Homeಚಳವಳಿ6ನೇ ಮೇ ಸಾಹಿತ್ಯ ಮೇಳ: ಅಕ್ಷರ, ಮಾತು, ಚಿತ್ರಗಳ ಬೆಸೆದ ಹೋರಾಟ...

6ನೇ ಮೇ ಸಾಹಿತ್ಯ ಮೇಳ: ಅಕ್ಷರ, ಮಾತು, ಚಿತ್ರಗಳ ಬೆಸೆದ ಹೋರಾಟ…

- Advertisement -
- Advertisement -

| ಪಿ. ಕೆ. ಮಲ್ಲನಗೌಡರ್ |
ಎರಡು ದಿನಗಳ ಮೇ ಸಾಹಿತ್ಯ ಮೇಳದಲ್ಲಿ ‘ಅಭಿವೃದ್ಧಿ’ ಹೆಸರಿನ ಬೂಟಾಟಿಕೆಯನ್ನು ಚಿತ್ರ ಕಲಾವಿದರು, ಛಾಯಾಗ್ರಾಹಕರು, ತಮ್ಮ ದೃಷ್ಟಿಯಲ್ಲಿ ತೆರೆದಿಟ್ಟರೆ, ಮಾತುಗಳ ಮೂಲಕ ಸಾಹಿತಿಗಳು ಮತ್ತು ಹೋರಾಟಗಾರರು ತಮ್ಮ ಅಭಿಪ್ರಾಯಗಳನ್ನು ಜನರ ಮುಂದೆ ಇಟ್ಟರು. ಈ ಮೇಳದಲ್ಲಿ ಭಾಷಣಗಳ ನಂತರ ನಡೆದ ಸಂವಾದಗಳು ಅರ್ಥಪೂರ್ಣವಾಗಿದ್ದವು.

ಕೈಯಿಂದಲೇ ಮಲ ಬಾಚಿಸುವ ‘ವ್ಯವಸ್ಥೆ’ ಈ ದೇಶದ ಸಾವಿರಾರು ಶಹರ ಮತ್ತು ಅರೆ ನಗರಗಳಲ್ಲಿ ಇಂದೂ ಜೀವಂತವಾಗಿದೆ. ಮೇ ಸಾಹಿತ್ಯ ಸಮ್ಮೇಳನಕ್ಕೂ ವಾರ ಮೊದಲಷ್ಟೇ ಇಲ್ಲಿನ ನಗರಸಭೆಯ ಕಂಟ್ರಾಕ್ಟರ್ ಒಬ್ಬ ಗದಗದ ಒಂದು ಓಣಿಯ ಸಾರ್ವಜನಿಕ ಶೌಚಾಲಯವು ಕಟ್ಟಿಕೊಂಡಾಗ, ದಲಿತ ಹುಡುಗನ ನೆರವಿನಿಂದ ಅದನ್ನು ಸರಿಪಡಿಸುತ್ತಾನೆ. ಆ ಹುಡುಗ ಕೈಯಿಂದಲೇ ಮಲವನ್ನು ಬಾಚುತ್ತಿರುವ ದೃಶ್ಯಗಳು ಈಗಾಗಲೇ ಟಿವಿಯಲ್ಲಿ ಬಂದಿವೆ..

ಇಂತಹ ಒಂದು ಕಾಲಘಟ್ಟದಲ್ಲಿ, ಗದಗಿನಂತಹ ಅಷ್ಟೇನೂ ದೊಡ್ಡದಲ್ಲದ ಜಿಲ್ಲಾ ಕೇಂದ್ರದಲ್ಲಿ ವಿಲ್ಸನ್ ಬೆಜವಾಡ್ ಭಾಷಣ ಅರ್ಥಪೂರ್ಣವಾಗಿತ್ತು, ಅದು ವ್ಯವಸ್ಥೆಯ ಅಸಹ್ಯತನವನ್ನು ನಮ್ಮ ಎದುರಿಗೆ ತೆರದು ಇಟ್ಟಿತು. ಕೈಯಿಂದ ಮಲ ಬಾಚುವ, ಶೌಚಗುಂಡಿಗೆ ಇಳಿದು ‘ಕ್ಲೀನ್’ ಮಾಡುವ ಸಂದರ್ಭವು ಈ ದೇಶದಲ್ಲಿ ಇನ್ನೂ ಇದೆಯಾ ಎಂಬ ಸಂಶಯ ನಮ್ಮ ನ್ಯಾಯಾಲಯಗಳಿಗಿದೆ ಇದೆ ಎಂಬುದನ್ನು ಸಫಾಯಿ ಕರ್ಮಚಾರಿ ಆಂದೋಲನದ ರೂವಾರಿ ಮ್ಯಾಗಸ್ಸೆಸ್ಸೆ ಪುರಸ್ಕೃತ ವಿಲ್ಸನ್ ಬೆಜವಾಡ್ ನಮ್ಮ ಮುಂದೆ ತೆರೆದು ಇಟ್ಟರು.

ಈ ಅಮಾನವೀಯ ಪದ್ಧತಿಯನ್ನು ನಿಲ್ಲಿಸುವಂತೆ ಅವರು ಸರ್ಕಾರಗಳಿಗೆ ಮನವಿ ಮಾಡಿ ಸುಸ್ತಾಗಿ, ಕೋರ್ಟುಗಳ ಮೊರೆ ಹೋಗುತ್ತಾರೆ. 22 ಹೈಕೋರ್ಟುಗಳಲ್ಲಿ ಬಡಿದಾಡಿ ಸುಪ್ರೀಂಗೆ ಅವರು ಹೋದಾಗ, ಸರ್ಕಾರವನ್ನು ಪ್ರಶ್ನಿಸದ, ಸರ್ಕಾರದಿಂದ ಸಮಜಾಯಿಷಿ ಪಡೆಯದ ಸುಪ್ರೀಂ ಕೋರ್ಟ್, ಅರ್ಜಿದಾರರಿಗೇ (ಬೆಜವಾಡ್) ಈ ಅಮಾನವೀಯ ಪದ್ಧತಿಯ ಜಾರಿಯಲ್ಲಿದೆ ಎಂಬುದರ ಕುರಿತು ದಾಖಲೆ ಸಲ್ಲಿಸಿ ಎಂದು ಆದೇಶ ನೀಡುತ್ತದೆ.

ಬೆಜವಾಡ್ ಹೇಳುತ್ತಾರೆ ಕೇಳಿ: ‘ಈ ದಾಖಲೆ ಸಂಗ್ರಹಿಸಲು ನಾವು 20ಕ್ಕೂ ಹೆಚ್ಚು ರಾಜ್ಯ ಅಲೆದೆವು. ಅಲ್ಲಿ ಸೆಫ್ಟಿಕ್ ಅಲ್ಲದ ಹಳೆ ಶೌಚಾಲಯ, ಶೌಚಗುಂಡಿಗಳ ಫೋಟೊ ತೆಗೆದೆವು. ಕೈಯಿಂದ ಮಲ ಬಾಚುವವರ ಫೋಟೊಗಳನ್ನು ಕ್ಲಿಕ್ ಮಾಡುವಾಗ ನನ್ನ ಕರುಳು ಕಿತ್ತು ಬರುತ್ತಿತ್ತು. ಮಲ ಬಳಿಯುವಾತ ಫಟ್ಟನೇ ಕೈಯಿಂದ ಮಲ ಚೆಲ್ಲಿ ಬಿಟ್ಟಾಗ, ಇನ್ನೊಮ್ಮೆ ಮಲ ಬಾಚಿ ಕೈಯಲ್ಲೇ ಹಿಡಿದಿಕೋ ಎಂದು ಫೋಟೊ ದಾಖಲೆಗಾಗಿ ಕೇಳಿಕೊಳ್ಳುವಾಗ ನಾನು ಸತ್ತೇ ಹೋಗಿರುತ್ತಿದ್ದೆ’….

‘ಇಷ್ಟೆಲ್ಲ ಮಾಡಿ ಸುಪ್ರಿಂ ಮುಂದೆ ನಾವು ದಾಖಲೆ ಇಟ್ಟರೆ, ಮೊದಲ ಪುಟ ನೋಡಿದ ನ್ಯಾಯಾಧೀಶರು, ಅದರಲ್ಲಿ ಶೌಚಗುಂಡಿಯ ಫೋಟೊ ನೋಡಿ ಆ ದಾಖಲೆಯ ಪುಸ್ತಕವನ್ನೇ ಮುಚ್ಚಿ ಬಿಟ್ಟು, ರೀ ನಮಗೆ ಬೇರೆಲ್ಲ ಮಹತ್ವದ ಕೆಲಸ ಇವೆ. ಈ ಪಾಯಿಖಾನೆಗಳ ಫೋಟೊ ನಮ್ಮ ಮುಂದೆ ಇಟ್ಟು ನಮ್ಮ ಸಮಯ ಹಾಳು ಮಾಡಬೇಡಿ ಎಂದರು’….

‘ಈಗಿನ ಪ್ರಧಾನಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಕರ್ಮಯೋಗ ಎಂಬ ಪುಸ್ತಕದಲ್ಲಿ ‘ಮಲ ಬಳಿಯುವ, ಶೌಚಗುಂಡಿಗಳನ್ನು ಕ್ಲೀನ್ ಮಾಡುವ ದಲಿತರು ಅದರಲ್ಲಿ ಆಧ್ಯಾತ್ಮ ಸಂತೃಪ್ತಿ ಅನುಭವಿಸುತ್ತಾರೆ’ ಎಂದಿದ್ದರು. ಆಗ ನಾನು ಅವರಿಗೆ ನೀವೂ ಶೌಚಗುಂಡಿಗೆ ಇಳಿಯಿರಿ ಅಥವಾ ಮಲ ಬಾಚಿರಿ ಎನ್ನಲಿಲ್ಲ. ಹಾಗೆ ಹೇಳುವುದು ಅತ್ಯಂತ ಅಮಾನವೀಯತೆ ಎಂಬುದು ನನ್ನ ಅನುಭವದ ಮಾತು. ಎ.ಸಿ. ರೂಮ್‍ನಲ್ಲಿ ಪೌರ ಕಾರ್ಮಿಕರ ಪಾದ ತೊಳೆಯುವ ನಾಟಕ ಆಡಿದಾಗ ನಾನು ಹೇಳಿದ್ದಿಷ್ಟೇ: ಮೊದಲು ನಿಮ್ಮ ಮಿದುಳನ್ನು ಸ್ವಚ್ಛಗೊಳಿಸಿಕೊಳ್ಳಿ ಎಂದು…..’

‘ಈ ದೇಶದಲ್ಲಿ ಒಂದು ಬಾಂಬ್ ಸ್ಫೋಟವಾಗಿ ಹತ್ತಾರು ಜನ ಸತ್ತಾಗ ಜನ ಕಂಬನಿ ಮಿಡಿಯುತ್ತಾರೆ. ಅದು ಮಾನವೀಯತೆ. ಆದರೆ, ಪ್ರತಿವರ್ಷ ಸುಮಾರು 350ಕ್ಕೂ ಹೆಚ್ಚು ದಲಿತರು ಶೌಚಗುಂಡಿಗಳಲ್ಲಿ ಉಸಿರುಗಟ್ಟಿ ಸಾಯುತ್ತಾರಲ್ಲ? ಇದಕ್ಕೆ ‘ನಾಗರಿಕ’ ಸಮಾಜ ಮತ್ತು ಮೀಡಿಯಾ ಸ್ಪಂದಿಸುವುದಿಲ್ಲ, ಪ್ರಭುತ್ವವಂತೂ ಅದು ಅವರ ಹಣೆಬರಹ ಎಂಬಂತೆ ವರ್ತಿಸುತ್ತ ಬಂದಿದೆ’ ಎಂದು ಬೆಜವಾಡ್ ಆಕ್ರೋಶದಿಂದ, ವ್ಯಥೆಯಿಂದ, ದು:ಖದಿಂದ ಹೇಳಿದ ಈ ಮಾತುಗಳು ‘ಭಾರತದ ಅಭಿವೃದ್ಧಿ ಕಥನ’ದ ಕರಾಳ ಮುಖವನ್ನು ನಮ್ಮ ಮುಂದೆ ಇಟ್ಟವು.

ಮೇಳದ ಉದ್ಘಾಟನೆ ಕಾರ್ಯಕ್ರಮದಲ್ಲಿ ಆಶಯ ಮಾತುಗಳನ್ನಾಡಿದ ದಿನೇಶ ಅಮಿನ್‍ಮಟ್ಟು, ಅವರು ಆಗಾಗ ಹೇಳುತ್ತಲೇ ಬಂದಿರುವ ಮಾತೊಂದನ್ನು ಜ್ಞಾಪಿಸಿದರು. ‘1991ರಲ್ಲಿ ಚಾಲನೆಗೊಂಡ ಜಾಗತೀಕರಣ, ಉದಾರೀಕರಣದ ಆರ್ಥಿಕ ನೀತಿ ಮತ್ತು 1992ರಲ್ಲಿ ನಡೆದ ಬಾಬ್ರಿ ಮಸೀದಿ ಧ್ವಂಸದ ವಿದ್ಯಮಾನಗಳು ಒಂದಕ್ಕೊಂದು ಪೂರಕವಾಗಿವೆ. ಅವಕ್ಕೆ ನೇರ ಸಂಬಂಧವಿಲ್ಲದಿದ್ದರೂ, ಹೊಸ ಆರ್ಥಿಕ ನೀತಿಯ ವಿರುದ್ಧ ಶುರುವಾಗಿದ್ದ ಪ್ರತಿಭಟನೆಯ ಧ್ವನಿಯನ್ನು ಹಿನ್ನೆಲೆಗೆ ಸರಿಯುವಂತೆ ಮಾಡಿದ್ದು ‘ಧ್ವಂಸ’ದ ರಾಜಕೀಯ’ ಎಂದರು. ಇವರಿಬ್ಬರ ಭಾಷಣಗಳನ್ನೇ ಇಟುಕೊಂಡು ಹೇಳುವುದಾರೆ, ಇವತ್ತಿನ ಅಭಿವೃದ್ಧಿ ಮಾದರಿಗೆ ಅಡ್ಡಿಯಾಗಿರುವುದು ಜಾಗತೀಕರಣ, ಜಾತಿ ವ್ಯವಸ್ಥೆ ಮತ್ತು ಕೋಮುವಾದಗಳೇ.

ಎರಡು ದಿನಗಳ ಮೇ ಸಾಹಿತ್ಯ ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ ಈ ಅಂಶಗಳೇ ಬೇರೆ ಬೇರೆ ನೆಲೆಯಿಂದ, ವಿವಿಧ ಸಮುದಾಯಗಳ ನೆಲೆಯಿಂದ ಭಿನ್ನ ರೀತಿಯಲ್ಲಿ ಹೊರಹೊಮ್ಮಿದವು.

ಇದನ್ನು ಓದಿ:ಮೇ ಸಾಹಿತ್ಯ ಮೇಳದ ಮಹತ್ವದ ಕುರಿತು ಖ್ಯಾತ ಬರಹಗಾರ್ತಿ ಎಚ್.ಎಸ್ ಅನುಪಮಾರವರು ಬರೆದಿದ್ದಾರೆ.

ಗದುಗಿನಲ್ಲಿ ‘ಗೌರಿ’ ಹೋರಾಟಕ್ಕೊಂದು ಹೊಸ ಆಯಾಮ

ಎರಡು ದಿನಗಳ ಈ ಮೇ ಸಾಹಿತ್ಯ ಸಮ್ಮೇಳನದಲ್ಲಿ ಗೌರಿ ಲಂಕೇಶ್ ಮತ್ತು ಪ್ರೊ.ಕಲಬುರ್ಗಿ ಎಷ್ಟೋ ಸಲ ಪ್ರಸ್ತಾಪವಾದರು. ಉದ್ಘಾಟನಾ ಭಾಷಣದಿಂದ ಹಿಡಿದು ಸಮಾರೋಪ ಭಾಷಣದವರೆಗೂ ನಾಡಿನ ಮತ್ತು ಹೊರಗಿನ ಚಿಂತಕರು ಮತ್ತು ಹೋರಾಟಗಾರರು ಈ ಹೆಸರುಗಳನ್ನು ಪ್ರಸ್ತಾಪಿಸುತ್ತಲೇ ಬಂದರು.

ಉದ್ಘಾಟನಾ ಭಾಷಣದಲ್ಲಿ, ‘ಮಲ ಬಾಚುವ ಸಮುದಾಯದಲ್ಲಿ ಎಂತಹ ಮೌಢ್ಯ ಬಿತ್ತಲಾಗಿದೆ ಎಂದರೆ, ಈ ಕೆಲಸ ಮಾಡುವುದು ನಿಮ್ಮ ಹಣೆಬರಹ, ಅದಕ್ಕಷ್ಟೇ ನೀವು ಲಾಯಕ್ಕು ಎಂಬ ಮೌಢ್ಯವನ್ನು ಬಿತ್ತಲಾಗಿದೆ. ಈ ಮೌಢ್ಯದ ವಿರುದ್ಧ ಬರೆದ ಪನ್ಸಾರೆ, ಧಾಬೋಲ್ಕರ್ ಅವರನ್ನು, ‘ಹಿಂದೂ’ ಎನ್ನುವುದು ಒಂದು ಧರ್ಮವೇ ಅಲ್ಲ ಎಂದು ಪ್ರತಿಪಾದಿಸಿದ ವಿದ್ವಾಂಸ ಕಲಬುರ್ಗಿಯವರನ್ನು ಹೇಡಿಗಳು ಬಂದೂಕಿನಿಂದ ಇಲ್ಲವಾಗಿಸಿದರು. ಬರೆಯುವುದಷ್ಟೇ ಅಲ್ಲ, ಸಾರ್ವಜನಿಕವಾಗಿ ಪ್ರಭುತ್ವದ ವಿರುದ್ಧ ತೊಡೆ ತಟ್ಟಿದ ದಿಟ್ಟ ಗೌರಿ ಲಂಕೇಶರನ್ನು ಎದುರಿಸಲಾಗದ ಕೋಮುವಾದಿಗಳು ಅವರನ್ನೂ ಮೋಸದಿಂದಲೇ ಕೊಂದರು. ನೀವಿಲ್ಲಿ ಸಾವಿರ ಸಂಖ್ಯೆಯಲ್ಲಿ ಇದ್ದೀರಲ್ಲ ನೀವೆಲ್ಲ ಗೌರಿಗಳೇ, ನಾನೂ ಗೌರಿಯೇ’ ಎಂದು ಭಾವುಕರಾಗಿ ಹೇಳಿದರು.

ಮಹಾರಾಷ್ಟ್ರದ ರಾವ್ ಕಸಬೆ ಕೂಡ ಕಲಬುರ್ಗಿ, ಗೌರಿಯರ ಪ್ರಸ್ತಾಪ ಮಾಡಿದರು. ತೃತೀಯಲಿಂಗಿಗಳ ಹಕ್ಕಿಗಾಗಿ ಹೋರಾಡುತ್ತಿರುವ ಹಾವೇರಿ ಅಕ್ಷತಾ, ‘ಗೌರಿ ನನ್ನವ್ವ… ನನ್ನವ್ವನ ಕೊಂದವರ ವಿರುದ್ಧ ದೊಡ್ಡ ಹೋರಾಟ ಕಟ್ಟೋಣ ಬನ್ನಿ’ ಎಂದು ಜೋರಾಗಿ ಘರ್ಜಿಸಿದರು.
ಕವಿಗೋಷ್ಠಿಗೂ ಮುಂಚೆ, ಮೇ ಮೇಳದ ಕುರಿತಾಗಿಯೇ ಮಾಡಿದ್ದ ವಿಡಿಯೋದಲ್ಲಿ ಪದೇ ಪದೇ ಗೌರಿ ಮುಖವೇ ಕಾಣುತ್ತಿತ್ತು. ಕವಿಗೋಷ್ಠಿಯ ಆಶಯ ಭಾಷಣ ಮಾಡಿದ ಮಮತಾ ಸಾಗರ್ ಅವರು, ಗೌರಿ ಹತ್ಯೆಯ ಸಂದರ್ಭದಲ್ಲಿ ಹೊಟೆಲ್ ಒಂದರಲ್ಲಿ ಕುಳಿತು ಅಳುತ್ತಲೇ ಟಿಶ್ಯೂ ಪೇಪರರ ಒಂದರ ಮೇಲೆ ಕವಿತೆ ಬರೆದಿದ್ದನ್ನು ನೋವಿನಲ್ಲೇ ಹಂಚಿಕೊಂಡರು. ಆ ಕವಿತೆಯನ್ನು ಒತ್ತಾಯದಿಂದ ಬರೆಸಿಕೊಂಡ ಸಂಗೀತ ನಿರ್ದೇಶಕ ವಾಸು ದೀಕ್ಷಿತ ಅದನ್ನು ವಿಡಿಯೋ ಹಾಡಿನ ರೂಪದಲ್ಲಿ ಸಂಯೋಜಿಸಿದ್ದಾರೆ. ಆ ವಿಡಿಯೋವನ್ನು ಪ್ರದರ್ಶಿಸಿದಾಗ ಸಭಿಕರ ಕಣ್ಣುಗಳು ತೇವಗೊಂಡಿದ್ದವು.

ಸಮಾರೋಪದಲ್ಲಿ ಆಂಧ್ರದ ಜಾನಪದ ಕವಿ, ಹಾಡುಗಾರ ಮಾತಿನ ಆರಂಭದಲ್ಲೇ, ‘ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡಿ ದುಷ್ಟ ಕೋಮುವಾದಿಗಳ ಹೇಯ ಕೃತ್ಯಕ್ಕೆ ಬಲಿಯಾದ ಕಲಬುರ್ಗಿ, ಗೌರಿಯರನ್ನು ನೆನೆದರು. ಅವರ ಹಾಡಿನಲ್ಲೂ ಗೌರಿಯ ಪ್ರಸ್ತಾಪವಿತ್ತು: ‘ಪೆನ್ನಿನ ಮೇಲೆ ಮಣ್ಣು ಹಾಕುವಿರಾ? ನಾವು ಗನ್ನು ಹಿಡಿದೇ ಬರಬೇಕಾ?’ ಎಂಬರ್ಥದ ಹಾಡದು….

ಹೀಗೆ ಗೋಷ್ಠಿಗಳಲ್ಲಿ, ವಿಡಿಯೋಗಳಲ್ಲಿ ನಮ್ಮ ಗೌರಿ ಮೇಡಮ್ ಪ್ರಸ್ತಾಪವಾಗುತ್ತಲೇ ಇದ್ದರು. ಬಂದಿದ್ದ ಹಲವಾರು ಸಾಹಿತ್ಯಾಸಕ್ತ ಮತ್ತು ಚಳವಳಿ ಹಿನ್ನೆಲೆಯ ಯುವ ಸಭಿಕರೊಂದಿಗೆ ಮಾತಾಡಿದಾಗ ಸಿಕ್ಕಿದ್ದು: ‘ಪನ್ಸಾರೆ, ಧಾಬೋಲ್ಕರ್, ಕಲಬುರ್ಗಿ, ಗೌರಿ- ಇವರೆಲ್ಲ ಜನರಿಗಾಗಿಯೇ ಪ್ರಾಣ ತೆತ್ತವರು. ಕಲಬುರ್ಗಿಯವರ ವಿದ್ವತ್‍ಪೂರ್ಣ ಲೇಖನಗಳು ಹೋರಾಟಗಳಿಗೆ ಪರೋಕ್ಷ ದಿಕ್ಸೂಚಿಯಾಗಿವೆ. ಆದರೆ, ಸರಳ ಭಾಷೆಯಲ್ಲಿ ಸತ್ಯಗಳನ್ನು ಬರೆದ, ಅದಕ್ಕಿಂತ ಹೆಚ್ಚಾಗಿ ಅದನ್ನೆಲ್ಲ ಸಾರ್ವಜನಿಕ ಸಭೆಗಳಲ್ಲಿ ಹೇಳುತ್ತ ಸಾಮಾನ್ಯ ಜನರಲ್ಲಿ, ಅದರಲ್ಲೂ ಯುವಕರಲ್ಲಿ ಕೋಮುವಾದಿ ವಿರೋಧಿ ಹೋರಾಟದ ಅರಿವು, ಕಿಚ್ಚು ಮೂಡಿಸಿದ ಗೌರಿ ಮೇಡಂ ಮಾರ್ಗ ನಮ್ಮೆಲ್ಲ ಹೋರಾಟಗಳಿಗೆ ಸ್ಪೂರ್ತಿಯಾಗಬೇಕಿದೆ….

ಸೂಫಿ ಸಂಜೆಯಲ್ಲಿ ಮಿಂದೆದ್ದ ಸಭಿಕರು
ಆಧ್ಯಾತ್ಮ, ಅನುಭಾವ, ಪ್ರೀತಿಗಳ ಸಂಕರದಂತಿದ್ದ ಗಾಯನಕ್ಕೆ ಮೇ ಸಾಹಿತ್ಯ ಮೇಳವೇ ಶರಣು ಶರಣೇ ಎಂದಿತು. ಮೇ ಸಾಹಿತ್ಯ ಮೇಳದ ಮೊದಲ ದಿನದ ಸಂಜೆ ಸೂಫಿ ಗಾಯಕ ಮುಖ್ತಿಯಾರ್ ಅಲಿ ಮತ್ತು ಅವರ ತಂಡ ಸಂಗೀತದೊಂದಿಗೆ ಪ್ರೀತಿಯನ್ನು ಹರಡಿ ಪ್ರೇಕ್ಷಕರನ್ನು ಮಂತ್ರಮುಗ್ಧರಾಗಿಸಿತು. “ಹರಿ ಓಂ” ಗಾಯನದಿಂದ ತಣ್ಣಗೆ ಶುರು ಮಾಡಿದ ಮುಖ್ತಿಯಾರ್ ನಂತರ ಧ್ವನಿಯೇರಿಸಿ ಹಾವಭಾವಗಳೊಂದಿಗೆ ತಾರಕಕ್ಕೆ ತಲುಪುತ್ತ, ಮತ್ತೆ ತಣ್ಣಗಿನ ಭಾವಕ್ಕೆ ಇಳಿಯುತ್ತ ಎಲ್ಲರೂ ತಲೆದೂಗುವಂತೆ ಮಾಡಿದರು.

ಅವರ ಮೋಹಕ ಧ್ವನಿಯ ಏರಿಳಿತಕ್ಕೆ ತಕ್ಕಂತೆ ಹಾರ್ಮೊನಿಯಂ ಮತ್ತು ತಬಲಗಳು ಹೊಮ್ಮಿಸಿದ ಹಿತಕರ ಸಂಗೀತ ಇಡೀ ಸಭಾಂಗಣದಲ್ಲಿ ಸಂಚಲನ ಮೂಡಿಸಿತು. ಕಬೀರರ ಮಾನವ ಪ್ರೀತಿಯ ಸಾಹಿತ್ಯವನ್ನು ಅಂತ:ಕರಣದ ಪ್ರೀತಿಯ ಹಾಡಿನ ಮೂಲಕ ಜನರೆದುರು ಮುಖ್ತಿಯಾರ್ ತೆರದಿಟ್ಟರು. ಸುಮಾರು ಹೊತ್ತಿನವರಿಗೂ ಈ ಗಾನಸುಧೆ ಸಭಾಂಗಣದ ತುಂಬ ಪ್ರೀತಿಯ ಸಹಬಾಳ್ವೆಯ ತರಂಗಗಳನ್ನು ಹೊಮ್ಮಿಸಿತು. ಪ್ರೇಕ್ಷಕರು ಸೂಫಿ ಗುಂಗಿನಲ್ಲೇ ತನ್ನಯರಾಗಿ ಆಲಿಸುತ್ತ ಮುಖ್ತಿಯಾರ್ ಗಾಯನವನ್ನು ಮನದುಂಬಿಕೊಂಡರು. ಹಾಡುಗಳ ನಡುನಡುವೆ ಮುಖ್ತಿಯಾರ್ ಜೀವಪ್ರೀತಿಯ ಸೆಲೆಗಳ ಮಾತುಗಳನ್ನು ಆಡುತ್ತ ಹೋದರು. ಹಾಡಿನ ಹಿಂದೆ ಹಾಡು ಹರಿದು ಬಂದಂತೆ ಒಂಥರಾ ಹುಚ್ಚು ಹಿಡಿದು ಗುಂಗು ಆವರಿಸಿದ ಭಾವ ಸಭೆಯಲ್ಲಿ ಗುನಗುನಿಸುತ್ತಿತ್ತು.

ಉಳಕೊಂಡ ಪ್ರಶ್ನೆಗಳು
ಈ ಮೇಳಕ್ಕೆ ಹಿಂದಿನ ಐದು ಮೇಳಗಳಿಗಿಂತ ಹೆಚ್ಚಿನ ಯಶಸ್ಸು ಸಿಕ್ಕಿದೆ. ಧಾರವಾಡದಂತಹ ಸಾಂಸ್ಕೃತಿಕ ನಗರಗಳಲ್ಲಿ ನಡೆದ ಹಿಂದಿನ ಸಮ್ಮೇಳನಗಳಿಗಿಂತ ಇಲ್ಲಿ ಹೆಚ್ಚಿನ ಸಭಿಕರಿದ್ದರು ಮತ್ತು ಅವರೆಲ್ಲ ರಾಜ್ಯದ ವಿವಿಧ ಪ್ರದೇಶ ಮತ್ತು ಜಾತಿ/ಧರ್ಮಗಳಿಂದ ಬಂದವರಾಗಿದ್ದರು. ಇಲ್ಲಿ ನಡೆದ ಭಾಷಣ, ಚರ್ಚೆ, ಸಂವಾದ, ಹಾಡು- ಈ ಎಲ್ಲವೂ ಅರ್ಥಪೂರ್ಣವಾಗಿದ್ದವು. ಹಾಗಾಗಿ ಇದೊಂದು ಯಶಸ್ವಿ ಸಮ್ಮೇಳನ.
ಇದನ್ನು ಅಧಿಕೃತವಾಗಿ ಸಂಘಟಿಸಿದ್ದು ಎರಡು ಪುಸ್ತಕ ಪ್ರಕಾಶನಗಳು ಮತ್ತು ಒಂದು ಕಲಾಬಳಗ. ಇಲ್ಲಿ ಸಾಹಿತ್ಯಾಸಕ್ತರಿಗಷ್ಟೇ ಈ ಸಂಘಟಕರು ಜಾಸ್ತಿ ಪರಿಚಿತ. ಆದರೆ ವಿವಿಧ ಸಂಘಟನೆಗಳಿಂದ ನೂರಾರು ಜನ ಬಂದಿದ್ದರು. ಬಹುಶಃ ಸಂಘಟಕರ ಹೋರಾಟದ ಹಿನ್ನೆಲೆಯೂ ಇದಕ್ಕೆ ಒಂದು ಕಾರಣ ಇರಬಹುದು.

ಆದರೆ ವ್ಯಕ್ತಿಗತವಾಗಿ ಅನಿಸುವುದೆಂದರೆ, ಇವತ್ತಿನ ಕಾಲಘಟ್ಟದ ಆತಂಕ, ಚುನಾವಣೆ ಹಿಡಿದಿರುವ ಹಾದಿ, ನಿರುದ್ಯೋಗ, ರೈತರ ಸಂಕಷ್ಟ, ಶೋಷಿತರ ನೋವು- ಇವೆಲ್ಲವೂ ಸಾಹಿತ್ಯಾಸಕ್ತರ ಜೊತೆಗೆ ಹೋರಾಟ ಮನೋಭಾವದ ಯುವ ಜನತೆಯನ್ನು ಈ ಸಮ್ಮೇಳನಕ್ಕೆ ಕರೆ ತಂದಿರುವಂತೆ ಕಾಣುತ್ತಿದೆ.

ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡವರು ಅವರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಒಂದು ವೃತ್ತಕ್ಕೆ (ಸರ್ಕಲ್) ಸೀಮಿತ ಆಗಿದ್ದಾರೆ. ಅಂಥಹ ವಿವಿಧ ವೃತ್ತಗಳು ಇಲ್ಲಿ ಒಟ್ಟಾಗಿ ಸೇರಿದ್ದವು. ಆದರೆ, ಈ ವೃತ್ತಗಳು ವಿಭಿನ್ನ ಸಂದರ್ಭಗಳಲ್ಲಿ ಪ್ರತ್ಯೇಕವಾಗಿಯೇ ತಮ್ಮ ಅಸ್ತಿತ್ವ ಮತ್ತ ಅಸ್ಮಿತೆಯನ್ನು ಇಟ್ಟುಕೊಂಡು ಹೋರಾಟ ಮಾಡುತ್ತಿವೆ. ಅಂತಹ ವೃತ್ತಗಳೆಲ್ಲ ಒಂದು ಸದಾಶಯಕ್ಕಾಗಿ ಇಂತಹ ಮೇಳದಲ್ಲಿ ಪಾಲ್ಗೊಳ್ಳುವುದು ಆಶಾದಾಯಕ ಸಂಗತಿಯೇ.

ಆದರೆ, ವೆನ್ ನಕ್ಷೆ ಮಾದರಿಯಲ್ಲಿ ಯೋಚಿಸಿ ಚಿತ್ರ ಬರೆದರೆ, ಯಾವ್ಯಾವ ವೃತ್ತಗಳು ಎಲ್ಲೆಲ್ಲಿ ಸಂಧಿಸುತ್ತವೆ ಎಂಬುದನ್ನು ನೋಡಿದಾಗ, ಈ ಎಲ್ಲ ವೃತ್ತಗಳೂ ಮುಖಾಮುಖಿಯಾಗುವ (ಎಲ್ಲ ವೃತ್ತಗಳೂ ಸಂಧಿಸುವ ಜಾಗ) ಸ್ಪೇಸ್ ನೋಡಿದಾಗ ಕೊಂಚ ನಿರಾಶೆಯೇ ಆಗುತ್ತದೆ. ಆ ಸಂಧಿಸುವ ಜಾಗ ಪ್ರತಿ ವೃತ್ತದ ಸರಾಸರಿ ವಿಸ್ತೀರ್ಣದ ಶೇ. 10ರಷ್ಟೂ ಇಲ್ಲವೇನೋ?

ಈ ಮೇಳ ಈ ಕೊರತೆಯನ್ನು ತುಂಬಲು, ವೃತ್ತಗಳು ಸಂಧಿಸುವ ಜಾಗವನ್ನು ಹಿಗ್ಗಿಸಲು ಪ್ರಯತ್ನಿಸಿದೆ, ಅಕ್ಷರ, ಮಾತು, ಚಿತ್ರಗಳನ್ನು ಬೆಸೆಯಲು ಹೋರಾಟದ ತಳಹದಿ ಬೇಕು ಎನ್ನುವುದನ್ನು ಮತ್ತೊಮ್ಮೆ ಮನಗಾಣಿಸಿದೆ. ವೃತ್ತಗಳೆಲ್ಲ ಒಂದರಲ್ಲೊಂದು ಲೀನವಾಗುವ ಸದಾಶಯ ಇಟ್ಟುಕೊಂಡೇ ಎಲ್ಲ ಪ್ರಗತಿಪರ ಚಳವಳಿ, ಹೋರಾಟಗಳು ರೂಪುಗೊಳ್ಳಬೇಕಾದ ತುರ್ತು ಅಗತ್ಯದ ಪಾಠವನ್ನೂ ಈ ಮೇಳ ನಮಗೆಲ್ಲ ಕಲಿಸಿದೆಯಲ್ಲವೇ?

ಇನ್ನೂ ಒಂದು ಪ್ರಶ್ನೆ: ಮೇಳದ ನಂತರ ಭಾಗವಹಿಸಿದವರ ಫೇಸ್‍ಬುಕ್ ಪೇಜ್‍ಗಳಲ್ಲಿ ಮೇಳದ ಕುರಿತು ವಿವರ ಇವೆ. ಆದರೆ, ಅದರಲ್ಲಿ ಸುಮಾರು ಶೇ. 90ರಷ್ಟು ಪೋಸ್ಟ್‍ಗಳಲ್ಲಿ ಪ್ರಸಿದ್ಧರ ಜೊತೆ ತೆಗೆಸಿಕೊಂಡ ಫೋಟೊಗಳೇ ಇವೆ, ಅಲ್ಲೆಲ್ಲೂ ಮೇಳದಿಂದ ಕಲಿತ ಹೊಸ ವಿಷಯಗಳಂತೂ ಕಾಣುತ್ತಿಲ್ಲ. ಹೀಗಾಗಿ ಸಂಘಟಕರ ಪ್ರಾಮಾಣಿಕ ಉದ್ದೇಶ ಸಫಲವಾಯಿತಾ? ಅಥವಾ ಈ ಮೇಳವೇ ಒಂದು ‘ಸೆಲೆಬ್ರೆಷನ್ ಮೋಡ್’ನ ನೆರಳಲ್ಲಿ ಹಿನ್ನಡೆ ಅನುಭವಿಸಿತಾ? ಈ ಪ್ರಶ್ನೆಗಳು ಈ ವರದಿಗಾರನ ವೈಯಕ್ತಿಕ ಪ್ರಶ್ನೆಗಳಷ್ಟೇ.

ಮೇಳದ ಯಶಸ್ಸಿನ ನಂತರವೂ ಈ ಪ್ರಶ್ನೆಗಳನ್ನು ಸಂಘಟಕರು ಮತ್ತು ಭಾಗವಹಿಸಿದವರು ಕೇಳಿಕೊಳ್ಳಲೇಬೇಕಾದ ಅಗತ್ಯವಂತೂ ಇದೆ. ಅದು ಮುಂದಿನ ದಾರಿಗೆ ದಿಕ್ಸೂಚಿ ಆಗಬಲ್ಲದು.

ಮೇ ಸಾಹಿತ್ಯ ಮೇಳದಲ್ಲಿ ಬೆಜವಾಡ ವಿಲ್ಸನ್, ದಿನೇಶ್ ಅಮೀನ್ ಮಟ್ಟು ಮತ್ತು ರಾವ್ ಸಾಹೇಬ್ ಕಸಬೆಯವರ ಭಾಷಣಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...