HomeUncategorizedಯುವಜನತೆಗೆ ಕೇಳಿಸಿದ ಗಾಂಧಿ, ಓದಿಸಿದ ಗಾಂಧಿ ಮತ್ತು ನಂಬಿಸಿದ ಗಾಂಧಿಯ ಕುರಿತು...

ಯುವಜನತೆಗೆ ಕೇಳಿಸಿದ ಗಾಂಧಿ, ಓದಿಸಿದ ಗಾಂಧಿ ಮತ್ತು ನಂಬಿಸಿದ ಗಾಂಧಿಯ ಕುರಿತು…

ಗಾಂಧೀಜಿ ಏಕಕಾಲಕ್ಕೆ ಮುಸ್ಲಿಂ ಪರವಾಗಿದ್ದು, ಸನಾತನಿ ಹೇಗಾದರೂ ಎಂಬ ಒಂದು ಸರಳ ಪ್ರಶ್ನೆಯು ಕೇಳಿಸುವವರಿಗೆ ಕೇಳುವವರಿಗೆ ಹುಟ್ಟಿಕೊಳ್ಳದಿರುವುದು ವ್ಯಂಗ್ಯ ಮತ್ತು ವಿಷಾದನೀಯ.

- Advertisement -
- Advertisement -

ಯುವಜನತೆ, ಗಾಂಧೀಜಿ ಮತ್ತು ಅವರ ಚಿಂತನೆಗಳಿಗೆ ಅಸಹನೆ ತೋರುತ್ತಿದ್ದಾರೆಯೇ? ಅಥವ ನಿರಾಸಕ್ತರಂತೆ ಇದ್ದಾರೆಯೇ? ಗಾಂಧೀಜಿ ಬದುಕು ಬರಹದ ಬಗ್ಗೆ ಯುವಜನತೆ ನಿಜಕ್ಕೂ ಪೂರ್ವಗ್ರಹವಾಗುತ್ತಿದಿಯೇ? ಹೀಗೆ ಯುವಜನತೆ ಪೂರ್ವಗ್ರಹಪೀಡಿತರಾಗಿ ಬಳಲುತ್ತಿರುವುದ್ದಕ್ಕೆ ಯಾರು ಕಾರಣ? ಗಾಂಧೀ ಚಿಂತನೆಗಳಿಗೆ ಯುವಜನತೆ ಮುಖ ತಿರುಗುತ್ತಿರುವುದು ಒಂದು ಸಮಸ್ಯೆಯಲ್ಲವೇ? ಗಾಂಧೀಜಿಯ ಬದುಕು ಬರಹಗಳೊಂದಿಗೆ ಯುವಜನತೆಗೆ ಇತ್ಯಾತ್ಮಕ ಸಂಬಂಧಕ್ಕಿಂತ ನೇತ್ಯಾತ್ಮಕ ಸಂಬಂಧವೇ ದಿನೇದಿನೇ ವಿಪರೀತವಾಗುತ್ತಿರುವುದು, ಇಂತಹದ್ದೊಂದು ಮನಸ್ಥಿತಿಯು ಶೈಕ್ಷಣಿಕ ಪರಿಸರದಿಂದಲೇ ರೂಪುಗೊಳ್ಳುತ್ತಿರುವುದು ಕಳವಳಕಾರಿಯಾಗಿದೆ.

ಗಾಂಧೀಜಿ ವಿರೋಧಿ ಭಾವನೆಯನ್ನು ಯುವಜನತೆಗೆ ಮೂಡಿಸುವಲ್ಲಿ ಶಿಕ್ಷಕರ/ಅಧ್ಯಾಪಕರ ಪಾತ್ರ ಗಣನೀಯವಾಗಿದೆ ಎಂಬುದು ನಿರಾಧಾರವಾದ ಆರೋಪ ಅಲ್ಲವೇಅಲ್ಲ. ಇದಕ್ಕೆ ಪೂರಕವಾಗಿ ನಿರ್ದಿಷ್ಟ ಸಂಘ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷದ ಸಿದ್ದಾಂತಗಳು ಗಾಂಧೀ ವಿರೋಧಿ ಭಾವನೆ ಮೂಡಿಸುವಲ್ಲಿ ನಿರಂತರ ಕ್ರಿಯಾಶೀಲವಾಗಿರುವುದು ಗೌಪ್ಯ ಸಂಗತಿಯೇನಲ್ಲ. ಇದಕ್ಕೆ ಸಾಥ್ ಕೊಡುವಂತೆ ಇತ್ತೀಚೆಗೆ ಗಾಂಧೀ ವಿರುದ್ಧ ಭಾವನೆಯನ್ನು ರಭಸದಲ್ಲಿ ಹಂಚುತ್ತಿರುವುದು ಸಾಮಾಜಿಕ ಜಾಲತಾಣಗಳು.

ಈ ಎಲ್ಲವುಗಳ ಹಿನ್ನೆಲೆಯಿಂದ ಯುವಜನತೆ ಗಾಂಧೀ ಚಿಂತನೆಗಳಿಂದ ಡಿಸ್‍ಕನೆಕ್ಟ್ ಆಗುತ್ತಿದೆ; ಕನೆಕ್ಟ್ ಆಗಿದ್ದರೆ ಅದು ವಿರೋಧದ ನೆಲೆಯಿಂದಷ್ಟೇ. ಯಾವ ಯಾವ ಕಾರಣಗಳಿಂದ ಯುವಜನತೆ ಗಾಂಧೀ ಮತ್ತು ಅವರ ಚಿಂತನೆಗಳಿಂದ ದೂರ ಸರಿಯುತ್ತಿದ್ದಾರೆ ಎಂಬುದನ್ನು ಗಂಭೀರವಾಗಿ ಚಿಂತಿಸಬೇಕಿದೆ. ಯುವಜನತೆಯು ಗಾಂಧೀಯೊಂದಿಗೆ ಧನಾತ್ಮಕ ಸಂಬಂಧವನ್ನು ಹೊಂದುವಂತೆ ಮಾಡದಿದ್ದರೆ, ಸಮಾಜಿಕ ಸ್ವಾಸ್ಥ್ಯ ಹೊಂದುವ ಬದಲು, ಇರುವ ಅನೇಕ ಸಮಸ್ಯೆಗಳನ್ನು ಬಲಗೊಳಿಸಿ, ದೇಶವನ್ನು ತಲ್ಲಣದ ಗೂಡಾಗಿಸಲಾಗುತ್ತದೆ. ಆದ್ದರಿಂದ ಯುವಜನತೆ ಮತ್ತು ಗಾಂಧೀಯ ಸಂಬಂಧವು ಋಣಾತ್ಮಕ ಸಂಬಂಧವಾಗಿದ್ದರೆ ಆದ್ಯತೆಯ ಸಮಸ್ಯೆಯೆಂದು ಭಾವಿಸುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಯುವಜನತೆಯು ಗಾಂಧೀಯ ಜೊತೆ ಯಾವ ತರಹದ ಸಂಬಂಧ ಹೊಂದಿದೆ ಮತ್ತು ಯಾಕಾಗಿ ಹೊಂದಿದೆ ಎಂಬುದನ್ನು ಈ ಲೇಖನದಲ್ಲಿ ಚಿಂತನೆ ಮಾಡಲು ಪ್ರಯತ್ನಿಸಿದ್ದೇನೆ.

ದೊಡ್ಡಿ ಶೇಖರ

ಯುವಜನತೆಗೆ ಗಾಂಧೀಜಿಯವರನ್ನು ಮೂರು ರೀತಿಯಲ್ಲಿ ಪರಿಚಯಿಸಲಾಗಿದೆ ಎನ್ನಿಸುತ್ತಿದೆ. ಆ ಮೂರು ರೀತಿಯವುಗಳೆಂದರೆ: ಒಂದು- ಕೇಳಿಸಿದ ಗಾಂಧೀ, ಎರಡು- ಓದಿಸಿದ ಗಾಂಧೀ ಮತ್ತು ಮೂರನೆಯದು ನಂಬಿಸಿದ ಗಾಂಧೀ. ಈ ಮೂರು ತರಹದ ಗಾಂಧೀಜಿಯವರನ್ನು ಯುವಜನತೆ ಮತ್ತೆ ಮತ್ತೆ ಎದುರುಗೊಳ್ಳುತ್ತಿದೆ ಅಥವ ಎದುರುಗೊಳ್ಳುವಂತೆ ಮಾಡಲಾಗುತ್ತಿದೆ. ಈ ಮೂರು ತರಹದ ಗಾಂಧಿಯು ಯುವಜನತೆಯ ಮೇಲೆ ಎಂತಹ ಪರಿಣಾಮವನ್ನು ಬೀರುತ್ತಿದೆ ಎಂದು ಚಿಂತಿಸುವುದು ಮುಖ್ಯವಾದುದ್ದು. ಇವುಗಳನ್ನು ಹೊರತು ಪಡಿಸಿದ ನಾಲ್ಕನೆಯ ಆಯಾಮವು ಒಂದಿದೆ. ಇದು ಕಿರಿಯ ತಲೆಮಾರು ಗಾಂಧೀಜಿಯನ್ನು ತಮ್ಮಲ್ಲೇ ಅರ್ಥೈಸಿಕೊಳ್ಳಬೇಕಿರುವ ಹಾಗೂ ವರ್ತಮಾನದಲ್ಲಿ ವ್ಯಕ್ತಿಯ ಮತ್ತು ಸಮಾಜದ ಒಳಹೊರಗೆ ಕಾಣಬೇಕಿರುವ ಗಾಂಧೀಜಿಯಾಗಿದ್ದಾರೆ. ಈ ನಾಲ್ಕನೆಯ ಆಯಾಮದ ಗಾಂಧೀಜಿಯನ್ನು ಕಂಡುಕೊಳ್ಳುವುದಕ್ಕೆ ಹೇಗೆ ಮತ್ತು ಏಕೆ ಪ್ರೇರೆಪಿಸಬೇಕೆಂಬುದು ಎಲ್ಲದುಕ್ಕಿಂತ ಬಹಳ ಮುಖ್ಯವಾದುದ್ದು. ಈ ಮೂರು ಬಗೆಯ ಗಾಂಧಿಯನ್ನು ಯುವಜನತೆಗೆ ಹೇಗೆ ನಕಾರಾತ್ಮಕವಾಗಿ ಕಟ್ಟಿಕೊಡಲಾಗಿದೆ ಎಂಬುದನ್ನು ಒಂದೊಂದಾಗಿ ವಿಶ್ಲೇಷಿಲು ಯತ್ನಿಸಿದ್ದೇನೆ.

ಕೇಳಿಸಿದ ಗಾಂಧೀ: ಯುವಜನತೆಗೆ ಗಾಂಧೀ ಅಸಹನೆ ಹೆಚ್ಚು ಇರುವುದು ಈ ‘ಕೇಳಿಸಿದ ಗಾಂಧಿ’ಯ ಕಾರಣಕ್ಕೆ ಎನ್ನಿಸುತ್ತದೆ. ಯಾಕೆಂದರೆ, ಕೇಳಿಸಿದ ಗಾಂಧೀ ಇಮೇಜ್ ಬಹಳ ಮಟ್ಟಿಗೆ ನೆಗೆಟಿವ್ ಆದುದ್ದು. ಗಾಂಧೀಜಿಯು ತನ್ನ ಸಮಕಾಲೀನ ಅನೇಕರೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿಲ್ಲವೆಂದು, ಅದಕ್ಕೆ ಅವರ ಧೋರಣೆಯೇ ಕಾರಣವೆಂದು ಮತ್ತೆ ಮತ್ತೆ ಕೇಳಿಸಿದ್ದಾರೆ. ಗಾಂಧೀಜಿಯವರಿಗೆ ಅಂಬೇಡ್ಕರ್, ವಲ್ಲಬಾಯಿ ಪಟೇಲ್, ಸುಭಾಷ್‍ಚಂದ್ರ ಭೋಸ್, ಭಗತ್‍ಸಿಂಗ್ ಮೊದಲಾದವರೊಂದಿಗೆ ಅಸಹನೀಯವಾದ, ಸಂಕುಚಿತ ನಿಲುವನ್ನು ಹೊಂದಿದ್ದರೆಂದು ಕೇಳಿಸಿರುವುದು. ಇದರಿಂದ ಗಾಂಧೀಜಿ ಒಬ್ಬ ಜಾತಿವಾದಿ ಎಂದು, ಸಮರ್ಥ ನಾಯಕರ ಕಂಡರೆ ಅಸೂಯಶೀಲರಾಗಿದ್ದರೆಂದು, ಮತ್ತೊಬ್ಬರ ಜನಪ್ರಿಯತೆಯನ್ನು ಹತ್ತಿಕ್ಕಿದ್ದ ನೀಚನೆಂದು, ಸ್ವಾರ್ಥಿಯೆಂದು ಕೇಳಿಸಲಾಗಿದೆ. ಗಾಂಧೀಜಿಗೆ ಸಮಕಾಲೀನರೂ ಕಿರಿಯರೂ ಆಗಿದ್ದ ಇವರೊಂದಿಗೆ ಇದ್ದ ಭಿನ್ನಮತವನ್ನು-ಈ ಭಿನ್ನಾಭಿಪ್ರಾಯಗಳ ಔಚಿತ್ಯವನ್ನು ಸರಿಯಾಗಿ ತಿಳಿಯಲಾಗದವರು ಅಥವ ತಿಳಿದೂ ದುರುದ್ದೇಶಪೂರಿತದ ತಿಳಿಗೇಡಿಗಳು- ನಕಾರಾತ್ಮಕವಾಗಿಸಿ ಗಾಂಧೀಜಿಯವರನ್ನು ವೈಚಿತ್ರವಾಗಿ ಬಿಂಬಿಸಲು ಬಳಸಿಕೊಂಡರು. ಚರಿತ್ರೆಯ ಘಟನಾವಳಿಗಳನ್ನು ಹಾಗೂ ವ್ಯಕ್ತಿಗಳನ್ನು ಆಯ್ದುಕೊಂಡು ಗಾಂಧೀಜಿಯವರನ್ನು ಕಿರಿಯ ಪೀಳಿಗೆಯ ಎದುರು ವಿರೂಪಗೊಳಿಸಿ, ಅದನ್ನು ಕೇಳಿಸಿ, ಬಲುಮಟ್ಟಿಗೆ ಯಶಸ್ವಿಯಾಗಿದ್ದಾರೆ. ಈ ಯಶಸ್ಸು ಅತ್ಯಂತ ಕಳವಳಕಾರಿಯಾದುದ್ದು.

ಈ ‘ಕೇಳಿಸಿದ ಗಾಂಧೀ’ ಅನೇಕ ಮುಖದಿಂದ ಆಗಿರುವುದರಿಂದ, ಯುವಜನತೆಗೆ ಗಾಂಧೀಜಿ ವಕ್ರವಾಗಿ ಕಂಡಿರುವುದು ಸಹಜವೆನಿಸಿ, ಮತ್ತೆ ಮತ್ತೆ ದೃಢೀಕರಣಗೊಂಡಂತಾಗಿದೆ. ಅಂಬೇಡ್ಕರ್, ಪಟೇಲ್, ಬೋಸ್-ಇವರಿಗೆ ಮುಖ್ಯವಾಗಿ ಗಾಂಧೀಜಿಯನ್ನು ಪ್ರಬಲ ಎದುರಾಳಿಯಾಗಿಸಲಾಗಿದೆ. (ನೆಹರು, ಜಿನ್ನಾ, ಟಾಗೂರ್, ವಿಶ್ವೇಶ್ವರಯ್ಯ ಮೊದಲಾದವರೊಂದಿಗೆ ಗಾಂಧೀಜಿಗಿದ್ದ ಭಿನ್ನಾಭಿಪ್ರಾಯಗಳನ್ನು ದುದ್ದೇಶಪೂರ್ವಕವಾಗಿಯೇ ಮರೆಮಾಚಲಾಗುತ್ತಿದೆ, ಅಗತ್ಯಬಿದ್ದರೆ ಈ ಭಿನ್ನಾಭಿಪ್ರಾಯಗಳನ್ನು ವಿರೋಧದ ನೆಲೆಯಲ್ಲಿ ವ್ಯಾಖ್ಯಾನಿಸಿ, ಹಾಗೇ ಕೇಳಿಸಬಹುದು) ಇತರರೊಂದಿಗೆ ಇರುವಂತಹದ್ದೇ ಭಿನ್ನಾಭಿಪ್ರಾಗಳು ಅಂಬೇಡ್ಕರ್, ಪಟೇಲ್, ಬೋಸ್ ಅವರೊಂದಿಗೂ ಇತ್ತು. ಆದರೆ, ಈ ಮೂವರನ್ನು ಆಯ್ದುಕೊಂಡು ಗಾಂಧೀ ಜೊತೆಯಲ್ಲಿದ್ದ ಭಿನ್ನಾಭಿಪ್ರಾಯಗಳನ್ನು ವೈರತ್ವದ ನೆಲೆಯಲ್ಲಿ ಯಾಕೆ ಕಟ್ಟಿಕೊಡಲಾಗುತ್ತಿದೆ? ಯಾರು ಕಟ್ಟಿಕೊಡುತ್ತಿದ್ದಾರೆ ಎಂಬುದನ್ನು ಬಾಯ್ಬಿಟ್ಟು ಹೇಳಬೇಕಿಲ್ಲ.

ಗಾಂಧೀ-ಅಂಬೇಡ್ಕರ್ ಅವರನ್ನು ಪೂನಾ ಒಪ್ಪಂದದಲ್ಲೇ ಸ್ಥಗಿತಗೊಳಿಸಿಕೊಂಡು ಗಾಂಧೀಜಿ ‘ತಳವರ್ಗದ ದ್ರೋಹಿ’ ಎಂದು ಕೇಳಿಸಲಾಗುತ್ತಿದೆ. ಆ ಘಟನೆಯ ತರುವಾಯ ಗಾಂಧೀ ನಿಲುವು ಹೇಗೆಲ್ಲಾ ಬದಲಾಯಿತು ಎಂಬುದನ್ನು ಏಕೆ ಯುವಜನತೆಗೆ ಕೇಳಿಸುತ್ತಿಲ್ಲ? ಜಾತಿವಿನಾಶಕ್ಕೆ ಗಾಂಧಿಯ ಪ್ರಯತ್ನವನ್ನೇ ಗೌಣಗೊಳಿಸುವ ರಾಜಕಾರಣ ಯಾವ ತರಹದ್ದು ಮತ್ತು ಯಾರದು? ಇದರ ಫಲವಾಗಿ ಮುಖ್ಯವಾಗಿ ತಳವರ್ಗದ ಯುವಜನತೆಗೆ ಗಾಂಧೀ ವಿಚಾರಧಾರೆಯ ದ್ವೇಷವನ್ನು ತುಂಬುತ್ತಿರುವುದನ್ನು ಕಾಣುತ್ತಿದ್ದೇವೆ. ಒಂದೇ ನೆಲದ ಮಾಮರ ಮತ್ತು ಬೇವಿನ ಮರಗಳು ತಮ್ಮ ಎಲೆಯನ್ನು ಉದುರಿಸಿಕೊಂಡು ಆ ಉದುರಿದ ಎಲೆಗಳು ಗಾಳಿಗೋ ಮಳೆಗೋ ಒಂದರ ಎಲೆಗಳು ಮತ್ತೊಂದರ ಬುಡಕ್ಕೆ ಬಿದ್ದು ಗೊಬ್ಬರವಾದಂತೆ ಪರಸ್ಪರ ಗಾಂಧೀ-ಅಂಬೇಡ್ಕರ್ ಪ್ರಭಾವಿತರಾದರು. ಮೇಲ್ನೋಟಕ್ಕೆ ವಿರೋಧದ ನೆಲೆ ಎನ್ನಿಸಿದ್ದರೂ ಇಬ್ಬರು ಪೂರಕವಾಗಿ ದುಡಿದಿರುವುದನ್ನು ಮುಚ್ಚಿಟ್ಟು ಯುವಜನತೆಯ ಎದೆಗೆ ಗಾಂಧೀ ದ್ವೇಷವನ್ನು ಹಿಂಡಿ, ಕೇಳಿಸುತ್ತಿರುವುದೇಕೆ?

ಗಾಂಧೀಜಿಗೆ ಬೋಸ್ ಮತ್ತು ಪಟೇಲ್ ಅವರನ್ನು ಎದುರಾಳಿಯಾಗಿಸುವಲ್ಲಿ ಅಪ್ಪಟ ರಾಜಕಾರಣವಿದೆ. ಬೋಸ್ ಮತ್ತು ಪಟೇಲ್ ಅವರನ್ನು ನೆಹರು ವಿರೋಧಿಗಳೆಂದು ಸಹ ಬಿಂಬಿಸಿ, ಆ ಮೂಲಕ ನೆಹರು ಮತ್ತು ಗಾಂಧೀಜಿಯವರನ್ನು ಒಂದುಗೂಡಿಸಿ, ಕಾಂಗ್ರೇಸ್ ವಿರೋಧಿ ಸಂಕಥನವನ್ನು ಹೆಣೆದಿರುವುದು ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ. ಗಾಂಧೀಜಿ ಮತ್ತು ಪಟೇಲ್‌ ನಡುವೆ ಅಣ್ಣ-ತಮ್ಮನ ಪ್ರೀತಿ ನಿಷ್ಠೆಯನ್ನು ಕಡೆಗಣಿಸುತ್ತಾ ಹಾಗೂ ತಿರುಚಿ, ಪಟೇಲರಿಗೆ ಅಧಿಕಾರ ವಂಚನೆಯನ್ನು ಮಾಡಿರುವ, ಆ ಮೂಲಕ ದೇಶವನ್ನು ಬಲಿಷ್ಠವಾಗಿ ಕಟ್ಟುವ ಅವಕಾಶವನ್ನು ಅವರಿಗೆ ಗಾಂಧಿಯೇ ಕೈತಪ್ಪಿಸಿದ್ದರ ಬಗ್ಗೆ ಕೇಳಿಸಲಾಗುತ್ತಿದೆ. ವ್ಯಾಧಿಗ್ರಸ್ಥರಾಗಿ ಜರ್ಜರಿತರಾಗಿದ್ದ ಪಟೇಲ್ ಅವರ ಶಾರೀರಿಕ ಅವಸ್ಥೆಯನ್ನು ಕೇಳಿಸದೆ, ಬದಲು ‘ಉಕ್ಕಿನ ಮನುಷ್ಯ’ನನ್ನೇ ಕೇಳಿಸುತ್ತಿರುವುದೇಕೆ?

ಗಾಂಧೀಜಿಯವರೊಂದಿಗೆ ಹೆಚ್ಚು ಭಿನ್ನಾಭಿಪ್ರಾಯವಿದ್ದಿದ್ದು ಬೋಸ್ ಬಗ್ಗೆ ಅನ್ನುವುದು ನಿಜ. ಈ ಭಿನ್ನಾಭಿಪ್ರಾಯಕ್ಕೆ ಗಾಂಧೀಜಿ ಮತ್ತು ಬೋಸ್ ಅವರ ಸೈದ್ಧಾಂತಿಕ ಧೋರಣೆಗಳು ಕಾರಣ. ಆದ್ದರಿಂದ ಅವರಿಬ್ಬರ ಹೋರಾಟದ ಹಾದಿಗಳು ತದ್ವಿರುದ್ಧವಾಗಿದ್ದವು. ಹಾಗೆಂದು ಇವರಿಬ್ಬರ ನಡುವೆ ವೈರವಿತ್ತೆಂಬ ಹೇಳುವುದಕ್ಕೆ ಚಾರಿತ್ರಿಕ ಸಂಗತಿಗಳು ಯಾವುವು? ಎಲ್ಲಿವೆ? ಬೋಸ್ ನಂತಹ ಸ್ವಾತಂತ್ರ್ಯ ಪ್ರೇಮಿಯನ್ನು ಗಾಂಧೀ ದ್ವೇಷಿಸಿದ್ದರೆಂಬ ಸುಳ್ಳು ಕಥನವನ್ನು ಯುವಜನತೆಗೆ ಕೇಳಿಸುತ್ತಲೇ ಬರಲಾಗಿದೆ. ಹಾಗೊಂದು ವೇಳೆ ಬೋಸ್ ಗಾಂಧೀಜಿಯವರಿಂದ ದ್ವೇಷಕ್ಕೆ ಗುರಿಯಾಗಿದ್ದರೆ, ದೇಶದ ಹೊರಗೆ ನಿಂತು ಹೋರಾಟ ಕಟ್ಟುವ ಸಂದರ್ಭದಲ್ಲಿ, ಗಾಂಧೀಜಿಯನ್ನು ಕುರಿತು ರೇಡಿಯೋ ಭಾಷಣ ಮಾಡುತ್ತಾ, ಅವರನ್ನು ಇದೇ ಬೋಸ್ ಅವರು ‘ರಾಷ್ಟ್ರಪಿತ’ ಎಂದು ಅಪಾರ ಗೌರವದಿಂದ ಏಕೆ ಸಂಬೋಧಿಸುತ್ತಿದ್ದರು? ಬೋಸ್ ಅವರೇ ಗಾಂಧೀಜಿಯನ್ನು ‘ರಾಷ್ಟ್ರಪಿತ’ ಎಂದು ಕರೆದಿದ್ದನ್ನು ಯುವಜನತೆಯ ಕಿವಿಗೆ ಕೇಳಿಸದಿರುವ ಉದ್ದೇಶವೇನು? ಹಾಗೇ ಕೇಳಿಸದಿರುವುದು ಗಾಂಧೀ ನಂಜನ್ನು ಹರಡುವುದಕ್ಕೆ ಸಾಧ್ಯವಿಲ್ಲವೆನ್ನುವುದೆ?

ಇವಲ್ಲದೇ, ಗಾಂಧೀಜಿಯವರನ್ನು ಮುಸ್ಲಿಂ ಪರ, ಪಾಕಿಸ್ತಾನದ ಪರ, ಆಧುನಿಕತೆಯನ್ನು ಒಪ್ಪಿಕೊಳ್ಳದ ಸಂಪ್ರದಾಯಶೀಲ, ಸನಾತನಿ ಎಂಬ ಜಾಡ್ಯ, ಗಂಡುವಾದಿ-ಹೀಗೆ ಇನ್ನಿತರ ವಿರೂಪಗಳೊಂದಿಗೆ ಯುವಜನತೆಗೆ ಪದೇ ಪದೇ ಕೇಳಿಸಲಾಗುತ್ತಿದೆ. ಗಾಂಧೀಜಿ ಏಕಕಾಲಕ್ಕೆ ಮುಸ್ಲಿಂ ಪರವಾಗಿದ್ದು, ಸನಾತನಿ ಹೇಗಾದರೂ ಎಂಬ ಒಂದು ಸರಳ ಪ್ರಶ್ನೆಯು ಕೇಳಿಸುವವರಿಗೆ ಕೇಳುವವರಿಗೆ ಹುಟ್ಟಿಕೊಳ್ಳದಿರುವುದು ವ್ಯಂಗ್ಯ ಮತ್ತು ವಿಷಾದನೀಯ. ಆಧುನಿಕತೆಯನ್ನು ಒಪ್ಪಿಕೊಳ್ಳದ ಗಾಂಧೀಜಿಯೇ ಇವತ್ತಿನ ಅನೇಕ ತರಹದ ಸಮಸ್ಯೆಗಳಿಗೆ ಮದ್ದು ಆಗಬಲ್ಲರೆಂಬ ವಾಸ್ತವವನ್ನು ಯುವಜನತೆಗೆ ಅರಿವು ಮಾಡಿಕೊಡಬೇಕಾದ ತುರ್ತಿದೆ. ಅದರ ಬಗ್ಗೆ ಏನನ್ನೂ ಕೇಳಿಸದೆ ಗರಹೊಡೆದ ಮೂಕತೆಯಿದೆ. ಹಾಗೆಯೇ, ದೇಶ ಒಡೆದಿದ್ದೆ ಗಾಂಧೀ ಎಂಬದನ್ನು ಯುವಜನತೆಗೆ ಹೆಚ್ಚು ಹೆಚ್ಚು ಕೇಳಿಸಿದ್ದಾರೆ. ಇದರಲ್ಲಿ ಎಳ್ಳಷ್ಟು ಉರುಳಿಲ್ಲವೆಂಬುದು ಗೊತ್ತಿದ್ದರೂ ಮತ್ತೆ ಮತ್ತೆ ಯುವಜನತೆಗೆ ಹಾಗೇ ಕೇಳಿಸಲಾಗುತ್ತಿದೆ. ಈ ಮೂಲಕ ಗಾಂಧೀಜಿಯ ‘ರಾಷ್ಟ್ರದ್ರೋಹಿ’ ಚಿತ್ರವನ್ನು ಯುವಜನತೆಯ ಎದುರು ಕಟ್ಟಿ ನಿಲ್ಲಿಸಲಾಗಿದೆ. ಹೆಣ್ಣು ಮಕ್ಕಳಿಗೂ ಗಾಂಧೀ ಒಬ್ಬ ಗಂಡು ದರ್ಪದ ಮನುಷ್ಯನೆಂದು ಕೇಳಿಸಲಾಗಿದೆ. ಕಸ್ತೂರಬಾ ಅವರನ್ನು ಗಾಂಧೀ ಹಿಂಸಿಸುತ್ತಿದ್ದರೆಂದು ಕೇಳಿಸಿ, ಅವರಿಗೂ ಗಾಂಧೀ ದ್ವೇಷವನ್ನು ತುಂಬಲಾಗಿದೆ. ಗಾಂಧೀಜಿ, ಕಸ್ತೂರಬಾ ಅವರಿಂದ ಹೇಗೆಲ್ಲಾ ಹೋರಾಟದ ಪಟ್ಟುಗಳನ್ನು ಕಲಿತರೆಂಬುದನ್ನು ಅವರೇ ಹೇಳಿಕೊಂಡಿದ್ದನ್ನು ಕೇಳಿಸುತ್ತಿಲ್ಲ. ‘ಗಂಡುದರ್ಪ’ದವನೆಂದು ನಂಬಿಸಿರುವ ಗಾಂಧೀಜಿ ಒಬ್ಬ ‘ಮಹಾಹೆಣ್ಣಿಗ’ ಎಂಬುದನ್ನು ಮರೆಮಾಚು ಮಾಡಲಾಗಿದೆ.

ಹೀಗೆ ‘ಕೇಳಿಸಿದ ಗಾಂಧೀ’ಯಲ್ಲಿ ಗಾಂಧೀಜಿಯವರನ್ನು ಅನೇಕ ರೀತಿಯಲ್ಲಿ ವಿರೂಪಗೊಳಿಸಿ, ಋಣಾತ್ಮಕವಾಗಿ ಯುವಜನತೆಗೆ ಕೇಳಿಸಿರುವುದು ಮತ್ತು ಕೇಳಿಸುತ್ತಿರುವುದು ಅವ್ಯಾಹತವಾಗಿ ನಿರ್ಲಜ್ಜವಾಗಿ ಮುಂದುವರೆದಿದೆ. ಈ ಮೌಖಿಕ ನೆಲೆಯ ಗಾಂಧೀ ವಿರೋಧಿ ಸಂಕಥನವು ಸುಲಭದಲ್ಲಿ ಯುವಜನತೆಗೆ ‘ದೊರಕುತ್ತಿದೆ’. ಗಾಂಧೀಯ ಈ ವಿರೂಪ ಕಥನದಿಂದ ಗಾಂಧೀಜಿಯನ್ನು ಬದುಕು ಹಾಗೂ ಅವರ ಚಿಂತನೆಗಳಿಂದ ಯುವಜನತೆಯನ್ನು ದೂರ ಮಾಡಲಾಗುತ್ತಿದೆ. ಈ ಮೂಲಕ ಗಾಂಧೀಜಿಯವರ ಮೌಲಿಕ ಚಿಂತನೆಯಿಂದ ಯುವಜನತೆ ಪಡೆಯಬಹುದಾದ ಚೈತನ್ಯವನ್ನು ತಪ್ಪಿಸಲಾಗಿದೆ ಹಾಗೂ ಅನೇಕ ಅನಿಷ್ಟಗಳು ಜೀವಂತವಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ. ಯುವಜನತೆಯು ಕೂಡ ‘ಕೇಳಿಸಿದ ಗಾಂಧೀ’ಯನ್ನು ನಂಬುಗೆಯಲ್ಲಿ ಸ್ವೀಕರಿಸುತ್ತದೆ ಹೊರತು, ಪ್ರಶ್ನಿಸುವ, ಮರುಪರಿಶೀಲಿಸುವ ಕುತೂಹಲವಾಗಲಿ, ಅಧ್ಯಯನಶೀಲತೆಯಾಗಲಿ, ವ್ಯವಧಾನವಾಗಲಿ ಕನಿಷ್ಠ ಪ್ರಮಾಣದಲ್ಲೂ ತೋರದಿರುವುದು ಶೈಕ್ಷಣಿಕ ಬರಡುತನವನ್ನೇ ಎತ್ತಿ ತೋರುತ್ತಿದೆ.

ಓದಿಸಿದ ಗಾಂಧೀ: ಶಾಲಾ-ಕಾಲೇಜಿನಲ್ಲಿ ‘ಓದಿಸಿದ ಗಾಂಧೀ’ ಕಥನ ಕೇಡಿಗತನದ್ದಲ್ಲ ಎಂಬುದು ನಿಜವಾದರೂ ಯುವಜನತೆಯನ್ನು ಗಾಂಧೀಜಿಯವರ ಬದುಕು-ಚಿಂತನೆಗಳಿಗೆ ಆಕರ್ಷಿಸುವಂತಹದ್ದು ಆಗಿರುವುದಿಲ್ಲ. ಬದಲು ಪಠ್ಯವು ಯಾವುದೇ ವ್ಯಕ್ತಿಯ ಜೀವನದ ಸ್ಥೂಲ ವಿವರಗಳನ್ನು ಹೊಂದಿರುವಂತಯೇ ಗಾಂಧೀಜಿ ಬಗ್ಗೆಯೂ ಇರುತ್ತದೆ. ಎಲ್ಲ ರೀತಿಯ ಓದುಗಳು ಕೂಡ ಅಂಕದ ಪರಿಧಿಯಲ್ಲಿ ಅವಸಾನ ಹೊಂದುವಂತೆ, ಗಾಂಧೀಜಿಯ ಬದುಕು-ಚಿಂತನೆಗಳು ಪರೀಕ್ಷೆಗೆ ಮಾರ್ಕ್ಸ್‌ಗೆ ಸೀಮಿತಗೊಂಡಿವೆ. ಗಾಂಧೀಜಿ ಚಿಂತನೆಯನ್ನು ವರ್ತಮಾನೀಕರಿಸಿ ಪರಿಣಾಮಕಾರಿಯಾಗಿ ಯುವಜನತೆಗೆ ತಲುಪಿಸುವ ಶೈಕ್ಷಣಿಕ ಹೊಣೆಗಾರಿಕೆ ವಿಫಲವಾಗಿದೆ. ಶಾಲಾ-ಕಾಲೇಜಿನ ದಿನಗಳಿಂದಲೂ ಗಾಂಧೀಜಿ ಚಿಂತನೆಯ ಅಗತ್ಯವನ್ನು ಯುವಜನತೆಗೆ ಮನದಟ್ಟು ಮಾಡಿಸದಿರುವುದು ಸಮಸ್ಯಾತ್ಮಕವಾದುದ್ದು. ಕಲಿಸುವವರ ಬೇಜವಬ್ದಾರಿತನವೂ ಗಾಂಧೀ ಅನಾದರತೆಯೂ ಯುವಜನತೆ ಗಾಂಧೀಜಿಯ ಬಗ್ಗೆ ನಕಾರಾತ್ಮಕ ಮನೋಭಾವನೆ ಹೊಂದಲು ಪೂರಕ ಕಾರಣವಾಗಿದೆ. ಆದ್ದರಿಂದ ‘ಓದಿಸಿದ ಗಾಂಧೀ’ಯು ‘ಕೇಳಿಸಿದ ಗಾಂಧೀ’ಯ ವಿರೂಪವನ್ನು ತೊಡೆಯುವ ಯಾವ ಕೆಲಸವನ್ನು ಮಾಡುವುದಿಲ್ಲ. ಅಥವ ‘ಕೇಳಿಸಿದ ಗಾಂಧೀ’ಯೊಂದಿಗೆ ‘ಓದಿಸಿದ ಗಾಂಧೀ’ಯನ್ನು ಮುಖಾಮುಖಿಯಾಗಿಸಲು ಶಕ್ಯವಾಗುತ್ತಿಲ್ಲ. ಬದಲು ‘ಕೇಳಿಸಿದ ಗಾಂಧೀ’ಯಲ್ಲಿನ ಋಣಾತ್ಮಕ ಇಮೇಜಿನ ಗಾಂಧೀ ಯುವಜನತೆಯ ಮನಸ್ಸಿನಲ್ಲಿ ಆತಂಕಕಾರಿಯಾಗಿ ಬಲಿಯುತ್ತಿದೆ.

ನಂಬಿಸಿದ ಗಾಂಧೀ: ಗಾಂಧೀಜಿ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದ ಗಾಂಧೀವಾದಿಗಳಿಂದಲೇ ಯುವಜನತೆಗೆ ಈ ಕತೆಯನ್ನು ಹೇಳಿ, ನಂಬಿಸಲಾಗಿದೆ. ‘ನಂಬಿಸಿದ ಗಾಂಧೀ’ ಕತೆ ಈ ರೀತಿಯಿದೆ: ಗಾಂಧೀಜಿಯನ್ನು ಸುಲಭವಾಗಿ ಅರ್ಥೈಸಿಕೊಳ್ಳಲಾಗದು. ಗಾಂಧೀಜಿಯನ್ನು ಅರ್ಥೈಸಿಕೊಳ್ಳುವುದು ಅಂದರೆ, ಆನೆಯನ್ನು ಕುರುಡರು ಮುಟ್ಟಿ ಅರ್ಥೈಸಿಕೊಂಡಂತೆ ಎಂಬ ‘ಆನೆ-ಕುರುಡರ’ ಕಥನವನ್ನು ಕಟ್ಟಲಾಗಿದೆ. ಹೀಗೆ ಗಾಂಧೀಜಿಯವರನ್ನು ಎಲ್ಲರಿಂದ ದೂರ ತಳ್ಳಿದಂತೆ ಯುವಜನತೆಯಿಂದಲೂ ದೂರವಾಗಿಸಲಾಗಿದೆ. ಇದೊಂದು ರೀತಿಯಲ್ಲಿ ಗಾಂಧೀಜಿಯವರನ್ನು ವೈಭವಿಕರಿಸಿದ ಕಥನ. ‘ಆನೆ-ಕುರುಡರ’ ಕತೆ ಗಾಂಧೀಜಿಯವರನ್ನು ಅಸಾಮಾನ್ಯತೆಯಲ್ಲಿ ಪ್ರತಿಷ್ಠಾಪಿಸಿದರೆ, ಜನರನ್ನು ಅದರಲ್ಲೂ ಯುವಜನರನ್ನು ಅಸಾಹಯಕತೆಯ ನೆಲೆಯಲ್ಲಿರಿಸಲಾಗಿದೆ. ಎಂದೂ ಸಾಧ್ಯವಾಗದ ವ್ಯರ್ಥ ಸಾಹಸವೆಂಬಂತೆ ಈ ಕಥನವನ್ನು ಮತ್ತೆ ಮತ್ತೆ ಯುವಜನತೆಯ ಮುಂದಿಡಲಾಗಿದೆ. ಇದನ್ನು ಕೇಳಿದ ಯುವ ಸಮುದಾಯವು ಅರ್ಥೈಸಿಕೊಳ್ಳಲಾಗದ ಈ ಗಾಂಧೀ ಕಥನವನ್ನು ತಮಗೆ ನಿಲುಕದೆಂದು ಬಲವಾಗಿ ನಂಬಿಕೊಂಡಿದಂತೆ ಕಾಣುತ್ತದೆ. ಗಾಂಧೀಜಿಯ ಅಗಾಧ ವ್ಯಕ್ತಿತ್ವವನ್ನು ದೈತ್ಯಪ್ರಾಣಿಯಾದ ಆನೆಗೆ ಹೋಲಿಸಿರುವುದು ಉಚಿತವಾದುದ್ದಾದರೂ ಅವರನ್ನು ಅರ್ಥೈಸಿಕೊಳ್ಳುವವರನ್ನು ಕುರುಡರಿಗೆ ಹೋಲಿಸಿದ್ದು ಸರಿಯೇ? ಕುರುಡತನದ ಆರೋಪವೂ ನಕಾರಾತ್ಮಕವಾದುದ್ದೇ. ಇಂತಹ ಋಣಾತ್ಮಕ ಭಾವನೆಯನ್ನು ಹೇರಿರುವುದು ಯಾವ ದುಷ್ಟತನಕ್ಕೂ ಕಮ್ಮಿಯಿಲ್ಲ.

ಇದೇ ರೀತಿಯದು ಹೆಸರಾಂತ ವಿಜ್ಞಾನಿಯಾದ ಐನ್‍ಸ್ಟೈನ್ ಅವರು ಗಾಂಧೀಜಿ ಬಗ್ಗೆ ಹೇಳಿದ್ದಾರೆ ಎನ್ನುವ ಉಲ್ಲೇಖವೂ ಕೂಡ ಮತ್ತೆ ಮತ್ತೆ ಕೇಳಿಸಿ, ನಂಬಿಸಲಾಗಿದೆ. ಐನ್‍ಸ್ಟೈನ್ ಅವರು ಗಾಂಧೀಜಿಯವರ ವ್ಯಕ್ತಿತ್ವವನ್ನು ಕಂಡು ಸಹಜವಾಗಿ ಉದ್ಗಾರ ಮಾಡಿದ್ದನ್ನು ಸಂದರ್ಭ ಒದಗಿದಾಗೆಲ್ಲ ಪದೇ ಪದೇ ಯಾರೆಲ್ಲಾ ಉಲ್ಲೇಖಿಸುತ್ತಿರುತ್ತಾರೆ. ಆ ಉಲ್ಲೇಖ: “ರಕ್ತ ಮಾಂಸಗಳು ತುಂಬಿದ ಇಂಥಹ ಒಬ್ಬ ಮನುಷ್ಯ ಈ ಲೋಕದಲ್ಲಿ ನಡೆದಾಡಿದ್ದ ಎಂದರೆ ಮುಂಬರುವ ಜನಾಂಗಗಳು ಅಚ್ಚರಿ ಪಡುತ್ತವೆ” ಎನ್ನುವುದು. ಯುವಜನತೆ ಗಾಂಧೀಜಿಯವರ ಬಗ್ಗೆ ಕೇಳಿ, ಓದಿ ಎಲ್ಲೂ ಅಚ್ಚರಿಪಟ್ಟಂತೆ ಕಾಣದು. ಆಶ್ಚರ್ಯಕ್ಕೆ ಆಸ್ಪದವಿಲ್ಲವೆಂಬಂತೆ ಯುವಜನತೆ ಆ ಭವ್ಯತ್ವಕ್ಕೆ ಅಷ್ಟೇ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ. ಏಕೆಂದರೆ, ಐನ್‍ಸ್ಟೈನ್ ಹೇಳಿಕೆಯು ಒಂದು ರೀತಿಯಲ್ಲಿ ಆನೆ-ಕುರುಡರ ಕಥನಕ್ಕೆ ಸಮೀಪವಾದುದ್ದು. ಅಸಾಧ್ಯತೆಯ ವಿಸ್ಮಯವೇ ಈ ಹೇಳಿಕೆಯಲ್ಲಿ ಹೆಪ್ಪುಗಟ್ಟಿದೆ. ತನಗೆ ಸಾಧ್ಯವಾಗದೆಂಬ ನೆಲೆಯಲ್ಲಿ ಯುವಜನತೆ ಗಾಂಧೀಜಿ ಮತ್ತು ಅವರ ಚಿಂತನೆಗೆ ಬೆನ್ನುಕೊಟ್ಟಿದೆ ಎನ್ನಿಸುತ್ತಿದೆ.

ಮೇಲಿನ ಎರಡು ಕಥನಗಳು ಗಾಂಧೀಜಿಯವರನ್ನು ಮೂಲತಃ ಒಪ್ಪಿಕೊಂಡ ನೆಲೆಯವು. ಆದರೆ, ಅವುಗಳು ನಕರಾತ್ಮಕವಾಗಿ ಧ್ವನಿಸುತ್ತಿರುವುದು ಅಷ್ಟೇ ವಾಸ್ತವಾದುದ್ದು. ಗಾಂಧೀಜಿಯವರ ಬದುಕು ಮತ್ತು ಚಿಂತನೆಯನ್ನು ಸಾಧ್ಯವಾದಷ್ಟು ಸಾಮಾನ್ಯೀಕರಿಸಿ ಯುವಜನತೆಯ ಎದುರು ಮಂಡಿಸಬೇಕು. ತಮಗೂ ಸಾಧ್ಯವೆಂದು ಎನ್ನಿಸುವಂತೆ ಯುವಜನತೆಯ ಮನಸ್ಸಿಗೆ ನಾಟಿಸಬೇಕಿದೆ. ಅನ್ನ ತಿಂದು ಸಾಧಿಸಿದ ಮನುಷ್ಯನನ್ನು ಅನ್ನ ತಿನ್ನುವ ಇನ್ನೊಬ್ಬ/ಇನ್ನೊಬ್ಬಾಕೆ ಅರ್ಥೈಸಿಕೊಳ್ಳವುದಕ್ಕೆ ಸಾಧ್ಯ ಎನ್ನುವ ಸಾಧ್ಯತನದ ಬಾಗಿಲನ್ನು ಎಷ್ಟೇ ಚಿಕ್ಕದಾಗಿದ್ದರೂ ತೆರೆಯಲೇ ಬೇಕು. ಹೀಗೆ ಬುದ್ಧಿಪೂರ್ವಕವಾಗಿ ಗಾಂಧೀಜಿಯವರನ್ನು ಅವರ ಚಿಂತನೆಗಳನ್ನು ಯುವಜನತೆಯ ಎದುರು ಹೇಳುವಾಗ ಎಚ್ಚರದಿಂದಿರುವುದು ಅಗತ್ಯವೆನ್ನಿಸುತ್ತದೆ. ಇಲ್ಲವಾದರೆ, ಗಾಂಧೀಜಿಯವರನ್ನು ಮೌಲಿಕರಿಸುವವರೇ ಇನ್ನೊಂದು ತರಹದಲ್ಲಿ ಯುಜನತೆಯ ನೆಲೆಯಿಂದ ನಕಾರಾತ್ಮಕವಾಗಿಸಿ ಅಪಮೌಲ್ಯಗೊಳಿಸಿದಂತೆ ಆಗುತ್ತದೆ.

ಅರ್ಥೈಸಿಕೊಳ್ಳಬೇಕಾದ/ ಅಗತ್ಯವಾಗಿಸಿಕೊಳ್ಳಬೇಕಾದ ಗಾಂಧೀ: ಇವತ್ತಿನ ದಿನಮಾನಗಳಲ್ಲಿ ಯುವಜನತೆ ಗಾಂಧೀಜಿಯನ್ನು ಯಾಕೆ ಅರ್ಥೈಸಿಕೊಳ್ಳಬೇಕು ಅಥವ ಅಗತ್ಯವಾಗಿಸಿಕೊಳ್ಳಬೇಕು ಎಂಬುದನ್ನು ಯುವಜನತೆಯ ನೆಲೆಯಲ್ಲಿಯೇ ಕೇಳಿಕೊಳ್ಳಬೇಕಾದ ಬಹಳ ಮುಖ್ಯವಾದ ಪ್ರಶ್ನೆಯಾಗಿದೆ. ವೈಯಕ್ತಿಕ ನೆಲೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯಿಂದ ಆತನ/ಆಕೆಯ ಕುಟುಂಬ, ಊರು ಮತ್ತು ಸಮಾಜವು ಏನನ್ನು ನಿರೀಕ್ಷಿಸುತ್ತದೆಯೆಂದರೆ, ಅವನ/ಅವಳ ಒಳಿತನ್ನಷ್ಟೇ ಅನ್ನಿಸುತ್ತದೆ. ಅರ್ಥಾತ್ ವ್ಯಕ್ತಿಯ ನೈತಿಕತೆಯನ್ನು ಅಪೇಕ್ಷಿಸಲಾಗುತ್ತದೆ. ಇದನ್ನು ಶಾಲಾ-ಕಾಲೇಜಿನಲ್ಲಿಯೂ ಬಯಸಲಾಗುತ್ತಿದೆ. ಒಂದರ್ಥದಲ್ಲಿ ಶಿಕ್ಷಣದ ಸಾರವೂ ನೈತಿಕ ವ್ಯಕ್ತಿತ್ವದ ನಿರ್ಮಾಣವೇ ಆಗಿರುವುದು ಸಾಮಾನ್ಯ ಅಜೆಂಡವೇ ಆಗಿದೆ. ಹಾಗಾಗಿ ಪ್ರತಿಯೊಬ್ಬರು ವೈಯಕ್ತಿಕವಾಗಿ ಸರಿಯಾದ ಹಾದಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದರೆ, ಅವರಿಗೆ ಗೊತ್ತೊ, ಗೊತ್ತಿಲ್ಲದೆಯೋ ಗಾಂಧೀ ಮಾರ್ಗದಲ್ಲೇ ಇದ್ದಾರೆ ಎಂದರ್ಥ. ಇನ್ನು ಗಾಂಧೀಜಿಯವರ ಚಿಂತನೆಗಳನ್ನು ಅಭ್ಯಾಸ ಮಾಡುವುದು ನೈತಿಕ ದಾರಿಯಲ್ಲಿ ಸಾಗುವಾಗ ಆಗುವ ಅನೇಕ ಅವಘಡಗಳನ್ನು ಎದುರಿಸಲು ಬೇಕಾದ ಚೈತನ್ಯವನ್ನು ಪಡೆಯಲು. ಅಂದರೆ, ಇಂತಹ ನೈತಿಕ ದಾರಿಯಲ್ಲಿ ಗಾಂಧೀ ಬದುಕು ಮತ್ತು ಅವರ ಚಿಂತನೆಗಳು ಬೀದಿ ಕಣ್ಣುಗಳೇ. ನೈತಿಕತೆಯ ಸಡಿಲತೆಯೇ ಎಲ್ಲ ಸಮಸ್ಯೆಗಳ ತಾಯಿ ಬೇರು. ಅದರಲ್ಲೂ ಯುವಜನತೆಯಲ್ಲಿ ನೈತಿಕ ಸಂವೇದನಾಶೀಲತೆಯು ಅಪಾಯಕಾರಿ ಎನ್ನಿಸುವಷ್ಟು ದುರ್ಬಲವಾಗುತ್ತಿದೆ. ಈ ಹೊತ್ತಿನಲ್ಲಿ ಯುವಜನತೆಗೆ ಗಾಂಧೀಜಿಯವರ ಚಿಂತನೆಗಳ ಅಗತ್ಯವು ಅತ್ಯವಶ್ಯಕವಾಗಿದೆ.

ಗಾಂಧೀಜಿಯವರ ಚಿಂತನೆ ವೈಯಕ್ತಿಕ ನೈತಿಕತೆಯ ಸ್ಫೂರ್ತಿಗೆ ಹೇಗೆ ಮುಖ್ಯವೋ ಹಾಗೆಯೆ ಸಮುದಾಯ ಸಮಸ್ಯೆಗಳ ನಿವಾರಣೆಗೂ ಅಷ್ಟೇ ಅವಶ್ಯಕವೆನ್ನುಸುತ್ತಿದೆ. ಇವತ್ತಿನ ಎಲ್ಲ ಸಮಸ್ಯೆಗಳಿಗೆ ಗಾಂಧೀಜಿಯವರ ಬಳಿ ಉತ್ತರವಿರುತ್ತದೆ ಎಂಬುದು ಅತ್ಯಂತ ಕ್ಲೀಶೆಯಾದ ಮಾತು. ಆದಾಗ್ಯೂ ಅನೇಕ ತರಹದ ಸಮಸ್ಯೆಗಳ ಸಂಕಟದ ಕಣ್ಣೀರಿನೊಳಗೆ ಬೇರಲ್ಲರಿಗಿಂತ ಗಾಂಧೀ ಕಾಣುವುದು ಸುಳ್ಳಲ್ಲವಲ್ಲ. ಮತಾಂಧತೆ, ಕೋಮುವಾದ, ಉಗ್ರ ರಾಷ್ಟ್ರೀಯವಾದ, ಅಪ್ರಜಾತಾಂತ್ರಿಕ ನಿಲುವು, ಮಾತೃಭಾಷಾ ಸಮಸ್ಯೆ, ಪ್ರಭುತ್ವದ ಅಭಿವೃದ್ಧಿಯ ಹಿಂಸಾವಾದ, ವಿಪರೀತ ಯಂತ್ರಗಳ ಅಧೀನತೆ, ಜಾತಿವಾದ, ಲಿಂಗವಾದ, ಅಭಿವೃದ್ಧಿ ಪ್ರಣೀತ ನೈಸರ್ಗಿಕ ದಾಂಧಲೆ, ನಗರ ನಿರ್ಮಾಣದ ವ್ಯಸನ, ಹಣಕೇಂದ್ರಿತ ಬದುಕಿನ ಶುಷ್ಕತೆ ಮತ್ತು ಅಮಾನವೀಯತೆ- ಒಂದೇ ಎರಡೇ ಉರಿಯುವ ಅನೇಕ ಸಮಸ್ಯೆಗಳು ಪ್ರತಿದಿನ ಎಲ್ಲಿ ಇರುತ್ತವೆ ಅಲ್ಲೆಲ್ಲ ಗಾಂಧೀಜಿ ಚಿಂತನೆಯ ಹಾಜರಿಯನ್ನು ಕಂಡು ಕಣ್ಮುಚ್ಚುವುದು ಹೇಗೆ? ಸಮಸ್ಯೆಗಳ ಜೊತೆ ಗಾಂಧೀ ಹೆಸರು ಮತ್ತು ಅವರ ಚಿಂತನೆಗಳು ಒಟ್ಟೊಟ್ಟಿಗೆ ಕೇಳಿಸುವಾಗ ಕಾಣಿಸುವಾಗ ಯುವಜನತೆ ತಮ್ಮ ಕಿವಿ ಕಣ್ಣುಗಳನ್ನು ಊನಗೊಳಿಸಿಕೊಳ್ಳುವುದೇ?

ಯುವಜನತೆಯು ಗಾಂಧೀ ಚಿಂತನೆಗಳನ್ನು ಒಳಗೊಳ್ಳದಿರುವಿಕೆಗೆ ನಮ್ಮ ಶೈಕ್ಷಣಿಕ ಧೋರಣೆಯೇ ಕಾರಣವೆನಿಸುತ್ತಿದೆ. ಶಿಕ್ಷಣವು ತನ್ನೆಲ್ಲಾ ಉದ್ದೇಶವನ್ನು ಉದ್ಯೋಗಕ್ಕೆ ಮಿನಿಮೈಜ್ ಮಾಡಿಕೊಂಡಿದೆ. ಅದರಲ್ಲೂ ಸರ್ಕಾರಿ ಉದ್ಯೋಗಕ್ಕೆ ಒತ್ತುಕೊಟ್ಟಿರುವುದಿದೆ. ಆದಾಗ್ಯೂ ಸರ್ಕಾರಿಯೋ ಖಾಸಗಿಯೋ ಈ ಉದ್ಯೋಗಗಳು ನಗರವಾಸಿಯಾಗಲು ಬಹುತೇಕ ಒತ್ತಾಯಿಸುತ್ತವೆ ಅಥವ ಬಯಸುತ್ತವೆ. ಈ ನಗರ ಎನ್ನವುದು ಹೆಪ್ಪುಗಟ್ಟಿದ ಆಧುನಿಕತೆಯೆ. ಆಧುನಿಕತೆಯು ಯಂತ್ರಗಳ ಜೊತೆಯದು ಮತ್ತು ಶ್ರಮರಹಿತವಾದುದ್ದು ಅಥವ ಕನಿಷ್ಠ ಶ್ರಮದ್ದು. ಇದು ಮಾರುಕಟ್ಟೆಯ ಅಧಿಕಾರದ ಹಣದ ಲೋಕವೂ ಪ್ರಾಕೃತಿಕ ಹಿಂಸೆಯ ಪ್ರಚೋದಕ ತಾಣವೂ ಹೌದು. ಯುವಜನತೆ ಈ ತರಹದ ಬದುಕಿಗೆ ಶೈಕ್ಷಣಿಕ ಚಾನಲ್‍ನಲ್ಲೇ ಧಾವಿಸುತ್ತಿದೆ. ಯುವಜನತೆ ಆಯ್ಕೆ ಮಾಡಿಕೊಳ್ಳುತ್ತಿರುವ ಹಿಂಸೆ ಹಾಸಿರುವ ಆಧುನಿಕತೆಯ ಈ ಹೈವೇ ಮಾರ್ಗ ಗಾಂಧೀ ಮಾರ್ಗವಾಗಲು ಸಾಧ್ಯವಿಲ್ಲ. ಇಲ್ಲೇ ಯುವಜನತೆಯೂ ಗಾಂಧೀಚಿಂತನೆಗಳೂ ಸಂಪೂರ್ಣ ಭಿನ್ನವಾಗಿರುವುದು. ಆದ್ದರಿಂದ ಯುವಜನತೆ ಗಾಂಧೀಚಿಂತನೆ ಜೊತೆ ಸಂಘರ್ಷಕ್ಕಿಳಿಯುತ್ತಿದ್ದಾರೆ ವಿನಹ ಅನುಸಂಧಾನಗೊಳ್ಳಲಾಗುತ್ತಿಲ್ಲ. ಹಾಗಾಗಿ ಯುವಜನತೆ ಮತ್ತು ಗಾಂಧಿ ಚಿಂತನೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿವೆ ಎಂದೆನ್ನಿಸುತ್ತದೆ.

ಗಾಂಧೀ ಬದುಕು ಮತ್ತು ಚಿಂತನೆಗಳು ಅನುಸರಣಯೋಗ್ಯವಲ್ಲ ಎನ್ನುವ ಅಭಿಪ್ರಾಯ ಯುವಜನತೆಯಲ್ಲಿ ದಟ್ಟವಾಗಿದೆ. ಆದ್ದರಿಂದ ವಾಸ್ತವ ಲೋಕಕ್ಕೆ ಗಾಂಧೀ ಅಪ್ರಸ್ತುತ ಎಂದೂ ಭಾವಿಸಲಾಗಿದೆ. ಗಾಂಧಿಯ ಚಿಂತನೆಗಳು ವೈಯಕ್ತಿಕ ನೆಲೆಯ ಪ್ರಾಯೋಗಿಕತೆಯ ಫಲಗಳು ಮತ್ತು ವಿಫಲಗಳೆಂದು ತಿಳಯಲಾಗಿದೆ. ಆದಾಗ್ಯೂ ಜಗತ್ತಿನಾದ್ಯಂತ ಅನೇಕ ಸಮಸ್ಯೆಗಳ ಬಸಿರಿನಲ್ಲಿ ಗಾಂಧೀಜಿಯ ಕೂಗುವಿಕೆ ಇದೆಯಲ್ಲ ಮರೆಯುವುದು ಹೇಗೆ? ಗಾಂಧೀ ಚಿಂತನೆಗಳು ವೈಯಕ್ತಿಕ ನೆಲೆಯವು ಎಂದು ತಾತ್ಸಾರ ಮಾಡದೆ, ಸಮುದಾಯದ ಬದುಕಿಗೆ ಅವುಗಳ ಅಗತ್ಯವನ್ನು ಅರ್ಥೈಸಿಕೊಳ್ಳಬೇಕಿದೆ. ನಿಸರ್ಗ ವಿವೇಕವಿರುವ ಗಾಂಧೀ ಚಿಂತನೆಯೇ ಆಧುನಿಕತೆಯಿಂದ ಜರ್ಜರಿತವಾಗಿರುವ ಭೂಮಿಯ ಆತ್ಯಂತಿಕ ಔಷಧಿಯೆಂದು ಮತ್ತೆ ಮತ್ತೆ ಭಾವಿಸುತ್ತಿರುವುದನ್ನು ಯುವಜನತೆ ಕಡೆಗಣ್ಣಿನಲ್ಲಿ ನೋಡಬೇಕಿಲ್ಲವೆನಿಸುತ್ತದೆ.

ಯುವಜನತೆ ಆಯ್ಕೆ ಮಾಡಿಕೊಳ್ಳುತ್ತಿರುವ ಬದುಕಿನಲ್ಲಿ ಸಮಸ್ಯೆಗಳು ಕಗ್ಗಂಟಾಗುತ್ತಿವೆ. ಈ ಕಗ್ಗಂಟನ್ನು ಬಿಡಿಸುವ ಮಂತ್ರದಂಡ ಎಲ್ಲಿಯೂ ಕಾಣದು. ಅದು ಇದ್ದರೆ ಗಾಂಧೀ ಚಿಂತನೆಯಲ್ಲಿರುವುದರಿಂದ ಯುವಜನತೆ ಗಾಂಧಿ ಮತ್ತು ಅವರ ಚಿಂತನೆಯನ್ನು ಎಷ್ಟೇ ವಿರೋಧಿಸಿದ್ದರೂ ಮುಖಕೊಡಬೇಕಾದ ಅನಿವಾರ್ಯತೆಯಿದೆ. ವ್ಯಕ್ತಿಯ ದೇಹ ಮನಸ್ಸಿನ ಆರೋಗ್ಯ, ಸಮುದಾಯದ ಸ್ವಾಸ್ಥ್ಯ ಮತ್ತು ಭೂಮಿಯ ಆರೋಗ್ಯ ಈ ಮೂರು ಮುಪ್ಪುರಿಯ ಆರೋಗ್ಯ ಚಿಂತನೆಯು ಗಾಂಧೀಚಿಂತನೆಯಲ್ಲಿದೆ. ಆದ್ದರಿಂದ ಯುವಜನತೆ ಮತ್ತು ಗಾಂಧೀ ಚಿಂತನೆ ಒಂದುಗೂಡುವುದು ಅನಿವಾರ್ಯ. ಹಾಗಾಗಿ ಯುವಜನತೆ, ಗಾಂಧೀಚಿಂತನೆಗೆ ತಮ್ಮ ಮನಸ್ಸನ್ನು ತೆರೆದುಕೊಳ್ಳಬೇಕಿದೆ.

ಅಂದ್ಹಾಗೆ, ಗಾಂಧೀಜಿ ಯಾವಾಗಲೂ ಹೆಚ್ಚು ಕೂರುತ್ತಿದ್ದಿದ್ದು ಬಿಳಿಹೊದಿಕೆಯ ಹಾಸಿಗೆಯಲ್ಲೇ ಹೊರತು, ಕುರ್ಚಿಯಲ್ಲಲ್ಲ. ಕುರ್ಚಿಯು ಕೂತವರಿಗೆ ಮಾತ್ರ ಸೀಮಿತವಾದುದ್ದು ಹಾಗೂ ಒಂಟಿತನ ಮತ್ತು ಪ್ರತ್ಯೇಕತೆಯನ್ನು ಸಂಕೇತಿಸುವಂತಹದ್ದು. ಆದರೆ, ಗಾಂಧೀಜಿಯ ಹಾಸಿಗೆ ಹೃದಯ ತೆರೆದಂತಿದ್ದು ಯಾರನ್ನಾದರೂ ಸನಿಹಕ್ಕೆ ಕರೆಯುವ, ಸಂತೈಸುವ, ಸಂವಾದಿಸುವ ರೂಪಕದ್ದು. ಯಾರನ್ನೂ ಕರೆದು, ಕೂರಿಸಿಕೊಳ್ಳತ್ತಿದ್ದ ಗಾಂಧೀಜಿಗೆ ಹೆಚ್ಚು ಪ್ರಿಯರಾದವಲ್ಲಿ ಯುವಜನತೆಯು ಕೂಡ ಇದ್ದರು. ಆ ಗಾಂಧೀಜಿಯ ಚಿಂತನೆಗಳ ಹಾಸಿಗೆಯ ತೆರಪು ಮತ್ತು ಪ್ರೀತಿ ಹಾಗೆ ಇದ್ದಂತಿದೆ. ಆದರೆ, ಯುವಜನತೆಗೆ……..?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...