ಹಬೀಬ್ ಜಾಲಿಬ್ ಕರುಣೆಯ ಕುಲುಮೆಯಲ್ಲಿ ಖಡ್ಗವಾದ ಕಾವ್ಯ : ಐ.ವಿ.ಗೌಲ್

ಪಾಕಿಸ್ತಾನದ ಕ್ರಾಂತಿ ಕವಿ ಹಬೀಬ್ ಜಾಲಿಬ್ ಅವರ ಪದ್ಯಗಳು ಅಲ್ಲಿನ ಜನಜೀವನದಲ್ಲಿ ಹಾಸು ಹೊಕ್ಕಾಗ್ಯಾವ. ಯಾವುದೇ ಒಂದು ಸೀಮಿತ ಪ್ರಸಂಗಕ್ಕೆ ಅವು ಅನುವಾಗುವುದಿಲ್ಲವಾದ್ದರಿಂದ ಅವನ್ನು ಜನ ತಮಗೆ ಸರಿ ಕಂಡಲ್ಲಿ, ಕಂಡಾಗ ಹಾಡಿಕೊಂಡು ಪರಿಸ್ಥಿತಿ ಎದುರಿಸುತ್ತಾ ಇರತಾರ.

ಅವುಗಳೊಳಗ ಕೆಲವು ನೋಡೋಣ.
ಗರೀಬರ ದರಬಾರಿನ ಗಾಯಕ
“ಕಾವ್ಯಕ್ಕೆ ಸ್ಥಾನ ಇರುವುದು ಎರಡೇ ಕಡೆಗಳಲ್ಲಿ- ಸಾಹುಕಾರರ ಆಸ್ಥಾನದಲ್ಲಿ ಅಥವಾ ಬಡವರ ಗಲ್ಲಿಗಳಲ್ಲಿ. ನಾನು ಗರೀಬರ ದರಬಾರದ ಗಾಯಕ. ಅದು ನನಗೆ ಹೆಮ್ಮೆಯ ವಿಷಯ.” ಎಂದು ಅವರು ತಮ್ಮನ್ನು ತಾವು ಬಣ್ಣಿಸಿಕೊಳ್ಳುತ್ತಿದ್ದರು. “ನೀವು ಸರ್ವಾಧಿಕಾರಿಗಳ ವಿರುದ್ಧ ಮಾತಾಡಿದರೆ ನಿಮ್ಮ ಬಾಯಿ ಬಂದು ಮಾಡಲಾಗುತ್ತದೆ. ನಿಮ್ಮನ್ನು ಜೈಲಿಗೆ ದಬ್ಬಲಾಗುತ್ತದೆ. ನಿಮ್ಮ ಪುಸ್ತಕಗಳನ್ನು ಜಪ್ತು ಮಾಡಲಾಗುತ್ತದೆ. ಆದರೆ ಅವರ ಪರವಾಗಿ ಮಾತಾಡಿದರೆ ನಿಮಗೆ ಸಕಲ ಸೌಲತ್ತು ದೊರೆಯುತ್ತದೆ. ನಾನು ಸುಳ್ಳನ್ನು ವಿರೋಧಿಸುವವನು. ದುರುಳ ಆಡಳಿತಗಾರರನ್ನು ಟೀಕಿಸಿದ ನನಗೆ ಜನ ಎಷ್ಟು ಗೌರವ, ಪ್ರೀತಿ ತೋರಿದ್ದಾರೋ ಅದು ಆಳುವವರ ಪರವಾಗಿದ್ದ ಯಾವ ಕವಿ, ಚಿಂತಕನಿಗೂ ಸಿಕ್ಕಿಲ್ಲ” ಅಂದರು. “ಲಾಡಖಾನೆ ಚಲೋ, ನಹಿ ತೊ ಜೇಲ್ ಖಾನೆ ಚಲೋ” (ನಿಮ್ಮನ್ನು ಮುದ್ದುಮಾಡುವ ಅಜ್ಜಿಗೆ ಮನೆಗೆ ಬನ್ನಿ ಅಥವಾ ಜೈಲಿಗೆ ಹೋಗಿ) ಅನ್ನೋ ಹಾಡು ಕವಿ, ಕಲಾವಿದರ ಆಷಾಡಭೂತಿತನವನ್ನ ಬಟಾಬಯಲು ಮಾಡಿತು.

ಸಾಹುಕಾರರ, ಸರ್ವಾಧಿಕಾರಿಗಳ ಸುತ್ತ ಸುತ್ತುವ ಸಲಹೆಗಾರರು ಮತ್ತು ಭಜನಾ ಮಂಡಳಿ ಸದಸ್ಯರನ್ನು ಕುರಿತು ಅವರು ಒಂದೆರಡು ಹಾಡು ಬರದರು, ಅವರನ್ನ ನಾಕು ರಸ್ತೆ ಕೂಡೋ ಕೂಟಿನ್ಯಾಗ ಅವಮಾನ ಮಾಡಿದಂಗ ಮಾಡಿದರು. “ಮೈನೆ ಉಸ್ಸೆ ಯೆ ಕಹಾ” (`ಅವನಿಗೆ ನಾನು ಈ ಮಾತು ಹೇಳಿದೆ’) ಎನ್ನುವ ಪದ್ಯದ ಸಾಲುಗಳು ಇವು.
“ಮೆಹರಬಾನ್ ಸಾಹೇಬರೇ ನೀವು ದೇವಜ್ಯೋತಿ ಇದ್ದಂತೆ

ನೀವೆಷ್ಟು ಒಳ್ಳೆಯವರೆಂದರೆ, ನಿಮಗೆ ತೊಂದರೆ ಆದೀತೆಂದು
ನಮ್ಮ ಜನ ತಮ್ಮ ಸ್ವಂತ ಖರ್ಚಿನಲ್ಲಿ ಜೈಲು ಸೇರುತ್ತಿದ್ದಾರೆ,
ನಿಮ್ಮ ನಂತರ ಬರೀ ಕತ್ತಲು
ಈ ಹತ್ತು ಕೋಟಿ ಕತ್ತೆಗಳು, ಈ ದೇಶದ ಜನತೆ,
ಅವರು ಎಂದಾದರೂ ತಮ್ಮನ್ನು ತಾವು ಆಳಿಕೊಳ್ಳಬಲ್ಲರೇ,
ಎಂದೆಂದಿಗೂ ನೀವೇ ನಮ್ಮ ರಾಜ,”
ಅನ್ನೋ ಸಾಲುಗಳು ಆಳುತ್ತಿದ್ದವರನ್ನು ಕೆರಳಿಸಿದವು.

ತನ್ನ ತಂದೆಯ ಗಲ್ಲುಶಿಕ್ಷೆಯ ನಂತರ ಪಾಕಿಸ್ತಾನದ ರಾಜಕೀಯ ಪ್ರವೇಶ ಮಾಡಿದ ಬೆನಜೀರ್ ಭುಟ್ಟೋರ ಭಾಷಣ ಹಾಗೂ ಪ್ರವಾಸಗಳನ್ನು ಝಿಯಾ ಉಲ್ ಹಕ್ ಸರಕಾರ ನಿಷೇಧಿಸಿತು. ಆಗ

“ಹೆದರಿದರೋ ಇವರು ಹೆದರಿದರು,
ಬಂದೂಕು ಇಟ್ಟುಕೊಂಡವರು ಒಬ್ಬ ನಿಶಸ್ತ್ರ ಹುಡುಗಿಗೆ ಹೆದರಿದರೋ
ಜನರಲ್, ಮುಲ್ಲಾ, ಅಧಿಕಾರಿಗಳು ಒಬ್ಬ ನಿಶಸ್ತ್ರ ಹುಡುಗಿಗೆ ಹೆದರಿದರೋ”
ಅನ್ನುವ ಕವನ ಮಲಗಿದ್ದ ಜನರನ್ನ ಬಡಿದೆಬ್ಬಿಸಿತು.

ಅವರು ಉರ್ದುವಿನಷ್ಟೇ ಜನಪ್ರಿಯ ಕವನಗಳನ್ನು ಪಂಜಾಬಿಯಲ್ಲಿಯೂ ಬರೆದಿದ್ದಾರೆ. ಅವರು ಪಂಜಾಬಿ ಸಾಹಿತ್ಯ ಸಮ್ಮೇಳನಕ್ಕೆ ಹೋಗಿ ಭಾಷಣ ಮಾಡಿದ್ದಕ್ಕಾಗಿ ಅವರನ್ನು ಹಿಂದುಸ್ತಾನಿ ಏಜೆಂಟ್ ಎಂದು ಬ್ರ್ಯಾಂಡ್ ಮಾಡಲಾಯಿತು. ಕೆಲವು ಪತ್ರಿಕೆಗಳನ್ನು `ಜಾಸೂಸ್ ಜಾಲಿಬ್’ ಅನ್ನೋ ಬಿರುದು ಕಟ್ಟಿದರು. “ನಮ್ಮನ್ನು ಆಳುವವರು ದ್ವೇಷದ ಬೀಜ ಬಿತ್ತುವ ಭೂಮಾಲಿಕರು. ನಾನು ವಿಷದ ಕಳೆ ತೆಗೆಯುವ ಕೂಲಿ”, ಅಂತ ಅವರು ಪ್ರತಿಕ್ರಿಯಿಸಿದರು.

ಝಿಯಾ ಸರಕಾರ ಒಂದು ಸುತ್ತೋಲೆ ಹೊರಡಿಸಿತು. “ಕವಿಗಳು ಸರಕಾರವನ್ನು ಹೊಗಳಿ ಬರಿಯಬೇಕು. ಬರಿಯ ತೆಗಳಿಕೆ ಆಗದು. ಅನೇಕ ದಶಕಗಳ ದುರಾಡಳಿತದಿಂದ ಪಾಕಿಸ್ತಾನ ಸೊರಗಿದೆ. ಅದನ್ನು ಸರಿಪಡಿಸಲು ಒಬ್ಬ ಮನುಷ್ಯ ಹಗಲು ಇರುಳು ಎನ್ನದೇ ದುಡಿಯುತ್ತಿದ್ದಾನೆ. ಆದ್ದರಿಂದ ನಿಂದಾಸ್ತುತಿ ನಿಲ್ಲಿಸಿ. ಅದು ನಿಂದಾ ಅನ್ನೊದು ಗೊತ್ತು ಆಗೋ ಮುಂಚೆ ಭಕ್ತಿ ಸ್ತುತಿ ಶುರು ಮಾಡಿ” ಅಂತ. (ಇಂತಹ ಸುತ್ತೋಲೆ – ಗಿತ್ತೋಲೆ ಇಲ್ಲದನ ನಮ್ಮ ಕೆಲವು ಕವಿಗಳು ಸ್ತುತಿ- ಭಜನೆ ಬರಿತಾ ಇದ್ದಾರ, ಆ ಮಾತು ಬ್ಯಾರೆ)
ಆಗ ಜಾಲಿಬ್ ಬರೆದ ಪದ್ಯ ಪಡ್ಡೆ ಹುಡುಗರ ಸಿಗ್ನೇಚರ್ ಸಾಂಗ್ ಆಯಿತು.

“ಕತ್ತಲೆಗೆ ಬೆಳಕು ಎಂದು ಬರೆಯಲೇ?
ಮರುಭೂಮಿಗೆ ಬಿಸಿ ಗಾಳಿಗೆ ತಂಗಾಳಿ ಎಂದು ಬರೆಯಲೇ?
ಹುಲುಮಾನವರನ್ನು ದೇವರೆನ್ನಲಾದೀತೆ?
ಗೋಡೆಗೆ ದ್ವಾರ ಎನ್ನಲಾದೀತೆ?,
ಗಾಜಿಗೆ ವಜ್ರ ಎನ್ನಲಾದೀತೆ?”

ಈ ಹಾಡು ಸರ್ವಾಧಿಕಾರಿ ಝಿಯಾನನ್ನು ರೊಚ್ಚಿಗೆಬ್ಬಿಸಿತ್ತು. ಉರ್ದುದಾಗ ಜಿಯಾ ಅಂದರ ಬೆಳಕು. ಅದಕ್ಕ ಜಾಲಿಬ್ ಮತ್ತೆ ಜೈಲಿಗೆ ಹೋದರು. `ಇದರಿಂದ ಜಿಯಾ ಅನ್ನುವ ಸಾಲನ್ನು ತೆಗೆಯಿರಿ ನಾವು ನಿಮಗೆ ಬೇಲು ಕೊಡಿಸುತ್ತೇವೆ’ ಅಂತ ಅಧಿಕಾರಿಗಳು ಹೇಳಿದಾಗ. “ಈಗ ಈ ಹಾಡಿನ ಮಾಲಿಕರು ಈ ನಾಡಿನ ಸಾಮಾನ್ಯ ಜನ. ಅವರನ್ನು ಹೋಗಿ ಕೇಳಿ” ಅಂತಂದರು.

ಮಿಲಿಟರಿ ಆಡಳಿತಗಾರ ಅಯೂಬ್ ಖಾನನ ನಂತರ ಯಾಹ್ಯಾಖಾನ್‍ರ ಆಡಳಿತದಲ್ಲಿ ಒಂದು ಸರಕಾರಿ ಮುಷಾಯರಾ ನಡೀತು. ಅಲ್ಲೆ ಯಹ್ಯಾಖಾನ್‍ರ
ಭವ್ಯ ಫೋಟೊದ ಕೆಳಗೆ ನಿಂತು ಅವರು

“ನಿನಗಿಂತ ಮುಂಚೆ ಇಲ್ಲಿದ್ದವನಿಗೆ,
ನಿನ್ನ ಹಾಗೆ ಸಿಂಹಾಸನದ ಮೇಲೆ ವಿರಾಜಿಸಿದವನಿಗೆ
ನಿನ್ನಂತೆಯೇ ನಾನೇ ದೇವರು ಎಂಬ ಖಾತ್ರಿ ಇತ್ತು” ಎಂದು ಹಾಡಿದರು.

ಆ ಮುಷಾಯರಾಗೆ ಬಂದವರು ವಾಪಸು ಮನೆಗೆ ಹೋಗಲಿಲ್ಲ. ಜೈಲಿಗೆ ಹೋದರು. `ನಿನಗೆ ಇಲ್ಲಿ ಪೆನ್ನು, ಪೇಪರು ಕೊಡೋದಿಲ್ಲ’ ಅಂತ ಹೆದರಿಸಿದ ಜೈಲರಿಗೆ “ನನ್ನ ಹಾಡು ಜನರ ಹಾಡು. ಅದು ಪೆನ್ನಿನಿಂದ ಪೇಪರಿನಿಂದ ಹರಿಯೋದಲ್ಲ. ಎದೆಯಿಂದ ಎದೆಗೆ ಹಬ್ಬೋ ಬಳ್ಳಿ” ಅಂತ ಬಾಯಿ ಮುಚ್ಚಿಸಿದರು. ಜೈಲಿನಲ್ಲಿ ಒಂದು ಕವನ ಸಂಕಲನ ಪೂರೈಸಿದರು. ಮನೆಯಲ್ಲಿ ಗದ್ದಲು. ತುಂಬಾ ಜನ ಭೇಟಿಯಾಗಲಿಕ್ಕೆ ಬರುತ್ತಾರೆ. ಇಲ್ಲಿ ಪ್ರಶಾಂತ ವಾತಾವರಣ ಇದೆ ಎನ್ನುತ್ತಿದ್ದರು.

“ಮಿಲಿಟರಿ ಆಡಳಿತಗಾರರ, ಸರ್ವಾಧಿಕಾರಿಗಳನ್ನು ವಿರೋಧಿಸಿದಷ್ಟೇ ಗಟ್ಟಿಯಾಗಿ ನಾನು ಜನವಿರೋಧಿ ಪ್ರಧಾನಿಗಳನ್ನೂ ಟೀಕಿಸುತ್ತೇನೆ. ನಾನು ಸದಾ ಕಾಲವೂ ಆಡಳಿತ ಪಕ್ಷದ ವಿರೋಧಿ. ವಿರೋಧ ಪಕ್ಷಗಳ ಮಿತ್ರ ಪ್ರತಿಯೊಂದು ಪಕ್ಷದ ಸರಕಾರದವರು ನನ್ನನ್ನು ಜೈಲಿಗೆ ಹಾಕಿದ್ದಾರೆ. ಅಷ್ಟರಮಟ್ಟಿಗೆ ನಾನು ನಿಷ್ಪಕ್ಷಪಾತಿ” ಎಂದು ಅವರು ನಗುತ್ತಾ ಹೇಳುತ್ತಿದ್ದರು. ಪ್ರಜಾತಂತ್ರದ ಹೋರಾಟಕ್ಕಾಗಿ ಜನರಲ್ ಜಿಯಾ ಉಲ್‍ಹಕ್ ಅವರು ಜುಲಫಿಕಾರ್ ಅಲಿ ಭುಟ್ಟೋ ಅವರನ್ನು ಜೈಲಿಗೆ ಹಾಕಿದಾಗ ಭುಟ್ಟೋ ಅವರನ್ನು ಟೀಕಿಸಿ ಬರೆಯಿರಿ ಅಂತ ಯಾರೋ ಇವರನ್ನು ಕೇಳಿದರು. “ನಾನು ಅರಮನೆಯಲ್ಲಿ ಇರೋ ಆಡಳಿತಗಾರರ ಬಗ್ಗೆ ಬರೀತೇನೆ. ಜೈಲಿನಲ್ಲಿ ಇರುವ ಮಾಜಿ ಆಡಳಿತಗಾರರ ಬಗ್ಗೆ ಅಲ್ಲ” ಅಂದರು.

ತಮ್ಮ ಕೊನೆಗಾಲವನ್ನು ಸರಕಾರಿ ಆಸ್ಪತ್ರೆಯ ಹಾಸಿಗೆಯ ಮೇಲೆ ಕಳೆದರು. ಅವರಿಗೆ ಭಾಳ ಅರಾಮ ಇಲ್ಲದಾಗ ಅಂದಿನ ಪ್ರಧಾನಿ ನವಾಜ ಷರೀಫ್ ಸರಕಾರ ಅವರ ಆರೈಕೆಯ ವೆಚ್ಚ ಭರಿಸಲಿಕ್ಕೆ ಮುಂದಾಯಿತು. ಪ್ರಧಾನ ಮಂತ್ರಿಯ ಕಚೇರಿಯ ಅಧಿಕಾರಿಯೊಬ್ಬ ಜಾಲಿಬ್‍ರ ಸ್ನೇಹಿತರೊಬ್ಬರ ಜೊತೆ ಅವರನ್ನು ನೋಡಲಿಕ್ಕೆ ಆಸ್ಪತ್ರೆಗೆ ಬಂದ. ಅದರ ಹಿಂದಿನ ದಿನ ನೂರಾರು ಬಟ್ಟೆ ಮಿಲ್ಲುಗಳ ಒಡೆಯ ಷರೀಫ್ ಅವರು ನಿಮಗಾಗಿ ನಾನು ಜೀವ ಕೊಡುತ್ತೇನೆ ಅಂತ ಸಾರ್ವಜನಿಕ ಸಭೆಯೊಳಗ ಭಾಷಣ ಮಾಡಿದ್ದರು.

ಆಸ್ಪತ್ರೆಗೆ ಬಂದ ಹಿತಚಿಂತಕರಿಗೆ “ನೀವು ಒಂದು ಸ್ವಲ್ಪ ಕೂತಿರಿ” ಅಂತ ಹೇಳಿ ಜಾಲಿಬ್ ಅವರು ಪೆನ್ನು, ಕಾಗದ ತೊಗೊಂಡು ಒಂದು ಕವನ ಬರೆದರು.

ಅದೇ ಈಗ ಜನಪ್ರಿಯವಾಗಿರುವ

“ನೀವೇನು ನಿಮ್ಮ ಜೀವಾ ಕೊಡಬ್ಯಾಡರಿ,
ಜನರಿಗೆ ನೀವು ನಿಮ್ಮದೊಂದು ಮಿಲ್ಲು ಕೊಡರಿ.
ನೀವು ಇಷ್ಟು ದಿವಸ ಕೂತು ತಿಂದು ಮಜಾ ಮಾಡಿದ್ದರ ಬಿಲ್ಲು ಕೊಡರಿ,” ಅನ್ನೋ ಕವಿತೆ.

ಅವರು ತೀರಿಹೋದಾಗ ಅವರ ಪತ್ನಿ ಹಾಗೂ ಮಗಳು ತಾಹಿರಾ ಅವರ ಅಂತ್ಯಸಂಸ್ಕಾರಕ್ಕೆ ಸರಕಾರ ನೀಡಿದ ದುಡ್ಡನ್ನು ತಿರಸ್ಕಾರ ಮಾಡಿದರು.
“ತಮ್ಮ ತಮ್ಮ ಜನಾಂದೋಲನಗಳಿಗಾಗಿ ಪಾಕಿಸ್ತಾನದ ರಾಜಕೀಯ, ಸಾಮಾಜಿಕ ಹೋರಾಟಗಾರರೆಲ್ಲ ನಮ್ಮ ತಂದೆಯ ಕವನದ ಸಾಲುಗಳನ್ನು ಘೋಷಣೆಗಳನ್ನಾಗಿ ಬಳಸುತ್ತಾರೆ. ಆದರೆ ಈ ಘೋಷಣೆಗಳನ್ನು ನೀಡಿದ ಕವಿಯ ಕುಟುಂಬದವರು ಹೇಗೆ ಜೀವನ ಕಳೆಯುತ್ತಿದ್ದಾರೆ ಎಂದು ಯಾರಿಗೂ ಚಿಂತೆ ಇಲ್ಲ. `ಮೈ ನಹೀ ಮಾನತಾ ಮೈ ನಹಿ ಜಾನತಾ (ನಾ ಒಪ್ಪಂಗಿಲ್ಲ, ನನಗ ಗೊತ್ತಿಲ್ಲ)’ ಎನ್ನುವ ಪದ್ಯವನ್ನು ಘೋಷಣೆಯಾಗಿ ಮಾಡಿಕೊಂಡ ಹೋರಾಟಗಾರರಿಗೆ ಅದನ್ನು ಬರೆದ ಕವಿಯ ಹೆಂಡತಿ- ಮಕ್ಕಳು ಯಾರು ಎಂಬ ಪ್ರಶ್ನೆ ಕೇಳಿದರೆ `ಮೈ ನಹೀ ಮಾನತಾ ಮೈ ನಹಿ ಜಾನತಾ’ ಎನ್ನುವ ಉತ್ತರ ಬರುತ್ತದೆ ಎಂದು ಅವರ ಹೆಂಡತಿ ಮುಮತಾಜ್ ಬೇಗಂ ತಾನು ಸಾಯುವ ಮುಂಚೆ ತನ್ನನ್ನು ಭೇಟಿಯಾದ ವರದಿಗಾರರ ಮುಂದ ಚಾಷ್ಟೀ ಮಾಡ್ಯಾಳ.

ಜಾಲಿಬ್ ಅವರು ಬರೇ ಕವಿಯಲ್ಲ. ಅವರು ಹೋರಾಟಗಾರರಾಗಿದ್ದರು.

ಅವರು ರಾಷ್ಟ್ರೀಯ ಜನತಾ ಪಾರ್ಟಿ (ನ್ಯಾಷನಲ್ ಅವಾಮಿ ಪಾರ್ಟಿ)ಯ ಸಕ್ರಿಯ ಸದಸ್ಯರಾಗಿದ್ದರು. ಅನೇಕ ಕಾರ್ಮಿಕ, ಮಹಿಳಾ ಹೋರಾಟದಾಗ ಭಾಗವಹಿಸಿದ್ದರು. ಲಾಹೋರಿನ ರೀಗಲ್ ಚೌಕಿದಾಗ ಅವರಿಗೆ ಪೊಲೀಸರು ಭಾಳ ಸಲಾ ಲಾಠಿ ರುಚಿ ತೋರಿಸಿದರು. “ಜಾಲಿಬ್ ಅವರು ಮಹಿಳೆಯರ ಹೋರಾಟದಲ್ಲಿ ಪೊಲೀಸರುಲಾಠಿಯ ಹೊಡೆತ ತಿಂದ ರಸ್ತೆಗೋ ಅದರ ಪಕ್ಕದ ಚೌಕಕ್ಕೋ ನಮ್ಮ ತಂದೆಯ ಹೆಸರು ಇಡಿ. ಎಲ್ಲರೂ ಹೂಂ ಅನ್ನುತ್ತಿದ್ದಾಗ ಇಲ್ಲ ಅನ್ನುವವನೊಬ್ಬ ಈ ನೆಲದಲ್ಲಿ ಇದ್ದ ಎನ್ನುವುದು ದಾಖಲಾಗಲಿ” ಅಂತ ಅವರ ಮಗಳು ರಕ್ಷಾಂದಾ, ಈಗಿನ ಇಮ್ರಾನ್ ಖಾನ್ ಸರಕಾರದ ಮುಂದ ಬೇಡಿಕಿ ಇಟ್ಟಾಳ. ಅವರ ಹೆಸರಿನಲ್ಲಿ ಸ್ಮಾರಕ ಇರಲಿ, ಬಿಡಲಿ. ಸುಳ್ಳು – ಸತ್ಯಗಳ ಜಗಳ ಇರೋತನಾ ಜಾಲಿಬ್ ಅವರ ಮಾತು ನಮ್ಮ ಮನಸಿನ್ಯಾಗ ಇರತಾವ. `ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ’ ಅಲ್ಲವೇ?

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here