ಭಾರತದಿಂದ ರಫ್ತಾಗುವ ಅಡಿಕೆ ಹಾಳೆಯಿಂದ ತಯಾರಿಸಿದ ತಟ್ಟೆ, ಲೋಟ ಮತ್ತಿತರ ಊಟದ ಪರಿಕರಗಳು ಆರೋಗ್ಯಕ್ಕೆ ಹಾನಿಕರ ಹಾಗೂ ಕ್ಯಾನ್ಸರ್‌ಕಾರಕ ಎಂದು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ (FDA) ಮೇ 8 ,2025 ರಂದು ಹೊರಡಿಸಿರುವ ಆಮದು ನಿರ್ಬಂಧವನ್ನು ತೆರವುಗೊಳಿಸಲು ಪ್ರಧಾನ ಮಂತ್ರಿ ಹಾಗೂ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ. ಅಡಿಕೆ ಹಾಳೆ ರಫ್ತಿಗೆ
ಅಮೆರಿಕದ ಈ ನಿರ್ಭಂದವು ಅಮೆರಿಕ ಮಾತ್ರವಲ್ಲದೆ ಇಡಿ ಜಗತ್ತಿನ ಅಡಿಕೆ ಹಾಳೆ ಮಾರುಕಟ್ಟೆ ಮೇಲೆ ಕರಾಳ ಪರಿಣಾಮ ಬೀರುತ್ತಿದೆ. ಅಡಿಕೆ ಹಾಳೆಗಳಿಂದ ತಯಾರಾಗುತ್ತಿದ್ದ ಊಟದ ಪರಿಕರಗಳು ಜಾಗತಿಕವಾಗಿ ಸುಮಾರು ಮೂರುವರೆ ಸಾವಿರ ಕೋಟಿ ವಹಿವಾಟು ಇದ್ದು ಇದರಲ್ಲಿ ಕರ್ನಾಟಕ ರಾಜ್ಯದ ಕೊಡುಗೆಯೇ ಸುಮಾರು ಎರಡೂವರೆ ಸಾವಿರ ಕೋಟಿ ರೂಪಾಯಿಗಳಷ್ಟಿದೆ ಎಂದು ರೈತ ಸಂಘಟನೆ ಹೇಳಿದೆ.
ದೇಶದಲ್ಲೇ ಅತಿ ದೊಡ್ಡ ಅಡಿಕೆ ಬೆಳೆ ಬೆಳೆಯುವ ರಾಜ್ಯ ಕರ್ನಾಟಕವಾಗಿದ್ದು, ಈ ನಿರ್ಭಂಧದಿಂದ ಅಡಿಕೆ ಬೆಳೆಗಾರರು ಸೇರಿದಂತೆ ಈ ಉದ್ಯಮದಲ್ಲಿ ತೊಡಗಿರುವ ಸಹಸ್ರಾರು ಜನರ ಉದ್ಯೋಗದ ಮೇಲೆ ದುಷ್ಪರಿಣಾಮಗಳು ಕಂಡು ಬರುತ್ತಿದೆ ಎಂದು ಅದು ತಿಳಿಸಿದೆ.
ದಕ್ಷಿಣ ಕನ್ನಡ ಮುಂತಾದ ಜಿಲ್ಲೆಗಳಿಂದ ನಡೆಯುತ್ತಿದ್ದ ರಪ್ತು ವಹಿವಾಟು ತೀವ್ರ ಪ್ರಮಾಣದಲ್ಲಿ ಕುಸಿದಿದೆ. ಎಲೆ ಚುಕ್ಕಿ ರೋಗ, ಕೊಳೆ ರೋಗ ಮುಂತಾದ ಸಮಸ್ಯೆಗಳು ಸೇರಿದಂತೆ ಹಲವಾರು ವರ್ಷಗಳ ಬೆಲೆ ಕುಸಿತದ ಸಮಸ್ಯೆ ಅನುಭವಿಸಿ ಸತತ ನಷ್ಟದ ನಂತರ ಈ ವರ್ಷ ಸ್ವಲ್ಪ ಉತ್ತಮ ಬೆಲೆ ಪಡೆಯುವ ನಿರೀಕ್ಷೆಯಲ್ಲಿ ಇರುವಾಗಲೇ ಇಂತಹ ನಿರ್ಬಂಧಗಳು ಅಡಿಕೆ ಬೆಳೆಗಾರರನ್ನು ಮತ್ತಷ್ಟು ಕಷ್ಟಕ್ಕೆ ಸಿಲುಕಿಸುತ್ತದೆ ಎಂದು ಕೆಪಿಆರ್‌ಎಸ್ ಹೇಳಿದೆ.
ಅದ್ದರಿಂದ ಅಡಿಕೆ ಬೆಳೆ ಬೆಳೆಯುವ ಪ್ರದೇಶದ ಸಂಸತ್ ಸದಸ್ಯರು ಪ್ರಧಾನ ಮಂತ್ರಿಯ ಮೇಲೆ ಈ ತೊಡಕು ನಿವಾರಿಸುವಂತೆ ಒತ್ತಡ ತರಬೇಕು ಮತ್ತು ರಾಜ್ಯ ಸರ್ಕಾರ ಕೂಡ ತಕ್ಷಣ ಕೇಂದ್ರ ಸರ್ಕಾರವನ್ನು ಈ ಬಗ್ಗೆ ಒತ್ತಾಯಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.
ಒಂದು ಕಡೆ ತನ್ನ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಯಾವುದೆ ರೀತಿಯ ಸುಂಕ ವಿಧಿಸದಂತೆ ಅಮೆರಿಕ ಹಾಗೂ ಯೂರೋಪಿಯನ್ ದೇಶಗಳು ಭಾರತದ ಮೇಲೆ ಒತ್ತಡ ಹಾಗೂ ಬೆದರಿಕೆ ಹಾಕುತ್ತಿವೆ. ಅದೆ ಸಂದರ್ಭದಲ್ಲಿ ಭಾರತದ ಸರಕುಗಳು ತನ್ನ ದೇಶದೊಳಗೆ ಬರದಂತೆ ಸುಂಕ ಮತ್ತು ಸುಂಕಯೇತರ ಅಡ್ಡಿ ಸೃಷ್ಟಿಸುತ್ತಿದೆ ಎಂದು ಕೆಪಿಆರ್‌ಎಸ್ ಆತಂಕ ವ್ಯಕ್ತಪಡಿಸಿದೆ.
ಇತ್ತೀಚೆಗೆ ಮಾವು ಬೆಳೆಯನ್ನು ಇಂತಹದ್ದೆ ನೆಪ ಒಡ್ಡಿ ತಿರಸ್ಕರಿಸಿದ್ದರಿಂದ ಕೋಟ್ಯಾಂತರ ರೂ ಬೆಳೆ ನಾಶವಾಗಿದೆ ಎಂದು ಹೇಳಿರುವ ಸಂಘಟನೆಯು, ರಬ್ಬರ್ ಬೆಳೆಗೂ ಕೂಡ ಅರಣ್ಯ ನಾಶ ಮಾಡಿ ಬೆಳೆದಿಲ್ಲ ಎಂದು ಸರ್ಟಿಫಿಕೇಟ್ ಒದಗಿಸಲು ನಿರ್ಬಂಧ ಒಡ್ಡುತ್ತಿವೆ ಎಂದು ಹೇಳಿದೆ.
ಮುಕ್ತ ವ್ಯಾಪಾರ ಒಪ್ಪಂದಕ್ಕೆ ಒಳಪಡಿಸಲು ಇತ್ತೀಚಿನ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಸಂದರ್ಭವನ್ನು ಕೂಡ ದುರುಪಯೋಗ ಮಾಡಿಕೊಂಡಿದೆ. ಇಂತಹ ಕತ್ತು ಹಿಸುಕುವ ಅಮೆರಿಕ ಕ್ರಮಗಳನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಟುವಾಗಿ ಖಂಡಿಸುತ್ತಿಲ್ಲ ಎಂದು ಸಂಘಟನೆಯು ಆರೋಪಿಸಿದೆ.
ಚೀನಾ ಮತ್ತಿತರ ದೇಶಗಳ ರೀತಿ ತಿರುಗೇಟು ನೀಡಿ ನಮ್ಮ ದೇಶದ ಸ್ವಾವಲಂಬನೆ ಮತ್ತು ರೈತರ ಹಿತ ಕಾಪಾಡುವ ಕ್ರಮ ಕೈಗೊಳ್ಳದೇ ಟ್ರಂಪ್ ನ ಅಡಿಯಾಳಾಗಿ ಕೇಂದ್ರ ಸರ್ಕಾರ ವರ್ತಿಸುತ್ತಿದೆ ಎಂದು ಹೇಳಿರುವ ಸಂಘಟನೆಯು, ಕೇಂದ್ರ ಸರ್ಕಾರ ಮೇಲಿಂದ ಮೇಲೆ ಅಮೆರಿಕದ ಒತ್ತಡಗಳಿಗೆ ಮಣಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಗುಜರಾತ್ | ವಿದ್ಯಾರ್ಥಿನಿಯರ ಶಾಲಾ ಪ್ರವಾಸಗಳಲ್ಲಿ ಮಹಿಳಾ ಪೊಲೀಸರು ಕಡ್ಡಾಯ
ಗುಜರಾತ್ | ವಿದ್ಯಾರ್ಥಿನಿಯರ ಶಾಲಾ ಪ್ರವಾಸಗಳಲ್ಲಿ ಮಹಿಳಾ ಪೊಲೀಸರು ಕಡ್ಡಾಯ