ಭಾರತದ ಸೊಸೆಯ ದೇಶೋಚ್ಛಾಟನೆಯ ದಾರುಣ ಕತೆ! ..

ಆಕೆ ಎಳೆಯ ಪ್ರಾಯದ ಅಮಾಯಕ ಹೆಂಗಸು. ಮೂರು ಪುಟ್ಟ-ಪುಟ್ಟ ಕಂದಮ್ಮಗಳ ತಾಯಿ. ಹುಟ್ಟಿದ್ದು ಪಾಕಿಸ್ತಾನದಲ್ಲಿ. ಆಕೆಯ ಅಜ್ಜನ ಕರುಳುಬಳ್ಳಿ ಸಂಬಂಧ ಭಟ್ಕಳದಲ್ಲಿದೆ. ದೇಶ ವಿಭಜನೆ ಸಂದರ್ಭದಲ್ಲಿ ಆತ ಪಾಕ್ ಪಾಲಾಗಿದ್ದ. ಆದರೆ ಆತನ ಮೊಮ್ಮಗಳು ಹದಿಮೂರು ವರ್ಷದ ಹಿಂದೆ ಭಾರತದ ಭಟ್ಕಳಕ್ಕೆ ಸೊಸೆಯಾಗಿ ಬಂದಿದ್ದಳು. ನವಾಯತ ಮುಸ್ಲಿಂ ಸಮುದಾಯದ “ಲಂಕಾ” ಕುಟುಂಬದ ಹಿರಿಯ ಸೊಸೆಯಾಗಿ ಮನೆ ತುಂಬಿಕೊಂಡಿದ್ದಳು. ಆ ಹುಡುಗಿಯ ಹೆಸರು- ಅರ್ಸೆಲಾ ಅಬೀರಾ!!

ಆರಂಭದಲ್ಲಿ ಆಕೆಯ ಬದುಕು ಚಂದವಾಗೇ ಇತ್ತು. ಸಾಮಾನ್ಯ ಹೆಣ್ಣು ಮಕ್ಕಳಂತೆ ಗಂಡ-ಮಕ್ಕಳು-ಅತ್ತೆ-ಮಾವ-ಅತ್ತೆಮನೆ-ನೆಮ್ಮದಿಯ ಬದುಕು… ಹತ್ತಾರು ಸಹಜ ಕನಸು ಕಟ್ಟಿಕೊಂಡು ಅರ್ಸೆಲಾ ಮದುವೆಯಾಗಿ ಭಟ್ಕಳಕ್ಕೆ ಬಂದಿದ್ದಳು. ಗಂಡ ’ಅಫಾಕ್‌ ಲಂಕಾ’ ಭಟ್ಕಳದಲ್ಲಿ ಯುನಾನಿ ವೈದ್ಯನಾಗಿದ್ದ. ಅರ್ಸೆಲಾ ಗಂಡನಿಗೆ ನೆರವಾಗುತ್ತಿದ್ದಳು. ಆಕೆಯ ಬದುಕಿಗೆ ಬರಸಿಡಿಲು ಬಡಿದು ನುಚ್ಚುನೂರಾಗಿದ್ದು 2015ರಲ್ಲಿ. ಆಗ ಬೆಂಗಳೂರಲ್ಲಿ ಚರ್ಚ್‌ ಸ್ಫೋಟ ಆಗಿತ್ತಲ್ಲ, ಆ ವಿಧ್ವಂಸಕ ಕೃತ್ಯಕ್ಕೆ ಸ್ಫೋಟಕ ಒದಗಿಸಿದ್ದು ಅಫಾಕ್‌ ಲಂಕಾ ಎಂದು ಪೊಲೀಸ್ ಏಜೆನ್ಸಿಗಳು ಶಂಕಿಸಿದ್ದವು. ದೇಶದ ಹಲವು ಸ್ಫೋಟ ಪ್ರಕರಣದಲ್ಲೂ ಅಫಾಕ್‌ನ ಬಾಂಬ್‌ ಕಾರಣವೆಂಬ ಆರೋಪದಲ್ಲಿ ಆತನನ್ನು ಜೈಲಿಗೆ ಅಟ್ಟಲಾಗಿತ್ತು.

ಎರಡು ವರ್ಷಕೊಮ್ಮೆ ತನ್ನ ವೀಸಾ ನವೀಕರಿಸುತ್ತಿದ್ದಳು ಅರ್ಸೆಲಾ. ಕಳೆದ ಆಗಸ್ಟ್‌ನಲ್ಲಿ ಕೇಂದ್ರ ವಿದೇಶಾಂಗ ಇಲಾಖೆ ವೀಸಾ ಮುಂದುವರಿಸಲು ನಿರಾಕರಸಿತು. ಭಯೋತ್ಪಾದಕನ ಹೆಂಡತಿ ವೈರಿ ರಾಷ್ಟ್ರ ಪಾಕ್‌ನವಳು. ಇಲ್ಲಿದ್ದರೆ ದೇಶದ ಭದ್ರತೆಗೆ ಗಂಡಾಂತರವೆಂಬ ನಿರ್ಧಾರ ಗೃಹ ಇಲಾಖೆಯದ್ದಾಗಿತ್ತು. ಸ್ವಯಂಪ್ರೇರಣೆಯಿಂದ ದೇಶ ಬಿಟ್ಟು ಹೋಗಬೇಕು, ಮೂರು ತಿಂಗಳಷ್ಟೇ ಕಾಲಾವಕಾಶ. ಭಾರತದಿಂದ ಹೋಗದಿದ್ದರೆ ಪಾಕ್‌ಗೆ ನಾವೇ ಬಿಟ್ಟುಬರಬೇಕಾಗುತ್ತದೆಂದು ಗೃಹ ಇಲಾಖೆ ಅರ್ಸೆಲಾಳಿಗೆ ನೋಟೀಸು ಕಳಿಸಿತ್ತು.

ಹೆತ್ತ ಮೂರು ಮಕ್ಕಳನ್ನು ಬಿಟ್ಟು ಆಕೆ ದೇಶಾಂತರ ಹೋಗುವುದಾದರೂ ಹೇಗೆ? ಮಕ್ಕಳಿನ್ನು ಚಿಕ್ಕವರು; ಅವರೊಂದಿಗಿರಲು ಅವಕಾಶ ಕೊಡುವಂತೆ ಅರ್ಸೆಲಾ ಕೇಂದ್ರಕ್ಕೆ ಮಂಡಿಯೂರಿ ಮೊರೆಯಿಟ್ಟಿದ್ದಳು. ನಾನು ನಿರಪರಾಧಿ. ಗಂಡನ ತಪ್ಪಿಗೆ ನನಗೆ ನನ್ನ ಮಕ್ಕಳಿಗೆ ಶಿಕ್ಷೆ ಕೊಡಬೇಡಿ ಎಂದು ಬೇಡಿಕೊಂಡಿದ್ದಳು. ಇದಕ್ಕೊಪ್ಪದ ಪ್ರಭುತ್ವದ ಪೊಲೀಸರು ಅರ್ಸೇಲಾಳನ್ನು ದಿಲ್ಲಿ ಮೂಲಕ ಪಾಕ್‌ಗೆ ಕರೆದೊಯ್ದು ಬಿಟ್ಟು ಬಂದಿದ್ದಾರೆ!

ಭಟ್ಕಳ ಬಿಡಲೇಬೇಕಾದ ಸಂದರ್ಭದಲ್ಲಿ ಆ ಮುಗ್ಧೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಚಡಪಡಿಸಿದ್ದಾಳೆ. ಕರುಳ ಕುಡಿಗಳನ್ನು ಬಲವಂತವಾಗಿ ತೊರೆಯಬೇಕಾದ ದುರ್ವಿಧಿಗೆ ಹಳಿಯುತ್ತ ಕಣ್ಣೀರ ಕೋಡಿಯಾಗಿದ್ದಾಳೆ. ಭಟ್ಕಳದ ಪರಿಸರ, ಮುದಿ ಅತ್ತೆ-ಮಾವಂದೀರು, ಮಕ್ಕಳಿಂದ ದೂರಾಗುವ ದಿನ ಹತ್ತಿರ ಬಂದಂತೆ ಹೇಳತೀರದ ಸಂಕಟ ಅನುಭವಿಸಿದ್ದಾಳೆ. ಆ ಕ್ಷಣದಿಂದ ಪಾಕ್‌ನ ತವರು ಮನೆ ಸೇರಿದ ನಂತರದವರೆಗಿನ ಹಿಂಸೆಗೆ ಅಕ್ಷರ ರೂಪ ಕೊಡಲು ಪ್ರಯತ್ನಿಸಿದ್ದಾಳೆ. ತನ್ನ ಸುದೀರ್ಘ ಪತ್ರದಲ್ಲಿ ವೈವಾಹಿಕ ಬದುಕಿನ ಕನಸು-ಕಷ್ಟ, ಅತ್ತೆ ಮನೆ ಪ್ರೀತಿ-ಹೊಣೆಗಾರಿಕೆ, ಗಂಡ ಶಂಕಿತ ಭಯೋತ್ಪಾದಕನೆಂದು ಸುದ್ದಿಯಾಗಿ ಜೈಲುಪಾಲಾದಾಗಿನ ನಂತರದ ಸಾಮಾಜಿಕ ಅಪನಿಂದನೆ, ಅವಮಾನ, ಗಂಡನ ನಿರೀಕ್ಷೆಯಲ್ಲಿ ಕಳೆದ ಭ್ರಮೆಯ ಕಾಲ…. ಹೀಗೆ ಹಲವು ಸಂಗತಿಗಳನ್ನು ದಾಖಲಿಸಿ ಆಪ್ತೇಷ್ಟರಿಗೆ ಕಳಿಸಿದ್ದಾಳೆ.

ಅರ್ಸೆಲಾಳನ್ನು ಪೊಲೀಸರು ಭಟ್ಕಳದಿಂದ ಕರೆದೊಯ್ಯುವ ಮುನ್ನ ದಿನ ಆಕೆ ಭಾವನಾತ್ಮಕ ತಳಮಳಕ್ಕೆ ಈಡಾಗಿದ್ದಳೆಂದು ಪತ್ರಾಕಥನವೇ ಹೇಳುತ್ತದೆ. ಆ ಪತ್ರದ ಸಾರ ಈ ಮುಂದಿನಂತಿದೆ…

ಅರೇ! ನನ್ನ ಮನೆಯಲ್ಲೇ ನಾನೀಗ ಅಪರಿಚಿತಳು. ನನಗೆ ನನ್ನದೆ ಪರಿಚಯ ಸಿಗುತ್ತಿಲ್ಲ. ಕೋಣೆಯಲ್ಲಿರುವ ಬಟ್ಟೆ ಬರೆಗಳು ಬೇರೆಯವರದ್ಯಾರವೋ ಅನ್ನಿಸುತ್ತದೆ. ಕೋಣೆಯ ಗೋಡೆಗಳು ’ನೀನು ಭಟ್ಕಳಕ್ಕೆ ಮತ್ತೆ ಬರ್‍ತಿಯೋ?  ಇಲ್ಲವೋ? ಇದೇ ಕೊನೆಯದಾ? ಎಂದು ಕೇಳುತ್ತಿವೆ. ನನ್ನ ನೋವನ್ನು ನನ್ನ ಮಕ್ಕಳಿಗೂ ತೋರಿಸಿಕೊಳ್ಳುವಂತಿಲ್ಲ. ಆ ಮೂರೂ ಮಕ್ಕಳ ಮುಖ ಕಂಡಾಗ ಹೃದಯ ಛಿದ್ರಛಿದ್ರವಾಗುತ್ತಿದೆ. ಇದ್ದಕ್ಕಿದ್ದಂತೆ ರಾತ್ರಿ ಆವರಿಸಿಕೊಳ್ಳುತ್ತಿದೆ. ಇದೊಂದು ಕೆಟ್ಟರಾತ್ರಿ. ನಾಳೆ ಹೊರಡಲೇಬೇಕು. ಬ್ಯಾಗು ಕಟ್ಟಿಕೊಳ್ಳುವಾಗ ಮಕ್ಕಳು ಎಲ್ಲಿಗಮ್ಮ? ಎನ್ನುತ್ತವೆ. ಅವರಿಗೇನೂ ಹೇಳುವಂತಿಲ್ಲ. ಅಯ್ಯೋ ದೇವರೆ, ಈ ಕಂದಮ್ಮಗಳನ್ನು ಚೆನ್ನಾಗಿ ನೋಡಿಕೋ ಎಂದಷ್ಟೇ ಬೇಡುತ್ತೇನೆ.

ಮಕ್ಕಳು ಉತ್ತರವಿಲ್ಲದ ಪ್ರಶ್ನೆ ಕೇಳಿ, ಕೇಳಿ ಸುಸ್ತಾಗಿ ನಿದ್ದೆಗೆ ಜಾರಿವೆ. ರೂಮಿನಲ್ಲಿ ನೀರವ ಮೌನ! ಕಿಟಕಿಯಿಂದ ಚಂದ್ರ ಇಣುಕುತ್ತಿದ್ದಾನೆ. ಆ ಚಂದ್ರ ಏನೇನೋ ಹೇಳುತ್ತಿದ್ದಾನೆ ಅನ್ನಿಸುತ್ತದೆ. ಬೆಳಿಗ್ಗೆ ಕಿವಿಯಲ್ಲಿ ನಮಾಜಿನ ಕತೆ! ಬೆಳಗು ಹರಿಯುತ್ತಿದ್ದಂತೆಯೇ ನೆಂಟರು, ಆಚೀಚೆ ಮನೆಯವರು ಬರುತ್ತಿದ್ದಾರೆ. ನನ್ನಿಂದ ಮಾತೇ ಹೊರಡುತ್ತಿಲ್ಲ. ಅವರೂ ಭಾವುಕರಾಗಿದ್ದಾರೆ. ದೇವರ ನೆನೆಯುವುದು ಬಿಟ್ಟು ಇನ್ನೇನೂ ನನ್ನಿಂದ ಮಾತಲಾಗುತ್ತಿಲ್ಲ. ಮಕ್ಕಳ ಮುಖ ಕಂಡಾಗ ದುಃಖ ಉಮ್ಮಳಿಸಿ ಬರುತ್ತಿತ್ತು. ಈ ಥರ ಮಕ್ಕಳನ್ನು ಬಿಟ್ಟುಹೋಗುವ ಸ್ಥಿತಿ ಯಾವ ತಾಯಿಗೂ ಬರುವುದು ಬೇಡ. ದೇವರೇ ನನ್ನನ್ನು ಕೊಂದುಬಿಡು ಎಂದು ಮನದಲ್ಲೇ ಹೇಳತೊಡಗಿದೆ!!

ನನ್ನನ್ನು ಕರೆದೊಯ್ಯಲು ಪೊಲೀಸರ ವಾಹನ ಬಂದೇ ಬಿಟ್ಟಿತು. ಅದು ನಂಗೆ ಶವ ಪೆಟ್ಟಿಗೆಯಂತೆ ಕಾಣಿಸುತ್ತಿತ್ತು. ಅನಿವಾರ್ಯವಾಗಿ ಗಾಡಿ ಹತ್ತಿದೆ. ಆ ವಾಹನದಲ್ಲಿ ನನ್ನ ದೇಹವಷ್ಟೇ ಇತ್ತು; ಅದಕ್ಕೆ ಜೀವವೇ ಇರಲಿಲ್ಲ!! ನನ್ನ ಕೊನೆಯ ಮಗ ಪದೇ ಪದೇ ಫೋನು ಮಾಡುತ್ತಿದ್ದ. “ನನ್ನನ್ನು ಬಿಟ್ಟು ನೀನೊಬ್ಬಳೇ ಹೊಗುತ್ತೀಯಲ್ಲಾ… ನೀನೆಷ್ಟು ಕೆಟ್ಟವಳು” ಅಂತಿದ್ದ. ನಾನೀಗ ತವರು ಸೇರಿದ್ದೇನೆ. ಇಲ್ಲಿಯೂ ನಾನು ಅಪರಿಚಿತಳೇ!!….

ಈ ಪತ್ರದ ಶುರುವಿನಲ್ಲಿ ಅರ್ಸೆಲಾ ತನ್ನ ವೈವಾಹಿಕ ಬದುಕಿನ ಆರಂಭದ ಸಂತಸ, ನಂತರದ ಅತ್ತೆ ಮನೆ ಜವಾಬ್ದಾರಿ, ಮೈದುನರು, ಅತ್ತೆ-ಮಾವ ತೋರಿಸಿದ ಪ್ರೀತಿ-ವಾತ್ಸಲ್ಯ, ಜೈಲು ಸೇರಿದ ಗಂಡ ನಿರಪರಾಧಿಯಾಗಿ ಬರುತ್ತಾನೆಂದು ನಿರೀಕ್ಷಿಸಿದ್ದು, ಸುಳ್ಳಾಗಿದ್ದು, ಪೊಲೀಸರ ಭಯ, ಮಕ್ಕಳೊಂದಿಗೆ ಕೋಣೆಯಲ್ಲಿರುವಾಗ ಕಾಡುತ್ತಿದ್ದ ಆತಂಕ, ಮನೆಯ ಗೇಟಿನ ಸದ್ದಾದಾಗ ಗಂಡನೇ ಬಂದಂತೆ ಭ್ರಮೆ, ಭಯೋತ್ಪಾದಕನ ಮಡದಿಯೆಂದು ಸಂಬಂಧಿಕರು ಮಾತಾಡದೆ ಅಡ್ಡ ಮುಖ ಹಾಕಿ ಹೋಗುತ್ತಿದ್ದುದ್ದು, ಮೂರು ತಿಂಗಳು ಭಟ್ಕಳ(ಭಾರತ)ದಲ್ಲಿ ಉಳಿಯಲು ಕೇಂದ್ರ ಸರ್ಕಾರ ಅವಕಾಶ ಕೊಟ್ಟಾಗ ಆದ ಗೊಂದಲ, ಒತ್ತಡಕ್ಕೆ ಸಿಲುಕಿದ್ದು, ಅಧಿಕಾರಿಗಳ ಬಗ್ಗೆ ಅನುಮಾನ ಬಂದಿದ್ದನ್ನು ಪತ್ರದಲ್ಲಿ ವ್ಯಕ್ತಪಡಿಸಿದ್ದಾಳೆ.

ಗಂಡನ ಮೇಲೆ ಆರೋಪ; ನಿಷ್ಕಳಂಕಿತ ಹೆಂಡತಿಗೆ ಚಿತ್ರಹಿಂಸೆ, ಆಡಳಿತ ವ್ಯವಸ್ಥೆ ಪಾಪದ ಅರ್ಸೆಲಾಳನ್ನು ತವರಿಗಟ್ಟಿದೆ. ಆಕೆಯ ಗಂಡ ನಿಜವಾಯಿಗೂ ಅಪರಾಧಿಯೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಆದರೆ ಆಕೆ ಮಾತ್ರ ಎರಡೂ ನನ್ನದೇ ದೇಶಗಳು ಅಂತಿದ್ದಾಳೆ. ಗಡಿ ಮೀರಿ ಬದುಕು ಕಟ್ಟಿಕೊಂಡಿದ್ದ ಅರ್ಸೆಲಾ ಈಗ ಖಾಲಿ-ಖಾಲಿ!! ಆಕೆಯ ಅನಾಥ ಪ್ರಜ್ಞೆ, ಯಾಚನೆ, ಕಣ್ಣಾಚೆಯ ದೂರದಲ್ಲಿರುವ ಮಕ್ಕಳ ಗೋಳು, ಆಕೆಯ ಪತ್ರದ ಒಂದೊಂದು ಪದ ನೂರು ಪ್ರಶ್ನೆಗಳನ್ನು ವಿಶ್ವಮಾನವ ಪ್ರಪಂಚದಲ್ಲಿ ಕೇಳುತ್ತಲೇ ಇದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here