HomeUncategorizedಹರ್ಯಾಣದಲ್ಲಿ ಕಾಂಗ್ರೆಸ್‌ ಗೆಲುವಿನ ಹಿಂದೆ ಭೂಪಿಂದರ್‌ ಸಿಂಗ್ ಹೂಡಾ ಮಿಂಚು

ಹರ್ಯಾಣದಲ್ಲಿ ಕಾಂಗ್ರೆಸ್‌ ಗೆಲುವಿನ ಹಿಂದೆ ಭೂಪಿಂದರ್‌ ಸಿಂಗ್ ಹೂಡಾ ಮಿಂಚು

- Advertisement -
- Advertisement -

ಹರ್ಯಾಣ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್‌ನಲ್ಲಿ ಕೇಳಿ ಬರುತ್ತಿರುವ ಹೆಸರು ಭೂಪಿಂದರ್‌ ಸಿಂಗ್‌ ಹೂಡಾ. ಇಷ್ಟುದಿನ ಮಂಕಾಗಿದ್ದ ಕಾಂಗ್ರೆಸ್‌ನ್ನು ಅರಳಿಸಿದ ಕೀರ್ತಿ ಭೂಪಿಂದರ್‌ ಸಿಂಗ್‌ ಹೂಡಾ ಅವರಿಗೆ ಸಲ್ಲತ್ತದೆ. ಇಷ್ಟು ದಿನದ ತಮ್ಮ ರಾಜಕೀಯ ಜೀವನದಲ್ಲಿ ಹೂಡಾ ಈಗ ಮಿಂಚಿನಂತೆ ಎದ್ದು ಬಂದಿದ್ದಾರೆ. ಕಾಂಗ್ರೆಸ್‌ ಗೆಲುವಿನ ಹಿಂದೆ ಹೂಡಾ ಪರಿಶ್ರಮ, ರಾಜಕೀಯ ಲೆಕ್ಕಾಚಾರ ಎಲ್ಲವೂ ಗೆದ್ದು ಬೀಗಿದೆ.

ಭೂಪಿಂದರ್‌ ಸಿಂಗ್‌ ಹೂಡಾರ ಪಕ್ಷ ಸಂಘಟನೆ, ಪಕ್ಷ ಬಲವರ್ಧನೆಯ ತಾಕತ್ತು, ಕಾಂಗ್ರೆಸ್‌ ವರ್ಚಸ್ಸನ್ನು ಮತ್ತೆ ಮರಳುವಂತೆ ಮಾಡಿದೆ. ಹರ್ಯಾಣದಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದಿದ್ದರೂ, ಕಾಂಗ್ರೆಸ್‌ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಗೆಲುವು ಸಾಧಿಸಿದೆ. ಇದರ ಹಿಂದೆ ಭೂಪಿಂದರ್‌ ಸಿಂಗ್‌ ಹೂಡಾ ಎದ್ದು ಕಾಣುತ್ತಾರೆ.

೨೦೧೪ರಲ್ಲಿ ಸೋಲಿನ ಕಹಿ ಉಂಡಿದ್ದ ಭೂಪಿಂದರ್‌ ಸಿಂಗ್ ಹೂಡಾ ಈ ಬಾರಿ ಗೆದ್ದಿದ್ದಾರೆ. ಮತದಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್‌ನ ಪ್ರಭಾವಿ ಮತ್ತು ಹಿರಿಯ ನಾಯಕ ಹೂಡಾ ೨೦೦೫ರಿಂದ ೨೦೧೪ರವರೆಗೆ ಹರ್ಯಾಣದ ಮುಖ್ಯಮಂತ್ರಿಯಾಗಿದ್ದರು. ೨೦೦೫, ೨೦೦೯ರಲ್ಲೂ ದಿಗ್ವಿಜಯ ಸಾಧಿಸಿದ್ದರು.  ೨೦೧೪ಕ್ಕೂ ಮೊದಲು ಸೋಲನ್ನು ಕಾಣದ ಕಾಂಗ್ರೆಸ್‌, ೨೦೧೪ರ ವಿಧಾನಸಭೆ ಚುನಾವಣೆಯಲ್ಲಿ ಸೋತಿತ್ತು. ೧೯೭೨ರ ನಂತರ ಮೊದಲ ಬಾರಿಗೆ ಕಾಂಗ್ರೆಸ್ ಪರಾಜಿತಗೊಂಡಿತ್ತು. ಹೀಗಾಗಿ ೨೦೧೪ರಲ್ಲಿ ಭೂಪಿಂದರ್‌ ಸಿಂಗ್‌ ಹೂಡಾ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದರು. ನಂತರ ೨೦೧೪ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರಚಿಸುವಲ್ಲಿ ವಿಫಲರಾಗಿದ್ದರು. ೨೦೧೯ರ ಲೋಕಸಭೆ ಚುನಾವಣೆ ವೇಳೆ ಭೂಪಿಂದರ್‌ ಮಗ ದೀಪೇಂದ್ರ ಸಿಂಗ್‌ ಸೋತರು.

ಕಾನೂನು ಪದವೀಧರ ಭೂಪೇಂದರ್‌ ಸಿಂಗ್‌ ಹೂಡಾ ಹರ್ಯಾಣದ ಒಂಬತ್ತನೇ ಮುಖ್ಯಮಂತ್ರಿಯಾಗಿದ್ದವರು. ೭೨ ವರ್ಷದ ಹೂಡಾ ವಿರುದ್ಧ ಬಿಜೆಪಿ ಸರ್ಕಾರ ಬಂದ ನಂತರ ಅಕ್ರಮ ಭೂವ್ಯವಹಾರ ಚಟುವಟಿಕೆ ಆರೋಪ ಮಾಡಿತ್ತು. ಹೂಡಾ ವಿರುದ್ಧ ಕೇಸ್‌ ಕೂಡ ದಾಖಲಾಗಿತ್ತು. ಹೀಗಾಗಿ ಕೆಲ ದಿನಗಳವರೆಗೆ ಹೂಡಾ ರಾಜಕೀಯವಾಗಿ ಅಷ್ಟಾಗಿ ಚಟುವಟಿಕೆಯಿಂದಿರಲಿಲ್ಲ.

ಹರ್ಯಾಣ ಚುನಾವಣೆಗೂ ಮೊದಲು ಪಕ್ಷದ ಮುಖ್ಯಸ್ಥರಾಗಿದ್ದ ಅಶೋಕ್‌ ತನ್ವಾರ್‌ ರಾಜೀನಾಮೆ ನೀಡಿದ್ದರು. ಬಳಿಕ ಕುಮಾರಿ ಸೆಲ್ಜಾ ಪಕ್ಷದ ಕಾರ್ಯಭಾರ ವಹಿಸಿಕೊಂಡರು. ಪಕ್ಷದಲ್ಲಿ ಸಾಕಷ್ಟು ಬೆಳವಣಿಗೆಗಳಾದ ಹಿನ್ನೆಲೆ ಭೂಪಿಂದರ್‌ ಸಿಂಗ್‌ ಹೂಡಾ ತಾವೇ ಸ್ವತಃ ಪಕ್ಷದ ಪ್ರಚಾರ ಮತ್ತು ಸಂಘಟನೆಗೆ ಟೊಂಕ ಕಟ್ಟಿದರು. ಪರಿಣಾಮ ಇಂದು ಸಂಪೂರ್ಣ ನೆಲಕಚ್ಚಿದ್ದ ಕಾಂಗ್ರೆಸ್‌, ಚೇತರಿಸಿಕೊಂಡಿದ್ದು, ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಗೆಲುವು ಕಂಡಿದೆ. ಇನ್ನು ಸ್ವಲ್ಪ ಪ್ರಯತ್ನಿಸಿದ್ದರೆ ಬಿಜೆಪಿಯನ್ನು ಮಣಿಸಬಹುದಿತ್ತು ಎನ್ನುವ ಮಾತುಗಳು ಕೇಳಿ ಬಂದಿವೆ.

ಹೂಡಾ ಮತ್ತು ಸೆಲ್ಜಾ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿಕದರು. ನಿರುದ್ಯೋಗ, ಕಾನೂನು ಬದಲಾವಣೆ, ಕೃಷಿ ಸಂಬಂಧಿತ ಸಮಸ್ಯೆಗಳು, ಆರ್ಥಿಕ ಕುಸಿತ, ನೌಕರರಲ್ಲಿ ಕೆಲಸ ಕಳೆದುಕೊಳ್ಳುವ ಭಯ ಸೇರಿದಂತೆ ಹಲವು ವಿಷಯಗಳನ್ನು ಖಂಡಿಸಿದರು. ಜತೆಗೆ ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಷದ ಪ್ರಣಾಳಿಕೆಯಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ಕೊಡುವತ್ತ ನಿರ್ಧರಿಸಲಾಗಿದೆ. ಒಟ್ಟಿನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸಮನಾಗಿ ಠಕ್ಕರ್‌ ಕೊಟ್ಟಿರುವ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೇರುವ ಎಲ್ಲ ಸೂಚನೆಗಳನ್ನು ಜೀವಂತವಾಗಿರಿಸಿದೆ. ೯೦ ಸ್ಥಾನಗಳಲ್ಲಿ ೩೧ ಸ್ಥಾನಗಳನ್ನು ಕಾಂಗ್ರೆಸ್‌ ಗೆದ್ದಿದ್ದರೆ, ೪೦ ಬಿಜೆಪಿ ಗೆದ್ದಿದೆ. ಇಲ್ಲಿ ಸರ್ಕಾರ ರಚಿಸಲು ಮ್ಯಾಜಿಕ್ ನಂಬರ್‌ ೪೬ ಆಗಿದೆ. ಅಂದಹಾಗೇ ೨೦೧೪ರ ಚುನಾವಣೆಯಲ್ಲಿ ಕಾಂಗ್ರೆಸ್‌ ಕೇವಲ ೧೫ ಸ್ಥಾನಗಳನ್ನಷ್ಟೇ ಗೆದ್ದಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...