ಮುಸ್ಲಿಮರು ಸೇರಿದಂತೆ ಎಲ್ಲರಿಗೂ ರಕ್ಷಣೆ ಕೊಡುತ್ತೇವೆ ಎಂದಿದ್ದೆ,ಇದರಲ್ಲಿ ತಪ್ಪೇನಿದೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯ ಸಮಾವೇಶದಲ್ಲಿ ನೀಡಿರುವ ಹೇಳಿಕೆ ಕುರಿತು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಾತನಾಡಿದ ಅವರು, “ನಾನು ಎಲ್ಲರಿಗೂ ರಕ್ಷಣೆ ಕೊಡುತ್ತೇವೆ ಎಂದಿದ್ದೆ. ಅದನ್ನು ಬಿಟ್ಟು ಬರೆದರೆ ನಾನೇನು ಮಾಡುವುದು?” ಎಂದು ಪ್ರಶ್ನಿಸಿದ್ದಾರೆ.
ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಧರ್ಮದ ಜನರಿಗೂ ನಾವು ಸಮಾನ ರಕ್ಷಣೆ ನೀಡುತ್ತೇವೆ. ಈ ಬಗ್ಗೆ ಯಾವುದೇ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ.
– ಮುಖ್ಯಮಂತ್ರಿ @siddaramaiah #JusticeForAll #EqualProtection pic.twitter.com/OSWW6dnOQj— CM of Karnataka (@CMofKarnataka) December 5, 2023
“ನನ್ನ ಹೇಳಿಕೆಗೆ ಉಪ್ಪು, ಖಾರ ಹಾಕಿ ಪ್ರಚಾರ ಮಾಡುತ್ತಿದ್ದಾರೆ. ನಾನು ಮುಸ್ಲಿಮರು ಸೇರಿದಂತೆ ಎಲ್ಲರಿಗೂ ರಕ್ಷಣೆ ಕೊಡುತ್ತೇವೆ ಎಂದಿದ್ದೆ” ಎಂದು ಸಿಎಂ ಪುನರುಚ್ಚರಿಸಿದ್ದಾರೆ.
ಸೋಮವಾರ ಹುಬ್ಬಳ್ಳಿಯಲ್ಲಿ ನಡೆದ ದಕ್ಷಿಣ ಭಾರತ ಮುಸ್ಲಿಂ ಧರ್ಮ ಗುರುಗಳ ಸಮಾವೇಶದಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, “ಹುಬ್ಬಳ್ಳಿಯ ಪೀರ್ ಬಾಷಾ ದರ್ಗಾಕ್ಕೆ ಅನುದಾನ ಕೊಡುತ್ತೇನೆ. ನಾನು ಹೇಳಿದ ಮೇಲೆ ಕೊಟ್ಟೇ ಕೊಡುತ್ತೇನೆ. ಅಲ್ಪ ಸಂಖ್ಯಾತ ಇಲಾಖೆಗೆ ಈಗಾಗಲೇ 4 ಸಾವಿರ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಇದನ್ನು ಹಂತ ಹಂತವಾಗಿ 10 ಸಾವಿರ ಕೋಟಿಗೆ ಹೆಚ್ಚಿಸಬೇಕು. ನಿಮ್ಮ ಧಾರ್ಮಿಕ ಕೇಂದ್ರಗಳಿಗೆ ಅನುದಾನ ಸಿಗಬೇಕು. ನೀವು ಭಾರತೀಯರು. ನಿಮಗೂ ಈ ದೇಶದ ಸಂಪತ್ತಿನಲ್ಲಿ ಹಕ್ಕಿದೆ. ನಿಮಗೆ ಅನ್ಯಾಯವಾಗಲು ಬಿಡುವುದಿಲ್ಲ” ಎಂದಿದ್ದರು.
“ಕೇವಲ ಅಕ್ಷರ ಕಲಿತರೆ ಸಾಲದು. ವೈಚಾರಿಕತೆಯಿಂದ ಕೂಡಿದ ಶಿಕ್ಷಣ ನಮಗೆಲ್ಲ ಸಿಗಬೇಕು. ಹಿಂದೂ, ಮುಸ್ಲಿಮರು ಒಂದೇ ತಾಯ ಮಕ್ಕಳು. ಕಾಯಿಲೆ ಬಂದರೆ ನಮ್ಮ ಜಾತಿಯವನ ರಕ್ಷ ಕೊಡಿ ಎಂದು ಕೇಳುತ್ತೇವಾ? ಯಾವುದೇ ರಕ್ತ ಆಗಬಹುದು ಬದುಕಿದರೆ ಸಾಕು ಎನ್ನುತ್ತೇವೆ” ಎಂದು ಸಿಎಂ ಹೇಳಿದ್ದರು.
ಸಿಎಂರಿಂದ ತುಷ್ಟೀಕರಣದ ರಾಜಕಾರಣ : ಬಸವರಾಜ ಬೊಮ್ಮಾಯಿ
ಸಿಎಂ ಹೇಳಿಕೆಗೆ ಬಿಜೆಪಿ ನಾಯಕರು ಅಪಸ್ವರ ಎತ್ತಿದ್ದರು. ಈ ಕುರಿತು ಮಾತನಾಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, “ಮುಖ್ಯಮಂತ್ರಿಗಳು ನಿನ್ನೆ ಸಭೆಯೊಂದರಲ್ಲಿ ರಾಷ್ಟ್ರದ ಸಂಪತ್ತಿನಲ್ಲಿ ಅಲ್ಪಸಂಖ್ಯಾತರಿಗೆ ವಿಶೇಷವಾಗಿರುವ ಹಕ್ಕು ಕೊಡುವ ಮಾತನಾಡಿದ್ದಾರೆ. ಇದು ತುಷ್ಟೀಕರಣದ ರಾಜಕಾರಣ ಮತ ಬ್ಯಾಂಕಿನ ರಾಜಕಾರಣ. ಮುಖ್ಯಮಂತ್ರಿಯಾಗಿ ಎಲ್ಲರಿಗೂ ನ್ಯಾಯ ಕೊಡುವ ಅವರ ಕರ್ತವ್ಯವನ್ನು ಮರೆತಂತಿದೆ” ಎಂದು ಹೇಳಿದ್ದರು.
ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, “ಈಗಾಗಲೇ ಅಲ್ಪಸಂಖ್ಯಾತರಿಗೆ ವಕ್ಪ್ ಬೊರ್ಡ್, ಮೈನಾರಿಟಿ ಕಾರ್ಪೊರೇಷನ್, ಮೈನಾರಿಟಿ ಕಮಿಷನ್ ನಿಂದ ಹಲವಾರು ಕಾರ್ಯಕ್ರಮಗಳ ಮೂಲಕ ಅನುದಾನ ಬರುತ್ತಿದೆ. ಅವರೂ ಕೂಡ ಶಿಕ್ಷಣವನ್ನು ಪಡೆದು ಸ್ವಾವಲಂಬಿ ಆಗಬೇಕೆಂಬ ಆಸೆ ಎಲ್ಲ ಸರ್ಕಾರಗಳ ಉದ್ದೇಶವಾಗಿದೆ. ಆದರೆ, ಇತರ ಸಮುದಾಯಗಳ ಮೇಲೆ ಸವಾರಿ ಮಾಡುವ ರೀತಿಯ ಮುಖ್ಯಮಂತ್ರಿಯ ಮಾತು ಖಂಡನೀಯ ಎಂದು ಎಂದಿದ್ದಾರೆ.
ಮುಖ್ಯಮಂತ್ರಿ @siddaramaiah ಅವರು ನಿನ್ನೆ ಸಭೆಯೊಂದರಲ್ಲಿ ರಾಷ್ಟ್ರ ಸಂಪತ್ತಿನಲ್ಲಿ ಅಲ್ಪ ಸಂಖ್ಯಾ ತರಿಗೆ ವಿಶೇಷವಾಗಿರುವ ಹಕ್ಕು ಕೊಡುವ ಮಾತನಾಡಿದ್ದಾರೆ. ಇದು ತುಷ್ಟೀಕರಣದ ರಾಜಕಾರಣ, ಮತ ಬ್ಯಾಂಕಿನ ರಾಜಕಾರಣ ಮತ್ತು ಮುಖ್ಯಮಂತ್ರಿ ಯಾಗಿ ಎಲ್ಲರಿಗೂ ನ್ಯಾಯ ಕೊಡುವ ಅವರ ಕರ್ತವ್ಯವನ್ನು ಮರೆತಂತಿದೆ.
ಈಗಾಗಲೇ ಅಲ್ಪಸಂಖ್ಯಾತರಿಗೆ ವಕ್ಪ್…
— Basavaraj S Bommai (@BSBommai) December 5, 2023
ಎಸ್ಸಿ, ಎಸ್ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟಿರುವ ಎಸ್ಸಿಎಸ್ಪಿ, ಟಿಎಸ್‌ಪಿ ಹಣವನ್ನು ಗ್ಯಾರಂಟಿಗಳಿಗೆ ವರ್ಗಾವಣೆ ಮಾಡಿ, ಅವರಿಗೆ ಅನ್ಯಾಯ ಮಾಡಿದ್ದೀರಿ. ಬರ ಪರಿಹಾರಕ್ಕೆ ಹಣ ನೀಡದೇ ಮುಸ್ಲಿಮರ ಓಲೈಕೆಗಾಗಿ ಹೆಚ್ಚಿನ ಅನುದಾನ ನೀಡುವುದಾಗಿ ಹೇಳುತ್ತೀರಿ. ಇದರಿಂದ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗುವುದಲ್ಲದೇ, ಸಾಮಾಜಿಕವಾಗಿ ತಾರತಮ್ಯ ಮಾಡಿದಂತಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬೆಳಗಾವಿ: ಕಾಂಗ್ರೆಸ್-ಬಿಜೆಪಿ ನಡುವೆ ರಾಜಕೀಯ ಕಿತ್ತಾಟಕ್ಕೆ ಕಾರಣವಾದ ಚಾಕು ಇರಿತ ಪ್ರಕರಣ


