Homeಕರ್ನಾಟಕಬಿಜೆಪಿ ಕಾರ್ಯಕರ್ತರ ಆಕ್ರೋಶದ ಬಿಸಿ: ಮಧ್ಯರಾತ್ರಿ ಸುದ್ದಿಗೋಷ್ಠಿ ನಡೆಸಿ ‘ಜನೋತ್ಸವ’ ಮುಂದೂಡಿದ ಸಿಎಂ

ಬಿಜೆಪಿ ಕಾರ್ಯಕರ್ತರ ಆಕ್ರೋಶದ ಬಿಸಿ: ಮಧ್ಯರಾತ್ರಿ ಸುದ್ದಿಗೋಷ್ಠಿ ನಡೆಸಿ ‘ಜನೋತ್ಸವ’ ಮುಂದೂಡಿದ ಸಿಎಂ

- Advertisement -
- Advertisement -

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆಯ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ತಡರಾತ್ರಿ ಸುದ್ದಿಗೋಷ್ಠಿ ನಡೆಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಧನಾ ಸಮಾವೇಶ ‘ಜನೋತ್ಸವ’ ಕಾರ್ಯಕ್ರಮ ರದ್ದುಪಡಿಸಿರುವುದಾಗಿ ತಿಳಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಗುರುವಾರ (ಜುಲೈ 28) ಜನೋತ್ಸವ ಆಯೋಜಿಸಿತ್ತು. ಆದರೆ ಪ್ರವೀಣ್‌ ಕೊಲೆಯ ಬಳಿಕ ಕಾರ್ಯಕರ್ತರು ಅಸಮಾಧಾನಗೊಂಡಿರುವುದು ಪಕ್ಷಕ್ಕೆ ಮುಜುಗರ ತಂದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆರ್‌.ಟಿ. ನಗರದಲ್ಲಿರುವ ತಮ್ಮ ನಿವಾಸದಲ್ಲಿ ತಡರಾತ್ರಿ 12.30ಕ್ಕೆ ತುರ್ತು ಸುದ್ದಿಗೋಷ್ಠಿ ನಡೆಸಿದರು. ‘ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆಯ ಹಿನ್ನೆಲೆಯಲ್ಲಿ ಜನೋತ್ಸವವನ್ನು ರದ್ದುಪಡಿಸಲಾಗಿದೆ’ ಎಂದು ತಿಳಿಸಿದರು.

ಬೆಳಿಗ್ಗೆಯಿಂದ ಅನೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಪ್ರವೀಣ ಹತ್ಯೆ ಹಾಗೂ ನಮ್ಮ ಪಕ್ಷದ ಯುವಕರ ಆಕ್ರೋಶವನ್ನೂ ಗಮನಿಸಿದೆ. ನನ್ನ ಮನಸ್ಸಿಗೂ ತುಂಬಾ ನೋವಾಗಿದೆ. ಬಹಳ ತೊಳಲಾಟದಲ್ಲಿದ್ದೆ.ಹತ್ಯೆಯಾದ ಪ್ರವೀಣ್‌ ಅವರ ತಾಯಿಯ ಆಕ್ರಂದನ ನೋಡಿದ ಬಳಿಕ ಕಾರ್ಯಕ್ರಮ ರದ್ದುಪಡಿಸಲು ತೀರ್ಮಾನಿಸಿದೆ. ಜನೋತ್ಸವ ಮಾಡಲು ನನ್ನ ಮನಃಸಾಕ್ಷಿ ಒಪ್ಪಲಿಲ್ಲ. ಹಾಗಾಗಿ ಮುಂದೂಡಲು ತೀರ್ಮಾನಿಸಿದೆ. ಪತ್ರಿಕಾಗೋಷ್ಠಿಗೆ ಬರುವ ಮುನ್ನ ನಮ್ಮ ಪಕ್ಷದ ಅಧ್ಯಕ್ಷರಾದ ಜೆ.ಪಿ. ನಡ್ಡಾ ಸೇರಿದಂತೆ ಪ್ರಮುಖರಿಗೆ ಈ ಮಾಹಿತಿಯನ್ನು ನೀಡಲಾಗಿದೆ ಎಂದಿದ್ದಾರೆ.

ಜನೋತ್ಸವ ನಡೆಸುವ ಮೂಲಕ ನಮ್ಮ ಸರ್ಕಾರ ಜನಪರವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದನ್ನು, ಮುಂದಿನ ಯೋಜನೆಗಳನ್ನು ಘೋಷಿಸಬೇಕು ಎಂದು ನಿಶ್ಚಯಿಸಿದ್ದೆವು. ನಮ್ಮ ಪಕ್ಷದ ಅಮಾಯಕ ಹಾಗೂ ನಿಷ್ಠಾವಂತ ಕಾರ್ಯಕರ್ತ ಪ್ರವೀಣರ ಹತ್ಯೆಯ ನೋವು  ಹಾಗೂ ಯುವ ಸಮುದಾಯದ ಭಾವನೆಯನ್ನು ಗಮನಿಸಿದೆ ಎಂದು ಹೇಳಿದ್ದಾರೆ.

ಯುವಕರು, ದಲಿತರು, ಹಿಂದುಳಿದವರು ಹಾಗೂ ಮಹಿಳೆಯರ ಪರವಾದ ಕಾರ್ಯಕ್ರಮಗಳನ್ನು ಮುಂದುವರಿಸುತ್ತೇವೆ. ದೊಡ್ಡಬಳ್ಳಾಪುರ ಹಾಗೂ ವಿಧಾನಸೌಧದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳು ರದ್ದಾಗಿವೆ. ಆದರೆ, ಜನಪರ ಕಾರ್ಯಕ್ರಮ-ಯೋಜನೆಗಳನ್ನು ಮಾಧ್ಯಮದವರ ಮೂಲಕ ಪ್ರಕಟಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಜನೋತ್ಸವ ರದ್ದಾಗಿರುವುದಕ್ಕೆ ಸಚಿವರಾದ ಸುಧಾಕರ್, ಮುನಿರತ್ನ, ನಾಗರಾಜ್ ಹಾಗೂ ಎಲ್ಲ ಕಾರ್ಯಕರ್ತರ ಕ್ಷಮೆ ಕೇಳುತ್ತೇನೆ ಎಂದಿರುವ ಅವರು, ಪ್ರವೀಣ್‌ ಹತ್ಯೆಯ ಆರೋಪಿಗಳನ್ನು ಸದೆಬಡಿಯಲು ಸರ್ಕಾರ ಬದ್ಧವಾಗಿದ್ದು, ಮಾಮೂಲಾದ ಕ್ರಮಗಳ ಹೊರತಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಇಂಥ ಕೃತ್ಯದಲ್ಲಿ ಭಾಗಿಯಾದ ಸಂಘಟನೆಗಳನ್ನು ನಾಶ ಮಾಡಲು, ಈಗ ಇರುವ ವ್ಯವಸ್ಥೆಯ ಹೊರತಾಗಿ ವಿಶೇಷವಾದ ಭಯೋತ್ಪಾದನಾ ನಿಗ್ರಹ ಕಮಾಂಡೋವನ್ನು ರಚಿಸಲು ನಾವು ಉದ್ದೇಶಿಸಿದ್ದೇವೆ ಎಂದಿದ್ದಾರೆ.

ಕಾರ್ಯಕರ್ತರ ಆಕ್ರೋಶ

ಕೊಲೆಯಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಮನೆಗೆ ಬುಧವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದ ವೇಳೆ ಪ್ರತಿಭಟನೆಯನ್ನು ಎದುರಿಸಬೇಕಾಯಿತು.

ಬಿಜೆಪಿ ಕಾರ್ಯಕರ್ತರು ನಳಿನ್ ಕುಮಾರ್ ಅವರಿಗೆ ಧಿಕ್ಕಾರ ಕೂಗಿದ್ದರು. ‘ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಪಕ್ಷದ ಕಾರ್ಯಕರ್ತನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಏಕೆ’ ಎಂದು ಪ್ರಶ್ನಿಸಿದ ಅವರು, ಪಕ್ಷದ ಅಮಾಯಕ ಕಾರ್ಯಕರ್ತನ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದರು.

ಕೊಲೆಗೀಡಾಗಿರುವ ಬಿಜೆಪಿ ಯುವಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರ್ ಅವರ ಅಂತಿಮ‌ ದರ್ಶನಕ್ಕಾಗಿ ಬೆಳ್ಳಾರೆಗೆ ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್‌ ಕುಮಾರ್ ಮತ್ತು ಪುತ್ತೂರು ಶಾಸಕ ಸಂಜೀವ ಮಠಂದೂರು ಒಟ್ಟಿಗೆ ಬಂದರು. ಅವರು ಕಾರಿನಿಂದ ಇಳಿಯುತ್ತಿದ್ದಂತೆಯೇ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ನಳಿನ್‌ ಕುಮಾರ್ ಕಟೀಲ್ ಮತ್ತು ಬಿಜೆಪಿಗೆ ಧಿಕ್ಕಾರ ಕೂಗಿದ್ದರು.

ಕಾರನ್ನು ಉರುಳಿಸಲೂ ಕಾರ್ಯಕರ್ತರು ಯತ್ನಿಸಿದರು. ಟೈರ್​ಗಳಿಂದ ಗಾಳಿ ಹೊರಬಿಟ್ಟರು. ಪರಿಸ್ಥಿತಿ ಕೈಮೀರುವುದು ಮನಗಂಡ ಪೊಲೀಸರು ಲಾಠಿ ಚಾರ್ಜ್ ಮಾಡಿ ಗುಂಪು ಚೆದುರಿಸಿದರು. ಪೊಲೀಸ್ ಭದ್ರತೆಯಲ್ಲಿಯೇ ನಳಿನ್ ಕುಮಾರ್ ಕಟೀಲ್ ಸ್ಥಳದಿಂದ ಹೊರನಡೆದರು.

ಇದನ್ನೂ ಓದಿರಿ: ಶವ ಮೆರವಣಿಗೆಯ ಕರಾಳ ಇತಿಹಾಸದಿಂದ ಪಾಠ ಕಲಿತ್ತಿಲ್ಲವೇ ಕರ್ನಾಟಕ ಜನತೆ?

ಹಲವು ಕಡೆ ಪದಾಧಿಕಾರಿಗಳು ಬಿಜೆಪಿಗೆ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ಇದರಿಂದ ಪಕ್ಷವು ಇಕ್ಕಟ್ಟಿಗೆ ಸಿಲುಕಿದಂತೆ ಭಾಸವಾಗುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...