ಯಾವುದೇ ಅಪರಾಧ ಆಗಿರಲಿ, ಅದೊಂದು ಅತ್ಯಂತ ನೋವು ತರಿಸುವ ಸಂಗತಿ. ಅದರಲ್ಲಿ ಕೆಲವು ಸಂಗತಿಗಳು ನಮ್ಮನ್ನು ಸುಮ್ಮನೇ ಇರಲು ಬಿಡುವುದಿಲ್ಲ. ಅಪರಾಧ ಎಷ್ಟು ಘೋರವಾಗಿ ತಟ್ಟಿರುತ್ತೆ ಎಂದರೆ, ಅದರಲ್ಲಿ ನಾವೂ ಭಾಗಿ ಎಂದೆನಿಸುತ್ತದೆ ಹಾಗೂ ಅದು ಸತ್ಯವೂ ಕೂಡ. ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಆಗುವ ಎಲ್ಲಾ ಅಪರಾಧಗಳಲ್ಲಿ ಅಪರೋಕ್ಷವಾಗಿ ಭಾಗಿಯೇ.

ಇಂತಹ ಒಂದು ಅಪರಾಧ ನಡೆದಾಗ, ಅದಕ್ಕೆ ಕೇವಲ ಆ ಅಪರಾಧಿ ಮಾತ್ರ ಭಾಗಿಯಾಗದೇ, ಸಮಾಜವೇ ಭಾಗಿಯಾಗಿ ಅದನ್ನು ಸಂಭ್ರಮಿಸಿ, ಅಪರಾಧಕ್ಕೆ ತುತ್ತಾದವರನ್ನು ಇನ್ನಷ್ಟು ಕ್ಷೋಭೆಗೆ ಸಿಲುಕುವ ಕೆಲಸ ಮಾಡಿದಾಗ, ಅದಕ್ಕಾಗಿ ಏನಾದರೂ ಮಾಡಬೇಕು ಎಂದು ಎಲ್ಲರಿಗೂ ಅನಿಸುವುದು ಸಹಜ. ಆ ಅಪರಾಧಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು, ಅಂತಹ ಅಪರಾಧಗಳು ಮತ್ತೊಮ್ಮೆ ಆಗಬಾರದು ಎಂದು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು, ಕೆಲವು ಸಲ ಆ ವಿಷಯಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಎನ್ನುವ ಅನೇಕ ಕೆಲಸಗಳನ್ನು ಸಮಾಜದ ಕೆಲವು ಅಂಗಗಳು ಮಾಡುತ್ತವೆ.

ಅಂತಹದ್ದೇ ಒಂದು ಘೋರ ಅಪರಾಧದ ಬಗ್ಗೆ ನೊಂದಿರುವ ಯುವ ನಿರ್ದೇಶಕ ನಾಗೇಶ್ ಹೆಬ್ಬೂರು ಅವರು ‘ಪಬ್ಲಿಕ್ ಟಾಯ್ಲೆಟ್’ ಎಂಬ ಕಿರುಚಿತ್ರವನ್ನು ಮಾಡಿದ್ದಾರೆ. ಒಂದು ಸಾರ್ವಜನಿಕ ಶೌಚಾಲಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ, ಆ ಕ್ರಿಯೆಯನ್ನು ಒಬ್ಬ ಕ್ಯಾಮೆರದಲ್ಲಿ ಸೆರೆ ಹಿಡಿದು, ಎಲ್ಲೆಡೆ ಹಂಚಲಾಗಿತ್ತು, ತದನಂತರ ಆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಳು ಎನ್ನಲಾದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು ಸುದ್ದಿಯಾಗಿತ್ತು. ಇದೇ ವಿಷಯವನ್ನು ಇಟ್ಟುಕೊಂಡು ಈ ಕಿರುಚಿತ್ರವನ್ನು ಮಾಡಲಾಗಿದೆ.

ಇಂತಹ ವಿಷಯಗಳಲ್ಲಿ ಯಾರನ್ನು ಚಿತ್ರದ ಮುಖ್ಯಪಾತ್ರವನ್ನಾಗಿ ಮಾಡಬೇಕು ಎಂಬದು ಯಾವಾಗಲೂ ಒಂದು ಪ್ರಶ್ನೆ ಇರುತ್ತದೆ. ಈ ಚಿತ್ರದಲ್ಲಿ ತನ್ನ ಕ್ಯಾಮೆರದಲ್ಲಿ ಆ ದೃಶ್ಯವನ್ನು ಸೆರೆಹಿಡಿದ ವ್ಯಕ್ತಿಯನ್ನೇ ಪ್ರಮುಖಪಾತ್ರ ಮಾಡಲಾಗಿದೆ. ಅದು ಸರಿ ಕೂಡ. ಇಂತಹ ಘೋರ ಕೃತ್ಯಗಳನ್ನು ಎಸಗುತ್ತಾದರೂ ಏಕೆ ಎಂದು ತಿಳಿದು, ಅದರ ಬಗ್ಗೆ ಪರಿಹಾರ ಕಂಡುಕೊಳ್ಳಬೇಕಾದರೆ ಅಪರಾಧಿಯ ಮನೋಸ್ಥಿತಿಯನ್ನು ಪ್ರಮಾಣಿಕ ಪ್ರಯತ್ನ ಆಗಲೇಬೇಕು.

ಹೌದು ಈ ಚಿತ್ರದ ಉದ್ದೇಶವೂ ಪ್ರಾಮಾಣಿಕವಾಗಿಯೇ ಇದೆ. ಆದರೆ,

ಆ ಅಪರಾಧಿಯ ಮನೋಸ್ಥಿತಿಯನ್ನು ಅರಿಯುವ ಪ್ರಾಮಾಣಿಕ ಪ್ರಯತ್ನ ಕಾಣುವುದಿಲ್ಲ. ಅಂತಹ ಒಂದು ದೃಶ್ಯವನ್ನು ತನ್ನ ಫೋನಿನಲ್ಲಿ ಸೆರೆಹಿಡಿದು, ಎಲ್ಲೆಡೆ ವೈರಲ್ ಮಾಡಬೇಕಾದರೆ ಆ ವ್ಯಕ್ತಿ ಎಂಥವನಿರಬಹುದು, ಆ ಕ್ರೌರ್ಯ ಹೇಗೆ ಬಂದಿರಬಹುದು, ಆ ಮಟ್ಟದ ಅಸೂಕ್ಷ್ಮತೆಯನ್ನೆ ಹೇಗೆ ಅಳವಡಿಸಿಕೊಂಡಿರಬಹುದು, ಅದನ್ನು ವೈರಲ್ ಮಾಡಿ, ವಿಕೃತ ಖುಷಿಯನ್ನು ಅನುಭವಿಸಲು ಒಬ್ಬ ವ್ಯಕ್ತಿಗೆ ಹೇಗೆ ಸಾಧ್ಯ ಎಂಬ ಯಾವ ಪ್ರಶ್ನೆಗೂ ಉತ್ತರ ಸಿಗುವುದಿಲ್ಲ, ವಾಸ್ತವದಲ್ಲಿ ಆ ಪ್ರಶ್ನೆಗಳಿಗೆ ಉತ್ತರ ಹುಡುಕುವ ಗೋಜಿಗೇ ಹೋಗಿಲ್ಲ. ಆ ವಿಡಿಯೋ ವೈರಲ್ ಮಾಡಿ, ಬರುವ ಲೈಕ್‌ಗಳು, ವೀವ್ಸ್‌ಗಳಿಂದ ಅನುಂದತುಲಿತನಾಗುತ್ತದ್ದ ವ್ಯಕ್ತಿ, ಯಾರೋ ಒಬ್ಬ ಅದನ್ನು ಟೀಕಿಸಿದೊಡನೇ, ಈತನ ತಪ್ಪಿತಸ್ಥ ಭಾವನೆ ಜಾಗೃತವಾಗುತ್ತದೆ. ಅಲ್ಲಿಯವರೆಗೆ ಕಥೆಯನ್ನು ‘ಕಾಮೆಡಿ’ಯಾಗಿ ಚಿತ್ರಿಸಲು ಪ್ರಯತ್ನಿಸಿ, ತದನಂತರ ಚಿತ್ರದ ಟ್ರೀಟ್‌ಮೆಂಟ್‌ಅನ್ನು ಗಂಭೀರತೆಗೆ ಬದಲಾಯಿಸುತ್ತಾರೆ. ಆ ನಂತರ ಆ ತಪ್ಪಿತಸ್ಥ ಭಾವನೆಯೊಂದಿಗೆ ಅವನು ಹೇಗೆ ಒದ್ದಾಡುತ್ತಾನೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಅಲ್ಲಿಯೂ, ಯಾವುದೇ ಅಧ್ಯಯನ ಮಾಡದೇ, ವಿಷಯದ ಆಳಕ್ಕೆ ಇಳಿಯದೇ ನೋಡುಗರಿಗೆ ‘ಮನುಷ್ಯರ ಆಳ ಸಂವೇದನೆಗಳು ಮನುಷ್ಯತ್ವದ ಕಡೆಗೇ ಚಲಿಸುತ್ತಿರುಬೇಕು’ ಎಂಬ ಮಹತ್ತರ ಸಂದೇಶ ನೀಡುವ ಉದ್ದೇಶದಿಂದ ಚಿತ್ರವನ್ನು ಮಾಡಿದ್ದಾರೆ.

ಯಾವುದೇ ಒಂದು ಘಟನೆಯನ್ನು ಆಧಾರಿಸಿ ಸಿನೆಮಾ ಮಾಡಬೇಕಾದರೆ, ಅದನ್ನು ಸಿನೆಮಾದ ಚೌಕಟ್ಟಿನಲ್ಲಿ ಇಳಿಸಬೇಕಾಗುತ್ತದೆ. ಸಿನೆಮಾ ಎಂಬ ಮಾಧ್ಯಮದ ಇತಿಮಿತಿ ಮತ್ತು ಸಾಮರ್ಥ್ಯಗಳನ್ನು ಅರಿತು ಅದರನುಗುಣವಾಗಿ ಮಾಡಬೇಕಾಗುತ್ತದೆ. ಅದನ್ನೂ ಮಾಡದೆ, ವಿಷಯವಸ್ತುವಿನ ಆಳ ಅಧ್ಯವನ್ನೂ ಮಾಡದೇ, ಕೇವಲ ‘ಒಂದೊಳ್ಳೆ’ ಸಂದೇಶ ನೀಡಲೆಂದು ಸಿನೆಮಾ ಮಾಡುವುದೆಂದರೆ?


ಇದನ್ನೂ ಓದಿ; ಸಿನೆಮಾ ಮತ್ತು ಸಂದೇಶ: ‘ಒಂದೊಳ್ಳೇ ಮೆಸೇಜ್ ಇರೋ ಸಿನೆಮಾ ಮಾಡಬೇಕು’ ಎಂದರೇನು?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ರಾಜಶೇಖರ್ ಅಕ್ಕಿ
+ posts

1 COMMENT

LEAVE A REPLY

Please enter your comment!
Please enter your name here