ಸಿಎಎ, ಎನ್‌ಆರ್‌ಸಿ ಕುರಿತು …. ಐಎಎಸ್ ಅಧಿಕಾರಿಗಳು ಏನು ಹೇಳುತ್ತಾರೆ?

0

106ಜನ ನಿವೃತ್ತ ಐಎಎಸ್‌ ಅಧಿಕಾರಿಗಳು ಸರ್ಕಾರಕ್ಕೆ ಎನ್‌ಆರ್‌ಸಿ, ಸಿಎಎ ಮತ್ತು ಎನ್‌ಪಿಆರ್‌ ಕುರಿತು ಹಕ್ಕೊತ್ತಾಯ ಪತ್ರವೊಂದನ್ನು ಬರೆದಿದ್ದಾರೆ. ಅದರ ಪೂರ್ಣಪಾಠ ಇಲ್ಲಿದೆ.

ಆತ್ಮೀಯ ಭಾರತೀಯ ಸಹಪ್ರಜೆಗಳೆ,

ಪೌರತ್ವ ತಿದ್ದುಪಡಿ ಕಾಯಿದೆ (2019) (Citizenship Amendment Act – CAA) ಈ ದೇಶದ ಹಲವಾರು ನಾಗರಿಕರ ಮನಸ್ಸಿನಲ್ಲಿ ಸಹಜವಾಗಿಯೇ ಗಾಢವಾದ ಕಳವಳವನ್ನು ಮೂಡಿಸಿದೆ. ಜೊತೆಗೆ ಭಾರತೀಯ ಪ್ರಜೆಗಳ ರಾಷ್ಟ್ರೀಯ ದಾಖಲೆಗೆ (National Register of Indian Citizens — NRIC) ಸಂಬಂಧಪಟ್ಟಂತೆ ಭಾರತ ಸರಕಾರದ ವಕ್ತಾರರು ತಮ್ಮ ದಾರಿತಪ್ಪಿಸುವ ವಿರೋಧಾತ್ಮಕ ಹೇಳಿಕೆಗಳಿಂದ ಆ ಚಿಂತೆ ಭಯಗಳನ್ನು ಇನ್ನಷ್ಟು ದಟ್ಟಗೊಳಿಸುತ್ತಿದ್ದಾರೆ. ಅಲ್ಲದೆ,  ಸರಕಾರ ಈಗ ರಾಷ್ಟ್ರೀಯ ಜನಸಂಖ್ಯೆ ದಾಖಲೆ (National Population Register – NPR) ಗೂ ಮತ್ತು NRCಗೂ ತಳುಕು ಹಾಕುವುದು ಬೇಡವೆಂದೂ ಹೇಳುತ್ತಿದ್ದಾರೆ. ಈ ವಿಷಯಗಳಿಗೆ ಸಂಬಂಧಪಟ್ಟಂತೆ ಸರಿಯಾದ ಮಾಹಿತಿಯನ್ನು ಒದಗಿಸುವ ಜವಾಬ್ದಾರಿಯನ್ನು ನಮ್ಮ ಸಂವಿಧಾನ ಮಾರ್ಗದರ್ಶನ ತಂಡ (Constitutional Conduct Group) ಹೊತ್ತುಕೊಂಡಿದೆ.

ಅಖಿಲ ಭಾರತ ಮತ್ತು ಕೇಂದ್ರೀಯ ನಾಗರಿಕ ಸೇವೆಗಳಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದ ಅಧಿಕಾರಿಗಳು ಈ ತಂಡದಲ್ಲಿದ್ದು ಈ ಮೇಲೆ ಹೇಳಿದ ಮೂರು ಪರಿಕಲ್ಪನೆಗಳು (CAA, NRIC, ಮತ್ತು NPR) ಏನು, ಅವು ಹೇಗೆ ಒಂದಕ್ಕೊಂದು ಗಾಢವಾಗಿ ಹೆಣೆದುಕೊಂಡಿವೆ,  ಮತ್ತು ಅವುಗಳನ್ನು ಹೇಗೆ ಬಲವಾಗಿ ವಿರೋಧಿಸದೇ ಬೇರೆ ದಾರಿಯೇ ಇಲ್ಲ ಎಂಬುದನ್ನು ಸಂವಿಧಾನಾತ್ಮಕ ನೆಲೆಯಲ್ಲಿ ಸ್ಪಷ್ಟಪಡಿಸುವುದನ್ನು ತಮ್ಮ ನೈತಿಕ ಹೊಣೆಯೆಂದೇ ತಿಳಿದಿದ್ದಾರೆ. ಸುಲಭವಾಗಿ ಅರ್ಥವಾಗುವಂತೆ ಈ ವಿಷಯಗಳನ್ನು ಒಂದರ ಕೆಳಗೊಂದರಂತೆ ಪಟ್ಟಿ ಮಾಡಲಾಗಿದೆ.

NPR ಮತ್ತು NRIC ಯ ಅವಶ್ಯಕತೆಯೇ ಇಲ್ಲ

NPR ಮತ್ತು NRIC ಚಟುವಟಿಕೆಗಳು 1955 ರ ಪೌರತ್ವ ಕಾಯಿದೆಗೆ (“1955 ಕಾಯಿದೆ”) 2003 ರಲ್ಲಿ ಮಾಡಲಾದ ತಿದ್ದುಪಡಿ ಹಾಗೂ ಪೌರರ ದಾಖಲಾತಿ ಮತ್ತು ರಾಷ್ಟ್ರೀಯ ಗುರುತು ಚೀಟಿ ನೀಡಿಕೆಗೆ ಸಂಬಂಧಪಟ್ಟಂತೆ ಅಂದಿನ ಎನ್‌ಡಿಎ ಸರಕಾರ ರೂಪಿಸಿದ ಪೌರತ್ವದ ನಿಯಮಗಳು (“2003 ನಿಯಮಗಳು”) ಎಂಬ ವಿಷಯದಿಂದ ಹೊಮ್ಮಿವೆ. ಹತ್ತು ವರುಷಗಳಿಗೊಮ್ಮೆ ನಡೆಯುವ (ಹಾಗೂ 2021 ರಲ್ಲಿ ನಡೆಯಬೇಕಾದ) ಭಾರತೀಯ ಜನಗಣತಿಗೂ NPR ಗೂ ಯಾವುದೇ ಸಂಬಂಧವಿಲ್ಲ. ಜನಗಣತಿ ಭಾರತದಲ್ಲಿ ವಾಸಿಸುತ್ತಿರುವ ಎಲ್ಲರ (ಹೆಸರು ಸೂಚಿಸದೇ) ಪಟ್ಟಿ ಮಾಡುತ್ತದೆ.  NPR ಕಳೆದ ಆರು ತಿಂಗಳಿಂದ ಭಾರತದಲ್ಲಿ ವಾಸಿಸುತ್ತಿರುವ ಎಲ್ಲರ — ಅವರ ರಾಷ್ಟ್ರೀಯತೆ ಯಾವುದೇ ಇದ್ದರೂ ಸಹ — ಹೆಸರನ್ನು ಪಟ್ಟಿ ಮಾಡುತ್ತದೆ. ಈ ಜನಸಂಖ್ಯಾ ದಾಖಲಾತಿ ಹಳ್ಳಿ, ಪಟ್ಟಣ, ವಾರ್ಡು, ಅಥವಾ ಯಾವುದೇ ನಿರ್ದಿಷ್ಟವಾಗಿ ಗೆರೆ ಎಳೆದ ಪ್ರದೇಶದೊಳಗೆ ವಾಸಿಸುತ್ತಿರುವವರನ್ನು ಪಟ್ಟಿ ಮಾಡುತ್ತದೆ.

ಪರಿಣಾಮದಲ್ಲಿ NRIC  ಇಡೀ ದೇಶದ ಜನಸಂಖ್ಯಾ ದಾಖಲಾತಿಯ ಉಪಗಣವಾಗಿ ಒದಗಿ ಬರುತ್ತದೆ. 2003 ನಿಯಮಗಳು ರಾಷ್ಟ್ರೀಯ ಜನಸಂಖ್ಯಾ ದಾಖಲಾತಿಗೆ ಸ್ಥಳೀಯ ಜನಸಂಖ್ಯಾ ದಾಖಲಾತಿ ಅಧಿಕಾರಿ (ಸಾಮಾನ್ಯವಾಗಿ ತಾಲೂಕು ಅಥವಾ ಪಟ್ಟಣದ ವ್ಯಾಪ್ತಿಯ) ಮಾಹಿತಿಯನ್ನು ಹೋಲಿಸಿ, ತಾಳೆ ಹಾಕಿ  ಸಂದೇಹಾತ್ಮಕ ಕೇಸುಗಳನ್ನು ಒಂದು ಕಡೆ ಹಾಕಿ ಮುಂದಿನ ತಪಾಸಣೆ ನಡೆಸುತ್ತಾನೆ/ಳೆ. ನಂತರ ಪೌರತ್ವವನ್ನು ಸಾಬೀತುಪಡಿಸಲು ಕೇಳಲಾಗಿರುವ  ಕಾಗದಪತ್ರಗಳನ್ನು ಒದಗಿಸಲಾಗದವರ ಹೆಸರುಗಳನ್ನು ಒತ್ತಟ್ಟಿಗಿಟ್ಟು ಸ್ಥಳೀಯ ಜನಸಂಖ್ಯಾ ದಾಖಲಾತಿಯ ಕರಡನ್ನು ತಯಾರಿಸಿ ನೀಡಲಾಗುತ್ತದೆ.

ಈ ಹಂತದಲ್ಲಿ ಅಸ್ಸಾಮಿನ ಉದಾಹರಣೆ ನಮ್ಮ ಕಣ್ಣೆದುರಿಗೆ ಬರುತ್ತದೆ. ಯಾರು ಯಾವುದೇ ಧರ್ಮವನ್ನು ಪಾಲಿಸಲಿ, ಪ್ರಶ್ನೆ ಅದಲ್ಲ. ಆದರೆ ಪೌರತ್ವವನ್ನು ಸಾಬೀತುಪಡಿಸಲು ತೋರಿಸಬೇಕಾದ ಕಾಗದಪತ್ರಗಳಿವೆಯಲ್ಲ, ಅದು ಆತಂಕಕ್ಕೆ ಎಡೆ ಮಾಡಿಕೊಡಬಲ್ಲದು. NPR 2020 ಮಾತ್ರ NPR 2019 ತರಹದ್ದಲ್ಲ. ಅದು ಬರೀ ನಿಮ್ಮ ತಂದೆತಾಯಿಯರ ಹೆಸರನ್ನು ಮಾತ್ರ ಕೇಳುವುದಿಲ್ಲ, ಬದಲಿಗೆ ಅವರು ಹುಟ್ಟಿದ ದಿನಾಂಕ ಮತ್ತು ಸ್ಥಳದ ದಾಖಲೆಗಳನ್ನೂ ಕೇಳುತ್ತದೆ. ತಂದೆತಾಯಿಯ ಈ ದಾಖಲೆಗಳು ಮತ್ತು ತನ್ನದೇ ದಾಖಲೆಗಳನ್ನು ಒದಗಿಸಲಾಗದ ವ್ಯಕ್ತಿಯನ್ನು ‘ಸಂದೇಹಾಸ್ಪದ ಪೌರ’ ನೆಂದು/ಳೆಂದು ವರ್ಗೀಕರಿಸಲಾಗುತ್ತದೆ.

1955 ರ ಕಾಯಿದೆಗೆ (ಭಾಗ 3 (b), 3 (c), ಮತ್ತು 14 A) ಗೆ 2003 ರಲ್ಲಿ ತಂದ ತಿದ್ದುಪಡಿಗಳು ಮತ್ತು ತದನಂತರದ 2003 ರ ನಿಯಮಗಳು ‘ಅಕ್ರಮ’ ವಲಸಿಗರ ಬಗ್ಗೆ, ಯಾವುದೇ ಆಧಾರವಿಲ್ಲದಿದ್ದರೂ ಸಹ, ಗೀಳು ಎನಿಸುವಷ್ಟು ಮಟ್ಟಿಗಿನ ಸಂಶಯವನ್ನು ಹೊಂದಿರುವುದು ಕಾಣುತ್ತದೆ. ಅಂಕಿ ಅಂಶಗಳನ್ನು ಆಧರಿಸಿಯೇ ಹೇಳುವುದಾದರೆ ಕಳೆದ ಏಳು ದಶಕಗಳಲ್ಲಿ ಜನಗಣತಿಯಲ್ಲಿ ಗಮನಾರ್ಹ ಸ್ಥಿತ್ಯಂತರಗಳೇನೂ ಇಲ್ಲ. ಹಾಗೇನಾದರೂ ಕಂಡುಬಂದರೂ ಸಹ ಅದು ಕೆಲ ಮಟ್ಟಿಗೆ ನಮ್ಮ ನೆರೆಹೊರೆಯ ದೇಶಗಳ ಹತ್ತಿರವಿರುವ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಮಾತ್ರ. ಹಾಗಿದ್ದಲ್ಲಿ ಇಡೀ ದೇಶದಲ್ಲಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುತ್ತೇವೆಂದು ಹೊರಟಿರುವ NRIC ಉದ್ದೇಶವಾದರೂ ಏನು ಎಂಬ ಗುಮಾನಿಯಂತೂ ಉಳಿಯುತ್ತದೆ.

ಒಬ್ಬ ವ್ಯಕ್ತಿಯನ್ನು ಭಾರತೀಯ ಪೌರ ಅಲ್ಲವೆ ಹೌದೆ ಎಂದು ನಿರ್ಧರಿಸುವ ಅಪಾರ ಶಕ್ತಿಯನ್ನು ಸ್ಥಳೀಯ ದಾಖಲಾತಿ ಅಧಿಕಾರಷಾಹಿಗೆ ವಹಿಸಿಕೊಡುವುದರ ಬಗ್ಗೆ ನಮಗೆ ಅಪಾರ ಆತಂಕವಿದೆ. ಅದರಲ್ಲೂ ಸಾಕಷ್ಟು ಕಿರಿಯ ಮಟ್ಟದ ಅಧಿಕಾರಿಷಾಹಿ ವ್ಯವಸ್ಥೆ ಅದನ್ನು ಹಲವಾರು ಸ್ಥಳೀಯ ರಾಜಕೀಯ ಒತ್ತಡಗಳಿಗೆ ಮಣಿದೋ ಅಥವಾ ಇನ್ಯಾವುದೋ ರಾಜಕೀಯ ದುರುದ್ದೇಶಗಳ ಸಲುವಾಗಿಯೋ ಯಾವುದೇ ಅಂಕೆಯಿಲ್ಲದ ತಾರತಮ್ಯಕ್ಕೆ ಒಳಪಡಿಸಬಲ್ಲದು. ಜೊತೆಗೆ ಈ ಅಧಿಕಾರ ಹುಟ್ಟುಹಾಕಬಲ್ಲ ಭ್ರಷ್ಟಾಚಾರಕ್ಕಂತೂ ಕೊನೆಯೇ ಇರುವುದಿಲ್ಲ. ಅಲ್ಲದೇ, ಸ್ಥಳೀಯ ಪೌರ ದಾಖಲಾತಿ ಕರಡಿಗೆ ಯಾರು ಬೇಕಾದರೂ ಅಭ್ಯಂತರಗಳನ್ನು ಎತ್ತುವ ಸವಲತ್ತು ಬೇರೆ. ಅಸ್ಸಾಮಿನ NRC ಪ್ರಯೋಗ ಅಂತಹ ಬೃಹತ್ ಪ್ರಮಾಣದ ಕಸರತ್ತಿನ ಅಪಾಯಗಳು ಏನು ಎನ್ನುವುದನ್ನು ಸ್ಪಷ್ಟಪಡಿಸಿದೆ.

ಲಕ್ಷಾಂತರ ಮಂದಿ ತಮ್ಮ ಬದುಕಿನ ಉಳಿತಾಯವೆಲ್ಲವನ್ನೂ ಖರ್ಚು ಮಾಡಿ ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಬೇಕಾದ ದಾಖಲೆಗಳನ್ನು ದೊರಕಿಸಿಕೊಳ್ಳಲು ಹೆಣಗುತ್ತಿದ್ದಾರೆ. ಭಾರತದ ಹಲವಾರು ಭಾಗಗಳಲ್ಲಿ ಆಗಲೇ ಜನ ತಮ್ಮ ಹುಟ್ಟಿನ ದಾಖಲೆಗಳನ್ನು ಪಡೆದುಕೊಳ್ಳಲು ಧಾವಿಸುತ್ತಿದ್ದಾರೆ ಎಂಬ ಆತಂಕಕಾರಿ ವರದಿಗಳೂ ಸಹ ಬರಹತ್ತಿವೆ. ಹುಟ್ಟಿನ ದಾಖಲೆಗಳನ್ನು ಜೋಪಾನವಾಗಿ ಇಡುವ ವ್ಯವಸ್ಥೆಯೇ ಇಲ್ಲದ ದೇಶದಲ್ಲಿ ಅಥವಾ ದಾಖಲೆಗಳೇ ಸಿಗದ ನಮ್ಮ ದೇಶದಲ್ಲಂತೂ ಸ್ಥಿತಿ ಇನ್ನಷ್ಟು ಶೋಚನೀಯವಾಗಿರುತ್ತದೆ. ಬೃಹತ್ ಪ್ರಮಾಣದ ಸಮೀಕ್ಷಣೆಗಳಲ್ಲಂತೂ ಸೇರ್ಪಡೆ ಮತ್ತು  ಬಿಟ್ಟುಹೋಗುವಿಕೆಗೆ ಸಂಬಂಧಪಟ್ಟಂತೆ ಹಲವಾರು ತಪ್ಪುಗಳು ನಡೆಯುವ ಸಾಧ್ಯತೆಗಳೇ ಹೆಚ್ಚು.

ಜಾತಿ ಆಧಾರಿತ ಆರ್ಥಿಕ-ಸಾಮಾಜಿಕ ಸ್ಥಿತಿ ಗಣನೆ ಮತ್ತು ಬಡತನದ ರೇಖೆಯಿಂದ ಕೆಳಗಿರುವ ಜನರ ಗಣನೆ ಅಂತಹ ಉದಾಹರಣೆಗಳನ್ನು ನೋಡಬಹುದು. ಇತ್ತೀಚೆಗೆ ಪೂರ್ಣವಾದ ಅಸ್ಸಾಮಿನ NRC ದಾಖಲಾತಿಯನ್ನು ಗಮನಿಸಿದರೆ ಅಗಾಧ ಪ್ರಮಾಣದ ತಪ್ಪುಗಳನ್ನೂ ಅದರಿಂದ ಉಂಟಾಗಿರುವ ಅತೃಪ್ತಿ ಆತಂಕಗಳು ಕಣ್ಣಿಗೆ ಹೊಡೆಯುತ್ತವೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯ ಸರಕಾರ ತಾನೇ ನಡೆಸಿದ ಕಾರ್ಯಾಚರಣೆಯ ಮೌಲ್ಯವನ್ನು ಅಲ್ಲಗಳೆಯುವಷ್ಟು ಸ್ಥಿತಿ ಹಾಸ್ಪಾಸ್ಪದವಾಗಿದೆ.

CAA ನಲ್ಲಿನ ಕರಾರುಗಳ ಜೊತೆಗೆ ಈಗ್ಗೆ ಎರಡೂ ವರ್ಷಗಳಿಂದ ಉಚ್ಚ ಮಟ್ಟದ ಸರಕಾರಿ ಪ್ರತಿನಿಧಿಗಳು ಮಾಡುತ್ತಿರುವ ರೋಷಾವೇಷದ ಹೇಳಿಕೆಗಳನ್ನು ಗಮನಿಸಿದರೆ ಭಾರತೀಯ ಮುಸ್ಲಿಮ್ ಸಮುದಾಯ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಆತಂಕಕ್ಕೆ ಗುರಿಯಾಗುತ್ತಿರುವುದು ಸಕಾರಣವಾಗಿಯೇ ಇದೆ. ಮುಸ್ಲಿಮರು ಈಗಾಗಲೇ ಲವ್ ಜಿಹಾದ್, ದನ ಸಾಗಾಣಿಕೆ, ದನದ ಮಾಂಸ ಸೇವನೆ ಇತ್ಯಾದಿ ಆರೋಪಗಳ ನೆಪದಲ್ಲಿ ತಾರತಮ್ಯ ಮತ್ತು ಹಲ್ಲೆಗೆ ತುತ್ತಾಗುತ್ತಲೇ ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜ್ಯ ಸರಕಾರದ ಪೋಲೀಸರನ್ನು ಕೇಂದ್ರ ಸರಕಾರ ನಿಯಂತ್ರಿಸಬಲ್ಲ ರಾಜ್ಯಗಳಲ್ಲಿ ಮಾತ್ರ ಮುಸ್ಲಿಮರ ಮೇಲಿನ ಹಲ್ಲೆ ದೌರ್ಜನ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ NPR-NRIC  ಕಸರತ್ತು ನಿರ್ದಿಷ್ಟವಾಗಿ ಕೆಲವು ಸಮುದಾಯಗಳನ್ನು ಮತ್ತು ವ್ಯಕ್ತಿಗಳ ವಿರುದ್ಧವೇ ಉದ್ದೇಶಿಸಿ ಮಾಡಿರುವ ಯೋಜನೆ ಎಂಬ ಸಂದೇಹಕ್ಕೆ ಸಾಕಷ್ಟು ಪುರಾವೆಯನ್ನು ಒದಗಿಸಿದೆ.

ಈ ಕಸರತ್ತು ಹುಟ್ಟುಹಾಕುವ ಅಪಾರ ಅನನುಕೂಲದ ಜೊತೆಗೆ ಈ ದೇಶದ ಸಾಧಾರಣ ಪ್ರಜೆಯೊಬ್ಬ ಅದರ ಅನವಶ್ಯಕ ಮತ್ತು ಅಗಾಧ ಖರ್ಚನ್ನೂ ಸಹ ಭರಿಸಬೇಕಾಗುತ್ತದೆ.  ಜೊತೆಗೆ ಅವರಿಗೆ ಬೇಕಾಗುವ ಹೆಸರು, ವಿಳಾಸ, ಹುಟ್ಟಿನ ದಿನಾಂಕ, ತಂದೆ/ಗಂಡನ ಹೆಸರು, ಲಿಂಗ ಇತ್ಯಾದಿ ಮಾಹಿತಿಯನ್ನು ಈಗಾಗಲೇ ಆಧಾರ್ ಕಾರ್ಡಿನ ಮೂಲಕ ಸಂಗ್ರಹಿಸಲಾಗಿದೆಯಲ್ಲ? ಈ ದೇಶದ ಹೆಚ್ಚುಕಮ್ಮಿ ಎಲ್ಲಾ ಪ್ರಜೆಗಳು ಈಗಾಗಲೇ ಆಧಾರ್ ವ್ಯವಸ್ಥೆಯಡಿ ಬಂದಿದ್ದಾರೆ. ಆ ಮಾಹಿತಿಗಿಂತಲೂ ಹೆಚ್ಚಾಗಿ ಇನ್ನಷ್ಟು ಮಾಹಿತಿ ಬೇಕಿರುವುದರ ಉದ್ದೇಶವಾದರೂ ಏನು? ಅಲ್ಲದೇ ‘ಸಂದೇಹಾಸ್ಪದ ಪೌರತ್ವ’ ದ ಅಡಿ ಬರುವ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ತನ್ನ ಪೌರತ್ವವನ್ನು ಸಾಬೀತುಪಡಿಸಲು ಕೊನೆಯೇ ಇಲ್ಲದ ಮತ್ತು ದುಬಾರಿ ಅಧಿಕಾರಷಾಹಿ ಮುಷ್ಟಿಯ ಅಡಿ ಸಿಕ್ಕು ಹೆಣಗುತ್ತಲೇ ಇರಬೇಕಾದ ದೌರ್ಜನ್ಯಕ್ಕೆ ಬಲಿಯಾಗಬೇಕಾಗುತ್ತದೆ.

ನಾಗರಿಕ ಸೇವೆಯಲ್ಲಿ ಉನ್ನತ ಹುದ್ದೆಗಳನ್ನು ಹಲವಾರು ವರ್ಷಗಳ ಕಾಲ ನಿರ್ವಹಿಸಿರುವ ನಮ್ಮ ತಂಡ NPR ಮತ್ತು NRIC ಗಳು ಅನವಶ್ಯಕ ಮತ್ತು ಆಳವಾಗಿ ನಿರರ್ಥಕವಾದ ಕಸರತ್ತುಗಳು ಎನ್ನುವ ಧೃಡ ನಿರ್ಧಾರಕ್ಕೆ ಬಂದಿವೆ. ಅದು ಸಾರ್ವಜನಿಕ ಹಣವನ್ನು ಅಪಾರವಾಗಿ ಪೋಲು ಮಾಡುವುದಷ್ಟೇ ಅಲ್ಲ, ಈ ದೇಶದ ಪ್ರಜೆಗಳಿಗೆ ಅನವಶ್ಯಕವಾಗಿ ಗೋಳು ಹುಯ್ದುಕೊಳ್ಳುವ ಕಸರತ್ತುಗಳೂ ಹೌದು. ಹಲವಾರು ಮೂಲಭೂತ ಬದುಕಿನ ಸಮಸ್ಯೆಗಳಿಂದ ನರಳುತ್ತಿರುವ ಈ ದೇಶದಲ್ಲಿ ಅದೇ ಹಣವನ್ನು ಬಡವರ ಮತ್ತು ನಿರ್ಬಲರ ಉದ್ಧಾರಕ್ಕೆ ಖರ್ಚು ಮಾಡಬಹುದಲ್ಲ? ಅಷ್ಟೇ ಅಲ್ಲ, ಈ ಕಸರತ್ತುಗಳು ಕೇಳುತ್ತಿರುವ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಚುನಾವಣಾ ಚೀಟಿ ಇತ್ಯಾದಿ ಮಾಹಿತಿಗಳು ಸಹ ಪ್ರಜೆಯ ಖಾಸಗಿತನದ ಹಕ್ಕನ್ನು ಕಸಿದುಕೊಳ್ಳುವ ಯತ್ನವೂ ಆಗಿರುತ್ತದೆ. ಜೊತೆಗೆ ಆ ಮಾಹಿತಿಯ ದುರ್ಬಳಕೆಯ ಅಪಾಯವನ್ನೂ ಹೊಂದಿರುತ್ತದೆ.

ದೇಶಾದಾದ್ಯಂತ ವಿದೇಶೀ ನ್ಯಾಯ ಮಂಡಳಿ ಮತ್ತು ಬಂಧನ ಶಿಬಿರಗಳನ್ನು ಕಟ್ಟಲು ಅನುಮತಿ ಕೊಟ್ಟಿದ್ದು ಏಕೆ?

ಮೇ 30 ರಂದು ಹೊರಡಿಸಿದ ವಿದೇಶಿ (ನ್ಯಾಯಮಂಡಳಿ) ತಿದ್ದುಪಡಿ ಕಟ್ಟಳೆ, 2019 ಈಗ ಜಿಲ್ಲಾ ನ್ಯಾಯಧೀಶರ ಅಣತಿಯ ಮೇರೆಗೆ ವಿದೇಶಿ ನ್ಯಾಯಮಂಡಳಿಯನ್ನು ಸ್ಥಾಪಿಸಬಹುದು ಎಂಬ ಭಯವನ್ನು ಹುಟ್ಟುಹಾಕಿದೆ. ಅದು ದೇಶದ ಉದ್ದಗಲಕ್ಕೆ ‘ಅಕ್ರಮ ವಲಸಿಗ’ ರನ್ನು ಪತ್ತೆ ಹಚ್ಚಲು ಬೇಕಾದ ಪೂರ್ವಸಿದ್ಧತೆಯಾಗಿ ಒದಗಿ ಬರುತ್ತದೆ. ಕೇಂದ್ರ ಸರಕಾರ ತನಗೆ ಆ ರೀತಿಯ ಉದ್ದೇಶವಿಲ್ಲವೆಂದು ಹೇಳಿದರೂ ಸಹ ಅಸ್ಸಾಮ್ ಮತ್ತು ಬೇರೆ ಕಡೆ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಹಾಗೆ ಸಾರಾಸಗಟಾಗಿ ವಿದೇಶಿ ನ್ಯಾಯಮಂಡಳಿಗಳ ಸ್ಥಾಪನೆಗೆ ಅಧಿಕಾರವನ್ನು ನೀಡುವುದು ರಾಜಕೀಯ ಅವಿವೇಕದ ಪರಮಾವಧಿಯಾಗಿ ತೋರುತ್ತದೆ.

ನೇರವಾದ ಭಾಷೆಯಲ್ಲಿ ಹೇಳಬೇಕೆಂದರೆ ವಿದೇಶಿ ನ್ಯಾಯಮಂಡಳಿಗಳ ಅಡಿ ಅಸ್ಸಾಮಿನಲ್ಲಿ ಹೆಣಗಿದವರ ಅನುಭವ ಒಂದು ಘೋರವೇ ಹೌದು.  ಪೌರತ್ವವನ್ನು ಸಾಬೀತುಪಡಿಸಲು ಬೇಕಾದ ದಾಖಲೆಗಳನ್ನು ಒದಗಿಸುವ ಹರಸಾಹಸದ ನಂತರ ‘ಸಂದೇಹಾಸ್ಪದ ಪೌರತ್ವ’ ದ ಅಡಿಯಲ್ಲಿ ಬಂದವರೂ ಸಹ ಈ ನ್ಯಾಯಮಂಡಳಿಯ ತಾರತಮ್ಯದಿಂದ ಕೂಡಿದ ವಿಚಾರಣೆಯ ಅಡಿ ಸಿಕ್ಕಿ ನರಳಿದ್ದಿದೆ. ಇಷ್ಟಕ್ಕೂ ಈ ನ್ಯಾಯಮಂಡಳಿಯ ರಚನೆ ಮತ್ತು ಅದು ಕಾರ್ಯವನ್ನು ನಿರ್ವಹಿಸುವ ರೀತಿಗಳಲ್ಲೇ ಹಲವಾರು ಗೊಂದಲಗಳಿವೆ. ಪರಿಣಾಮವಾಗಿ ಹಲವಾರು ಪ್ರಜೆಗಳು ತಮ್ಮ ಪೌರತ್ವವನ್ನು ಸಾಬೀತುಪಡಿಸುವ ಹೆಣಗಾಟದಲ್ಲಿ ಜೀವವನ್ನು ಕಳೆದುಕೊಂಡಿದ್ದಾರೆ ಅಥವಾ ಬಂಧನ ಶಿಬಿರಗಳಲ್ಲಿ ಸಿಕ್ಕು ಮಾನಹಾನಿ ಮತ್ತು ಯಾತನೆಯನ್ನು ಅನುಭವಿಸುತ್ತಿದ್ದಾರೆ.

ಎಲ್ಲಾ ರಾಜ್ಯ ಸರಕಾರಗಳಿಗೆ ಬಂಧನ ಶಿಬಿರಗಳನ್ನು ಸ್ಥಾಪಿಸುವ ಅಪ್ಪಣೆಯನ್ನು ಕೇಂದ್ರ ಸರಕಾರ ನೀಡಿರುವುದರ ಬಗ್ಗೆ ಬಂದಿರುವ ಮಾಧ್ಯಮ ವರದಿಗಳನ್ನು ಕೇಂದ್ರ ಸರಕಾರ ಅಲ್ಲಗಳೆದಿಲ್ಲ. ಅಸ್ಸಾಮಿನ ಗೊಅಲ್ಪಾರದಿಂದ ಹಿಡಿದು ಕರ್ನಾಟಕದ ನೆಲಮಂಗಲದ ತನಕವೂ ನಡೆಯುತ್ತಿರುವ ಬಂಧನ ಶಿಬಿರಗಳ ನಿರ್ಮಾಣ ಕಾರ್ಯ ನಡೆಯುತ್ತಿರುವ ಬಗ್ಗೆ ಮತ್ತು ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಉದ್ದೇಶಿತ ಬಂಧನ ಶಿಬಿರದ ಬಗ್ಗೆ ಮಾಧ್ಯಮಗಳು ಪುರಾವೆ ಸಮೇತ ದಾಖಲೆಗಳನ್ನು ನೀಡಿರುವಾಗ ಪ್ರಧಾನ ಮಂತ್ರಿಗಳು ಇತ್ತೀಚೆಗೆ ಅಂತಹ ಬಂಧನ ಶಿಬಿರಗಳು ಅಸ್ತಿತ್ವದಲ್ಲೇ ಇಲ್ಲ ಎಂದು ಹೇಳಿರುವುದು ನಮಗೆ ಅಚ್ಚರಿಯನ್ನು ಮೂಡಿಸಿದೆ. ದೇಶದುದ್ದಕ್ಕೂ ಈ ಪ್ರಮಾಣದ ಬಂಧನ ಶಿಬಿರಗಳ ನಿರ್ಮಾಣದ ಅಗತ್ಯವಿರುವಷ್ಟು ‘ಅಕ್ರಮ ವಲಸಿಗ’ ಸಮಸ್ಯೆ ದೊಡ್ಡದೆ? ಭಾರತ ಸರಕಾರ ಇಲ್ಲಿಯ ತನಕ ಅದರ ಬಗ್ಗೆ ಅಂಕಿ ಅಂಶಗಳನ್ನು ಯಾಕೆ ನೀಡಿಲ್ಲ?

CAA ಗೆ ಸಾಂವಿಧಾನಿಕ ಮತ್ತು ನೈತಿಕ ಸಮರ್ಥನೆಯೇ ಇಲ್ಲ

ಪೌರತ್ವ ತಿದ್ದುಪಡಿ ಕಾಯಿದೆಗೆ ಯಾವುದೇ ರೀತಿಯ ಸಾಂವಿಧಾನಿಕ ಸಮರ್ಥನೆ ಇಲ್ಲ ಎನ್ನುವುದು ನಮ್ಮ ಧೃಡವಾದ ನಿಲುವು. ದೇಶದಲ್ಲಿನ ಈ ವಿದ್ಯಮಾನ ನಮ್ಮಲ್ಲಿ ಆಳವಾದ ಚಿಂತೆ ಕಳವಳವನ್ನು ಮೂಡಿಸಿದೆ. ಅದಕ್ಕೆ ನೈತಿಕವಾಗಿ ಸಹ ಯಾವ ಸಮರ್ಥನೆಯೂ ಇಲ್ಲ ಎನ್ನುವುದನ್ನು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಭಾರತದ ದೊಡ್ಡ ಭಾಗವಾಗಿರುವ ಮುಸ್ಲಿಮ್ ಸಮುದಾಯವನ್ನು ತನ್ನ ಪರಿಧಿಯಿಂದ ಉದ್ದೇಶಪೂರ್ವಕವಾಗಿ ಹೊರಗಿಡುವ ಈ ಕಾನೂನು ನಿಶ್ಚಿತವಾಗಿ ಚಿಂತೆಕಳವಳವನ್ನು  ಮೂಡಿಸಬಲ್ಲದು.

ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಕಿರುಕುಳಕ್ಕೆ ತುತ್ತಾಗಿರುವ ಯಾವುದೇ ಸಮುದಾಯದ ನೋವಿಗೆ ಸ್ಪಂದಿಸುವ ಕಟ್ಟಳೆ ಕಾಯಿದೆಗಳು ಸ್ಥಳೀಯ ಭಯಕಳವಳಗಳನ್ನು ದೂರ ಮಾಡುವುದಷ್ಟೇ ಅಲ್ಲ, ಅಂತರಾಷ್ಟ್ರೀಯ ಸಮುದಾಯದ ಪ್ರಶಂಸೆಗೆ ಸಹ ಪಾತ್ರವಾಗಿರುತ್ತಿದ್ದವು. ಆದರೆ CAA ದ ಸಧ್ಯದ ರೂಪದಲ್ಲಿ ‘ಕಿರುಕುಳಕ್ಕೆ ತುತ್ತಾಗಿರುವ’ (persecuted) ಎಂಬ ಪದವೇ ಇಲ್ಲ. ಬಹುಶಃ ಅಂತಹ ಪದ ಬಳಕೆ ಪ್ರಸಕ್ತ ಅಫ್ಗಾನಿಸ್ತಾನ್ ಮತ್ತು ಬಾಂಗ್ಲಾದೇಶದ ಸಂದರ್ಭದಲ್ಲಿ ಭಾರತದ ಸಂಬಂಧವನ್ನು ಹದಗೆಡಿಸಬಹುದು ಎಂಬ ಯೋಚನೆಯಿರಬಹುದು.

ಭಾರತದಲ್ಲಿ ಹನ್ನೊಂದು ವರ್ಷಗಳ ಮಟ್ಟಿಗೆ ವಾಸವಾಗಿದ್ದಲ್ಲಿ ಯಾವುದೇ ವಲಸಿಗ/ಳಿಗೆ ಪೌರತ್ವವನ್ನು ನೀಡುವ ಅಧಿಕಾರ ಭಾರತ ಸರಕಾರಕ್ಕಿರುತ್ತದೆ. ಹೀಗಿದ್ದಲ್ಲಿ 2008 ರ ಕೊನೆಯ ತನಕ ಇದ್ದ ಎಲ್ಲಾ ಪೌರತ್ವಕ್ಕೆ ಸಂಬಂಧಪ್ಪಟ್ಟ ಕೇಸುಗಳನ್ನು ಸರಕಾರ ವಿಲೇವಾರಿ ಮಾಡಿದೆಯೆ ಎಂಬ ಅಂಶ ಗಮನಿಸಲು ಯೋಗ್ಯವಾದದ್ದು. 1920 ರ ಪಾಸ್ ಪೋರ್ಟ್ ಕಾಯಿದೆ ಮತ್ತು  1946 ರ ವಿದೇಶಿಯರು ಕಾಯಿದೆ ಪ್ರಕಾರ ಪೌರತ್ವವನ್ನು ನೀಡುವ ಅಧಿಕಾರ ಸಂಪೂರ್ಣವಾಗಿ ಭಾರತದ ಸರಕಾರದ ಸ್ವಾಮ್ಯದಲ್ಲಿದ್ದು ವ್ಯಕ್ತಿಗಳನ್ನು ಮತ್ತು ತಂಡಗಳನ್ನು ಸಂಪೂರ್ಣವಾಗಿ ತನ್ನ ಪರಿಧಿಯಿಂದ ಆಚೆ ಇಡುವ ಅಧಿಕಾರವಿರುವಾಗ ಪ್ರತಿಯೊಂದು ವ್ಯಕ್ತಿ ಅಥವಾ ತಂಡದ ಕೇಸನ್ನು ಪ್ರತ್ಯೇಕವಾಗಿ ನಿರ್ವಹಿಸುವ ಬದಲು ಇಡೀ ದೇಶಕ್ಕೇ ಅನ್ವಯಿಸುವ CAA, NPR, NRIC  ಅಂತಹ ಅನವಶ್ಯಕ ಕಸರತ್ತುಗಳ ಮೂಲಕ, ಕೆಲವು ದೇಶಗಳ ಕೆಲವು ಸಮುದಾಯಗಳ ಹೆಸರಿನಲ್ಲಿ ಇಡೀ ದೇಶವನ್ನು ವಿನಾ ಕಾರಣ ಗುರಿಪಡಿಸುವುದು ಸರಿಯೆ?

ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರದ ಮಂತ್ರಿಗಳು  NRIC  ಮತ್ತು CAA ಗೆ ತಳುಕು ಹಾಕಿ ದುಡುಕಿನ ಹೇಳಿಕೆಗಳನ್ನು ಕೊಟ್ಟಿರುವುದು ಪ್ರಜೆಗಳಲ್ಲಿ ಸರಕಾರದ ಉದ್ದೇಶಗಳ ಬಗೆಗೆ ಭಯ ಆತಂಕಗಳನ್ನು ಮೂಡಿಸಿವೆ. ದೆಹಲಿಯಲ್ಲಿ ಡಿಸೆಂಬರ್ 22 ರಂದು CAA ಮತ್ತು NRIC ಗೆ ಪರಸ್ಪರ ಸಂಬಂಧವಿಲ್ಲವೆಂಬ ಪ್ರಧಾನ ಮಂತ್ರಿಗಳ ಹೇಳಿಕೆ ಅವರದ್ದೇ ಗೃಹಮಂತ್ರಿ ಹಲವಾರು ವೇದಿಕೆಗಳಲ್ಲಿ ಎರಡಕ್ಕೂ ಪರಸ್ಪರ ಸಂಬಂಧವಿದೆ ಎಂದು ಘೋಷಿಸಿರುವ ಹೇಳಿಕೆಗಳಿಗೆ ವಿರೋಧವಾಗಿದೆ. ಈ ವಿರೋಧಾಭಾಸಗಳ ಗೊಂದಲದಲ್ಲಿ ಈ ದೇಶದ ಸಾಮಾನ್ಯ ಪ್ರಜೆಯೊಬ್ಬ/ಳು ಹಲವಾರು ಭಯ ಆತಂಕಗಳಿಗೆ ತುತ್ತಾಗಿರುವುದು ಸಹಜವೇ. ಅದರಲ್ಲೂ ಸರಕಾರ ಇದರ ಬಗ್ಗೆ ಸರಿಯಾದ ಸ್ಪಷ್ಟನೆ ನೀಡದೇ, ಅದರ ಬಗ್ಗೆ ಪರಸ್ಪರ ಮಾತುಕತೆ ಸಂಧಾನಗಳನ್ನೂ ನಡೆಸದೇ ಇರುವಾಗ ಪ್ರಜೆಗಳ ಕಳವಳ ದಟ್ಟವಾಗುತ್ತಾ ನಡೆದಿದೆ.

ದೇಶದ ಆರ್ಥಿಕ ಪರಿಸ್ಥಿತಿ  ವಿಷಮವಾಗಿರುವ ಈ ಸಮಯದಲ್ಲಿ ಅದರತ್ತ ಗಮನ ಹರಿಸುವುದನ್ನು ಬಿಟ್ಟು ಪೌರತ್ವ ಮತ್ತು ಸರಕಾರ ಬೀದಿಯಲ್ಲಿ ಸಂಘರ್ಷಣೆಗೆ ಒಳಗಾಗಬೇಕಾದ ಅನಿವಾರ್ಯವನ್ನು ಸೃಷ್ಟಿಸುವುದು ಸರ್ವಥಾ ಸಲ್ಲ. ಹಾಗೆಯೇ ರಾಜ್ಯ ಸರಕಾರಗಳು NRIC/NPR ಜಾರಿ ಮಾಡಲು ಸಿದ್ಧರಿಲ್ಲದಿದ್ದರೆ ರಾಜ್ಯ-ಕೇಂದ್ರದ ನಡುವಣ ಸಂಬಂಧದಲ್ಲಿ ಬಿಕ್ಕಟ್ಟು ತಲೆದೋರಬಲ್ಲದು. ಭಾರತದಂತಹ ಸಂಯುಕ್ತ ಗಣರಾಷ್ಟ್ರಕ್ಕೆ ಅಂತಹ ಪರಿಸ್ಥಿತಿ ಖಂಡಿತಾ ಒಳ್ಳೆಯದಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಭಾರತ ಅಂತರರಾಷ್ಟ್ರೀಯ ಸೌಹಾರ್ದವನ್ನು ಕಳೆದುಕೊಳ್ಳುವತ್ತ ಹೆಜ್ಜೆ ಹಾಕುತ್ತಿರುವುದರ ಜೊತೆಗೆ ಉಪಖಂಡದಲ್ಲಿ ತನ್ನ ನೆರೆಹೊರೆ ದೇಶಗಳ ಜೊತೆ ಸಾಮರಸ್ಯವನ್ನು ಕೆಡಿಸಿಕೊಂಡರೆ ರಾಷ್ಟ್ರೀಯ ಭದ್ರತೆಗೇ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ಪ್ರಗತಿಪರ ಪ್ರಜಾತಂತ್ರ ರಾಷ್ಟ್ರಕ್ಕೆ ಉದಾಹರಣೆಯಾಗಿ ನಿಂತು ಹಲವಾರು ರಾಷ್ಟ್ರಗಳಿಗೆ ನೈತಿಕ ನಾಯಕತ್ವ ಒದಗಿಸಿರುವ ಭಾರತದ ಸ್ಥಾನಮಾನಕ್ಕೂ ಇದರಿಂದ ಚ್ಯುತಿ ಬರುವ ಸಾಧ್ಯತೆ ಇದೆ.

ಆದ್ದರಿಂದ ಭಾರತ ಸರಕಾರ ತನ್ನ ಪ್ರಜೆಗಳ ಧ್ವನಿಗೆ ಸ್ಪಂದಿಸಿ ಈ ಕೆಳಗಿನ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನಮ್ಮ ಜೊತೆಗೆ ಭಾರತದ ಸಹಪ್ರಜೆಗಳೆಲ್ಲರೂ ಒತ್ತಾಯಿಸಬೇಕೆಂದು ಈ ಮೂಲಕ ಕೋರುತ್ತೇವೆ. ನಮ್ಮ ಹಕ್ಕೊತ್ತಾಯಗಳು ಇಂತಿವೆ:

1.  ರಾಷ್ಟ್ರೀಯ ಗುರುತಿನ ಚೀಟಿ ಮತ್ತು ಅದರ ಕಾರ್ಯವಿಧಾನಗಳಿಗೆ ಸಂಬಂಧಪಟ್ಟಂತೆ 1955 ರ ಪೌರತ್ವ ಕಾಯಿದೆಯ  14A ಮತ್ತು 18 (2) ಭಾಗಗಳನ್ನು ಮತ್ತು ಪೌರರ ದಾಖಲಾತಿ ಹಾಗೂ ರಾಷ್ಟ್ರೀಯ ಗುರುತಿನ ಚೀಟಿ ನೀಡಿಕೆಗೆ ಸಂಬಂಧಪಟ್ಟ 2003 ರ ಪೌರತ್ವ ನಿಯಮಗಳು ಇವೆರಡನ್ನೂ ಸಂಪೂರ್ಣವಾಗಿ ರದ್ದು ಮಾಡಬೇಕು.

2.  2019 ರ ವಿದೇಶೀಯರು (ನ್ಯಾಯಮಂಡಳಿಗಳು) ತಿದ್ದುಪಡಿ ಕಟ್ಟಳೆ  ಮತ್ತು ಬಂಧನ ಶಿಬಿರಗಳ ನಿರ್ಮಾಣಕ್ಕೆ ಸಂಬಂಧಪಟ್ಟ ಎಲ್ಲಾ ಆಜ್ಞೆಗಳನ್ನು ಹಿಂತೆಗೆದುಕೊಳ್ಳಬೇಕು.

3.  2019 ರ ಪೌರತ್ವ ತಿದ್ದುಪಡಿ ಕಾಯಿದೆ (CAA) ಅನ್ನು ರದ್ದು ಮಾಡಬೇಕು.

ಸತ್ಯಮೇವ ಜಯತೆ

ಸಂವಿಧಾನ ಮಾರ್ಗದರ್ಶನ ತಂಡ

(ಈ ಕೆಳಗಿನ 106 ಜನರ ಸಹಿಗಳನ್ನು ಒಳಗೊಂಡಿದೆ)

1.  ಅನಿತ ಅಗ್ನಿಹೋತ್ರಿ, ನಿವೃತ್ತ IAS, ಮಾಜಿ ಕಾರ್ಯದರ್ಶಿ, ಸಾಮಾಜಿಕ ನ್ಯಾಯ ಸಬಲೀಕರಣ ಇಲಾಖೆ, ಭಾರತ ಸರಕಾರ .

2.    ಸಲಾಹುದ್ದೀನ್ ಅಹಮದ್, ನಿವೃತ್ತ IAS, ಮಾಜಿ ಪ್ರಧಾನ ಕಾರ್ಯದರ್ಶಿ, ರಾಜಸ್ಥಾನ ಸರಕಾರ.

3.  ವಿ ಎಸ್ ಐಲಾವದಿ, ನಿವೃತ್ತ IAS, ಉಪಾಧ್ಯಕ್ಷರು, ದೆಹಲಿ ಅಭಿವೃದ್ಧಿ ಪ್ರಾಧಿಕಾರ.

4.  S. P. ಅಂಬ್ರೊಸ್, ನಿವೃತ್ತ IAS, ಮಾಜಿ ಹೆಚ್ಚುವರಿ ಕಾರ್ಯದರ್ಶಿ, ಹಡಗು ರವಾನೆ ಮತ್ತು ಸಾಗಾಣಿಕೆ ಸಚಿವಾಲಯ, ಭಾರತ ಸರಕಾರ.

5.   ಆನಂದ್ ಆರ್ನಿ, R&AW (ರಾಷ್ಟ್ರೀಯ ಬೇಹುಗಾರಿಕೆ ಸಂಸ್ಥೆ) ನಿವೃತ್ತ, ಮಾಜಿ ವಿಶೇಷ ಕಾರ್ಯದರ್ಶಿ, ಮಂತ್ರಿಮಂಡಲ ಕಾರ್ಯದರ್ಶಿ ಆಡಳಿತ ಇಲಾಖೆ, ಭಾರತ ಸರಕಾರ.

6.  ಮಹೀಂದರ್ಪಾಲ್ ಔಲಾಖ್, ನಿವೃತ್ತ IPS, ಮಾಜಿ ಪೋಲೀಸ್ ಮಹಾ ನಿರ್ದೇಶಕ (ಜೈಲುಗಳು), ಪಂಜಾಬ್ ಸರಕಾರ.

7.  N. ಬಾಲ ಬಾಸ್ಕರ್ಮ್ ನಿವೃತ್ತ IAS, ಮಾಜಿ ಪ್ರಧಾನ ಸಲಹೆಗಾರರು (ಹಣಕಾಸು), ವಿದೇಶಿ ವ್ಯವಹಾರ ಸಚಿವಾಲಯ, ಭಾರತ ಸರಕಾರ.

8.   ವಪ್ಪಾಲ ಬಾಲಚಂದ್ರನ್, ನಿವೃತ್ತ IPS, ಮಾಜಿ ವಿಶೇಷ ಕಾರ್ಯದರ್ಶಿ, ಮಂತ್ರಿಮಂಡಲ ಕಾರ್ಯದರ್ಶಿ ಆಡಳಿತ ಕಛೇರಿ, ಭಾರತ ಸರಕಾರ.

9.  ಗೋಪಾಲನ್ ಬಾಲಗೋಪಾಲ್, ನಿವೃತ್ತ IAS, ಮಾಜಿ ವಿಶೇಷ ಕಾರ್ಯದರ್ಶಿ, ಪಶ್ಚಿಮ ಬಂಗಾಳ ಸರಕಾರ.

10.          ಚಂದ್ರಶೇಖರ್ ಬಾಲಕೃಷ್ಣನ್, ನಿವೃತ್ತ IAS, ಮಾಜಿ ಕಾರ್ಯದರ್ಶಿ, ಕಲ್ಲಿದ್ದಲು, ಭಾರತ ಸರಕಾರ.

11.          ಶರದ್ ಬೇಹರ್, ನಿವೃತ್ತ IAS, ಮಾಜಿ ಪ್ರಧಾನ ಕಾರ್ಯದರ್ಶಿ, ಮಧ್ಯಪ್ರದೇಶ್ ಸರಕಾರ.

12.           ಮಧು ಭಾದುರಿ, ನಿವೃತ್ತ IFS, ಮಾಜಿ ಪೋರ್ಚುಗಲ್ ರಾಯಭಾರಿ.

13.          ಮೀರನ್ C. ಬೊರ್ವಾನ್ಕರ್, ನಿವೃತ್ತ IPS, ಮಾಜಿ ಪೊಲೀಸ್ ಮಹಾ ನಿರ್ದೇಶಕ, ಪೋಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಕಛೇರಿ, ಭಾರತ ಸರಕಾರ.

14.          ರವಿ ಬುಧಿರಾಜ, ನಿವೃತ್ತ IAS, ಮಾಜಿ ಅಧ್ಯಕ್ಷ, ಜವಹರಲಾಲ್ ನೆಹರೂ ಬಂದರು ಸಂಸ್ಥೆ, ಭಾರತ ಸರಕಾರ.

15.          ಸುಂದರ್ ಬುರ್ರ, ನಿವೃತ್ತ IAS, ಮಾಜಿ ಕಾರ್ಯದರ್ಶಿ, ಮಹಾರಾಷ್ಟ್ರ ಸರಕಾರ.

16.          R. ಚಂದ್ರಮೋಹನ್, ನಿವೃತ್ತ IAS, ಮಾಜಿ ಪ್ರಧಾನ ಕಾರ್ಯದರ್ಶಿ, ಸಾಗಾಣಿಗೆ ಮತ್ತು ನಗರ ಅಭಿವೃದ್ಧಿ, ದೆಹಲಿಯ NCT ಸರಕಾರ.

17.          K.M. ಚಂದ್ರಶೇಖರ್, ನಿವೃತ್ತ IAS, ಮಾಜಿ ಮಂತ್ರಿಮಂಡಲ ಕಾರ್ಯದರ್ಶಿ, ಭಾರತ ಸರಕಾರ.

18.          ರೇಚೆಲ್ ಚಟರ್ಜಿ, ನಿವೃತ್ತ IAS, ಮಾಜಿ ವಿಶೇಷ ಪ್ರಧಾನ ಕಾರ್ಯದರ್ಶಿ, ವ್ಯವಸಾಯ, ಆಂದ್ರಪ್ರದೇಶ್ ಸರಕಾರ.

19.          ಕಲ್ಯಾಣಿ ಚೌಧುರಿ, ನಿವೃತ್ತ IAS, ಮಾಜಿ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ, ಪಶ್ಚಿಮ ಬಂಗಾಳ ಸರಕಾರ.

20.          ಅನ್ನ ದಾನಿ, ನಿವೃತ್ತ IAS, ಮಾಜಿ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ, ಮಹಾರಾಷ್ತ್ರ ಸರಕಾರ.

21.          ಸುರ್ಜೀತ್ K ದಾಸ್, ನಿವೃತ್ತ IAS, ಮಾಜಿ ಪ್ರಧಾನ ಕಾರ್ಯದರ್ಶಿ, ಉತ್ತರಾಖಂಡ್ ಸರಕಾರ.

22.          ವಿಭಾ ಪುರಿ ದಾಸ್, ನಿವೃತ್ತ IAS, ಮಾಜಿ ಕಾರ್ಯದರ್ಶಿ, ಬುಡಕಟ್ಟು ವ್ಯವಹಾರಗಳ ಸಚಿವಾಲಯ, ಭಾರತ ಸರಕಾರ..

23.          P. R. ದಾಸ್ ಗುಪ್ತ, ನಿವೃತ್ತ IAS, ಮಾಜಿ ಅಧ್ಯಕ್ಷ, ಭಾರತೀಯ ಆಹಾರ ನಿಗಮ, ಭಾರತ ಸರಕಾರ.

24.          ನರೇಶ್ವರ್  ದಯಾಲ್, ನಿವೃತ್ತ IFS, ಮಾಜಿ ಕಾರ್ಯದರ್ಶಿ ವಿದೇಶಿ ವ್ಯವಹಾರಗಳ ಸಚಿವಾಲಯ ಮತ್ತು ಮಾಜಿ  ಹೈ ಕಮಿಷನರ್, ಇಂಗ್ಲೆಂಡ್.

25.          ಪ್ರದೀಪ್ K ದೇವ್, ನಿವೃತ್ತ IAS, ಮಾಜಿ ಕಾರ್ಯದರ್ಶಿ, ಕ್ರೀಡಾ ಇಲಾಖೆ, ಭಾರತ ಸರಕಾರ.

26.          ನಿತಿನ್ ದೇಸಾಯಿ, ನಿವೃತ್ತ IES, ಮಾಜಿ ಕಾರ್ಯದರ್ಶಿ ಮತ್ತು ಪ್ರಧಾನ ಸಲಹೆಗಾರರು, ಹಣಕಾಸು ಸಚಿವಾಲಯ, ಭಾರತ ಸರಕಾರ.

27.          ಕೇಶವ್ ದೇಸಿರಾಜು, ನಿವೃತ್ತ IAS, ಮಾಜಿ ಆರೋಗ್ಯ ಕಾರ್ಯದರ್ಶಿ, ಭಾರತ ಸರಕಾರ.

28.           M. G. ದೇವಸಹಾಯಂ, ನಿವೃತ್ತ IAS, ಮಾಜಿ ಕಾರ್ಯದರ್ಶಿ, ಹರಿಯಾಣ ಸರಕಾರ.

29.           ಸುಶೀಲ್ ದ್ಯುಬೆ, ನಿವೃತ್ತ IFS, ಮಾಜಿ ಸ್ವೀಡನ್ ರಾಯಭಾರಿ.

30.          K. P. ಫೇಬಿಯನ್, ನಿವೃತ್ತ IFS, ಮಾಜಿ ಇಟಲಿ ರಾಯಭಾರಿ.

31.          ಪ್ರಭು ಘಾಟೆ, ನಿವೃತ್ತ IAS, ಮಾಜಿ ಹೆಚ್ಚುವರಿ ಮಹಾ ನಿರ್ದೇಶಕರು, ಪ್ರವಾಸ ಇಲಾಖೆ, ಭಾರತ ಸರಕಾರ.

32.          ಅರೀಫ್ ಘೌರಿ, ನಿವೃತ್ತ IRS, ಮಾಜಿ ಆಡಳಿತ ಸಲಹಾಗಾರರು, ಯುನೈಟೆಡ್ ಕಿಂಗ್ಡಮ್ ಸರಕಾರ (ನಿಯೋಜನೆಯ ಮೇರೆಗೆ).

33.          ಗೌರಿಶಂಕರ್ ಘೋಷ್, ನಿವೃತ್ತ IAS, ಮಾಜಿ ನಿಯೋಗ ನಿರ್ದೇಶಕ, ರಾಷ್ಟ್ರೀಯ ಕುಡಿಯುವ ನೀರಿನ ನಿಯೋಗ, ಭಾರತ ಸರಕಾರ.

34.          S.K. ಗುಹಾ, ನಿವೃತ್ತ IAS, ಮಾಜಿ ಜಂಟಿ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭಾರತ ಸರಕಾರ.

35.          ಮೀನಾ ಗುಪ್ತಾ, ನಿವೃತ್ತ IAS, ಮಾಜಿ ಕಾರ್ಯದರ್ಶಿ, ಪರಿಸರ ಮತ್ತು ಕಾಡು ಸಚಿವಾಲಯ, ಭಾರತ ಸರಕಾರ.

36.          ರವಿ ವೀರ ಗುಪ್ತಾ, ನಿವೃತ್ತ IAS, ಮಾಜಿ ಉಪ ರಾಜ್ಯಪಾಲರು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ.

37.          ವಜಾಹತ್ ಹಬೀಬುಲ್ಲಾ, ನಿವೃತ್ತ IAS, ಮಾಜಿ ಕಾರ್ಯದರ್ಶಿ ಮತ್ತು ಪ್ರಧಾನ ಮಾಹಿತಿ ಆಯುಕ್ತರು, ಭಾರತ ಸರಕಾರ.

38.          ದೀಪಾ ಹರಿ, IRS, ರಾಜೀನಾಮೆ ಸಲ್ಲಿಸಿದ್ದಾರೆ.

39.          ಸಜ್ಜದ್ ಹಸನ್, ನಿವೃತ್ತ IAS, ಮಾಜಿ ಆಯುಕ್ತರು (ಯೋಜನೆ), ಮಣಿಪುರ್ ಸರಕಾರ.

40.          ಸಿರಾಜ್ ಹುಸೇನ್, ನಿವೃತ್ತ IAS, ಮಾಜಿ ಕಾರ್ಯದರ್ಶಿ, ವ್ಯವಸಾಯ ಇಲಾಖೆ, ಭಾರತ ಸರಕಾರ.

41.          ಕಮಲ್ ಜಸ್ವಾಲ್, ನಿವೃತ್ತ IAS, ಮಾಜಿ ಕಾರ್ಯದರ್ಶಿ, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರಕಾರ.

42.          ಜಗದೀಶ್ ಜೋಶಿ, ನಿವೃತ್ತ IAS, ಮಾಜಿ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ (ಯೋಜನೆ), ಮಹಾರಾಷ್ಟ್ರ ಸರಕಾರ.

43.          ನಜೀಬ್ ಯೂಂಗ್, ನಿವೃತ್ತ IAS, ಮಾಜಿ ಲೆಫ್ಟಿನೆಂಟ್ ರಾಜ್ಯಪಾಲರು, ದೆಹಲಿ.

44.          ರಾಹುಲ್ ಖುಲ್ಲಾರ್, ನಿವೃತ್ತ IAS, ಮಾಜಿ ಅಧ್ಯಕ್ಷ, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ.

45.          K. ಜಾನ್ ಕೋಶಿ, ನಿವೃತ್ತ IAS, ಮಾಜಿ ಪ್ರಧಾನ ಮಾಹಿತಿ ಆಯುಕ್ತರು, ಪಶ್ಚಿಮ ಬಂಗಾಳ ಸರಕಾರ.

46.          ಅಜಯ್ ಕುಮಾರ್, ನಿವೃತ್ತ IFoS, ಮಾಜಿ ನಿರ್ದೇಶಕರು, ವ್ಯವಸಾಯ ಸಚಿವಾಲಯ, ಭಾರತ ಸರಕಾರ.

47.          ಅರುಣ್ ಕುಮಾರ್, ನಿವೃತ್ತ IAS, ಮಾಜಿ ಅಧ್ಯಕ್ಷರು, ರಾಷ್ಟ್ರೀಯ ಔಷಧ ದರ ಪ್ರಾಧಿಕಾರ, ಭಾರತ ಸರಕಾರ.

48.          ಬ್ರಿಜೇಶ್ ಕುಮಾರ್, ನಿವೃತ್ತ IAS, ಮಾಜಿ ಕಾರ್ಯದರ್ಶಿ, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರಕಾರ.

49.          P.K. ಲಹಿರಿ, ನಿವೃತ್ತ IAS, ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ, ಏಶಿಯನ್ ಡೆವಲಪ್ಮೆಂಟ್ ಬ್ಯಾಂಕ್.

50.          ಸುಬೋಧ್ ಲಾಲ್, IPoS (ರಾಜೀನಾಮೆ ಸಲ್ಲಿಸಿದ್ದಾರೆ), ಮಾಜಿ ಉಪ ಮಹಾ ನಿರ್ದೇಶಕ, ಸಂವಹನ ಸಚಿವಾಲಯ, ಭಾರತ ಸರಕಾರ.

51.          S.K. ಲಂಬಾಹ್, ನಿವೃತ್ತ IFS, ಮಾಜಿ ರಾಯಭಾರಿ (ಭಾರತದ ಪ್ರಧಾನಮಂತ್ರಿಯವರ ಪರವಾಗಿ).

52.          P.M.S. ಮಲಿಕ್, ನಿವೃತ್ತ IFS, ಮಾಜಿ ಮಯನ್ಮಾರ್ ರಾಯಭಾರಿ, ಮತ್ತು ವಿಶೇಷ ಕಾರ್ಯದರ್ಶಿ, MEA, ಭಾರತ ಸರಕಾರ.

53.          ಹರ್ಷ್ ಮಂದೆರ್, ನಿವೃತ್ತ IAS, ಮಧ್ಯಪ್ರದೇಶ ಸರಕಾರ.

54.          ಲಲಿತ್ ಮಾಥುರ್, ನಿವೃತ್ತ IAS, ಮಾಜಿ ಮಹಾ ನಿರ್ದೇಶಕ, ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಭಾರತ ಸರಕಾರ.

55.          ಅದಿತಿ ಮೆಹ್ತಾ, ನಿವೃತ್ತ IAS, ಮಾಜಿ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ, ರಾಜಸ್ಥಾನ ಸರಕಾರ.

56.          ಶಿವಶಂಕರ್ ಮೆನನ್, ನಿವೃತ್ತ IFS, ಮಾಜಿ ವಿದೇಶ ಕಾರ್ಯದರ್ಶಿ ಮತ್ತು ಮಾಜಿ ರಾಷ್ಟ್ರೀಯ ಭದ್ರತಾ ಸಲಹಗಾರರು.

57.          ಸೊನಾಲಿನಿ ಮೀರ್ಚಂದಾನಿ, IFS (ರಾಜೀನಾಮೆ ಸಲ್ಲಿಸಿದ್ದಾರೆ), ಭಾರತ ಸರಕಾರ.

58.          ಸುನಿಲ್ ಮಿತ್ರಾ, ನಿವೃತ್ತ IAS, ಮಾಜಿ ಕಾರ್ಯದರ್ಶಿ, ಹಣಕಾಸು ಸಚಿವಾಲಯ, ಭಾರತ ಸರಕಾರ.

59.          ದೇವ್ ಮುಖರ್ಜಿ, ನಿವೃತ್ತ IFS, ಮಾಜಿ ಉನ್ನತ ಆಯುಕ್ತರು — ಬಾಂಗ್ಲಾದೇಶ್, ಮತ್ತು ಮಾಜಿ ರಾಯಭಾರಿ — ನೇಪಾಳ.

60.          ಶಿವ್ ಶಂಕರ್ ಮುಖರ್ಜಿ, ನಿವೃತ್ತ IFS, ಮಾಜಿ ಉನ್ನತ ಆಯುಕ್ತರು — ಯುನೈಟೆಡ್ ಕಿಂಗ್ಡಮ್.

61.          ಪ್ರಣವ್ S. ಮುಖೋಪಾಧ್ಯಾಯ್, ಮಾಜಿ ನಿರ್ದೇಶಕರು, ಬಂದರು ನಿರ್ವಹಣಾ ಸಂಸ್ಥೆ, ಭಾರತ ಸರಕಾರ.

62.          ಶೋಭಾ ನಂಬೀಸನ್, ನಿವೃತ್ತ IAS, ಮಾಜಿ ಪ್ರಧಾನ ಕಾರ್ಯದರ್ಶಿ (ಯೋಜನೆ), ಕರ್ನಾಟಕ ಸರಕಾರ.

63.          P.G.J. ನಂಬೂದಿರಿ, ನಿವೃತ್ತ IPS, ಮಾಜಿ ಪೊಲೀಸ್ ಮಹಾ ನಿರ್ದೇಶಕರು, ಗುಜರಾತ್ ಸರಕಾರ.

64.          ಸುರೇಂದ್ರ ನಾಥ್, ನಿವೃತ್ತ IAS, ಮಾಜಿ ಸದಸ್ಯರು, ಹಣಕಾಸು ನಿಗಮ, ಮಧ್ಯಪ್ರದೇಶ ಸರಕಾರ.

65.          P.A. ನಜರೆತ್, ನಿವೃತ್ತ IFS, ಭಾರತ ಸರಕಾರ.

66.          ಅಮಿತಾಭ ಪಾಂಡೆ, ನಿವೃತ್ತ IAS, ಮಾಜಿ ಕಾರ್ಯದರ್ಶಿ, ಅಂತರ ರಾಜ್ಯ ಮಂಡಲಿ, ಭಾರತ ಸರಕಾರ.

67.          ಅಲೋಕ್ ಪೆರ್ತಿ, ನಿವೃತ್ತ IAS, ಮಾಜಿ ಕಾರ್ಯದರ್ಶಿ, ಕಲ್ಲಿದ್ದಲು ಸಚಿವಾಲಯ, ಭಾರತ ಸರಕಾರ.

68.          R.M. ಪ್ರೇಮ್ ಕುಮಾರ್, ನಿವೃತ್ತ IAS, ಮಾಜಿ ಪ್ರಧಾನ ಕಾರ್ಯದರ್ಶಿ, ಮಹಾರಾಷ್ಟ್ರ ಸರಕಾರ.

69.          T.R. ರಘುನಂದನ್, ನಿವೃತ್ತ IAS, ಮಾಜಿ ಜಂಟಿ ಕಾರ್ಯದರ್ಶಿ, ಪಂಚಾಯತ್ ರಾಜ್ ಸಚಿವಾಲಯ, ಭಾರತ ಸರಕಾರ.

70.          N.K. ರಘುಪತಿ, ನಿವೃತ್ತ IAS, ಮಾಜಿ ಅಧ್ಯಕ್ಷರು, ಸಿಬ್ಬಂದಿ ಆಯ್ಕೆ ನಿಗಮ, ಭಾರತ ಸರಕಾರ.

71.          V.P. ರಾಜಾ, ನಿವೃತ್ತ IAS, ಮಾಜಿ ಅಧ್ಯಕ್ಷರು, ಮಹಾರಾಷ್ಟ್ರ ವಿದ್ಯುಚ್ಚಕ್ತಿ ನಿಯಂತ್ರಣ ನಿಗಮ.

72.          C. ಬಾಬು ರಾಜೀವ್, ನಿವೃತ್ತ IAS, ಮಾಜಿ ಕಾರ್ಯದರ್ಶಿ, ಭಾರತ ಸರಕಾರ.

73.          K. ಸುಜಾತ ರಾವ್, ನಿವೃತ್ತ IAS, ಮಾಜಿ ಆರೋಗ್ಯ ಕಾರ್ಯದರ್ಶಿ, ಭಾರತ ಸರಕಾರ.

74.          M.Y. ರಾವ್, ನಿವೃತ್ತ IAS.

75.          ಸತ್ವಂತ್ ರೆಡ್ಡಿ, ನಿವೃತ್ತ IAS,ಮಾಜಿ ಕಾರ್ಯದರ್ಶಿ, ಕೆಮಿಕಲ್ಸ್ ಮತ್ತು ಪೆಟ್ರೋಕೆಮಿಕಲ್ಸ್, ಭಾರತ ಸರಕಾರ..

76.          ಜುಲಿಯೋ ರಿಬೈರೊ, ನಿವೃತ್ತ IPS, ಪಂಜಾಬ್ ರಾಜ್ಯಪಾಲರಿಗೆ ಮಾಜಿ ಸಲಹಗಾರರು ಮತ್ತು ರೊಮೆನಿಯಾಗೆ ರಾಯಭಾರಿಗಳು.

77.          ಅರುಣಾ ರಾಯ್,  IAS, (ರಾಜೀನಾಮೆ ಸಲ್ಲಿಸಿದ್ದಾರೆ).

78.          ಮನವೇಂದ್ರ N. ರಾಯ್, ನಿವೃತ್ತ IAS, ಮಾಜಿ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ, ಪಶ್ಚಿಮ ಬಂಗಾಳ ಸರಕಾರ.

79.          ದೀಪಕ್ ಸನನ್, ನಿವೃತ್ತ IAS, ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳಿಗೆ ಮಾಜಿ ಪ್ರಧಾನ ಸಲಹಗಾರರು, ಹಿಮಾಚಲ ಪ್ರದೇಶ ಸರಕಾರ.

80.          G. ಶಂಕರನ್, ನಿವೃತ್ತ IC&CES, ಮಾಜಿ ಅಧ್ಯಕ್ಷರು, ಸುಂಕ, ಅಬಕಾರಿ ಮತ್ತು ಚಿನ್ನ (ನಿಯಂತ್ರಣ) ಉಚ್ಚ ನ್ಯಾಯಮಂಡಳಿ.

81.          ಶ್ಯಾಮ್ ಶರಣ್, ನಿವೃತ್ತ IFS, ಮಾಜಿ ವಿದೇಶ ಕಾರ್ಯದರ್ಶಿ ಮತ್ತು ಮಾಜಿ ಅಧ್ಯಕ್ಶ, ರಾಷ್ಟ್ರೀಯ ಭದ್ರತೆ ಸಲಹಾ ಮಂಡಳಿ.

82.          S. ಸತ್ಯಭಾಮ, ನಿವೃತ್ತ IAS, ಮಾಜಿ ಅಧ್ಯಕ್ಷರು, ರಾಷ್ಟ್ರೀಯ ಬೀಜ ನಿಗಮ, ಭಾರತ ಸರಕಾರ.

83.          N.C. ಸಕ್ಸೇನಾ, ನಿವೃತ್ತ IAS, ಮಾಜಿ ಕಾರ್ಯದರ್ಶಿ, ಯೋಜನಾ ಮಂಡಳಿ, ಭಾರತ ಸರಕಾರ.

84.          ಅರ್ಧೇಂದು ಸೇನ್, ನಿವೃತ್ತ IAS, ಮಾಜಿ ಪ್ರಧಾನ ಕಾರ್ಯದರ್ಶಿ, ಪಶ್ಚಿಮ ಬಂಗಾಳ ಸರಕಾರ.

85.          ಅಭಿಜಿತ್ ಸೇನ್ ಗುಪ್ತಾ, ನಿವೃತ್ತ IAS, ಮಾಜಿ ಕಾರ್ಯದರ್ಶಿ, ಸಂಸ್ಕೃತಿ ಸಚಿವಾಲಯ, ಭಾರತ ಸರಕಾರ.

86.          ಅಫ್ತಾಬ್ ಸೇಥ್, ನಿವೃತ್ತ IFS, ಮಾಜಿ ರಾಯಭಾರಿ – ಜಪಾನ್.

87.          ಅಶೋಕ್ ಕುಮಾರ್ ಶರ್ಮ, ನಿವೃತ್ತ IFS, ಮಾಜಿ ರಾಯಭಾರಿ — ಫಿನ್ಲೆಂಡ್ ಮತ್ತು ಎಸ್ಟೋನಿಯಾ.

88.          ನವರೇಖಾ ಶರ್ಮಾ, ನಿವೃತ್ತ IFS, ಮಾಜಿ ರಾಯಭಾರಿ — ಇಂಡೋನೇಷಿಯಾ.

89.          ಪ್ರವೇಶ್ ಶರ್ಮಾ, ನಿವೃತ್ತ IAS, ಮಾಜಿ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ, ಮಧ್ಯ ಪ್ರದೇಶ ಸರಕಾರ.

90.          ರಾಜು ಶರ್ಮಾ, ನಿವೃತ್ತ IAS, ಮಾಜಿ ಸದಸ್ಯರು, ಆದಾಯ ಮಂಡಳಿ, ಉತ್ತರ ಪ್ರದೇಶ ಸರಕಾರ.

91.          ರಶ್ಮಿ ಶುಕ್ಲಾ ಶರ್ಮಾ, ನಿವೃತ್ತ IAS, ಮಾಜಿ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗಳು, ಮಧ್ಯ ಪ್ರದೇಶ ಸರಕಾರ.

92.          ಹರ್ ಮಂದೆರ್ ಸಿಂಗ್, ನಿವೃತ್ತ IAS, ಮಾಜಿ ಮಹಾ ನಿರ್ದೇಶಕರು, ESI ನಿಗಮ, ಭಾರತ ಸರಕಾರ.

93.          ಪದಮ್ವೀರ್ ಸಿಂಗ್, ನಿವೃತ್ತ IAS, ಮಾಜಿ ನಿರ್ದೇಶಕರು, LBSNAA, ಮುಸ್ಸೋರಿ, ಭಾರತ ಸರಕಾರ.

94.          ಸತ್ಯವೀರ್ ಸಿಂಗ್, ನಿವೃತ್ತ IRS, ಮಾಜಿ ಪ್ರಧಾನ ಆಯುಕ್ತರು, ಆದಾಯ ತೆರಿಗೆ, ಭಾರತ ಸರಕಾರ.

95.          ಸುಜಾತ ಸಿಂಗ್, ನಿವೃತ್ತ IFS, ಮಾಜಿ ವಿದೇಶ ಕಾರ್ಯದರ್ಶಿ, ಭಾರತ ಸರಕಾರ.

96.          ತ್ರಿಲೋಚನ್ ಸಿಂಗ್, ನಿವೃತ್ತ IAS, ಮಾಜಿ ಕಾರ್ಯದರ್ಶಿ, ಅಲ್ಪಸಂಖ್ಯಾತ ಸಮುದಾಯಗಳ ರಾಷ್ಟ್ರೀಯ ಆಯೋಗ, ಭಾರತ ಸರಕಾರ.

97.          ಜವಹರ್ ಸರಕಾರ್, ನಿವೃತ್ತ IAS, ಮಾಜಿ ಕಾರ್ಯದರ್ಶಿ, ಸಂಸ್ಕೃತಿ ಸಚಿವಾಲಯ, ಮತ್ತು ಮಾಜಿ ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿ, ಪ್ರಸಾರ ಭಾರತಿ, ಭಾರತ ಸರಕಾರ.

98.          ನರೇಂದ್ರ ಸಿಸೋದಿಯ, ನಿವೃತ್ತ IAS, ಮಾಜಿ ಕಾರ್ಯದರ್ಶಿ, ಹಣಕಾಸು ಸಚಿವಾಲಯ, ಭಾರತ ಸರಕಾರ.

99.          ಮನೋಜ್ ಶ್ರೀವಾಸ್ತವ, ನಿವೃತ್ತ IAS, ಮಾಜಿ ಆಯುಕ್ತರು, ಇಲಾಖೀಯ ವಿಚಾರಣೆಗಳು (ಪ್ರಧಾನ ಕಾರ್ಯದರ್ಶಿ ಸ್ಥಾನಮಾನ).

100.       ಸಂಜೀವಿ ಸುಂದರ್, ನಿವೃತ್ತ IAS, ಮಾಜಿ ಕಾರ್ಯದರ್ಶಿ, ಮೇಲ್ಮೈ ಸಾಗಾಣಿಕೆ ಸಚಿವಾಲಯ, ಭಾರತ ಸರಕಾರ.

101.       ಪರ್ವೀನ್ ತಲ್ಹಾ, ನಿವೃತ್ತ IRS, ಮಾಜಿ ಸದಸ್ಯರು, UPSC,

102.       ಥ್ಯಾಂಕ್ಸಿ ಥೆಕ್ಕೆಕೆರ, ನಿವೃತ್ತ IAS, ಮಾಜಿ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ, ಅಲ್ಪಸಂಖ್ಯಾತರ ಅಭಿವೃದ್ಧಿ, ಮಹಾರಾಷ್ಟ್ರ ಸರಕಾರ.

103.       P.S.S. ಥಾಮಸ್, ನಿವೃತ್ತ IAS, ಮಾಜಿ ಮಹಾ ಕಾರ್ಯದರ್ಶಿ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ.

104.       ಗೀತಾ ಥೂಪಾಲ್, ನಿವೃತ್ತ IRAS, ಮಾಜಿ ಮಹಾ ವ್ಯವಸ್ಥಾಪಕರು, ಮೆಟ್ರೋ ರೈಲ್ವೆ, ಕೊಲ್ಕೊತಾ.

105.       ಹಿಂದಾಲ್ ತ್ಯಾಬ್ಜಿ, ನಿವೃತ್ತ IAS, ಮಾಜಿ ಪ್ರಧಾನ ಕಾರ್ಯದರ್ಶಿ ಸ್ಥಾನಮಾನ, ಜಮ್ಮು ಮತ್ತು ಕಾಶ್ಮೀರ ಸರಕಾರ.

106.       ರಮಣಿ ವೆಂಕಟೇಸನ್, ನಿವೃತ್ತ IAS, ಮಾಜಿ ಮಹಾ ನಿರ್ದೇಶಕರು, YASHADA, ಮಹಾರಾಷ್ಟ್ರ ಸರಕಾರ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here