ರಾಜ್ಯದಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿರುವ ದಲಿತರ ಮೇಲಿನ ದೌರ್ಜನ್ಯ, ಹಲ್ಲೆ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ತಡೆಯುವಲ್ಲಿ ಸರ್ಕಾರದ ವೈಫಲ್ಯವನ್ನು ಖಂಡಿಸಿ ಇಂದ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದಲಿತ ಸಂಘಟನೆಗಳ ಒಕ್ಕೂಟ ಖಂಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ದಲಿತ ಹಾಗೂ ಒಳಮೀಸಲಾತಿ ಹೋರಾಟಗಾರರಾದ ಅಂಬಣ್ಣ ಅರೋಲಿಕರ್ “ರಾಜ್ಯದ ಹಲವು ಭಾಗಗಳಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅಸ್ಪೃಶ್ಯತೆ ಆಚರಣೆ, ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡುವುದು ಮತ್ತು ಜಾತಿ ದ್ವೇಷ ಕೊಲೆಗಳು ನಿರಂತರವಾಗಿ ನಡೆಯುತ್ತಿದೆ. ಅದರಲ್ಲೂ ಕೊಪ್ಪಳ, ರಾಯಚೂರು, ತುಮಕೂರು ಜಿಲ್ಲೆಗಳಲ್ಲಿ ಅತಿಹೆಚ್ಚು ಅಸ್ಪೃಶ್ಯತೆ ಆಚರಣೆ, ಕೊಲೆ ಮತ್ತು ಅತ್ಯಾಚಾರದ ಪ್ರಕರಣಗಳು ನಡೆಯುತ್ತಿವೆ. ರಾಜ್ಯಾದ್ಯಂತ ದಲಿತರ ಮೇಲೆ ನಡೆಯುತ್ತಿರುವ ಅಪರಾಧಗಳ ವಿರುದ್ಧ ಸೂಕ್ತ ಪ್ರಕರಣ ದಾಖಲಿಸಿ, ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಕಾರ್ಯನಿರ್ವಹಿಸಬೇಕಾದ ಪೋಲಿಸ್ ಇಲಾಖೆ ಬೇಜಾಬ್ದಾರಿಯಿಂದ ವರ್ತಿಸುತ್ತಿದೆ. ಹಾಗಾಗಿಯೇ ಕೆಲವು ಜಿಲ್ಲೆಗಳಲ್ಲಿ ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ.
ರಾಜ್ಯದ ಪೋಲಿಸ್ ಇಲಾಖೆ ಜಾತಿ ಮೂಲದ ಹಿಂಸೆ, ಕೊಲೆಗಳನ್ನು ತಡೆಗಟ್ಟುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಎಷ್ಟೋ ಪ್ರಕರಣಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ದಾಖಲಿಸದೆ ಪೋಲಿಸರು ಪ್ರಕರಣಗಳ ದಿಕ್ಕು ತಪ್ಪಿಸುತ್ತಿದ್ದಾರೆ.” ಎಂದು ಆಕ್ರೋಶ ಹೊರಹಾಕಿದರು.
ಬಸವರಾಜ್ ಕೌತಾಳ್ ಮಾತನಾಡುತ್ತಾ “ಕಳೆದ ಮೂರು ವರ್ಷಗಳಿಂದ ಕೊಪ್ಪಳ, ರಾಯಚೂರು ಮತ್ತು ತುಮಕೂರು ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಮುದಾಯದವರಿಂದ ಪರಿಶಿಷ್ಟ ಜಾತಿಯ ಅಸ್ಪೃಶ್ಯ ಸಮುದಾಯಗಳ ಮೇಲೆ ಹಲ್ಲೆ, ದೌರ್ಜನ್ಯ ಕೊಲೆಗಳಾಗುತ್ತಿವೆ. ಆದರೆ ಜಾತಿ ಕಾರಣಕ್ಕಾಗಿಯೇ ನಡೆಯುವ ಈ ದೌರ್ಜನ್ಯ, ಕೊಲೆಗಳನ್ನು ಅಟ್ರಾಸಿಟಿ ಕಾಯ್ದೆಯಡಿಯಲ್ಲಿ ದಾಖಲಿಸಲು ಸಾಧ್ಯವಾಗುತ್ತಿಲ್ಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿರುವ ಎಲ್ಲ ಜಾತಿಗಳ ಸಾಮಾಜಿಕ ಸ್ಥಾನಮಾನ ಒಂದೇ ರೀತಿಯಾಗಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪಟ್ಟಿಯಲ್ಲಿರುವ ಸ್ಪೃಶ್ಯ ಸಮುದಾಯಗಳು ಮತ್ತು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿರುವ ಸಮುದಾಯಗಳು ಅಸ್ಪೃಶ್ಯ ಸಮುದಾಯಗಳ ಜೊತೆಗೆ ಅಸ್ಪೃಶ್ಯತೆ ಆಚರಣೆ ಮಾಡುವುದು, ಜಾತಿ ಹೆಸರಿನಲ್ಲಿ ದೌರ್ಜನ್ಯ ಎಸಗುತ್ತಿರುವುದು ಕಂಡು ಬರುತ್ತಿದೆ.” ಎಂದು ಅಭಿಪ್ರಾಯಪಟ್ಟರು.
ಪಿ.ಟಿ.ಸಿ.ಲ್ ಹೋರಾಟಗಾರ ಮಂಜುನಾಥ್ ಮಾತನಾಡುತ್ತಾ
ಅಸ್ಪೃಶ್ಯತೆ ಆಚರಣೆ ಕಾನೂನಿನಡಿಯಲ್ಲಿ ಶಿಕ್ಷಾರ್ಹ ಅಪರಾಧ ಎನ್ನುವ ಅರಿವು ಮೂಡಿಸುವಲ್ಲಿ ಮತ್ತು ಅಸ್ಪೃಶ್ಯತೆ ಆಚರಣೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸುವಲ್ಲಿ ಆಯಾ ಜಿಲ್ಲೆಯ ಜಿಲ್ಲಾಡಳಿತ ವಿಫಲವಾಗಿರುವುದು ಈ ರೀತಿಯ ಪ್ರಕರಣಗಳು ಹೆಚ್ಚಾಗಲು ನೇರವಾದ ಕಾರಣ. ಅಸ್ಪೃಶ್ಯತೆಯ ಆಚರಣೆ ಮಾಡುವುದನ್ನು ದಲಿತರು ಪ್ರಶ್ನೆ ಮಾಡಿದಾಗ, ಹೋಟೆಲ್, ಕ್ಷೌರದಂಗಡಿ, ದೇವಸ್ಥಾನದಂತಹ ಸಾರ್ವಜನಿಕ ಸ್ಥಳಗಳನ್ನು ದಲಿತರು ಬಳಕೆ ಮಾಡುವ ಸಂದರ್ಭಬಂದಾಗ ಅವರ ಮೇಲೆ ಹಲ್ಲೆ, ಕೊಲೆಗಳು ನಡೆಯುತ್ತಿವೆ. ಇದು ಸಂವಿಧಾನಾತ್ಮಕವಾಗಿ ದೇಶದ ಎಲ್ಲ ಪ್ರಜೆಗಳಿಗೂ ನೀಡಿರುವ ಸಮಾನತೆಯ ಹಕ್ಕಿನ ಸ್ಪಷ್ಟ ನಿರಾಕರಣೆಯಾಗಿದೆ.
ಕಳೆದ ಎರಡು ತಿಂಗಳಿನಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಭೂಮಾನಂದನ ಹತ್ಯೆ ಪ್ರಕರಣ, ಹುಕ್ರಾಣಿ ಗ್ರಾಮದ ಅಶ್ವಿನಿ ಎಂಬ ದಲಿತ ಯುವತಿಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವುದು, ಲಿಂಗಸೂರು ತಾಲೂಕಿನ ದಲಿತ ಯುವತಿ ರಾಣಿಯಮ್ಮ ನವರ ಕೊಲೆ ಮಾಡಿರುವುದು,ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕಸಾಪುರ ಗ್ರಾಮದ ಸಿಂಹಾದ್ರಿ ಎಂಬ ಯುವಕನ ಹತ್ಯೆ ನಡೆದಿವೆ.ಪೋಲೆನಹಳ್ಳಿಯ ಆನಂದ ರವರನ್ನು ಕೊಲೆ ಮಾಡಿರುವುದು, ಮಧುಗಿರಿ ತಾಲ್ಲೂಕಿನ ಐ.ಡಿ. ಹಳ್ಳಿ ಯ ಪುರುಷೋತ್ತಮ್ ರವರನ್ನು ಕೊಲೆ ಮಾಡಲಾಗಿದೆ.
ಇಂತಹ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಲೇ ಇರುವುದು ರಾಜ್ಯದಲ್ಲಿ ದಲಿತರಿಗೆ ಯಾವುದೇ ರಕ್ಷಣೆ ಇಲ್ಲ ಎನ್ನುವ ಭಾವನೆ ಮೂಡಿಸುತ್ತಿದೆ.
ಆದ್ದರಿಂದ ರಾಜ್ಯ ಸರ್ಕಾರ ದಲಿತರ ಮೇಲೆ ನಡೆಯುತ್ತಿರುವ ಅಪರಾಧ ಪ್ರಕರಣಗಳನ್ನು ತಡೆಯುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ದಲಿತ ಅಸ್ಪೃಶ್ಯ ಸಮುದಾಯಗಳ ಹಿತಾಸಕ್ತಿಯ ದೃಷ್ಟಿಯಿಂದ ಈ ಬೇಡಿಕೆಗಳನ್ನು ಶೀಘ್ರವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ದಲಿತ ಸಂಘಟನೆಗಳ ಒಕ್ಕೂಟದ ಒತ್ತಾಯಗಳು
1. ರಾಜ್ಯ ಗೃಹ ಇಲಾಖೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಅಟ್ರಾಸಿಟಿ ಕಾಯ್ದೆಯಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ಪ್ರಾಮಾಣಿಕವಾಗಿ ತನಿಖೆ ನಡೆಸುವಂತೆ ಕ್ರಮ ಕೈಗೊಳ್ಳಬೇಕು.
2. ಜಾತಿ ಕಾರಣಕ್ಕಾಗಿ ಅತ್ಯಾಚಾರ, ಕೊಲೆ, ದೌರ್ಜನ್ಯಕ್ಕೆ ಒಳಗಾಗಿರುವ ಕುಟುಂಬಗಳಲ್ಲಿ ಸೂಕ್ತ ರಕ್ಷಣೆ ಒದಗಿಸಬೇಕು.
3. ಮೃತರ ಕುಟುಂಬಗಳಿಗೆ 25 ಲಕ್ಷ ರೂಪಾಯಿ ಪರಿಹಾರ ಮತ್ತು ಐದು ಎಕರೆ ಭೂಮಿ ಮಂಜೂರು ಮಾಡಬೇಕು
4. ಕೊಪ್ಪಳ, ರಾಯಚೂರು, ತುಮಕೂರು ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಪದೇ ಪದೇ ದಲಿತರ ಮೇಲೆ ದೌರ್ಜನ್ಯ ನಡೆಸುವ ಪ್ರಕರಣಗಳು ಕಂಡುಬರುತ್ತಿದ್ದು ಇಂತಹ ಪ್ರದೇಶಗಳನ್ನು ಅತಿಸೂಕ್ಷ್ಮ ಜಿಲ್ಲೆಗಳು ಎಂದು ಘೋಷಿಸಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಕ್ರಮಕೈಗೊಳ್ಳಬೇಕು.
5. ಅಸ್ಪೃಶ್ಯತೆ ಆಚರಣೆ ಶಿಕ್ಷಾರ್ಹ ಅಪರಾಧ ಎನ್ನುವುದನ್ನು ಮತ್ತು ಅಸ್ಪೃಶ್ಯತೆ ಆಚರಣೆ ಮಾಡುವುದನ್ನು ತಡೆಗಟ್ಟಲು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಹಮ್ಮಿಕೊಳ್ಳಬೇಕು
6. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿರುವ ಸ್ಪೃಶ್ಯ ಮತ್ತು ಬಲಾಢ ಜಾತಿಗಳು ಅಸ್ಪೃಶ್ಯ ಸಮುದಾಯಗಳ ಜೊತೆಗೆ ಅಸ್ಪೃಶ್ಯತೆ ಆಚರಣೆ, ಹಲ್ಲೆ, ದೌರ್ಜನ್ಯ, ಕೊಲೆಗಳನ್ನು ನಡೆಸುತ್ತಿರುವುದು ದುರದೃಷ್ಟಕರ ಹಾಗಾಗಿ ಪ. ಜಾತಿ ಮತ್ತು ಪ. ಪಂಗಡಗಳ ವಿರುದ್ಧ ದೌರ್ಜನ್ಯ ತಡ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಅಸ್ಪೃಶ್ಯ ದಲಿತ ಸಮುದಾಯಗಳಿಗೆ ಕಾನೂನಿನ ರಕ್ಷಣೆ ನೀಡಲು ಕಾಯ್ದೆಯ ತಿದ್ದುಪಡಿ ಮಾಡಬೇಕು.
7. ಯಾವ ಜಿಲ್ಲೆಗಳಲ್ಲಿ ಕೊಲೆ, ಅತ್ಯಾಚಾರ, ದೌರ್ಜನ್ಯ ಗಳು ನಡೆಯುತ್ತವೆಯೋ ಆ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಗಳ ಜವಾಬ್ದಾರಿ ಯಾಗಿರುವುದರಿಂದ ಇವರಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈ ಗೊಳ್ಳಬೇಕು.
ಪತ್ರಿಕಾಗೋಷ್ಠಿಯಲ್ಲಿ
ಬಸವರಾಜ್ ಕೌತಾಳ್, ಅಂಬಣ್ಣ ಆರೋಲಿಕರ್, ವೇಣುಗೋಪಾಲ್ ಮೌರ್ಯ, PTCL ಮಂಜುನಾಥ್, ಬಿ.ಎಂ.ವೆಂಕಟೇಶ್ ಹಾಜರಿದ್ದರು.
ಕಾರ್ಯಕಾರಿ ಸಂಪಾದಕ, ನಾನುಗೌರಿ.ಕಾಮ್


