Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬಂಟ್ವಾಳ: ಬಲಪಂಥೀಯ ರಣಕಣದಲ್ಲಿ ರೈ-ಕಲ್ಲಡ್ಕ ಪ್ರತಿಷ್ಠೆಯ ಕಾಳಗ!

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬಂಟ್ವಾಳ: ಬಲಪಂಥೀಯ ರಣಕಣದಲ್ಲಿ ರೈ-ಕಲ್ಲಡ್ಕ ಪ್ರತಿಷ್ಠೆಯ ಕಾಳಗ!

- Advertisement -
- Advertisement -

ಪಶ್ಚಿಮ ಕರಾವಳಿ ತೀರ ಮತ್ತು ಪಶ್ಚಿಮಘಟ್ಟದ ಬೆಟ್ಟಸಾಲಿನ ನಡುವೆ ಇರುವ ಬಂಟ್ವಾಳ ಹೈ ವೋಲ್ಟೇಜ್ ವಿಧಾನಸಭಾ ಕ್ಷೇತ್ರ. ಕರಾವಳಿ ಸಂಘ ಪರಿವಾರದ ಸರ್ವೋಚ್ಚ ನಾಯಕ ಡಾ. ಕಲ್ಲಡ್ಕ ಪ್ರಭಾಕರ ಭಟ್ಟರ ಹಿಂದುತ್ವ ಸಾಮ್ರಾಜ್ಯದ ರಾಜಧಾನಿ ಎಂದು ಪರಿಗಣಿಸಲ್ಪಟ್ಟಿರುವ ಬಂಟ್ವಾಳದಲ್ಲಿ ಬಹುತೇಕರ ಬದುಕು ಅನುಮಾನ-ಆತಂಕದ ನಡುವೆ ಯಾಂತ್ರಿಕವಾಗಿ ಸಾಗಿದೆ. ಹೊರನೋಟಕ್ಕೆ ಹಿಂದು-ಮುಸ್ಲಿಮರು ಕೊಡು-ಕೊಳ್ಳುವ ಸೌಹಾರ್ದತೆಯಲ್ಲಿ ಜೀವನ ನಡೆಸಿದ್ದಾರೆಂಬಂತೆ ಗೋಚರಿಸುವ ಈ ಕ್ಷೇತ್ರದಲ್ಲಿ ಎರಡೂ ಧರ್ಮೀಯರ ಕಟ್ಟರ್ ಗುಂಪುಗಳು ಪ್ರಬಲವಾಗಿ ಬೆಳೆದಿವೆ. ವ್ಯಗ್ರತೆ-ಅಸಹಿಷ್ಣುತೆಯ ಈ ದಾವಾನೆಲದಲ್ಲಿ ಸಣ್ಣದೊಂದು ಸಂಶಯದ ಗಾಳಿ ಸೋಕಿದರೂ ಸಾಕು, ಧರ್ಮೋನ್ಮಾದದ ಕಿಚ್ಚು ಹೊತ್ತಿ ಉರಿದು ಅಮಾಯಕರ ಮಾರಣಹೋಮವೇ ಆಗಿಬಿಡುತ್ತದೆಂಬುದು ಸಾಮಾನ್ಯ ಅಭಿಪ್ರಾಯ! ಆರ್‌ಎಸ್‌ಎಸ್ ಮುಖಂಡ ಪ್ರಭಾಕರ ಭಟ್ಟರ ಕಲ್ಲಡ್ಕದಲ್ಲಿ ಕೆಎಸ್‌ಆರ್‌ಪಿ ತುಕಡಿ ಬಸ್ ಸದಾ ಸರ್ವಸನ್ನದ್ಧವಾಗೆ ನಿಂತಿರುತ್ತದೆ. ಧರ್ಮಕಾರಣದ ಮೈಲೇಜ್ ಪಡೆಯಲು ಹವಣಿಸುವ ಹಿಂದುತ್ವ ನಾಯಕನೊಬ್ಬನ ಚಿತಾವಣೆಯಿಂದ ಬಂಟ್ವಾಳ ಗಂಡಾಂತರಕ್ಕೆ ಈಡಾಗಿದೆಯೆಂಬ ಮಾತು ಜಾತಿ-ಧರ್ಮದ ಹಂಗಿಲ್ಲದೆ ಕೇಳಿಬರುತ್ತಿದೆ.

ಭೂಗೋಳ-ಇತಿಹಾಸ-ವ್ಯಾಪಾರ-ಸಂಸ್ಕೃತಿ

ಪ್ರತಿ ಮಳೆಗಾಲದಲ್ಲಿ ಪ್ರವಾಹ ಬರುವ ಊರೆಂದು ಗುರುತಿಸಲ್ಪಟ್ಟಿರುವ ಬಂಟ್ವಾಳ ನೇತ್ರಾವತಿ ನದಿ ದಂಡೆಯ ಮೇಲಿದೆ. ಪೂರ್ವದಲ್ಲಿ ಬೆಳ್ತಂಗಡಿ, ಪಶ್ಚಿಮದಲ್ಲಿ ಮಂಗಳೂರು ನಗರ, ಉತ್ತರದಲ್ಲಿ ಕಾರ್ಕಳ ಮತ್ತು ದಕ್ಷಿಣದಲ್ಲಿ ಕೇರಳದಿಂದ ಸುತ್ತುವರಿದಿರುವ ಬಂಟ್ವಾಳವನ್ನು ಕೆಲವು ಸಮುದಾಯಗಳು ವಟುಪುರವೆಂದು ಕರೆಯುತ್ತಾರೆ. ಬಂಟ್ವಾಳ ಕೊಡ್ಯಮಲೆಯೆಂಬ ದಟ್ಟ ಕಾಡಿನಿಂದ ಆವೃತವಾಗಿದೆ; ಒಂದು ಸ್ಥಳನಾಮ ಪುರಾಣದಂತೆ ಬಂಟ-ವಾಲ ಎಂದರೆ ಬಂಟರು ವಾಸಿಸುವ ಸ್ಥಳ. ಆದರೆ ಆರ್ಥಿಕ-ಸಾಮಾಜಿಕ -ರಾಜಕೀಯವಾಗಿ ಬಲಾಢ್ಯರಾದ ಬಂಟರಿಗಿಂತ ಹಿಂದುಳಿದ ವರ್ಗದ ಬಿಲ್ಲವರೆ ಬಂಟ್ವಾಳದಲ್ಲಿ ಹೆಚ್ಚಿದ್ದಾರೆ.

ಈ ಶೋಷಿತ ಬಿಲ್ಲವ ಸಮುದಾಯದ ತರುಣರೆ ಸಂಘಪರಿವಾರದ ಧರ್ಮಯುದ್ಧದ ಕಾಲಾಳುಗಳಲ್ಲಿ ಹೆಚ್ಚಿನವರು. ಕೋಮುದಂಗೆಗಳಲ್ಲಿ ಹೆಚ್ಚು ಹತರಾಗಿರುವವರು ಅಥವಾ ಆರೋಪಿಗಳು ಬಿಲ್ಲವ ಸಮುದಾಯದ ಹುಡುಗರೆ ಎಂಬುದನ್ನು ಪೊಲೀಸ್ ದಾಖಲೆಗಳು ಕೂಡ ಖಾತ್ರಿ ಮಾಡುತ್ತವೆ! ಯುವಕರು ಬೆಂಕಿ ಆಕರ್ಷಣೆಗೆ ಬಿದ್ದು ಸುಟ್ಟುಹೋಗುವ ಪತಂಗದಂತಾಗುತ್ತಿದ್ದರೂ ಪುರೋಹಿತಶಾಹಿ ಹುನ್ನಾರಗಳನ್ನು ಅರ್ಥಮಾಡಿಸಲು ಬಿಲ್ಲವ ಮಠಗಳು, ಹಿರಿಯರು ವಿಫಲರಾಗಿದ್ದಾರೆಂಬ ನೋವಿನ ಮಾತುಗಳು ಕೇಳಿಬರುತ್ತಿದೆ.

ಬಂಟ್ವಾಳದ ಜನಜೀವನ ಮತ್ತು ಆರ್ಥಿಕತೆಯಲ್ಲಿ ತೋಟಗಾರಿಕೆಯದು ಮಹತ್ವದ ಪಾತ್ರ. ತೋಟಗಾರಿಕೆ-ಹೈನುಗಾರಿಕೆಯೆ ಪ್ರಧಾನವಾಗಿರುವ ಬಂಟ್ವಾಳದ ಆರ್ಥಿಕ ಚೈತನ್ಯ ಅಡಿಕೆ ಕೃಷಿ ಮತ್ತು ವಹಿವಾಟು! ಸುಮಾರು 20,000 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ತೋಟಗಳಿವೆ. ವಾಣಿಜ್ಯ ಬೆಳೆಗಳಾದ ಕೊಕ್ಕೋ, ಕಾಳು ಮೆಣಸು, ರಬ್ಬರ್ ಮತ್ತು ಗೋಡಂಬಿ ತೋಟಗಳನ್ನು ಬಂಟ್ವಾಳದ ಉದ್ದಗಲಕ್ಕೆ ಕಾಣಬಹುದಾಗಿದೆ. ನೇತ್ರಾವತಿ ಮತ್ತು ಫಲ್ಗುಣಿ ತಾಲೂಕಿನ ಜೀವನದಿಗಳು! ಉಳ್ಳವರು ಅಡಿಕೆ-ರಬ್ಬರ್ ತೋಟದ ಸಾಹುಕಾರರಾದರೆ ಇಲ್ಲದವರು ಆ ತೋಟಗಳ ಕಾರ್ಮಿಕರು. ಬೀಡಿ ಕಟ್ಟುವುದು ಮತ್ತಿತರ ಕುಲಕಸುಬುಗಳಿಂದ ಕೆಳ ವರ್ಗದ ಮಂದಿ ಬದುಕು ಕಟ್ಟಿಕೊಂಡಿದ್ದಾರೆ.

ಕಲ್ಲಡ್ಕ ಪ್ರಭಾಕರ ಭಟ್ಟ

ಪರ್ಶಿಯನ್ ಗಲ್ಫ್ ರಾಜ್ಯಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಿರುವ ಬಂಟ್ವಾಳದ ಬಿ.ಸಿ.ರೋಡ್ (ಬಂಟ್ವಾಳ ಕ್ರಾಸ್ ರೋಡ್) ವಾಣಿಜ್ಯ ಕೇಂದ್ರವಾಗಿ ಬೆಳೆದಿದೆ. ಬಂಟ್ವಾಳ ಮಳೆಗಾಲದಲ್ಲಿ ಮುಳುಗುವುದರಿಂದ ಅದಕ್ಕಿಂತ ಬಿ.ಸಿ ರೋಡ್ ವ್ಯಾವಹಾರಿಕ ಪ್ರಾಮುಖ್ಯತೆ ಪಡೆದಿದೆ. ಬಿ.ಸಿ ರೋಡ್-ಕೈಕಂಬ ದಕ್ಷಿಣ ಕನ್ನಡದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಇಲ್ಲಿಯ ಬ್ಯಾರಿ ಮುಸ್ಲಿಮರು ವ್ಯಾಪಾರದಲ್ಲಿ ನಿಷ್ಣಾತರು. ’ಬ್ಯಾರ’ ಎಂದರೆ ತುಳುವಿನಲ್ಲಿ ವ್ಯಾಪಾರ ಎಂದರ್ಥ. ಬ್ಯಾರಿಗಳ ಕುಲಕಸುಬು ವ್ಯಾಪಾರ. ಬ್ಯಾರ ಮಾಡುವವರು ಕ್ರಮೇಣ ಬ್ಯಾರಿಗಳೆಂದು ಹೆಸರಾದರು. ಬಂಟ್ವಾಳದ ಬಹುತೇಕ ವ್ಯಾಪಾರ-ವಹಿವಾಟು ಕೊಂಕಣಿಗರು (ಗೌಡ ಸಾರಸ್ವತ ಬ್ರಾಹ್ಮಣರು) ಹಾಗು ಬ್ಯಾರಿಗಳ ಏಕಸ್ವಾಮ್ಯಕ್ಕೆ ಒಳಪಟ್ಟಿದೆ ಎನ್ನಲಾಗುತ್ತಿದೆ. ಹಿಂದು-ಮುಸ್ಲಿಮ್ ಮತ್ತು ಕಿಶ್ಚಿಯನ್ ಸಮುದಾಯದ ತರುಣ-ತರುಣಿಯರು ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗ ಅರಸಿಹೊಗುವುದು ಸಾಮಾನ್ಯವಾಗಿದೆ.

ಬಂಟ್ವಾಳದ ಬಹುತೇಕ ವ್ಯವಹಾರ-ಸಂವಹನ ನಡೆಯವುದು ತಳು ಭಾಷೆಯಲ್ಲಿ. ಕನ್ನಡ, ಕೊಂಕಣಿ, ಬ್ಯಾರಿ, ಹವ್ಯಕ ಬ್ರಾಹ್ಮಣ ಕನ್ನಡ ಮುಂತಾದ ಭಾಷೆಗಳು ಕೇಳಿಬರುವ ಬಂಟ್ವಾಳ ಶುದ್ಧ ತುಳುವ ಸಂಸ್ಕೃತಿ-ಸಂಪ್ರದಾಯದ ಪ್ರದೇಶ. ಭೂತ, ಕೋಲ, ನೇಮ, ನಾಗಾರಾಧನೆ, ದೈವಾರಾಧನೆ, ಯಕ್ಷಗಾನ, ಕಂಬಳ ಆಚರಣೆ ಈ ತುಳುನಾಡಿನ ನೆಲದಲ್ಲಿ ಅನೂಚಾನಾಗಿ ನಡೆದಿದೆ. ಸಾಕ್ಷರತಾ ಪ್ರಮಾಣ ಶೇ.74ರಷ್ಟಿದ್ದರೂ ಬಂಟ್ವಾಳ ಉದ್ದಗಲಕ್ಕೆ ಮೂಢನಂಬಿಕೆ, ಮಡಿ-ಮೈಲಿಗೆ, ಬ್ರಾಹ್ಮಣಿಕೆಯ ಮೇಲು-ಕೀಳು, ಜಮೀನ್ದಾರಿ ದರ್ಪ-ದೌಲತ್ತು ನಾಜೂಕಾಗಿ ಮುಂದುವರಿದಿದೆ!

ಸೂಪರ್ ಶಾಸಕ ಮತ್ತು ಸಂಘಿ ಸರಕಾರ

ಮತೀಯ ಸೂಕ್ಷ್ಮಪ್ರದೇಶವೆಂದು ಪೊಲೀಸ್ ಫೈಲ್‌ಗಳಲ್ಲಿ ದಾಖಲಾಗಿರುವ ಬಂಟ್ವಾಳ ಡಾ.ಕಲ್ಲಡ್ಕ ಪ್ರಭಾಕರ ಭಟ್ಟರ ’ಕರ್ಮಭೂಮಿ’ ಎಂಬ ಅಭಿಪ್ರಾಯ ದಶದಿಕ್ಕಿನಲ್ಲಿದೆ. ಆದರೆ 1985ರಿಂದ 2018ರವರೆಗಿನ ಮೂರು ಕಾಲು ದಶಕದಲ್ಲಿ 2004ರಿಂದ 2008ರ ಒಂದು ಅವಧಿ ಬಿಟ್ಟರೆ ಉಳಿದೆಲ್ಲ ಬಾರಿ ಧರ್ಮಾತೀತ-ಜಾತ್ಯತೀತ ಕೆಲಸಗಾರ ರಾಜಕಾರಣಿ ಎಂಬ ಪ್ರತೀತಿಯ ರಮಾನಾಥ ರೈ ಶಾಸಕರಾಗಿದ್ದರು. ಹೆಚ್ಚು ಸಮಯ ಕಾಂಗ್ರೆಸ್ ಹಿಡಿತದಲ್ಲಿ ಕ್ಷೇತ್ರವಿದ್ದರೂ ಸಂಘ ಪರಿವಾರದ ಉಗ್ರ ಸಂಘಟನೆಗಳ ಉಪಟಳ-ಬೆಳವಣಿಗೆ ತಡೆಯಲಾಗಲಿಲ್ಲ. 2018ರ ಅಸೆಂಬ್ಲಿ ಇಲೆಕ್ಷನ್‌ಗೆ ಒಂದು ವರ್ಷ ಮೊದಲೆ ತಯಾರಿಗಿಳಿದಿದ್ದ ಸಂಘ ಪರಿವಾರಕ್ಕೆ ಸತತವಾಗಿ ಭುಗಿಲೆದ್ದ ಕೋಮುದಂಗೆ-ಕೊಲೆ-ಹಿಂಸಾಚಾರದ ಪ್ರಚಂಡ ಮತೀಯ ಧ್ರುವೀಕರಣದಿಂದ ಗೆಲುವು ಸಿಕ್ಕಿತು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಕಳೆದ ನಾಲ್ಕು ವರ್ಷದಿಂದ ರಾಜೇಶ್ ನಾಯ್ಕ್ ಹೆಸರಿಗಷ್ಟೆ ಶಾಸಕ; ಕಲ್ಲಡ್ಕ ಭಟ್ಟರು ಸೂಪರ್ ಎಮ್ಮೆಲ್ಲೆ; ಗುರುಗಳು ಹಾಕಿದ ಗೆರೆ ಶಾಸಕ ನಾಯ್ಕ್ ದಾಟುವುದಿಲ್ಲ. ಶಾಸಕರಿಗ ಕೇರ್ ಮಾಡದ ಅಧಿಕಾರಿಗಳು, ಪೊಲೀಸರು ಸಂವಿಧಾನೇತರ ಶಕ್ತಿ ಕಲ್ಲಡ್ಕ ಭಟ್ಟರೆಂದರೆ ಹೆದರಿ ನಡುಗುತ್ತಾರೆ. ಕೇಸರಿ ಶಾಲು ಹಾಗು ಕಡುಕೆಂಪು ಕುಂಕುಮದ ಏಜೆಂಟರಿಲ್ಲದಿದ್ದರೆ ಯಾವ ಕೆಲಸವೂ ಸರ್ಕಾರಿ ಕಚೇರಿಗಳಲ್ಲಿ ಆಗುವುದಿಲ್ಲ; ಸಾಮಾಜಿಕ ಬದುಕನ್ನು ಅನೈತಿಕ ಪೊಲೀಸ್ ಪಡೆ ಮತ್ತು ಕೌ ಬ್ರಿಗೇಡ್ ನಿಯಂತ್ರಿಸುತ್ತಿದೆ; ಸ್ವಯಂಘೋಷಿತ ಗೋರಕ್ಷಕರಿಗೆ ಸುಲಿಗೆ ನಿತ್ಯ ಕಸುಬಾಗಿದೆ. ಹಿಂದು-ಮುಸ್ಲಿಮ್ ಸಹಪಾಠಿ ಹುಡುಗ-ಹುಡುಗಿ ಮಾತಾಡುವಂತಿಲ್ಲ; ಒಂದೆ ಬಸ್ಸಿನಲ್ಲಿ ಪ್ರಯಾಣಿಸುವುದೂ ನಿಷಿದ್ಧ. ಇದೆಲ್ಲ ಬಂಟ್ವಾಳದ ಕೇಸರಿ ಸರಕಾರದ ನೀತಿಸಂಹಿತೆ ಎಂದು ವಿವರಿಸುವ ಪ್ರಜ್ಞಾವಂತರು, ಅಲ್ಲಿನ ಸಮಾಜ ಎರಡಾಗಿ ಒಡೆದಿದೆ ಎಂದು ಕಳವಳಿಸುತ್ತಾರೆ.

ಈಚೆಗೆ ಬಂಟ್ವಾಳದಲ್ಲಿ ನಡೆದ ಜಾತ್ರೆಗಳಲ್ಲಿ ಮುಸ್ಲಿಮರು ಅಂಗಡಿಗಳನ್ನು ಹಾಕುವಂತಿಲ್ಲ; ಹಾಕಿದರೂ ಅಂಥ ಮುಸಲರೊಂದಿಗೆ ಹಿಂದುಗಳು ವ್ಯಾಪಾರ ಮಾಡಬಾರದೆಂಬ ಅದೃಶ್ಯ ಸಂಘಿ ಫರ್ಮಾನು ಹೊರಬಂದಿತ್ತು. ಆದರೆ ರಂಜಾನ್ ಸಂದರ್ಭದಲ್ಲಿ ಮುಸ್ಲಿಮ್ ಯುವಕರು ಹಬ್ಬಕ್ಕೆ ಬೇಕಾದ ತರಕಾರಿ ಮತ್ತಿತರ ಸಾಮಾನು-ಸಾಮಗ್ರಿಗಳನ್ನು ಹಿಂದುಗಳ ಅಂಗಡಿಯಿಂದಲೆ ಖರೀದಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಿದ್ದರು. ರಂಜಾನ್ ಮತ್ತು ಜಾತ್ರೆಗಳು ಸೌಹಾರ್ದತೆಯಿಂದ ನಡೆದವು. ಇದು ಬಂಟ್ವಾಳದ ಬದುಕಿನ ಎರಡು ಆಯಾಮಗಳನ್ನು ತೋರಿಸುತ್ತದೆಂದು ಶಾಂತಿ-ಸಹಿಷ್ಣುತೆ ಅಪೇಕ್ಷಿಸುವ ಮಂದಿ ಹೇಳುತ್ತಾರೆ. ಬಂಟ್ವಾಳದ ಮರಳು, ಕೆಂಪು ಕಲ್ಲು, ಶಿಲೆ ಕಲ್ಲಿನಂತ ಪ್ರಾಕೃತಿಕ ಸಂಪತ್ತಿ ಲೂಟಿ ಸಂಘಿಗಳ ಏಕಸ್ವಾಮ್ಯಕ್ಕೆ ಒಳಪಟ್ಟಿದೆಯೆಂಬ ಆರೋಪಗಳು ಕೇಳಿಬರುತ್ತಿವೆ. ಫಲ್ಗುಣಿ ಮತ್ತು ನೇತ್ರಾವತಿ ನದಿಯಲ್ಲಿ ಅವ್ಯಾಹತವಾಗಿ ಮರಳುಗಾರಿಕೆ ನಡೆಯುತ್ತಿದೆ. ಸಾವಿರಾರು ಕೋಟಿ ವಹಿವಾಟಿನ ಈ ಮರಳು ಮಾಫಿಯಾದ ಹಾವಳಿ ಬಂಟ್ವಾಳದಲ್ಲಿ ಎಷ್ಟು ಅನಾಹುತಕಾರಿಯಾಗಿದೆಯೆಂದರೆ, ಯಂತ್ರಗಳನ್ನು ಬಳಸಿ ಹಗಲು-ರಾತ್ರಿ ಮರಳು ಬಗೆದಿದ್ದರಿಂದ ಮೂಲರಪಟ್ಟಣದ ಸೇತುವೆಯೆ ಕುಸಿದುಬಿದ್ದಿತ್ತು!

ರಮಾನಾಥ ರೈ

ರಮಾನಾಥ ರೈ ಶಾಸಕ-ಮಂತ್ರಿಯಾಗಿದ್ದಾಗ ಅವರ ಬೆಂಬಲಿಗರೆ ಮರಳು ಕಳ್ಳಸಾಗಾಣಿಕೆಯಲ್ಲಿ ನಿರತರಾಗಿದ್ದಾರೆಂದು ಬಿಜೆಪಿ ಮತ್ತದರ ಬೆಂಬಲಿತ ಧಾರ್ಮಿಕ ಸಂಘಟನೆಗಳು ಆರೋಪಿಸಿ ವಾರಕ್ಕೆರಡು ಪ್ರತಿಭಟನೆ ಹಮ್ಮಿಕೊಳ್ಳುತ್ತಿದ್ದವು. ಈಗ ಬಿಜೆಪಿ ಶಾಸಕರು ಬಂಟ್ವಾಳದಲ್ಲಿದ್ದಾರೆ. ಆದರೂ ಅಕ್ರಮ ಮರಳುಗಾರಿಕೆ ನಿಂತಿಲ್ಲ. ಮೊದಲಿಗಿಂತಲೂ ಜೋರಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ.

’ಬಂಟ್ವಾಳದಲ್ಲಿ ಅಧಿಕಾರದಲ್ಲಿರುವವರ ಹಿಂಬಾಲಕರಿಂದಲೆ ಅನ್ಯಾಯ-ಅಕ್ರಮ-ಅನಾಹುತ ಆಗುತ್ತಿದೆ’ ಎನ್ನುವ ಮಾಜಿ ಶಾಸಕ ರಮಾನಾಥ ರೈ, ’ಊರಿಗೆಲ್ಲ ನೈತಿಕತೆ ಪಾಠ ಮಾಡುವ ಕಲ್ಲಡ್ಕ ಭಟ್ಟರೆ ಕಲ್ಲಡ್ಕದಲ್ಲಿ ರಾಮಭಜನಾ ಮಂದಿರದ ಹೆಸರಲ್ಲಿ ಗುಂಟೆಗಟ್ಟಲೆ ಸರಕಾರಿ ಜಾಗ ಕಬಳಿಸಿದ್ದಾರೆ’ ಎಂದು ನೇರಾನೇರ ಆರೋಪಿಸುತ್ತಾರೆ. ’ಹೊರಗಡೆಯಿಂದ ಭಜನಾಮಂದಿರದಂತೆ ಕಾಣಿಸುವ ಈ ಕಟ್ಟಡ ಪಕ್ಕಾ ವಾಣಿಜ್ಯ ಸಂಕೀರ್ಣ! ದೇವರ-ಭಕ್ತಿಯ-ಧರ್ಮರಕ್ಷಣೆಯ ಹೆಸರಲ್ಲಿ ವಾಣಿಜ್ಯ ವ್ಯವಹಾರ ಮಾಡಲಾಗುತ್ತಿದೆ. ಭಟ್ಟರ ಈ ಶ್ರೀರಾಮಮಂದಿರ ಹೆಸರಿನ ಕಮರ್ಷಿಯಲ್ ಮಳಿಗೆಯಲ್ಲಿ ಬ್ಯೂಟಿ ಪಾರ್‌ನಿಂದ ಹಿಡಿದು ಎಲ್ಲ ನಮೂನೆಯ ಅಂಗಡಿಗಳಿವೆ’ ಎಂದು ರಮಾನಾಥ ರೈ ಹೇಳುತ್ತಾರೆ.

ಶರತ್ ಮಡಿವಾಳ್ ಕೊಲೆ ಮತ್ತು ಮರಳು ಮಾಫಿಯಾ

ಕೆಲವು ದಿನಗಳ ಹಿಂದೆ ಮಾಜಿ ಮಂತ್ರಿ ರಮಾನಾಥ ರೈ ಬಂಟ್ವಾಳ ಸೀಮೆಯ ಭಯ-ಭಕ್ತಿಯ ದೈವ ಸ್ಥಾನ ಪಣೋಲಿಬೈಲ್ ಕಲ್ಲುರ್ಟಿ ಮುಂದೆ “ನಾನು ಶರತ್ ಮಡಿವಾಳನ ಕೊಲೆ ಮಾಡಿಸಿದ್ದೇನೆಂದು ಅಪಪ್ರಚಾರ ಮಾಡಲಾಗುತ್ತಿದೆ; ನಾನು ತಪ್ಪು ಮಾಡಿದ್ದರೆ ಶಿಕ್ಷೆ ನನಗಿರಲಿ; ಇಲ್ಲದಿದ್ದರೆ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿರುವವರಿಗೆ ಶಿಕ್ಷೆ ಕೊಡು” ಎಂದು ಪ್ರಾರ್ಥನೆ ಇಟ್ಟಿರುವುದು ಬಂಟ್ವಾಳ ಅಷ್ಟೆ ಅಲ್ಲ, ಇಡೀ ದಕ್ಷಿಣ ಕನ್ನಡದ ಸಂಘ ಸಂಸ್ಥಾನದಲ್ಲಿ ಸೆನ್ಸೇಷನಲ್ ಸುದ್ದಿಯಾಗಿದೆ! ಮಾಜಿ ಸಚಿವ ರೈಗಳ ಈ ಹರಕೆಯ ನಂತರ ಸಂಘ ಪರಿವಾರಿಗಳ ಪುಂಗಿ ಬಂದ್ ಆಗಿದೆ ಎನ್ನಲಾಗುತ್ತಿದೆ. ಮುಂಬರುವ 2023ರ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು 2017ರ ಜುಲೈನಲ್ಲಿ ಕೊಲೆಗೀಡಾಗಿದ್ದ ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳನ ತಂದೆಯಿಂದ ಈಚೆಗೆ “ರಮಾನಾಥ್ ರೈಗಳೆ ನನ್ನ ಮಗನ ಕೊಲೆ ಮಾಡಿಸಿದ್ದು” ಎಂದು ಹೇಳಿಸಿದ್ದ ಹಿಂದುತ್ವದ ಸೂತ್ರಧಾರರಿಗೆ ಈಗ ತಿರುಗುಬಾಣವಾಗುತ್ತಿದೆ ಎಂಬ ಚರ್ಚೆಗಳು ಹುಟ್ಟಿಕೊಂಡಿವೆ.

2018ರ ಅಸೆಂಬ್ಲಿ ಚುನಾವಣೆಗೆ ಎಂಟೊಂಭತ್ತು ತಿಂಗಳಿರುವಾಗ ಅಶ್ರಫ್ ಕಲಾಯಿ ಎಂಬ ಎಸ್‌ಡಿಪಿಐ ಕಾರ್ಯಕರ್ತನನ್ನು ಭರತ್ ಕುಮ್ಡೇಲು ಎಂಬ ಭಜರಂಗದಳದ ಆಕ್ಟಿವಿಸ್ಟ್ ಬರ್ಬರವಾಗಿ ಕೊಲೆಮಾಡುತ್ತಾನೆ! ಈ ಭರತ್ ಪ್ರಗತಿಪರ ಚಿಂತಕ ಪಟ್ಟಾಭಿರಾಮ ಸೋಮಯಾಜಿ ಮುಖಕ್ಕೆ ಮಸಿ ಬಳಿದು ಸುದ್ದಿಯಾದ ಕಟ್ಟರ್ ಹಿಂದುತ್ವದ ಹುಡುಗ. ಅಶ್ರಫ್ ಕೊಲೆಯಾದ ಹದಿನೈದು ದಿನ ಕಳೆಯುವಷ್ಟರಲ್ಲಿ ಬಿ.ಸಿ ರೋಡ್‌ನಲ್ಲಿ ದೋಭಿ ಅಂಗಡಿ ಇಟ್ಟುಕೊಂಡಿದ್ದ ಆರೆಸೆಸ್‌ನ ’ಅನಾಮಿಕ’ ಅಭಿಮಾನಿ ಶರತ್ ಮಡಿವಾಳ್ ಚೂರಿ ಇರಿತಕ್ಕೆ ಹತನಾಗುತ್ತಾನೆ. ಅಶ್ರಫ್ ಹತ್ಯೆಗೆ ಪ್ರತೀಕಾರವಾಗಿ ಶರತ್‌ನ ಮುಗಿಸಲಾಗಿದೆಯೆಂದು ಸಂಘಿ ಪರಿವಾರ ಬಿಂಬಿಸಿತು; ಚುನಾವಣೆಯಲ್ಲೂ ಈ ’ಬಲಿ’ಯನ್ನು ಯೋಜನಾಬದ್ಧವಾಗಿ ಬಳಸಿಕೊಳ್ಳಲಾಯಿತು. ರಮಾನಾಥ ರೈ ಈ ಕೊಲೆ ಮಾಡಿಸಿದ್ದಾರೆಂದು ಮನೆಮನೆಗೆ ಹೋಗಿ ಅಪಪ್ರಚಾರ ಮಾಡಲಾಯಿತು. ಅಲ್ಲಲ್ಲಿ ಶರತ್ ಕೊಲೆಗಡುಕರಿಗೆ
ಮಂತ್ರಿ ರೈ ಬೆಂಬಲವಿದೆ ಎಂಬರ್ಥ ಬರುವ ಬ್ಯಾನರ್ ಹಾಕಲಾಗಿತ್ತು ಎಂದು ಅಂದಿನ ಈ ’ಧರ್ಮಯುದ್ಧದ’ ರೋಚಕ ಜಿದ್ದಾಜಿದ್ದಿ ಕಂಡವರು ಹೇಳುತ್ತಾರೆ.

ರೈಗಳನ್ನು ಹೇಗಾದರೂ ಮಾಡಿ 2018ರಲ್ಲಿ ಸೋಲಿಸಲೇಬೇಕೆಂಬ ಹಠಕ್ಕೆ ಭಟ್ಟರು ಬಿದ್ದಿದ್ದರೆನ್ನುವ ರಾಜಕೀಯ ವಿಶ್ಲೇಷಕರು ಇದಕ್ಕೆ ಕಾರಣವನ್ನೂ ಹೀಗೆ ಬಿಚ್ಚಿಡುತ್ತಾರೆ: 2013ರಲ್ಲಿ ಸಿದ್ದು ಸರಕಾರ ಬರುವ ಮೊದಲಿನ ಬಿಜೆಪಿ ಪರ್ವದಲ್ಲಿ, ತಮ್ಮ ನಿಷ್ಠಾವಂತರು ಕೋಟ್ಯಂತರ ರೂ ಆದಾಯದ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಆಡಳಿತ ಟ್ರಸ್ಟಿಗಳಾಗಿ ನೇಮಕವಾಗುವಂತೆ ಭಟ್ಟರು ನೋಡಿಕೊಂಡಿದ್ದರಂತೆ. ಆ ಶಿಷ್ಯರ ಮೂಲಕ ತಾವು ನಡೆಸುವ ಕಲ್ಲಡ್ಕದ ಶ್ರೀರಾಮ ಪ್ರೌಢಶಾಲೆಯ ಮಕ್ಕಳ ಮಧ್ಯಾಹ್ನದ ಊಟಕ್ಕೆಂದು ಪ್ರತಿ ತಿಂಗಳು ನಾಲ್ಕು ಲಕ್ಷ ರೂಪಾಯಿ ಕೊಲ್ಲೂರು ದೇವಳದ ಹುಂಡಿಯಿಂದ ಬರುವಂತೆ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ. ಜತೆಗೆ ಅಕ್ಕಿ-ಕಾಯಿ, ದವಸ-ಧಾನ್ಯವೂ ಸಿಗುತ್ತಿತ್ತು. ಬಂಟ್ವಾಳದಲ್ಲಿ ಪಾತಕ ಮಾಡುವ ಧರ್ಮಾಂಧ ಮುಸ್ಲಿಮ್ ತರುಣರ ತಂಡಗಳನ್ನು ರಮಾನಾಥ ರೈ ರಕ್ಷಿಸುತ್ತಾರೆಂದು ಕಲ್ಲಡ್ಕ ಭಟ್ಟ ಮತ್ತವರ ಅನುಯಾಯಿಗಳು ಮಾಡುತ್ತ ಬಂದಿದ್ದ ಅಪಪ್ರಚಾರದ ದಾಳಿಯಿಂದ ರೈ ರೋಸತ್ತು ಹೋಗಿದ್ದರೆನ್ನಲಾಗಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ರೈ ಭಟ್ಟರ ಶಾಲೆಗೆ ಪ್ರತಿ ತಿಂಗಳು ಬರುತ್ತಿದ್ದ ಕೊಲ್ಲೂರು ದೇವಸ್ಥಾನದ ದುಡ್ಡು ನಿಲ್ಲಿಸಿದರು. (ಹಾಗಂತ ಅಕ್ಕಿ-ಕಾಯಿಗೆ ತಡೆಯೊಡ್ಡಲಿಲ್ಲ). ವಿದ್ಯಾರ್ಥಿಗಳಿಗೆ ಬಿಸಿ ಊಟ ಒದಗಿಸುವ ಸರಕಾರಿ ಯೋಜನೆಯಿರುವಾಗ ಕೊಲ್ಲೂರು ದೇವಳದ ಹಣ ಭಟ್ಟರಿಗೇಕೆಂಬ ತಾರ್ಕಿಕ ಪ್ರಶ್ನೆ ರೈಗಳದಾಗಿತ್ತು. ಇದರಿಂದ ಕೆರಳಿದ ಭಟ್ಟರು ’2018ರ ಚುನಾವಣಾ ಅಖಾಡದಲ್ಲಿ ನಾನು ವಿದ್ಯಾರ್ಥಿಗಳ ಹೊಟ್ಟೆಗೆ ಹೊಡೆದಿದ್ದೇನೆ ಮತ್ತು ಶರತ್‌ನ ಕೊಲೆ ಮಾಡಿಸಿದ್ದೇನೆಂಬ ಅಪಪ್ರಚಾರದ ದಾಳಿಯನ್ನು ವ್ಯವಸ್ಥಿತವಾಗಿ ನಡೆಸಿ ತನ್ನನ್ನು ಸೋಲಿಸಿದರೆಂದು’ ರೈ ಹೇಳುತ್ತಾರೆ.

ಶರತ್ ಮಡಿವಾಳ

ಶರತ್ ಮಡಿವಾಳನ ಕೊಲೆ ಮರಳು ಮಾಫಿಯಾದ ಸಂಚೆಂಬ ಮಾತೀಗ ಕೇಳಿಬರುತ್ತಿದೆ. ಶರತ್ ಮಡಿವಾಳ ತನ್ನ ಮನೆ ಬಳಿಯ ಫಲ್ಗುಣಿ ನದಿಯಲ್ಲಿ ನಡೆಯುವ ಅಕ್ರಮ ಮರಳುಗಾರಿಕೆ ವಿರುದ್ಧ ತಿರುಗಿ ಬಿದ್ದಿದ್ದನಂತೆ. ಹೀಗಾಗಿ ಮರಳು ದಂಧೆಕೋರರಿಗೆ 3 ಲಕ್ಷ ದಂಡ ಬಿದ್ದಿತ್ತಂತೆ. ಮರಳು ಮಾಫಿಯಾ ಚಾಮರಾಜನಗರದ ಪಿಎಫ್‌ಐ ತಂಡಕ್ಕೆ ಸುಫಾರಿ ಕೊಟ್ಟು ಶರತ್‌ನ ಬಲಿ ಪಡೆಯಿತೆನ್ನುವ ಆರೋಪದ ಮಾತುಗಳು ಕೇಳಿಬರುತ್ತಿವೆ. ಪಿಎಫ್‌ಐ ಕಾರ್ಯಕರ್ತ ಅಶ್ರಫ್ ಹತ್ಯೆಯ ಬೆನ್ನಲ್ಲೆ ಶರತ್ ಕೊಲೆಯಾದರೆ ಅದು ಧರ್ಮಕಾರಣದ ಬಣ್ಣ ಪಡೆದುಕೊಂಡು ತಾವು ಬಚಾವಾಗುತ್ತೇವೆಂಬ ಲೆಕ್ಕಾಚಾರ ಇದರ ಹಿಂದಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ವಿನಾಕಾರಣ ಶರತ್ ಮಡಿವಾಳನ ಕೊಲೆ ಆರೋಪಕ್ಕೆ ಸಿಲುಕಿ ಧರ್ಮಾತೀತ ಕೆಲಸಗಾರ ರೈ ಸೋಲುವಂತಾಯಿತೆಂಬ ಅಭಿಪ್ರಾಯ ಬಂಟ್ವಾಳದಲ್ಲಿದೆ.

ಚುನಾವಣಾ ಚರಿತ್ರೆಯ ಚಿತ್ರಗಳು

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಗಡಿ 2008ರಲ್ಲಾದ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಬದಲಾಗಿದೆ. ವಿಟ್ಲ ವಿಧಾನಸಭಾ ಕ್ಷೇತ್ರ ರದ್ದುಮಾಡಲಾಗಿದ್ದು, ಅದರಲ್ಲಿದ್ದ ವಿಟ್ಲ ಪೇಟೆ ಮತ್ತು ಕೆಲವು ಗ್ರಾಮಗಳನ್ನು ಪುತ್ತೂರು ಕ್ಷೇತ್ರಕ್ಕೆ ಸೇರಿಸಿ ಉಳಿದ ಹಳ್ಳಿಗಳನ್ನು ಬಂಟ್ವಾಳದೊಂದಿಗೆ ಜೋಡಿಸಲಾಗಿದೆ. ಧರ್ಮಕಾರಣದ ಜಿದ್ದಾಜಿದ್ದಿನ ಆಖಾಡವೆಂದು ಪರಿಗಣಿತವಾಗಿರುವ ಬಂಟ್ವಾಳ ಕ್ಷೇತ್ರದಲ್ಲಿ ಆರೆಸ್ಸೆಸ್ ಮತ್ತು ಪಿಎಫ್‌ಐ ಪ್ರಬಲ ಕೇಡರ್ ಬೆಂಬಲ ಪಡೆದಿರುವುದು ಆತಂಕ ಕಾರಿಯಾಗಿದೆ. ಒಟ್ಟೂ 2,21,765 ಮತದಾರರಿರುವ ಬಂಟ್ವಾಳದ ಹಿಂದುತ್ವದ ಪ್ರಚಂಡ ಮಾರುತದಲ್ಲಿ ದಿಕ್ಕು ತಪ್ಪಿದಂತಾಗಿರುವ ಬಿಲ್ಲವ ಮತ್ತು ಮುಸ್ಲಿಮ್ ಸಮುದಾಯದ ಮತಗಳು ಹೆಚ್ಚುಕಮ್ಮಿ ಸಮತೂಕದಲ್ಲಿವೆ. ಬಿಲ್ಲವರು 55 ಸಾವಿರದಷ್ಟಿದ್ದರೆ, ಮುಸ್ಲಿಮರು 50 ಸಾವಿರವಿದ್ದಾರೆ. ದಲಿತರು 25 ಸಾವಿರ, ಬಂಟ ಮತ್ತು ಕ್ರೈಸ್ತರು ತಲಾ 20 ಸಾವಿರ, ಕುಲಾಲರು (ಕುಂಬಾರ) 18 ಸಾವಿರ ಹಾಗು ಮೀನು ತಿನ್ನುವ ಬ್ರಾಹ್ಮಣರು ಮತ್ತು ಮೀನು ತಿನ್ನದವರೆನ್ನಲಾದ ಹವ್ಯಕ, ಶಿವಳ್ಳಿ ಮುಂತಾದ ವಿಪ್ರ ಸಮುದಾಯದ 12 ಸಾವಿರ ಮತಗಳು ಕ್ಷೇತ್ರದಲ್ಲಿದೆಯೆಂದು ಅಂದಾಜಿಸಲಾಗಿದೆ.

ಬಂಟ್ವಾಳದಲ್ಲಿ ಬಿಟ್ಟೂಬಿಡದೆ ನಡೆಯುವ ಕೇಸರಿ ಶಾಲು-ಕೆಂಪು ಕುಂಕುಮ ಧಾರಿಗಳ ಸಮಾವೇಶ, ಆರೆಸ್ಸೆಸ್ ಗಣವೇಶಧಾರಿಗಳ ಪಥಸಂಚಲನ, ಕಲ್ಲಡ್ಕ ಭಟ್ಟರ ಪ್ರಚೋದನತ್ಮಕ ಭಾಷಣಗಳ ಸಭೆಗಳು ಮತ್ತು ಅನೈತಿಕ ಪೊಲೀಸ್ ಹಾಗು ಗೋ ಗುಂಪುಗಳ ದಾಳಿ-ದಾಂಧಲೆಗಳಿಂದ ಈ ಕ್ಷೇತ್ರ ಬಿಜೆಪಿಯ ಭದ್ರ ಕೋಟೆಯೇನೋ ಎಂಬ ಭ್ರಮೆಮೂಡುತ್ತದೆ. ಆದರೆ ಬಂಟ್ವಾಳದಲ್ಲಾಗಿರುವ ಅಸೆಂಬ್ಲಿ ಇಲೆಕ್ಷನ್‌ಗಳ ಫಲಿತಾಂಶಗಳ ಮೇಲೆ ಸೂಕ್ಷ್ಮವಾಗಿ ಕಣ್ಣು ಹಾಯಿಸಿದರೆ ಬಿಜೆಪಿಗೆ ಗಟ್ಟಿ ನೆಲೆ ಇಲ್ಲಿಲ್ಲವೆಂಬುದು ಸ್ಪಷ್ಟವಾಗುತ್ತದೆ. 1970ರ ದಶಕದಲ್ಲಿ ವಿಟ್ಲ ಮತ್ತು ಬಂಟ್ವಾಳ ಎಡಪಂಥೀಯ ಒಲವಿನ ಕ್ಷೇತ್ರಗಳಾಗಿದ್ದವು. 1972ರಲ್ಲಿ ಸಿಪಿಐ ಪಕ್ಷದ ಪ್ರಭಾವಿ ನೇತಾರರಾಗಿದ್ದ ಬಿ.ವಿ.ಕಕ್ಕಿಲಾಯ 30,031 ಮತ ಪಡೆದು ಶಾಸಕರಾಗಿದ್ದರು. ಅವರ ಎದುರಾಳಿ ಜನಸಂಘದ ರುಕ್ಮಯ ಪೂಜಾರಿ 11,762 ಪಡೆದಿದ್ದರು.

ಹಿಂದು-ಮುಸ್ಲಿಮ್ ನಡುವೆ ಸ್ನ್ದೇಹಸೇತುವೆಯಂತಿದ್ದ ಕಾಂಗ್ರೆಸ್‌ನ ಬಿ.ಎ.ಮೊಯ್ದೀನ್ 1978ರಲ್ಲಿ ಸಂಯುಕ್ತ
ಜನತಾಪಕ್ಷದಿಂದ ಸ್ಪರ್ಧಿಸಿದ್ದ ಜನಸಂಘ ಮೂಲದ ರುಕ್ಮಯ ಪೂಜಾರಿಯವರನ್ನು 12,381 ಮತದಂತರದಿಂದ ಸೋಲಿಸಿದ್ದರು. ಇಂದಿರಾ ಗಾಂಧಿ ಮತ್ತು ದೇವರಾಜ ಅರಸು ನಡುವೆ ಭಿನ್ನಾಭಿಪ್ರಾಯ ಬಂದಾಗ ಮೊಯ್ದೀನ್ ಅರಸು ಬೆನ್ನಿಗೆ ನಿಂತಿದ್ದರು. ಆ ಬಳಿಕ ಜನತಾ ದಳದಲ್ಲಿ ಗುರುತಿಸಿಕೊಂಡಿದ್ದ ಮೊಯ್ದೀನ್ ವಿಧಾನ ಪರಿಷತ್ ಸದಸ್ಯರಾಗಿದ್ದರು. ಜೆ.ಎಚ್ ಪಟೇಲ್ ಸರಕಾರದಲ್ಲಿ ಮಂತ್ರಿಯೂ ಆಗಿದ್ದರು. 1983ರಲ್ಲಿ ಕಾಂಗ್ರೆಸ್ ಮತ್ತು ಸಿಪಿಐ ನಡುವೆ ಸೆಕ್ಯುಲರ್ ಮತಗಳು ಹಂಚಿಹೋಗಿದ್ದರಿಂದ ಬರಿ 17,690 ಮತ ಪಡೆದಿದ್ದ ಬಿಜೆಪಿಯ ಎನ್.ಶಿವರಾವ್ ಆಯ್ಕೆಯಾಗಿದ್ದರು. 1985ರಿಂದ 1999ರವರೆಗಿನ ನಿರಂತರ ನಾಲ್ಕು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಳ್ಳಿಪಾಡಿ ಬೇಬಿಯಣ್ಣ ಎಂದು ಕ್ಷೇತ್ರದಲ್ಲಿ ಕರೆಯಲ್ಪಡುವ ರಮಾನಾಥ ರೈ ಬಿಜೆಪಿಯ ನಿಕಟ ಸ್ಪರ್ಧಿಗಳನ್ನು ಮಣಿಸಿ ಶಾಸನಸಭೆಗೆ ಹೋದರು.

1994 ಮತ್ತು 1999ರಲ್ಲಿ ಈಗ ಕಾಂಗ್ರೆಸ್‌ನಲ್ಲಿರುವ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಬಿಜೆಪಿ ಅಭ್ಯರ್ಥಿಯಾಗಿದ್ದರು. ಆರೆಸ್ಸೆಸ್‌ನ ಕಲ್ಲಡ್ಕ ಭಟ್ಟರ ಸಂಘಿ ಕೋಟೆಯಲ್ಲಿ ಬಿಜೆಪಿಗೆ ಒಂದು ಸಮರ್ಥ ಕ್ಯಾಂಡಿಡೇಟ್ ಸಹ ಇಲ್ಲದ ಕಾಲವದು! 2004ರಲ್ಲಿ ಗಣೇಶ್ ಶಿಪ್ಪಿಂಗ್ ಒಡೆಯ ಬಿ.ನಾಗರಾಜ ಶೆಟ್ಟಿಯನ್ನು ಸಂಘ ಪರಿವಾರ ಕಣಕ್ಕಿಳಿಸಿತ್ತು. ಹಣವಂತ ನಾಗರಾಜ ಶೆಟ್ಟಿಯ ಸಂಪನ್ಮೂಲ ಮತ್ತು ರೈ ಹಿಂದು ವಿರೋಧಿಯೆಂದು ಅಪಪ್ರಚಾರದ ಅಸ್ತ್ರ ಪ್ರಯೋಗಿಸಿ ಸಂಘ ಗೆಲುವು ಕಂಡಿತ್ತೆಂದು ಅಂದಿನ ಕುತೂಹಲಕರ ಕದನ ಕಂಡವರು ಹೇಳುತ್ತಾರೆ. ಸಂಘ ಶ್ರೇಷ್ಠರ ಸಖ್ಯದ ನಾಗರಾಜ ಶೆಟ್ಟಿ ಶಿಪ್ಪಿಂಗ್ ಮತ್ತಿತರ ಉದ್ಯಮದ ನಂಟಿನಿಂದ ಮಾಜಿ ಮುಖ್ಯಮಂತ್ರಿ ಜೆಡಿಎಸ್‌ನ ಕುಮಾರಸ್ವಾಮಿ ಸಂಪರ್ಕವನ್ನೂ ಸಾಧಿಸಿದ್ದರು. ಮೊದಲ ಬಾರಿ ಕುಮಾರಸ್ವಾಮಿ-ಯಡಿಯೂರಪ್ಪರ 20-20 ಸರಕಾರ ಅಸ್ತಿತ್ವಕ್ಕೆ ಬಂದಾಗ ಮೈತ್ರಿ ಕುದುರಿಸಿದ ಮಧ್ಯವರ್ತಿಗಳಲ್ಲಿ ಆಗ ಶಾಸಕರಾಗಿದ್ದ ಈ ನಾಗರಾಜ ಶೆಟ್ಟಿಯು ಒಬ್ಬರೆಂಬ ಸಂಗತಿ ರಾಜಕೀಯ ವಲಯದಲ್ಲಿ ಈಗಲೂ ಚಾಲ್ತಿಯಲ್ಲಿದೆ.

ನಾಗರಾಜ ಶೆಟ್ಟಿಯವರಿಗೆ 2008ರಲ್ಲಿ ಕಾಂಗ್ರೆಸ್‌ನ ಜನಬಳಕೆಯ ನಾಯಕ ಎಂಬ ಇಮೇಜಿನ ರಮಾನಾಥ ರೈಗಳನ್ನು ಸೋಲಿಸಲಾಗಲಿಲ್ಲ. ಸಂಘ ರಾಜಕಾರಣಕ್ಕೆ ಹೊಂದಿಕೊಳ್ಳಲಾಗದ ನಾಗರಾಜ ಶೆಟ್ಟಿ ನಿಧಾನಕ್ಕೆ ಬಿಜೆಪಿಯಿಂದ ದೂರವಾಗಿ ಬಿಸ್ನೆಸ್‌ನಲ್ಲಿ ಗಮನ ಕೇಂದ್ರೀಕರಿಸಿದರು ಎನ್ನಲಾಗುತ್ತಿದೆ. ನಾಗರಾಜ ಶೆಟ್ಟಿಗೆ ಪರ್‍ಯಾಯವಾಗಿ ಕೋಟ್ಯಾಧೀಶ ಕೃಷಿಕನೆಂದು ಬಂಟ್ವಾಳ ಸೀಮೆಯಲ್ಲಿ ಪರಿಚಿತರಾಗಿರುವ ಬಂಟರ ’ಗುತ್ತಿನ’ ಮನೆತನದ ರಾಜೇಶ್ ನಾಯ್ಕ್‌ರನ್ನು ಕಲ್ಲಡ್ಕ ಭಟ್ಟರು ತಯಾರುಮಾಡಿ ಆಖಾಡಕ್ಕೆ ಬಿಟ್ಟರೆನ್ನುವ ಅಭಿಪ್ರಾಯ ದಕ್ಷಿಣ ಕನ್ನಡದಲ್ಲಿದೆ. 2013ರಲ್ಲಿ ಮೊದಲಬಾರಿ ಹಳೆಹುಲಿ ರಮಾನಾಥ ರೈಗೆ ಮುಖಾಮುಖಿಯಾದ ರಾಜೇಶ್ ನಾಯ್ಕ್‌ಗೆ ಗೆಲ್ಲುವುದಿರಲಿ, ಸೆಣಸಾಡುವುದೆ ಕಷ್ಟವಾಯಿತೆಂದು ರಾಜಕೀಯ ವಿಶ್ಲೇಷಕರು ತರ್ಕಿಸುತ್ತಾರೆ. ಆ ಚುನಾವಣೆಯಲ್ಲಿ ಎಸ್‌ಡಿಪಿಐ ಕಾಂಗ್ರೆಸ್ ಬುಟ್ಟಿಯಿಂದ 6,113 ಮತ ತೆಗೆಯಿತು ಎಂದು ವಿಶ್ಲೇಷಿಸಿದರೂ, ರೈ 7,850 ಮತಗಳಿಂದ ಆಯ್ಕೆಯಾದರು. 2013ರ ಚುನಾವಣೆಗೂ ಒಂದು ವರ್ಷ ಮೊದಲೆ ಬಂಟ್ವಾಳ ರೈ ಮತ್ತು ಕಲ್ಲಡ್ಕ ಭಟ್ಟರ ಪ್ರತಿಷ್ಠೆಯ ಯುದ್ಧ ಭೂಮಿಯಾಗಿ ಮಾರ್ಪಟ್ಟಿತ್ತು. ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆಯ ಸುತ್ತ ನಡೆದ ಅಪಪ್ರಚಾರದಿಂದ ಪ್ರಬಲ ಮತಗಳು ಧ್ರುವೀಕರಣವಾಗಿ ಸಂಘಿ ಹುರಿಯಾಳು ರಾಜೇಶ್ ನಾಯ್ಕ್ 15,971 ಮತಗಳಿಂದ ಶಾಸಕನಾಗುವ ಭಾಗ್ಯ ಕಂಡರೆಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ!

ಕ್ಷೇತ್ರದ ಇಷ್ಟ-ಕಷ್ಟ

ಧರ್ಮ ರಾಜಕಾರಣದ ಲೆಕ್ಕಾಚಾರಹಾಕಿ ದೈವಸ್ಥಾನ-ದೇವಸ್ಥಾನಕ್ಕೆ ಹೋಗುವ ರಸ್ತೆಗಳನ್ನಷ್ಟೆ ಶಾಸಕರು ಈ ಕ್ಷೇತ್ರದಲ್ಲಿ ಮಾಡಿಸುತ್ತಿದ್ದಾರೆಂಬ ಮಾತು ಜೋರಾಗಿದೆ. ತೋಟಗಾರಿಕೆಯೆ ಪ್ರಧಾನವಾಗಿರುವ ಬಂಟ್ವಾಳದಲ್ಲಿ ತೋಟಗಾರಿಕಾ ಉತ್ಪನ್ನ ಆಧಾರಿತ ಕೈಗಾರಿಕೆ ಶುರುಮಾಡಿದ್ದರೆ ಸ್ಥಳೀಯವಾಗಿ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುತಿತ್ತು; ಗುಡಿ ಕೈಗಾರಿಕೆಗೆ ಉತ್ತೇಜನ ಕೊಡಬೇಕಿತ್ತು. ಕೈಗಾರಿಕೆ ಸ್ಥಾಪಿಸಿದ್ದರೆ ಯುವಕರು ಕೊಲ್ಲಿ ದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬಹುದಿತ್ತು ಮತ್ತು ಕೌ ಬ್ರಿಗೇಡ್, ಅನೈತಿಕ ಪೊಲೀಸ್ ಪಡೆ ಸೇರುವುದು ಕಮ್ಮಿಯಾಗಿ ಯುವಕರು ಬದುಕು ಹಳಿಗೆ ಬರುತ್ತಿದ್ದರೆಂದು ಪ್ರಜ್ಞಾವಂತರು ಅಭಿಪ್ರಾಯಪಡುತ್ತಾರೆ.

ಶಕುಂತಲಾ ಶೆಟ್ಟಿ

’ಶಾಸಕ ರಾಜೇಶ್ ನಾಯ್ಕರಿಗೆ ಕ್ಷೇತ್ರದ ಭೌಗೋಳಿಕ ಉದ್ದಗಲ, ಸಾಮಾಜಿಕ-ಆರ್ಥಿಕ ಸ್ಥಿತಿ-ಗತಿಯೆ ಗೊತ್ತಿಲ್ಲ; ಬಂಟ್ವಾಳ ತಾಲೂಕಿಗೆ ಏನು ಬೇಕು, ಏನು ಬೇಡ ಎಂಬುದೆ ಅರ್ಥ ವಾಗುತ್ತಿಲ್ಲ. ಸರಕಾರಿ ಕಚೇರಿಗಳು ಲೇವಾದೇವಿ ಅಡ್ಡೆಗಳಂತಾಗಿದ್ದು ಜನರು ಕೆಲಸಗಳಾಗದೆ ಗೋಳಾಡುತ್ತಿದ್ದಾರೆ. ಶಾಸಕರಿಗೆ ಅಧಿಕಾರಿಗಳನ್ನು ಜನಪರವಾಗಿ ಪಳಗಿಸಲಾಗುತ್ತಿಲ್ಲ. ಶಾಸಕ ರಾಜೇಶ್ ನಾಯ್ಕ್ ಕೈಕಟ್ಟಿ ಹಾಕಿದಂತೆ ಒದ್ದಾಡುತ್ತಿದ್ದಾರೆ. ಗುರುವಿನ ಅಂಕುಶದಲ್ಲಿ ಹತಾಶರಾಗಿದ್ದಾರೆ. ಶಾಸಕರಿಗೆ ಕೇರ್ ಮಾಡದೆ ಕಟ್ಟರ್ ಸಂಘಿಗಳೆ ಬಂಟ್ವಾಳದ ಆಡಳಿತ ನಡೆಸಿದ್ದಾರೆಂಬುದು’ ಕ್ಷೇತ್ರದಾದ್ಯಂತ ಕೇಳಿಬರುವ ಸಾಮಾನ್ಯ ಅಳಲಾಗಿದೆ. “ಶಾಸಕರಿಗೆ ಕ್ಷೇತ್ರದ ಅಭಿವೃದ್ಧಿಗಿಂತ ತನ್ನ ಬಾಕ್ಸೈಟ್ ಮಿಶ್ರತ ಮಣ್ಣು ಕಳ್ಳಸಾಗಾಣಿಕೆ ಉದ್ಯಮದ ಉದ್ಧಾರವೆ ದೊಡ್ಡದಾಗಿದೆ” ಎಂದು ನೇರವಾಗಿ ಆರೋಪಿಸುವ ಮಾಜಿ ಶಾಸಕ ರೈ “ಉಳ್ಳಾಳದ ಮುಡಿಪು ಎಂಬಲ್ಲಿಂದ ಬೆಲೆಬಾಳುವ ಬಾಕ್ಸೈಟ್ ಮಿಶ್ರಿತ ಮಣ್ಣನ್ನು ಶಾಸಕ ನಾಯ್ಕ್ ತಮ್ಮ ಮಡದಿಯ ಹೆಸರಿನ ಫರ್ಮ್ ಮೂಲಕ ಆಂಧ್ರ ಮತ್ತು ತಮಿಳುನಾಡು ಸಿಮೆಂಟ್ ಫ್ಯಾಕ್ಟರಿಗಳಿಗೆ ಅಕ್ರಮವಾಗಿ ಮಾರಾಟ ಮಾಡುತ್ತಾರೆಂದು” ’ನ್ಯಾಯಪಥ’ಕ್ಕೆ ತಿಳಿಸಿದರು.

ತಾಲೂಕಿನ ಯಾವ ಪಂಚಾಯ್ತಿಯಲ್ಲೂ ಸೂರಿರದವರಿಗೆ ಮನೆ, ನಿವೇಶನ ಹಂಚಿಕೆಯಾಗಿಲ್ಲ; ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ 94ಸಿ ನಿಯಮದಡಿಯಲ್ಲಿ ಸೌಲಭ್ಯ ಮಂಜೂರು ಮಾಡುವ ಪ್ರಕ್ರಿಯೆ ಸಮರ್ಪಕವಾಗಿ ಆಗುತ್ತಿಲ್ಲ. ಹಿಂದಿನ ಶಾಸಕರ ಕಾಲದಲ್ಲಿ ಆರಂಭವಾಗಿದ್ದ ಅಂಬೇಡ್ಕರ್ ಭವನ, ಕವಿ ಪಂಜೆ ಮಂಗೇಶರಾಯ ಭವನದ ಕಾಮಗಾರಿ ಮುಂದುವರಿಸುವ ಮನಸ್ಸು ಅಧಿಕಾರಸ್ಥರಿಗಿಲ್ಲ; ಒಳಚರಂಡಿ ಕಾಮಗಾರಿ ಆರಂಭವೆ ಆಗಿಲ್ಲ; ಕ್ರೀಡಾಂಗಣದ ಕೆಲಸದ ಬಗ್ಗೆ ಆಸಕ್ತಿಯಿಲ್ಲ. ಮಂಜೂರಿಯಾಗಿರುವ 50 ಕೋಟಿ ರೂ. ಕುಡಿಯುವ ನೀರಿನ ಯೋಜನೆಗಿನ್ನೂ ಚಾಲನೆ ಸಿಕ್ಕಿಲ್ಲ; ಸರಪಾಡಿಯ ಸೌಹಾರ್ದ ಸೇತುವೆ (ಒಂದು ದಡದಲ್ಲಿ ಮಸೀದಿ ಹಾಗು ಮತ್ತೊಂದು ತೀರದಲ್ಲಿ ದೇವಸ್ಥಾನ) ಕೆಲಸ ಒಂದು ಪಿಲ್ಲರ್‌ಗೆ ನಿಂತಿದೆ; ತಾಲೂಕಾಡಳಿತ ಮತ್ತು ವಾಣಿಜ್ಯ ಕೇಂದ್ರವಾಗಿ ರೂಪುಗೊಳ್ಳುತ್ತಿರುವ ಬಿ.ಸಿ ರೋಡ್ ಸುಂದರೀಕರಣ ಮಾಡುವುದಾಗಿ ಹೇಳಿದ್ದು ಶಾಸಕರು ಮಾತು ಮರೆತಿದ್ದಾರೆಂಬ ಬೇಸರ ಬಂಟ್ವಾಳದಲ್ಲಿ ಮಡುಗಟ್ಟಿದೆ. ಸುಂದರೀಕರಣವಿರಲಿ ಕನಿಷ್ಟ ಒಂದು ಶೌಚಾಲಯವೂ ಬಿ.ಸಿ ರೋಡ್‌ನ ಕೇಂದ್ರ ಪ್ರದೇಶದಲ್ಲಿಲ್ಲ ಎಂಬ ಅಸಮಾಧಾನ-ಆಕ್ಷೇಪ ಸಾಮಾನ್ಯವಾಗಿದೆ.

ಟಿಕೆಟ್ ಟ್ಯಾಕ್ಟಿಕ್ಸ್

ಇನ್ನೇನು ಹತ್ತೇ ತಿಂಗಳಲ್ಲಿ ಬರಲಿರುವ ವಿಧಾನಸಭಾ ಇಲೆಕ್ಷನ್‌ಗೆ ತಂತ್ರಗಾರಿಕೆಯ ತಯಾರಿಯನ್ನು ಕಾಂಗ್ರೆಸ್‌ನ ಮಾಜಿ ಶಾಸಕ ರಮಾನಾಥ ರೈ ಮತ್ತು ಬಿಜೆಪಿಯ ಹಾಲಿ ಶಾಸಕ ರಾಜೇಶ್ ನಾಯ್ಕ್ ಶುರುಮಾಡಿದ್ದಾರೆ ಎನ್ನಲಾಗುತ್ತಿದೆ. ಈಚೆಗೆ ರಮಾನಾಥ್ ರೈ ನಡೆಸಿದ ಭರ್ಜರಿ ಕಂಬಳೋತ್ಸವಕ್ಕೆ ಸುಮಾರು 20 ಸಾವಿರ ಜನ ಸೇರಿದ್ದರೆಂದು ಅಂದಾಜಿಸಲಾಗಿದ್ದು, ಅದರ ಬೆನ್ನಿಗೇ ಶಾಸಕ ರಾಜೇಶ್ ನಾಯ್ಕ್ ತನ್ನ ವಡ್ಡೂರ್ ಫಾರ್ಮ್‌ನಲ್ಲಿ ಏರ್ಪಡಿಸಿದ್ದ ಕಮಲೋತ್ಸವಕ್ಕೂ ದೊಡ್ಡ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಬಂದಿದ್ದರು. ಕ್ಷೇತ್ರದಲ್ಲಿ ಬೇರುಮಟ್ಟದ ಸಂಪರ್ಕ ಹೊಂದಿರುವ ಮತ್ತು ಆರು ಬಾರಿ ಗೆದ್ದಿರುವ ರಮಾನಾಥ್ ರೈಗಳಿಗೆ ಕಾಂಗ್ರೆಸ್‌ನಲ್ಲಿ ಪ್ರತಿಸ್ಪರ್ಧಿಗಳಿಲ್ಲ. ಆದರೆ ಸಂಘ ಮೂಲದವರಲ್ಲದ, ಶಾಸಕನಾದ ನಂತರವೂ ಆಕ್ರಮಣಕಾರಿ ಹಿಂದುತ್ವ ಸಿದ್ಧಾಂತ ರೂಢಿಸಿಕೊಳ್ಳದ ರಾಜೇಶ್ ನಾಯ್ಕರಿಗೆ ಮತ್ತೆ ಕೇಸರಿ ಪಾರ್ಟಿಯ ಹುರಿಯಾಳು ಮಾಡಬಾರದೆಂಬ ತಕರಾರು ಹುಟ್ಟಿಕೊಂಡಿದೆಯೆಂಬ ಸುದ್ದಿ ದಟ್ಟವಾಗಿ ಹಬ್ಬಿದೆ.

ಉಗ್ರ ಹಿಂದುತ್ವವಾದಿಯಲ್ಲದ ರಾಜೇಶ್ ನಾಯ್ಕ್ ಬಗ್ಗೆ ಅನೈತಿಕ ಪೊಲೀಸ್ ಪಡೆ ಮತ್ತು ಕೌಬ್ರಿಗೇಡ್‌ಗೆ ಸಮಾಧಾನವಿಲ್ಲ ಎನ್ನಲಾಗುತ್ತಿದೆ. ಶಾಸಕರು ಬ್ಯಾರಿಗಳ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ; ಧರ್ಮ ಸಂಘರ್ಷ ಮಾಡಿದಾಗ ಆಗುವ ಗಲಾಟೆ ಪ್ರಕರಣದ ಸಂದರ್ಭದಲ್ಲಿ ನಮ್ಮ ಪರ ವಾದಿಸಲು ಅಥವಾ ರಕ್ಷಿಸಲು ಶಾಸಕ ಪೊಲೀಸ್ ಠಾಣೆಗೆ ಬರುವುದಿಲ್ಲ ಎಂಬ ಸಿಟ್ಟು ಹಿಂದುತ್ವ ಸಂಘಟನೆಗಳದಂತೆ. ಈ ಶಾಸಕ ವಿರೋಧಿ ಕೇಸರಿ ಪಡೆಯ ಹಿಂದೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಇದ್ದಾರೆನ್ನಲಾಗಿದೆ. ಕಲ್ಲಡ್ಕ ಭಟ್ಟರ ನಿಷ್ಠಾವಂತ ಶಿಷ್ಯ-ಶಾಸಕ ನಾಯ್ಕ್ ಎಂದರಾಗದ ಸಂಸದ ನಳಿನ್ ಬಂಟರ ಸಂಘದ ಪದಾಧಿಕಾರಿಯಾಗಿರುವ ಹಣವಂತ ಹೋಟೆಲಿಯರ್ ವಿವೇಕ್ ಶೆಟ್ಟಿಯವರಿಗೆ ಅಭ್ಯರ್ಥಿ ಮಾಡುವ ಪ್ರಯತ್ನದಲ್ಲಿದ್ದಾರೆಂಬ ಸುದ್ದಿ ಬಿಜಿಪಿ ಪಡಸಾಲೆಯಲ್ಲಿದೆ.

ಮಾಜಿ ಕೇಂದ್ರ ಮಂತ್ರಿ ಜನಾರ್ದನ ಪೂಜಾರಿ ಪರಮ ಅನುಯಾಯಿ ತಾನೆಂದು ಹೇಳಿಕೊಳ್ಳುವ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಟಿಕೆಟ್‌ಗಾಗಿ ಕಲ್ಲಡ್ಕರ ಮೇಲೆ ಒತ್ತಡ ಹಾಕುತ್ತಿದ್ದು, ತಾನು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುವಾಗ ಸಂಘದ ಹಿರಿಯರು ಕೊಟ್ಟ ಭರವಸೆ ಈಡೇರಿಸುವಂತೆ ಹಠ ಹಿಡಿದಿದ್ದಾರೆನ್ನಲಾಗುತ್ತಿದೆ. ಬಿಜೆಪಿ ಕ್ಯಾಂಡಿಡೇಟ್ ಯಾರೆ ಆಗಲಿ, ಬಂಟ್ವಾಳ ಅಖಾಡದಲ್ಲಾಗುವ ಹಣಾಹಣಿ ಮಾತ್ರ ಕಾಂಗ್ರೆಸ್ ಹಳೆ ಹುಲಿ ರಮಾನಾಥ ರೈ ಹಾಗು ಸಂಘ ವ್ಯಾರ್ಘ ಕಲ್ಲಡ್ಕ ಭಟ್ಟರ ನಡುವೆ ಎಂಬ ಭಾವನೆ ಕ್ಷೇತ್ರದಲ್ಲಿದೆ. ಹಾಗಾಗಿ 2023ರ ಕದನ ಈಗಾಗಲೆ ತೀವ್ರ ಕುತೂಹಲ ಕೆರಳಿಸಿಬಿಟ್ಟಿದೆ!


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರಸಮೀಕ್ಷೆ; ಪುತ್ತೂರು: ಸಂಘ ಪರಿವಾರದ ಆಡಂಬೊಲದಲ್ಲಿ ಸಜ್ಜುಗೊಳ್ಳುತ್ತಿದ್ದಾರೆಯೇ ನಳಿನ್?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...