Homeಮುಖಪುಟತೆಲಂಗಾಣ ಡಿಜಿಪಿ ಅಂಜನಿ ಕುಮಾರ್ ಅಮಾನತು ಆದೇಶ ಹಿಂಪಡೆದ ಚುನಾವಣಾ ಆಯೋಗ

ತೆಲಂಗಾಣ ಡಿಜಿಪಿ ಅಂಜನಿ ಕುಮಾರ್ ಅಮಾನತು ಆದೇಶ ಹಿಂಪಡೆದ ಚುನಾವಣಾ ಆಯೋಗ

- Advertisement -
- Advertisement -

ಚುನಾವಣಾ ಪೂರ್ಣ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್ ನಾಯಕ (ಈಗಿನ ಮುಖ್ಯಮಂತ್ರಿ) ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿ, ಮಾದರಿ ನೀತಿ ಉಲ್ಲಂಘಿಸಿದ ಆರೋಪದಲ್ಲಿ ಅಮಾನತುಗೊಂಡಿದ್ದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಂಜನಿ ಕುಮಾರ್ ಅವರ ವಿರುದ್ಧದ ಆದೇಶವನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಮಂಗಳವಾರ ಹಿಂಪಡೆದಿದೆ.

ಡಿಸೆಂಬರ್ 3ರಂದು ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವಾಗಲೇ ತೆಲಂಗಾಣದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಅಂಜನಿ ಕುಮಾರ್ ಅವರು ರಾಜ್ಯ ಪೊಲೀಸ್ ನೋಡಲ್ ಅಧಿಕಾರಿ ಸಂಜಯ್ ಜೈನ್ ಹಾಗೂ ಮತ್ತೋರ್ವ ಹಿರಿಯ ಅಧಿಕಾರಿ ಮಹೇಶ್ ಭಾಗವತ್ ಅವರೊಂದಿಗೆ ಹೈದರಾಬಾದ್‌ನ ರೆಡ್ಡಿ ಅವರ ನಿವಾಸದಲ್ಲಿ ಭೇಟಿಯಾಗಿ ಪುಷ್ಪಗುಚ್ಛ ನೀಡಿದ್ದರು.

ರೆಡ್ಡಿ ಜೊತೆಗಿನ ಅಂಜನಿ ಕುಮಾರ್ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿ ವಿವಾದಕ್ಕೆ ಕಾರಣವಾಗಿತ್ತು. ಡಿಜಿಪಿ ಅವರು ಚುನಾವಣಾ ಕಣದಲ್ಲಿದ್ದ 2,290 ಅಭ್ಯರ್ಥಿಗಳು ಹಾಗೂ 16 ರಾಜಕೀಯ ಪಕ್ಷಗಳ ಪೈಕಿ ರಾಜಕೀಯ ಪಕ್ಷವೊಂದರ ಸ್ಟಾರ್ ಪ್ರಚಾರಕ ಹಾಗೂ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಲು ಆಯ್ಕೆ ಮಾಡಿಕೊಂಡಿರುವುದು ದುರುದ್ದೇಶದಿಂದ ಕೂಡಿರುವ ಸ್ಪಷ್ಟ ಸೂಚನೆಯಾಗಿದೆ. ಡಿಜಿಪಿಯ ಇಂತಹ ನಡೆಗಳು ಕಿರಿಯ ಅಧಿಕಾರಿಗಳ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಆಯೋಗ ಹೇಳಿದೆ.

ಅಂಜನಿ ಕುಮಾರ್ ಅಮಾನತುಗೊಂಡ ನಂತರ ಹಿರಿಯ ಐಪಿಎಸ್ ಅಧಿಕಾರಿ ರವಿ ಗುಪ್ತಾ ಅವರಿಗೆ ಡಿಜಿಪಿಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿತ್ತು. ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ತೆಲಂಗಾಣದ ಡಿಜಿಪಿ, ಪೊಲೀಸ್ ಪಡೆ ಮುಖ್ಯಸ್ಥ (ಎಚ್ಒಪಿಎಫ್) ಹುದ್ದೆಗೆ ರವಿ ಗುಪ್ತಾ ಅವರನ್ನು ಸಂಪೂರ್ಣ ಹೆಚ್ಚುವರಿ ಪ್ರಭಾರದಲ್ಲಿ ಇರಿಸಲಾಗಿದೆ ಎಂದು ತೆಲಂಗಾಣ ಮುಖ್ಯ ಕಾರ್ಯದರ್ಶಿ ಎ. ಶಾಂತಿ ಕುಮಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

1990ನೇ ಬ್ಯಾಚ್‌ ಐಪಿಎಸ್ ಅಧಿಕಾರಿಯಾಗಿರುವ ಅಂಜನಿ ಕುಮಾರ್ ಒಂದು ವರ್ಷದ ಹಿಂದೆ ತೆಲಂಗಾಣದ ಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ, ಮತ ಎಣಿಕೆ ನಡೆಯುತ್ತಿರುವಾಗ ಪಕ್ಷದ ನಾಯಕರೊಬ್ಬರನ್ನು ಭೇಟಿ ಮಾಡುವ ಮೂಲಕ ಸುದ್ದಿ ಮಾಡಿದ್ದರು.

ಅವರು ಈ ಹಿಂದೆ ಹೈದರಾಬಾದ್ ಪೊಲೀಸ್ ಆಯುಕ್ತರಾಗಿ, ತೆಲಂಗಾಣ ಭ್ರಷ್ಟಾಚಾರ ವಿರೋಧಿ ಬ್ಯುರೋದ (ಎಸಿಬಿ) ಮುಖ್ಯಸ್ಥರಾಗಿ, ಎಡಿಜಿಪಿಯಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ. ಈ ಹಿಂದೆ ಆಂಧ್ರಪ್ರದೇಶ ಸರ್ಕಾರ ನಕ್ಸಲ್ ನಿಗ್ರಹಕ್ಕೆ ರಚಿಸಿದ್ದ ವಿಶೇಷ ಕಾರ್ಯಪಡೆಗೆ ಅಂಜನಿ ಕುಮಾರ್ ಮುಖ್ಯಸ್ಥರಾಗಿ ಕಾರ್ಯನಿರ್ವಹಣೆ ಮಾಡಿದ್ದರು.

ತಮ್ಮ ಸೇವಾ ಅವಧಿಯಲ್ಲಿ ಅಂಜನಿ ಕುಮಾರ್ ಹಲವಾರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪೊಲೀಸ್ ಸೇವೆಗಾಗಿ ವಿಶ್ವಸಂಸ್ಥೆ ನೀಡುವ ಶಾಂತಿ ಪದಕವನ್ನು ಸಹ ಪಡೆದಿದ್ದು, ಗಣ್ಯರು, ವಿಐಪಿಗಳ ಭದ್ರತೆಯ ಉಸ್ತುವಾರಿಯನ್ನು ದಕ್ಷತೆಯಿಂದ ನೋಡಿಕೊಳ್ಳುವ ಮೂಲಕ ಪೊಲೀಸ್ ಇಲಾಖೆಯಲ್ಲಿ ಹೆಸರುವಾಸಿಯಾಗಿದ್ದಾರೆ.

ಇದನ್ನೂ ಓದಿ; ಎಲ್ಲ ಬಲಿಷ್ಠರು ‘ಜಾತಿ ಗಣತಿ’ ವಿರುದ್ಧ ಒಗ್ಗಟ್ಟಾಗಿದ್ದಾರೆ; ಡಿಕೆಶಿ ನಿಲುವು ವಿರೋಧಿಸಿದ ಖರ್ಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಮಾಧ್ಯಮಗಳ ಮೇಲೆ ಸೆನ್ಸಾರ್‌ಶಿಪ್ ಹೇರಲು ಸಾಧ್ಯವಿಲ್ಲ..’; ಅರ್ಜಿದಾರರಿಗೆ ದಂಡ ವಿಧಿಸಿದ ದೆಹಲಿ ಹೈಕೋರ್ಟ್

0
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಅಥವಾ ಅವರ ರಾಜೀನಾಮೆ ಕುರಿತ ಊಹಾಪೋಹದ ಕುರಿತು ಸಂವೇದನಾಶೀಲ ಶೀರ್ಷಿಕೆಗಳನ್ನು ಪ್ರಸಾರ ಮಾಡದಂತೆ ಸುದ್ದಿ ವಾಹಿನಿಗಳನ್ನು ನಿರ್ಬಂಧಿಸಲು ಕೋರಿದ್ದ ಅರ್ಜಿದಾರರಿಗೆ ₹1 ಲಕ್ಷ ದಂಡ ವಿಧಿಸಿದ...