HomeUncategorizedಸಂಪಾದಕೀಯ / ಸಮಯ ಸಾಧಕ ಪಕ್ಷಗಳ ಮೇಲೆ ನಿರೀಕ್ಷೆ ಇಡಬಹುದೆ?

ಸಂಪಾದಕೀಯ / ಸಮಯ ಸಾಧಕ ಪಕ್ಷಗಳ ಮೇಲೆ ನಿರೀಕ್ಷೆ ಇಡಬಹುದೆ?

- Advertisement -
- Advertisement -

 

ಕರ್ನಾಟಕದ ಮಾಧ್ಯಮಗಳು ಕ್ಯಾಬಿನೆಟ್ ಹಂಚಿಕೆಯ ಇಕ್ಕಟ್ಟುಗಳನ್ನು ಭಾರೀ ಬಿಕ್ಕಟ್ಟು ಎಂಬಂತೆ ಬಿಂಬಿಸಿ, ಅಸಮಾಧಾನ ಹೊಂದಿರುವವರು ರಾಜೀನಾಮೆ ಕೊಟ್ಟೇಬಿಟ್ಟರು ಅಂತೆಲ್ಲಾ ಬೂಸಿ ಬಿಟ್ಟು, ಒಟ್ಟಾರೆ ಈ ಸರ್ಕಾರ ಜಾಸ್ತಿ ದಿನ ಬಾಳಿಕೆ ಬರೋಲ್ಲ ಎಂಬ ಅಭಿಪ್ರಾಯ ಬಿತ್ತಲು ಹೆಣಗಾಡುತ್ತಿರುವುದು ಅಸಹ್ಯ ಹುಟ್ಟಿಸುತ್ತಿದೆ.
ಆದರೆ ಇದೇ ಸಂದರ್ಭದಲ್ಲಿ ರಾಷ್ಟ್ರ ರಾಜಕಾರಣದಲ್ಲಿ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಸುತ್ತಲೂ ಬಹಳ ಮಹತ್ವದ ವಿದ್ಯಮಾನಗಳು ಘಟಿಸುತ್ತಿವೆ. ಸಹಜವಾಗಿಯೇ ನಮ್ಮ ಮಾಧ್ಯಮಗಳಿಗೆ ಈ ವಿಚಾರಗಳು ಮುಖ್ಯ ಎನಿಸಿಲ್ಲ. ಯಾಕೆಂದರೆ ಈಗಿನ ವಿದ್ಯಮಾನ ಮಾಧ್ಯಮ ದೊರೆಗಳಿಗೆ ಅಪ್ರಿಯವಾದುದು. ಅವರ ನೆಚ್ಚಿನ ಪ್ರಧಾನಿ ಹಾಗೂ ಬಿಜೆಪಿ ಪಕ್ಷ ರಾಷ್ಟ್ರ ರಾಜಕಾರಣದಲ್ಲಿ ಕಠಿಣ ಸವಾಲು ಎದುರಿಸುತ್ತಿದೆ ಎಂಬ ಕಟು ವಾಸ್ತವ ಅನಾವರಣಗೊಳ್ಳುತ್ತಿದೆ. ಒಂದೆಡೆ, ವಿರೋಧ ಪಕ್ಷಗಳು ಅಪೂರ್ವ ಒಗ್ಗಟ್ಟು ಪ್ರದರ್ಶಿಸಿ, ಉಪ ಚುನಾವಣೆಯಲ್ಲಿ ಬಿಜೆಪಿಗೆ ಹೊಡೆತ ನೀಡಿದ್ದು ಮಾತ್ರವಲ್ಲದೆ, ಮುಂಬರುವ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‍ಗಡ ವಿಧಾನಸಭಾ ಚುನಾವಣೆಗಳಲ್ಲೂ ಸಂಭಾವ್ಯ ಮೈತ್ರಿಗಳನ್ನು ಏರ್ಪಡಿಸಿಕೊಳ್ಳುವತ್ತ ಬಿರುಸಿನ ಹೆಜ್ಜೆ ಹಾಕಿವೆ. ಮುಖ್ಯವಾಗಿ ಕಾಂಗ್ರೆಸ್ ಮತ್ತು ಬಿಎಸ್‍ಪಿ ಪಕ್ಷಗಳು ಮುಂಬರುವ ಈ ವಿಧಾನಸಭಾ ಚುನಾವಣೆಗಳಲ್ಲಿ ಮೈತ್ರಿ ಘೋಷಿಸಿಕೊಂಡಿವೆ. ಇನ್ನಿತರೆ ಪಕ್ಷಗಳು ಕೂಡ ಕೈಜೋಡಿಸಲಿದ್ದು ಈ ಮೈತ್ರಿ ಬಲಿಷ್ಠಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.
ಮತ್ತೊಂದೆಡೆ, ಉಪಚುನಾವಣೆಯ ಹೀನಾಯ ಸೋಲಿನ ನಂತರ ಆಡಳಿತಾರೂಡ ಬಿಜೆಪಿ ಪಕ್ಷದೊಳಗೆ ಮೋದಿ-ಶಾ ನಾಯಕತ್ವದ ಬಗ್ಗೆ ಅಪಸ್ವರಗಳು ಬಹಿರಂಗವಾಗಿಯೇ ವ್ಯಕ್ತವಾಗುತ್ತಿದೆ, ಎನ್‍ಡಿಎ ಒಕ್ಕೂಟದಲ್ಲಿದ್ದ ಬಿರುಕು ಹೆಚ್ಚಾಗುವ ಲಕ್ಷಣ ಕಾಣುತ್ತಿದೆ. ಬಿಜೆಪಿಯ ದುರಹಂಕಾರ ಮತ್ತು ದಾಷ್ಟ್ರ್ಯದ ನಡವಳಿಕೆಗಳಿಂದಾಗಿಯೇ ಮಿತ್ರ ಪಕ್ಷಗಳಾದ ತೆಲುಗು ದೇಶಂ, ಶಿವಸೇನಾ ಮುಂತಾದ ಪ್ರಾದೇಶಿಕ ಪಕ್ಷಗಳು ಬಿಜೆಪಿಯಿಂದ ಈಗಾಗಲೇ ದೂರವಾಗಿವೆ. ಸದ್ಯ ಜೊತೆಯಲ್ಲಿರುವ ಜೆಡಿಯು, ಲೋಕಜನಶಕ್ತಿ ಮುಂತಾದ ಪಾಲುದಾರರು ಈಗಾಗಲೇ ಬಾರಿ ಅಪಸ್ವರ ತೆಗೆದಿದ್ದು, ಗಾಳಿ ಬಂದ ಕಡೆ ತೂರಿಹೋಗುವ ಸೂಚನೆ ಕೊಟ್ಟಿವೆ.


ಕರ್ನಾಟಕದಿಂದ ಸಂಸದರಾಗಿದ್ದ ಯಡ್ಯೂರಪ್ಪ ಮತ್ತು ಶ್ರೀರಾಮುಲು ರಾಜೀನಾಮೆ ಕೊಟ್ಟ ಪರಿಣಾಮ ಎರಡು ಸ್ಥಾನಗಳು ಕಡಿಮೆಯಾಗಿ, ಇತ್ತೀಚಿನ ಉಪಚುನಾವಣೆಯಲ್ಲಿ ಕೆಲವು ಸೀಟುಗಳನ್ನು ಕಳೆದುಕೊಂಡ ಪರಿಣಾಮ ಈಗ ಬಿಜೆಪಿ ಪಕ್ಷದ ಸಂಖ್ಯೆ 272ಕ್ಕೆ ಇಳಿದಿದೆ. ಒಂದು ಸಂಖ್ಯೆ ಕಡಿಮೆಯಾದರೂ ಸ್ವಂತ ಬಲದ ಮೇಲೆ ಅಧಿಕಾರ ನಡೆಸಲು ಸಾಧ್ಯವಾಗದ ಸ್ಥಿತಿಯಿದು. ಈ ಬೆಳವಣಿಗೆಗಳು ಬಿಜೆಪಿ ನಾಯಕತ್ವವನ್ನು ಚಿಂತೆಗೀಡು ಮಾಡಿರುವುದಂತೂ ಸತ್ಯ. ಡ್ಯಾಮೇಜ್ ಕಂಟ್ರೋಲ್ ಕ್ರಮಗಳ ಭಾಗವಾಗಿ ಎನ್‍ಡಿಎಯಿಂದ ದೂರವಾಗಿರುವ ಮಿತ್ರ ಪಕ್ಷಗಳನ್ನು ಮತ್ತೆ ಒಲಿಸಿಕೊಳ್ಳುವ ಕಸರತ್ತು ಆರಂಭವಾಗಿದೆ.
ವಿರೋಧ ಪಕ್ಷಗಳು ಒಟ್ಟಾದರೆ ಪರಿಣಾಮ ಏನಾಗಬಹುದು ಎಂಬುದನ್ನು ಕಣ್ಣಾರೆ ಕಂಡುಂಡ ನಂತರ ಸ್ವತಃ ಅಮಿತ್‍ಶಾ ಅಖಾಡಕ್ಕಿಳಿದಿದ್ದಾರೆ. ಜೂನ್ 6 ರಂದು ಶಿವಸೇನಾ ನಾಯಕ ಉಧ್ಧವ್ ಠಾಕ್ರೆಯನ್ನು ಭೇಟಿಯಾಗಿ ಬೆಂಬಲ ಕೋರಲು, ಹಮ್ಮು ಬಿಮ್ಮು ಬದಿಗೊತ್ತಿ, ಸೀದಾ ಮುಂಬೈನ ಬಾಂದ್ರಾದಲ್ಲಿರುವ ಠಾಕ್ರೆ ಮನೆಗೆ ಭೇಟಿಕೊಟ್ಟು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಉತ್ತರಪ್ರದೇಶದ ನಂತರ ಅತಿಹೆಚ್ಚು, ಅಂದರೆ 48 ಸಂಸದರನ್ನು ಆರಿಸುವ ಮಹಾರಾಷ್ಟ್ರ ಬಿಜೆಪಿ ಪಾಲಿಗೆ ಬಹಳ ಮಹತ್ವದ್ದು. ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಕಳೆದ ಚುನಾವಣೆಯಲ್ಲಿ 42 ಸ್ಥಾನಗಳನ್ನು ಗಳಿಸಿದ್ದವು.
ಇತ್ತೀಚಿನ ದಿನಗಳಲ್ಲಿ ಇವರ ನಡುವೆ ವೈಮನಸ್ಯ ತಲೆದೋರಿದ್ದು, ಕಳೆದ ತಿಂಗಳಿನ ಉಪಚುನಾವಣೆಯಲ್ಲಿ ಎದುರಾಳಿಗಳಾಗಿ ಹೋರಾಡಿದ್ದವು. ವೈಮನಸ್ಯ ಯಾವ ಮಟ್ಟದಲ್ಲಿದೆಯೆಂದರೆ, ಅಮಿತ್ ಶಾ ಭೇಟಿಯಾದ ದಿನವೇ ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ‘ಬಿಜೆಪಿ ಪಕ್ಷ ನಮ್ಮ ಅತ್ಯಂತ ದೊಡ್ಡ ರಾಜಕೀಯ ಶತೃ’ ಎಂದು ಘೋಷಿಸಿದೆ. ‘ಬಿಜೆಪಿ ಪಕ್ಷಕ್ಕೆ ಮೈತ್ರಿ ಸಂಬಂಧಗಳೆಂದರೆ ಕೇವಲ ಲಾಭ ನಷ್ಟದ ಲೆಕ್ಕಾಚಾರವಷ್ಟೆ’ ಎಂದು ಜರೆದಿದೆ. ಸಂಬಂಧ ಇಷ್ಟು ಹಳಸಿರುವ ಸಂದರ್ಭದಲ್ಲೇ ಅಮಿತ್ ಶಾ ಸೀದಾ ಠಾಕ್ರೆ ಮನೆಗೆ ದಯಮಾಡಿಸಿ, ಶಿವಸೇನೆಯ ನಾಯಕರ ಬಿರುನುಡಿಗಳನ್ನು ಸಾವಧಾನವಾಗಿ ಆಲಿಸಿದ್ದಾರೆ. 21 ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿರುವ, ‘ಎದುರಾಳಿಗಳೇ ಇಲ್ಲದ’ ಮೋದಿ-ಶಾ ಜೋಡಿಯ ಇಂದಿನ ವಾಸ್ತವ ಸ್ಥಿತಿ ಇದು.
‘37 ಸ್ಥಾನ ಪಡೆದ ದೇವೇಗೌಡರ ಪಕ್ಷಕ್ಕೆ ಶರಣಾದ ಕಾಂಗ್ರೆಸ್’, ‘ಸ್ವಾಭಿಮಾನವನ್ನೇ ಕಳೆದುಕೊಂಡು ಮಂಡಿಯೂರಿದ ಕಾಂಗ್ರೆಸ್’ ಮುಂತಾಗಿ ಹಗಲು ರಾತ್ರಿ ಚೀರಾಡುವ ಯಾವೊಬ್ಬ ಪತ್ರಕರ್ತರೂ ‘ಅಮಿತ್ ಶಾ ಅಹಂಕಾರಕ್ಕೆ ತಕ್ಕ ಶಾಸ್ತಿ’ ಅಥವ ‘ಶಿವಸೇನೆಗೆ ಶರಣಾದ ಚಾಣಕ್ಯ’ ಮುಂತಾದ ಯಾವುದೇ ಚರ್ಚೆ ನಡೆಸಿಲ್ಲ.
ಈ ‘ಚಾಣಕ್ಯ’ ಪ್ರವಾಸ ಇಲ್ಲಿಗೆ ನಿಲ್ಲುವುದಿಲ್ಲ; ಮರುದಿನವೇ ಪಂಜಾಬ್‍ಗೆ ತೆರಳಿ ಅಕಾಲಿ ನಾಯಕ ಬಾದಲ್ ಅವರನ್ನು ಭೇಟಿಯಾಗಲಿದ್ದಾರೆ. ನಂತರ ಬಿಹಾರಕ್ಕೆ ತೆರಳಿ ಜೆಡಿಯು ನಾಯಕ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿಯಾಗುವ ಯೋಜನೆಯಿದೆ. ಬಾಬಾ ರಾಮ್‍ದೇವ್, ರತನ್ ಟಾಟಾ, ಮಾಧುರಿ ದೀಕ್ಷಿತ್ ಮುಂತಾದ ವಿವಿಧ ಕ್ಷೇತ್ರಗಳ ಗಣ್ಯರನ್ನು ನಿನ್ನೆ ಮೊನ್ನೆಯಷ್ಟೇ ಭೇಟಿಯಾಗಿದ್ದು, ಬಾಂಧವ್ಯ ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನ ನಡೆದಿದೆ.
ಈ ಎಲ್ಲ ಬೆಳವಣಿಗೆಗಳು ಏನನ್ನು ಸೂಚಿಸುತ್ತದೆ? ನಮ್ಮ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕುವವರೇ ಇಲ್ಲ ಎಂಬಂತೆ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಬಿಜೆಪಿ ನಾಯಕತ್ವಕ್ಕೆ ತಾವು ದಿನೇದಿನೇ ದುರ್ಬಲಗೊಳ್ಳುತ್ತಿದ್ದಾರೆ ಎಂಬುದನ್ನು ತಾನೇ? ಈ ಕಟುವಾಸ್ತವದ ಅರಿವಾದದ್ದರಿಂದಲೇ ಅಮಿತ್ ಶಾ ಸಾಹೇಬರು ತಮ್ಮ ಮುಖದ ಮೇಲೆ ಒಂದಷ್ಟು ಬಲವಂತದ ಮುಗುಳ್ನಗು ತಂದುಕೊಂಡು ಮಿತ್ರ ಪಕ್ಷಗಳ ಮನೆಬಾಗಿಲಿಗೆ ಸುತ್ತುತ್ತಿದ್ದಾರೆ.
ಈ ವರ್ಷದ ಕೊನೆಯಲ್ಲಿ ಬರಲಿರುವ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‍ಗಡ ಚುನಾವಣೆಯಲ್ಲಿ ಈಗಾಗಲೇ ಆಡಳಿತ ವಿರೋಧಿ ಅಲೆ ಬಲವಾಗಿದೆ. ವಿರೋಧಿ ಪಕ್ಷಗಳು ಒಗ್ಗೂಡುತ್ತಿರುವುದು ಒಂದುಕಡೆಯಾದರೆ, ತೀವ್ರ ಸಂಕಷ್ಟದಲ್ಲಿರುವ ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಬೀದಿಗಿಳಿದಿದ್ದಾರೆ.
ವಿರೋಧ ಪಕ್ಷಗಳು ನಿರ್ದಿಷ್ಟ ಸೂತ್ರಗಳಿಗೆ ಬದ್ಧವಾಗಿ ಬಲಿಷ್ಠ ಮೈತ್ರಿ ರಚಿಸಿಕೊಂಡು ಚುನಾವಣೆ ಎದುರಿಸಿದಲ್ಲಿ, ಫ್ಯಾಸಿಸ್ಟ್ ಶಕ್ತಿಯಾಗಿ ಹೊಮ್ಮುತ್ತಿರುವ ಮೋದಿ-ಶಾ ಕೂಟ ಮತ್ತು ಅವರ ಬಿಜೆಪಿ ಪಕ್ಷವನ್ನು ಮೂಲೋತ್ಪಾಟನೆ ಮಾಡಲಾಗದಿದ್ದರೂ ಹದ್ದುಬಸ್ತಿನಲ್ಲಂತೂ ಇಡಬಹುದು. ಇದು ದೇಶದ ಸದ್ಯದ ರಾಜಕೀಯ ಸನ್ನಿವೇಶ.
ಆದರೆ ಸ್ವಾರ್ಥ, ಸಮಯಸಾಧಕತನಗಳನ್ನೇ ತಮ್ಮ ನೀತಿಯನ್ನಾಗಿಸಿಕೊಂಡಿರುವ ರಾಜಕೀಯ ಪಕ್ಷಗಳ ಬಗ್ಗೆ ನಾವು ಎಷ್ಟು ನಿರೀಕ್ಷೆ ಇಟ್ಟುಕೊಳ್ಳಬಹುದು ಎಂಬುದೇ ಅಸಲಿ ಪ್ರಶ್ನೆ.

ಸಂಪಾದಕೀಯ ತಂಡದ ಪರವಾಗಿ
ದೊಡ್ಡಿಪಾಳ್ಯ ನರಸಿಂಹಮೂರ್ತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

0
ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ)...