ಮಕ್ಕಳ ಸಾವಿನ ಕುರಿತು ಹೇಳಿಕೆ ನೀಡುತ್ತಾ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ “ಮಕ್ಕಳು ಪ್ರತಿ ವರ್ಷ ಸಾಯ್ತಾರೆ. ಅದ್ರಲ್ಲಿ ಹೊಸದೇನೂ ಇಲ್ಲ” ಅಂತ ಹೇಳಿದ್ದು ನಿಜಕ್ಕೂ ಅಕ್ಷಮ್ಯ ಹೊಣೆಗೇಡಿ ಹೇಳಿಕೆ. ಆದ್ರೆ ಆ ಹೊಣೆಗೇಡಿ ಹೇಳಿಕೆಯಲ್ಲೂ ಸಣ್ಣದೊಂದು ಸತ್ಯ ಅಡಗಿರೋದನ್ನು ಆಸ್ಪತ್ರೆಯ ದಾಖಲೆಗಳೇ ರುಜುವಾತು ಮಾಡುತ್ತಿವೆ.

ರಾಜಸ್ತಾನದ ಕೋಟಾದಲ್ಲಿರುವ ಜೆಕೆ ಲೋನ್ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ತಿಂಗಳು ನೂರು ಮಕ್ಕಳು ಅಸುನೀಗಿದ್ದು ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‍ರನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದ್ದರೆ, ರಾಷ್ಟ್ರೀಯ ನ್ಯೂಸ್ ಮೀಡಿಯಾಗಳು ಆಸ್ಪತ್ರೆಗೆ ಮೂಲಸೌಕರ್ಯ ಕಲ್ಪಿಸದ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಚರ್ಚೆಗಳನ್ನು ನಡೆಸುತ್ತಿವೆ. ಹೌದು, ವಿರೋಧ ಪಕ್ಷ ಮತ್ತು ಸಂವಿಧಾನದ ನಾಲ್ಕನೇ ಆಯಾಮವಾದ ಮಾಧ್ಯಮ, ಸರ್ಕಾರವೊಂದರ ವೈಫಲ್ಯವನ್ನು ಹೀಗೆ ಪ್ರಶ್ನಿಸಲೇಬೇಕು. ಜಗತ್ತನ್ನೇ ನೋಡದ ಹಸುಗೂಸುಗಳು ತಾವು ಮಾಡದ ತಪ್ಪಿಗೆ ಕಣ್ಮುಚ್ಚುವಂತೆ ಆದದ್ದು ಅಕ್ಷಮ್ಯ ಅಪರಾಧ. ಹಿಂದೆ ಬಿಜೆಪಿ ಸಿಎಂ ಯೋಗಿ ಆದಿತ್ಯನಾಥರ ಉತ್ತರಪ್ರದೇಶದ ಗೋರಖ್‍ಪುರ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯಿಲ್ಲದೆ 71 ನವಜಾತ ಶಿಶುಗಳು ಅಸುನೀಗಿದಾಗ ದೇಶ ತಲ್ಲಣಿಸಿದ್ದು ಇದೇ ಕಾರಣಕ್ಕೆ.

ಆದರೆ ರಾಜಸ್ಥಾನದ ಕೋಟಾ ಆಸ್ಪತ್ರೆಯ ಹಸುಗೂಸುಗಳ ಸಾವು ಚರ್ಚೆಗೆ ಬಂದಿರುವುದು ಇಂಥಾ ನೈಜ ಕಾಳಜಿಗಿಂತಲೂ ಹೆಚ್ಚಾಗಿ ರಾಜಕೀಯಪ್ರೇರಿತ ಕಾರಣಕ್ಕಾ ಎಂಬ ಅನುಮಾನ ಆಸ್ಪತ್ರೆಯ ಹಳೆಯ ರೆಕಾರ್ಡುಗಳನ್ನು ಪರಿಶೀಲಿಸಿದಾಗ ಮೂಡುತ್ತೆ. ಆಸ್ಪತ್ರೆಯ ದಾಖಲಾತಿಯ ಪ್ರಕಾರ 2019ರಲ್ಲಿ 963 ಮಕ್ಕಳು ಅಲ್ಲಿ ಅಸುನೀಗಿದ್ದಾರೆ. ಅವುಗಳಲ್ಲಿ ಬಹುಪಾಲು ನವಜಾತ ಶಿಶುಗಳು. ಅಚ್ಚರಿಯ ಸಂಗತಿಯೆಂದರೆ, ಕಳೆದ ಐದು ವರ್ಷಗಳ ಲೆಕ್ಕ ನೋಡಿದರೆ ಅಲ್ಲಿ ಇದೇ ಅತಿ ಕಡಿಮೆ ಮಕ್ಕಳು ಸತ್ತ ವರ್ಷ! 2014ರಿಂದ ಆ ಆಸ್ಪತ್ರೆಯಲ್ಲಿ ಸರಾಸರಿ ಪ್ರತಿವರ್ಷ 1,100 ಮಕ್ಕಳು ಅಸುನೀಗುತ್ತಲೇ ಬಂದಿದ್ದಾರೆ!

ಇವತ್ತಿನ ದುರ್ಗತಿ ಕಳೆದ ಐದು ವರ್ಷದಿಂದ ಸತತವಾಗಿ, ಅಂದರೆ ಬಿಜೆಪಿಯ ವಸುಂಧರಾ ರಾಜೆ ಸಿಎಂ ಆಗಿದ್ದ ಅವಧಿಯುದ್ದಕ್ಕೂ, ಇತ್ತಿ ಎನ್ನುವುದಾದರೆ ಇಷ್ಟುದಿನ ನ್ಯಾಷನಲ್ (ಗೋದಿ) ಮೀಡಿಯಾಗಳೇಕೆ ಇದರತ್ತ ಕುರುಡಾಗಿದ್ದವು? ಈಗ ಕಾಂಗ್ರೆಸ್ ಅಧಿಕಾರಕ್ಕೇರಿದ ಮೇಲೆಯೇ, ಆ ಆಸ್ಪತ್ರೆಯ ಅವ್ಯವಸ್ಥೆ ಮೀಡಿಯಾಗಳ ಗಮನ ಸೆಳೆದಿರುವುದರ ಹಿಂದೆ ಯಾವ ರಾಜಕೀಯ ಕಾರಣವೂ ಇಲ್ಲ ಎಂದು ನಂಬುವುದೇಗೆ?

ವಿವಾದವನ್ನು ಚರ್ಚಿಸುತ್ತಿರುವ ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಲೇಬೇಕಾದ ಸಂಗತಿ ಏನೆಂದರೆ, ಕಾಂಗ್ರೆಸ್‍ನ ಅಶೋಕ್ ಗೆಹ್ಲೋಟ್ ಮತ್ತು ಬಿಜೆಪಿಯ ವಸುಂಧರಾ ರಾಜೆ ಇಬ್ಬರ ಅವಧಿಯಲ್ಲೂ ಕೋಟಾ ಆಸ್ಪತ್ರೆಯಲ್ಲಿ ಪ್ರತಿವರ್ಷ ಸರಾಸರಿ 1,100 ಹಸುಗೂಸುಗಳು ತಮ್ಮದಲ್ಲದ ತಪ್ಪಿಗೆ ಸಾವನ್ನಪ್ಪುತ್ತಲೇ ಬಂದಿದ್ದಾರೆ. ಹಾಗೆ ನೋಡಿದರೆ ಈ ಅವಧಿಯಲ್ಲಿ ಅತಿಹೆಚ್ಚು, ಅಂದರೆ 1260 ಮಕ್ಕಳು ಸಾವನ್ನಪ್ಪಿದ್ದು 2015ರಲ್ಲಿ. ಆಗ ರಾಜಸ್ತಾನದಲ್ಲಿ ಅಧಿಕಾರದಲ್ಲಿದ್ದುದು ಬಿಜೆಪಿ ಸರ್ಕಾರ! ಆಗ್ಯಾಕೆ ಮೀಡಿಯಾಗಳು ಈ ದುರಂತದತ್ತ ಕಣ್ಣು ತೆರೆಯಲಿಲ್ಲ.

ಹಾಗಂತ ಈ ಸಾವಿನ ದುರಂತ ಇಷ್ಟು ವರ್ಷ ಯಾರ ಗಮನಕ್ಕೂ ಬಾರದ ಗೌಪ್ಯ ವಿದ್ಯಮಾನವಾಗಿರಲಿಲ್ಲ. ಆಸ್ಪತ್ರೆಯ ಮಕ್ಕಳಿಗೆ ಇಂಥಾ ದುಸ್ಥಿತಿ ಎದುರಾದ ಆರಂಭದ ದಿನಗಳಿಂದಲೇ ಇಲ್ಲಿನ ಸ್ಥಳೀಯ ಪತ್ರಕರ್ತರು ಆಸ್ಪತ್ರೆಯಲ್ಲಿರುವ ಮೂಲಸೌಕರ್ಯದ ಕೊರತೆ, ಸಿಬ್ಬಂದಿ ಕೊರತೆ, ನೈರ್ಮಲ್ಯೀಕರಣದ ವೈಫಲ್ಯಗಳ ಕುರಿತಂತೆ ಬೆಳಕು ಚೆಲ್ಲುತ್ತಲೇ ಬಂದಿದ್ದರು. ಕೆಲ ಪತ್ರಕರ್ತರಂತು ಆಸ್ಪತ್ರೆ ದುಸ್ಥಿತಿ ನೋಡಲಾಗದೆ ಎನ್‍ಐಸಿಯುನಲ್ಲಿ ಮಕ್ಕಳನ್ನು ಬೆಚ್ಚಗಿಡುವ ಹೀಟರ್‍ಗಳನ್ನೂ ದಾನ ಮಾಡಿದ್ದುಂಟು. ಬಿಜೆಪಿಯ ವಸುಂಧರಾ ರಾಜೆ ಸಿಎಂ ಆಗಿದ್ದ ಅವಧಿಯಿಂದಲೂ ಇಂಥಾ ವರದಿಗಾರಿಕೆ ನಡೆಯುತ್ತಲೇ ಇತ್ತು. ಆದರೆ ಅವೆಲ್ಲವೂ ಸ್ಥಳೀಯ ಸುದ್ದಿಗಳಾಗಿ ಕಳೆದುಹೋದವೇ ವಿನಃ, ನ್ಯಾಷನಲ್ ಮೀಡಿಯಾಗಳು ಅದರತ್ತ ತಿರುಗಿಯೂ ನೋಡಲಿಲ್ಲ.

ಕೋಟಾದ ಆಸ್ಪತ್ರೆ ಸಿಬ್ಬಂದಿಗಳ ಮತ್ತು ಮೂಲಸೌಕರ್ಯದ ಕೊರತೆಯಿಂದ ನಿರಂತರವಾಗಿ ನರಳುತ್ತಲೇ ಬಂದಿದೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಮಂಜೂರಾದ 533 ಅಗತ್ಯ ಪರಿಕರಗಳ ಪೈಕಿ 213 ಮಾತ್ರ ಕಾರ್ಯನಿರ್ವಹಣಾ ಸ್ಥಿತಿಯಲ್ಲಿವೆ. ಇನ್ನುಳಿದ 320 ಉಪಕರಣಗಳು ಕೆಟ್ಟುಹೋಗಿಯೋ, ಮುರಿದೋ ಮೂಲೆ ಸೇರಿ ಯಾವುದೋ ಕಾಲವಾಗಿದೆ. ಆಸ್ಪತ್ರೆಯ ಆವರಣದಲ್ಲಿ ಹಂದಿಗಳು ಯಾವ ಎಗ್ಗಿಲ್ಲದೆ ತಿರುಗಾಡುತ್ತವೆ. ಕಿಟಕಿಯ ಗಾಜುಗಳೆಲ್ಲ ಹೊಡೆದು ಚಳಿ, ಗಾಳಿಯಿಂದ ರೋಗಿಗಳಿಗೆ ರಕ್ಷಣೆ ಇಲ್ಲದಾಗಿದೆ. ಒಂದು ಬೆಡ್ ಮೇಲೆ ನಾಲ್ಕು ಮಕ್ಕಳನ್ನು ಮಲಗಿಸಲಾಗುತ್ತಿದೆ. ಒಂದೊಂದು ವೆಂಟಿಲೇಟರನ್ನು ಏಕಕಾಲದಲ್ಲಿ ಇಬ್ಬರು ಮಕ್ಕಳಿಗೆ ಬಳಸಲಾಗುತ್ತಿದೆ. ಆಸ್ಪತ್ರೆಯ ಪರಿಸ್ಥಿತಿ ಇಂಥಾ ಕರುಣಾಜನಕವಾಗಿರುವುದರಿಂದಲೇ 2014ರಿಂದ ನಿರಂತರವಾಗಿ ಇಲ್ಲಿ ಮಕ್ಕಳು ಪ್ರತಿವರ್ಷ ಸಾವಿರಕ್ಕೂ ಮೇಲ್ಪಟ್ಟು ಅಸುನೀಗುತ್ತಲೇ ಇದ್ದಾರೆ. ಆದರೆ ಆಗೆಲ್ಲ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದುದರಿಂದ ತೆಪ್ಪಗಿದ್ದ ನ್ಯಾಷನಲ್ ಗೋದಿ ಮೀಡಿಯಾಗಳು, ಈಗ ಎಚ್ಚೆತ್ತು ಬೊಬ್ಬೆ ಹೊಡೆದುಕೊಳ್ಳುತ್ತಿವೆಯೆಂದರೆ, ಅದಕ್ಕೆ ಕಾರಣ ಅಸುನೀಗುತ್ತಿರುವ ಮಕ್ಕಳ ಮೇಲಿನ ಕಾಳಜಿಯಲ್ಲ, ಅಧಿಕಾರದಲ್ಲಿರೋದು ಕಾಂಗ್ರೆಸ್ ಸರ್ಕಾರ ಎಂಬ ಸಂಕಟ!

ಮಕ್ಕಳ ಸಾವಿನ ಕುರಿತು ಹೇಳಿಕೆ ನೀಡುತ್ತಾ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ “ಮಕ್ಕಳು ಪ್ರತಿ ವರ್ಷ ಸಾಯ್ತಾರೆ. ಅದ್ರಲ್ಲಿ ಹೊಸದೇನೂ ಇಲ್ಲ” ಅಂತ ಹೇಳಿದ್ದು ನಿಜಕ್ಕೂ ಅಕ್ಷಮ್ಯ ಹೊಣೆಗೇಡಿ ಹೇಳಿಕೆ. ಆದ್ರೆ ಆ ಹೊಣೆಗೇಡಿ ಹೇಳಿಕೆಯಲ್ಲೂ ಸಣ್ಣದೊಂದು ಸತ್ಯ ಅಡಗಿರೋದನ್ನು ಆಸ್ಪತ್ರೆಯ ದಾಖಲೆಗಳೇ ರುಜುವಾತು ಮಾಡುತ್ತಿವೆ.

ಅದೇನೇ ಇರಲಿ, ಅಕ್ಕಪಕ್ಕದ ಮೂರ್ನಾಲ್ಕು ಜಿಲ್ಲೆಗಳ ಬಡರೋಗಿಗಳಿಗೆ ಏಕಮಾತ್ರ ಆಸರೆಯಾಗಿ ಉಳಿದಿರುವ ಜೆಕೆ ಲೋನ್ ಆಸ್ಪತ್ರೆ ಇನ್ಮುಂದಾದರು ಸುಧಾರಿಸುವಂತಾದರೆ ಅಷ್ಟುಸಾಕು.

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here