ಬಿಜೆಪಿ ಆಳ್ವಿಕೆಯಲ್ಲಿ ಕರ್ನಾಟಕ ಕುಸಿತ: ಅಡ್ಡಕಸುಬಿಗಳ ಕೈಗೆ ಅಧಿಕಾರ ಕೊಟ್ಟರೆ ಇದೇ ಗತಿ ಎಂದ ಸಿದ್ದರಾಮಯ್ಯ

ಶಾಸಕರ ಸ್ಥಳೀಯ ಪ್ರದೇಶಾಭಿವೃದ‍್ಧಿ ನಿಧಿಗೂ ಕಾಸಿಲ್ಲದ ದುಸ್ಥಿತಿ ಕರ್ನಾಟಕ ಸರ್ಕಾರದ್ದು, ತೆರಿಗೆ ಸಂಗ್ರಹ ಇಳಿಯುತ್ತಿದೆ, ಸಾಲದ ಹೊರೆ ಹೆಚ್ಚಾಗುತ್ತಿದೆ, ಕೇಂದ್ರ ಅನುದಾನದ ಬಾಕಿ ಏರುತ್ತಿದೆ. ಶೀಘ್ರದಲ್ಲಿ ನೌಕರರ ಸಂಬಳಕ್ಕೂ ತತ್ವಾರ ಬರಲಿದೆ. ಅಡ್ಡಕಸುಬಿಗಳ ಕೈಗೆ ಅಧಿಕಾರ ಕೊಟ್ಟರೆ ಇದೇ ಗತಿ ಆಗಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಹಣ ಇಲ್ಲದೆ ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡಿವೆ, ಗುತ್ತಿಗೆದಾರರು ಕಾಮಗಾರಿಗಳನ್ನು ಅರ್ಧಕ್ಕೆ ಬಿಟ್ಟು ಓಡಿಹೋಗುತ್ತಿದ್ದಾರೆ, ಖಾಲಿ ಖಜಾನೆ ತುಂಬಲು ರೈತರಿಂದ ಬಲತ್ಕಾರವಾಗಿ ಸಾಲ ವಸೂಲಿ ಮಾಡಲು ಪೀಡಿಸುತ್ತಿದ್ದಾರೆ. ಸುಭೀಕ್ಷೆಯಿಂದ ಇದ್ದ ರಾಜ್ಯ ಅರಾಜಕತೆಯತ್ತ ಭರದಿಂದ ಸಾಗಿದೆ. ಕೇಂದ್ರ ಪ್ರಾಯೋಜಕತ್ವದ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ, ತೆರಿಗೆ ಪಾಲು ಬರ್ತಿಲ್ಲ, ಜಿಎಸ್‌ಟಿ ಪರಿಹಾರ ಕೊಡ್ತಿಲ್ಲ. ಇತ್ತ ಸಂಪುಟ ವಿಸ್ತರಣೆಗೂ ಒಪ್ಪಿಗೆ ಕೊಡ್ತಿಲ್ಲ.‌ ಕರ್ನಾಟಕದ ಬಗ್ಗೆ ಮೋದಿ-ಶಾ ಜೋಡಿ‌ಗೆ ಯಾಕಿಷ್ಟು ಸಿಟ್ಟು ಎಂದು ಸಿದ್ದರಾಮಯ್ಯ ಸಾಲು ಸಾಲು ಸಮಸ್ಯೆಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಸಂಪುಟ ವಿಸ್ತರಣೆ, ಅತೃಪ್ತರ ಓಲೈಕೆ, ಹೈಕಮಾಂಡ್‌ಗೆ ಮೊರೆ, ಭಿನ್ನಮತೀಯರಿಗೆ ಸಮಾಧಾನ ಇವಿಷ್ಟೇ ಕೆಲಸದಲ್ಲಿ ಯಡಿಯೂರಪ್ಪ ಅವರು ಆರು ತಿಂಗಳು ಕಳೆದಿದ್ದಾರೆ. ಆಡಳಿತ ಕೈಗೆ ಸಿಗುತ್ತಿಲ್ಲ, ಹೈಕಮಾಂಡ್ ಕ್ಯಾರೇ ಅನ್ತಿಲ್ಲ. ಯಡಿಯೂರಪ್ಪ ಮುಳುಗುತ್ತಿದ್ದಾರೆ, ಜೊತೆಗೆ ರಾಜ್ಯವನ್ನೂ ಮುಳುಗಿಸಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಇಪ್ಪತ್ತು ವರ್ಷಗಳಲ್ಲಿಯೇ ಮೊದಲ ಬಾರಿ ಕೇಂದ್ರ ಸರ್ಕಾರದ ವರಮಾನ ಇಳಿಕೆಯಾಗುತ್ತಿದೆ. ರಾಜ್ಯದಲ್ಲಿಯೂ ಅದೇ ಸ್ಥಿತಿ. ಪ್ರಧಾನಿ ನರೇಂದ್ರ ಮೋದಿ ದೇಶವನ್ನು, ಬಿ.ಎಸ್ ಯಡಿಯೂರಪ್ಪ ಅವರು ರಾಜ್ಯವನ್ನು ದಿವಾಳಿ ಮಾಡಲು ನಿರ್ಧಾರ ಮಾಡಿದ ಹಾಗಿದೆ ಎಂದು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಹತಾಶರನ್ನಾಗಿ‌ಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಮೋದಿ-ಶಾ ಜೋಡಿ ಅವರನ್ನು ದಂಡಿಸುತ್ತಿದೆಯೇ? ಬಿಜೆಪಿಯ ಆಂತರಿಕ ಕಲಹಕ್ಕೆ ರಾಜ್ಯದ ಜನ ಬಲಿಪಶುಗಳಾಗುತ್ತಿದ್ದಾರೆ. ರಾಜ್ಯದ ಖಜಾನೆ ಖಾಲಿಯಾಗುತ್ತಿದೆ, ಅಧಿಕಾರಿಗಳು ಬಜೆಟ್ ಮಾಡುವುದು ಹೇಗೆ ಎಂದು ತಲೆಮೇಲೆ ಕೈಯಿಟ್ಟು ಕೂತಿದ್ದಾರೆ ಎಂದು ಸಿದ್ದು ತಿಳಿಸಿದ್ದಾರೆ.

ಯಡಿಯೂರಪ್ಪ ಅವರೇ, ಕೈಲಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ, ರಾಜ್ಯದ ಹಿತ ಬಲಿ‌ಕೊಡಬೇಡಿ. ತಮ್ಮ ವೈಫಲ್ಯದಿಂದಾಗಿ ದೇಶವನ್ನು ಕಬರ್ ಸ್ತಾನ ಮಾಡಲು ಹೊರಟಿರುವ ನರೇಂದ್ರ ಮೋದಿ ಅವರು ತಮ್ಮ ಅಸಾಮರ್ಥ್ಯವನ್ನು ಮುಚ್ಚಿಕೊಳ್ಳಲು ಪಾಕಿಸ್ತಾನದ ಜಪ ಮಾಡುತ್ತಿದ್ದಾರೆ. ನಾಯಕನ ಮೇಲ್ಪಂಕ್ತಿಯನ್ನು ಅನುಸರಿಸುತ್ತಿರುವ ರಾಜ್ಯದ ನಾಯಕರು ತಲೆಕೆಟ್ಟವರಂತೆ ಕೋಮುದ್ವೇಷಕ್ಕೆ ಪ್ರಚೋದನೆ ನೀಡತೊಡಗಿದ್ದಾರೆ ಎಂದು ಸಿದ್ದು ಆರೋಪಿಸಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here