Homeಅಂಕಣಗಳುಕುವೆಂಪು ನೆಲದಲ್ಲಿ ಸುಳ್ಳಿನ ಚಕ್ರತೀರ್ಥ

ಕುವೆಂಪು ನೆಲದಲ್ಲಿ ಸುಳ್ಳಿನ ಚಕ್ರತೀರ್ಥ

- Advertisement -
- Advertisement -

ಕನ್ನಡದ ಸಾಂಸ್ಕೃತಿಕ ಲೋಕದೊಳಕ್ಕೆ ನುಗ್ಗಿರುವ ಪುರೋಹಿತಶಾಹಿಗಳ ಸುಳ್ಳುಗಳು ವಿಜೃಂಭಿಸತೊಡಗಿದೆಯಲ್ಲಾ. ಈ ಪೈಕಿ ಕುವೆಂಪು ಸಾಹಿತ್ಯವನ್ನು ’ತಿದ್ದಲು’ ಹೋಗಿ ರೋಹಿತ್ ಚಕ್ರತೀರ್ಥ ಎಂಬ ವ್ಯಕ್ತಿ ಸಿಕ್ಕಿಬಿದ್ದರಲ್ಲಾ. ಕುವೆಂಪು ನಡೆದಾಡಿದ ಪ್ರದೇಶಕ್ಕೆ ಬಂದು ಕುವೆಂಪು ಚಾತುವರ್ಣದ ವಿರೋಧಿಯಾಗಿರಲಿಲ್ಲ ಎಂದಿದ್ದಾರಲ್ಲ. ಸದರಿ ಹೇಳಿಕೆಗೆ ಅಂತಹಾ ಪ್ರತಿಭಟನೆ ಕಂಡುಬಂದಿಲ್ಲ. ಏಕೆಂದರೆ ಒಬ್ಬ ವ್ಯಕ್ತಿ ಸುಳ್ಳನ್ನೇ ಹೇಳುತ್ತ ಜೀವಿಸುವುದಾದರೆ ನಮ್ಮ ಜನ ತಾತ್ಸಾರ ಮಾಡುತ್ತಾರೆ. ಹಾಗೆಯೇ ನಾಡಿನ ಪ್ರಜ್ಞಾವಂತರ ತಾತ್ಸಾರಕ್ಕೆ ಗುರಿಯಾಗಿರುವ ಚಕ್ರತೀರ್ಥ ಕುವೆಂಪುರವರನ್ನು, ಪಟ್ಟಾಗಿ ಕುಳಿತು ಓದಿದ್ದಾದರೆ ಅಲ್ಲಿ ಚಾತುರ್ವಣಕ್ಕೆ ಚಾಟೀ ಬೀಸಿರುವ ಮಾತುಗಳು ಯಥೇಚ್ಛವಾಗಿ ಸಿಗುತ್ತವೆ. ಭಾರತದ ಸಮಾಜವನ್ನು ಛಿದ್ರವಿಚ್ಛಿದ್ರಗೈದ ಮತ್ತು ಇಂದಿನ ಭರತಖಂಡದ ಸಮಸ್ಯೆಗಳಿಗೆ ಮೂಲ ಕಾರಣವಾದ ಮನುಧರ್ಮ ಶಾಸ್ತ್ರವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಸುಟ್ಟಿದ್ದರಲ್ಲಿ ದೊಡ್ಡ ಸಂದೇಶವಿದೆ. ಅದರ ಹೇಳಹೆಸರುಳಿಯದಂತೆ ಸುಟ್ಟು, ಬೂದಿಯನ್ನ ಅರಬ್ಬೀ ಸಮುದ್ರಕ್ಕೆರಚಿದಾಗ ಮಾತ್ರ ದೇಶ ಹಾಗೂ ಅಮಾಯಕ ಜನ ಅನಿಷ್ಠದ ಧರ್ಮಶೃಂಖಲೆಗಳಿಂದ ಪಾರಾಗುತ್ತಾರೆ. “ಶಾಸ್ತ್ರವೆಂಬುದು ಸಂತೆಯ ಸುದ್ದಿ, ಪುರಾಣವೆಂಬುದು ಪುಂಡರ ಗೋಷ್ಠಿ, ತರ್ಕವೆಂಬುದು ತಗರ ಹೋರಟೆ” ಎಂದು ಅಲ್ಲಮಪ್ರಭುಗಳು ಹೇಳಿದ್ದಾರಲ್ಲ. ಹಾಗೆಯೇ, “ಶಾಸ್ತ್ರಕ್ಕೆ ನಿಗಳನಿಕ್ಕುವೆ, ತರ್ಕದ ಬೆನ್ನ ಭಾರನೆತ್ತುವೆ, ಆಗಮದ ಮೂಗ ಕುಯ್ಯುವೆ” ಎಂಬ ಬಸವಣ್ಣನ ಮಾತನ್ನ ದಾಖಲಿಸಿರುವ ಕುವೆಂಪು ಅದಾವ ಮಾನದಂಡದಿಂದ ಚಾತುರ್ವರ್ಣ ಒಪ್ಪಿದ್ದರೆಂಬುದನ್ನ ಚಕ್ರತೀರ್ಥರೇ ತೋರಿಸಬೇಕಾಗಿದೆಯಲ್ಲಾ ಥೂತ್ತೇರಿ.

******

ಇತ್ತ ಸಾಹಿತ್ಯ ಪರಿಷತ್ತಿಗೆ ವಕ್ಕರಿಸಿರುವ ಜೋಶಿ ಎಂಬಾತನ ಸುಳ್ಳಿಗೆ ಇಡೀ ನಾಡೇ ಬೆಚ್ಚಿ ಬಿದ್ದಿದೆಯಲ್ಲಾ. ಶಿಶುನಾಳ ಶರೀಫರು ತಮ್ಮ ಆಧ್ಯಾತ್ಮದ ಗುರುವಾದ ಗೋವಿಂದ ಭಟ್ಟರನ್ನ ವಜ್ರದ ಹರಳೆಂದು ಕರೆದಿದ್ದಾರೆ. ಶಿಶುನಾಳ ಶರೀಫ ಈ ನಾಡುಕಂಡ ಮಹಾನ್ ಕವಿ. ಈ ಕವಿಯನ್ನ ಶೋಧಿಸಿ ನಾಡ ಗಾಯಕರೆಲ್ಲಾ ಹಾಡಿದ್ದಾರೆ. ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತದಂತಿರುವ ಈ ಚೇತನಗಳು ಕನ್ನಡದ ನೆಲದಲ್ಲಿ ಅಜರಾಮರವಾಗಿವೆ. ಶರೀಫರ ಕುಲಬಾಂಧವರಾರೂ ಅವರ ಸಂಬಂಧಿಗಳೆಂದು ಈವರೆಗೆ ಹೇಳಿಕೊಂಡಿಲ್ಲ. ಆದರೆ ಸಂಸಾರವೇ ಇಲ್ಲದೆ ಕಾಲವಾದ ಗೋವಿಂದ ಭಟ್ಟರ ವಂಶದ ಕುಡಿಯೊಂದು ಪ್ರತಿ ಮೂರು ಮಾತಿನ ನಡುವೆ ನಾನು ಗೋವಿಂದ ಭಟ್ಟರ ಮರಿಮೊಮ್ಮಮಗನೆಂದು ಹೇಳುತ್ತದೆಲ್ಲಾ. ಏನಾದರೂ ಪ್ರತಿಪಾದಿಸಿಕೊಂಡು ಹಾಳಾಗಿ ಹೋಗಲಿ ಎಂದರೆ, ಕನ್ನಡ ಸಾಂಸ್ಕೃತಿಕ ಲೋಕದ ಜಾತ್ಯತೀತ ವೇದಿಕೆಯಾದ ಸಾಹಿತ್ಯ ಪರಿಷತ್‌ಗೆ ಜನಿವಾರ ತೊಡಿಸುತ್ತಾ, ಸರಿಪಡಿಸಲಾಗದ ಅವಾಂತರ ಸೃಷ್ಟಿಸತೊಡಗಿದ್ದಾರೆ. ಒಂದು ವೇಳೆ ಈತ ಅಕಸ್ಮಾತ್ ಗೋವಿಂದ ಭಟ್ಟರ ಮರಿಮೊಮ್ಮಗನೇ ಆಗಿದ್ದರೆ ಕನ್ನಡದ ಪ್ರಗತಿಪರ ಚಿಂತಕರನ್ನು ಮನೋರೋಗದಿಂದ ಬಳಲುತ್ತಿರುವ ಜನ ಎಂದು ಸಂಬೋಧಿಸುತ್ತಿರಲಿಲ್ಲವಲ್ಲವೇ? ಥೂತ್ತೇರಿ.

*******

ಗುಜರಾತಿನ ಅಮಿತ್ ಶಾ ಎಂಬ ಅಮುಲ್ ಗಿರಾಕಿ ಮಂಡ್ಯಕ್ಕೆ ಬಂದುದ್ದೂ ಅಲ್ಲದೆ, ಕರ್ನಾಟಕದ ನಂದಿನಿಯನ್ನು ಅಮುಲ್ ಜೊತೆಗೆ ಸೇರಿಸಬೇಕು ಎಂದು ಬಿಟ್ಟಿದ್ದಾರಂತಲ್ಲಾ. ಶಾ ಅವರ ಇಂತಹ ಹೇಳಿಕೆಗೆ ಮಂಡ್ಯದ ಆ ಸಭೆಯಲ್ಲಿ ಯಾವ ಪ್ರತಿರೋಧವೂ ಬರಲಿಲ್ಲ. ಕಾರಣ ಅಲ್ಲಿ ಚಪ್ಪಾಳೆಗಾಗಿ ಕರೆದುಕೊಂಡು ಬಂದವರಿಗೆ ಶಾ ಹೇಳುವುದೇನು ಎಂಬುದೇ ತಿಳಿಯಲಿಲ್ಲ. ತಿಳಿದರೂ ಅವರ ಮಾತನ್ನು ಕೇಳುವವರು ಯಾರಿದ್ದರು ಅಲ್ಲಿ? ಆದರೆ ತಿಳಿದುಕೊಳ್ಳಬೇಕಾದವರು ತಮ್ಮ ರಾಸುಗಳ ಜೊತೆಗಿದ್ದರು. ರಾಸುಗಳ ಮೈ ತೊಳೆಯುವುದು, ಹಾಲು ಕರೆಯುವುದು, ಹುಲ್ಲು ಹಾಕುವುದು ಇತ್ಯಾದಿ ನಿರಂತರ ಕೆಲಸಗಳ ನಡುವೆ, ಇಂತಹ ಚಪ್ಪಾಳೆ ಸಂಸ್ಕೃತಿಗೆ ಹೊರತಾದ ಜನ ಅವರು. ಅಮುಲ್ ಹಾಲಿನೊಳಕ್ಕೆ ನಂದಿನಿ ಮಿಕ್ಸ್ ಮಾಡಿ ಕಡೆಗೆ ಅಮುಲ್ ಮಾತ್ರ ಬಳಸಿಕೊಂಡು ನಂದಿನಿಗೆ ತಿಲಾಂಜಲಿ ಇಡುವ ಹಿಕಮತ್ತಿನ ಭಾಷಣ ಅವರಿಗೆ ತಲುಪಲೇಯಿಲ್ಲ. ತಲುಪಿದ್ದೇ ಆದರೆ ಶಾ ಕಡೆಯವರು ಮಂಡ್ಯದ ಕಡೆ ಮುಖಹಾಕುವುದು ಕಷ್ಟವೆಂದರಿತು, ಶಾ ಹಾಗೆ ಹೇಳಿಲ್ಲ, ಅಮುಲ್ ಹಾಲಿನ ಹಂಡೆಗಳು ಮಂಡ್ಯಕ್ಕೆ ಬರುತ್ತವೆ, ಮಂಡ್ಯದ ಹಳೆ ಹಾಲಿನ ಕ್ಯಾನ್‌ಗಳು ಗುಜರಾತಿನ ಗುಜರಿ ಸೇರಿ ಹೊಸ ಕ್ಯಾನ್ ಬರುತ್ತವೆ ಎಂದು ಮುಖ್ಯಮಂತ್ರಿಯಿಂದ ಹಿಡಿದು ಕೂಗುಮಾರಿ ಸಿ.ಟಿ ರವಿವರೆಗೆ ಕರ್ನಾಟಕದ ಬಿಜೆಪಿಗಳು ಕೂಗುತ್ತಿವೆಯಲ್ಲಾ. ಮಂಡ್ಯದ ನೆಲ ಹುಟ್ಟಿಸಿದ ಭಯಕ್ಕೆ ಇನ್ನೇನು ಬೇಕು, ಥೂತ್ತೇರಿ.

******

ಮೈಸೂರು ರಂಗಾಯಣದ ಪ್ರದೇಶಕ್ಕೆ ಬಂದು ಸೇರಿಕೊಂಡಿರುವ ಅಡ್ನಾಡಿಗಳ ಅವಾಂತರಕ್ಕೆ ಹೇಸಿದ ಪ್ರಜ್ಞಾವಂತರಾರೂ ಆ ಕಡೆ ಸುಳಿಯದಿರುವುದು ಹಳೆಯ ಸುದ್ದಿ. ಈಗಾಗಲೇ ಟಿಪ್ಪು ಜೀವನವನ್ನ ವಿಕೃತಗೊಳಿಸಿ ನಾಟಕ ರಚಿಸಿ ಬೈಸಿಕೊಂಡವರ ಪೈಕಿ ಒಬ್ಬರು, ಚಂದ್ರಶೇಖರ ಕಂಬಾರರ ಸಾಂಭಶಿವ ಪ್ರಹಸನಕ್ಕೂ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರರ ಕಾರ್ಯವೈಖರಿಗೂ ಸಂಬಂಧವೇ ಇಲ್ಲದಿದ್ದರೂ, ಅನ್ನಭಾಗ್ಯವನ್ನ ಆಡಿಕೊಂಡಿದ್ದಾರಂತಲ್ಲಾ. ವಾಸ್ತವವಾಗಿ ಈ ನಾಟಕ ನಿರ್ದೇಶಕನಿಗೆ ಬಂದ ಧೈರ್ಯದ ಪ್ರೇರಣೆಯಾವುದೆಂದರೆ ಟಿಪ್ಪುವಿನ ಚರಿತ್ರೆಯನ್ನು ವಿಕೃತವಾಗಿ ತಿರುಚಿ ಆಡಿಸಿದ ನಾಟಕವೇ. ಇಂತಹವರ ವಿಕೃತಿಗೆ ಅಂತ್ಯ ಅಡುವುದು ಮೈಸೂರಿನ ಪ್ರಜ್ಞಾವಂತರ ಕೆಲಸ. ಈ ದೇಶವೇ ಕೊಂಡಾಡಿದ ಮೈಸೂರಿನ ಮಹಾರಾಜರ ಕರ್ಮ ಭೂಮಿಯಲ್ಲಿ, ಅದರಲ್ಲೂ ರಂಗಾಯಣದ ಆವರಣದಲ್ಲಿ, ಇತಿಹಾಸವನ್ನೇ ತಿರುಚುವ ವಿಕೃತಿಗಳು, ಕಲೆ ಸಾಹಿತ್ಯ ಸಂಗೀತವನ್ನೇ ಹಾಳುಮಾಡುವ ಕ್ರಿಮಿ ಕೀಟಗಳು ಇರಬಾರದಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ನಿಜಕ್ಕೂ ಇಂತದ್ದೊಂದು ಪಾರ್ಟಿ ಬೇಕಿತ್ತು ಸಾರ್..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

10 ವರ್ಷ ಅಧಿಕಾರದಲ್ಲಿದ್ದು, ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಹೇಳುತ್ತಿದ್ದರೆ ಅವರು ಮತ್ತೆ ಅಧಿಕಾರಕ್ಕೆ ಬರಬಾರದು:...

0
10 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಕೇಸರಿ ಪಕ್ಷವು 'ಹಿಂದೂಗಳು ಅಪಾಯದಲ್ಲಿದ್ದಾರೆ' (ಹಿಂದೂ ಖತ್ರೆ ಮೇ) ಎಂದು ಹೇಳುವುದನ್ನು ಮುಂದುವರಿಸಿದರೆ, ಪಕ್ಷ ಅಧಿಕಾರಕ್ಕೆ ಮರಳುವ ಅಗತ್ಯದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತದೆ, ಅಂತಹ ಪಕ್ಷ ಅಧಿಕಾರಕ್ಕೆ...