ದಲಿತ ವಿಧವೆ ಮಹಿಳೆಯ ಮನೆಯಲ್ಲೇ ಬಾಡಿಗೆಗೆ ವಾಸಿಸುತ್ತಿರುವ ಸವರ್ಣೀಯ ಸಮುದಾಯದ ವ್ಯಕ್ತಿಯೊಬ್ಬ ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆ ನಡೆಸಿರುವ ಘಟನೆ ಗದಗ ಜಿಲ್ಲೆಯ ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದು ತಡವಾಗಿ ವರದಿಯಾಗಿದೆ. ಆರೋಪಿಯ ವಿರುದ್ದ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ನರಗುಂದ ಠಾಣೆಯ ಇನ್ಸ್‌ಪೆಕ್ಟರ್ ಜಯಂತ್ ಗೌಳಿ ಅವರು ನಾನುಗೌರಿ.ಕಾಂಗೆ ಶುಕ್ರವಾರ ಹೇಳಿದ್ದಾರೆ.
ನರಗುಂದದ ಎಸ್‌ಟಿ ಸಮುದಾಯಕ್ಕೆ ಸೇರಿರುವ ಸಂಗೀತ ಎಂಬ ವಿಧವೆ ಮಹಿಳೆಯ ಮೇಲೆ, ಅವರ ಮನೆಯಲ್ಲೇ ಬಾಡಿಗೆಗೆ ವಾಸವಿರುವ ಲಿಂಗಾಯತ ಸಮುದಾಯಕ್ಕೆ ಸೇರಿರುವ ಚಂದ್ರೇಗೌಡ ಕಣ್ಣೂರು ಎಂಬ ವ್ಯಕ್ತಿ ಅವಾಚ್ಯ ಪದಗಳಿಂದ ಬೈದು ಹಲ್ಲೆ ನಡೆಸಿದ್ದಾನೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಮಹಿಳೆಯು ತನಗೆ ನ್ಯಾಯ ಕೊಡಿಸುವಂತೆ ಸಾರ್ವಜನಿಕವಾಗಿ ಕೇಳಿಕೊಂಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಸಂಗೀತ ಅವರ ಗಂಡ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇದೀಗ ಅವರು ತನ್ನ ಇಬ್ಬರು ಮಕ್ಕಳೊಂದಿಗೆ ತನ್ನ ಗಂಡನ ಮನೆಯಲ್ಲಿ ವಾಸವಾಗಿದ್ದಾರೆ. ಈ ಹಿಂದೆ ಅತಿಥಿ ಶಿಕ್ಷಕಿಯಾಗಿದ್ದ ಕೆಲಸ ಮಾಡುತ್ತಿದ್ದ ಸಂಗೀತ ಅವರು ಪ್ರಸ್ತುತ ನಿರುದ್ಯೋಗಿಯಾಗಿದ್ದಾರೆ.
ಇದನ್ನೂ ಓದಿ: VHP, ಬಜರಂಗದಳ ಪಕ್ಷವೊಂದರ ಬಾಲಂಗೋಚಿಗಳು; ಕರ್ನಾಟಕ ಅವರ ಜಹಗೀರಲ್ಲ: ಕುಮಾರಸ್ವಾಮಿ ಕಿಡಿ
ಆರೋಪಿ ಚಂದ್ರೇಗೌಡ ಕಳೆದ ತಿಂಗಳು ಕೂಡಾ ತನ್ನ ಮೇಲೆ ಹಲ್ಲೆ ನಡೆಸಿದ್ದನು ಎಂದು ಸಂಗೀತಾ ಹೇಳಿದ್ದಾರೆ. ಆ ಸಮಯದಲ್ಲಿ ಪೊಲೀಸರಿಗೆ ದೂರು ನೀಡಿದ್ದರೂ ಅದನ್ನು ಪ್ರಕರಣ ದಾಖಲಿಸಿರಲಿಲ್ಲ. ನನ್ನನ್ನೇ ಅವಮಾನ ಮಾಡಿ ವಾಪಾಸು ಕಳುಹಿಸಿದ್ದರು. ಆ ಸಮಯದಲ್ಲಿಗ ಗಾಯ ಕೂಡಾ ಆಗಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಇದೀಗ ಮತ್ತೆ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಅವರು ಹೇಳಿದ್ದು, ವಿಡಿಯೊವನ್ನು ಕೂಡಾ ಸಂಗೀತ ಅವರು ನಾನುಗೌರಿ.ಕಾಂಗೆ ಕಳುಹಿಸಿದ್ದಾರೆ.
ವಿಡಿಯೊದಲ್ಲಿ ಆರೋಪಿ ಚಂದ್ರೇಗೌಡ ಅವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯೊದು ಸೇರಿದಂತೆ, ಅವರ ಮಕ್ಕಳ ಮುಂದೆಯೆ ಅವರ ಮೇಲೆ ದೈಹಿಕ ಹಲ್ಲೆ ಕೂಡಾ ನಡೆಸಿರುವುದು ದಾಖಲಾಗಿದೆ.
ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಸಂಗೀತ ಅವರು, “ನನ್ನ ಗಂಡನ ಮನೆಯವರಿಗೆ ಸುಮಾರು ಐದು ಮನೆಗಳು ಇವೆ. ನಾನು ಗಂಡನಿಗೆ ಸೇರಿದ ಮನೆಯಲ್ಲಿ ವಾಸವಿದ್ದೇನೆ. ಆದರೆ ಅತ್ತೆ ಮತ್ತು ನಾದಿನಿ ಅಲ್ಲಿಂದ ತೆರಳುವಂತೆ ಹೇಳುತ್ತಿದ್ದಾರೆ. ನಾನು ಅವರಲ್ಲಿ ಇದೊಂದು ಮನೆ ನನಗೆ ಕೊಡಿ ಎಂದು ಕೇಳುತ್ತಾ ಬಂದಿದ್ದೇನೆ. ಆದರೆ ಅವರು ನಮ್ಮದೇ ಮತ್ತೊಂದು ಮನೆಯಲ್ಲಿ ಬಾಡಿಗೆಗೆ ಇರುವ ಚಂದ್ರೇಗೌಡ ಅವರಿಗೆ ಕುಮ್ಮಕ್ಕು ನೀಡಿ ಕಿರುಕುಳ ನೀಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾನು ಹಿಂದೂ ಅಲ್ಲ, ಲಿಂಗಾಯತ; ನಮ್ಮ ದೇಶದಲ್ಲಿ 12,000 ವಿಭಿನ್ನ ಸಂಸ್ಕೃತಿಗಳಿವೆ: ಕುಂವೀ
ಸಂಗೀತ ಅವರ ಗಂಡ ತೀರಿಹೋದ ನಂತರ ಅವರ ಅತ್ತೆ ಮತ್ತು ಅವರ ನಾದಿನಿ ಅವರಿಗೆ ಕಿರುಕುಳ ನೀಡುತ್ತಲೆ ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ. ತನ್ನ ಇಬ್ಬರು ಮಕ್ಕಳನ್ನು ಇಟ್ಟುಕೊಂಡು ನಿರುದ್ಯೋಗಿ ಆಗಿರುವ ನಾನು ಮನೆ ಬಿಟ್ಟು ಎಲ್ಲಿಗೆ ಹೋಗಲಿ ಎಂದು ಅವರು ಪ್ರಶ್ನಿಸಿದ್ದಾರೆ.
ಚಂದ್ರೇಗೌಡ, ಅವರ ಅಕ್ಕ, ತಂಗಿ, ಅವರ ತಾಯಿ ಮೇಲೆ ದೂರು ನೀಡಿದ್ದಾಗಿ ಸಂಗೀತ ಹೇಳಿದ್ದಾರೆ. ಸಂತ್ರಸ್ತೆ ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದಲಿತ ದೌರ್ಜನ್ಯದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ನರಗುಂಡ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಯಂತ್ ಗೌಳಿ ಅವರು ಹೇಳಿದ್ದಾರೆ.
ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಜಯಂತ್ ಅವರು,“ಮಹಿಳೆಯ ಮೇಲೆ ಹಲ್ಲೆ ನಡೆಸಿರುವುದರ ವಿರುದ್ದ ದಲಿತ ದೌರ್ಜನ್ಯದ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿ ನಾಪತ್ತೆಯಾಗಿದ್ದು, ಇನ್ನೂ ಬಂಧನ ನಡೆದಿಲ್ಲ. ತನಿಖೆ ಮುಂದುವರೆದಿದೆ” ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಇದನ್ನೂ ಓದಿ: ಕೋಮುದ್ವೇಷದ ವಿರುದ್ಧ ಪಾದಯಾತ್ರೆ ಮಾಡುವೆ: ಎಚ್.ಡಿ.ಕುಮಾರಸ್ವಾಮಿ