ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಕರ್ತವ್ಯದ ವೇಳೆ ಹುತಾತ್ಮರಾದ ಅಗ್ನಿವೀರ್ ಮುಧಾವತ್ ಮುರಳಿ ನಾಯಕ್ ಅವರ ಕುಟುಂಬಕ್ಕೆ ಆರ್ಥಿಕ ನೆರವು ಮತ್ತು ಐದು ಎಕರೆ ಭೂಮಿ ನೀಡುವುದಾಗಿ ಆಂಧ್ರಪ್ರದೇಶದ ಶಿಕ್ಷಣ ಮತ್ತು ಐಟಿ ಸಚಿವ ನಾರಾ ಲೋಕೇಶ್ ಘೋಷಿಸಿದ್ದಾರೆ.
ಅಗ್ನಿವೀರ್ ಮುರಳಿ ನಾಯಕ್ ಅವರ ಮೃತದೇಹ ಶುಕ್ರವಾರ ಬೆಂಗಳೂರಿನಿಂದ ಆಂಧ್ರಪ್ರದೇಶದ ಅವರ ಹುಟ್ಟೂರು ಕಲ್ಲಿತಾಂಡಕ್ಕೆ ಆಗಮಿಸಿದ್ದು, ದುಃಖ ಮತ್ತು ಗೌರವದ ಮಹಾಪೂರವನ್ನೇ ಹರಿಸಿದೆ.
ಪಾಕಿಸ್ತಾನದಿಂದ ಭಾರೀ ಶೆಲ್ ದಾಳಿಯ ಸಮಯದಲ್ಲಿ ಗಾಯಗೊಂಡಿದ್ದ 23 ವರ್ಷದ ಅಗ್ನಿವೀರ್ ನಾಯಕ್ ಸಾವನ್ನಪ್ಪಿದ್ದಾರೆ. ಗಡಿಯ ಮೀಸಲು ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಶುಕ್ರವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ನಿಧನರಾದರು.
ಸಚಿವ ನಾರಾ ಲೋಕೇಶ್ ಅವರು ನಾಯಕ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ಭಾನುವಾರ ದುಃಖಿತ ಕುಟುಂಬವನ್ನು ಭೇಟಿ ಮಾಡಿ ಸರ್ಕಾರದ ಬೆಂಬಲ ಹಾಗೂ ಭರವಸೆ ನೀಡಿದರು. “ಮುರಳಿ ನಾಯಕ್ ಅವರ ಶೌರ್ಯಕ್ಕೆ ರಾಜ್ಯವು ನಮಿಸುತ್ತದೆ. ರಾಷ್ಟ್ರಕ್ಕೆ ಅವರ ಸೇವೆಯನ್ನು ಮರೆಯಲಾಗುವುದಿಲ್ಲ” ಎಂದು ಅವರು ಹೇಳಿದರು.
ಮುರಳಿ ನಾಯಕ್ ಅವರ ಕುಟುಂಬಕ್ಕೆ ಸರ್ಕಾರವು 5 ಎಕರೆ ಕೃಷಿ ಭೂಮಿ, 50 ಲಕ್ಷ ರೂಪಾಯಿಗಳ ಆರ್ಥಿಕ ನೆರವು, ವಸತಿಗಾಗಿ 300 ಗಜಗಳ ಭೂಮಿ ಮತ್ತು ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ಲೋಕೇಶ್ ಘೋಷಿಸಿದರು.
ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಸಚಿವರಾದ ಅನಗನಿ ಸತ್ಯ ಪ್ರಸಾದ್, ವಂಗಲಪುಡಿ ಅನಿತಾ ಮತ್ತು ಸವಿತಾ; ಸಂಸದ ಬಿ.ಕೆ. ಪಾರ್ಥಸಾರಥಿ, ಮಾಜಿ ಸಚಿವರಾದ ಪಲ್ಲೆ ರಘುನಾಥ ರೆಡ್ಡಿ ಮತ್ತು ಕಲವ ಶ್ರೀನಿವಾಸುಲು, ಶಾಸಕರಾದ ಪಲ್ಲೆ ಸಿಂಧೂರ ರೆಡ್ಡಿ, ಎಂ.ಎಸ್. ರಾಜು ಮತ್ತು ಜೆ.ಸಿ. ಪ್ರಭಾಕರ್ ರೆಡ್ಡಿ ಸೇರಿದಂತೆ ಇತರರೊಂದಿಗೆ ಗೌರವ ಸಲ್ಲಿಸಿದರು.
ಅಗ್ನಿವೀರ್ ನಾಯಕ್ ಅವರ ಅಂತ್ಯಕ್ರಿಯೆಯನ್ನು ಪೂರ್ಣ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು ಎಂದು ಆಂಧ್ರಪ್ರದೇಶ ಸರ್ಕಾರ ದೃಢಪಡಿಸಿತು.
ಇದಕ್ಕೂ ಮೊದಲು, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಅಗ್ನಿವೀರ್ ನಾಯಕ್ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. “ದೇಶ ರಕ್ಷಣೆಯಲ್ಲಿ ಶ್ರೀ ಸತ್ಯಸಾಯಿ ಜಿಲ್ಲೆಯ ಪೆನುಕೊಂಡ ವಿಧಾನಸಭಾ ಕ್ಷೇತ್ರದ ಗೋರಂಟ್ಲಾ ಮಂಡಲದ ಮುರಳಿ ನಾಯಕ್ ಎಂಬ ಸೈನಿಕ ಸಾವನ್ನಪ್ಪಿದ ಸುದ್ದಿ ಕೇಳಿ ದುಃಖವಾಯಿತು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಮುರಳಿ ನಾಯಕ್ ಅವರಿಗೆ ಶ್ರದ್ಧಾಂಜಲಿಗಳು. ಅವರ ಕುಟುಂಬ ಸದಸ್ಯರಿಗೆ ನನ್ನ ಆಳವಾದ ಸಂತಾಪ ಸೂಚಿಸುತ್ತೇನೆ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.
ಪಾಕಿಸ್ತಾನದ ಶೆಲ್ ದಾಳಿಗೆ ಆಂಧ್ರಪ್ರದೇಶದ ಸೈನಿಕ ಮುರಳಿ ನಾಯಕ್ ಹುತಾತ್ಮ