ಬೆಂಗಳೂರಿನ ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕಾಲೇಜಿನ ಮುಂದೆ ಇಂಡಿಯಾ ಸಪೋರ್ಟ್‌ ಸಿಎಎ ಎಂದು ಬ್ಯಾನರ್‌ ಹಾಕಲು ಬಂದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರೊಂದಿಗೆ ವಾಗ್ವಾದ ಮಾಡಿ, ಕೊನೆಗೂ ಪೊಲೀಸರ ಸಹಾಯದಿಂದ ಹೊರಹೋಗುವಂತೆ ಮಾಡಿದ ಘಟನೆ ಜರುಗಿದೆ.

ಆದರೆ ಈ ವಾಗ್ವಾದದಲ್ಲಿ ಬಿಜೆಪಿಯ ಕೆಲವರು ನೀವು ಹೀಗೆ ಮಾಡಿದರೆ ನಿಮ್ಮ ಮೇಲೆ JNU, ಜಾಮಿಯ ಮಾದರಿಯಲ್ಲಿ ದಾಳಿ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳನ್ನು ಅಶಿಕ್ಷಿತ ಮತ್ತು ರಾಷ್ಟ್ರ ವಿರೋಧಿಗಳು ಎಂದು ಕರೆದಿದ್ದಲ್ಲದೇ ವಿದ್ಯಾರ್ಥಿಯೊಬ್ಬರ ಪ್ರಕಾರ “ಪಾಕಿಸ್ತಾನಕ್ಕೆ ಹೋಗಿ” ಎಂದೂ ತಮ್ಮ ಹಳೆಯ ಚಾಳಿಯನ್ನು ಮುಂದುವರೆಸಿದ್ದಾರೆ.

ಬಿಜೆಪಿಯ ಹಲವು ಪುರುಷರರನ್ನು ಕೆಲವೇ ವಿದ್ಯಾರ್ಥಿನಿಯರು ತಡೆಗಟ್ಟಿ ವಾದ ಮಾಡಿದ್ದಲ್ಲದೇ ಪೊಲೀಸರನ್ನು ಕರೆಸಿ ಕೊನೆಗೂ ಅವರನ್ನು ಹೊರಹಾಕಲಾಗಿದೆ. ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಹೊರಹೋಗುವಂತೆ ಸೂಚಿಸಿದ್ದಾರೆ.

ನಡೆದಿದ್ದೇನು?

ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಿಜೆಪಿ ಕಾರ್ಯಕರ್ತರ ಗುಂಪೊಂದು ಸಿಎಎ ಪರ ಬ್ಯಾನರ್ ಅನ್ನು ಕಾಲೇಜು ಗೋಡೆಗೆ ಅಂಟಿಸಿದಾಗ ಈ ವಿಷಯ ಭುಗಿಲೆದ್ದಿತು. ಬ್ಯಾನರ್‌ನಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಮತ್ತು ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಅವರ ಚಿತ್ರಗಳಿದ್ದವು. ಕಾಲೇಜಿನ ಗೋಡೆಯ ಮೇಲೆ ಬ್ಯಾನರ್ ಹಾಕಲು ವಿದ್ಯಾರ್ಥಿಗಳ ಗುಂಪೊಂದು ಆಕ್ಷೇಪ ವ್ಯಕ್ತಪಡಿಸಿತು. ಆಗ ಬಿಜೆಪಿ ಕಾರ್ಯಕರ್ತರು ತಮ್ಮ ಆಕ್ಷೇಪಣೆಗಳನ್ನು ಲೆಕ್ಕಿಸದೆ ವಿದ್ಯಾರ್ಥಿಗಳು ಮತ್ತು ಪಾದಚಾರಿಗಳು ಬ್ಯಾನರ್‌ಗೆ ಸಹಿ ಹಾಕಬೇಕೆಂದು ಒತ್ತಾಯಿಸಿದರು.

ವಿದ್ಯಾರ್ಥಿಗಲು ತಮ್ಮ ಪ್ರತಿರೋಧವನ್ನು ಹೆಚ್ಚು ಮಾಡಿದಾಗ ಒಬ್ಬ ಬಿಜೆಪಿ ವ್ಯಕ್ತಿಯು “ನಿಮಗೆ ಜನರ ಪೌರತ್ವದ ಬಗ್ಗೆ ಕಾಳಜಿಯಿಲ್ಲ, ನಿಮ್ಮ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೀರಿ … ನೀವು ಭಾರತೀಯರಲ್ಲ” ಎಂದು ಹೇಳಿದ್ದಾರೆ. ಆಗ ವಿದ್ಯಾರ್ಥಿಗಳು ನಮಗೆ ದೇಶದ ಎಲ್ಲಾ ಧರ್ಮದ ಜನರ ಬಗ್ಗೆ ಕಾಳಜಿಯಿದೆ. ಹಾಗಾಗಿಯೇ ಸಿಎಎ ನಮಗೆ ಬೇಡ, ಇಲ್ಲಿಂದ ಹೊರಡಿ ಎಂದಿದ್ದಾರೆ. ನಂತರ ಬಿಜೆಪಿಗರು ನೀವು ಕಾಲೇಜಿನ ಮಾಲೀಕರಲ್ಲ ಮತ್ತು ಮಾಲೀಕರು ಮಾತ್ರ ಗೋಡೆಗೆ ಬ್ಯಾನರ್ ಅಂಟಿಕೊಂಡಿರುವುದನ್ನು ಆಕ್ಷೇಪಿಸಬಹುದು ಎಂದಿದ್ದಾರೆ.

ಆ ಪುರುಷರು ಹುಡುಗಿಯರ ಮೇಲೆ ಭಯಂಕರವಾಗಿ ಕೂಗಾಡಿದ್ದಾರೆ. ಆದರೆ ವಿದ್ಯಾರ್ಥಿನಿಯರು ಹಿಂದೆ ಸರಿಯಲು ನಿರಾಕರಿಸುತ್ತಾರೆ ಮತ್ತು ಬ್ಯಾನರ್ ತೆಗೆಯುವವರೆಗೂ ಬಿಡುವದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ನಿಮಗೆ ಬಿಜೆಪಿಗರಿಗೆ ಸಂವಾದ ಮಾಡಲು ಬರುವುದಿಲ್ಲ ಬರೀ ಕೂಗಾಡುತ್ತೀರಿ ಎಂದು ವಿದ್ಯಾರ್ಥಿನಿಯರು ದಬಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಲೇಜಿನ ಉಪನ್ಯಾಸಕರು, ರಸ್ತೆಯಲ್ಲಿ ಸಾಕಷ್ಟು ಜನರು ಸೇರಿದ್ದರಿಂದ ಅದೃಷ್ಟವಶಾತ್ ನಮ್ಮ ವಿದ್ಯಾರ್ಥಿಗಳ ಮೇಲೆ ಯಾವುದೇ ದೊಡ್ಡ ದೈಹಿಕ ಹಲ್ಲೆ ನಡೆದಿಲ್ಲ. ಆದರೆ ವೀಡಿಯೊದಲ್ಲಿ ನೋಡಿದಂತೆ, ನಮ್ಮ ವಿದ್ಯಾರ್ಥಿಗಳ ವಿರುದ್ಧ ಬಿಜೆಪಿ ಕಾರ್ಯಕರ್ತರು ಸಾಕಷ್ಟು ವೈಯಕ್ತಿಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅವರು ನಮ್ಮ ವಿದ್ಯಾರ್ಥಿಗಳನ್ನು ಅಶಿಕ್ಷಿತ ಮತ್ತು ರಾಷ್ಟ್ರ ವಿರೋಧಿ ಎಂದು ಕರೆದರು. ಕೆಲವು ವಿದ್ಯಾರ್ಥಿಗಳು ಮುಸ್ಲಿಮರು ಎಂದು ಗಮನಿಸಿ, ಅವರು ಪಾಕಿಸ್ತಾನಕ್ಕೆ ಹೋಗಬೇಕೆಂದು ಹೇಳಿದ್ದಾರೆ ಇದು ಸರಿಯಲ್ಲ. ನಾವು ಸುರಕ್ಷತಾ ವಿಷಯಗಳ ಬಗ್ಗೆ ಯೋಚಿಸುತ್ತಾ, ನಮ್ಮ ವಿದ್ಯಾರ್ಥಿಗಳನ್ನು ಹೊರಹೋಗುವಂತೆ ಕೇಳಬೇಕಾಗಿತ್ತು ಎಂದಿದ್ದಾರೆ.

ಅಂತಿಮವಾಗಿ ಪೊಲೀಸರು ಬುಧವಾರ ಬಿಜೆಪಿ ಕಾರ್ಯಕರ್ತರನ್ನು ಕಳಿಸಿದರೂ ಸಹ ವಿದ್ಯಾರ್ಥಿ ಸಂಘವು ಅವರ ಸುರಕ್ಷತೆಯ ಬಗ್ಗೆ ಆತಂಕದಲ್ಲಿದೆ ಎಂದು ಪ್ರಾಧ್ಯಾಪಕರು ಹೇಳಿದರು. ಏಕೆಂದರೆ ಇದು ಆಕಸ್ಮಿಕವಾಗಿ ನಡೆದ ಘಟನೆಯಲ್ಲ. ಬದಲಿಗೆ ಬಿಜೆಪಿಗರು ಕೆಲವರನ್ನು ಗುರಿಯಾಗಿಸಿಕೊಂಡು ಅವರಿಂದ ಸಿಎಎ ಪರ ಸಹಿ ಮಾಡಿಸಲು ಮುಂದಾಗಿದ್ದಾರೆ. ಮುಖ್ಯವಾಗಿ ಮುಸ್ಲಿಂ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಂದ. ಹಾಗಾಗಿ ಕಛೇರಿ ಮುಗಿಸಿ ಹೊರಬರುತ್ತಿದ್ದ ನಮ್ಮ ಪಕ್ಕದ ಮನೆಯವರಿಗೂ ಇದೇ ರೀತಿ ಸಹಿ ಹಾಕಲು ಪೀಡಿಸಿದ್ದಾರೆ ಎಂದು ಪ್ರಾಧ್ಯಾಪಕರು ತಿಳಿಸಿದ್ದಾರೆ. ಇಂದು ಕಾಲೇಜು ಆಡಳಿತ ಈ ಕುರಿತು ಹೇಳಿಕೆ ನೀಡುವ ನಿರೀಕ್ಷೆಯಿದೆ.

ಜಯನಗರ ಶಾಸಕಿ ಸೌಮ್ಯ ರೆಡ್ಡಿ, ಅವರ ತಂದೆ ಸ್ಥಳೀಯ ಶಾಸಕ ರಾಮಲಿಂಗ ರೆಡ್ಡಿ ಅವರೊಂದಿಗೆ ಆಗ್ನೇಯ ಡಿಸಿಪಿ ಇಶಾ ಪಂತ್ ಮತ್ತು ಕಾಲೇಜು ಪ್ರಾಂಶುಪಾಲರೊಂದಿಗೆ ಈ ವಿಷಯವನ್ನು ಮಾತಾಡುವುದಾಗಿ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here