Homeಮುಖಪುಟಐಸಿಯುವಿನಲ್ಲಿ ಬೆಂಕಿ: 11 ಕೊರೊನಾ ರೋಗಿಗಳು ಮೃತ

ಐಸಿಯುವಿನಲ್ಲಿ ಬೆಂಕಿ: 11 ಕೊರೊನಾ ರೋಗಿಗಳು ಮೃತ

- Advertisement -

ಮಹಾರಾಷ್ಟ್ರದ ಅಹ್ಮದ್‌ನಗರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಭಾರಿ ದುರಂತ ಸಂಭವಿಸಿದ್ದು, ಐಸಿಯು ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೊರೊನಾ ಪೀಡಿತ 11 ರೋಗಿಗಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಬೇರೆ ವಾರ್ಡ್‌ನಲ್ಲಿ ಇದ್ದ ರೋಗಿಗಳು ಆಸ್ಪತ್ರೆಯಿಂದ ಸ್ಥಳಾಂತರಗೊಂಡಿದ್ದಾರೆ. ಐಸಿಯುನಲ್ಲಿದ್ದ 17 ರೋಗಿಗಳಲ್ಲಿ ಆರು ಮಂದಿ ಬದುಕುಳಿದಿದ್ದು, ಮೃತರಲ್ಲಿ ಹೆಚ್ಚಿನವರು 60-83 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ತಿಳಿದು ಬಂದಿದೆ.

“ಕೆಲವು ರೋಗಿಗಳು ಸುಟ್ಟಗಾಯಗಳಿಂದ ಮೃತಪಟ್ಟಿದ್ದು, ಇನ್ನು ಕೆಲವರು ಹೊಗೆಯಿಂದಾಗಿ ಮೃತಪಟ್ಟಿದ್ದಾರೆ. ನಾವು ವಿವರವಾದ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ತೋಪ್ಖಾನಾ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಜುಬೇರ್ ಮುಜಾವರ್ ಭಾನುವಾರ ತಿಳಿಸಿದ್ದಾರೆ.

ಇದನ್ನೂ ಓದಿ: ಬಿರಿಯಾನಿ ರೆಸ್ಟೋರೆಂಟ್‌ ಮುಚ್ಚದಿದ್ದರೆ ಬೆಂಕಿ ಹಚ್ಚುತ್ತೇನೆ: ದೆಹಲಿಯಲ್ಲಿ ಮತೀಯ ಗೂಂಡಾಗಿರಿ

“ಮಹಾರಾಷ್ಟ್ರದ ಅಹ್ಮದ್‌ನಗರದ ಆಸ್ಪತ್ರೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ ಪ್ರಾಣಹಾನಿಯಾಗಿರುವುದು ದುಃಖ ತಂದಿದೆ. ದುಃಖತಪ್ತ ಕುಟುಂಬಗಳಿಗೆ ಸಂತಾಪ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ” ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಸುಟ್ಟ ಐಸಿಯು ವಾರ್ಡ್ ಅನ್ನು ಪರಿಶೀಲಿಸಿದ ರಾಜ್ಯ ಅಧಿಕಾರಿಗಳಿಗೆ ಶಾರ್ಟ್ ಸರ್ಕ್ಯೂಟ್ ಸ್ಪಾರ್ಕ್‌ನಿಂದಾಗಿ ಬೆಂಕಿ ಭುಗಿಲೆದ್ದಿದೆ ಎಂದು ಆಸ್ಪತ್ರೆಯ ಆಡಳಿತವು ತಿಳಿಸಿದೆ. ಆದರೆ ಸ್ಥಳೀಯ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಯು ಆಸ್ಪತ್ರೆ ಹಿಂದಿನ ಎರಡು ಲೆಕ್ಕಪರಿಶೋಧನೆಗಳಲ್ಲಿ ಕಟ್ಟಡದಲ್ಲಿ ಅಗ್ನಿ ಸುರಕ್ಷತೆಯನ್ನು ಸುಧಾರಿಸುವ ಶಿಫಾರಸುಗಳನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದೆ.

“ಸಾಕಷ್ಟು ಹಣದ ಕೊರತೆಯಿಂದಾಗಿ ಆಸ್ಪತ್ರೆಯಲ್ಲಿ ಅಗ್ನಿ ಸುರಕ್ಷತಾ ಸಾಧನಗಳನ್ನು ಅಳವಡಿಸಿಲ್ಲ” ಎಂದು ನಗರ ನಾಗರಿಕ ಸಂಸ್ಥೆಯ ಮುಖ್ಯ ಅಗ್ನಿಶಾಮಕ ಅಧಿಕಾರಿ ಶಂಕರ್ ಮಿಸಾಲ್ ಅವರು ಪಿಟಿಐಗೆ ತಿಳಿಸಿದ್ದಾರೆ.

ಬೆಂಕಿಯ ಕಾರಣವನ್ನು ನಿರ್ಣಯಿಸಲು ಸಮಿತಿಯನ್ನು ನೇಮಿಸಲಾಗಿದೆ, ನಂತರ ಆಸ್ಪತ್ರೆಯ ನಿರ್ಲಕ್ಷ್ಯ ದುರಂತಕ್ಕೆ ಕಾರಣವಾಗಿದೆಯೇ ಎಂದು ನಿರ್ಧರಿಸಲಾಗುವುದು ಎಂದು ಮಹಾರಾಷ್ಟ್ರ ರಾಜ್ಯ ಸಚಿವ ಜಯಂತ್ ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ: ತ್ರಿಪುರಾ: VHP ರ್‍ಯಾಲಿ ವೇಳೆ ಮಸೀದಿ ಧ್ವಂಸ, ಎರಡು ಅಂಗಡಿಗಳಿಗೆ ಬೆಂಕಿ

“ಬೆಂಕಿ ಹೊತ್ತಿಕೊಂಡ ಕೆಲವೇ ನಿಮಿಷಗಳಲ್ಲಿ ವಾರ್ಡ್‌ನಲ್ಲಿ ಹೊಗೆ ಆವರಿಸಿದೆ. ನಮ್ಮಲ್ಲಿ ಕೆಲವರು ಅಗ್ನಿಶಾಮಕ ಸಾಧನಗಳನ್ನು ಬಳಸಲು ಪ್ರಯತ್ನಿಸಿದ್ದರಾದರೂ, ಅಷ್ಟರಲ್ಲಿ ಹೊಗೆ ವಾರ್ಡ್ ಪೂರ್ತಿ ಆವರಿಸಿದ್ದರಿಂದ ರೋಗಿಗಳನ್ನು ವಾರ್ಡ್‌ನಿಂದ ಹೊರತರುವುದು ಬಿಟ್ಟ ನಮಗೆ ಬೇರೆ ದಾರಿ ಇರಲಿಲ್ಲ. ನಾವು ಅವರನ್ನು ವಾರ್ಡ್‌ನಿಂದ ಹೊರಗೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದೆವು,

ಆದರೆ ಅಷ್ಟರಲ್ಲಾಗಲೇ ಕೆಲವರು ಸಾವನ್ನಪ್ಪಿದ್ದರು. ಸಿಸ್ಟಮ್ ಸ್ಥಗಿತಗೊಂಡಿದ್ದರಿಂದ ವೆಂಟಿಲೇಟರ್‌ಗಳಿಗೆ ಆಮ್ಲಜನಕ ಪೂರೈಕೆ ಸ್ಥಗಿತಗೊಂಡಿರಬಹುದು, ಹೀಗಾಗಿ ಅವರು ಮೃತಪಟ್ಟಿರಬಹುದು” ಎಂದು ಆಸ್ಪತ್ರೆಯ ನರ್ಸ್ ಸುರೇಖಾ ಆಂಧಳೆ ತಿಳಿಸಿದ್ದಾರೆ ಎಂದು ಸಂಡೇ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ತಪ್ಪಿತಸ್ಥರ ವಿರುದ್ಧ ಸರ್ಕಾರ ಕೆಲವು ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಸನ್ ಮುಶ್ರೀಫ್ ಹೇಳಿದ್ದಾರೆ. ಆಸ್ಪತ್ರೆ ಆಡಳಿತದಿಂದ ಯಾವುದೇ ನಿರ್ಲಕ್ಷ್ಯ ಕಂಡುಬಂದಲ್ಲಿ ಸರಕಾರ ಖಂಡಿತಾ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.

ಈ ವರ್ಷದ ಏಪ್ರಿಲ್‌ನಲ್ಲಿ, ರಾಜ್ಯದ ಪಾಲ್ಘರ್ ಜಿಲ್ಲೆಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡು 15 ಕೊರೊನಾ ರೋಗಿಗಳು ಸಾವನ್ನಪ್ಪಿದ್ದರು.

ಇದನ್ನೂ ಓದಿ: ಬೆಂಕಿಪೊಟ್ಟಣಕ್ಕೂ ತಟ್ಟಿದ ಬೆಲೆ ಏರಿಕೆ ಬಿಸಿ:14 ವರ್ಷಗಳ ಬಳಿಕ ಶೇ.100 ರಷ್ಟು ಬೆಲೆ ಏರಿಕೆ

ವಿಡಿಯೊ ನೋಡಿ, ನಮ್ಮ ಯೂಟ್ಯೂಬ್‌‌ ಚಾನೆಲ್ ಸಬ್‌ಸ್ಕ್ರೈಬ್‌ ಮಾಡಿ

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ ಮಹಿಳೆ | Naanu Gauri

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ...

0
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ರಸ್ತೆಯಲ್ಲೇ ಆರು ತಿಂಗಳ ಶಿಶುವಿಗೆ ಜನ್ಮ ನೀಡಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ ಕಲ್ಲೋ ಬಾಯಿಯನ್ನು...
Wordpress Social Share Plugin powered by Ultimatelysocial