ಬಿಹಾರದ ಆಡಳಿತಾರೂಢ ಪಕ್ಷ ಜೆಡಿಯು ಅರುಣಾಚಲ ಪ್ರದೇಶದಲ್ಲಿ ಪಕ್ಷಾಂತರದ ಕಾವನ್ನು ಅನುಭವಿಸಿದ ಬೆನ್ನಲ್ಲೇ, ಬಿಹಾರದಲ್ಲಿಯೂ ನಿತೀಶ್ ಕುಮಾರ್‌ಗೆ ಆಘಾತ ನೀಡುವ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ರಾಜ್ಯದ ವಿರೋಧ ಪಕ್ಷದ ಆರ್‌ಜೆಡಿ ಮುಖಂಡ ಶ್ಯಾಂ ರಾಜಕ್, “17 ಜೆಡಿಯು ಶಾಸಕರು ಆರ್‌ಜೆಡಿಯೊಂದಿಗೆ ಸಂಪರ್ಕದಲ್ಲಿದ್ದಾರೆ” ಎಂದು ಹೇಳಿದ್ದಾರೆ.
“ಜೆಡಿಯು ಪಕ್ಷದೊಳಗೆ ಮತ್ತು ಪಕ್ಷದ ವ್ಯವಹಾರಗಳ ಹಿಡಿತದಲ್ಲಿ ನಿತೀಶ್ ಕುಮಾರ್ ಅವರ ನಿರಂಕುಶಾಧಿಕಾರಿ ವರ್ತನೆ ಅಲ್ಲಿನ ಬಹುಪಾಲು ಶಾಸಕರಿಗೆ ಕಿರಿಕಿರಿಯನ್ನುಂಟು ಮಾಡಿದೆ. ನಿತೀಶ್ ಕುಮಾರ್ ತಮ್ಮ ರಾಜಕೀಯ ಚಿತ್ರಣದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ” ಎಂದು ವಿಧಾನಸಭಾ ಚುನಾವಣೆಗೆ ಮೊದಲು ನಿತೀಶ್ ಕುಮಾರ್ ಸಂಪುಟದಲ್ಲಿ ಕೈಗಾರಿಕಾ ಸಚಿವರಾಗಿದ್ದ ಶ್ಯಾಂ ರಾಜಕ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಬಿಹಾರ: 19 ಲಕ್ಷ ಉದ್ಯೋಗ ನೀಡದಿದ್ದರೆ ರಾಜ್ಯದಾದ್ಯಂತ ತೀವ್ರ ಪ್ರತಿಭಟನೆ – ತೇಜಸ್ವಿ ಯಾದವ್ ಎಚ್ಚರಿಕೆ
“ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರ ಶೀಘ್ರದಲ್ಲೇ ಬೀಳಲಿದೆ. ಮಿತ್ರಪಕ್ಷಗಳ ನಡುವೆ ಅಸಮಾಧಾನ ಹೆಚ್ಚುತ್ತಿದೆ. ಆಡಳಿತದಲ್ಲಿ ಪ್ರಾಬಲ್ಯ ಸಾಧಿಸಲು ಬಿಜೆಪಿ ಮತ್ತು ಜೆಡಿಯು ನಡುವೆ ಹೆಚ್ಚುತ್ತಿರುವ ಹೋರಾಟದಿಂದಾಗಿ ಈಗ ಇದು ಅನಿವಾರ್ಯವಾಗುತ್ತಿದೆ” ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿದ್ದಾರೆ.
“ಜನವರಿ 14 ರ ನಂತರ ಜೆಡಿಯು ತನ್ನ 17 ಶಾಸಕರ ಮತ್ತೊಂದು ಪಕ್ಷಾಂತರವನ್ನು ಎದುರಿಸಬೇಕಾಗಬಹುದು. ಏಕೆಂದರೆ ನಿತೀಶ್ ಕುಮಾರ್ ತಮ್ಮ ಪಕ್ಷವನ್ನು ಕಟ್ಟುವಲ್ಲಿ ವಿಫಲರಾಗಿದ್ದಾರೆ” ಎಂದು ಹೇಳಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಜೆಡಿಯುನ ಆರು ಶಾಸಕರು ಇತ್ತೀಚೆಗೆ ಬಿಜೆಪಿಗೆ ಪಕ್ಷಾಂತರವಾಗಿದ್ದರು. ಹಾಗಾಗಿ ಆರ್‌ಜೆಡಿ ಮುಖಂಡರ ಈ ಹೇಳಿಕೆ ನಿತೀಶ್ ಕುಮಾರ್ ಅವರಿಗೆ ಮತ್ತೊಂದು ಆಘಾತ ನೀಡಿದೆ.
ಇದನ್ನೂ ಓದಿ: ಮೂರೇ ದಿನದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಹಾರದ ಶಿಕ್ಷಣ ಸಚಿವ!