“ಇದು ಎರಡನೇ ಸ್ವಾತಂತ್ರ್ಯ ಹೋರಾಟ. ರೈತ ಹೋರಾಟಗಾರರನ್ನು ಇಂದು ಭಯೋತ್ಪಾದಕರು ಎಂದು ಹೀಯಾಳಿಸಲಾಗುತ್ತಿದೆ. ಆದರೆ, ಭಯೋತ್ಪಾದಕರು ನಾವಲ್ಲ. ಬದಲಾಗಿ ರೈತ ವಿರೋಧಿ ಮಸೂದೆಗಳನ್ನು ಜಾರಿಗೆ ತಂದು ರೈತರನ್ನು ಶೋಷಣೆ ಮಾಡುತ್ತಿರುವ ಸರ್ಕಾರಗಳು ಹಾಗೂ ನಾಯಕರುಗಳೇ ನಿಜವಾದ ಭಯೋತ್ಪಾದಕರು” ಎಂದು ಹೋರಾಟಗಾರ, ನಟ ಚೇತನ್ ಕಿಡಿಕಾರಿದ್ದಾರೆ.
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಸೌಧ ಚಲೋ ರ್‍ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಭಯೋತ್ಪಾದಕರು ನಾವಲ್ಲ. ಬದಲಾಗಿ ಜನ ವಿರೋಧಿ, ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡುವ ಮೂಲಕ ಜನರನ್ನು ಶೋಷಣೆ ಮಾಡುತ್ತಿರುವ ಕೇಂದ್ರ, ರಾಜ್ಯ ಸರ್ಕಾರ ಮತ್ತು ಅವುಗಳನ್ನು ನಾಯಕರುಗಳೇ ನಿಜವಾದ ಭಯೋತ್ಪಾದಕರು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
’ಕೇಂದ್ರ ಮತ್ತು ರಾಜ್ಯ ಸರ್ಕಾರದ ಕುತಂತ್ರವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ರೈತ ವಿರೋಧಿ ಮಸೂದೆಗಳನ್ನು ಜಾರಿ ಮಾಡಿದ್ದಾರೆ. ರೈತರ ಪರ ಯಾರು ನಿಲ್ಲುತ್ತಾರೊ ಅಂತವರನ್ನು ಭಯೋತ್ಪಾದಕರು ಎಂದು ಹಣೆಪಟ್ಟಿ ಕಟ್ಟಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.
“ಯಡಿಯೂರಪ್ಪನವರು ಹಸಿರು ಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸಿ ಇದೀಗ ರೈತ ವಿರೋಧಿ ಕಾನೂನನ್ನು ಬೆಂಬಲಿಸುತ್ತಿದ್ದಾರೆ. ರೈತರ ಹೆಸರನ್ನು ಹೇಳಲು ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ. ವಿರೋಧ ಪಕ್ಷದವರು ಎಪಿಎಂಸಿ ಕಾಯ್ದೆ ಬೇಕು ಎಂದು ಹೇಳುತ್ತಾರೆ. ಈ ಮೂರು ಪಕ್ಷಗಳ ಗುರಿ ಒಂದೇ, ಅದೇ ದಬ್ಬಾಳಿಕೆಯ ಗುರಿ” ಎಂದು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರ ವಿರುದ್ಧವೂ ನಟ ಚೇತನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ರೈತ ಹೋರಾಟ ನಡೆಯುತ್ತಿದೆ. ದೆಹಲಿಯ ಗಡಿಗಳಲ್ಲಿ ರೈತ ಹೋರಾಟಗಾರರು ಬೀಡು ಬಿಟ್ಟಿದ್ದು, ಈ ಹೋರಾಟ ದೇಶದೆಲ್ಲೆಡೆ ವ್ಯಾಪಿಸಿದೆ.
ಇದನ್ನೂ ಓದಿ: ‘ಮೊದಲ ಕ್ಯಾಬಿನೆಟ್ ಸಭೆಯಲ್ಲೆ ಸಿಎಎ ಜಾರಿ’- ಪಶ್ಚಿಮ ಬಂಗಾಳ ಬಿಜೆಪಿ ಪ್ರಣಾಳಿಕೆ ಭರವಸೆ
ರೈತರ ಹೋರಾಟಕ್ಕೆ ಬೆಂಬಲ ಸೂಚಿಸಲು ದೇಶಾದ್ಯಂತ ಮಹಾಪಂಚಾಯತ್‌ಗಳು ನಡೆಯುತ್ತಿದ್ದು, ರಾಜ್ಯದಲ್ಲೂ ಶಿವಮೊಗ್ಗ ಮತ್ತು ಹಾವೇರಿಯಲ್ಲಿ ರೈತ ಮಹಾ ಪಂಚಾಯತ್ ನಡೆಸಲಾಗಿದೆ. ಸೋಮವಾರ (ಮಾರ್ಚ್ 22) ಬೆಂಗಳೂರಿನಲ್ಲಿ ರೈತರು ವಿಧಾನಸೌಧ ಚಲೋ ಹೋರಾಟಕ್ಕೆ ಕರೆ ನೀಡಿದ್ದರು.
ಇಂದಿನ ಹೋರಾಟದಲ್ಲಿ ದೆಹಲಿಯ ರೈತ ಹೋರಾಟ ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾದ ಡಾ.ದರ್ಶನ್ ಪಾಲ್, ರಾಕೇಶ್ ಟಿಕಾಯತ್, ಯುದುವೀರ್ ಸಿಂಗ್, ಕುಲ್‌ಬೀರ್ ಸಿಂಗ್, ರಾಜ್ಯದ ಬಡಗಲಪುರ ನಾಗೇಂದ್ರ, ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದನ್ನೂ ಓದಿ: ಎಲ್ಲೆಲ್ಲೋ ಬಟ್ಟೆಬಿಚ್ಚಿ ಮರ್ಯಾದೆ ಕಳೆಯುತ್ತಿರುವ ಬಿಜೆಪಿ ನಾಯಕರಿಗಾಗಿ ಬಟ್ಟೆ ಖರೀದಿ- ಸಿದ್ದರಾಮಯ್ಯ