Homeಕರ್ನಾಟಕತುಮಕೂರು ಅಮಾನಿಕೆರೆಯನ್ನೇ ನುಂಗುತ್ತಿದೆ ಸ್ಮಾರ್ಟ್ ಸಿಟಿ...

ತುಮಕೂರು ಅಮಾನಿಕೆರೆಯನ್ನೇ ನುಂಗುತ್ತಿದೆ ಸ್ಮಾರ್ಟ್ ಸಿಟಿ…

- Advertisement -
- Advertisement -

ತುಮಕೂರು ಅಮಾನಿಕೆರೆ ವಿಸ್ತೀರ್ಣ ದಿನೇದಿನೇ ಕುಗ್ಗುತ್ತಲೇ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಹತ್ತಿರ ಹತ್ತಿರ 900 ಎಕರೆ ಪ್ರದೇಶದಲ್ಲಿ ಹರಡಿದ ಕೆರೆಯ ಅಂಗಳ ಈಗ 500 ಎಕರೆಗೆ ಬಂದು ನಿಂತಿದೆ. ಅಂದರೆ ಸುಮಾರು 400 ಎಕರೆ ಕೆರೆಯನ್ನು ನುಂಗಣ್ಣಗಳ ಪಾಲಾಗಿದೆ. ಆದರೆ ಜಿಲ್ಲಾಡಳಿತ ಮಾತ್ರ ತಣ್ಣಗೆ ಕುಳಿತಿದೆ. ನುಂಗಣ್ಣಗಳು ಬಾರಿ ಕುಳಗಳೆಂಬುದೇ ಮೌನಕ್ಕೆ ಕಾರಣ. ನುಂಗಣ್ಣಗಳಿಂದ ಒತ್ತುವರಿ ಮಾಡಿಕೊಂಡಿರುವುದನ್ನು ತೆರೆವುಗೊಳಿಸುವ ಗೋಜಿಗೇ ಹೋಗಿಲ್ಲ. ಸಣ್ಣ ಪ್ರಯತ್ನವನ್ನೇ ಮಾಡಿಲ್ಲ. ಸರ್ಕಾರಿ ಜಮೀನು ಅದರಲ್ಲೂ ಕೆರೆಯ ಜಾಗ ಒತ್ತುವರಿಯಾಗಿದ್ದರೂ ಜಿಲ್ಲಾಡಳಿತ ಮಾತ್ರ ಕಿವಿಕೇಳದಂತೆ ನಡೆದುಕೊಳ್ಳುತ್ತಿದೆ.

ಅಮಾನಿಕೆರೆಯ ಅಭಿವೃದ್ಧಿಗೆಂದು ಸುಮಾರು 40 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಇದು ಮಾಜಿ ಸಚಿವ ಸೊಗಡು ಶಿವಣ್ಣನವರ ನಂತರ ಶಾಸಕರಾಗಿದ್ದ ರಫೀಕ್ ಅಹಮದ್ ಕಾಲದಲ್ಲಿ ಮೊದಲ ಹಂತದಲ್ಲಿ ಉದ್ಯಾನ, ವಾಕ್ ಪಾತ್ ಮತ್ತು ಕೆರೆಯ ಹೂಳೆತ್ತಿ ನಡುಗಡ್ಡೆಗಳನ್ನು ನಿರ್ಮಿಸಿ ಕೆರೆಯಲ್ಲಿ ವಿಹಾರ ನಡೆಸಲು ಉದ್ದೇಶಿಸಲಾಗಿತ್ತು. ಕೆರೆಯಲ್ಲಿನ ಮಣ್ಣನ್ನು ಬೇರೆಯ ಕಡೆಗೆ ಸಾಗಿಸಲಿಲ್ಲ. ಬದಲಿಗೆ ಅಲ್ಲಿಯೇ ಉದ್ಯಾನ ನಿರ್ಮಾಣ ಜಾಗದಲ್ಲಿ ಸುರಿಯಲಾಯಿತು. ಅಲ್ಲಿಗೆ ಕೆರೆಯ ಹೂಳೆತ್ತುವ ಮತ್ತು ನೀರು ತುಂಬಿಸುವ ಉದ್ದೇಶ ಮಣ್ಣು ಪಾಲಾಯಿತು. ಕೆರೆಯ ಹೂಳೆತ್ತಲು ಮಾಡಿದ ವೆಚ್ಚ 40 ಕೋಟಿ  ಹಣವನ್ನು ನೀರನಲ್ಲಿ ಹುಣಸೇಹಣ್ಣು ತೊಳೆದಂತಾಯಿತು.

ಹಳೆಯ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಂತೆ  13 ಎಕರೆ ಕೆರೆಯಂಗಳದಲ್ಲಿ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಖಾಸಗಿಯವರು ಒಂದು ಕಡೆ ಒತ್ತುವರಿ ಮಾಡಿದರೆ ಮತ್ತೊಂದು ಕಡೆ ಸ್ಮಾರ್ಟ್ ಸಿಟಿ ಲಿಮಿಟೆಡ್ ನಿಂದ ಸರ್ಕಾರಿ ಒತ್ತುವರಿಯನ್ನು ಮಾಡಲಾಯಿತು. ಇದರಿಂದ ಕೆರೆಯ ನೀರು ತುಂಬುವ ಸಾಮರ್ಥ್ಯ ಗಣನೀಯವಾಗಿ ಇಳಿಕೆಯಾಗಿದೆ. ಒಂದಷ್ಟು ದಿನ ಪರಿಸರವಾದಿಗಳು ಇದರ ವಿರುದ್ಧ ದನಿ ಎತ್ತಿದರೂ ನರಿಯ ಕೂಗು ಗಿರಿಗೆ ಮುಟ್ಟೀತೆ ಎನ್ನುವಂತಾಯಿತು.

ತುಮಕೂರು ನಗರಕ್ಕೆ ಕುಡಿಯುವ ಉದ್ದೇಶಕ್ಕಾಗಿ ಒಂದು ಟಿಎಂಸಿ ನೀರನ್ನು ಬಳಸಿಕೊಳ್ಳಲು ಅವಕಾಶವಿದೆ. ಆದರೆ ಬುಗುಡನಹಳ್ಳಿ ಜಲಸಂಗ್ರಹಾಗಾರ ಕೇವಲ 240 ಎಂಸಿಎಫ್ ಟಸಿ ನೀರು ಮಾತ್ರ ಸಂಗ್ರಹ ಸಾಮರ್ಥ್ಯ ಹೊಂದಿದೆ. ಹೀಗಾಗಿ ಅಮಾನಿಕೆರೆಯಲ್ಲಿ ನೀರು ಸಂಗ್ರಹ ಮಾಡಿಕೊಂಡು ತುಮಕೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಿದ್ದರೆ ಜನರಿಗೆ ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ. ಅಂದರೆ ಅಮಾನಿಕೆರೆ ನಿಜವಾದ ಉದ್ದೇಶ ಈಡೇರಲಿಲ್ಲ. ಕುಡಿಯುವ ನೀರಿನ ಯೋಜನೆಗೂ ಅಮಾನಿಕೆರೆಯನ್ನು ಬಳಸಿಕೊಳ್ಳಲು ಮುಂದಾಗಲಿಲ್ಲ. ಕೆರೆಯಲ್ಲಿ ಉದ್ಯಾನವನ ನಿರ್ಮಾಣ ಮುಖ್ಯವಾಯಿತೇ ವಿನಃ ಜನರಿಗೆ ಕುಡಿಯುವ ನೀರು ಒದಗಿಸಬೇಕೆಂಬ ಕನಿಷ್ಠ ಜ್ಞಾನವೂ ಜನಪ್ರತಿನಿಧಿಗಳಿಗಾಗಲಿ, ಜಿಲ್ಲಾಡಳಿತಕ್ಕಾಗಲಿ, ಶಾಸಕರಿಗಾಗಲೀ ಬರಲೇ ಇಲ್ಲ.

ಇದೀಗ ಕೆರೆಯ ಸುತ್ತಲೂ ಸ್ಮಾರ್ಟ್ ಸಿಟಿಯ ಭಾಗವಾಗಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದಕ್ಕಾಗಿ ಮತ್ತಷ್ಟು ಒತ್ತುವರಿ ಮಾಡಿಕೊಂಡಿದ್ದು ಕೆರೆಯ ವಿಸ್ತೀರ್ಣ ಕಡಿಮೆಯಾಗಿದೆ. ಹತ್ತಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದ್ದು, ಇದರಿಂದ ಕಿಂಚಿತ್ತೂ ಜನೋಪಯೋಗಿಯಾಗಿ ಅನಿಸುತ್ತಿಲ್ಲ. ಸ್ಮಾರ್ಟ್ ಸಿಟಿ ನೆಪದಲ್ಲಿ ಹಣ ದೋಚಲಾಗುತ್ತಿದೆ. ಕೆರೆಯನ್ನು ಕಿರಿದುಗೊಳಿಸಿ ಮುಂದೆ ಕೆರೆಯನ್ನೇ ಇಲ್ಲವಾಗಿಸುವ ಯತ್ನ ನಡೆಯುತ್ತಿದೆ. ಕೆರೆಗೆ ನೀರು ಹರಿಸಿದ್ದರೆ ನೂರಾರು ಕೊಳವೆ ಬಾವಿಗಳು ತುಂಬಿಕೊಳ್ಳುತ್ತಿದ್ದವು. ಕುಡಿಯುಲು ನೀರು ಪೂರೈಕೆ ಮಾಡಬಹುದಿತ್ತು. ಇದ್ಯಾವುದನ್ನು ಮಾಡದೆ ಕೇವಲ ಕೆರೆಯ ಅಂಗಳಕ್ಕೆ ಮಣ್ಣನ್ನು ಸುರಿಯಲಾಗುತ್ತಿದೆ. ಇದು ಕೂಡಲೇ ನಿಲ್ಲಿಸಬೇಕು. ಇದು ಜೇಬು ತುಂಬಿಸುಕೊಳ್ಳುವ ಕಾಮಗಾರಿಯೇ ಹೊರತು ಜನರಿಗೇನೂ ಪ್ರಯೋಜನವಿಲ್ಲ ಎಂದು ರಂಗನಾಥ್ ಕಿಡಿಕಾರಿದ್ದಾರೆ.

ಜನಪ್ರಿಯ ಅಧಿಕಾರಿ ಭೂಬಾಲನ್‌

ಕೆರೆಯನ್ನು ಹಾಳುಗೆಡವಲು ಮತ್ತು ಈ ಜಾಗದಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುವುದು ಕೆಲವು ರಾಜಕಾರಣಿಗಳು ಉದ್ದೇಶವಾಗಿದೆ. ಏನಾದರೂ ಮಾಡಿ ಕೆರೆಯನ್ನು ಸಂಪೂರ್ಣ ನುಂಗಿದರೆ ಲೇಔಟ್ ಮಾಡಬಹುದು ಎಂಬ ಹುನ್ನಾರವೂ ಇದರಲ್ಲಿ ಅಡಗಿದೆ. ನಿಜವಾಗಿ ಅಭಿವೃದ್ಧಿ ಎಂದರೆ ರಸ್ತೆಗಳಲ್ಲ. ಜನರ ಜೀವನಮಟ್ಟ ಸುಧಾರಣೆ ಆಗಬೇಕು. ಅದಾಗದಿದ್ದರೆ ಎಷ್ಟೇ ಅಭಿವೃದ್ಧಿ ಮಾಡಿದರೂ ಯಾರಿಗೂ ನಯಾ ಪೈಸೆ ಪ್ರಯೋಜನವಿಲ್ಲ ಎಂಬುದನ್ನು ಮನಗಾಣಬೇಕಾಗಿದೆ.

ತುಮಕೂರು ಮಹಾನಗರ ಪಾಲಿಕೆಗೆ ಮತ್ತೆ ಭೂಬಾಲನ್ ಬಂದಿದ್ದಾರೆ. ಸ್ಮಾರ್ಟ್ ಸಿಟಿ ಹೆಸರನಲ್ಲಿ ನಡೆಯುತ್ತಿರುವ ಕಾಮಗಾರಿಗಳು ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಅವರ ಮೇಲಿದೆ. ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಾಗಿರುವ ಅಕ್ರಮಗಳನ್ನು ಬಯಲಿಗೆ ತರುವಂತಹ ಗುರುತರ ಕೆಲಸ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಭೂಬಾಲನ್ ಶ್ರಮಿಸುವಂತಾಗಲಿ ಎಂಬುದು ಜನರ ಅಭಿಮತ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...