Homeಚಳವಳಿಎಡಪಂಥ ಇನ್ನಿಲ್ಲ! ಅಮರವಾಗಲಿ ಎಡಪಂಥ.... : ಯೋಗೇಂದ್ರ ಯಾದವ್

ಎಡಪಂಥ ಇನ್ನಿಲ್ಲ! ಅಮರವಾಗಲಿ ಎಡಪಂಥ…. : ಯೋಗೇಂದ್ರ ಯಾದವ್

- Advertisement -
- Advertisement -

ಇತ್ತೀಚಿನ ಲೋಕಸಭೆ ಚುನಾವಣೆಗಳಲ್ಲಿ ಎಡಪಕ್ಷಗಳ ನಿರಾಶಾದಾಯಕ ಪ್ರದರ್ಶನವನ್ನು ನೋಡಿದ ನಂತರ ನನ್ನ ಮೊದಲ ಪ್ರತಿಕ್ರಿಯೆ ಇದಾಗಿತ್ತು. ಬಹಳ ಸಮಯದಿಂದಲೇ ಇದ್ದ ಅನುಮಾನವನ್ನು ಈ ಫಲಿತಾಂಶ ಗಟ್ಟಿಗೊಳಿಸಿತು; ಒಂದು ಸಂಘಟನೆಯಾಗಿ, ಒಂದು ಸಂಘಟಿತ ಬೌದ್ಧಿಕ ಮತ್ತು ರಾಜಕೀಯ ಘಟಕವಾಗಿ ಸತ್ತುಹೋಗಿದೆ. ಆದರೂ, ಈ ಫಲಿತಾಂಶವು ಎಡಪಂಥದ ಮುಂದುವರೆಯುತ್ತಿರುವ ಪ್ರಸ್ತುತತೆಯನ್ನು ಒತ್ತಿಹೇಳುತ್ತದೆ ಹಾಗೂ ಒಂದು ರಾಜಕೀಯ ದೃಷ್ಟಿಕೋನ ಮತ್ತು ಚಳವಳಿಗಾಗಿ ಎಡಪಂಥ ಅವಶ್ಯಕ ಎನ್ನುವುದನ್ನೂ ಎತ್ತಿಹಿಡಿದಿದೆ. ಇದರಿಂದ ಏಳುವ ದೊಡ್ಡ ಪ್ರಶ್ನೆ : ಸಾಂಪ್ರದಾಯಿಕ ಎಡಪಂಥದ ಈ ಸಾವು ಒಂದು ಹೊಸ ಎಡಪಂಥದ ಹುಟ್ಟಿಗೆ ಕಾರಣವಾಗಬಲ್ಲದೇ?

ಕಳೆದ ಸುಮಾರು ನೂರು ವರ್ಷಗಳಿಂದ, ಎಡಪಂಥ ಅಂದರೆ ಒಂದು ರಿಜಿಡ್ ಆದ ಸೈದ್ಧಾಂತಿಕ ರಾಜಕಾರಣವೆಂದೇ ತೋರುತ್ತದೆ. ಎಡಪಂಥ ಎಂದರೆ ಮಾಕ್ರ್ಸ್‍ವಾದಕ್ಕೆ ಬದ್ಧತೆ, ಅಥವಾ ಮಾಕ್ರ್ಸ್‍ವಾದದ ಬಗ್ಗೆ ಲೆನಿನ್‍ನ ಸಂಕುಚಿತವಾದ ವಿಶ್ಲೇಷಣೆ. ಈ ಸಿದ್ಧಾಂತವು ಕ್ರಾಂತಿಯ ಅನಿವಾರ್ಯತೆಯಲ್ಲಿ ನಂಬಿಕೆ, ಒಂದು ಸಮಾಜವಾದ ನೋಟ ಹಾಗೂ ಸಾಮಾನ್ಯ ಜನರ ಸರ್ವಾಧಿಕಾರವನ್ನು ಒಳಗೊಂಡಿತ್ತು. ಹೆಚ್ಚಿನ ಎಡಪಂಥೀಯರಿಗೆ ಸೋವಿಯತ್ ಒಕ್ಕೂಟ ಮತ್ತು ಇತರ ಕಮ್ಯೂನಿಸ್ಟ್ ಆಳ್ವಿಕೆಗಳು ಭವಿಷ್ಯದ ಸಮಾಜ ಹೇಗಿರಬೇಕು ಎನ್ನುವುದಕ್ಕೆ ಉದಾಹರಣೆಗಳು. ಈ ರಾಜಕೀಯವನ್ನೇ ಭಾರತೀಯ ಕಮ್ಯೂನಿಸ್ಟ್ ಪಕ್ಷ ಪ್ರತಿನಿಧಿಸಿತ್ತು. ತದನಂತರ ಆ ಪಕ್ಷವು ಸಿಪಿಐ-ಎಮ್, ಸಿಪಿಐ-ಮಾವೋವಾದಿ ಹಾಗೂ ಸಿಪಿಐ-ಎಮ್‍ಎಲ್‍ನ ಇತರ ಹಲವಾರು ಗುಂಪುಗಳಾಗಿ ವಿಭಜನೆಯಾಯಿತು.

ಈಗಾಗಲೇ ಬಹಳ ಸಮಯದಿಂದ ಎಡಪಂಥವು ತನ್ನ ಕೊನೆಯ ಗಳಿಗೆಯಲ್ಲಿದೆ. ಲೋಕಸಭೆಯ ಚುನಾವಣೆ ಅದು ಎಲ್ಲರಿಗೂ ಸ್ಪಷ್ಟವಾಯಿತು. 5 ಸ್ಥಾನಗಳು; ಇದು ಎಡಪಂಥ ಈ ದೇಶದಲ್ಲಿ ಇಲ್ಲಿಯವರೆಗೆ ಪಡೆದ ಅತ್ಯಂತ ಕಡಿಮೆ ಸ್ಥಾನಗಳು. (ಡಿಎಮ್‍ಕೆಯ ಸಹಾಯದಿಂದ ತಮಿಳುನಾಡಿನಲ್ಲಿ ಗೆದ್ದ 4 ಸೀಟುಗಳಿಂದ ಸ್ವಲ್ಪ ಗೌರವಾನ್ವಿತವಾಯಿತು.) ಈ 5 ಸ್ಥಾನಗಳ ಪ್ರದರ್ಶನವು ಬರೀ ಚುನಾವಣಾ ಸೋಲಿಗಿಂತ ಆಳವಾದ ಸಮಸ್ಯೆ ಇದೆ ಎಂದು ತೋರಿಸಿತು. ಕೇರಳದಲ್ಲಿ ಎಲ್‍ಡಿಎಫ್ ಗೆ ಆದ ಆಘಾತದ ಸೋಲು ಒಂದು ಆವರ್ತಕ ವಿದ್ಯಮಾನ ಎನ್ನಬಹುದು. ಆದರೆ ಪಶ್ಚಿಮ ಬಂಗಾಳದ ಮತ್ತು ತ್ರಿಪುರಾದ ಸೋಲುಗಳನ್ನು ಹಾಗೆನ್ನಲಾಗುವುದಿಲ್ಲ. ಅಲ್ಲಿ ಸಿಪಿಐ (ಎಮ್)ನ ಮಾಜಿ ಕಾರ್ಯಕರ್ತರು ಬಿಜೆಪಿಯನ್ನು ಸೇರಿದ ರೀತಿಯನ್ನು ನೋಡಿದಾಗ ಪಾರ್ಲಿಮೆಂಟರಿ(ಸಂಸದೀಯ) ಎಡಪಂಥದ ರಾಜಕೀಯ ಆಳದಲ್ಲಿಯೇ ಟೊಳ್ಳಾಗಿರುವುದು ಕಾಣಿಸುತ್ತದೆ. ಚುನಾವಣೆಗಳಲ್ಲಿ ಭಾಗವಹಿಸದ, ಭಾರತ ಸರಕಾರದ ವಿರುದ್ಧ ಸಶಸ್ತ್ರ ಹೋರಾಟವನ್ನು ಮುಂದುವರೆಸಿರುವ ಎಡಪಂಥೀಯರ ಸಣ್ಣ ಗುಂಪು ತಮ್ಮ ಗುರಿಯ ಪ್ರಜ್ಞೆಯನ್ನು ಕಳೆದುಕೊಂಡು ಬಹಳ ಸಮಯವಾಗಿದೆ ಹಾಗೂ ಭದ್ರತಾ ಪಡೆಗಳಿಂದ ಆಗಬಹುದಾದ ಅಂತಿಮ ನಿರ್ನಾಮಕ್ಕೆ ಕಾಯುತ್ತಿದ್ದಾರೆ. ಎಡಪಂಥೀಯರ ಕೊನೆಯ ತಾಣವಾಗಿರುವ ಜೆಎನ್‍ಯುನಲ್ಲಿ ಕೂಡ ಎಬಿವಿಪಿ ಮತ್ತು ಎನ್‍ಎಸ್‍ಯುಐ ಗಳನ್ನು ಸೋಲಿಸಲು ಎಲ್ಲಾ ಎಡಪಂಥೀಯ ರಚನೆಗಳೊಂದಿಗೆ ಮಹಾಘಟಬಂಧನ ಮಾಡಿಕೊಂಡೇ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿದೆ.

ಸಾಂಪ್ರದಾಯಿಕ ಎಡಪಂಥದ ಈ ಸಾವು ಆಕಸ್ಮಿಕವಲ್ಲ. ಸೋವಿಯತ್ ಒಕ್ಕೂಟ ಮತ್ತು ಪೂರ್ವ ಯುರೋಪಿನ ಎಡಪಂಥೀಯ ಆಳ್ವಿಕೆಯ ಕುಸಿತವು ಕಮ್ಯೂನಿಸ್ಟ್ ಎಡಪಂಥದ ಸಿದ್ಧಾಂತ ಮತ್ತು ಆಚರಣೆಗಳ ಮಧ್ಯದ ಆಳವಾದ ವೈರುಧ್ಯಗಳನ್ನು ಈಗಾಗಲೇ ತೋರಿಸಿಕೊಟ್ಟಿತ್ತು; ಸ್ವಾತಂತ್ರಕ್ಕೆ ಇರುವ ಮಾನವನ ಬಯಕೆಗೆ ಗೌರವ ನೀಡುವಲ್ಲಿ ವಿಫಲವಾದದ್ದು, ಆರ್ಥಿಕ ಉತ್ತೇಜನ ಮತ್ತು ಉದ್ಯಮಶೀಲತೆಯ ಅವಶ್ಯಕತೆಯನ್ನು ಗುರುತಿಸಲು ವಿಫಲವಾದದ್ದು ಹಾಗೂ ಸಮಾಜವಾದಿ ರಾಷ್ಟ್ರದ ಹೆಸರಿನಲ್ಲಿ ಒಂದು ಬೃಹತ್ ದೈತ್ಯಾಕಾರದ ಅಧಿಕಾರಶಾಹಿಯನ್ನು ರಚಿಸಿದ್ದು, ಇದರೊಂದಿಗೆ ಭಾರತೀಯ ಸಮಾಜವನ್ನು ಭಾರತೀಯ ಎಡಪಂಥ ಎಂದೂ ಸರಿಯಾಗಿ ಅರ್ಥೈಸಿಕೊಳ್ಳಲೇ ಇಲ್ಲದ್ದು; ಅವರ ಯುರೋಪ್‍ಕೇಂದ್ರಿತ ಚೌಕಟ್ಟು ಭಾರತೀಯ ಸ್ವಾತಂತ್ರ ಚಳವಳಿಯಲ್ಲಿ, ಭಾರತೀಯ ಸಂಪ್ರದಾಯಗಳಲ್ಲಿ ಹಾಗೂ ಧರ್ಮಗಳಲ್ಲಿ ಅಥವಾ ಜಾತಿ ಪದ್ಧತಿಯಲ್ಲಿ ಅರ್ಥಪೂರ್ಣವಾಗಿ ಭಾಗವಹಿಸದಂತೆ ಮಾಡಿತು. ಈ ಸಾಂಪ್ರದಾಯಿಕ ಎಡಪಂಥ ಡೆಡ್-ಎಂಡ್‍ಗೆ ಬಂದು ನಿಂತಿರುವುದು ಆಶ್ಚರ್ಯಕರವಲ್ಲ; ಆಶ್ಚರ್ಯಕರವಾಗಿರುವುದು ಸೋವಿಯತ್ ಒಕ್ಕೂಟವು ಕುಸಿದ ನಂತರವೂ ಮೂರು ದಶಕಗಳವರೆಗೆ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದ್ದು.

ಇವೆಲ್ಲವುಗಳ ಹೊರತಾಗಿಯೂ ನಮ್ಮ ಸಾರ್ವಜನಿಕ ಜೀವನದಿಂದ ಎಡಪಂಥ ಕಾಣೆಯಾದರೆ ಅದೊಂದು ದುರಂತ. ತನ್ನ ಎಲ್ಲಾ ವಿಫಲತೆಗಳ ಹೊರತಾಗಿ ಭಾರತೀಯ ಪ್ರಜಾಪ್ರಭುತ್ವದ ಪ್ರಜಾತಾಂತ್ರಿಕ ಸ್ವರೂಪವನ್ನು ಕಾಪಾಡಿಕೊಂಡು ಬರುವಲ್ಲಿ ಎಡಪಂಥವು ನಿರ್ಣಾಯಕ ಪಾತ್ರವನ್ನು ವಹಿಸಿತ್ತು. ಅತ್ಯಂತ ಗಂಭೀರ ಪ್ರಮಾಣದ ಆರ್ಥಿಕ ಅಸಮಾನತೆಯ ಮೇಲೆ ಎಡಪಂಥದ ನಿಲುವು ನಮ್ಮ ಬಂಡವಾಳಶಾಹಿ ವ್ಯವಸ್ಥೆಯ ಭ್ರಷ್ಟಾಚಾರ ಮತ್ತು ಅಮಾನವೀಯತೆಯನ್ನು ಹದ್ದುಬಸ್ತಿನಲ್ಲಿಟ್ಟಿತ್ತು. ಪಶ್ಚಿಮ ಬಂಗಾಳದ ಎಡಪಕ್ಷದ ಆಳ್ವಿಕೆಯ ಬಗ್ಗೆ ಹೆಚ್ಚೇನೂ ಹೇಳಲಿಕ್ಕೆ ಇಲ್ಲದಿದ್ದರೂ ಕೋಮು ಗಲಭೆಗಳು ತಾಂಡವವಾಡುತ್ತಿದ್ದ ಪ್ರದೇಶದಲ್ಲಿ ಹಿಂದು-ಮುಸ್ಲಿಮ್ ಐಕ್ಯತೆಯನ್ನು ಕಾಪಾಡಿಕೊಂಡು ಬರುವಲ್ಲಿ ಅವರ ಪಾತ್ರ ಅದ್ಭುತವಾಗಿತ್ತು. ಭಾರತದ ಹಲವಾರು ಅತ್ಯುತ್ತಮ, ನಿಸ್ವಾರ್ಥ ಮತ್ತು ಆಳವಾದ ಜ್ಞಾನವಿರುವ ನಾಯಕರನ್ನು ಸೃಷ್ಟಿಸಿದಷ್ಟೇ ಅಲ್ಲದೇ, ಎಡಪಂಥವು ಅಸಂಖ್ಯಾತ ಕಲಾವಿದರು, ಕವಿಗಳು, ಲೇಖಕರು, ಶಿಕ್ಷಕರು, ಪತ್ರಕರ್ತರು, ವಿಜ್ಞಾನಿಗಳು, ಚಿಂತಕರು ಮತ್ತು ಹೋರಾಟಗಾರರನ್ನೂ ಸೃಷ್ಟಿಸಿದೆ. ಭಾರತದ ರಾಜಕೀಯ ಮತ್ತು ಭಾರತದ ಆಧುನಿಕ ಸಂಸ್ಕೃತಿ ಎಡಪಂಥ ಇಲ್ಲವಾದಲ್ಲಿ ಬಡತನವನ್ನು ಕಾಣಬೇಕಾಗುತ್ತದೆ.

ಇದೇ ಕಾರಣದಿಂದ ನಾವು ಒಂದು ಹೊಸ ಎಡಪಂಥದ ಹುಟ್ಟಿನ ಕಡೆಗೆ ನೋಡಬೇಕಿದೆ, ನಮ್ಮ ಶ್ರಮ ಹಾಕಬೇಕಿದೆ. ಎಡಪಂಥದ ಆಳವಾದ ಅರ್ಥದಲ್ಲಿ ಎಡಪಂಥ ಎಂದರೆ, ರಾಜಪ್ರಭುತ್ವ ವಿರೋಧಿ ಅಥವಾ ಸ್ಥಾಪಿತ ಹಿತಾಸಕ್ತಿ ವಿರೋಧಿ ಎಂದು ಪರಿಗಣಿಸಲಾಗಿತ್ತು. ಹತ್ತೊಂಬತ್ತನೆಯ ಶತಮಾನದಲ್ಲಿ ಸಮಾನತೆಯಲ್ಲಿ ನಂಬಿಕೆಯಿಟ್ಟವರನ್ನು ಎಡಪಂಥೀಯರು ಎಂದು ಗುರುತಿಸಲಾಗಿತ್ತು, ಇದು ಎಡಪಂಥೀಯ ಅಭಿವ್ಯಕ್ತಿಯನ್ನು ರಷಿಯಾ ಕ್ರಾಂತಿಯ ನಂತರ ಕಮ್ಯುನಿಸ್ಟ್ ಎಡಪಂಥವು ಆಕ್ರಮಿಸಿಕೊಳ್ಳುವುದಕ್ಕಿಂತ ಮುಂಚೆಯ ಮಾತು. 20ನೇ ಶತಮಾನದ ಉತ್ತರಾರ್ಧದಲ್ಲಿ ಎಡಪಂಥ ಎನ್ನುವ ಲೆಬೆಲ್ ಅನ್ನು ಆಗಾಗ ಇತರೆ ಚಳವಳಿಗೆ ಮತ್ತು ರಾಜಕೀಯ ಸಾಮಾಜಿಕ ಒಲವುಗಳಿಗೂ ಬಳಸಲಾಯಿತು; ನಾಗರಿಕ ಹಕ್ಕುಗಳ ಚಳವಳಿಗಳು, ಮಹಿಳಾವಾದಿಗಳು ಹಾಗೂ ಪರಿಸರವಾದಿಗಳು. ಒಂದು ವಿಶಾಲ ಅರ್ಥದಲ್ಲಿ ಎಡ ಎಂದರೆ ಸಮಾನತೆಯ ಪರಿಕಲ್ಪನೆ, ಸಾಮಾಜಿಕ ನ್ಯಾಯ, ಎಲ್ಲರೂ ಪಾಲ್ಗೊಳ್ಳುವ ಪ್ರಜಾಪ್ರಭುತ್ವ, ಸುಸ್ಥಿರ ಪರಿಸರ ಎಂದೇ ಅರ್ಥೈಸಲಾಗುತ್ತದೆ. ಇದು ಸ್ಥಾಪಿತ ರಾಜಕೀಯ ಹಿತಾಸಕ್ತಿಗೆ, ಜಾತಿ ಶ್ರೇಣೀಕರಣಕ್ಕೆ, ಪಿತೃಪ್ರಾಧಾನ್ಯಕ್ಕೆ ಹಾಗೂ ಸಹಜವಾಗಿಯೇ ಬಂಡವಾಳಶಾಹೀ ಕ್ರಮಕ್ಕೆ ಎಡಭಾಗದಲ್ಲಿದ್ದು ಮತ್ತು ಅವೆಲ್ಲವುಗಳಿಗೆ ವಿರುದ್ಧವಾಗಿದೆ.

ಎಡಪಂಥದ ಈ ರೀತಿ ಮರುವ್ಯಾಖ್ಯಾನ ಮಾಡುವುದಕ್ಕೆ ಭಾರತದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಅತ್ಯಂತ ಶ್ರೀಮಂತ ಬೌದ್ಧಿಕ ಹಾಗೂ ರಾಜಕೀಯ ಪರಂಪರೆ ಇದೆ. ಈ ಅರ್ಥದಲ್ಲಿ ಭಾರತೀಯ ಸಂವಿಧಾನದ ಪ್ರಸ್ತಾವನೆ (ಪ್ರಿಆ್ಯಂಬಲ್) ಎಡಪಂಥೀಯವಾಗಿದೆ. ಭಾರತೀಯ ಸಮಾಜವಾದಿ ಪರಂಪರೆ-ಕಮ್ಯುನಿಸ್ಟರಲ್ಲದ ಪ್ರಜಾತಾಂತ್ರಿಕ ಸಮಾಜವಾದಿಗಳಾದ ನರೇಂದ್ರ ದೇವ, ಜಯಪ್ರಕಾಶ್ ನಾರಾಯಣ ಹಾಗೂ ರಾಮಮನೋಹರ ಲೋಹಿಯಾ ಅವರುಗಳು ಹೊಸ ಎಡಪಂಥಕ್ಕೆ ವಿಚಾರಗಳ, ಪರಿಕಲ್ಪನೆಗಳ ಸಿದ್ಧ ಸಂಗ್ರಹವನ್ನೇ ನೀಡುತ್ತಾರೆ. ಅವರ ರಾಜಕೀಯ ಪರಂಪರೆ- ಜನತಾ ಕುಟುಂಬದ ಅನೇಕ ಬಣಗಳು ಇಂದು ಆಕರ್ಷಕವಾಗಿ ಉಳಿದಿಲ್ಲ. ಆದರೆ ಈ ಕೊರತೆಯನ್ನು ಬೇರೆ ಬೇರೆ ಬಣ್ಣಗಳ, ಒಲವುಗಳ ಜನರ ಚಳವಳಿಗಳು ನೀಗಿಸಬಹುದು; ಆಹಾರ, ಶಿಕ್ಷಣ, ಮಾಹಿತಿ ಮತ್ತು ಜೀವನೋಪಾಯದ ಹಕ್ಕಿಗಾಗಿ ನಡೆಸುವ ಚಳವಳಿಗಳಿಂದ ಜೆಂಡರ್ (ಲಿಂಗ) ಸಮಾನತೆ ಮತ್ತು ಜಾತಿ ಸಮಾನತೆಗಾಗಿ ನಡೆಸುವ ಚಳವಳಿಗಳು ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ನಡೆಸುವ ಚಳವಳಿಗಳು. ಈ ಚಳವಳಿಗಳು ಮತ್ತು ಹೋರಾಟಗಾರರು ಹಲವಾರು ಸಿದ್ಧಾಂತಗಳಿಂದ ಪಡೆದುಕೊಂಡಿದ್ದಾರೆ; ಪರಿಸರವಾದ, ಮಹಿಳಾವಾದ, ಸಮಾಜವಾದ, ಮಾಕ್ರ್ಸ್‍ವಾದ, ಫುಲೆ-ಅಂಬೇಡ್ಕರ್‍ವಾದ, ಗಾಂಧೀವಾದ ಹಾಗೂ ಇನ್ನಿತರ ಸಿದ್ಧಾಂತಗಳು. ಇವರಿಗೆ ವಿವಿಧ ರಾಜಕೀಯ ಒಲವುಗಳಿವೆ. ಈ ಗುಂಪುಗಳಲ್ಲಿಯ ಹೆಚ್ಚಿನ ಚಿಂತಕರು ಸಾಂಪ್ರದಾಯಿಕ ಎಡಪಂಥದ ಹಲವಾರು ಕವಲುಗಳಿಂದ ಬಂದಿರುವರಾಗಿದ್ದಾರೆ. ತಮ್ಮಷ್ಟಕ್ಕೇ ತಾವೇ ಇವರಲ್ಲಿ ಯಾರೂ ಒಂದು ಹೊಸ ಎಡವನ್ನು ಸೃಷ್ಟಿಸುವ ಸಾಮಥ್ರ್ಯವನ್ನು ಹೊಂದಿಲ್ಲ. ಆದರೆ ಅವರನ್ನು ಒಂದೆಡೆಗೆ ಸೇರಿಸಿದರೆ, ಸದ್ಯದ ಸಮಯದ ಅತ್ಯಂತ ಶಕ್ತಿಶಾಲಿಯಾದ ಪರಿಕಲ್ಪನೆಗಳು, ಕಾರ್ಯಕ್ರಮಗಳು ಹಾಗೂ ಹೋರಾಟಗಾರರನ್ನು ಹೊಂದಿದಂತಾಗುತ್ತದೆ.

ಒಂದು ಹೊಸ ಎಡ ಸೃಷ್ಟಿಯಾಗಬೇಕಾದರೆ, ಹಳೆಯ ಎಡದಿಂದ ಉಳಿದುಕೊಂಡಿರುವ ಅಮೂಲ್ಯ ಅವಶೇಷಗಳ ಮೊತ್ತವಾದರೆ ಆಗದು. ಅಂತಹ ಒಂದು ಐಕ್ಯತೆ ಅವಶ್ಯಕವಾದರೂ ಅದು ಸಾಕಾಗುವುದಿಲ್ಲ. ಹೊಚ್ಚಹೊಸದಾಗಿ ಯೋಚಿಸಲು, ಒಂದು ನ್ಯಾಯಯುತ ಮತ್ತು ಸಮಾನತೆಯ ಸಮಾಜವನ್ನು ಹೇಗೆ ಸೃಷ್ಟಿಸಬೇಕು ಎನ್ನುವ ಹಳೆಯ ಪರಿಕಲ್ಪನೆಗಳನ್ನು ತ್ಯಜಿಸಲು ಧೈರ್ಯ ಬೇಕು, ಹೊಸ ನೀತಿಗಳನ್ನು, ತಂತ್ರಗಾರಿಕೆಯನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಹಾಗೂ ಹೊಸ ಭಾಷೆಯನ್ನು ಮಾತನಾಡಲು ಧೈರ್ಯ ಬೇಕು. ಇದರರ್ಥ ಹೊಸ ಹೆಸರುಗಳೆಂತಲೂ ಆಗಬಹುದು.
ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಾರಾಷ್ಟ್ರ ಸರ್ಕಾರ

50ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ, ಬಹುಮತ ಸಾಬೀತುಪಡಿಸುತ್ತೇನೆ: ಬಂಡಾಯ ನಾಯಕ ಏಕನಾಥ್ ಶಿಂಧೆ

0
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್‌ ಕೋಶ್ಯಾರಿ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿದ ಬೆನ್ನಲ್ಲೇ, ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಇಂದು ತಮ್ಮದೇ ಪಕ್ಷದ 50 ಶಾಸಕರು...