Homeಕರ್ನಾಟಕಧರ್ಮಾಂತರ ಅನಿವಾರ್ಯ ಏಕೆ?

ಧರ್ಮಾಂತರ ಅನಿವಾರ್ಯ ಏಕೆ?

- Advertisement -
- Advertisement -

ದಿ. 31.10.2021ರಂದು ಚಿತ್ರದುರ್ಗ ನಗರದಲ್ಲಿ ಮಹಾಬೋಧಿ ಸೊಸೈಟಿಯ ಧರ್ಮಾಧಿಕಾರಿಗಳಾದ ಪೂಜ್ಯ ಆನಂದ ಭಂತೆ ಅವರ ನೇತೃತ್ವದಲ್ಲಿ ಸುಮಾರು 103 ಜನರು ಬೌದ್ಧಧರ್ಮ ಸ್ವೀಕರಿಸಿದ್ದಾರೆ. ಅವರಲ್ಲಿ ಹೆಚ್ಚಾಗಿ ಅಸ್ಪೃಶ್ಯ ದಲಿತರು ಅಂದರೆ ಎಡಗೈ, ಬಲಗೈ ಜಾತಿಯವರು ಇದ್ದರು. ಅವರೊಟ್ಟಿಗೆ ಒಂದು ಗೊಲ್ಲರ ಕುಟುಂಬ ಮತ್ತು ಒಬ್ಬರು ಲಿಂಗಾಯತರೂ ಇದ್ದರು ಅನ್ನುವುದು ವಿಶೇಷ. ಅದೇ ದಿನ ಬುದ್ಧನಗರದಲ್ಲಿ ಬುದ್ಧನ ಪುತ್ಥಳಿಯನ್ನೂ ಅನಾವರಣಗೊಳಿಸಿದ್ದಾರೆ. ಇದರ ಹಿಂದೆ ಗೌತಮಬುದ್ಧ ಪ್ರತಿಷ್ಠಾನದ ತಿಪ್ಪೇಸ್ವಾಮಿ, ಸಿ. ಕೆ. ಮಹೇಶ್ ಮುಂತಾದವರ ಶ್ರಮವಿದೆ. ಕೆಲವು ತಿಂಗಳ ಕಾಲ ಜಿಲ್ಲೆಯಾದ್ಯಂತ ಸಂಚಾರ ಮಾಡಿ ಬಾಬಾಸಾಹೇಬ್ ಅಂಬೇಡ್ಕರರ ತತ್ವವಿಚಾರಗಳನ್ನು ಪ್ರಚುರಪಡಿಸಿ, ಅವರ ಅಂತಿಮ ನಿಲುವು ಧರ್ಮಾಂತರ, ಅದರ ಮೂಲಕವೇ ನಾವು ಸ್ವಾಭಿಮಾನವನ್ನು ಮೆರೆಯಬೇಕು ಮತ್ತು ರಕ್ಷಿಸಿಕೊಳ್ಳಬೇಕು ಎಂದು ದಲಿತರಲ್ಲಿ ಅರಿವು ಮೂಡಿಸಿದ್ದಾರೆ. ಬೈಕ್ ಜಾಥಾ ಮಾಡಿ ಇದು ನಮಗೆ ಅನಿವಾರ್ಯ ಎಂದು ಸಾರ್ವಜನಿಕರಿಗೆ ಸಾರಿ ಹೇಳಿದ್ದಾರೆ. ಹೀಗೆ ದಲಿತ ಮತ್ತು ಹಿಂದುಳಿದ ಜಾತಿಗಳಲ್ಲಿ ಪರಿವರ್ತನೆಯ ಜಾಗೃತಿ ಮೂಡಿಸಿರುವುದು ಅಭಿನಂದನಾರ್ಹವಾಗಿದೆ. ಇದು ಕೇವಲ ಪ್ರಾರಂಭವಷ್ಟೆ. ಬ್ರಹ್ಮಗಿರಿ, ಜಟಿಂಗ ರಾಮೇಶ್ವರ, ಅಶೋಕ ಸಿದ್ದಾಪುರಗಳಂತಹ ಅನೇಕ ಐತಿಹಾಸಿಕ ಬೌದ್ಧ ಸ್ಥಾವರಗಳಿರುವ ಕೋಟೆಯ ನಾಡಿನಲ್ಲಿ ಅತಿ ಸಹಜವೆನ್ನುವಂತೆ ಜನರು ತಮ್ಮ ಪೂರ್ವಿಕರ ಧರ್ಮವನ್ನು ಅಪ್ಪಿಕೊಳ್ಳುತ್ತಿದ್ದಾರೆ, ಮರಳಿ ಮನೆಗೆ ನಡೆಯುತ್ತಿದ್ದಾರೆ.

ಕೆಲವು ವರ್ಷಗಳ ಹಿಂದೆ ಹಾಸನ ಜಿಲ್ಲೆಯ ಗಂಗೂರಿನಲ್ಲಿ ಒಂದು ಘಟನೆ ನಡೆದಿತ್ತು. ಆ ಊರಿನ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶವಿರಲಿಲ್ಲ. ದಲಿತರು ಅಲ್ಲಿಗೆ ಹೋಗುವುದನ್ನೂ ಬಿಟ್ಟಿರಲಿಲ್ಲ. ಸಣ್ಣಪುಟ್ಟ ಘರ್ಷಣೆಗಳು ನಡೆಯುತ್ತಲೇ ಇದ್ದವು. ಆದರೂ ದೈನ್ಯತೆಯಿಂದ ದೇವಸ್ಥಾನದ ಹೊರಗಡೆ ನಿಂತು ಬೇಡುತ್ತಿದ್ದವರನ್ನು ಒಂದಷ್ಟು ಪ್ರಗತಿಪರರು ಒಳಗೆ ಬಿಟ್ಟುಕೊಳ್ಳಲು ಮನಸ್ಸು ಮಾಡಿದ್ದಾರೆ. ಒಂದು ದಿನ ನಿಗದಿಯಾಗುತ್ತದೆ. ಸುಮಾರು 120 ಮಂದಿ ದಲಿತರನ್ನು ದೇವಸ್ಥಾನದ ಒಳಗೆ ಪ್ರಗತಿಪರ ಸವರ್ಣೀಯರು ಬರಮಾಡಿಕೊಳ್ಳುತ್ತಾರೆ. ಇದು ಸುದ್ದಿಯಾಗುತ್ತದೆ. ಆದರೆ ಅಲ್ಲಿ ನಡೆದ, ಪ್ರತ್ಯಕ್ಷದರ್ಶಿಯೊಬ್ಬರು ನನಗೆ ಹೇಳಿದ ಇನ್ನೊಂದು ಮಗ್ಗಲಿನ ಕಥೆ ಕುತೂಹಲಕಾರಿಯಾಗಿದೆ. ದೇಗುಲದೊಳಗೆ ದಲಿತರ ಪ್ರವೇಶವಾಗುವಾಗ ಸುತ್ತಲಿನ ಸವರ್ಣೀಯ ಹೆಂಗಸರು ಎದೆ ಬಡಿದುಕೊಂಡು ಜೋರಾಗಿ ಅಳುತ್ತಿದ್ದರು. ನಮ್ಮ ದೇವಸ್ಥಾನವನ್ನು ಹಾಳುಗೆಡವಿದರು, ಮೈಲಿಗೆಯಾಯಿತು; ಕಾಲಾಂತರದಲ್ಲಿ ಇಂಥ ಅನಿಷ್ಟವನ್ನು ನೋಡಿರಲಿಲ್ಲವಲ್ಲಾ ಎಂದು ಗೋಳಾಡುತ್ತಿದ್ದರು.

ಅಷ್ಟೇ ಮಂದಿ ಗಂಡಸರು ಹೊರಗೆ ನಿಂತು ರೊಚ್ಚಿಗೆದ್ದವರಂತೆ ಹಲ್ಲು ಮಸೆಯುತ್ತಿದ್ದರು. ಔಪಚಾರಿಕ ಪ್ರವೇಶ ಮುಗಿಯುತ್ತಿದ್ದಂತೆ ದಲಿತರು ಸಮಾನತೆಯ ಸುಖವನ್ನು ಅನುಭವಿಸುತ್ತಾ ಮನೆಗಳಿಗೆ ಹಿಂದಿರುಗುತ್ತಾರೆ. ಅದೇ ದಿನ ರಾತ್ರಿ ಸುಮಾರು 200 ಮಂದಿ ಸವರ್ಣೀಯರು ಪಂಚಾಯಿತಿ ಸೇರಿ ಸಭೆ ನಡೆಸುತ್ತಾರೆ. ಇದು ನಮ್ಮ ಸಂಪ್ರದಾಯಕ್ಕೆ ವಿರುದ್ಧವಾದುದು. ಇದನ್ನು ಮುಂದುವರೆಯಲು ಬಿಡಬಾರದು ಎಂದು ತೀರ್ಮಾನಿಸುತ್ತಾರೆ. ಅಷ್ಟಕ್ಕೇ ನಿಲ್ಲದೆ ಕೇರಿಗೆ ನುಗ್ಗಿ ದಲಿತರನ್ನು ಮಾರಕಾಸ್ತ್ರಗಳಿಂದ ಹಿಗ್ಗಾಮುಗ್ಗಾ ಥಳಿಸುತ್ತಾರೆ. ಹಲ್ಲೆ ನಡೆಸಿದ ಗಂಡಸರು ಊರು ಬಿಡುತ್ತಾರೆ. ಹಲ್ಲೆಗೊಳಗಾದ ದಲಿತರು ಮರುದಿನ ಆಸ್ಪತ್ರೆ ಸೇರುತ್ತಾರೆ. ಇನ್ನು ಯಥಾಪ್ರಕಾರ ಅಟ್ರಾಸಿಟಿ ಕೇಸು. ಕೋರ್ಟು, ಕಚೆರಿ ಅಲೆದಾಟ. ಆಮೇಲೆ ಸಾಕ್ಷಿಗಳ ಕೊರತೆಯಿಂದ ಕೇಸು ಖುಲಾಸೆಯಾಗುತ್ತದೆ!

ಇತ್ತೀಚಿನ ಇನ್ನೊಂದು ಘಟನೆ: ದಿ. 30.10.2021ರಂದು ಗುಜರಾತಿನ ಕಚ್ ಜಿಲ್ಲೆಯ ಗಾಂಧಿಧಾಮದ ಹತ್ತಿರ ಒಂದು ಹಳ್ಳಿಯಲ್ಲಿ ದಲಿತ ಗೋವಿಂದ್ ವಘೇಲಾ ಮತ್ತು ಅವನ ಕುಟುಂಬದ ಆರು ಜನರು ಶ್ರೀರಾಮನ ದೇವಸ್ಥಾನಕ್ಕೆ ಪ್ರವೇಶ ಮಾಡಿದರೆಂದು ಸವರ್ಣೀಯರು ಮರುದಿನ ಅವನ ಜಮೀನಿಗೆ ದನಕರುಗಳನ್ನು ನುಗ್ಗಿಸಿ ಕುಯಿಲಿಗೆ ಬಂದಿದ್ದ ಬೆಳೆಯನ್ನು ನಾಶಪಡಿಸುತ್ತಾರೆ. ಕೇಳಲು ಬಂದ ಆರೂ ಮಂದಿ ಕುಟುಂಬಸ್ಥರನ್ನು ’ದೇವಸ್ಥಾನದ ಒಳಗೆ ಹೋಗಲು ಎಷ್ಟು ಧೈರ್ಯ ನಿಮಗೆ?’ ಎಂದು ಹಿಡಿದು ಕಟ್ಟಿಹಾಕಿ ದೊಣ್ಣೆ, ಮಚ್ಚು ಮತ್ತಿತರ ಹರಿತ ಆಯುಧಗಳಿಂದ ಹಲ್ಲೆ ನಡೆಸುತ್ತಾರೆ. ಯಥಾಪ್ರಕಾರ ಕೇಸು ದಾಖಲಾಗುತ್ತದೆ. ರಾಜಕಾರಣಿಗಳು ಆಶ್ವಾಸನೆ ಕೊಡುತ್ತಾರೆ, ಇತ್ಯಾದಿ. ಇಲ್ಲಿ ಒಂದು ಅಂಶವನ್ನು ಗಮನಿಸಬೇಕು. ಜಾತಿ ಕಟ್ಟಳೆಯನ್ನು
ಮೀರಿದ ದಲಿತರಿಗೆ ಮೇಲ್ಜಾತಿ ಜನ ಕೊಡುವ ಮೊದಲ ಶಿಕ್ಷೆ ಏನೆಂದರೆ ಅವರ ಆರ್ಥಿಕತೆಯನ್ನು ಕುಗ್ಗಿಸುವುದು ಮತ್ತು ನಷ್ಟ ಮಾಡುವುದು.

ದಲಿತರು ಆರ್ಥಿಕವಾಗಿ ಸಬಲರಾಗುವುದು, ಅಧಿಕಾರ ಪಡೆದುಕೊಳ್ಳುವುದು ಅವರಿಗೆ ಸುತಾರಾಂ ಇಷ್ಟವಿಲ್ಲ. ಇದನ್ನು ಗ್ರಾಮೀಣ ಪ್ರದೇಶಕ್ಕೆ ಮಾತ್ರ ಅನ್ವಯಿಸಿ ನಾನು ಹೇಳುತ್ತಿಲ್ಲ. ನಗರ ಪ್ರದೇಶದ ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಲ್ಲೂ ಇದೇ ಅಸಹನೆ, ಒಳಗೊಳ್ಳಲಾರದ ಸಮಸ್ಯೆ ಇದೆ. ಮುಂಬೈಯ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬರು ಪ್ರಾಧ್ಯಾಪಕರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡರು. ಕಾನ್ಪುರದ ಐಐಟಿ ಸಂಸ್ಥೆಯ ಪ್ರಾಧ್ಯಾಪಕಿ ತರಗತಿಯಲ್ಲಿಯೆ ಹಿಂದುಳಿದ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಕುರಿತು ಅವಹೇಳನ ಮಾಡಿ ಶಿಕ್ಷೆ ಅನುಭವಿಸಿದರು. ಇಷ್ಟಕ್ಕೇ ನಿಲ್ಲಿಸಿದರೆ ವಿವರಣೆ ಅಸಮರ್ಪಕವಾದೀತು. ಕಳೆದ ಟೋಕಿಯೊ ಒಲಿಂಪಿಕ್ಸ್‌ನ ಮಹಿಳಾ ಹಾಕಿ ಸ್ಪರ್ಧೆಯಲ್ಲಿ ಭಾರತ ಅಂತಿಮ ಹಂತದವರೆಗೂ ತಲುಪಿ ಫೈನಲ್‌ನಲ್ಲಿ ಗೆಲ್ಲಲಾರದೆ ಹೋಗಿದ್ದಕ್ಕೆ ಇಡೀ ತಂಡವನ್ನು ಬಿಟ್ಟು ಅಲ್ಲಿ ಆಟವಾಡಿದ ದಲಿತ ಹೆಣ್ಣುಮಗಳಾದ ವಂದನಾ ಕಟಾರಿಯಾಳನ್ನು ದೂಷಿಸಿದರು. ಜಾತಿವಾದಿಗಳು ಆಕೆಯ ಮನೆಯ ಮುಂದೆ ಜಮಾಯಿಸಿ ಪಟಾಕಿಗಳನ್ನು ಸಿಡಿಸಿ ಪೋಷಕರನ್ನು ನಿಂದಿಸಿದರು. ಅಂದರೆ ಇಂಡಿಯಾ ದೇಶದ ಸಮಷ್ಟಿ ಮನಸ್ಸಿಗೆ ಜಾತಿ ಅಸಹನೆ ಎಷ್ಟು ರಕ್ತಗತವಾಗಿದೆ ಎಂಬುದನ್ನು ಈ ಘಟನೆಗಳು ಹೇಳುತ್ತವೆ.

ಇಂತಹ ಘಟನೆಗಳು ದೇಶದಾದ್ಯಂತ ದಿನವೂ ನಡೆಯುತ್ತವೆ. ವರದಿಯಾಗುವುದು ಅತಿ ಕಡಿಮೆ. ದಿನವೊಂದಕ್ಕೆ ಹತ್ತು ದಲಿತರ ಕೊಲೆಯಾಗುತ್ತದೆ, ಅಷ್ಟೇ ಸಂಖ್ಯೆಯ ದಲಿತ ಹೆಣ್ಣುಮಕ್ಕಳ ಅತ್ಯಾಚಾರವಾಗುತ್ತದೆ ಎಂದು ಅಂಕಿಅಂಶಗಳೇ ಹೇಳುತ್ತವೆ. ದಲಿತ ಮೀಸೆ ಬಿಟ್ಟನೆಂದು ಥಳಿಸುವ, ವಿದ್ಯಾರ್ಥಿ ವಾಚು ಕಟ್ಟಿದನೆಂದು ಕೈಯಿಗೆ
ಚೂರಿಯಿಂದ ಇರಿಯುವ, ಮೊಬೈಲ್ ಫೋನಿನಲ್ಲಿ ಅಂಬೇಡ್ಕರ್ ರಿಂಗ್‌ಟೋನ್ ಇಟ್ಟುಕೊಂಡನೆಂದು ಹಿಡಿದು ಬಡಿಯುವ, ಮದುವೆ ಮಂಟಪದಲ್ಲಿ ಸಮಾ ಊಟಕ್ಕೆ ಕುಳಿತನೆಂದು ದರದರ ಎಳೆದು ಹೊರಗೆ ದಬ್ಬುವ ಹಿಂದೂ ಸಂಪ್ರದಾಯಸ್ಥ ಮನಸ್ಸಿಗೆ ಸಮಾನತೆಯ ಕನಸು ಬಿದ್ದರೂ ಬೆಚ್ಚಿ ಬೀಳುತ್ತದೆ. ಮತ್ತೆ ಅದೇ ಕೇಸು, ಕೋರ್ಟು, ಖುಲಾಸೆ ಇತ್ಯಾದಿ. ಇದು ಇಂಡಿಯಾದ ಮುಗಿಯದ ಕಥೆ.

ಪ್ರಭುತ್ವ ಬದಲಾಗದ ಹೊರತು ದೇಶ ಬದಲಾಗದು, ದೇಶ ಬದಲಾಗದ ಹೊರತು ಸಮಾಜ ಬದಲಾಗುವುದಿಲ್ಲ. ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ತರದ ಹೊರತು ಮಕ್ಕಳ ಮನಸ್ಸು ಬದಲಾಗುವುದಿಲ್ಲ. ಹಿಂದೂ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎನ್ನುವ ಕಾರಣವನ್ನು ಮುಂದುಮಾಡಿ ಇತಿಹಾಸವನ್ನು, ಕಣ್ಣಮುಂದೆ ನಡೆದಿರುವ ಅನೇಕ ಸಾಮಾಜಿಕ ಸತ್ಯಗಳನ್ನು ಪಠ್ಯದಿಂದ ಬಚ್ಚಿಡುತ್ತಾರೆ. ಹಾಗಾದರೆ ಮಕ್ಕಳಿಗೆ ಜಾತಿ ಎನ್ನುವುದು ಹುಸಿ, ಅಸಹಜ ವಿಂಗಡನೆ, ವಿಕೃತಿ, ಅವಮಾನಕರ ಸಂಗತಿ ಎಂದು ತಿಳಿಯುವುದಾದರೂ ಹೇಗೆ? ಅಸ್ಪೃಶ್ಯತೆಯೂ ಮೇಲ್ಜಾತಿಯವರ ಭಾವನೆಗಳಿಗೆ ನೋವುಂಟುಮಾಡುತ್ತದೆ! ಆದ್ದರಿಂದಲೇ ಇನ್ನೂ ಅದು ಅಸಾಂವಿಧಾನಿಕವಾಗಿ ಚಾಲ್ತಿಯಲ್ಲಿದೆ!? ಹಿಂದೂಗಳು ಬದಲಾಗುವುದಿಲ್ಲ ಯಾಕೆಂದರೆ ಅವರ ಶಾಸ್ತ್ರ, ಪುರಾಣಗಳು ಹೇಳಿದಂತೆ ಅವರು ನಡೆದುಕೊಳ್ಳುತ್ತಾರೆ. ಫುಲೆ, ಅಂಬೇಡ್ಕರ್, ಪೆರಿಯಾರ್ ಅವರು ಶಾಸ್ತ್ರ ಪುರಾಣಗಳ ಮೇಲೆ ಬೆಳಕು ಚೆಲ್ಲಿ ಧರ್ಮವನ್ನು ಮರುನಿರೂಪಿಸಿದರು. ಸಮಾಜದಲ್ಲಿ ನಡೆಯುವ ಮೋಸ, ವಂಚನೆಗಳನ್ನು ಬಯಲಿಗೆಳೆದರು. ಆದರೆ ಪ್ರಯೋಜನವೇನು? ದಲಿತರು ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸುವುದಿಲ್ಲ! ಹೊರದಬ್ಬಿಸಿಕೊಳ್ಳುವುದು ತಪ್ಪುವುದಿಲ್ಲ. ಈ ಅಜ್ಞಾನಕ್ಕೆ ಕಾರಣಗಳೇನು?

ಈ ಹಿನ್ನೆಲೆಯಲ್ಲಿ ಚಿತ್ರದುರ್ಗದ ಧರ್ಮಾಂತರ ಪ್ರಯೋಗ ಅನುಕರಣೀಯವಾಗಿದೆ. ಬಾಬಾಸಾಹೇಬರು ಧರ್ಮಾಂತರ ಯಾಕೆ ಬೇಕು ಎಂದರೆ ಮನುಷ್ಯರ ಬದುಕನ್ನು ಯಶಸ್ವಿಗೊಳಿಸಿಕೊಳ್ಳುವುದಕ್ಕೆ ಎಂದು ಹೇಳುತ್ತಾರೆ. ಹಿಂದೂ ಧರ್ಮದ ಒಳಗೇ ಇದ್ದರೆ ಪ್ರಗತಿ ಸಾಧ್ಯವಿಲ್ಲ. ಯಾಕೆಂದರೆ ಶಾಸ್ತ್ರಗಳು ಹೇಳುವಂತೆ ದಲಿತ, ಹಿಂದುಳಿದ ಜಾತಿಗಳು ಶ್ರೇಣೀಕೃತ ವ್ಯವಸ್ಥೆಯ ಕೆಳಹಂತದಲ್ಲೇ ಇರಬೇಕೆಂದು ಮೇಲಿನವರು ಬಯಸುತ್ತಾರೆ. ಅದಕ್ಕಾಗಿ ಪ್ರಗತಿಯನ್ನು ಅಡ್ಡಿಪಡಿಸುತ್ತಾರೆ. ಅಲ್ಲಿರುವುದು ಗುಲಾಮ ಮತ್ತು ಯಜಮಾನ ಸಂಬಂಧ. ನಾವು ಹಿಂದೂಗಳ ಕಕ್ಷೆಯಿಂದ ಹೊರಗೆ ಬಂದರೆ ಗುಲಾಮಗಿರಿಯಿಂದ ಹೊರಬಂದಂತೆ. ಸವರ್ಣೀಯರೊಡನೆ ಪೈಪೋಟಿ ಇರುವುದಿಲ್ಲ, ಹಾಗಾಗಿ ಸಂಘರ್ಷ ಏರ್ಪಡುವುದೇ ಇಲ್ಲ. ಸಮಾನತೆಯನ್ನು ಆಗ್ರಹಿಸಿದ ಕೂಡಲೇ ಸಂಘರ್ಷ ಉಂಟಾಗುತ್ತದೆ. ಆದಕಾರಣ, ಸ್ವಾಭಿಮಾನದ, ಸಮಾನತೆಯ, ಸ್ವಾವಲಂಬನೆಯ ಬದುಕು ಬೇಕೆಂದರೆ ಧರ್ಮಾಂತರವನ್ನು ಆಯ್ಕೆಮಾಡಿಕೊಳ್ಳಬೇಕು.

ಅನ್ಯಾಯವನ್ನು ಶತಮಾನಗಳಿಂದ ಸಹಿಸಿಕೊಂಡು ಬಂದಿರುವ ಕಾರಣಕ್ಕೆ ಪ್ರಶ್ನಿಸುವ, ಪ್ರತಿಭಟಿಸುವ, ದಂಗೆ ಏಳುವ ಶಕ್ತಿ ನಮ್ಮಲ್ಲಿ ಕುಂದುಹೋಗಿದೆ. ನಮ್ಮ ಚೈತನ್ಯವನ್ನು ಹಿಂದೂ ಧರ್ಮ ಹೊಸಕಿಹಾಕಿಬಿಟ್ಟಿದೆ. ಮನುಷ್ಯರನ್ನು ಕುಷ್ಠರೋಗಿಗಳಂತೆ ಕಾಣುವ ಧರ್ಮದಿಂದ ಹೊರಗೆ ಬರಲೇಬೇಕು ಎಂದು ಅಂಬೇಡ್ಕರ್ ಹೇಳುತ್ತಾರೆ. ಆದ್ದರಿಂದ ಒಂದನ್ನು ನಾವು ಅರಿತುಕೊಳ್ಳಬೇಕು. ಹಿಂದೂ ಧರ್ಮವು ನಮ್ಮ ಪೂರ್ವಜರ ಧರ್ಮ ಆಗಿರಲಿಲ್ಲ. ಅದನ್ನು ಹೇರಲಾಗಿತ್ತು. ಈ ಭಯ ಹುಟ್ಟಿಸುವ ದೇವರುಗಳು ನಮ್ಮವರಲ್ಲ. ಅವರನ್ನು ಈಗ ನಮ್ಮ ಮೇಲೆ ಹೇರಲಾಗಿದೆ. ನಮಗೆ ನಮ್ಮ ಪರಂಪರೆಯ ನೆನಪಿರಬೇಕು. ನಮ್ಮ ತಾತ, ಮುತ್ತಾತ, ಅವರ ತಾತ, ಮುತ್ತಾತಂದಿರ ಸಂಕಟ, ಅಸಹಾಯಕತೆ, ನೋವು, ಅವಮಾನ ಈಗ ನಮ್ಮದೇ ಆಗಬೇಕು. ಧರ್ಮಾಂತರವಾಗುವುದರ ಮೂಲಕ ನಾವು ಅವರಿಗೆ ನ್ಯಾಯ ದೊರಕಿಸಿಕೊಡಬೇಕು.

ಕೊನೆಯದಾಗಿ ನಾವು ಹಿಂದೂ ಧರ್ಮವನ್ನು ತೊರೆಯುವುದರಿಂದ ಏನನ್ನೂ ಕಳೆದುಕೊಳ್ಳುವುದಿಲ್ಲ. ಕಳೆದುಕೊಳ್ಳುವುದು ಅಸ್ಪೃಶ್ಯತೆಯ ಕಳಂಕವನ್ನು, ಅವಮಾನವನ್ನು, ಕೀಳರಿಮೆಯನ್ನು, ಮೈಲಿಗೆಯೆನ್ನುವ
ಮಿಥ್ಯಾಪವಾದವನ್ನು, ಮೌಢ್ಯವನ್ನು, ಅನಕ್ಷರತೆಯನ್ನು, ಗುಲಾಮಗಿರಿಯನ್ನು, ಒಟ್ಟಾರೆ ನರಕವನ್ನು. ಬದಲಾಗಿ ವಿಶ್ವಧರ್ಮವಾಗಿ ಬೆಳೆದಿರುವ ಬೌದ್ಧಧರ್ಮದಿಂದ ಪಡೆದುಕೊಳ್ಳುವುದು ಅಪಾರವಾದುದು. ಬೀಜದಲ್ಲಿ ಸಸ್ಯದ ಭ್ರೂಣವಿದ್ದರೆ ಅದನ್ನೂ ನೋಯಿಸಲಾರೆ ಎಂದು ಹೇಳುವ ಬುದ್ಧರ ಅನುಕಂಪೆಯ ಪರಮೋಚ್ಛ ಸ್ಥಿತಿಯನ್ನು ಊಹಿಸಿಕೊಳ್ಳಿ. ನೈತಿಕ ನೆಲೆಗಟ್ಟಿನ ಮೇಲೆ ನಿಂತ ಬೌದ್ಧಧರ್ಮ ಜ್ಞಾನದ ಗಣಿ. ಅಗೆದಷ್ಟೂ ಮೊಗೆದಷ್ಟೂ ದೊರಕುವ ಕರುಣೆ, ಮೈತ್ರಿ, ಶೀಲ, ಪ್ರಜ್ಞೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ನ್ಯಾಯ. ದಾನದಿಂದ ಉದಾರತೆ, ಧ್ಯಾನದಿಂದ ಶಾಂತಿ. ಅಂತಿಮವಾಗಿ ದುಃಖದಿಂದ ಬಿಡುಗಡೆ, ನಿಬ್ಬಾಣ ಸುಖ.

ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ಡಾ. ಮೂಡ್ನಾಕೂಡು ಚಿನ್ನಸ್ವಾಮಿ
ಕನ್ನಡದ ಖ್ಯಾತ ಕವಿ. ದಲಿತ, ಬಂಡಾಯ ಮತ್ತು ಬೌದ್ಧ ಚಿಂತನೆಗಳನ್ನು ಸಾಹಿತ್ಯದ ಮೂಲಕ ಪ್ರಚುರಪಡಿಸಿದ ಪ್ರಮುಖರಲ್ಲಿ ಒಬ್ಬರು. ‘ಕೊಂಡಿಗಳು ಮತ್ತು ಮುಳ್ಳುಬೇಲಿಗಳು’, ‘ಚಪ್ಪಲಿ ಮತ್ತು ನಾನು’ ಮೂಡ್ನಾಕೂಡು ಅವರ ಕೆಲವು ಕವನಸಂಕಲನಗಳು. ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’ ಅವರ ಆತ್ಮಕತೆ.


ಇದನ್ನೂ ಓದಿ: ಕೇರಳ: ದಲಿತ ಮಹಿಳೆಗೆ ಮನೆ ಕಟ್ಟುಲು ಸಾಮಾಗ್ರಿಯನ್ನು ಕೊಂಡೊಯ್ಯಲು ಬಿಡದ ಮೇಲ್ಜಾತಿ ಕುಟುಂಬ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...