರ ಕುಮಾರರಾಮ

ಶಾಸ್ತ್ರೀಯ – 3: ಜನರ ಸರದಾರ ಕುಮಾರರಾಮ

- Advertisement -
- Advertisement -

ಕನ್ನಡನಾಡಿನ ಚರಿತ್ರೆಯಲ್ಲಿ ಜನಸಮುದಾಯದ ನಡುವಿನಿಂದ ಬಂದ ಮರೆಯಲಾಗದ ರಾಜನೆಂದರೆ ಕುಮ್ಮಟದ ಅಧಿಪತಿ ಕುಮಾರ ರಾಮನಾಥ. ಚರಿತ್ರೆಯನ್ನು ವರ್ತಮಾನದ ದೃಷ್ಠಿಕೋನದಲ್ಲಿ ನೋಡುವಾಗ, ಸಾಮಾನ್ಯವಾಗಿ ನಿರಂಕುಶ ರಾಜಪ್ರಭುತ್ವದ ಕ್ರೂರಮುಖಗಳನ್ನು ಜೊತೆಗೆ, ಯಾವುದು ಜನಪರವಾಗಿ ಇರುತ್ತದೆಯೋ ಎಂಬ ಪ್ರಶ್ನೆಗಳನ್ನು ಮರ್ಜಿಯಲ್ಲಿಟ್ಟುಕೊಂಡೇ ನಮ್ಮ ಸಂಶ್ಲೇಷಣೆಗಳು ನಡೆಯುತ್ತವೆ. ಇದು ದಿಟವೂ ಕೂಡ. ಆದರೆ ಭಾರತೀಯ ಚಾರಿತ್ರಿಕ ಅವಲೋಕವನ್ನು ಸೂಕ್ಷ್ಮವಾಗಿ ನೋಡಿದರೆ ಇಡೀ ದಕ್ಷಿಣ ಭಾರತದ ಜನಮಾನಸದಲ್ಲಿ ಬೇರೂರಿದ ಏಕೈಕ ಅರಸ ಗಂಡುಗಲಿ ಕುಮಾರರಾಮ. 13ನೇ ಶತಮಾನದ ರಾಜನೊಬ್ಬ ಸಮಾಜದ ಅಪಾರ ಗೌರವ, ಮನ್ನಣೆ, ಪೂಜೆ, ಆದರಗಳಿಗೊಳಗಾದ ವ್ಯಕ್ತಿತ್ವದವನಾಗಿದ್ದನೆಂದರೆ ಅದು ಬಹುದೊಡ್ಡ ಪವಾಡದಂತೆ ಗೋಚರಿಸುತ್ತದೆ. ಆದರೆ ಕುಮಾರರಾಮನ ಚರಿತ್ರೆಯು ನಿಜಾರ್ಥದಲ್ಲಿ ಜೀವಂತ ಪವಾಡವಾಗಿತ್ತೆಂಬುದನ್ನು ನಾಡಿನ ತುಂಬ ಹಬ್ಬಿದ ಆತನ ಜೀವನ ಮತ್ತು ಆದರ್ಶ ಕತೆಗಳೇ ಹೇಳುತ್ತವೆ.

ಕಂಪಿಲರಾಯನ ಉತ್ತರಾಧಿಕಾರಿಯಾದ ಕುಮಾರ ರಾಮನಾಥ ಕನ್ನಡನಾಡಿನ ಭದ್ರ, ಜನಪರ ಆಡಳಿತದ ಕುಮ್ಮಟದುರ್ಗದ ಸೇನಾನಿ. ಮುಮ್ಮಡಿ ಸಿಂಗಿನಾಯಕನ ಪರಂಪರೆಯಲ್ಲಿ ಬಂದ ಬುಡಕಟ್ಟು ಸಮುದಾಯದ ರಾಜಕಾರಣಿ. ಹೊಯ್ಸಳರಂತಹ ಪ್ರಬಲ ರಾಜಮನೆತನವನ್ನು ಹಿಮ್ಮೆಟಿಸಿದ ಹೆಗ್ಗಳಿಕೆ ಆತನಿಗಿದೆ. ಕುಮಾರರಾಮ ದೆಹಲಿಯ ಸುಲ್ತಾನರನ್ನು ನಾಲ್ಕುಬಾರಿ ಓಡಿಸಿದ ಸಮರ್ಥ ದೊರೆ. ದಕ್ಷಿಣ ಭಾರತವನ್ನು ಕೈವಶ ಮಾಡಿಕೊಳ್ಳಲೆತ್ನಿಸಿದ ದೆಹಲಿಯ ಸುಲ್ತಾನರನ್ನು ಓಡಿಸದೆ ಕೆಲವು ರಾಜರು ಶರಣಾಗತರಾದಾಗ ಕುಮಾರರಾಮ ತನ್ನ ಪುಟ್ಟ ಸಾಮ್ರಾಜ್ಯದ ಮಿತಿಯಲ್ಲಿಯೇ ಅವರನ್ನು ಹಿಮ್ಮೆಟಿಸಿದ್ದು ಭಾರತೀಯ ಮಧ್ಯಕಾಲೀನ ಇತಿಹಾಸದ ರೋಚಕ ಸಂಗತಿ. ಈ ದೇಶವನ್ನು ಕ್ಷತ್ರಿಯರಲ್ಲದೆ, ಬುಡಕಟ್ಟು ಸಮುದಾಯದ ವೀರರು ಕೂಡ ಪ್ರಜ್ಞಾವಂತಿಕೆಯಿಂದ ಅದರಲ್ಲಿಯೂ ಜನಮುಖಿಯಾಗಿ ನಾಡನ್ನು ಆಳ್ವಿಕೆ ಮಾಡಬಲ್ಲರೆಂಬುದಕ್ಕೆ ಕುಮ್ಮಟದ ಕುಮಾರರಾಮನೇ ಹಿರಿದಾದ ಸಾಕ್ಷಿ. ಉತ್ತರ ಭಾರತದ ಇತಿಹಾಸದಲ್ಲಿ ಸುಲ್ತಾನರನ್ನು ಹೀನಾಯವಾಗಿ ಸೋಲಿಸಿದ ಈತನ ದಾಖಲೆಯೂ ಇದೆ. ಚರಿತ್ರೆಯಲ್ಲಿ ಎಲ್ಲಿಯೂ ನಿರ್ಧಿಷ್ಟವಾಗಿ ದಾಖಲಾಗದೇ ಹೋದ ಈತನ ಜೀವನ, ಸಾಧನೆಯನ್ನು ಮರುಕಟ್ಟುವಿಕೆ ಆಗಲೇಬೇಕಾಗಿದೆ.

ಕುಮಾರರಾಮ ಕೇವಲ ದೊರೆಯಲ್ಲ. ಸಾಂಸ್ಕೃತಿಕ ವೀರ. ನೀರಾವರಿ ಮುನ್ನೋಟ ಹೊಂದಿದ್ದ ಕೃಷಿಕರ ಪರವಿದ್ದ ರೈತಾಪಿ, ಪ್ರಬಲವಾದ ಸೈನ್ಯವನ್ನು ಸಣ್ಣ ಸೈನಿಕರ ದಂಡಿನಿಂದ ಸೋಲಿಸಬಹುದು ಎಂದು ತೋರಿಸಿದ ದಂಡನಾಯಕ. ನಿಸರ್ಗ ನಿರ್ಮಿತ ಬೆಟ್ಟಗುಡ್ಡಗಳಿಗೆ ತನ್ನ ವಿವೇಚನಾ ಶಕ್ತಿಯಿಂದ ಕೆರೆ-ಕುಂಟೆ-ಕಾಲುವೆಗಳನ್ನು ಮಾಡಿದ ತಾಂತ್ರಿಕ ನಿಪುಣ. ನೈತಿಕವಾಗಿ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡ ಸದ್ಗುಣಿ. ಸಂಪತ್ತನ್ನು ಜನರಿಗಾಗಿ ಸಂಗ್ರಹಿಸಿ ಹಂಚಿದ ದಾನವೀರ. ಈ ಮಾತುಗಳೆಲ್ಲಾ ಕುಮಾರರಾಮನಿಗೆ ಕೇವಲ ವಿಶೇಷಣಗಳೆಲ್ಲ. ವಾಸ್ತವ ಬಿರುದುಗಳು. ಕಂಪಿಲರಾಯನ ಕುಮ್ಮಟದುರ್ಗ ಕೊಪ್ಪಳ ಜಿಲ್ಲೆಯ ಗಂಗಾವತಿ ಪರಿಸರದ ಮುಕ್ಕುಂಪೆ ಬೆಟ್ಟಗಾಡಿನಲ್ಲಿದೆ. ಸುತ್ತುವರಿದ ಒಳಗೋಟೆ ಮತ್ತು ಹೊರಗೋಟೆಗಳನ್ನು ಬೆಟ್ಟವನ್ನು ಬಳಸಿಕೊಂಡೇ ಕುಮಾರರಾಮ ವಿಸ್ತರಿಸಿದ್ದು ವಿಶೇಷ. 13ನೇ ಶತಮಾನದಲ್ಲಿಯೇ ಜಲಸಂಪನ್ಮೂಲಗಳ ನಿರ್ಮಾಣ ಮಾಡಿ ನೀರಾವರಿಗೆ ಚಾಲನೆ ನೀಡಿದ ಕೀರ್ತಿ ಇವನದು. ಮುಂದೆ ಬಂದ ವಿಜಯನಗರದ ಅರಸರು ನೀರಾವರಿ ಯೋಜನೆಯನ್ನು ಅನುಕರಿಸಿ ವಿಸ್ತರಿಸಿದರು.

ಕೃಷಿಕರ, ಕೂಲಿಗಳ ಪರವಾಗಿದ್ದ ಕುಮಾರರಾಮ ಎಂಬುದಕ್ಕೆ ಇಂದಿಗೂ ಜನಮಾನಸದಲ್ಲಿ ಇರುವ ಐತಿಹ್ಯವೊಂದು ಸಾಕ್ಷಿಯಾಗಿದೆ. ಅಪಾರ ಸಂಪತ್ತನ್ನು ತನ್ನ ಗುಡ್ಡಗಾಡಿನ ಗವಿಗಳಲ್ಲಿ ಅಡಗಿಸಿಟ್ಟಿದ್ದ ರಾಮನಾಥ ಬರಗಾಲಗಳಲ್ಲಿ ಜನರಿಗೆ ಹಂಚಿದನೆಂಬುದು. ಬಹುಶಃ ಈ ಕಾರಣದಿಂದಲೇ ದೆಹಲಿಯ ಸುಲ್ತಾನರು ಇವನ ರಾಜ್ಯದ ಮೇಲೆ ದಾಳಿ ಮಾಡಿದ್ದು. ಇಡೀ ಕುಮ್ಮಟದುರ್ಗದ ಪರಿಸರ ಯೋಜಿತ ಸೇನಾನೆಲೆಯಂತಿದೆ. ಯಾವ ಪ್ರಬಲ ರಾಜ್ಯದ ಆಕ್ರಮಣಗಳೂ ಆಗುವ ಸಾಧ್ಯವಿಲ್ಲದಂತೆ ನಿರ್ಮಿಸಲಾಗಿದೆ. ಮುಖ್ಯವಾದ ದಾರಿಗಳಲ್ಲಿ ನೆಡುಗಂಬಗಳನ್ನು ನಿರ್ಮಿಸಲಾಗಿತ್ತು. ಜನ ಇವುಗಳನ್ನು ಕಲ್ಕುಕುದುರೆಗಳೆಂದು ಇಂದಿಗೂ ಕರೆಯುತ್ತಾರೆ. ದೊಡ್ಡದಾದ ಬಂಡೆಗಳ ಮೇಲೆ ಬಂಡುಕೋರರು ಬರದಂತೆ ಅವರ ಕುದುರೆ ಮತ್ತು ಕಾಲಾಳುಗಳು ನಡೆಯಲು ಬಾರದಂತೆ ಕಲ್ಲಿನ ಕುಳಿಗಳನ್ನು ಮಾಡಲಾಗಿದೆ. ಹಾಗಾಗಿ ಹೊಯ್ಸಳರು ಮತ್ತು ಸುಲ್ತಾನರು ಕುಮ್ಮಟಕ್ಕೆ ಮುತ್ತಿಗೆ ಹಾಕಲು ಸಾಧ್ಯವಾಗಲಿಲ್ಲ.

ಭಾರತೀಯ ರಾಜಪ್ರಭುತ್ವದ ಇತಿಹಾಸದಲ್ಲಿ ಅರಸನಿಗೆ ಬಹುಪತ್ನಿಯರೇ ಇರುವುದು ವಾಡಿಕೆ. ಇದೊಂದು ಸಂಪ್ರದಾಯವಾಗಿಯೂ ಇತ್ತು. ಪಟ್ಟದರಸಿ, ಉಪಪತ್ನಿಯರೂ ಇರುತ್ತಿದ್ದರು. ಸ್ವತಃ ಕಂಪಿಲರಾಯನಿಗೂ ಹರಿಯಾಲದೇವಿ ಪಟ್ಟದರಸಿ, ರತ್ನಾಜಿ ಉಪಪತ್ನಿ. ಆದರೆ ಕುಮಾರರಾಮ ಮಾತ್ರ ಹೊಸ ನೈತಿಕತೆಯ ಪ್ರಜ್ಞೆಯನ್ನು ರೂಢಿಸಿ ಉಳಿಸಿಕೊಂಡವನು. ತನ್ನ ಚಿಕ್ಕಮ್ಮ ರತ್ನಾಜಿಯು ಇವನನ್ನು ಮೋಹಿಸಿದರೂ ನಿರಾಕರಿಸಿದ ವೀರ. ದೆಹಲಿಯ ಸುಲ್ತಾನನ ತಂಗಿಯೂ ಮೋಹಪರವಶಳಾದರೂ ನಿರಾಕರಿಸಿದ ವೀರ. ಹಾಗಾಗಿ ಇಂಥ ಒಬ್ಬ ಅರಸನಿದ್ದನೆಂಬುದೇ ಕನ್ನಡ ನೆಲದ ಹೆಮ್ಮೆ. ಭಾರತದಲ್ಲಿ ಜನಪ್ರಿಯ ರಾಜರು ಹಲವರಿದ್ದಾರೆ. ಅವರ ಅರಮನೆ ಕೋಟೆಗಳು ಪ್ರಸಿದ್ಧವಾಗಿವೆ. ಅವರೆಲ್ಲಾ ಶಾಸನಗಳನ್ನು ಬರೆಸಿಕೊಂಡರು. ಸ್ಮಾರಕಗಳನ್ನು ಕಟ್ಟಿಸಿಕೊಂಡರು. ನಾಮೆಗಳನ್ನು, ಬಖೈರುಗಳನ್ನು ಬರೆಸಿಕೊಂಡರು. ಆದರೆ ಇವರೆಲ್ಲರಂತೆ ಏನೂ ಮಾಡದೇ ಗ್ರಾಮೀಣ ಜನರ ಬಾಯಲ್ಲಿ ಹಾಡಾಗಿ, ಕತೆಯಾಗಿ, ಲಾವಣಿಯಾಗಿ, ಕಾವ್ಯವಾಗಿ, ಗಾದೆಯಾಗಿ, ಒಗಟಾಗಿ ಉಳಿದ ಏಕೈಕ ಜನರದೊರೆ ಕುಮಾರರಾಮ ಮಾತ್ರ. ಈತನ ಮೇಲೆ ಬಂದ ಸಾಹಿತ್ಯವನ್ನು ಗಮನಿಸಿದರೆ ಆತನ ಕೀರ್ತಿಯ ಉನ್ನತಾದರ್ಶದ ಸ್ವರೂಪ ತಿಳಿಯುತ್ತದೆ.

ಕುಮಾರರಾಮ ದೆಹಲಿಯ ಸುಲ್ತಾನರೊಂದಿಗೆ ಕಾದಾಡಿ ಕೊನೆಗೂ ಜೀವತೆತ್ತ ಮೇಲೆ ಜನರು ಕಟ್ಟಿದ ಸಾಹಸ ಕಥನಗಳ ಸಾಗರವೇ ಇದೆ. ಶಿಷ್ಟ ಸಾಹಿತ್ಯದಲ್ಲಿ ನಂಜುಂಡ ಕವಿ ಕುಮಾರರಾಮನ ಸಾಂಗತ್ಯ ಬರೆದರೆ, ಪಾಂಚಾಳಗಂಗ, ಅನಾಮಿಕ ಕವಿ, ಗಂಗ, ನಾಗಸಂಗಯ್ಯ, ಮಹಾಲಿಂಗಸ್ವಾಮಿ ಮುಂತಾದವರು ಮಹಾಕಾವ್ಯಗಳನ್ನು ಬರೆದು ರಾಮನ ನೈತಿಕಾದರ್ಶದ ಜೀವನ ಕಥನವನ್ನು ಲೋಕಕ್ಕೆ ನೀಡಿದ್ದಾರೆ. ಅಷ್ಟೇ ಅಲ್ಲ ಚನ್ನಬಸವ ಪುರಾಣ, ಕೆಳದಿನೃಪ ವಿಜಯ, ಇಮ್ಮಡಿ ಚಿಕ್ಕ ಭೂಪಾಲ ಸಾಂಗತ್ಯ, ನವರತ್ನ ಮಾಲಿಕೆ ಕಾವ್ಯಗಳಲ್ಲಿಯೂ ಕುಮಾರರಾಮನ ಕಥಾ ಪ್ರಸಂಗ ಬಂದಿವೆ. ಕನ್ನಡ ಕವಿಗಳಿಗೆ ಈ ದೊರೆ ಚೆನ್ನರಾಮ, ಬಲರಾಮ, ಕುಮಾರರಾಮ, ಕಡುಗಲಿರಾಮ, ಪರನಾರಿ ಸಹೋದರನಾಗಿ ಕಂಡು ಬಂದಿದ್ದು ವಿಶೇಷವೇ ಸರಿ. ತೆಲುಗಿನಲ್ಲಿ ಮತ್ತು ತುಳುವಿನಲ್ಲಿಯೂ ಈತ ಕಾವ್ಯದ ವಸ್ತುವಾಗಿದ್ದಾನೆ. ಬಯಲಾಟ, ಯಕ್ಷಗಾನ ಪ್ರಸಂಗಗಳಲ್ಲಿಯೂ ಜೀವಂತ ಕತೆಯಾಗಿ ಉಳಿದುಕೊಂಡಿದ್ದಾನೆ. ಭಾರತದ ಯಾವೊಬ್ಬ ದೊರೆಯೂ ಇಷ್ಟೊಂದು ಕಾವ್ಯಗಳ ಉದಾತ್ತ ನಾಯಕನಾದ ನಿದರ್ಶನಗಳೇ ಇಲ್ಲ. ಕುಮಾರರಾಮನಿಗೆ ಈ ಕೀರ್ತಿ ಸಂದಿದೆ.

ಕನ್ನಡನಾಡಿನ ಉದ್ದಗಲಕ್ಕೂ ಕುಮಾರರಾಮನ-ರತ್ನಾಜಿಯ ಕತೆಯು ಜನಪದರ ಬಾಯಲ್ಲಿದೆ. ಕುಮಾರರಾಮನ ಬಾಲ್ಯ, ಯೌವ್ವನ, ಜನಪರ ಕೆಲಸ, ಸಾಹಸ, ನೈತಿಕಗುಣ, ಶೀಲಗುಣದ ಅನೇಕ ಹಾಡುಗಳು ಜನಜನಿತವಾಗಿವೆ. ಬರ‍್ರಕಥಾ ಪ್ರಕಾರದಲ್ಲಿಯೂ ಇವನ ಚರಿತ್ರೆಯಿದೆ. ನೂರಾರು ಕತೆಗಳಿವೆ, ಐತಿಹ್ಯಗಳಿವೆ. ಅಷ್ಟೇ ಅಲ್ಲ ಕುಮಾರರಾಮನ ಮರಣದ ನಂತರ ಕೆಲವು ದೇವಾಲಯಗಳನ್ನು ಕಟ್ಟಿ ಇವನನ್ನು ಪೂಜಿಸಿದ ಜನತೆಯ ಮನೋಧರ್ಮದೊಳಗಡೆ ಕುಮಾರರಾಮ ಅಚ್ಚೊತ್ತಿದ ಚಿತ್ರವಾಗಿದ್ದಾನೆ. ರಾಮಗಡ, ಹೊಸಮಲೆ ದುರ್ಗ, ಹಾವೇರಿ, ಸಿಡಿಗಿನಮೊಳ, ಮಲ್ಲಾಪುರ, ಇಂದ್ರಿಗಿ, ಮುಕ್ಕುಂಪೆ, ಹೇಮಗುಡ್ಡ, ಸೊರಬ, ಶಿವಮೊಗ್ಗ, ಚಾಮರಾಜನಗರ, ಅಂಕೋಲ, ಹೊನ್ನಾವರ, ಹಳೇಬೀಡು, ಗುಳೇದಗುಡ್ಡ ಮುಂತಾದ ಕಡೆ ಕುಮಾರರಾಮನ ದೇವಾಲಯಗಳಿವೆ. ಜನತೆ ಪ್ರೀತಿಯಿಂದ ಕುಮಾರರಾಮನ ಹೆಸರಿನಲ್ಲಿ ಜಾತ್ರೆಗಳನ್ನು ಮಾಡುತ್ತಾರೆ. ಶೂಲದ ಹಬ್ಬ, ಕಳ್ಳರಾಮನ ಹಬ್ಬವನ್ನು ಮಾಡುತ್ತಾರೆ. ಸಣ್ಣರಾಜ್ಯವೊಂದರ ರಾಜನೊಬ್ಬ ದೇವರಾದುದು ಇತಿಹಾಸದಲ್ಲೆ ವಿಶೇಷ. ಇದರ ಹಿಂದಣ ಆತನ ಜನಪ್ರಿಯತೆ, ಜನಾನುರಾಗಿತನವನ್ನು ಚರಿತ್ರೆಯ ಬರೆಹಗಾರರು ಅರಿಯಬೇಕಿದೆ. ಬಳ್ಳಾರಿ-ಕೊಪ್ಪಳ-ಶಿವಮೊಗ್ಗ-ಹಾವೇರಿ ಜಿಲ್ಲೆಗಳ ಕೆಲವು ಗ್ರಾಮಗಳಲ್ಲಿ ಕುಮಾರರಾಮನ ರುಂಡದ ಕಟ್ಟಿಗೆಯ ದೊಡ್ಡ ಮೂರ್ತಿಗಳನ್ನು ಮನೆಗಳಲ್ಲಿಟ್ಟುಕೊಂಡು ಪೂಜಿಸಲಾಗುತ್ತದೆ. ವಿಶೇಷವೆಂದರೆ ಬಳ್ಳಾರಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಮೋಹರಂ ಆಚರಣೆಯಲ್ಲಿ ಕುಮಾರರಾಮನ ಹೆಸರಿನ ಪೀರಲು ದೇವರನ್ನು ಕೂರಿಸುತ್ತಾರೆ.

ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ರುದ್ರಮೂರ್ತಿಶಾಸ್ತ್ರಿ ಅವರು ‘ಕುಮಾರರಾಮ’, ಕೊರಟಿ ಶ್ರೀನಿವಾಸರಾಯರು ‘ಕನ್ನಡಿಗರ ಕಾಳರಾತ್ರಿ’ ಎಂಬ ಕಾದಂಬರಿಗಳನ್ನು ಬರೆದರು. ವಸುದೇವ ಭೂಪಾಳಂ ಅವರು ‘ಕುಮ್ಮಟ ವಲ್ಲಭ’, ಚದುರಂಗರು ‘ಕುಮಾರರಾಮ’ ಎಂಬ ಪ್ರಸಿದ್ಧ ನಾಟಕಗಳನ್ನು ಬರೆದರು. ಕೊಪ್ಪಳ-ಬಳ್ಳಾರಿ ಪರಿಸರದಲ್ಲಿ 25 ಕ್ಕೂ ಹೆಚ್ಚು ನಾಟಕಗಳ ರಚನೆಯಾಗಿವೆ. ಗಂಗಾವತಿ ಪರಿಸರದ ಗ್ರಾಮೀಣ ಹೆಣ್ಣುಮಕ್ಕಳು ಕೆಲವು ಹಾಡುಗಳನ್ನು ಹಾಡುತ್ತಾರೆ. ಕುಮಾರರಾಮನಿಗೆ ಸಂಬಂಧಿಸಿ  ಕೈಫಿಯತ್ತುಗಳು ರಚನೆಯಾಗಿವೆ. ಈತನನ್ನು ಪ್ರತಿನಿಧಿಸುವ ಹಲವು ವೀರಗಲ್ಲುಗಳು ಕುಮ್ಮಟದುರ್ಗದ ಪರಿಸರದಲ್ಲಿ ಅನಾಥವಾಗಿ ಬಿದ್ದಿವೆ. ಈ ಎಲ್ಲಾ ಆಕರಗಳು ಶ್ರೇಷ್ಠ. ಜನಪ್ರಿಯ ಕುಮಾರರಾಮನನ್ನು ತಮ್ಮ ಒಡಲೊಳಗಿಟ್ಟುಕೊಂಡು ಜೀವಂತವಾಗಿ ಆತನನ್ನು ಕಥಿಸುತ್ತಿವೆ, ಮಥಿಸುತ್ತಿವೆ.

ಆದರೆ ಇಂತಹ ಪ್ರಸಿದ್ಧ ರಾಜನ ಉಲ್ಲೇಖವಿರುವ ಶಾಸನಗಳಿಲ್ಲ. ಶಾಸನಗಳನ್ನೇ ನಂಬಿ ಚರಿತ್ರೆ ಬರೆಯುವ ಪಂಡಿತಮಾನ್ಯರು ಈತನ ಬಗ್ಗೆ ಹೆಚ್ಚಿನದೇನನ್ನೂ ಬರೆಯಲಿಲ್ಲ. ವಿಜಯನಗರ ಪೂರ್ವ ಚರಿತ್ರೆಯ ಸಂದರ್ಭದಲ್ಲಿ ಸಣ್ಣ ಉಲ್ಲೇಖ ಬಿಟ್ಟರೆ ಮತ್ಯಾವ ವಿಶೇಷ ಇತಿಹಾಸವನ್ನೂ ಧರ್ಮನಿಯಂತ್ರಣತ್ವದ ನೆಲೆಯಲ್ಲಿ ಬರೆದ ಚರಿತ್ರೆಕಾರರು ಕುಮಾರರಾಮನನ್ನು ಮುನ್ನೆಲೆಗೆ ತರಲಿಲ್ಲ. ಬುಡಕಟ್ಟು ಸಮುದಾಯದ ಹಿನ್ನಲೆಯಿಂದ ಬಂದ ಈ ರಾಜ ಇವರ ಕಣ್ಣೊಳಗೆ ಬೀಳಲಿಲ್ಲ. ಕುಮಾರರಾಮ ಗುಡಿ-ಗುಂಡಾರಗಳನ್ನು ಕಟ್ಟಲಿಲ್ಲ. ತಾನೇ ಮುಂದಿನ ದಿನಗಳಲ್ಲಿ ಗುಡಿ-ಗುಂಡಾರದ ದೈವವಾದ. ಲಿಖಿತ ಚರಿತ್ರೆಯಲ್ಲಿ ಹೆಚ್ಚು ದಾಖಲಾಗಲಿಲ್ಲ. ಜನರ ಬಾಯೊಳಗೆ ನಿತ್ಯ ನಿರಂತರ ಜಂಗಮ ಚರಿತ್ರೆಯಾಗಿ ನಲಿಯುತ್ತಿದ್ದಾನೆಂಬುದು ಮುಖ್ಯ. ಕುಮಾರರಾಮ ಯಾವೊಂದು ಧರ್ಮದ ಒಳಗೋಲಿಗೆ ಸಿಕ್ಕುಬೀಳಲಿಲ್ಲ. ಹಾಗಾಗಿ ಚರಿತ್ರೆಕಾರರ ಬರಹದ ವ್ಯಾಪ್ತಿಗೆ ಬರಲಿಲ್ಲ. ಈತನ ಜಾತಿಯ ಕಾರಣಕ್ಕೂ ಚರಿತ್ರೆಕಾರರ ಅವಗಾಹನೆಗೆ ಒಳಗಾಗಿರಬಹುದೆಂಬುದು ಸ್ಪಷ್ಟ. ಕುಮಾರರಾಮನನ್ನು ಅಜರಾಮರಗೊಳಿಸಿದ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ. ಮಿಗಿಲಾಗಿ ಕನ್ನಡನಾಡಿನ ಜನಪದಲೋಕ ಅಭಿನಂದನೆಗೆ ಪಾತ್ರವಾಗುತ್ತದೆ. ಈ ಆಕರಗಳನ್ನಿಟ್ಟುಕೊಂಡೇ ಕುಮಾರರಾಮನ ಹೊಸ ಚರಿತ್ರೆಯನ್ನು ಮರುನಿರ್ಮಾಣ ಮಾಡಿ ಭಾರತೀಯ ಇತಿಹಾಸದ ಪುಟದ ಮುಖ್ಯ ಭೂಮಿಕೆಗೆ ಸೇರಿಸಬೇಕಾಗಿದೆ.

– ಡಾ. ಜಾಜಿ ದೇವೇಂದ್ರಪ್ಪ, ಸಂಯೋಜಕರು, ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗಂಗಾವತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ತುಳು ಸಾಹಿತ್ಯದಲ್ಲಿ ಕುಮಾರ ರಾಮನ ಕುರಿತ ಕೃತಿ ಕುರಿತು ತಿಳಿಸಿ…ನಾನು ಅಧ್ಯಯನ ಮಾಡಬೇಕಾಗಿದೆ.

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

0
ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ)...