Homeಚಳವಳಿ"ಗಾಂಧೀಜಿಗಿಂತ ದೊಡ್ಡ ಹಿಂದು ಯಾರೂ ಇಲ್ಲ: ಸ್ವಾತಂತ್ರ್ಯ ತಂದು ಕೊಟ್ಟವನನ್ನೇ ಬಿಡಲಿಲ್ಲ ನಾವು"

“ಗಾಂಧೀಜಿಗಿಂತ ದೊಡ್ಡ ಹಿಂದು ಯಾರೂ ಇಲ್ಲ: ಸ್ವಾತಂತ್ರ್ಯ ತಂದು ಕೊಟ್ಟವನನ್ನೇ ಬಿಡಲಿಲ್ಲ ನಾವು”

- Advertisement -
- Advertisement -

ಉತ್ತರಪ್ರದೇಶದ ವಾರಾಣಸಿಯ ಸೆಂಟ್ರಲ್ ಹಿಂದು ಬಾಲಕರ ಶಾಲೆಯ ವಿದ್ಯಾರ್ಥಿ ಆಯುಷ್ ಚತುರ್ವೇದಿ, ಗಾಂಧಿ ಜಯಂತಿಯಂದು ಮಾಡಿದ ಭಾಷಣದ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಧರ್ಮ ಹಾಗೂ ಕೋಮುಗಳ ಹೆಸರಲ್ಲಿ ನಡೆಯುತ್ತಿರುವ ಹಲ್ಲೆ, ಕೊಲೆಗೆ ಆಯುಷ್ ಭಾಷಣ ತಕ್ಕ ತಿರುಗೇಟು ನೀಡಿದೆ. ಗಾಂಧೀಜಿಯವರ ಕಥೆಯೊಂದಿಗೆ ಆರಂಭವಾಗುವ ಆತನ ಭಾಷಣವನ್ನು ರಾಜಶೇಖರ್ ಅಕ್ಕಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ…

ಮಹಾತ್ಮ ಗಾಂಧೀಜಿ ಒಂದು ಬಾರಿ ರೈಲಿನಲ್ಲಿ ಫರ್ಸ್ಟ್ ಕ್ಲಾಸ್ ಕಂಪಾರ್ಟ್ ಮೆಂಟಿನಲ್ಲಿ ಟಿಕೆಟ್ ಖರೀದಿಸಿ ಪ್ರಯಾಣಿಸುತ್ತಿದ್ದರು. ಆ ಕಾಲದಲ್ಲಿ ವರ್ಣಭೇದ ನೀತಿ ವ್ಯಾಪಕವಾಗಿತ್ತು. ವರ್ಣಭೇದ ನೀತಿಯಿಂದಾಗಿಯೇ ಗಾಂಧೀಜಿಯವರನ್ನು ಟ್ರೇನ್‍ನಿಂದ ಹೊರದಬ್ಬಲಾಯಿತು. ಅಂದು ಆದ ಗಾಯವನ್ನು ಗಾಂಧೀಜಿಯವರು ಮಾಯಲು ಬಿಡಲೇ ಇಲ್ಲ. ಗಾಯವನ್ನು ಇನ್ನಷ್ಟು ಕೆದರಿದರು. ಇದರಿಂದ ಮಹಾತ್ಮನಿಗೆ ಸಿಕ್ಕ ಅಸ್ತ್ರವೇ ಅಸಹಕಾರ ಚಳವಳಿ.

ದುಷ್ಟರು ಹೇಳುವುದನ್ನು ಮಾಡದೇ ಇರುವುದೇ ಅಸಹಕಾರ ಚಳವಳಿ. ಇದರಿಂದಲೇ ಒಂದು ಇತಿಹಾಸದ ಪ್ರಾರಂಭವಾಯಿತು. ಲೂಯಿ ಫಿಷರ್ ಒಂದು ಮಾತು ಹೇಳುತ್ತಾರೆ, ರೈಲಿನಿಂದ ಗಾಂಧೀಜಿಯವರನ್ನು ಹೊರದಬ್ಬಿದ ಬ್ರಿಟಿಷ್ ವ್ಯಕ್ತಿಗೆ ತಾನು ಹೊರದಬ್ಬಿದ ವ್ಯಕ್ತಿ ಮುಂದೊಂದು ದಿನ ಬ್ರಿಟಿಷ್ ಆಳ್ವಿಕೆಯನ್ನು ವಿಶ್ವದಿಂದ ಸಂಪೂರ್ಣವಾಗಿ ಹೊರದಬ್ಬುತ್ತಾನೆ ಎಂದು ಮೊದಲೇ ತಿಳಿದಿದ್ದರೆ ಬ್ರಿಟಿಷ್ ವ್ಯಕ್ತಿ ಅಂತಹ ತಪ್ಪು ಮಾಡುತ್ತಿರಲಿಲ್ಲವೇನೋ..?

ಅತ್ಯಂತ ವಿಡಂಬನೆಯ ಒಂದು ವಿಷಯವೇನೆಂದರೆ, ಗಾಂಧೀಜಿಯ ದೇಶವಾಸಿಗಳೇ ಗಾಂಧೀಜಿಯನ್ನು ಅತ್ಯಂತ ಕಡಿಮೆ ಓದಿಕೊಂಡಿದ್ದಾರೆ ಮತ್ತು ಅರ್ಥೈಸಿಕೊಂಡಿದ್ದಾರೆ. ಹ್ಯಾರಿ ಪಾಟರ್ ಮತ್ತು ಚೇತನ್ ಭಗತ್ ಅವರ ಪುಸ್ತಕಗಳನ್ನು ಓದುವ ಯುವಜನತೆ, ಒಂದು ವೇಳೆ ಗಾಂಧೀಜಿಯವರನ್ನು ಗಂಭೀರವಾಗಿ ಓದಿಕೊಂಡಿದ್ದರೆ, ಇಂದು ನಮ್ಮ ಪೀಳಿಗೆಯ ಪಾಠಗಳೇ ಬೇರೆಯಾಗಿರುತ್ತಿದ್ದವು. ಆದರೆ, ನಾವು ಹಾಗೆ ಮಾಡಲಿಲ್ಲ. ಹಾಗೂ ಇದೇ ಕಾರಣಕ್ಕಾಗಿ ನಾವೆಲ್ಲ ಫ್ಯಾನ್ಸಿ ಫೇಸ್‍ಬುಕ್ ಗ್ಯಾಂಗ್ ಆಗಿ ಬದಲಾಗಿದ್ದೇವೆ.

ದೇಶ ವಿಭಜನೆಯ ಶಾಶ್ವತ ಕಾರಣ ಗಾಂಧೀಜಿ ಎಂದು ನಂಬುವುದು ಹಾಗೂ ಗಾಂಧೀಜಿಯವರನ್ನು ಮುಸ್ಲಿಂ ಪರ ಎಂದು ಕರೆಯುವುದು. ಒಂದು ಮಾತು ಸ್ಪಷ್ಟವಾಗಿ ಹೇಳ ಬಯಸುತ್ತೇನೆ. ಗಾಂಧಿಗಿಂತ ದೊಡ್ಡ, ಮಹಾನ್ ಹಿಂದು ಯಾರೂ ಆಗಿಲ್ಲ. ಆದರೆ ಗಾಂಧೀಜಿಯ ‘ಹೇ ರಾಮ್’ ಮಂತ್ರ ಮಠಣದಿಂದ ಇತರೆ ಸಮುದಾಯಗಳು ಹೆದರುತ್ತಿರಲಿಲ್ಲ. ಏಕೆಂದರೆ, ಗಾಂಧೀಜಿ ಜಾತ್ಯತೀತತೆಯ ಪ್ರತೀಕವಾಗಿದ್ದರು. ಪ್ರಸ್ತುತ ಅಹಿಂಸೆಯನ್ನು ಹೇಡಿತನದ ಮತ್ತು ದೌರ್ಬಲ್ಯದ ಪ್ರತೀಕ ಎಂದೇ ಹೇಳಲಾಗುತ್ತಿದೆ. ಆದರೆ ಜನರು ಮರೆಯುತ್ತಿರುವ ಅಂಶವೇನೆಂದರೆ ವಿಶ್ವದ ಅತಿ ದೊಡ್ಡ ಸೇನೆಯೊಂದಿಗೆ ಶಸ್ತ್ರಾಸ್ತ್ರಗಳಿಂದ ಹೋರಾಟ ಮಾಡುವುದು ಸಾಧ್ಯವಿಲ್ಲ. ಅದಕ್ಕೆ ನಾವು ಆಯ್ಕೆ ಮಾಡಿಕೊಳ್ಳುವ ಅಸ್ತ್ರದ ಸಾಟಿಯನ್ನು ಅವರಿಗೆ ಮಾಡಲು ಸಾಧ್ಯವಾಗಬಾರದು. ಆ ಅಸ್ತ್ರವೇ ಅಹಿಂಸೆ. ಒಂದು ಕಣ್ಣಿಗೆ ಇನ್ನೊಂದು ಕಣ್ಣನ್ನು ತೆಗೆಯುವುದರಿಂದ ಸಂಪೂರ್ಣ ವಿಶ್ವವೇ ಕುರುಡಾಗುತ್ತದೆ ಎಂದು ಗಾಂಧೀಜಿ ಹೇಳುತ್ತಿದ್ದರು. ನಿಮ್ಮಲ್ಲಿರುವ ಪ್ರತಿಭೆಯನ್ನು ಹೆಚ್ಚಿಸದ ಶಿಕ್ಷಣ, ಮೂರ್ಖ ಶಿಕ್ಷಣವೆಂದೂ ಬಾಪೂಜಿ ಹೇಳುತ್ತಿದ್ದರು.

ಗಾಂಧೀಜಿ ಮತ್ತು ಇತರೆ ನಾಯಕರ, ಸೇನಾನಿಗಳ ಬಲಿದಾನ, ಆಂದೋಲನ ಮತ್ತು ಜೈಲುವಾಸದ ಪರಿಣಾಮ 1947ರ ಆಗಸ್ಟ್ 15ರಂದು ನಮಗೆ ಸ್ವಾತಂತ್ರ್ಯ ಸಿಕ್ಕಿತು. ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮನನ್ನು ನಾವೆಷ್ಟು ಪ್ರೀತಿಸಿದೆವೆಂದರೆ ಮಾರನೇ ವರ್ಷ ಮೂರು ಗುಂಡು ಹಾರಿಸಿ ಅವರ ಸಮಾಧಿ ಮಾಡಿಬಿಟ್ಟೆವು. ಆದರೆ ಗಾಂಧಿ ಎಂದೂ ಸಾಯುವವರಲ್ಲ. ಏಕೆಂದರೆ ಗಾಂಧಿ ಎನ್ನುವುದು ಒಂದು ವಿಚಾರದ ಹೆಸರು, ಅದು ಒಬ್ಬ ವ್ಯಕ್ತಿಯ ಹೆಸರಲ್ಲ. ಹೀಗಾಗಿ ವಿಚಾರ ಎಂದಿಗೂ ಜೀವಂತವಾಗಿರುತ್ತದೆ.

ಕೊನೆಯದಾಗಿ, ದುಷ್ಯಂತ್ ಕುಮಾರ್ ಅವರ ಒಂದು ಕವಿತೆಯೊಂದಿಗೆ ನನ್ನ ಮಾತುಗಳನ್ನು ಮುಗಿಸುತ್ತೇನೆ.

ದೇವರಿಲ್ಲವೇ? ಆಯಿತು, ಒಬ್ಬ ವ್ಯಕ್ತಿಯ ಕನಸಾದರೂ ಇದೆಯಲ್ಲ.

ನೋಡಲು ಒಂದು ಸುಂದರ ದೃಷ್ಯವಂತೂ ಇದೆಯಲ್ಲ

ಕಲ್ಲು ಕರಗುವುದಿಲ್ಲವೆಂದು ಅವರು ಸಮಾಧಾನದಲ್ಲಿದ್ದಾರೆ

ಧ್ವನಿಯಲ್ಲಿ ಪರಿಣಾಮ ಕಾಣಲೆಂದು ನಾನು ಕಾತುರನಾಗಿದ್ದೇನೆ….

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸಕ್ಕರೆ ಮಟ್ಟ ಹೆಚ್ಚಿಸಿಕೊಳ್ಳಲು ಮಾವಿನಹಣ್ಣು, ಸಿಹಿತಿಂಡಿ ಸೇವಿಸುತ್ತಿರುವ ಕೇಜ್ರಿವಾಲ್..; ಇಡಿ ಆರೋಪ

0
ಮಧುಮೇಹಿಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವೈದ್ಯಕೀಯ ಜಾಮೀನು ಪಡೆಯಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಪ್ರತಿದಿನ ಮಾವಿನಹಣ್ಣು, ಆಲೂ ಪುರಿ ಮತ್ತು ಸಿಹಿತಿಂಡಿಗಳನ್ನು ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಗುರುವಾರ...