Homeಮುಖಪುಟಮೀಸಲು ಕ್ಷೇತ್ರದ ತಲ್ಲಣ ಹೇಳುವ 'ಧೀರ ಭಗತ್ ರಾಯ್‌' ಚಿತ್ರದ ಟೀಸರ್ ಬಿಡುಗಡೆ

ಮೀಸಲು ಕ್ಷೇತ್ರದ ತಲ್ಲಣ ಹೇಳುವ ‘ಧೀರ ಭಗತ್ ರಾಯ್‌’ ಚಿತ್ರದ ಟೀಸರ್ ಬಿಡುಗಡೆ

"ಇಷ್ಟು ದಿನ ನಾವು ತಿಂದು ಬಿಟ್ಟಿದ್ದನ್ನು ತಿನ್ನುತ್ತಿದ್ದ ನಿಮಗೆ, ನಮ್ಮ ವಿರುದ್ಧವೇ ಮಾತಾಡುವಷ್ಟು ಧೈರ್ಯ ಬಂದಿದ್ದು ಹೇಗೆ" ಎಂಬ ಸಂಭಾಷಣೆಯು ಇದು ಜಾತಿ ದೌರ್ಜನ್ಯದ ಕಥೆ ಹೇಳುತ್ತಿದೆ ಎಂದು ಸೂಚಿಸುತ್ತದೆ.

- Advertisement -
- Advertisement -

ಜಾತೀಯತೆ, ಜಾತಿ ತಾರತಮ್ಯ ಭಾರತದ ವಾಸ್ತವ. ಇಂತಹ ರಾಷ್ಟ್ರದಲ್ಲಿ ಸಾಮಾಜಿಕ ನ್ಯಾಯ ಜಾರಿಗೊಳಿಸುವುದಕ್ಕಾಗಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಸಂವಿಧಾನದ ಮೂಲಕ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯದಲ್ಲಿ ಮೀಸಲಾತಿ ಜಾರಿಗೊಳಿಸಿದರು. ಆ ಸಂದರ್ಭದಲ್ಲಿ ದಲಿತರಿಗೆ ಪ್ರತ್ಯೇಕ ಮತ ಕ್ಷೇತ್ರ ಮತ್ತು ದ್ವಿಮತಕ್ಕಾಗಿ ಹೋರಾಡಿದ್ದರು. ಆದರೆ ಗಾಂಧೀಜಿ ಸೇರಿದಂತೆ ಹಲವರ ವಿರೋಧದಿಂದಾಗಿ ಅದು ಜಾರಿಯಾಗಲಿಲ್ಲ. ಆನಂತರ ದೇಶಾದ್ಯಂತ ಮೀಸಲು ಕ್ಷೇತ್ರಗಳು ಅಸ್ತಿತ್ವಕ್ಕೆ ಬಂದವು. ಮೀಸಲಾತಿ ಜಾರಿಯಾದಾಗಿನಿಂದ ಆ ಕ್ಷೇತ್ರಗಳಲ್ಲಿ ಆದ ಬದಲಾವಣೆಗಳೇನು? ಇಂದಿನ ಪರಿಸ್ಥಿತಿ ಹೇಗಿದೆ? ಈ ಎಲ್ಲಾ ವಿಷಯಗಳನ್ನು ಸಿನಿಮಾ ಮೂಲಕ ಹೇಳಲು ಹೊರಟಿದ್ದಾರೆ ಯುವ ನಿರ್ದೇಶಕ ಕರ್ಣನ್.

ಅವರು ತಮ್ಮ ಬಹುನಿರೀಕ್ಷಿತ ಚಿತ್ರ ‘ಧೀರ ಭಗತ್ ರಾಯ್‌’ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದು ಎಲ್ಲೆಡೆ ಪ್ರಸಂಶೆಯ ಜೊತೆಗೆ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ. “ಇಷ್ಟು ದಿನ ನಾವು ತಿಂದು ಬಿಟ್ಟಿದ್ದನ್ನು ತಿನ್ನುತ್ತಿದ್ದ ನಿಮಗೆ, ನಮ್ಮ ವಿರುದ್ಧವೇ ಮಾತಾಡುವಷ್ಟು ಧೈರ್ಯ ಬಂದಿದ್ದು ಹೇಗೆ” ಎಂಬ ಟೀಸರ್‌ನಲ್ಲಿನ ಸಂಭಾಷಣೆಯು ಇದು ಜಾತಿ ದೌರ್ಜನ್ಯದ ಕಥೆ ಹೇಳುತ್ತಿದೆ ಎಂದು ಸೂಚಿಸುತ್ತದೆ.

ನಿರ್ದೇಶಕ ಕರ್ಣನ್

ತಮಿಳು, ತೆಲುಗು ಭಾಷೆಗಳಲ್ಲಿ ಜಾತಿ ದೌರ್ಜನ್ಯದ ಹಲವಾರು ಚಿತ್ರಗಳು ಬಂದು ಸಾಕಷ್ಟು ಗಮನ ಸೆಳೆದಿವೆ. ಅಸುರನ್, ಪಲಾಸ, ಕರ್ಣನ್, ಸರ್ಪಟ್ಟ ಪರಂಬರೈ, ಲವ್ ಸ್ಟೋರಿ, ಪರಿಯೆರುಮ್ ಪೆರುಮಾಳ್, ಜೈಭೀಮ್ ಥರದ ಸಿನಿಮಾಗಳು ಇಡೀ ದೇಶಾದ್ಯಂತ ಚರ್ಚೆಗೆ ಒಳಪಟ್ಟಿವೆ. ಕನ್ನಡದಲ್ಲಿ ಇಂತಹ ಸಿನಿಮಾಗಳು ಬರುತ್ತಿಲ್ಲ ಎಂಬ ಕೊರಗು ನೀಗಿಸಲು ಮುಂದಾಗಿದ್ದಾರೆ ನಿರ್ದೇಶಕ ಕರ್ಣನ್.

ನೆಲಮಂಗಲದ ಅರುಣ್‌ರವರು ಒಂದು ದಶಕದಿಂದ ಚಿತ್ರರಂಗದಲ್ಲಿದ್ದಾರೆ. ತಮಿಳುನಲ್ಲಿ ಮಾರಿ ಸೆಲ್ವರಾಜ್ ನಿರ್ದೇಶನದ, ಧನುಶ್ ಅಭಿನಯದ ಕರ್ಣನ್ ಚಿತ್ರ ಬಿಡುಗಡೆಯಾದ ಮೇಲೆ ಆ ಚಿತ್ರದ ಪ್ರಭಾವಕ್ಕೆ ಒಳಗಾಗಿ ಅವರು ತಮ್ಮ ಹೆಸರನ್ನು ಕರ್ಣನ್ ಎಂದು ಬದಲಿಸಿಕೊಂಡಿದ್ದಾರೆ!. ಅವರ ಚೊಚ್ಚಲ ಚಿತ್ರವೇ ‘ಧೀರ ಭಗತ್ ರಾಯ್‌’ ಆಗಿದೆ.

’ಕಥಾ ನಾಯಕ ಭಗತ್ ಎಂಬುವವ ಒಬ್ಬ ವಕೀಲ. ಆತ ತನ್ನ ಜನರಿಗಾಗಿ ಹೇಗೆ ಗ್ಯಾಂಗ್‌ಸ್ಟರ್‌ ಆಗಿ ಬಳಿಕ ರಾಜಕೀಯ ನಾಯಕನಾಗುತ್ತಾನೆ ಎಂಬುದು ಕಥೆ. ರಾಜಕೀಯ ಶಕ್ತಿ ಇದ್ದರೇ ಸಮಾಜದಲ್ಲಿ ಬದಲಾವಣೆ ಸಾಧ್ಯ. ಜಾತಿಮುಕ್ತ ಸಮಾಜ ನಿರ್ಮಾಣಕ್ಕೆ ರಾಜಕೀಯ ಅಧಿಕಾರ ಬೇಕು. ಆ ಅಧಿಕಾರದಿಂದ ವಂಚಿತರಾದವರ ಕಥೆ ಹೇಳಲು ಹೊರಟಿದ್ದೇನೆ’ ಎನ್ನುತ್ತಾರೆ ಕರ್ಣನ್.

ನಾನುಗೌರಿ.ಕಾಂ ಜೊತೆ ಮಾತನಾಡಿದ ಅವರು, ““ಒಂದು ಮೀಸಲು ಕ್ಷೇತ್ರದಲ್ಲಿ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ. ನಾವು ಆಯ್ಕೆ ಮಾಡಿ ಕಳುಹಿಸುವವರು ನಮಗಾಗಿ ಕೆಲಸ ಮಾಡುತ್ತಾರೆಯೇ…? ಗೆದ್ದ ಶಾಸಕನನ್ನು ಕಂಟ್ರೋಲ್ ಮಾಡುವ ಕೈಗಳು ಯಾವುವು…? ಮೀಸಲು ಕ್ಷೇತ್ರದಲ್ಲಿ ಹೇಗೆ ತಮಗೆ ಬೇಕಾದವರನ್ನು ಗೆಲ್ಲಿಸಿಕೊಳ್ಳುತ್ತಾರೆ. ಆ ಕ್ಷೇತ್ರದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸುಧಾರಣೆಗಳಗಿವೆಯೇ ಎಂಬುದು ಮುಖ್ಯ. ನಾನು ಕೂಡ ಒಬ್ಬ ಮೀಸಲು ಕ್ಷೇತ್ರದಲ್ಲಿ ಬೆಳೆದವನಾದ್ದರಿಂದ, ಅಲ್ಲಿನ ಸಮಸ್ಯೆಗಳ ಜೊತೆಯಲ್ಲಿಯೇ ಬದುಕು ಸಾಗಿಸುತ್ತಿರುವ ಕಾರಣ ಇದರ ಕುರಿತು ಏಕೆ ಸಿನಿಮಾ ಮಾಡಬಾರದು ಎಂಬ ಆಯೋಚನೆ ಬಂತು. 2 ವರ್ಷ ಒಂದು ಕಥೆಯ ಮೇಲೆ ಕೆಲಸ ಮಾಡಿ ಸಿನಿಮಾ ನಿರ್ದೇಶಿಸಿದ್ದೇನೆ” ಎನ್ನುತ್ತಾರೆ.

ರಾಕೇಶ್ ದಳವಾಯಿ ಮತ್ತು ಸುಚರಿತ

ರಂಗಭೂಮಿ ಕಲಾವಿದ ರಾಕೇಶ್ ದಳವಾಯಿ, ನಟ ಶರತ್ ಲೋಹಿತಾಶ್ವ, ನಟಿ ಸುಚರಿತ, ಚೈತ್ರಾ ಕೊಟ್ಟೂರು ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರಕ್ಕೆ ಲೂಸಿಯಾ, ಯೂಟರ್ನ್ ಖ್ಯಾತಿಯ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿಯವರ ಸಂಗೀತವಿದೆ.


ಇದನ್ನು ಓದಿ: ವಿಶ್ಲೇಷಣೆ; ದಲಿತ ರಾಜಕಾರಣ ಮುಂದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...