Homeಮುಖಪುಟಸಮಕಾಲಿನ ತಲ್ಲಣಗಳು ಕಲೆ ಮತ್ತು ಕಲಾವಿದನ ಸ್ಪಂದನೆ

ಸಮಕಾಲಿನ ತಲ್ಲಣಗಳು ಕಲೆ ಮತ್ತು ಕಲಾವಿದನ ಸ್ಪಂದನೆ

- Advertisement -
- Advertisement -

“ನಾವು ಸಿನಿಮಾ ನಿರ್ದೇಶಕರು, ನಮಗೆ ಜೀವಿಸುವುದೆಂದರೆ ಸಿನಿಮಾ ಸೃಷ್ಟಿಸುವುದು. ನಮ್ಮ ಕೃತಿಗಳು ಯಾರದ್ದೇ ಅಣತಿಯಿಂದ ನಿರ್ಮಿತವಾದವುಗಳಲ್ಲ. ನಮ್ಮ ಕೆಲವು ಸರ್ಕಾರಗಳು ನಮ್ಮನ್ನು ಅಪರಾಧಿಯೆಂದೇ ಕಾಣುತ್ತವೆ. ಕೆಲವರ ಸಿನಿಮಾ ನಿರ್ಮಾಣಕ್ಕೆ ನಿಷೇಧ ಹೇರಲಾಗಿದೆ. ಮತ್ತೆ ಕೆಲವರನ್ನು ದೇಶಭ್ರಷ್ಟರನ್ನಾಗಿಸಿ ಹೊರದೂಡಲಾಗಿದೆ ಅಥವಾ ಅವರ ಬದುಕನ್ನು ಏಕಾಂತಕ್ಕೆ ದೂಡಲಾಗಿದೆ. ಆದರೂ ಸಿನಿಮಾವನ್ನು ಮತ್ತೊಮ್ಮೆ ಸೃಷ್ಟಿಸುವ ಹಂಬಲವೇ ನಮ್ಮ ಅಸ್ತಿತ್ವದ ಏಕೈಕ ಕಾರಣವಾಗಿದೆ”
– ಜಫಾರ್ ಪನಾಹಿ

ನಾನು ಇತ್ತೀಚಿಗೆ ಗಮನಿಸಿದ ಕೆಲವು ಸಂಗತಿಗಳನ್ನು ಈ ಬರೆಹದ ಶೀರ್ಷಿಕೆಗೆ ಪೂರಕವಾಗಿ ಇಲ್ಲಿ ಹಂಚಿಕೊಂಡು ವಿಸ್ತರಿಸಲು ಪ್ರಯತ್ನಿಸುತ್ತೇನೆ.

ಸಂಗತಿ 1: ಏವ ಡುವರ್ನೆ (Ava DuVernay) ನಿರ್ದೇಶನದ ‘13th’ ಎನ್ನುವ ಸಾಕ್ಷ್ಯಚಿತ್ರದಲ್ಲಿ ಕೊಲಂಬಿಯಾ ಯುನಿವರ್ಸಿಟಿಯ ಆಫ್ರೊ-ಅಮೆರಿಕನ್ ಪ್ರೊಫೆಸರ್ ಜೆಲನಿ ಕಾಬ್ (Jelani Cobb) ಮಾತನಾಡುತ್ತಾ, ಸಿನಿಮಾ ಇತಿಹಾಸದಲ್ಲೇ ಮೈಲಿಗಲ್ಲು ಎಂದು ಗುರುತಿಸುವ 1915ರ ಡಿ.ಡಬ್ಲೂ. ಗ್ರಿಫಿತ್ ನಿರ್ದೇಶನದ ’ದ ಬರ್ತ್ ಆಫ್ ನೇಷನ್ ಸಿನಿಮಾ ಹೇಗೆ ’ಕು ಕ್ಲಕ್ಸ್ ಕ್ಲಾನ್ (Ku Klux Klan) ಎಂಬ ’ವೈಟ್ ಸುಪ್ರಿಮಿಸ್ಟ್ ಬಲಪಂಥೀಯ ಭಯೋತ್ಪಾದನೆ ಸಂಸ್ಥೆ’ ಮತ್ತೆ ಮುನ್ನಲೆಗೆ ಬರಲು ಕಾರಣವಾಯಿತು; ಮತ್ತು ಈ ಸಿನಿಮಾ ಬಿಡುಗಡೆಗೊಂಡ ನಂತರದಲ್ಲಿ ಆಫ್ರೊ-ಅಮೆರಿಕನ್ ಜನಗಳ ಮೇಲೆ ಹತ್ಯೆ ಮತ್ತು ದೌರ್ಜನ್ಯಗಳು ಹೇಗೆ ಹೆಚ್ಚಾದವು ಎಂದು ವಿವರಿಸುತ್ತಾರೆ.

ಸಂಗತಿ 2: ಇತ್ತೀಚಿಗೆ, ಶಾರುಕ್ ಖಾನ್ ತಮ್ಮ ನಟನೆಯ ’ಪಠಾಣ್ ಸಿನಿಮಾ ಭಾರಿ ಯಶಸ್ಸು ಕಂಡ ಕಾರಣ, ಮಾಧ್ಯಮದ ಮುಂದೆ ಮಾತನಾಡುತ್ತ, ತಾನು ಮತ್ತು ತನ್ನ ಪಕ್ಕದಲ್ಲಿ ಕೂತಿದ್ದ ಸಹ ಕಲಾವಿದರಾದ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂರನ್ನು ತೋರಿಸಿ “ನಾವು ಮೂವರು ’ಅಮರ್, ಅಕ್ಬರ್, ಆಂಟೋನಿ’ ಇದ್ದ ಹಾಗೆ; ಕಲೆ ಕೆಲಸ ಮಾಡೋದೆ ಹೀಗೆ; ಕಲೆ ಮತ್ತು ಕಲಾವಿದರಿಗೆ ಯಾವುದೇ ಧರ್ಮ, ಜಾತಿ ಇಲ್ಲ. ವೈಯಕ್ತಿಕವಾಗಿ ನಾವು ಯಾವ ಹಿನ್ನೆಲೆಯವರಾಗಿದ್ದರೂ ಒಂದು ಪಾತ್ರವಾಗಿ ರಂಜಿಸುವುದಷ್ಟೇ ನಮ್ಮ ಆದ್ಯತೆ” ಎಂದು ಹೇಳಿದರು. (ಈ ಸಿನಿಮಾದ ಹಾಡೊಂದರಲ್ಲಿ ನಟಿ ಧರಿಸಿದ ಬಟ್ಟೆ ಮತ್ತು ಹಾಡಿನ ಸಾಹಿತ್ಯದಿಂದ, ಈ ದೇಶದ ಬಲಪಂಥೀಯ ಸಂಘಟನೆ ಆರ್‌ಎಸ್‌ಎಸ್ ಸಂಕೇತಿಸುವ ಕೇಸರಿ ಬಣ್ಣಕ್ಕೆ ಅಪಮಾನ ಮಾಡಲಾಗಿದೆ ಎಂದು, ಆರ್‌ಎಸ್‌ಎಸ್ ಸೇರಿದಂತೆ ಹಲವು ಬಲಪಂಥೀಯ ಮತ್ತು ಹಿಂದುತ್ವ ಸಂಘಟನೆಗಳು ಈ ಸಿನಿಮಾವನ್ನು ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದರು).

ಇದನ್ನೂ ಓದಿ : ಕಾಂತಾರವಷ್ಟೇ ಅಲ್ಲ, ನಿಮ್ಮ ಸಿನಿಮಾವೂ ಆಸ್ಕರ್‌ಗೆ ಅರ್ಹತೆ ಪಡೆಯಬಹುದು: ಷರತ್ತುಗಳು ಅನ್ವಯ!

ಸಂಗತಿ 3: ಇವತ್ತಿಗೆ ತಮಿಳು ಚಿತ್ರರಂಗದ ’ಗೇಮ್ ಚೇಂಜರ್ ಎಂದೇ ಚರ್ಚೆ ಆಗುತ್ತಿರುವ ನಿರ್ದೇಶಕ ಮತ್ತು ನಿರ್ಮಾಪಕ ಪ.ರಂಜಿತ್ ಸಂದರ್ಶನವೊಂದರಲ್ಲಿ, “ನನ್ನ ಮೊದಲ ಸಿನಿಮಾ ’ಅಟ್ಟಕತ್ತಿ’ ನಂತರ ಒಬ್ಬ ಕ್ರಿಯೆಟೀವ್ ಆರ್ಟಿಸ್ಟ್‌ಗೆ ಇರಬಹುದಾದ ಸರ್ವ ಸ್ವಾತಂತ್ರ್ಯವನ್ನು ನಾನು ಅನುಭವಿಸಲೇ ಇಲ್ಲ; ಈ ಸಿನಿಮಾದ ಯಶಸ್ಸು ಮತ್ತು ಅದು ಪ್ರೇಕ್ಷಕನ ಮೇಲೆ ಬೀರಬಹುದಾದ ಪರಿಣಾಮ ನನಗೆ ಬೇರೆಯದೇ ಆದ ಜವಾಬ್ದಾರಿಯನ್ನು ನೀಡಿತು. ಸಿನಿಮಾದ ಕೆಲವು ಸನ್ನಿವೇಶಗಳನ್ನು ಇನ್ನಷ್ಟು ಕ್ರಾಫ್ಟ್ ಮಾಡಿ ಪ್ರೇಕ್ಷಕನನ್ನು ರಂಜಿಸಬಹುದು ಅನಿಸಿದಾಗಲೆಲ್ಲ, ಕ್ರಾಫ್ಟ್‌ಗಿಂತ ಪ್ರೇಕ್ಷಕನಿಗೆ ಯಾವುದನ್ನು ದಾಟಿಸಬೇಕು ಎಂಬ ಜವಾಬ್ದಾರಿ ನನ್ನ ಆದ್ಯತೆ ಆಗಿರುತ್ತದೆ” ಎಂದು ಹೇಳಿದ್ದಾರೆ.

ಸಂಗತಿ 4: ಒಬ್ಬ ನಟನ ಮಗ ಈಜು ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದಕ್ಕೆ ಆಡಳಿತರೂಢ ರಾಜಕೀಯ ಪಕ್ಷದ ಸ್ಪೋಕ್ಸ್‌ಪರ್ಸನ್ ಒಬ್ಬರು ಆ ನಟನಿಗೆ ಅಭಿನಂದನೆ ತಿಳಿಸುತ್ತಾರೆ. ಆ ನಟ ಅದನ್ನು ಶೇರ್ ಮಾಡಿಕೊಳ್ಳುತ್ತಾರೆ. ಇತ್ತೀಚಿಗೆ ಕರ್ನಾಟಕ ಕೆಲ ಕಲಾವಿದರನ್ನು ಪ್ರಧಾನಿಗಳು ಔತಣಕ್ಕೆ ಆಹ್ವಾನಿಸುತ್ತಾರೆ. ತುಂಬಾ ರೋಮಾಂಚನಗೊಂಡ ಕಲಾವಿದರು ಬಹಳ ವಿನೀತರಾಗಿ ಅವರೊಂದಿಗಿನ ಪಟವನ್ನು ಹಂಚಿಕೊಳ್ಳುತ್ತಾರೆ.

ಕಲೆ ಮತ್ತು ಕಲಾವಿದನ ಸ್ವಾತಂತ್ರ್ಯ, ಆದ್ಯತೆ, ಪ್ರಾತಿನಿಧ್ಯ, ಜವಾಬ್ದಾರಿ ಮತ್ತು ಸ್ಪಂದನೆ ಇತ್ಯಾದಿಗಳ ಬಗ್ಗೆ ಹಲವಾರು ದೃಷ್ಟಿಕೋನಗಳಿಂದ ಚರ್ಚಿಸಬಹುದಾಗಿದ್ದರೂ, ಇವತ್ತಿನ ರಾಜಕೀಯ ಸನ್ನಿವೇಶದಲ್ಲಿ, ಸಮಕಾಲಿನ ತಲ್ಲಣಗಳಿಗೆ ಕಲೆ ಮತ್ತು ಕಲಾವಿದನ ಕನಿಷ್ಟ ಹೊಣೆಗಾರಿಕೆ ಏನಾಗಿರಬೇಕು ಎಂಬುದು ಇಂದು ಬಹು ಚರ್ಚಿತ ಸಂಗತಿಯಾಗಿದೆ.

ಮೊದಲ ಸಂಗತಿಗೆ ಬರುವುದಾದರೆ, The Birth of Nation’ ನಂತಹ ದ್ವೇಷ ಬಿತ್ತುವ ಸಿನಿಮಾಗಳು ಡೆಮಾಕ್ರಟಿಕ್ ವ್ಯವಸ್ಥೆಯ ಈ ದೇಶದಲ್ಲಿ ಪ್ರಭುತ್ವದ ಒತ್ತಾಸೆ, ಬೆಂಬಲದೊಂದಿಗೆ ಉತ್ಪತ್ತಿಯಾಗಿ ಅದಕ್ಕೆ ಪ್ರೇಕ್ಷಕರ ಮನ್ನಣೆ ಸಿಗುತ್ತಿರುವುದು ವಿಪರ್ಯಾಸ. ಈ ದೇಶದ ಅಲ್ಪಸಂಖ್ಯಾತ ಸಮುದಾಯವನ್ನು ಟಾರ್ಗೆಟ್ ಮಾಡಿ ’ಐತಿಹಾಸಿಕ ಸತ್ಯಸಂಗತಿ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಸುಳ್ಳುಸುಳ್ಳು ಸಂಗತಿಗಳನ್ನು ಪೋಣಿಸಿ ಅಮಾನುಷ, ದ್ವೇಷದ ಸಿನಿಮಾವೊಂದನ್ನು ನಿರ್ಮಿಸಲಾಗುತ್ತದೆ; ಬಲಪಂಥದ ಸಂಘಟನೆಗಳು, ಅದನ್ನು ಪ್ರತಿನಿಧಿಸುವ ರಾಜಕೀಯ ಪಕ್ಷ ಅದನ್ನು ಸಂಭ್ರಮಿಸುತ್ತವೆ; ಅಷ್ಟು ಸಾಲದೆಂಬಂತೆ ಸಂವಿಧಾನದ ಬದ್ಧವಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಪ್ರಭುತ್ವ ಕೂಡ ಈ ಸಿನಿಮಾ ವೀಕ್ಷಣೆಗೆ ವಿಶೇಷ ರಿಯಾಯತಿ ನೀಡಿ, ಯಾವುದೇ ಲಜ್ಜೆ ಇಲ್ಲದೆ ಸಾಮೂಹಿಕ ಪ್ರದರ್ಶನವನ್ನು ಕೂಡ ಏರ್ಪಡಿಸುತ್ತದೆ ಇನ್ನೂ ಈ ದೇಶದ ಸಿನಿಮಾ ತಜ್ಞರು ಇದನ್ನ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಸ್ಪರ್ಧೆಗಿಡುತ್ತಾರೆ. ಆದರೆ, ಸಿನಿಮಾ ನೋಡಿದ ತೀರ್ಪುಗಾರರು ಅದೇ ವೇದಿಕೆಯಲ್ಲಿ ಈ ಸಿನಿಮಾವನ್ನು ಹೊತ್ತು ಮೆರೆಸಿದ ಪ್ರಭುತ್ವದ ಪ್ರತಿನಿಧಿಗಳು ಮತ್ತು ಸ್ಪರ್ಧೆಗೆ ಆಯ್ಕೆ ಮಾಡಿದ ತಜ್ಞರ ಮುಂದೆಯೇ ’ಈ ಸಿನಿಮಾವೊಂದು ಅಮಾನವೀಯ ಪ್ರಾಪಗಾಂಡದಿಂದ ಕೂಡಿದ ಕೆಟ್ಟ ಸಿನಿಮಾ, ಇದನ್ನ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆ ಮಾಡಿದ್ದು ಬಹಳ ಆಶ್ಚರ್ಯವಾಗಿದೆ’ ಎಂದು ವಿಷಾದ ವ್ಯಕ್ತಪಡಿಸುತ್ತಾರೆ.

ಕಾಶ್ಮೀರ್ ಫೈಲ್ಸ್‌ನಂತಹ ಸಿನಿಮಾ ಸಮಾಜಕ್ಕೆ ಯಾವ ಸಂದೇಶ ನೀಡಿತು, ಬಹುಸಂಖ್ಯಾತ ಜನ ಸಮುದಾಯದೊಳಗೆ ಯಾವ ಅಭಿಪ್ರಾಯವನ್ನು ರೂಪಿಸಿತು ಮತ್ತು ತೆರೆಕಂಡ ನಂತರದಲ್ಲಿ ಇದರ ಬಗ್ಗೆ ಯಾವ ರೀತಿಯ ಚರ್ಚೆಗಳು ನಡೆದವು ಎಂದು ಗಮನಿಸಿದರೆ, ಭವಿಷ್ಯದಲ್ಲಿ ಇಂತಹ ಸಿನಿಮಾಗಳು ಬೀರುವ ಪರಿಣಾಮಗಳ ಬಗ್ಗೆ ಗಾಬರಿಯಾಗುತ್ತದೆ.

ಇದನ್ನೂ ಓದಿ: ಗೌರಿ ಸಾಕ್ಷ್ಯಚಿತ್ರ; ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಡಬೇಕಾದ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಿನಿಮಾ

ಇತ್ತೀಚಿಗೆ ಕನ್ನಡದಲ್ಲಿ ತೆರೆಕಂಡು ಭಾರಿ ಯಶಸ್ಸು ಪಡೆದು ನಂತರ ದೇಶದ ಇತರೆ ಭಾಷೆಗಳಲ್ಲೂ ಡಬ್ ಆಗಿ ತೆರೆಕಂಡ ’ಕಾಂತಾರ’ ಸಿನಿಮಾದಲ್ಲಿ ಸ್ಥಳೀಯ ಮತ್ತು ತಳ ಸಮುದಾಯದ ಆಚರಣೆಗಳನ್ನು ವೈದಿಕತೆಯ ಪೋಷಾಕಿನಡಿ ಬಿಂಬಿಸಿತ್ತು; ಬಹುತ್ವವನ್ನು ಪ್ರತಿಪಾದಿಸುವ ತಳ ಸಮುದಾಯದ ಆಚರಣೆಗಳನ್ನು ತಮ್ಮ ಏಕ ಸಂಸ್ಕೃತಿಯ ಪ್ರಪಗಾಂಡಕ್ಕೆ ಅಪ್ರಾಪ್ರಿಯೇಟ್ ಮಾಡಿಕೊಳ್ಳಲಾಗಿತ್ತು; ಇದರ ಬಗ್ಗೆ ಆ ಪ್ರದೇಶದ ಮೂಲದವರಾದ ಪತ್ರಕರ್ತರೊಬ್ಬರು ಬಹಳ ವಿವರವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೆಲವು ಹಿರಿಯ ಪತ್ರಕರ್ತರು-ಅಕಾಡೆಮಿಕ್‌ಗಳು ’ಸಿನಿಮಾ ನೋಡಿ ಪ್ರಜ್ಞೆ ಬೆಳೆಸಿಕೊಳ್ಳಲು ಸಾಧ್ಯವೆ’ ಎಂದು ವ್ಯಂಗ್ಯ ಮಾಡಿದರು. ಈಗ ಈ ಸಿನಿಮಾದ ಯಶಸ್ಸಿನಿಂದ ಇದರ ನಿರ್ದೇಶಕ ಮತ್ತು ನಟ ಯಾವ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ, ಯಾವ ಮಾತುಗಳನ್ನು ಆಡುತ್ತಿದ್ದಾನೆ ಮತ್ತು ಯಾವ ಹಿತಾಶಕ್ತಿಗಳು ಇವನನ್ನ ತಮ್ಮ ಸಾಂಸ್ಕೃತಿಕ ರಾಯಭಾರಿಯ ರೀತಿ ದೇಶದ ಮೂಲೆಮೂಗೆ ಭಾಷಣ ಬಿಗಿಯಲು ಕಳುಹಿಸಿದ್ದಾರೆ ಎಂಬುದನ್ನು ಗಮನಿಸಿದರೆ ಇಂತಹ ಸಿನಿಮಾಗಳ ನಿರ್ಮಾಣದ ಹಿಂದಿನ ರಹಸ್ಯಸೂಚಿ ಅರ್ಥವಾದೀತು!

ಮತ್ತೆ ಶಾರುಕ್ ಖಾನ್ ಹೇಳಿಕೆಗೆ ಬರೋಣ. ಕಲೆ ಮತ್ತು ಕಲಾವಿದನ ಬಗ್ಗೆ ಈ ರೀತಿಯ ಸರಳ, ರೊಮ್ಯಾಂಟಿಕ್ ಹಾಗು ತಟಸ್ಥ ಹೇಳಿಕೆ ಕೊಡುವಷ್ಟು ಕನಿಷ್ಟ ತಿಳಿವಳಿಕೆ ಇರುವ ವ್ಯಕ್ತಿಯೇ ಶಾರುಕ್ ಖಾನ್? ಖಂಡಿತ ಇಲ್ಲ. ಈತ ಒಬ್ಬ ಮುಸ್ಲಿಂ ಎಂಬ ಏಕಮಾತ್ರ ಕಾರಣಕ್ಕಾಗಿ, 2010ರಲ್ಲಿ ’ಮೈ ನೇಮ್ ಈಸ್ ಖಾನ್ ಸಿನಿಮಾ ಬಿಡುಗಡೆಗೆ ಬಲಪಂಥದ ಸಂಘಟನೆಗಳು ತೊಂದರೆ ಒಡ್ಡಿದರು. 2017ರಲ್ಲಿ ತನ್ನ ನಿರ್ಮಾಣದ ’ರಾಯೀಸ್ ಸಿನಿಮಾದಲ್ಲಿ ಪಾಕಿಸ್ತಾನಿ ನಟಿಗೆ ಅವಕಾಶ ನೀಡಲಾಗಿದೆ ಎಂಬ ಕಾರಣ ನೀಡಿ ಕಿರುಕುಳ ಕೊಡಲಾಯಿತು. ಖಾಸಗಿ ಒಡೆತನದ ಬಂದರೊಂದರಲ್ಲಿ ನೂರಾರು ಟನ್ ಮಾದಕ ವಸ್ತು ದೊರೆತ ಸುದ್ದಿಯನ್ನು ಮರೆಮಾಚಿ ಮಿಲಿಗ್ರಾಂ ಮಾದಕವಸ್ತು ಹೊಂದಿದ್ದ ಎಂಬ ಆರೋಪದಡಿ ನಟನ ಮಗನನ್ನು ಬಂಧಿಸಿದ್ದು ಹಾಗು ಮಾಧ್ಯಮಗಳು ಪ್ರತಿದಿನ ಆಹೋರಾತ್ರಿ ಇದನ್ನ ಸುದ್ದಿ ಮಾಡಿದ್ದಾಯಿತು. ಆದರೆ ಶಾರುಕ್ ಖಾನ್ ವೈಕ್ತಿಕವಾಗಿ ಎಷ್ಟು ಪ್ರಭುದ್ಧ ಮತ್ತು ಬುದ್ಧಿವಂತ ಎಂಬುದಕ್ಕೆ ಸಾಕ್ಷಿ ಆತನ ಮಗ ಈ ಪ್ರಕರಣದಲ್ಲಿ ಯಾವುದೇ ಉಹಾಪೋಹಗಳಿಗೂ ಎಡೆಮಾಡಿಕೊಡದೆ ನ್ಯಾಯಾಲಯದ ಮುಖಾಂತರ ಬಿಡುಗಡೆಗೊಂಡಿದ್ದು.

ಸಿನಿಮಾ ಮನರಂಜನೆ ಮಾತ್ರ, ಸಿನಿಮಾದಿಂದ ಯಾರನ್ನು ಪ್ರೇರೇಪಿಸಲಾಗುವುದಿಲ್ಲ, ಕಲೆಗೆ ಜಾತಿ, ಧರ್ಮ ಎಂಬ ಭೇದ ಯಾವುದು ಇಲ್ಲ ಅಂತೆಲ್ಲ ವಾದಿಸುವವರು ಸಾಮಾನ್ಯವಾಗಿ ಒಂದು ಸಿನಿಮಾ ಯಾವ ವಿಷಯವನ್ನು ಡೀಲ್ ಮಾಡುತ್ತಿದೆ ಎಂಬುದಕ್ಕಿಂತ ಹೆಚ್ಚಾಗಿ ಅದು ತಾಂತ್ರಿಕವಾಗಿ ಎಷ್ಟು ಉತ್ಕೃಷ್ಟವಾಗಿದೆ ಎಂಬುದರ ಬಗ್ಗೆಯೇ ಹೆಚ್ಚು ಕಾಳಜಿ ಹೊಂದಿರುವವರು. ಪ. ರಂಜಿತ್ ಸಿನಿಮಾ ಮತ್ತು ಅವರು ಸಾರ್ವಜನಿಕ ವೇದಿಕೆಗಳಲ್ಲಿ ಆಡುವ ಪ್ರತಿಯೊಂದು ಮಾತುಗಳನ್ನು ಕೇಳಿಸಿಕೊಳ್ಳಬೇಕು. ’ಸರಪಟ್ಟ ಪರಂಬರೈ’ ಸಿನಿಮಾದ ಎರಡನೇ ಭಾಗದಲ್ಲಿ ಪ್ರೋಟಗನಿಸ್ಟ್ ಕಬಿಲನ್‌ನ ತಾಯಿ ಬಾಕಿಯಮ್ಮ ಮತ್ತು ಮಾರಿಯಮ್ಮ ಪಾತ್ರಗಳನ್ನು ಚಿತ್ರಿಸಿರುವ ಕುಟುಂಬದ ದೃಶ್ಯಗಳಿಂದ ಸಿನಿಮಾ ಕೊಂಚ ಲ್ಯಾಗ್ ಆಯ್ತು; ಆ ದೃಶ್ಯಗಳು ಇಲ್ಲದೆ ಇದ್ದಿದ್ದರೆ ಸಿನಿಮಾ ಇನ್ನಷ್ಟು ತೀವ್ರವಾಗಿರೋದು ಅನ್ನುವ ವಿಮರ್ಶೆಗಳು ಬಂದವು. ಅದಕ್ಕೆ ಪ. ರಂಜಿತ್ ಹೇಳೋದು: “ನಮ್ಮ ಬದುಕು ಇರೋದೆ ಹೀಗೆ; ಆ ಬದುಕನ್ನು ಕಟ್ಟಿಕೊಡುವ ದೃಶ್ಯಗಳನ್ನು ಬಿಟ್ಟುಬಿಡೋದು ಹೇಗೆ” ಎಂದು.
ಇನ್ನು ನಾಲ್ಕನೇ ಸಂಗತಿ; ಪ್ರಭುತ್ವದೊಂದಿಗೆ ಕಲಾವಿದರು ಗುರುತಿಸಿಕೊಳ್ಳುವುದು, ಅದರ ಉತ್ತೇಜನ ಮತ್ತು ಪ್ರೋತ್ಸಾಹಕ್ಕೆ ಕೃತಜ್ಞರಾಗಿರುವುದು ಹೊಸ ಸಂಗತಿಯೇನಲ್ಲ. ಆದರೆ ಯಾವ ಮಾದರಿಯ ಪ್ರಭುತ್ವದೊಂದಿಗೆ ಗುರುತಿಸಿಕೊಳ್ಳುತ್ತಾರೆ ಎಂಬುದು ಕಲಾವಿದನ ನೈತಿಕತೆಯನ್ನು ನಿರ್ಧರಿಸುತ್ತದೆ. ಫ್ಯಾಸಿಸ್ಟ್ ಮನಸ್ಥಿತಿಯ ನಿರಂಕುಶ ಪ್ರಭುತ್ವ, ಈ ನೆಲದ ಬಹುತ್ವ ಮತ್ತು ಭಿನ್ನತೆಯನ್ನೆಲ್ಲ ಹತ್ತಿಕ್ಕುವ, ಆಳದಲ್ಲಿ ದ್ವೇಷದ, ತರತಮದ, ಅಮಾನವೀಯ ಮನಸ್ಥಿತಿಯ, ಕಾಲಕಾಲಕ್ಕೆ ಮುಖವಾಡಗಳನ್ನು ಧರಿಸುವ ಅಧಿಕಾರದಿಂದ ದೂರವುಳಿಯುವುದನ್ನು ಕಲೆ ಕಲಿಸಿಕೊಡಬೇಕಲ್ಲವೇ? ತನ್ನ ಅಮಾನವೀಯ ಆಲೋಚನೆಯ ಪ್ರಚಾರಕ್ಕೆ ಅಪ್ರಾಪ್ರಿಯೇಟ್ ಮಾಡಿಕೊಳ್ಳಲು ಯಾರನ್ನಾದರೂ ಬಳಸಿಕೊಳ್ಳುವ ಪ್ರಭುತ್ವದ ಜೊತೆಗೆ ಕಲಾವಿದರು ಇಂದಿನ ವಿಷಮ ಕಾಲಘಟ್ಟದಲ್ಲಿ ಗುರುತಿಸಿಕೊಳ್ಳುವುದಕ್ಕೆ ಕೊಂಚವಾದರೂ ಹಿಂಜರಿಕೆ ಇರಬೇಕಲ್ಲವೇ. ಈ ಮಾತು ಈಗಾಗಲೆ ಈ ಅಮಾನವೀಯ ಪ್ರಭುತ್ವದ ಪ್ರತಿಪಾದಕ/ಪ್ರಚಾರಕ/ಕಾಲಾಳು ಆಗಿರುವ ಕಲಾವಿದರನ್ನು ಉದ್ದೇಶಿಸಿ ಹೇಳಿದ್ದಲ್ಲ.

ಕಡೆಯದಾಗಿ:
ಈ ಬರೆಹದ ಪ್ರಾರಂಭದಲ್ಲಿ ಹಂಚಿಕೊಂಡ ಮಾತುಗಳು, ಸದ್ಯ ಜೈಲು ಶಿಕ್ಷೆಯಲ್ಲಿರುವ ಇರಾನ್ ಸಿನಿಮಾ ನಿರ್ದೇಶಕ ಜಫಾರ್ ಪನಾಹಿ ತನ್ನ ‘No Bears’ ಸಿನಿಮಾ ವೆನಿಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಸಂದರ್ಭದಲ್ಲಿ, ತಾನು ಅಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ಚಿತ್ರೋತ್ಸವ ಸಮಿತಿಗೆ ಬರೆದ ಪತ್ರದಲ್ಲಿನ ಕೆಲ ಸಾಲುಗಳು. 2003ರಿಂದ ಇಲ್ಲಿಯವರೆಗೆ ಜಫಾರ್ ಪನಾಹಿಯನ್ನು ಅಲ್ಲಿನ ಪ್ರಭುತ್ವ ಹಲವಾರು ಬಾರಿ ಬಂಧಿಸಿದೆ. ಆರು ವರ್ಷಗಳ ಜೈಲು ವಾಸ, 20 ವರ್ಷಗಳ ಕಾಲ ಸಿನಿಮಾ ಮಾಡದಂತೆ ನಿಷೇಧ, ಹೌಸ್ ಅರೆಸ್ಟ್, ಇರಾನ್‌ನಿಂದ ಹೊರಹೋಗದಂತೆ ನಿಷೇಧ-ಹೀಗೆ ಹಲವಾರು ಶಿಕ್ಷೆಗಳನ್ನು ಜಫಾರ್ ಪನಾಹಿ ಮೇಲೆ ಹೇರಿದೆ. ಆದರೆ ಪನಾಹಿ ಇದ್ಯಾವುದಕ್ಕೂ ಹೆದರಿಲ್ಲ, ಪ್ರಭುತ್ವದೊಂದಿಗೆ ಎಂದಿಗೂ ರಾಜಿ ಆಗಿಲ್ಲ. ಮನೆಯೊಳಗೆ ಬಂಧಿಸಿದರೆ ಅಲ್ಲಿಯೇ ಸಿನಿಮಾ ಮಾಡುವ, ಕಾರಿನೊಳಗೆ ಬಂಧಿಸಿದರೆ ಅಲ್ಲಿಯೇ ಸಿನಿಮಾ ಮಾಡಿ ತಾನು ಬದುಕುವ ಸಮಾಜದ ವಾಸ್ತವವನ್ನು ತನ್ನ ಕಲಾ ಮಾಧ್ಯಮದ ಮೂಲಕ ಬಿಂಬಿಸಿ ದಬ್ಬಾಳಿಕೆಯನ್ನು ಪ್ರತಿರೋಧಿಸುವ ಬಂಡುಕೋರ. ಫ್ಯಾಸಿಸ್ಟ್ ಪ್ರಭುತ್ವದ ಕಾಲಾಳುಗಳಂತೆ ವರ್ತಿಸುತ್ತಿರುವ ಇವತ್ತಿನ ಕಲಾವಿದರ ಬಗ್ಗೆ ಹೇಸಿಗೆ ಹುಟ್ಟುತ್ತಿರುವ ಈ ಹೊತ್ತಿನಲ್ಲಿ ಜಫಾರ್ ಪನಾಹಿ, ಮೊಹಮ್ಮದ್ ರಸೌಲೊಫ್, ಪ.ರಂಜಿತ್, ಕೆನ್ ಲೋಚ್, ಸ್ಪೈಕ್ ಲೀ, ಮಾರಿ ಸೆಲ್ವರಾಜ್ ಅಂತ ಆನೇಕ ಕಲಾ ನಿರ್ಮಾತೃಗಳು, ಕಲೆ ಮತ್ತು ಕಲಾವಿದನ ಮೇಲಿನ ನಂಬುಗೆಯನ್ನು ಉಳಿಸಿದ್ದಾರೆ.

ಯದುನಂದನ್ ಕೀಲಾರ
ಲೇಖಕರಿಗೆ ಜಾಗತಿಕವಾಗಿ ಹಲವು ಭಾಷೆಗಳ-ಪ್ರದೇಶಗಳ ಸಿನೆಮಾಗಳ ಬಗ್ಗೆ ಅಪಾರ ಕುತೂಹಲ. ಸಿನೆಮಾ ಸಮಾಜವನ್ನು ಪ್ರಭಾವಿಸುವುದರ ಬಗ್ಗೆ ಗಮನ ಹರಿಸಿ ಚಲನಚಿತ್ರಗಳ ಬಗ್ಗೆ ಬರೆಯುವ ಯದುನಂದನ್, ಹಲವು ಜನಪರ ಚಲನಚಿತ್ರ ಉತ್ಸವಗಳ ಭಾಗವಾಗಿ ದುಡಿದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನ ಪ್ರಕರಣ; ದಾಳಿಕೋರ ಥಾಮಸ್ ಮ್ಯಾಥ್ಯೂ ಗುರುತು ಪತ್ತೆ

0
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನದಲ್ಲಿ ಭಾಗಿಯಾಗಿರುವ ಶಂಕಿತನನ್ನು ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಲಾಗಿದೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. ಎಫ್‌ಬಿಐ...