ಮರದಡಿ ಬದುಕು ಕಳೆದವನ ಪತ್ರ

0
7

ಭದ್ರಾವತಿ ತಾಲೂಕಿನ ದಾಸರಕಲ್ಲಹಳ್ಳಿಯ ಚನ್ನಬಸಪ್ಪ ಎಂಬ ಓದುಗರೊಬ್ಬರಿದ್ದರು. ಅವರು ಸಣ್ಣ ಪ್ರಾಯದಲ್ಲಿರುತ್ತ ಮರದ ಮೇಲಿಂದ ಬಿದ್ದು ಸೊಂಟ ಮುರಿದುಕೊಂಡು 35 ವರ್ಷದ ಬದುಕನ್ನು ಮನೆಯ ಮುಂದಿನ ಮರದಡಿ ಮಲಗಿ ಕಳೆದವರು. ಅವರು ನನ್ನ `ಹಿತ್ತಲಜಗತ್ತು’ ಪ್ರಬಂಧ ಓದಿ ಬರೆದ ಓಲೆಯಿದು.

“ನಾನು, ಪ್ರತಿ ಮಳೆಗಾಲ ಮುಗಿದ ನಂತರದ ಪ್ರತಿಯೊಂದು ದಿನ ಬೆಳಗ್ಗೆ ಸೂರ್ಯೋದಯದೊಂದಿಗೆ ಮನೆಯ ಹಿಂದಿನ ಪುಟ್ಟಮರದ ಕೆಳಗೆ ಕುಳಿತರೆ, ಸೂರ್ಯಾಸ್ತದ ನಂತರವೇ ಮಲಗಲು ಮನೆಯೊಳಗೆ ಬರುವುದು. ಇನ್ನುಳಿದಂತೆ ನನ್ನೆಲ್ಲಾ ದಿನದಿತ್ಯದ ಕ್ರಿಯೆ ನಡೆಯುವುದು ಆ ಮರದ ಕೆಳಗೆಯೇ. ನಿತ್ಯ ಪುಟ್ಟ ಗುಬ್ಬಚ್ಚಿಯಿಂದ ಹಿಡಿದು ಕಾಗೆ ಮೈನಾ ಪಾರಿವಾಳ ಗಿಳಿ ಮರಕುಟಿಗ ಇತ್ಯಾದಿ ಪಕ್ಷಿಗಳು ನಾಲ್ಕಾರು ನಿಮಿಷ ಮರದ ಮೇಲೆ ಕುಳಿತು, ಅವುಗಳದ್ದೇ ಭಾಷೆಯಲ್ಲಿ ನನ್ನ ಯೋಗಕ್ಷೇಮ ವಿಚಾರಿಸುತ್ತಿದ್ದುದರ ಜತೆಗೆ, ಆ ಔಷಧಿ ತೊಗೊಂಡಿದ್ದರೆ ಚನ್ನಾಗಿತ್ತು, ಈ ಔಷಧ ತೊಗೊಂಡಿದ್ದರೆ ಗುಣವಾಗುತ್ತಿತ್ತು ಎನ್ನುತ್ತಾ ಹಾರಿ ಹೋಗುತ್ತಿದ್ದವು. ಆಗ ನನ್ನ ಬಂಧುಮಿತ್ರರು ಪದೇಪದೇ ಅದನ್ನೇ ಹೇಳುತ್ತಾ ತಲೆ ಚಿಟ್ಟು ಹಿಡಿಸುತ್ತಿದ್ದುದು ನೆನಪಾಗುತಿತ್ತು. ಈ ಬಾರಿಯ ಮಳೆಗಾಲ ಮುಗಿದನಂತರ ಮರದ ಕೆಳಗಿನ ನೆಲ ಸ್ವಚ್ಛಗೊಳಿಸುವುದು ತಡವಾಯಿತು. ಮನೆಯ ಪಕ್ಕವೇ ಕುಳಿತಿದ್ದೆ. ಹದಿನೈದಿಪ್ಪತ್ತು ಅಡಿ ದೂರದಲ್ಲಿದ್ದ ಮರದ ಮೇಲೆ ಎರಡು ಟುವ್ವಿಗಳು ನಿತ್ಯ ಬರತೊಡಗಿದವು. ಗೂಡು ಕಟ್ಟಿಕೊಳ್ಳಲು ಬರುತ್ತಿರಬೇಕೆಂದುಕೊಂಡೆ. ಮರದ ಕೆಳಗಿನ ನೆಲ ಸ್ವಚ್ಛಗೊಳಿಸಿದ ನಂತರ ಅಲ್ಲಿಯೇ ಕುಳಿತು ತಲೆಯೆತ್ತಿ ಪ್ರತಿಯೊಂದು ಕೊಂಬೆಯನ್ನು ಹುಡುಕಿದರೂ ಟುವ್ವಿ ಗೂಡು ಕಟ್ಟಿದ ಸುಳಿವು ಸಿಗಲಿಲ್ಲ. ತಿಂಗಳಿಗೂ ಹೆಚ್ಚು ಸಮಯದಿಂದ ಆ ಟುವ್ವಿಗಳು ಯಾಕೆ ಬರುತ್ತಿದ್ದವೆಂದು ಯೋಚಿಸುತ್ತಾ ನೋಡುತ್ತಿದ್ದೆ. ಜೋಡಿ ಟುವ್ವಿಗಳು ನನ್ನ ತಲೆಯಿಂದ ಮೇಲೆ ಮೂರಡಿಯಷ್ಟು ಎತ್ತರದ ಐದಾರು ಎಲೆಗಳಿದ್ದ ಒಂದು ಕೊಂಬೆಯ ಮೇಲೆ ಪದೇಪದೇ ಬಂದು ಕೂರುವುದು ಮತ್ತು ಶರವೇಗದಿಂದ ಹಾರಿಹೋಗುವುದು ಮಾಡುತ್ತಿದ್ದವು. ಪ್ರಾಚ್ಯವಸ್ತು ಇಲಾಖೆಯವರು ಉತ್ಖನನ ಮಾಡುವಾಗ ಸಿಗುತ್ತಿದ್ದ ಪಳೆಯುಳಿಕೆಗಳ ಬಗ್ಗೆ ಪತ್ರಿಕೆಗಳಲ್ಲಿ ಓದುತ್ತಿದ್ದ ನನಗೆ, ಒಂದು ವರ್ಷದ ಹಿಂದೆ ಟುವ್ವಿಗಳು ಭಾರಿ ಸಂಶೋಧನೆ ಮಾಡಿದವರಂತೆ ಪದೇಪದೇ ಬಂದು ಟೊಂಗೆಯ ಮೇಲೆ ಕುಳಿತು ತಮ್ಮ ಹಿರಿಯರು ಕಟ್ಟಿದ್ದ ಗೂಡಿನ ಪಳೆಯುಳಿಕೆಯನ್ನು ನೋಡಿ ಹಾರಿಹೋಗುತ್ತಿದ್ದುದು ಮಿಂಚಿನಂತೆ ಗೊತ್ತಾಯಿತು. ನನ್ನ ಮನಸ್ಸು ವರ್ಷಗಳ ಹಿಂದಕ್ಕೆ ಜಾರುತ್ತಿದ್ದಂತೆ, ಹೆಬ್ಬೆರಳಿಗಿಂತಲೂ ಚಿಕ್ಕಗಾತ್ರದ ನಸುಗಪ್ಪು ಬೆನ್ನಿನ ಬಿಳಿ ಅರಿಶಿಣ ಬೆರಕೆಯ ಮುಂಭಾಗವುಳ್ಳ ಟುವ್ವಿ ಜೋಡಿಗಳು, ಒಂದಿಡೀ ದಿನ ಕೊಂಬೆಯಿಂದ ಕೊಂಬೆಗೆ ಹಾರುತ್ತಾ ಚಿಲಿಪಿಲಿ ಗುಟ್ಟುತ್ತಿದ್ದವು. ಹೊಸ ಜೋಡಿಯಾದ್ದರಿಂದ ನನ್ನ ಭಯ ಅವುಗಳಿಗೆ ಆಗಬಾರದೆಂದು ತುಂಬಾ ಎಚ್ಚರಿಕೆಯಿಂದಿದ್ದೆ. ಪುನಃ ಮಾರನೆಯ ದಿನವೂ ಬಂದು ಏಳೆಂಟು ಎಲೆಗಳಿರುವ ಜೋತು ಬಿದ್ದ ಕೊಂಬೆಯಲ್ಲಿ ನನ್ನನ್ನು ಗಮನಿಸುತ್ತಲೇ ಗೂಡು ಕಟ್ಟತೊಡಗಿದವು. ನನಗೆ ಕುತೂಹಲದ ಜೊತೆಗೆ ಆಶ್ಚರ್ಯವಾಗತೊಡಗಿತು. ನೆಲದಿಂದ ಏಳು ಅಡಿ ಎತ್ತರದ ಪುಟ್ಟ ಜೋತು ಬಿದ್ದ ಕೊಂಬೆಯಲ್ಲಿ ಗೂಡು ಕಟ್ಟತೊಡಗಿದವು. ನನ್ನೆರಡು ಕಣ್ಣುಗಳಿಂದ ನಾಲ್ಕಡಿ ದೂರದ ಕೊಂಬೆ ಗೂಡು ಕಟ್ಟಲು ಬಳಸಿದ ಕಚ್ಚಾವಸ್ತು, ಜೇಡರ ಹುಳು ಹೆಣೆಯುವ ಹತ್ತಿಯ ತುಣುಕು ವಸ್ತು. ಸುತ್ತಮುತ್ತ ಗಿಡಮರಗಳ ಸಂದಿಗೊಂದಿಗಳಲ್ಲಿ ಹುಡುಕಿ ತಮ್ಮ ಕೊಕ್ಕಿನಿಂದ ಕಚ್ಚಿತಂದು ಗೂಡು ಕಟ್ಟತೊಡಗಿದವು. ಒಂದೇ ವಾರದಲ್ಲಿ ಕ್ರಿಕೆಟ್ ಚೆಂಡಿಗಿಂತ ತುಸು ದೊಡ್ಡದಾದ ಜೇಡದ ಹತ್ತಿಯ ಉಂಡೆಮರದ ಕೊಂಬೆಯಲ್ಲಿ ನೇತಾಡುತ್ತಿದ್ದಂತೆ, ನಾನೊಂದು ಲೇಖನ ಓದಿದ್ದು ನೆನಪಾಗಿ ವ್ಯಂಗ್ಯದ ನಗು ಅರಳತೊಡಗಿತು. ಸೋಮಾರಿ ಜನ ತಮ್ಮ ಸಾಂಪ್ರದಾಯಿಕ ಜೀವನಶೈಲಿ ತ್ಯಜಿಸುತ್ತಿರುವಂತೆಯೇ, ಹಕ್ಕಿಪಕ್ಷಿಗಳೂ ಸೋಮಾರಿಗಳಂತೆ ತಮ್ಮ ಸಾಂಪ್ರದಾಯಿಕ ಗೂಡು ಹೆಣೆಯುತ್ತಿರುವುದು ಕಡಿಮೆಯಾಗುತ್ತಿದೆ ಎಂಬುದು ಆ ಲೇಖನದ ಸಾರ. ನನ್ನ ವ್ಯಂಗ್ಯ ಅರ್ಥಮಾಡಿಕೊಂಡವರಂತೆ ಟುವ್ವಿಗಳಲ್ಲೊಂದು ಹತ್ತಿ ಉಂಡೆಯಂತಿದ್ದ ಗೂಡಿನ ಮೇಲ್ಭಾಗದಿಂದ ತನ್ನ ಕೊಕ್ಕನ್ನು ತೂರಿಸಿ ತಲೆಯನ್ನು ಅಲ್ಲಾಡಿಸುತ್ತಾ ಇತ್ತು. ತಲೆಯನ್ನು ತೂರಿಸಿಕೊಂಡು ಆಡಿಸಿಕೊಳ್ಳುತ್ತಲೇ ಟುವ್ವಿಯ ದೇಹವೇ ಉಂಡೆಯೊಳಗೆ ಸೇರಿಕೊಂಡಿತು. ಈಗ ತನ್ನಿಡೀ ದೇಹವನ್ನು ಅಲ್ಲಾಡಿಸುತ್ತಾ ಹೊರ ಬಂದು ಪುರ್ರನೆ ಹಾರಿಹೋಯಿತು ಮತ್ತಷ್ಟು ಕಚ್ಚಾವಸ್ತು ತರಲು. ಪುಟ್ಟ ಜೀವಿಗಳ ಶ್ರೇಷ್ಠ ಸಾಧನೆಯ ಕೆಲಸ ನೋಡುತ್ತಾ ನನ್ನಲ್ಲಿಯೇ ಕೀಳರಿಮೆ ಮೂಡುತ್ತಿತ್ತು. ಏನಾದರೂ ಸರಿ, ಗೂಡಿಗೆ ಕೊನೆಯತನಕ ರಕ್ಷಕನಾಗಿರಬೇಕೆಂದುಕೊಂಡೆ. ಟುವ್ವಿಗಳು ಗೂಡು ಕಟ್ಟುವುದನ್ನು ಮುಂದುವರಿಸಿದ್ದಾಗ ಅದೆಲ್ಲಿಂದಲೋ ಬಂದ ಗಡವ ಮಂಗ ನಾಕೊಟ್ಟ ಬಾಳೆಹಣ್ಣನ್ನು ಒಮ್ಮೆಲೇ ಬಾಯೊಳಗೆ ತುರುಕಿಕೊಂಡು ಇನ್ನೊಂದು ಕೈಯಿಂದ ಟುವ್ವಿಗಳ ಗೂಡನ್ನು ಕಿತ್ತು ನೆಲಕ್ಕೆ ಹಾಕಿತು. ನನ್ನ ಅಹಂ ಜರ್ರನೆ ಇಳಿದುದರ ಜೊತೆಗೆ ಅಸಹಾಯಕತೆ ಮತ್ತು ಅಪರಾಧಿಪ್ರಜ್ಞೆಯಿಂದ ತಲೆತಗ್ಗಿಸಿದೆ. ಟುವ್ವಿಗಳು ಜೇಡದ ಹತ್ತಿಯ ತುಣುಕನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಬಂದಾಗ ತಮ್ಮ ಗೂಡು ನೆಲಕ್ಕೆ ಬಿದ್ದಿರುವುದನ್ನು ಕಂಡು ಕೂಗಾಡತೊಡಗಿದವು. ಗೂಡು ಕಿತ್ತಿದ್ದಕ್ಕೆ ಸಾಕ್ಷಿಯಾಗಿ ಅಲ್ಲಿ ನಾನೊಬ್ಬನೇ ಉಳಿದಿದ್ದೆ. ತಳಪಾಯ ಸರಿಯಾಗಿ ಕಟ್ಟಿದ್ದೆನೋ ಇಲ್ಲವೋ? ಇವನೇನಾದರೂ ಕಿತ್ತು ಮಳ್ಳನಂತೆ ಕುಳಿತಿರುವನೇ ಎಂಬಂತಿತ್ತು ಅವುಗಳ ಚೀರಾಟ. ಟುವ್ವಿಗಳು ಗೂಡು ಕಟ್ಟಿ ಮೊಟ್ಟೆಯಿಟ್ಟು ಮರಿಗಳು ಚಿಲಿಪಿಲಿ ಗುಟ್ಟುವುದನ್ನು ಅತ್ಯಂತ ಸಮೀಪದಿಂದ ಮನದಣಿಯೆ ನೋಡಬಹುದೆಂದು ಕನಸು ಕಂಡಿದ್ದ ನನಗೆ ಸುಂದರ ಅವಕಾಶ ತಪ್ಪಿತಲ್ಲ ಎಂದು ರಾತ್ರಿಯೆಲ್ಲಾ ತುಂಬಾ ಸಂಕಟಪಟ್ಟೆ.

ಮಾರನೆಯ ದಿನ ಭಾರವಾದ ಮನಸ್ಸಿನಿಂದ ಎಂದಿನಂತೆ ಮರದ ಕೆಳಗೆ ಪತ್ರಿಕೆಯೋದುತ್ತಾ ಕುಳಿತಿದ್ದಾಗ ಟುವ್ವಿಗಳು ಚಿಲಿಪಿಲಿ ಗುಟ್ಟುತ್ತಲೇ ಇದ್ದವು. ಗೂಡು ಕಿತ್ತಿದ್ದರ ಬಗ್ಗೆ ಇನ್ನೂ ಸಂಕಟ ಕಡಿಮೆಯಾಗಿಲ್ಲವೇನೋ ಎಂದುಕೊಂಡೆ. ಬಹಳ ಸಮಯವಾದರೂ ಅವುಗಳ ಚಿಲಿಪಿಲಿ ಗುಟ್ಟುವಿಕೆ ನಿಲ್ಲದಿದ್ದಾಗ ತಲೆಯೆತ್ತಿ ನೋಡಿ ದಂಗಾಗಿ ಬಿಟ್ಟೆ. ಟುವ್ವಿಗಳು ಬೆಳಗ್ಗೆಯಿಂದಲೇ ಮೊದಲು ಕಟ್ಟಿದ್ದ ಗೂಡಿನ ಕೊಂಬೆಯನ್ನು ಬಳಸದೇ ಪಕ್ಕದ ಇನ್ನೊಂದು ಕೊಂಬೆಯಲ್ಲಿ ಗೂಡು ಕಟ್ಟುತ್ತಿದ್ದವು. ಕೆಳಗೆ ಕುಳಿತಿರುವ ನನ್ನಿಂದ ತಾವು ಕಟ್ಟಿರುವ ಗೂಡು ಹಾನಿಗೊಂಡಿಲ್ಲ, ತಮ್ಮಿಂದಲೇ ಎಲ್ಲೋ ವ್ಯತ್ಯಾಸವಾಗಿ ಕಿತ್ತಿರಬೇಕೆಂದು ನಿರ್ಣಯಿಸಿದಂತಿತ್ತು ಅವುಗಳ ವರ್ತನೆ. ಈ ಬಾರಿ ಗೂಡು ಕಟ್ಟುವುದು ತಡವಾಗುವುದಿಲ್ಲ ಎಂದುಕೊಂಡೆ. ಏಕೆಂದರೆ ಜೇಡ ಹೆಣೆದ ಹತ್ತಿಯ ಮುದ್ದೆಯೇ ಪಕ್ಕದಲ್ಲಿತ್ತು. ಎರಡು ಟುವ್ವಿಗಳು ವೇಗವಾಗಿ ಹೋಗಿ ಅಷ್ಟೇ ವೇಗದಿಂದ ಮರಳಿ ಬಂದಾಗ ಜೇಡ ಹೆಣೆದ ಹತ್ತಿಯ ತುಣುಕು ಅವುಗಳ ಕೊಕ್ಕಿನಲ್ಲಿರುತ್ತಿತ್ತು. ಎರಡನೆಯ ಬಾರಿ ಗೂಡು ಕಟ್ಟುವುದು ಮುಗಿಯುತ್ತಾ ಬಂದರೂ ಕೊಂಬೆಯ ಸಮೇತ ಹಳೆಯ ಗೂಡಿನ ಸಣ್ಣ ಎಳೆಯನ್ನೂ ಬಳಸದೇ ಹೊಸ ಮಾಲನ್ನೇ ತಂದು ಗೂಡುಕಟ್ಟಿ ಮುಗಿಸಿದಾಗ ಬೆರಗಾದೆ.

ಪುಟ್ಟದಾದ ಟುವ್ವಿಗಳಿಂದ ಬಹಳಷ್ಟು ಕಲಿಯುವುದಿತ್ತು. ಆತ್ಮವಿಶ್ವಾಸದ ಕೊರತೆಯಿಂದ ಬಳಲುವ ನಮ್ಮಂತಹವರಿಗೆ ಸ್ಫೂರ್ತಿಯಾಗಿತ್ತು; ಎಲ್ಲದರಲ್ಲಿಯೂ ಕೊನೆಗೆ ಜೀವರಕ್ಷಕದಲ್ಲಿಯೂ ಕಲಬೆರಕೆ ಮಾಡಿ ಜೀವ ತೆಗೆಯುವವರಿಗೆ ಪ್ರಾಮಾಣಿಕತೆಯ ಪಾಠದಂತಿತ್ತು. ಗೂಡೊಳಗೆ ಮೊಟ್ಟೆಯಿಟ್ಟು ಕಾವು ಕೊಟ್ಟು ಮರಿಗಳಾದ ನಂತರ ಸಣ್ಣದಾಗಿ ಚಿಲಿಪಿಲಿಗುಟ್ಟುವುದು ಕೇಳತೊಡಗಿತು. ಅಂತೆಯೇ ಟುವ್ವಿಗಳು ಮತ್ತೆ ಮೊದಲಿನಂತೆಯೇ ಸಡಗರದಿಂದ ಹಾರಿಹೋಗಿ ಮರಳಿ ಬರುತ್ತಿದ್ದವು. ಈ ಬಾರಿ ಟುವ್ವಿಗಳ ಕೊಕ್ಕಿನಲ್ಲಿ ಹುಳುಹುಪ್ಪಟೆಯಂತಹ ಸಣ್ಣಸಣ್ಣ ಕೀಟಗಳಿರುತ್ತಿದ್ದವು. ಪ್ರತಿದಿನ ಬೆಳಗ್ಗೆಯಿಂದ ಸಂಜೆಯವರೆಗೆ ಮರಿ ಟುವ್ವಿಗಳು ಬೆಳೆದು ರೆಕ್ಕೆ ಬಲಿತು ಸ್ವತಂತ್ರವಾಗಿ ಹಾರಿಹೋಗುವವರೆಗೆ ದೊಡ್ಡ ಪೋಷಕ ಟುವ್ವಿಗಳೆರಡು ಸ್ಪರ್ಧೆಗೆ ಬಿದ್ದವರಂತೆ ಸುತ್ತಮುತ್ತಲ ಗಿಡ ಮರವೆನ್ನದೆ ಎಲ್ಲಾ ಕಡೆಯೂ ಹುಳು ಹುಪ್ಪಟೆಗಳನ್ನಾಯ್ದು ತಂದು ಮರಿಗಳಿಗೆ ತಿನ್ನಿಸುತ್ತಿದ್ದವು. ಎರಡು ಪುಟ್ಟ ಟುವ್ವಿಗಳೇ ಇಷ್ಟೊಂದು ಹುಳುಗಳನ್ನು ನಿತ್ಯ ತಿನ್ನುತ್ತಾ ಕೀಟ ನಿಯಂತ್ರಣ ಮಾಡುತ್ತಿರಬೇಕಾದರೆ, ಇನ್ನುಳಿದ ಎಲ್ಲಾ ಬಗೆಯ ಹಕ್ಕಿಪಕ್ಷಿಗಳಿಂದ ಕೀಟ ನಿಯಂತ್ರಣದ ಅಗಾಧತೆಯ ಅರಿವಾಗಿತ್ತಲ್ಲದೇ, ಹಕ್ಕಿ ಪಕ್ಷಿಗಳಿಲ್ಲದಿದ್ದರೆ ಹುಳುಹುಪ್ಪಟೆಗಳ ಸಂತಾನ ಬೆಳೆದು ಅವುಗಳ ರಾಶಿಯೇ ಬೆಳೆದು ನನ್ನ ಮೇಲಿರುವುದನ್ನು ಕಲ್ಪಿಸಿಕೊಂಡು ಚಳಿಯಿಂದ ಬೆವೆತಿದ್ದೆ.

ತಿಂಗಳ ನಂತರ ಪುನಃ ಅವೇ ಟುವ್ವಿಗಳು ಬಂದು ಮತ್ತೊಂದು ಕೊಂಬೆಯಲ್ಲಿ ಹೊಸ ಸರಕನ್ನೇ ತಂದು ಗೂಡು ಕಟ್ಟತೊಡಗಿದವು. ಪಕ್ಕದಲ್ಲಿನ ಗೂಡು ಸುಸ್ಥಿತಿಯಲ್ಲಿದ್ದರೂ ಹೊಸ ಗೂಡನ್ನೇ ಕಟ್ಟಿ ಮುಗಿಸಿದ ಟುವ್ವಿಗಳು ಮೊಟ್ಟೆಗಳನ್ನಿಟ್ಟು ಕಾವುಕೊಟ್ಟು ಮರಿಗಳಾದ ನಂತರ ಅವುಗಳಿಗೆ ಆಹಾರವನ್ನು ಹೆಕ್ಕಿ ಕೊಕ್ಕಿನಲ್ಲಿ ಕಚ್ಚಿ ತಂದು ತಿನ್ನಿಸುತ್ತಿದ್ದವು. ಇನ್ನೊಂದು ತಿಂಗಳು ಕಳೆದರೆ ಮರಿಗಳ ರೆಕ್ಕೆ ಬಲಿತು ಹಾರಿ ಹೋಗುತ್ತವೆಯೆಂದು ಲೆಕ್ಕ ಹಾಕುತ್ತಿದ್ದಾಗ ಕಾಗೆಯೊಂದು ಗೂಡೊಳಗಿದ್ದ ಮರಿಗಳನ್ನು ನೋಡಿ, ಟುವ್ವಿಗಳ ಕಣ್ಣೆದುರಿಗೇ ಗೂಡಿನ ಸಮೇತ ಮರಿಗಳನ್ನು ಕಚ್ಚಿಕೊಂಡು ಹಾರಿಹೋಯಿತು. ಆನಂದದ ಪರಾಕಾಷ್ಠೆಯಲ್ಲಿದ್ದ ಟುವ್ವಿಗಳು ಒಮ್ಮೆಲೇ ಆಘಾತದಿಂದ ಚೀರಾಡತೊಡಗಿದವು. ಚೀರಾಡುತ್ತಲೇ ಗೂಡಿನ ಅವಶೇಷಗಳ ಮೇಲೆ ಕುಳಿತು ಅದರೊಳಗೆ ಮರಿಗಳನ್ನು ಹುಡುಕಾಡತೊಡಗಿದವು. ಕೊಂಬೆಯಿಂದ ಕೊಂಬೆಗೆ ಹಾರುತ್ತಾ ಕಾಗೆ ಮರಿಗಳನ್ನು ಕಚ್ಚಿಕೊಂಡು ಹೋದ ಕಡೆಗೆ ನೋಡುತ್ತಾ ರೋದಿಸತೊಡಗಿದವು. ಐದಾರು ದಿನಗಳವರೆಗೆ ಅವು ಸತತ ರೋದಿಸುತ್ತಲೇ ಇದ್ದವು. ಅದು ನನಗೆ ಹಲವು ತಾಯಂದಿರ ಹಲವು ಕಾರಣಗಳ ರೋದನದಂತೆ ಭಾಸವಾಗುತಿತ್ತು. ದೇವರು ನಮ್ಮಂತೆ ಸ್ವಾರ್ಥ ಅಪ್ರಾಮಾಣಿಕತೆಯನ್ನು ಬಿಟ್ಟು, ಇನ್ನುಳಿದಂತೆ ಎಲ್ಲಾ ಭಾವನೆಗಳನ್ನು ಆ ಪಕ್ಷಿಗಳಲ್ಲಿಯೂ ಬಿಟ್ಟಿದ್ದಾನೆ ಎಂದುಕೊಂಡೆ. ಅವು ರೋದಿಸಿ ಸುಸ್ತಾಗಿ ಕೊಂಬೆಯ ಮೇಲೆ ಗಾಢ ಮೌನವಾಗಿದ್ದಾಗಲೆಲ್ಲ, ನನ್ನ ಜೊತೆಯಲ್ಲಿಯೇ ಇರುವ ನನ್ನ ತಂದೆ-ತಾಯಿ ನನ್ನ ಸ್ಥಿತಿ ನೆನೆದು ಮೌನದಲ್ಲಿಯೇ ರೋದಿಸುತ್ತಿರುವಂತೆ ಭಾಸವಾಗಿ ಮಂಕು ಬಡಿದವನಂತೆ ಕುಳಿತಿರುತಿದ್ದೆ. ಒಂದು ತಿಂಗಳಿಗೂ ಹೆಚ್ಚು ಸಮಯ ತಾಯಿ ಟುವ್ವಿ ಮರಿಗಳ ನೆನಪಾದಾಗಲೆಲ್ಲಾ ಗೂಡಿನ ಬಳಿ ಬಂದು ಕುಳಿತು ರೋದಿಸುತ್ತಿದ್ದರೆ, ಅದಾಗಲೇ ಸುಧಾರಿಸಿಕೊಂಡಿದ್ದ ಗಂಡು ಟುವ್ವಿ ಬಂದು ಸಂಗಾತಿಯನ್ನು ಸಂತೈಸಿ ಕರೆದೊಯ್ಯುತ್ತಾ ಕಡೆಗೊಮ್ಮೆ ಎರಡೂ ಟುವ್ವಿಗಳು ಕಣ್ಮರೆಯಾದವು-ತಮ್ಮ ಸಿಹಿಕಹಿ ಜೀವನದ ನೆನಪುಗಳನ್ನು ನನ್ನ ಮನದಲ್ಲುಳಿಸಿ.’’

ಈ ಪತ್ರದಲ್ಲಿ ಚನ್ನಬಸಪ್ಪನವರು ಅಂಗವಿಕಲರಾದ ಬಳಿಕ ತಮ್ಮೆದುರಿನ ಮರವನ್ನೇ ಸಮಸ್ತ ಲೋಕವೆಂದು ಭಾವಿಸಿ, ಅಲ್ಲಿ ನಡೆದ ಚಟುವಟಿಕೆಗಳಿಗೆ ಸಾಕ್ಷಿಯಾಗಿರುವುದು ತಿಳಿಯುತ್ತದೆ. ವಿಶೇಷವೆಂದರೆ, ತಾವು ಕಂಡ ಹಕ್ಕಿಗಳ ದುರಂತವನ್ನು ತಮ್ಮ ದುರಂತಕ್ಕೂ ಸಮೀಕರಿಸುವುದು. ಪುಟ್ಟ ಅಸಹಾಯಕ ಜೀವಿಗಳು ಬದುಕಲು ಮಾಡುವ ಹೋರಾಟವು ಅವರಿಗೆ ಆದರ್ಶದಂತೆಯೂ ಬದುಕಲು ಬೇಕಾದ ಪ್ರೇರಣೆಯಂತೆಯೂ ಕಂಡಿದೆ. ನಾನು ಯಾಕೊ ಅವರು ನನ್ನ ಬರೆಹಗಳಿಗೆ ಪ್ರತಿಕ್ರಿಯಿಸುವ ಪತ್ರ ಬರೆಯುತ್ತಿಲ್ಲವಲ್ಲ ಎಂದು ಅವರಿಗೆ ಫೋನು ಮಾಡಿದೆ. ಅವರ ತಾಯಿಯೊ ಅಜ್ಜಿಯೊ ಎತ್ತಿಕೊಂಡರು. ಚನ್ನಬಸಪ್ಪನವರು ಬೇಕಾಗಿತ್ತು ಎಂದೆ. ಅವನು ಹೋಗಿ ಆರು ತಿಂಗಳಾತಲ್ಲಪ್ಪ ಎಂದರು. ಅವರ ದನಿಯಲ್ಲಿ ಇದ್ದುದು ದುಃಖವೊ, ದಿನವೂ ಪ್ರಾಯದ ವ್ಯಕ್ತಿಯ ಮಲಮೂತ್ರ ಮಾಡಿಸಿ ಮನೆಯ ಮುಂದಿನ ಮಂಚದಲ್ಲಿ ಮಲಗಿಸುವ ಏಕತಾನ ಮತ್ತು ದಣಿವಿನಿಂದ ಪಡೆದ ಬಿಡುಗಡೆಯೊ ತಿಳಿಯಲಿಲ್ಲ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here