Homeನ್ಯಾಯ ಪಥವ್ಯಾಯಾಮ, ಹೃದಯಾಘಾತ ಮತ್ತು ’ವೈಜ್ಞಾನಿಕ' ಗಾಸಿಪ್‌ಗಳು: ಡಾ.ಎಚ್.ವಿ ವಾಸು

ವ್ಯಾಯಾಮ, ಹೃದಯಾಘಾತ ಮತ್ತು ’ವೈಜ್ಞಾನಿಕ’ ಗಾಸಿಪ್‌ಗಳು: ಡಾ.ಎಚ್.ವಿ ವಾಸು

ಪುನೀತ್ ವಿಚಾರದಲ್ಲಿ ನಿರ್ದಿಷ್ಟವಾಗಿ ಇಂತಹುದೇ ಕಾರಣಕ್ಕೆ ಸಾವು ಸಂಭವಿಸಿರಬಹುದು ಎಂದು ಅತಿಯಾದ ಊಹೆ ಮಾಡುವುದು, ಆತಂಕಕ್ಕೊಳಗಾಗುವುದು, ವೈಜ್ಞಾನಿಕವಲ್ಲದ ಸಂಗತಿಗಳನ್ನು ಇನ್ನಷ್ಟು ದಾಟಿಸುವುದನ್ನಂತೂ ಮಾಡಲೇಬೇಡಿ.

- Advertisement -
- Advertisement -

ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಪ್ರತಿ ಶನಿವಾರ ಬೆಳಿಗ್ಗೆ 9ಕ್ಕೆ ಮಾರ್ಟಾಲಿಟಿ ಮೀಟಿಂಗ್ ಅಂತ ನಡೆಯುತ್ತದೆ (ನಾನು ಅಲ್ಲಿ ಕೆಲಸ ಮಾಡುವಾಗ ನಡೆಯುತ್ತಿತ್ತು; ಈಗಲೂ ನಡೆಯುತ್ತಿರುತ್ತದೆ ಎಂಬ ಬಗ್ಗೆ ಸಂದೇಹವಿಲ್ಲ). ಆ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಅಥವಾ ವಾರ್ಡುಗಳಲ್ಲಿ ಅಡ್ಮಿಟ್ ಆದ ರೋಗಿಗಳಲ್ಲಿ ಆ ವಾರ ಸತ್ತಿರುವ ರೋಗಿಗಳಿಗೆ ಸಂಬಂಧಿಸಿದ ಸೀನಿಯರ್ ರೆಸಿಡೆಂಟ್ ವಿವರಗಳನ್ನು ನೀಡಬೇಕು. ರೋಗಿ ಆಸ್ಪತ್ರೆಗೆ ಬಂದಾಗಿನಿಂದ ಸಾವು ಸಂಭವಿಸುವವರೆಗೆ ಏನೇನಾಯಿತು? ಪ್ರತಿ ಹಂತದಲ್ಲೂ ತನ್ನ ಕಡೆಯಿಂದ ಮಾಡಬೇಕಾದ್ದೆಲ್ಲವನ್ನೂ ಮಾಡಲಾಯಿತೇ? ಅಂತಿಮವಾಗಿ ಈ ಸಾವಿಗೆ ಕಾರಣವೇನು? ಇವಿಷ್ಟಕ್ಕೆ ಪುರಾವೆಗಳ ಸಮೇತ ಅವರು ಮಂಡನೆ ಮಾಡುತ್ತಾರೆ. ಆಗ ಆ ಸೀನಿಯರ್ ರೆಸಿಡೆಂಟ್ (ಅಂದರೆ ಸ್ನಾತಕೋತ್ತರ ಪದವಿ ಮಾಡುತ್ತಿರುವವರಲ್ಲಿ 3ನೇ ವರ್ಷದ ನಂತರದವರು) ಮಾತುಗಳನ್ನು ಕೇಳಿದ ತಜ್ಞ ವೈದ್ಯರು ಪ್ರಶ್ನೆಗಳನ್ನು ಕೇಳುತ್ತಾರೆ. ಕೆಲವರು ಸೀದಾ ಎದ್ದು ಹೋಗಿ ಅಲ್ಲಿನ ಪುರಾವೆಗಳನ್ನು (ಅಂದರೆ ಸ್ಕ್ಯಾನಿಂಗ್ ಫಿಲ್ಮ್ ಇತ್ಯಾದಿ) ಪರಿಶೀಲಿಸುತ್ತಾರೆ. ತಪ್ಪು ಮಾಡಿದ್ದರೆ ಸೀನಿಯರ್ ರೆಸಿಡೆಂಟ್ ಹೃದಯ ಬಾಯಿಗೆ ಬರಬೇಕು, ಹಾಗಾಗುತ್ತದೆ. ಹಾಗೆಂದು ಈ ತಜ್ಞ ವೈದ್ಯರು ಸದರಿ ಸ್ನಾತಕೋತ್ತರ ವಿದ್ಯಾರ್ಥಿ ವೈದ್ಯರನ್ನು ದೂರುವುದಿಲ್ಲ. ಒಂದು ಸಂಸ್ಥೆಯಾಗಿ ನಾವು ಮಾಡಬೇಕಾದ್ದೆಲ್ಲವನ್ನೂ ಮಾಡಿದೆವಾ? ಕಲಿಯಬೇಕಾದ್ದನ್ನು ಕಲಿತೆವಾ? ಇನ್ನೂ ಅರ್ಥ ಮಾಡಿಕೊಳ್ಳಬೇಕಾದ್ದು ಏನಿದೆ? ಎಂಬುದನ್ನು ಪರಿಶೀಲಿಸುವ ಸಭೆ ಅದು.

ಅಂತಿಮವಾಗಿ ಪೋಸ್ಟ್ ಮಾರ್ಟಂ ವರದಿ (ತಕ್ಷಣದ ಒಂದು ವರದಿಯಷ್ಟೇ ಲಭ್ಯವಾಗಿರುತ್ತದೆ; ಅಂತಿಮ ವರದಿ ತಡವಾಗಿ ಬರುತ್ತದೆ) ಏನು ಹೇಳಿತು ಎಂಬುದನ್ನೂ ಅಲ್ಲಿ ಕೇಳಲಾಗುತ್ತದೆ. ಅದನ್ನೂ ಸ್ನಾತಕೋತ್ತರ ವಿದ್ಯಾರ್ಥಿ ವೈದ್ಯ ಹೇಳುತ್ತಾರೆ. ಒಂದು ವೇಳೆ ಪೋಸ್ಟ್ ಮಾರ್ಟಂ ಆಗಿಲ್ಲ ಎಂದರೆ, ಏಕೆ ಆಗಲಿಲ್ಲ ಎಂಬುದನ್ನೂ ಆ ಕೋಣೆಯಲ್ಲಿ ಸೇರಿರುವ ಹಿರಿಯ/ಕಿರಿಯ ವೈದ್ಯರಿಗೆ ಮನವರಿಕೆ ಮಾಡಿಕೊಡುವುದೂ ಆತನ ಜವಾಬ್ದಾರಿಯಾಗಿರುತ್ತದೆ. ನಮಗೆಲ್ಲರಿಗೂ ಗೊತ್ತಿರುವ ಹಾಗೆ ರೋಗಿ ಸತ್ತ ನಂತರ ಪೋಸ್ಟ್ ಮಾರ್ಟಂ ಮಾಡಿಸುವುದು ನಮ್ಮ ದೇಶದಲ್ಲಿ ಬಹುತೇಕರಿಗೆ ಒಪ್ಪಿಗೆ ಇರದ ಸಂಗತಿ. ಹೀಗಿರುವಾಗ ಅವರನ್ನು ಒಪ್ಪಿಸುವುದು ಹರಸಾಹಸವೇ ಸರಿ.

ಆದರೆ, ನಮ್ಮ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದ, ನಂತರ ನಿಮ್ಹಾನ್ಸ್‌ನ ನಿರ್ದೇಶಕರಾದ ಡಾ.ಸತೀಶ್ ಚಂದ್ರ ರೋಗಿಗಳ ಕಡೆಯವರನ್ನು ಒಪ್ಪಿಸುತ್ತಿದ್ದ ರೀತಿಯೇ ವಿಶಿಷ್ಟ ಬಗೆಯದ್ದಾಗಿತ್ತು. ’ಬನ್ನೀಮ್ಮಾ.. ನಿಮ್ಮ ಮಗುವಿನ ಸಾವಿನ ಸುದ್ದಿ ಕೇಳಿದೆ. ಬಹಳ ನೋವಾಯಿತು. ಈ 8 ವರ್ಷದ ಮಗುವನ್ನು ಉಳಿಸಿಕೊಳ್ಳುವುದು ನಮ್ಮ ಕೈಲಿ ಆಗಲಿಲ್ಲ. ನಿಮ್ಮ ಮಗುವಿನ ವಿಚಾರದಲ್ಲಿ ಏನು ಸಮಸ್ಯೆ ಆಯಿತು ಎಂಬ ಬಗ್ಗೆ ನಮಗೆ ಕೆಲವು ವಿಚಾರ ಗೊತ್ತಾಯಿತು. ಕೆಲವು ಗೊತ್ತಾಗಲಿಲ್ಲ. ಕೆಲವು ಹೇಗೆ ತಿಳಿಯಿತೆಂದರೆ ಪ್ರಪಂಚದಲ್ಲಿ ಇಂತಹ ಎಷ್ಟೋ ಸಾವುಗಳು ಸಂಭವಿಸಿದಾಗ ಡಾಕ್ಟರುಗಳು ಅದರಿಂದ ಕಲಿತುಕೊಂಡಿದ್ದಾರೆ. ಆದರೆ ನಮಗೆ ಗೊತ್ತಿರದ ಹಲವಾರು ಸಂಗತಿಗಳಿವೆ. ಆದ್ದರಿಂದ ಇನ್ನೂ ಎಷ್ಟೋ ವಿಚಾರ ತಿಳಿದುಕೊಳ್ಳಲಾಗದೇ ನಿಮ್ಮ ಮಗುವಿನ ರೀತಿ ಸಾವುಗಳು ಆಗುತ್ತಿವೆ. ಈಗ ನಿಮ್ಮ ಮಗು ತೀರಿಕೊಂಡಿದೆ. ನಾವು ಈಗ ಒಂದು ಸ್ವಲ್ಪ ಪರೀಕ್ಷೆ ಮಾಡಲು ನಿಮ್ಮ ಮಗುವಿನ ಶರೀರದಿಂದ – ಹೊರಗೆ ಗೊತ್ತಾಗದೇ – ಸ್ವಲ್ಪ ಭಾಗ ತೆಗೆದು ಪರೀಕ್ಷೆಗೆ ಕಳಿಸಿದರೆ, ಮುಂದೆ ಇಂತಹ ಎಷ್ಟೋ ಮಕ್ಕಳನ್ನು ಉಳಿಸುವುದು ಸಾಧ್ಯವಾಗಬಹುದು. ಹಾಗಾಗಿ ಇದಕ್ಕೆ ಅನುಮತಿ ಕೊಡಬೇಕು.’ ಇಷ್ಟು ಹೇಳುವಷ್ಟರಲ್ಲಿ ಆ ತಂದೆ-ತಾಯಿ ಆಯ್ತು ಸಾರ್ ಎಂದುಬಿಡುತ್ತಿದ್ದರು.

ಹೌದು, ನಮಗೆಲ್ಲರಿಗೂ ದುಃಖ, ವಿಷಾದ ತಂದಿರುವ ಪುನೀತ್ ರಾಜ್‌ಕುಮಾರ್ ಸಾವಿನ ಹಿನ್ನೆಲೆಯಲ್ಲೇ ಇದನ್ನೆಲ್ಲಾ ಹೇಳುತ್ತಿದ್ದೇನೆ. ವಿಕ್ರಂ ಆಸ್ಪತ್ರೆಗೆ ಹೋಗುವಾಗಲೇ ಮರಣಿಸಿದ್ದ ಪುನೀತ್, ಅದಕ್ಕೆ ಮುಂಚೆ ಅವರ ಕುಟುಂಬದ ವೈದ್ಯರಾದ ಡಾ.ರಮಣರಾವ್‌ರ ಕ್ಲಿನಿಕ್‌ಗೆ ಹೋಗಿದ್ದರು. ಅಲ್ಲಿ ತೆಗೆದಿದ್ದ ಇಸಿಜಿಯು ಹೃದಯಕ್ಕೆ ತೊಂದರೆಯಾಗುತ್ತಿದೆ ಎಂದು ಕಾಣಿಸಿದ್ದರಿಂದ ಅವರು ಕೂಡಲೇ ವಿಕ್ರಂ ಆಸ್ಪತ್ರೆಗೆ ಹೋಗಲು ಸೂಚಿಸಿದ್ದರು. ವಿಕ್ರಂ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಅವರು ಜೀವಂತವಾಗಿರಲಿಲ್ಲ. ಆದರೂ ಪುನಶ್ಚೇತನಗೊಳಿಸುವ ಪ್ರಯತ್ನಗಳನ್ನು ಮಾಡಿದ ವೈದ್ಯರು ಸಫಲವಾಗುವುದು ಸಾಧ್ಯವಾಗಲಿಲ್ಲ. ಲಭ್ಯವಿರುವ ಪುರಾವೆಗಳಷ್ಟರಿಂದ ಇದು ಬಹುತೇಕ ಹೃದಯದ ತೊಂದರೆಯಿಂದ ಎಂದು ಹೇಳಬಹುದಾದರೂ, ನೂರಕ್ಕೆ ನೂರು ಖಚಿತವಾಗಿ ಹೇಳಲು ಕಷ್ಟ. ಎರಡನೆಯದಾಗಿ ನೂರಕ್ಕೆ 99ರಷ್ಟು ಹೃದಯಾಘಾತವೆಂದೇ ಇಟ್ಟುಕೊಂಡರೂ, ಈ ಹೃದಯಾಘಾತಕ್ಕೆ ಕಾರಣವಾದ ಅಂಶವೇನು? ಅದಕ್ಕೆ ಕಾರಣವಾದ ಜೀವನಶೈಲಿಯ ಅಥವಾ ಜೆನೆಟಿಕ್ ಸಮಸ್ಯೆ ಏನು ಎಂಬುದನ್ನು ಹೇಳುವುದಂತೂ ಅಸಾಧ್ಯ. ಪೋಸ್ಟ್ ಮಾರ್ಟಂ ಆಗಿದ್ದರೂ ಎಲ್ಲವನ್ನೂ ಹೇಳಲು ಅಸಾಧ್ಯವಾದರೂ, ಸ್ವಲ್ಪ ಮಾಹಿತಿ ಗೊತ್ತಾಗಬಹುದಿತ್ತು.

ಪುನೀತ್ ವಿಚಾರದಲ್ಲಿ ಮರಣೋತ್ತರ ಪರೀಕ್ಷೆ ಆಗಲೇಬೇಕಿತ್ತು ಎಂದು ಹೇಳುವುದು ನನ್ನ ಉದ್ದೇಶವಲ್ಲ. ಆದರೆ ಇಂತಹ ಸಂದರ್ಭದಲ್ಲಿ ಅಳವಡಿಸಬೇಕಾದ ವೈಜ್ಞಾನಿಕ ವಿಧಾನ ಏನು ಎಂಬುದನ್ನಷ್ಟೇ ಸೂಚಿಸುತ್ತಿದ್ದೇನೆ. ಅದನ್ನು ಬಿಟ್ಟು ಸುಖಾಸುಮ್ಮನೆ ಇಲ್ಲದ ಗಾಸಿಪ್‌ಗಳು, ನೂರೆಂಟು ಬಗೆಯ ಅಸಲಿ ಹಾಗೂ ನಕಲಿ ವಾಟ್ಸಾಪ್ ಮೆಸೇಜ್‌ಗಳನ್ನು ಹರಿಯಬಿಡುವುದು ಒಳ್ಳೆಯದೇನನ್ನೂ ಮಾಡುವುದಿಲ್ಲ. ಇಂತಹ (ಅ)ವೈಜ್ಞಾನಿಕ ಗಾಸಿಪ್‌ಗಳಿಂದ ಪುನೀತ್‌ರ ವಯಸ್ಸಿನ ಅಥವಾ ಇನ್ನೂ ಕಡಿಮೆ ವಯಸ್ಸಿನ ಎಷ್ಟೋ ಜನರು ಭಯಕ್ಕೆ ಗುರಿಯಾಗಿದ್ದಾರೆ. ಮೂರ್‍ನಾಲ್ಕು ದಿನಗಳಿಂದ ಹೃದಯ ಪರೀಕ್ಷೆ, ರಕ್ತ ಪರೀಕ್ಷೆ ಮಾಡಿಸಿರುವವರ ಸಂಖ್ಯೆ ಹೆಚ್ಚಾಗಿದೆ. ಜಯದೇವ ಆಸ್ಪತ್ರೆಗೆ ಕಳೆದೆರಡು ದಿನಗಳಿಂದ ಶೇ.20ರಷ್ಟು ಹೆಚ್ಚು ಸಂಖ್ಯೆಯಲ್ಲಿ ತಪಾಸಣೆಗೆಂದು ಹೋಗಿದ್ದಾರೆ. ಅಲ್ಲಿ ಅಕ್ಟೋಬರ್ 31ರಂದು ಒಂದೇ ದಿನ 1,500ಕ್ಕೂ ಹೆಚ್ಚು ಜನರು ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

ಇದಕ್ಕೆ ಒಂದು ಮುಖ್ಯ ಕಾರಣ, ಮೇಲ್ನೋಟಕ್ಕೆ ಅತ್ಯಂತ ಫಿಟ್ ಆಗಿದ್ದ, ಕೇವಲ 45 ವರ್ಷ ವಯಸ್ಸಿನ ಸೆಲೆಬ್ರಿಟಿಯೊಬ್ಬರು ಈ ರೀತಿ ದಿಢೀರ್ ಸಾವಿಗೆ ಗುರಿಯಾಗಿರುವುದು. ಎರಡನೆಯದಾಗಿ, ಪುನೀತ್ ಜಿಮ್‌ಗೆ ಹೋಗಿದ್ದವರು ಅಲ್ಲಿಯೇ ಸುಸ್ತಾಗಿ ವೈದ್ಯರ ಕ್ಲಿನಿಕ್‌ಗೆ ಹೋದವರು, ಆಸ್ಪತ್ರೆಗೆ ಹೋಗುವತನಕ ಉಳಿಯಲಿಲ್ಲ. ಹೀಗಾಗಿ ’ಜಿಮ್ ಮಾಡುವುದು ಒಳ್ಳೆಯದೇ ಇಲ್ಲವೇ? ಅತಿಯಾದ ಜಿಮ್‌ನಿಂದಲೇ ಹೀಗಾಯಿತೇ? 45 ವರ್ಷಕ್ಕೇ ಹೀಗಾಗುವುದಾದರೆ ಏನು ಕಥೆ? ಅತಿಯಾಗಿ ಜಿಮ್ ಮಾಡುವುದು ಮಾತ್ರವಲ್ಲದೇ, ಅತಿಯಾಗಿ ತಿನ್ನುತ್ತಿದ್ದರಂತೆ, ಅದಕ್ಕೇ ಹೀಗಾಯಿತಂತೆ. ವೈದ್ಯರು ರಕ್ತ ಹೆಪ್ಪುಗಟ್ಟದಂತೆ ಆಗಲೇ ಮಾತ್ರೆ ಕೊಟ್ಟುಬಿಟ್ಟಿದ್ದರೆ ಉಳಿಯುವ ಸಾಧ್ಯತೆ ಇತ್ತು.’ ಇತ್ಯಾದಿ ಇತ್ಯಾದಿ ಮಾತುಗಳು ಎಲ್ಲೆಡೆ ಚರ್ಚೆಯಲ್ಲಿವೆ.

ಮೇಲೆ ಹೇಳಿದಂತೆ ಈ ನಿರ್ದಿಷ್ಟ ಪ್ರಕರಣದಲ್ಲಿ ಏನಾಗಿತ್ತು, ಏನಾಗಬಹುದಿತ್ತು ಎಂಬುದನ್ನು ನೂರಕ್ಕೆ ನೂರು ಖಚಿತವಾಗಿ ಹೇಳುವುದು ಸಾಧ್ಯವಿಲ್ಲ. ಪ್ರತಿಯೊಂದು ಪ್ರಕರಣವನ್ನೂ ವೈಜ್ಞಾನಿಕ ಸಂಶೋಧನೆಗೆ ಒಳಪಡಿಸಲು ಅನುವು ಮಾಡಿಕೊಟ್ಟರೆ ಮಾತ್ರ ಈಗ ಹೇಳಬಹುದಾದಕ್ಕಿಂತ ಸ್ವಲ್ಪ ಹೆಚ್ಚಿನ ಮಾಹಿತಿ ದೊರೆಯಲು ಸಾಧ್ಯ. ಅಂತಹ ಸಂಶೋಧನೆಗಳು ಹೆಚ್ಚೆಚ್ಚು ಆದಂತೆ ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತಹ ಸಾವುಗಳು ಆಗದಂತೆ ತಡೆಯುವ ಸಾಧ್ಯತೆ ಹೆಚ್ಚಾಗಬಹುದು.

ದೈಹಿಕ ಚಟುವಟಿಕೆ ಕಡಿಮೆಯಿರುವುದು ಮತ್ತು ವ್ಯಾಯಾಮದ ಕೊರತೆ ಸ್ಥೂಲಕಾಯಕ್ಕೂ ದಾರಿ ಮಾಡಿಕೊಟ್ಟು, ಸಾವು ಅಥವಾ ಇತರ ಸಂಕಷ್ಟಗಳಿಗೆ ದಾರಿ ಮಾಡಿಕೊಡುತ್ತದೆ. ಅದರಲ್ಲೂ ಹೃದ್ರೋಗದ ಹೆಚ್ಚಳಕ್ಕೂ ಕಾರಣವಾಗುತ್ತದೆ. ಈ ಕುರಿತು ಸಾವಿರಾರು ಸಂಶೋಧನೆಗಳು ನಡೆದಿವೆ ಮತ್ತು ಅವನ್ನು ದೃಢಪಡಿಸಿವೆ. ಹಾಗಾಗಿ ದೈಹಿಕವಾಗಿ ಚಟುವಟಿಕೆಯಿಂದಿರುವುದು ಮತ್ತು ವ್ಯಾಯಾಮ ಮಾಡುವುದು ಒಳ್ಳೆಯದು. ಪುನೀತ್ ಸಾವಿನ ಕಾರಣವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸದೇ ವ್ಯಾಯಾಮ ಮಾಡುವುದೇ ತಪ್ಪು ಎಂಬ ನಿರ್ಧಾರಕ್ಕೆ ಬರುವುದು ತಪ್ಪು ಮತ್ತು ಅವೈಜ್ಞಾನಿಕವಾದುದು.

ಆದರೆ, ಅತಿಯಾದ ವ್ಯಾಯಾಮದಿಂದ ಸಾವು ಸಂಭವಿಸುತ್ತದೆಯೇ? ಈ ಕುರಿತು ವಿಜ್ಞಾನ ಏನು ಹೇಳುತ್ತದೆ? ವ್ಯಾಯಾಮ ಒಳ್ಳೆಯದು. ಅತಿಯಾದ ವ್ಯಾಯಾಮದಿಂದ ಅತಿಯಾಗಿ ಒಳ್ಳೆಯದಾಗುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಅದು ನಿಜವಲ್ಲ. ಹೌದು ಅತಿಯಾದ ವ್ಯಾಯಾಮವೂ ಒಳ್ಳೆಯದಲ್ಲ. ಅದರಲ್ಲೂ ಮಿತಿಮೀರಿ ವ್ಯಾಯಾಮ ಮಾಡುವವರು ದೀರ್ಘ ಕಾಲ ಬದುಕುತ್ತಾರೆ ಎಂಬುದಕ್ಕೆ ಯಾವ ಆಧಾರವೂ ಇಲ್ಲ. ಬದಲಿಗೆ, ಅಂತಹವರ ಆಯಸ್ಸು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಸಂಶೋಧನೆಗಳು ಹೇಳುತ್ತವೆ. ಅಂತಹವರಲ್ಲಿ ದೀರ್ಘಕಾಲಿಕ ಹೃದಯದ ಸಮಸ್ಯೆಗಳು (increased risks of atrial fibrillation) ಹೆಚ್ಚಾಗುತ್ತವೆ ಎಂಬುದಕ್ಕೆ ಪುರಾವೆಗಳಿವೆ.

ಇಲ್ಲಿ ಪ್ರಶ್ನೆಯಿರುವುದು, ದೀರ್ಘಕಾಲಿಕ ಹೃದಯದ ಸಮಸ್ಯೆಗಳು ಹೆಚ್ಚಾಗುತ್ತದಾ ಎಂಬುದಕ್ಕಿಂತ ಹೆಚ್ಚಾಗಿ ಇದ್ದಕ್ಕಿದ್ದಂತೆ ದಿಢೀರ್ ಸಾವು ಸಂಭವಿಸುತ್ತದಾ ಎಂದು. ಹೌದು, ಅಂತಹ ಸಾಧ್ಯತೆಗಳೂ ಇವೆ. ಅವರವರ ದೇಹಕ್ಕೆ ಅಭ್ಯಾಸವಿಲ್ಲದ ಪ್ರಮಾಣಕ್ಕೆ, ನಿಯಮಿತವಾಗಿ ಅಷ್ಟು ವ್ಯಾಯಾಮ ಮಾಡದವರು ಹೆಚ್ಚು ಮಾಡಿದರೆ ತಕ್ಷಣದಲ್ಲಿ ದೊಡ್ಡ ಪ್ರಮಾಣದ ಹೃದಯಾಘಾತ ಆಗುವ ಸಾಧ್ಯತೆ ಉಳಿದವರಿಗಿಂತ ಹೆಚ್ಚು. ಅಭ್ಯಾಸವಿದ್ದರೂ ಒಮ್ಮೊಮ್ಮೆ ವಿಪರೀತ ಓಡಿದವರಲ್ಲೂ ಹೃದಯಾಘಾತವಾಗುವ ಸಾಧ್ಯತೆಗಳಿವೆ. ಆದರೆ 100 ಮೀ, 800 ಮೀ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡವರಲ್ಲಿ ಈ ಅಪಾಯ ಕಾಣುವುದಕ್ಕಿಂತ ಮ್ಯಾರಥಾನ್, ಟ್ರಯತ್ಲಾನ್‌ಗಳಲ್ಲಿ ಇಂತಹ ಸಾಧ್ಯತೆ ಹೆಚ್ಚೆಂದು ಅಧ್ಯಯನ ವರದಿಗಳು (https://www.ncbi.nlm.nih.gov/pmc/articles/PMC7431070/) ಹೇಳುತ್ತವೆ.

ಹೆಚ್ಚೆಂದರೆ ಎಷ್ಟು ವ್ಯಾಯಾಮ? ಆರೋಗ್ಯವಂತ ವ್ಯಕ್ತಿಗಳು ಎಷ್ಟು ವ್ಯಾಯಾಮ ಮಾಡಬೇಕು? ವಾರಕ್ಕೆ ಎರಡೂವರೆಯಿಂದ ನಾಲ್ಕೂವರೆ ಗಂಟೆ. ಗಮನಿಸಿ: ನಿಯಮಿತವಾಗಿ ಇಷ್ಟು ವ್ಯಾಯಾಮ ಮಾಡುವವರಿಗೆ ಹಲವಾರು ಅನುಕೂಲಗಳು ಇವೆ. ಆದರೆ ವಾರಕ್ಕೆ ಹತ್ತು ಗಂಟೆಗಿಂತ ಹೆಚ್ಚು ವ್ಯಾಯಾಮ ಮಾಡಲು ಹೊರಟರೆ ಆರೋಗ್ಯ ಲಾಭ ಕಡಿಮೆಯಾಗುತ್ತಾ ಹೋಗುತ್ತದೆ. ಇದನ್ನೇ ಉಲ್ಟಾ ಜೆ ತಿರುವು ಎಂತಲೂ ಹೇಳುತ್ತಾರೆ.

ಇಷ್ಟು ಹೇಳಿದ ಮೇಲೆ ಒಂದು ಸಂಗತಿಯನ್ನು ತಪ್ಪದೇ ಹೇಳುವ ಅಗತ್ಯವಂತೂ ಇದ್ದೇ ಇದೆ. ಸಕ್ಕರೆ ಹಾಗೂ ಶರ್ಕರಪಿಷ್ಟ (ಕಾರ್ಬೋಹೈಡ್ರೇಟ್) ಭರಿತ ಆಹಾರ ಎಷ್ಟು ಕಡಿಮೆ ತಿಂದರೆ ಅಷ್ಟು ಒಳ್ಳೆಯದು. ತರಕಾರಿ, ಕಾಳುಗಳು, ಮೀನು, ಮೊಟ್ಟೆ, ಮಾಂಸ ನಮ್ಮ ಆಹಾರದಲ್ಲಿ ಹೆಚ್ಚಿರಬೇಕು. ದಿನಕ್ಕೆ 7ರಿಂದ 8 ಗಂಟೆ ನಿದ್ದೆ ಮಾಡಿ, ಒತ್ತಡ ಕಡಿಮೆ ಮಾಡಿಕೊಳ್ಳಿ. ವಾರಕ್ಕೆ 150 ನಿಮಿಷಗಳಿಂದ 250 ನಿಮಿಷಗಳಷ್ಟು ವ್ಯಾಯಾಮ ಮಾಡಿ. ತೂಕ ಇಳಿಸುವುದು, ಡಯಾಬಿಟಿಸ್ ನಿಯಂತ್ರಿಸಿ ಮಾತ್ರೆ ನಿಲ್ಲಿಸುವ ಪ್ರಯತ್ನದಲ್ಲಿದ್ದರೆ ಸ್ವಲ್ಪ ಹೆಚ್ಚು ವ್ಯಾಯಾಮವೂ ಅಗತ್ಯ ಬೀಳಬಹುದು. ಆದರೆ ಯಾವ ಕಾರಣಕ್ಕೂ (ಅಭ್ಯಾಸವಿಲ್ಲದಿದ್ದರೆ) ದಿನಕ್ಕೆ 2 ಗಂಟೆ ವ್ಯಾಯಾಮ ಮಾಡಲು ಹೋಗಬೇಡಿ.

ಪುನೀತ್ ವಿಚಾರದಲ್ಲಿ ನಿರ್ದಿಷ್ಟವಾಗಿ ಇಂತಹುದೇ ಕಾರಣಕ್ಕೆ ಸಾವು ಸಂಭವಿಸಿರಬಹುದು ಎಂದು ಅತಿಯಾದ ಊಹೆ ಮಾಡುವುದು, ಆತಂಕಕ್ಕೊಳಗಾಗುವುದು, ವೈಜ್ಞಾನಿಕವಲ್ಲದ ಸಂಗತಿಗಳನ್ನು ಇನ್ನಷ್ಟು ದಾಟಿಸುವುದನ್ನಂತೂ ಮಾಡಲೇಬೇಡಿ.

  • ಡಾ.ಎಚ್.ವಿ ವಾಸು

(ವೈದ್ಯರು, ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರು)


ಇದನ್ನೂ ಓದಿ: ಅಪ್ಪು ನಿಧನ: ಹೃದಯಾಘಾತದ ಬಗ್ಗೆ ಪ್ಯಾನಿಕ್‌ ಆಗುವ ಅಗತ್ಯವಿಲ್ಲ- ವೈದ್ಯರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...