23.03.23 ಗುರುವಾರ ಗುಜರಾತಿನ ಸೂರತ್ ಕೋರ್ಟ್ ಕಾಂಗ್ರೆಸ್ ಮುಖಂಡ, ಕೇರಳದ ವಯನಾಡ್‌ನಿಂದ ಗೆದ್ದು ಸಂಸದನಾಗಿರುವ ರಾಹುಲ್ ಗಾಂಧಿಯವರ ವಿರುದ್ಧದ ಐದು ವರ್ಷದ ಹಳೆಯ ಮಾನಹಾನಿ ಪ್ರಕರಣದಲ್ಲಿ ತೀರ್ಪನ್ನಿತ್ತು ಎರಡು ವರ್ಷಗಳ ಜೈಲು (ಇಂತಹ ಪ್ರಕರಣಗಳಲ್ಲಿ ಗರಿಷ್ಠ ಎನ್ನಬಹುದಾದ) ಶಿಕ್ಷೆಯನ್ನು ಘೋಷಿಸಿತು. ಇದಕ್ಕೆ ಕಾಯುತ್ತಿದ್ದರೇನೋ ಎಂಬಂತೆ ತೀರ್ಪು ಬಂದ ಮುಂದಿನ ದಿನ ಲೋಕಸಭೆಯ ಸೆಕ್ರಟರಿಯಟ್ ರಾಹುಲ್ ಗಾಂಧಿಯವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಅಧಿಸೂಚನೆ ಹೊರಡಿಸಿದರು. ಈ ಆದೇಶದ ಬೆನ್ನಲ್ಲೇ ಅವರ ಅಧಿಕೃತ ಮನೆಯನ್ನು ಒಂದು ತಿಂಗಳಲ್ಲಿ ತೆರವುಗೊಳಿಸುವಂತೆ ರಾಹುಲ್ ಗಾಂಧಿಯವರಿಗೆ ನೋಟಿಸ್ ನೀಡಲಾಗಿದೆ. ಜನಪ್ರತಿನಿಧಿ ಕಾಯ್ದೆ 1951 ವಿಭಾಗ 8(3)ರ ಪ್ರಕಾರ ಲೋಕಸಭೆ ಅಥವಾ ವಿಧಾನಸಭೆಯ ಯಾವುದೇ ಪ್ರತಿನಿಧಿ, ಉಪವಿಭಾಗ (1) ಮತ್ತು (2)ರಲ್ಲಿ ನಮೂದಿಸಿದ ಅಪರಾಧಗಳನ್ನು ಹೊರತುಪಡಿಸಿದಂತೆ, ಉಳಿದ ಯಾವುದೇ ಅಪರಾಧದಲ್ಲಿ 2 ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಜೈಲು ಶಿಕ್ಷೆಯನ್ನು ಪಡೆದರೆ ಅವರು ಶಿಕ್ಷೆ ಪಡೆದ ದಿನದಿಂದ ಅನರ್ಹತೆಗೆ ಗುರಿಯಾಗಬಹುದು ಎನ್ನುತ್ತದೆ. ಮೂರು ತಿಂಗಳೊಳಗೆ ಅಪೆಲೇಟ್ ಕೋರ್ಟ್‌ನಿಂದ ಇದಕ್ಕೆ ತಡೆಯಾಜ್ಞೆ ಸಿಕ್ಕರೆ ಅನರ್ಹತೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ. ಮೇಲ್ಮನವಿಗೆ ಹೋಗಲು ಒಂದು ದಿನದ ಅವಕಾಶವನ್ನೂ ಕೊಡದೆ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಲಾಗಿದೆ. ಎಲ್ಲವೂ ಕಾನೂನುಪ್ರಕಾರವೇ ನಡೆದಿದೆ ಎಂದು ಬಿಜೆಪಿ ಸರ್ಕಾರದ ವಕ್ತಾರರು ಮತ್ತೆಮತ್ತೆ ಪುನರುಚ್ಚರಿಸುತ್ತಿದ್ದಾರೆ. ಪ್ರಜಾಪ್ರಭುತ್ವವನ್ನು ಕೃಶಗೊಳಿಸುವ ರಾಜಕೀಯ ಷಡ್ಯಂತ್ರವಿದು ಎಂದು ಕಾಂಗ್ರೆಸ್ ಸೇರಿದಂತೆ 14ಕ್ಕೂ ಹೆಚ್ಚು ವಿರೋಧ ಪಕ್ಷಗಳು ಕಪ್ಪು ಅಂಗಿ ಧರಿಸಿ ಪ್ರತಿಭಟಿಸಿವೆ. ಕಾನೂನಿನ ’ವ್ಯಾಖ್ಯಾನ’ದಲ್ಲಿ ಅಪರಾಧ ಎಂದು ಕರೆಸಿಕೊಳ್ಳಬಹುದಾದರೂ, ದೂರುದಾರರ ’ಅಧಿಕ ವಿವೇಚನೆ’, ಅನರ್ಹಗೊಳಿಸಿದವರ ’ಮಿಂಚಿನ ವೇಗ’ ಮತ್ತು ಅದರ ಸುತ್ತ ಕಟ್ಟಲಾಗುತ್ತಿರುವ ಸಾವಿರಾರು ಬಗೆಯ ನರೆಟಿವ್‌ಗಳು – ಈ ಎಲ್ಲವೂ ಪ್ರಜಾಪ್ರಭುತ್ವದ ಮತ್ತು ಸಂವಿಧಾನದ ನೈತಿಕತೆಯನ್ನು ಅಣಕಿಸುವಂತಿರುವುದು ಸುಳ್ಳಲ್ಲ.
ರಾಜಕೀಯ ಭಾಷಣ ಮತ್ತು ಮಾನಹಾನಿ
ಒಂದು ಸಶಕ್ತ ಪ್ರಜಾಪ್ರಭುತ್ವ ಆರೋಗ್ಯಕರವಾಗಿರಲು, ಆಡಳಿತ ನಡೆಸುವ ಪಕ್ಷವನ್ನು ಎಲ್ಲ ಸಮಯದಲ್ಲಿಯೂ ತರಾಟೆಗೆ ತೆಗೆದುಕೊಳ್ಳುವ ಮತ್ತು ಪ್ರಮುಖವಾಗಿ ಚುನಾವಣೆಗಳ ಸಮಯದಲ್ಲಿ ಆಡಳಿತ ಪಕ್ಷಗಳ ನೀತಿಗಳನ್ನು ಕಟುವಾಗಿ ಟೀಕಿಸುವ ಮುಕ್ತ ವಾತಾವರಣ ಇರುವುದು ಮುಖ್ಯ. ಆದುದರಿಂದ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಭಾಷಣಗಳಿಗೆ ತನ್ನದೇ ಆದ ಪ್ರಧಾನ ಪಾತ್ರವಿದೆ. ಈ ನಿಟ್ಟಿನಲ್ಲಿಯೇ ಸಂಸತ್ತು ಮತ್ತು ವಿಧಾನಮಂಡಲಗಳಲ್ಲಿ ಯಾವುದೇ ಜನಪ್ರತಿನಿಧಿ ಆಡುವ ಎಂಥದ್ದೇ ಮಾತುಗಳಿಗೆ ನ್ಯಾಯಾಲಯಕ್ಕೆ ಎಳೆದೊಯ್ಯಬಹುದಾದ ಅವಕಾಶವನ್ನು ನಮ್ಮ ಸಂವಿಧಾನ ನೀಡಿಲ್ಲ. (ಆದರೆ ಅಂತಹ ಮಾತುಗಳನ್ನು ಸದನದ ಕಡತದಿಂದ ತೆಗೆದುಹಾಕುವ ಅಧಿಕಾರವನ್ನು ಸ್ಪೀಕರ್ ಹೊಂದಿರುತ್ತಾರೆ- ಇತ್ತೀಚಿಗಷ್ಟೇ ಮೋದಿ ಮತ್ತು ಅದಾನಿ ಸಂಬಂಧದ ಬಗ್ಗೆ ಲೋಕಸಭೆಯ ಬಜೆಟ್ ಅಧಿವೇಶನದಲ್ಲಿ ರಾಹುಲ್ ಗಾಂಧಿಯವರು ಆಡಿದ್ದ ಮಾತುಗಳನ್ನು ಸ್ಪೀಕರ್ ಕಡತದಿಂದ ತೆಗೆದುಹಾಕಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳುವುದು ಉಚಿತವಾದೀತು!) ಸಾಂವಿಧಾನಿಕ ನೈತಿಕತೆಯಲ್ಲಿ ಜನಪ್ರತಿನಿಧಿಯ ರಾಜಕೀಯ ಭಾಷಣಕ್ಕೆ ಈ ರಕ್ಷಣೆ ಸಂಸತ್ತಿನಾಚೆಗೂ ಇರಬೇಕೆಂಬುದು ತರ್ಕಬದ್ಧವಾದದ್ದು ಎಂಬುದು ಯಾರಿಗಾದರೂ ತಿಳಿದೀತು. ಈ ಹಿನ್ನೆಲೆಯಲ್ಲಿ 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ’ಯಾಕೆ ಕಳ್ಳರೆಲ್ಲರೂ ಮೋದಿ ಎಂಬ ಉಪನಾಮ ಹೊಂದಿರುತ್ತಾರೆ’ ಎಂದು ರಾಹುಲ್ ಗಾಂಧಿಯವರು, ಆರ್ಥಿಕ ಅಪರಾಧಿಗಳ ನಾಮಪಟ್ಟಿಯಲ್ಲಿರುವ ನೀರವ್ ಮೋದಿ ಹಾಗೂ ಲಲಿತ್ ಮೋದಿ ಮತ್ತು ತಮ್ಮ ರಾಜಕೀಯ ವಿರೋಧಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರುಗಳನ್ನು ಉದಾಹರಿಸಿ ಮಾಡಿದ ಭಾಷಣದ ’ಮೌಲ್ಯ’ ಈ ದೇಶದ ಬಗೆಗೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗೆಗೆ ಕಾಳಜಿ ಇರುವ ಯಾರಿಗಾದರೂ ಅರ್ಥವಾದೀತು. ಆದರೆ ಗುಜರಾತ್ ಬಿಜೆಪಿಯ ಶಾಸಕ ಪೂರ್ಣೇಶ್ ಮೋದಿಯವರಿಗೆ ಇದು ಮಾನಹಾನಿ ಹೇಳಿಕೆ ಅನ್ನಿಸಿಬಿಟ್ಟಿದೆ. ತಮ್ಮ ಅಧಿನಾಯಕರಿಂದ ಹಿಡಿದು ತಮ್ಮ ಪಕ್ಷದ ಪುಡಿ ಮುಖಂಡರವರೆಗೂ ಎಷ್ಟೋ ಜನ ದ್ವೇಷ ಭಾಷಣಗಳಲ್ಲಿ ಮಿಂದೇಳುತ್ತಿರುವಾಗ ರಾಹುಲ್ ಗಾಂಧಿಯವರು ಒಂದು ನಿರ್ದಿಷ್ಟ ಕಾಂಟೆಕ್ಸ್ಟ್‌ನಲ್ಲಿ ಮಾಡಿದ ಭಾಷಣ ಮೋದಿ ಉಪನಾಮದ ಎಲ್ಲರನ್ನೂ ಅವಮಾನಿಸುತ್ತಿದೆ ಎಂದು ನ್ಯಾಯಾಲಯದಲ್ಲಿ ದೂರಿ ಗೆದ್ದುಬಂದಿದ್ದಾರೆ! ರಾಜಕೀಯ ಭಾಷಣಗಳನ್ನು ಅಪರಾಧೀಕರಿಸುತ್ತಾ ಹೋದರೆ ಬಹುಶಃ ಶೇ.90ಕ್ಕೂ ಹೆಚ್ಚು ಪ್ರತಿನಿಧಿಗಳು ಜೈಲಿನಲ್ಲಿರಬೇಕಾಗಬಹುದು! ಮಾನಹಾನಿಯನ್ನು ಕ್ರಿಮಿನಲ್ ಅಪರಾಧವೆನ್ನುವ ಕಾನೂನಿಗೆ ತಿದ್ದುಪಡಿಯ ಅಗತ್ಯ ಇಂದು ಹಿಂದೆಂದಿಗಿಂತಲೂ ಹೆಚ್ಚಿದೆ.
19ನೇ ಶತಮಾನದ ಮಧ್ಯಭಾಗದಲ್ಲಿ ಬ್ರಿಟಿಷ್ ಇಂಡಿಯಾದಲ್ಲಿ ಬ್ರಿಟಿಷ್ ಅಧಿಕಾರಿ ಮೆಕಾಲೆ ಪರಿಚಯಿಸಿದ ಈ ಮಾನಹಾನಿ ಅಥವಾ ಡಿಫೆಮೇಷನ್ ಎನ್ನುವ ’ಕ್ರಿಮಿನಲ್’ ಅಪರಾಧ ಕಾನೂನು ಕಾಲದ ಪ್ರವಾಹದಲ್ಲಿ ಕೊಚ್ಚಿಹೋಗಬೇಕಿತ್ತು. ಕನಿಷ್ಠ ಪಕ್ಷ ರಾಜಕೀಯ ಭಾಷಣಗಳನ್ನು, ಆಡಳಿತದ ಯಂತ್ರಾಂಗದ ಬಗೆಗಿನ ಟೀಕೆಯನ್ನು ಅದರಲ್ಲಿ ಸೇರಿಸದಂತೆ ವಿಶಾಲ ತಿದ್ದುಪಡಿಯ ಅಗತ್ಯವಂತೂ ಇದ್ದೇಇತ್ತು. ಇಂಗ್ಲೆಂಡ್, ಅಮೆರಿಕದಂತಹ ದೇಶಗಳು ಮಾನಹಾನಿಯನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸದೆ ತಿದ್ದುಪಡಿಗಳನ್ನು ಮಾಡಿ ದಶಕಗಳೇ ಉರುಳಿವೆ. ತಿಳಿವಳಿಕೆಯಿಲ್ಲದೆ ಅಥವಾ ದುರುದ್ದೇಶವಿಲ್ಲದೆ, ಸಾರ್ವಜನಿಕ ಅಧಿಕಾರಿ ಅಥವಾ ಜನಪ್ರತಿನಿಧಿಯ ವಿರುದ್ಧ ಮಾಡುವ ಟೀಕೆಗಳಲ್ಲಿ ಕೆಲವು ತಪ್ಪುಗಳಿದ್ದರೂ ಅದನ್ನು ಡಿಫೆಮೇಶನ್ ಅಥವಾ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸದಿರುವ ತಿದ್ದುಪಡಿ ಇಲ್ಲಿಯೂ ಬರಬೇಕೆಂಬುದು ಹಲವು ದಶಕಗಳ ಕೂಗು! ಸಾರ್ವಜನಿಕ ಸಂಸ್ಥೆಗಳನ್ನು ಮತ್ತು ಜನಪ್ರತಿನಿಧಿಗಳನ್ನು ಉತ್ತರದಾಯಿತ್ವದತ್ತ ಪ್ರಚೋದಿಸುವ ಕೆಲವು ಹೇಳಿಕೆಗಳಲ್ಲಿ ಪ್ರಮಾದಗಳು ಉಳಿದರೂ, ವಿಶಾಲಾರ್ಥದಲ್ಲಿ ನಾಗರಿಕರ ಮತ್ತು ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಅದು ಹಾನಿಕಾರಕವಲ್ಲ. ಈ ನಿಟ್ಟಿನಲ್ಲಿ ಯೋಚಿಸಿದಾಗ ರಾಹುಲ್ ಗಾಂಧಿ ಯಾವ ಹಿನ್ನೆಲೆಯಲ್ಲಿ ’ಮೋದಿ’ ಉಪನಾಮೆ ಬಳಸಿ ಆ ಮಾತುಗಳನ್ನಾಡಿದ್ದರು ಎಂಬ ಅಂಶ ತಿಳಿದು, ಅದು ಎಂದಿಗೂ ಮೂರನೇ ವ್ಯಕ್ತಿಗೆ ಮಾನಹಾನಿ ಮಾಡುವಂಥ ಹೇಳಿಕೆಗಳಾಗಿರಲಿಲ್ಲವೆಂದು ಮನದಟ್ಟಾಗುತ್ತದೆ. 21ನೇ ಶತಮಾನದಲ್ಲಿ, 19ನೇ ಶತಮಾನದ ವಸಾಹತು ಪಳೆಯುಳಿಕೆ ಕಾನೂನುಗಳನ್ನು ಮುಕ್ತ ಅಭಿವ್ಯಕ್ತಿಗೆ ಪ್ರತಿಬಂಧಕವಾಗಿ ಬಳಸುತ್ತಿರುವುದು ದುರಂತದ ವಿದ್ಯಮಾನವಾಗಿದೆ. ಯಾವ ಟೀಕೆಗೂ ಓಗೊಡದೆ ದ್ವೇಷದ ರಾಜಕಾರಣ ಮಾಡಿಯೇ ತೀರುತ್ತೇವೆಂದು ಬಿಜೆಪಿ ಮುಂದುವರಿದಿರುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ.
ಅನರ್ಹಗೊಳಿಸುವ ಪ್ರಕ್ರಿಯೆಯ ಬಗ್ಗೆಯೂ ಎದ್ದ ಪ್ರಶ್ನೆಗಳು
ತೀರ್ಪು ಕೊಟ್ಟ ನ್ಯಾಯಾಲಯವೇ ಮೂವತ್ತು ದಿನಗಳೊಳಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಮಾಡಿಕೊಟ್ಟು, ಅಲ್ಲಿಯವರೆಗೆ ಶಿಕ್ಷೆಯನ್ನು ವಜಾ ಮಾಡಿ, ಜಾಮೀನು ಕೊಟ್ಟಿದ್ದರೂ, ತೀರ್ಪು ಬಂದ ಕೆಲವೇ ಗಂಟೆಗಳಲ್ಲಿ, ಲೋಕಸಭೆಯ ಸೆಕ್ರಟರಿಯೆಟ್ ರಾಹುಲ್ ಗಾಂಧಿಯವರು ಅನರ್ಹಗೊಂಡಿದ್ದಾರೆ ಎಂದು ನೋಟಿಸ್ ಜಾರಿಮಾಡಿರುವುದು ಸೇಡಿನ ರಾಜಕಾರಣದ ಭಾಗ ಎಂದು ಬಣ್ಣಿಸಲಾಗುತ್ತಿದೆ. ಒಂದು ಕಡೆಗೆ ಇದು ಸೇಡಿನ ರಾಜಕಾರಣವಾದರೆ, ಲೋಕಸಭಾ ಸೆಕ್ರೆಟರಿಯಟ್‌ಗೆ ಈ ಅಧಿಕಾರ ಇದೆಯೇ ಎಂಬ ಪ್ರಶ್ನೆಗಳು ಕೂಡ ಎದ್ದಿವೆ. ’ದ ಹಿಂದೂ’ ಪತ್ರಿಕೆಯಲ್ಲಿ ಒಪ್-ಎಡ್ ಬರೆದಿದ್ದ ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಟಿ.ಡಿ ಆಚಾರ್ಯ ಅವರು, ಜನಪ್ರತಿನಿಧಿ ಕಾಯ್ದೆ 1951 ವಿಭಾಗ 8(3)ದಲ್ಲಿ ’ಶಲ್ ಸ್ಟಾಂಡ್ ಡಿಸ್‌ಕ್ವಾಲಿಫೈಡ್’ ಎಂದಿದ್ದರೆ, ಶಿಕ್ಷೆ ಪಡೆದಾಗಿನಿಂದ ಯಾಂತ್ರಿಕವಾಗಿ ಅನರ್ಹತೆ ಪ್ರಾರಂಭವಾಗುತ್ತಿತ್ತು; ಆದರೆ ಅಲ್ಲಿರುವುದು ’ಶಲ್ ಬಿ ಡಿಸ್‌ಕ್ವಾಲಿಫೈಡ್’ ಎಂದು. ಆದುದರಿಂದ, ಈ ಪ್ರಕರಣದಲ್ಲಿ ಕನಿಷ್ಠ ಪಕ್ಷ ಅನರ್ಹಗೊಳಿಸುವ ಪ್ರಕ್ರಿಯೆಯನ್ನು ರಾಷ್ಟ್ರಪತಿಗಳಿಗೆ ವಹಿಸುವುದು ಸೂಕ್ತವಾಗಿತ್ತು ಎಂದು ವಾದಿಸಿದ್ದಾರೆ.
ಇದನ್ನೂ ಓದಿ: ಪ್ರಜಾಸತ್ತಾತ್ಮಕ ತತ್ವಗಳನ್ನು ಅನ್ವಯಿಸಿ: ರಾಹುಲ್ ಅನರ್ಹತೆಗೆ ಜರ್ಮನಿ ಪ್ರತಿಕ್ರಿಯೆ
ಅಲ್ಲದೆ, ಒಂದು ವೇಳೆ ಮೇಲ್ಮನವಿ ಸಲ್ಲಿಸಿ ಈಗಿನ ಶಿಕ್ಷೆಗೆ ನ್ಯಾಯಾಲಯದಿಂದ ತಡೆ ತಂದುಕೊಂಡರೆ ಅಥವಾ ರದ್ದುಪಡಿಸಿಕೊಂಡರೆ, ರಾಹುಲ್ ಗಾಂಧಿಯವರನ್ನು ಮತ್ತೆ ಅರ್ಹಗೊಳಿಸುವ ಪ್ರಕ್ರಿಯೆಯ ಬಗ್ಗೆ ಸ್ಪಷ್ಟತೆಯಿಲ್ಲ. ಲಕ್ಷದ್ವೀಪದ ಸಂಸದ ಮೊಹಮ್ಮದ ಫೈಜಲ್ ಅವರನ್ನು ಅಲ್ಲಿನ ಪ್ರಾದೇಶಿಕ ನ್ಯಾಯಾಲಯ ಪ್ರಕರಣವೊಂದರಲ್ಲಿ ತಪ್ಪಿತಸ್ಥನೆಂದು ತೀರ್ಪು ನೀಡಿತ್ತು. ಆಗ ಈ ಎನ್‌ಸಿಪಿ ಪಕ್ಷದ ಸಂಸದ ಕೇರಳದ ಹೈಕೋರ್ಟ್ ಮೊರೆ ಹೋಗಿದ್ದರು; ಉಚ್ಚ ನ್ಯಾಯಾಲಯ ಶಿಕ್ಷೆಯನ್ನು ವಜಾ ಮಾಡಿತ್ತು. ಹೀಗಿದ್ದರೂ ಲೋಕಸಭಾ ಸೆಕ್ರೆಟರಿಯಟ್ ಫೈಜಲ್ ಅವರ ಅನರ್ಹತೆಯ ನೋಟಿಸ್‌ಅನ್ನು ಹಿಂತೆಗೆದುಕೊಂಡಿಲ್ಲ. ಮೊಹಮ್ಮದ ಫೈಜಲ್ ಲೋಕಸಭಾ ಸದಸ್ಯತ್ವ ಹಿಂಪಡೆಯುವಂತೆ ನಿರ್ದೇಶನ ನೀಡಲು ಕೋರಿ ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾರೆ. (ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣ 30 ಮಾರ್ಚ್ ಅಂದು ವಿಚಾರಣೆಗೆ ಬರುವುದಿತ್ತು. 29ರ ಸಂಜೆಯ ವೇಳೆಗೆ ಫೈಜಲ್ ಅವರ ಅನರ್ಹತೆಯ ನೋಟಿಸ್‌ಅನ್ನು ಹಿಂತೆಗೆದುಕೊಳ್ಳಲಾಗಿದೆ). ಈಗ ರಾಹುಲ್ ಗಾಂಧಿಯವರ ಪ್ರಕರಣದಲ್ಲಿ ಇಂತಹುದ್ದೇ ಬಿಕ್ಕಟ್ಟನ್ನು ನಿರೀಕ್ಷಿಸಲಾಗುತ್ತಿದೆ. ಈಗ ಉದ್ಭವಿಸಿರುವ ಬಿಕ್ಕಟ್ಟಿನಿಂದಾದರೂ, ಜನಪ್ರತಿನಿಧಿ ಕಾಯ್ದೆ 1951 ವಿಭಾಗ 8(3)ದಿಂದ ಮಾನಹಾನಿ ಪ್ರಕರಣಗಳಂತಹ ಅಪರಾಧಗಳನ್ನು ಕೈಬಿಡುವ ಅಥವಾ ಮಾನಹಾನಿಯನ್ನು ಕ್ರಿಮಿನಲ್ ಅಪರಾಧ ಕಾನೂನು ಪಟ್ಟಿಯಿಂದ ತೆಗೆದುಹಾಕುವ ಸುಧಾರಣೆಗಳ ಬಗ್ಗೆಯೂ ಭರವಸೆ ಇಟ್ಟುಕೊಳ್ಳಬೇಕಿದೆ.
ರಾಹುಲ್ ಗಾಂಧಿಯವರ ಟಾರ್ಗೆಟ್ ಯಾಕೆ?
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಬೇರೆಬೇರೆ ಪಕ್ಷಗಳ ಒಡಗೂಡಿ ಮತ್ತು ನಾಗರಿಕ ಸಮಾಜದೊಂದಿಗೆ ಸೇರಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸಿದ ಸುಮಾರು ಮೂರು ಸಾವಿರ ಕಿಲೋಮೀಟರ್‌ನ ಪಾದಯಾತ್ರೆ ’ಭಾರತ್ ಜೋಡೋ’ ಯಶಸ್ವಿ ಪ್ರತಿರೋಧ ಜಾಥಾ ಎಂದೇ ಜನಪ್ರಿಯವಾಗಿತ್ತು. ಅಲ್ಲದೆ ಕಳೆದ ಬಜೆಟ್ ಸೆಷನ್‌ನಲ್ಲಿ ಅದಾನಿ ಸಮೂಹ ನಡೆಸಿದೆ ಎನ್ನುವ ಅವ್ಯವಹಾರಗಳ ಆರೋಪದ ಕುರಿತು ನೇರವಾಗಿ ಪ್ರಧಾನಿ ಮೋದಿ ಮತ್ತು ಸರ್ಕಾರದ ಮೇಲೆ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು. ಇದು ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಕಸಿವಿಸಿ ತಂದಿತ್ತಲ್ಲದೆ, ಅದಾನಿ ಸಮೂಹದ ವಿರುದ್ಧ ಜಂಟಿ ಸದನ ಸಮಿತಿ ರಚಿಸಿ ತನಿಖೆ ಮಾಡುವ ವಿರೋಧ ಪಕ್ಷಗಳ ಬೇಡಿಕೆಯಿಂದ ಇಕ್ಕಟ್ಟಿಗೆ ಸಿಲುಕಿಸಿತ್ತು. ಆದರೆ ಆ ಬೇಡಿಕೆಯನ್ನು ಸರ್ಕಾರ ಸಾರಾಸಗಟಾಗಿ ತಳ್ಳಿಹಾಕಿತ್ತು. ತದನಂತರದಲ್ಲಿ ವಿದೇಶಗಳ ಹಲವು ವಿಶ್ವವಿದ್ಯಾಲಯಗಳು ಸೇರಿದಂತೆ ಕೆಲವು ಸ್ಥಳಗಳಲ್ಲಿ ರಾಹುಲ್ ಭಾರತದಲ್ಲಿ ಕುಸಿಯುತ್ತಿರುವ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಮಾತನಾಡಿದ್ದರು.
ಅವರ ಮಾತುಗಳಲ್ಲಿ ಭಾರತದ ಸಾರ್ವಭೌಮತೆಯನ್ನು ಕುಗ್ಗಿಸುವ ಯಾವುದೇ ಸಾಕ್ಷ್ಯವಿಲ್ಲದೇ ಹೋದರೂ, ಅವರು ಕ್ಷಮೆ ಕೇಳಬೇಕೆಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿದ್ದವು. ಬಜೆಟ್ ಅಧಿವೇಶನದ ಎರಡನೇ ಆವೃತ್ತಿ ಪ್ರಾರಂಭವಾದಾಗಿನಿಂದಲೂ ರಾಹುಲ್ ಕ್ಷಮೆಗೆ ಆಗ್ರಹಿಸಿ ಆಡಳಿತ ಬಿಜೆಪಿ ಪಕ್ಷವೇ ಸಂಸತ್ತಿನಲ್ಲಿ ಪ್ರತಿಭಟಿಸಿ ಗಲಾಟೆಯೆಬ್ಬಿಸಿ ಬೇರೆ ಯಾವುದೇ ಚರ್ಚೆಗೆ ಅವಕಾಶ ನೀಡದಂತೆ ನೋಡಿಕೊಂಡಿತ್ತು. ತನ್ನ ವಿರುದ್ಧದ ಆರೋಪಗಳಿಗೆ ಉತ್ತರಿಸುತ್ತೇನೆ, ಮಾತನಾಡಲು ಸಮಯಾವಕಾಶ ಕೊಡಿ ಎಂಬ ಮನವಿಗೂ ಲೋಕಸಭೆಯ ಸ್ಪೀಕರ್ ಮನ್ನಿಸಿರಲಿಲ್ಲ. ಈ ಎಲ್ಲಾ ಸರಣಿ ವಿದ್ಯಮಾನಗಳ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರ ಜನಪ್ರಿಯತೆ ಏರುಗತಿಯಲ್ಲಿದೆ ಎಂದೇ ವಿಶ್ಲೇಷಿಸಲಾಗುತ್ತಿತ್ತು. ಆದುದರಿಂದ ಅವರೇ ಆಡಳಿತ ಬಿಜೆಪಿ ಸರ್ಕಾರದ ನಂಬರ್ ಒನ್ ಟಾರ್ಗೆಟ್ ಎಂಬುದು ರಾಜಕೀಯ ಪಡಸಾಲೆಯ ಮಾತಾಗಿತ್ತು. ಈ ನಿಟ್ಟಿನಲ್ಲಿ ಅವರ ವಿರುದ್ಧ ತೆಗೆದುಕೊಂಡಿರುವ ಕ್ರಮಗಳಲ್ಲಿ ಅಚ್ಚರಿಯೇನೂ ಇಲ್ಲವೆಂಬ ವಾದವೂ ಕೇಳಿಬರುತ್ತಿದೆ. ಆದರೆ ರಾಹುಲ್ ಗಾಂಧಿ ಪದೇಪದೇ ಹೇಳುತ್ತಿದ್ದಂತೆ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿರುವ ಸಂಗತಿ ಸಾಕಾರಗೊಳ್ಳುತ್ತಿರುವುದೂ ದೊಡ್ಡಮಟ್ಟದಲ್ಲಿ ಸ್ಪಷ್ಟವಾಗುತ್ತಿದೆ. ಇದು ಬಿಜೆಪಿ ಪಕ್ಷಕ್ಕೆ ಹಿನ್ನಡೆಯಾಗಿ ಕಾಂಗ್ರೆಸ್ ಪುನಶ್ಚೇತನಕ್ಕೆ ದಾರಿ ಮಾಡಿಕೊಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ, ಇಂತಹ ಕ್ರಮಗಳು ಸರ್ವಾಧಿಕಾರಿ ನೋಟ್‌ಬುಕ್‌ನಲ್ಲಿರುವ ಸ್ಥಾಪಿತ ತಂತ್ರಗಳು ಎಂಬುದನ್ನು ಮರೆಯುವಂತಿಲ್ಲ.
ಸರ್ವಾಧಿಕಾರಿಯ ಅಥವಾ ಸರ್ವಾಧಿಕಾರಿ ಧೋರಣೆಯುಳ್ಳ ಯಾವುದೇ ರಾಜಕೀಯ ವ್ಯಕ್ತಿ ತಾನು ತನ್ನ ಬಲದಲ್ಲಿ ನಿಸ್ಸೀಮ, ಎಂತಹವನನ್ನೂ ಮಣ್ಣುಮುಕ್ಕಿಸುತ್ತೇನೆ ಎಂದು ತೋರಿಸಲು ಮತ್ತು ಅದನ್ನು ಪ್ರಚಾರ ಮಾಡಲು ಹಾತೊರೆಯುತ್ತಿರುತ್ತಾನೆ. ಆ ಮೂಲಕ, ತನ್ನ ಎಂದೂ ಕುಂದದ ಶಕ್ತಿ ದೇಶವನ್ನು ’ಕಾಪಾಡುತ್ತದೆ’ ಎಂಬ ಮಿಥ್‌ಅನ್ನು ಜನಸಾಮಾನ್ಯರಲ್ಲಿ ಬಿತ್ತಲು ಪ್ರಯತ್ನಿಸುತ್ತಿರುತ್ತಾನೆ. ಈ ಮ್ಯಾಸ್ಕುಲೈನ್ ಬಲಶಾಲಿತನ ಉಗ್ರ ರಾಷ್ಟ್ರೀಯತೆಗೂ ತಳುಕು ಹಾಕಿಕೊಂಡಿದೆ. ಇದನ್ನೇ ಬಳಸಿಕೊಂಡು ನಾಗರಿಕ ಸಮಾಜವನ್ನು ಇನ್ನಷ್ಟು ಧ್ರುವೀಕರಣ ಮಾಡಿ ಚುನಾವಣೆಯಲ್ಲಿ ಲಾಭ ಪಡೆಯುವುದು, ನಂತರ ಇನ್ನೂ ತೀವ್ರತರ ಕ್ರಮಕ್ಕೆ ಮುಂದಾಗಿ ಅದನ್ನು ಪರೀಕ್ಷಿಸುವುದು- ಈ ಸೈಕಲ್ ನಡೆದೇ ಇರುತ್ತದೆ. ಆದರೆ, ಇಂತಹ ಸರ್ವಾಧಿಕಾರಿ ಧೋರಣೆಯ ’ದೈತ್ಯತೆ’ ಅಪಾಯಕಾರಿಯಾದದ್ದು ಮತ್ತು ದೇಶದ ಸಾರ್ವಭೌಮತೆಯಾಗಲೀ, ದೇಶದ ಸಮಗ್ರತೆಯಾಗಲೀ ದೇಶದ ನಾಗರಿಕರೇ ಉಳಿಸಿಕೊಳ್ಳುವಂಥದ್ದು; ಅದನ್ನು ಪ್ರಜಾಪ್ರಭುತ್ವದ-ಸಾಂವಿಧಾನಿಕ ಮೌಲ್ಯಗಳನ್ನು ಉಳಿಸಿಕೊಳ್ಳುವ ಮೂಲಕ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಯಾವುದೇ ಅಪಾಯ ಒದಗದಂತೆ ಕಾಯ್ದುಕೊಳ್ಳುವ ಮೂಲಕ ಸಾಧಿಸಿಕೊಳ್ಳಬೇಕು ಎಂದು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಲು ಒದಗಿಬಂದಿರುವ ಸುವರ್ಣ ಅವಕಾಶವಂತೂ ಇದಾಗಿದೆ. ಇದಕ್ಕಾಗಿ ಎಲ್ಲಾ ವಿರೋಧ ಪಕ್ಷಗಳು ಒಂದು ಸಾಮಾನ್ಯ ವೇದಿಕೆಯನ್ನು ಕಂಡುಕೊಳ್ಳುವ ಕಾಲವೂ ಒದಗಿಬಂದಿದೆ.
ವಿರೋಧ ಪಕ್ಷಗಳ ಒಗ್ಗಟ್ಟಿಗೆ ಇದು ನಾಂದಿ ಹಾಡುತ್ತದೆಯೇ?
ಕಳೆದ ಒಂಭತ್ತು ವರ್ಷಗಳಿಂದ ’ಸಹಜ’ವೇನೋ ಎಂಬಂತೆ ಸಾಗುತ್ತಿರುವ, ಜನಸಾಮಾನ್ಯರಿಗೆ ಅಫೆಕ್ಟ್ ಮಾಡುತ್ತಿರುವ ಸರ್ವಾಧಿಕಾರಿ ಧೋರಣೆಯ ನಡೆಗಳು ಈಗ ಜನಪ್ರತಿನಿಧಿಗಳನ್ನು ಹೇಗಾದರೂ ಮಾಡಿ ಹಣಿಯುವ ಹಂತಕ್ಕೆ ಬಂದುನಿಂತಿವೆ. ಅದು ಪ್ರಭುತ್ವದ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುವುದಾಗಲೀ, ಅಡ್ಡಾದಿಡ್ಡಿ ತನಿಖೆಯ ಪ್ರಕ್ರಿಯೆಗಳಿಗೆ ಮುಂದಾಗುವುದಾಗಲೀ, ಈಗ ರಾಹುಲ್ ಗಾಂಧಿಯವರ ಸದಸ್ಯತ್ವದ ಜೊತೆಗೆ ತೆಗೆದುಕೊಂಡಿರುವ ಕ್ರಮವಾಗಲೀ! ಇದರ ವಿರುದ್ಧ ಸಂಘಟಿತ ಹೋರಾಟದ ಅಗತ್ಯವನ್ನು ರಾಹುಲ್ ಗಾಂಧಿಯವರ ಈ ಪ್ರಕರಣ ಮನಗಾಣಿಸಿದಂತೆ ತೋರಿದೆ. ಹಿಂದೆ, ಕಾಂಗ್ರೆಸ್ ಜೊತೆಗೆ ಕೈಜೋಡಿಸಲು ಹಿಂಜರಿದಿದ್ದ ಟಿಎಂಸಿಯಂತ ಪಕ್ಷಗಳೂ ಕಪ್ಪು ಬಟ್ಟೆಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ. ಎಎಪಿ ಪಕ್ಷ ರಾಹುಲ್‌ರನ್ನು ಅನರ್ಹಗೊಳಿಸಿದ ಪ್ರಕ್ರಿಯೆಯನ್ನು ಖಂಡಿಸಿದೆ. ಕಾಂಗ್ರೆಸ್ ಕೂಡ ದೊಡ್ಡಣ್ಣನ ಪಾತ್ರವನ್ನು ಸದ್ಯಕ್ಕೆ ಬದಿಗಿರಿಸಿ ಒಟ್ಟಿಗೆ ಕೆಲಸ ಮಾಡುವ ಸೂತ್ರವನ್ನು-ತಂತ್ರಗಾರಿಕೆಯನ್ನು ಕಂಡುಕೊಳ್ಳುವುದಕ್ಕೆ ಮುಂದಾಗಲು ಇದು ಸದವಕಾಶ.
ಅನರ್ಹಗೊಳಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಅನರ್ಹಗೊಂಡ ಪ್ರಕ್ರಿಯೆಯ ಬಗ್ಗೆ ಹೆಚ್ಚು ಮಾತನಾಡದೆ, ಅದನ್ನು ಕಾರ್ಯಗತಗೊಳಿಸಲು ಬಿಜೆಪಿಗೆ ಭೀತಿ ತರಿಸಿದ, ತಮ್ಮ ಟೀಕಾಪ್ರಹಾರದ ಬಗ್ಗೆಯೇ ಹೆಚ್ಚು ಮಾತನಾಡಿದ್ದಾರೆ. ಇಂತಹ ಸಂದರ್ಭದಲ್ಲಿ ತನ್ನ ಮೇಲಾದ ಅನ್ಯಾಯ ಹೇಗೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ತಾವೇ ಆರ್ಟಿಕ್ಯುಲೇಟ್ ಮಾಡಿ ಹೇಳುವುದೂ ಮುಖ್ಯವಾದೀತು. ಈ ಹಿಂದೆ ಮೋದಿಯವರು ತಾವು ಹೇಗೆ ’ಬಲಿಪಶು’ವಾದೆ ಎಂದು ಹೇಳಿಕೊಂಡಂತೆ ಇದನ್ನು ಮಾಡಬೇಕಿಲ್ಲವಾದರೂ, ಇಂದು ಅಲ್ಪಸಂಖ್ಯಾತರು, ಹೋರಾಟಗಾರರು ಮತ್ತು ಪ್ರಜ್ಞಾವಂತ ಜನಸಮುದಾಯ ಅನುಭವಿಸುತ್ತಿರುವ ಸಮಸ್ಯೆ ಮತ್ತು ಭಯಭೀತ ವಾತಾವರಣದ ಪ್ರತೀಕವಾಗಿ ಇದನ್ನು ತಿಳಿಸುವುದು ಮುಖ್ಯವಾದೀತು. ಈ ನಿಟ್ಟಿನಲ್ಲಿ ’ಸಾವರ್ಕರ್’ ಕ್ಷಮೆ ಕೇಳಿದ ಬಗ್ಗೆ ರಾಹುಲ್ ನೀಡಿದ ಹೇಳಿಕೆಯಿಂದ ಕಾಂಗ್ರೆಸ್ ಜೊತೆಗೆ ತಗಾದೆ ತೆಗೆದಿರುವ ಶಿವಸೇನೆ ಕೂಡ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ-ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿ, ಕುದುರೆ ವ್ಯಾಪಾರ ಮಾಡಿ ಬಿಜೆಪಿ ಸರ್ಕಾರ ರಚಿಸಿ ಪ್ರಜಾಪ್ರಭುತ್ವದ ಬಿಕ್ಕಟ್ಟನ್ನು ಒಡ್ಡಿರುವುದನ್ನು ಮರೆತು, ಇನ್ನೂ ಸಾವರ್ಕರ್ ಹಿಂದುತ್ವದ ರಾಷ್ಟ್ರೀಯತೆಯ ಬೆನ್ನುಬಿದ್ದಿರುವ ಶಿವಸೇನೆಯಂಥ ಪಕ್ಷ ಪಾಠ ಕಲಿಯಲು ಇನ್ನೂ ದೊಡ್ಡ ದುರಂತವನ್ನು ಕಾದುನೋಡುತ್ತಿದೆಯೇನೋ!
ಬಿಜೆಪಿ ಸರ್ಕಾರ ಮತ್ತು ಸಂಘ ಪರಿವಾರ ಪ್ರತಿ ಬಿಕ್ಕಟ್ಟನ್ನೂ ತನ್ನ ಅವಕಾಶಕ್ಕೆ ಬಳಸಿಕೊಳ್ಳುವುದಕ್ಕೆ ಮುಂದಾಗುತ್ತದೆ. ಆದರೆ ಇಂದು ನಮ್ಮ ಮುಂದಿರುವ ಭೀಕರ ಬಿಕ್ಕಟ್ಟು ನಮ್ಮನ್ನು ಎಚ್ಚರಗೊಳಿಸಿ ಅವರ ತಂತ್ರಕ್ಕೆ ಅವಕಾಶ ಕೊಡದಂತೆ ನೋಡಿಕೊಳ್ಳಬೇಕಿದೆ. ನಮ್ಮ ಪ್ರಜಾಪ್ರಭುತ್ವದ ಅಳಿವು ಉಳಿವಿನ ಪ್ರಶ್ನೆ ಇದಾಗಿದ್ದು ವಿರೋಧ ಪಕ್ಷಗಳು ಮತ್ತು ನಾಗರಿಕ ಸಮಾಜ ಹಿಂದೆಂದಿಗಿಂತಲೂ ಎಚ್ಚರದಿಂದ ತಮ್ಮ ಕರ್ತವ್ಯಗಳನ್ನು ಪಾಲಿಸಬೇಕಿದೆ.