Homeಕರ್ನಾಟಕಬೊಮ್ಮಾಯಿ ಆಡಳಿತದ ಒಂದು ವರ್ಷದಲ್ಲಿ ರಾಜ್ಯ ಕಂಡ ಕೋಮುದ್ವೇಷ ಪ್ರಕರಣಗಳಿವು

ಬೊಮ್ಮಾಯಿ ಆಡಳಿತದ ಒಂದು ವರ್ಷದಲ್ಲಿ ರಾಜ್ಯ ಕಂಡ ಕೋಮುದ್ವೇಷ ಪ್ರಕರಣಗಳಿವು

ಬೊಮ್ಮಾಯಿಯವರ ಒಂದು ವರ್ಷದ ಅಧಿಕಾರಾವಧಿಯಲ್ಲಿ ಕರ್ನಾಟಕ ರಾಜ್ಯ ಹೇಗೆ ಕೋಮುದ್ವೇಷದಲ್ಲಿ ಕಳೆದುಹೋಯಿತು ಎಂದು ಇಲ್ಲಿ ವಿವರಿಸಲಾಗಿದೆ.

- Advertisement -
- Advertisement -

ಬಿ.ಎಸ್.ಯಡಿಯೂರಪ್ಪನವರ ರಾಜೀನಾಮೆ ನಂತರ ಜುಲೈ 28, 2021ರಂದು ಬಸವರಾಜ ಬೊಮ್ಮಾಯಿಯವರು ಪ್ರಮಾಣ ವಚನ ಸ್ವೀಕರಿಸಿ ಕರ್ನಾಟಕ ರಾಜ್ಯದ 23ನೇ ಮುಖ್ಯಮಂತ್ರಿಯಾದರು. ಆಗ ಸಮಾಜವಾದಿ ಹಿನ್ನಲೆಯ ಬೊಮ್ಮಾಯಿಯವರು ಯಡಿಯೂರಪ್ಪನವರ ಮತ್ತೊಂದು ಮುಖವೇ ಹೊರತು, ನಿಜವಾದ ಸಿಎಂ ಯಡಿಯೂರಪ್ಪನವರೇ ಎಂಬ ವಿಶ್ಲೇಷಣೆಗಳು ಬಂದವು.‌

ಬೊಮ್ಮಾಯಿಯವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜುಲೈ 28ರಂದು ಜನೋತ್ಸವ ಆಯೋಜಿಸಲಾಗಿತ್ತು. ಆದರೆ ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಕೊಲೆಯ ಬಳಿಕ ಪಕ್ಷದ ಕಾರ್ಯಕರ್ತರು ಅಸಮಾಧಾನಗೊಂಡಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿಎಂ ಮಧ್ಯರಾತ್ರಿ ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮ ರದ್ದು ಮಾಡಿರುವುದಾಗಿ ಘೋಷಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಅಧಿಕಾರದಲ್ಲಿ ಯಾರೇ ಇದ್ದರೂ ತಾವು ರಾಜ್ಯದ ಅಭಿವೃದ್ಧಿ ಮಾಡಿದ್ದೇವೆಂದೇ ಹೇಳಿಕೊಳ್ಳುತ್ತಾರೆ. ಬೊಮ್ಮಾಯಿಯವರೂ ಅಷ್ಟೇ, ತಮ್ಮನ್ನು ಅಭಿವೃದ್ಧಿಯ ಹರಿಕಾರ ಎಂದೇ ಜಾಹೀರಾತುಗಳಲ್ಲಿ ಬಿಂಬಿಸಿಕೊಳ್ಳುತ್ತಾರೆ. ಬೊಮ್ಮಾಯಿಯವರ ಒಂದು ವರ್ಷದ ಅಧಿಕಾರವಧಿಯನ್ನು ಹಿಂತಿರುಗಿ ನೋಡಿದರೆ, “ಯಡಿಯೂರಪ್ಪನವರೇ ಪರವಾಗಿರಲಿಲ್ಲ ಎನ್ನುವಂತೆ ಕನ್ನಡಿಗರು ಹೇಳುವಂತಾಗಿರುವುದು ಬೊಮ್ಮಾಯಿಯವರ ನಿಜವಾದ ಸಾಧನೆ” ಎನ್ನದೆ ವಿಧಿಯಿಲ್ಲ.‌

ಇದನ್ನೂ ಓದಿರಿ: ಯಂಗ್ ಇಂಡಿಯನ್ ಕಚೇರಿಗೆ ಇಡಿ ಸೀಲ್: ‘ನೀವು ಏನು ಬೇಕಾದರೂ ಮಾಡಿ; ಮೋದಿಗೆ ಹೆದರುವುದಿಲ್ಲ’ ಎಂದ ರಾಹುಲ್ ಗಾಂಧಿ

ಈ ಒಂದು ವರ್ಷದ ಬೊಮ್ಮಾಯಿಯವರ ಆಡಳಿತವನ್ನು ನೋಡುತ್ತಿದ್ದರೆ, ಕರ್ನಾಟಕ ರಾಜ್ಯ ಜೂನಿಯರ್ ಉತ್ತರ ಪ್ರದೇಶದಂತೆ ಭಾಸವಾಗುತ್ತಿದೆ. ಮುಖ್ಯಮಂತ್ರಿಯವರೇ ‘ಉತ್ತರ ಪ್ರದೇಶ’ದ ಮಾದರಿ ಬಗ್ಗೆ ಮಾತನಾಡುತ್ತಿದ್ದರು. ಯುಪಿ ಮಾಡೆಲ್‌ ಎಂದರೆ ಏನೆಂದು ನೆನೆದರೂ ಆತಂಕವಾಗುತ್ತದೆ. ಬಸವಣ್ಣನವರ ಹಾದಿಯಲ್ಲಿ ಸಾಗಬೇಕಿದ್ದ ನಾಡು, ಯೋಗಿ ಆದಿತ್ಯನಾಥರನ್ನು ಧ್ಯಾನಿಸಲು ಹೊರಟಿದೆ ಎಂದರೆ- ಆತಂಕವಾಗುತ್ತದೆ.

ಭ್ರಷ್ಟಾಚಾರ, ನೆನೆಗುದಿಗೆ ಬಿದ್ದಿರುವ ಅಭಿವೃದ್ಧಿಯಾಚೆಗೆ ಕರ್ನಾಟಕ ರಾಜ್ಯದಲ್ಲಿ ಮತೀಯ ರಾಜಕಾರಣ ಎಲ್ಲೆ ಮೀರಿದೆ. ಬೊಮ್ಮಾಯಿಯವರು ಯಾರೂ ಊಹಿಸಲಾಗಷ್ಟು ಕೋಮು ರಾಜಕಾರಣ ಮಾಡುತ್ತಿರುವುದು‌ ಢಾಳಾಗಿ ಕಾಣುತ್ತಿದೆ.‌ “ನಮಗಿಂತ ಹೆಚ್ಚು ಬೊಮ್ಮಾಯಿ ಆರ್‌ಎಸ್‌ಎಸ್‌ ಆಗಿ ಬದಲಾಗಿದ್ದಾರೆ” ಎಂದು ಬಿಜೆಪಿಯ ನಾಯಕ, ಸಚಿವ ಆರ್.ಅಶೋಕ್ ಅವರೇ ಸದನದಲ್ಲಿ ಹೇಳಿದ್ದರು. ಅಂದರೆ ಬೊಮ್ಮಾಯಿಯವರು ತಮ್ಮ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ರಾಜ್ಯವನ್ನು ಕೋಮು ದಳ್ಳುರಿಗೆ ತಳ್ಳುತ್ತಿದ್ದಾರೆಯೇ ಎಂಬ ಅನುಮಾನಗಳು ಮೂಡುತ್ತಿವೆ.

ಬೊಮ್ಮಾಯಿಯವರು ಅಧಿಕಾರಕ್ಕೆ ಬಂದ ಮೇಲೆ ಮತೀಯವಾದಿ ಗೂಂಡಾಗಿರಿಗಳು ಎಲ್ಲೆ ಮೀರಿವೆ. ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂದು ಹೇಳಿಕೆ ನೀಡುವ ಮೂಲಕ ಬೊಮ್ಮಾಯಿಯವರು ಅದಕ್ಕೆ ಸಮರ್ಥನೆ ನೀಡಿದ್ದರು. ಈ ಒಂದು ವರ್ಷದ ಅವಧಿಯಲ್ಲಿ ರಾಜ್ಯ ಕ್ರಮಿಸಿರುವ ಹಾದಿಯನ್ನು ಅವಲೋಕಿಸಿದರೆ ಸಾಕು ನಾವು ಯಾವ ದಿಕ್ಕಿನಲ್ಲಿ‌ ಸಾಗುತ್ತಿದ್ದೇವೆ ಎಂಬುದು ಸ್ಪಷ್ಟವಾಗುತ್ತದೆ.

1. ಮತೀಯ ಗೂಂಡಾಗಿರಿಯ ಸಮರ್ಥನೆ

ಕರಾವಳಿ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಮತೀಯ ಗೂಂಡಾಗಿರಿ (ಮಾರಲ್ ಪೊಲೀಸಿಂಗ್) ಹೆಚ್ಚಾಗುತ್ತಿರುವಾಗ ರಾಜ್ಯದ ಸಿಎಂ ಅವುಗಳಿಗೆ ಕಡಿವಾಣ ಹಾಕಲು‌ ಯತ್ನಿಸಬೇಕಿತ್ತು.‌ ಆದರೆ ಅವರು ಮತೀಯ ಗೂಂಡಾಗಿರಿಯನ್ನು ಸಮರ್ಥಿಸಿ ಆತಂಕ ಮೂಡಿಸಿದರು.‌ “ನೈತಿಕತೆ ಇರಬೇಕು.‌ ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ” ಎಂದು ಹೇಳುವ ಮೂಲಕ ಮತೀಯ ಗೂಂಡಾಗಿರಿಗೆ ಒಪ್ಪಿಗೆಯ ಮುದ್ರೆಯೊತ್ತಿದರು.‌ ಬೊಮ್ಮಾಯಿ ಹೇಳಿಕೆಯನ್ನು ಸಂಘಪರಿವಾರದ ಮುಖಂಡರು ಪುನರುಚ್ಚರಿಸಿದರು. ಅಲ್ಲಿಂದ ಶುರುವಾದ ಮತಾಂಧತೆಯ ನಾಗಾಲೋಟ ಮುಂದುವರಿಯುತ್ತಲೇ ಇದೆ. ಈಗ ಟಾಪ್ ಗೇರ್‌‌ನಲ್ಲಿ ಚಲಿಸುತ್ತಿದೆ.

ಇದನ್ನೂ ಓದಿರಿ: ನಮ್ಮ ರಾಷ್ಟ್ರ ಧ್ವಜದ ವಿನ್ಯಾಸಕಾರ್ತಿ ಸುರಯ್ಯಾ ತಯ್ಯ್‌ಬ್‌ಜಿ: ಭಾರತೀಯರೆಲ್ಲಾ ತಿಳಿಯಬೇಕಾದ ವಾಸ್ತವ

ಬೆಂಗಳೂರಿನಲ್ಲಿ ಹಿಂದೂ ಹುಡುಗನೊಬ್ಬ ತನ್ನ ಮುಸ್ಲಿಂ ಸಹೋದ್ಯೋಗಿಗೆ ಬೈಕ್‌ನಲ್ಲಿ ಮನೆಗೆ ಡ್ರಾಪ್ ಕೊಡುತ್ತಿದ್ದ. ಆಗ ಕೆಲ ಮುಸ್ಲಿಂ ಕೋಮುವಾದಿಗಳು ಬೈಕ್ ತಡೆದು ಅಶ್ಲೀಲವಾಗಿ ನಿಂದಿಸಿ, ಹುಡುಗಿಯನ್ನು ಆಟೋ ಹತ್ತಿಸಿ ಮನಗೆ ಕಳಿಸಿದ್ದರು. ಅದರ ವಿಡಿಯೋ ಮಾಡಿ ಹರಿಯಬಿಟ್ಟಿದ್ದರು. ಇದನ್ನು ಉಗ್ರವಾಗಿ ಖಂಡಿಸಿದ ಸಿಎಂ ಬೊಮ್ಮಾಯಿಯವರು 24 ಗಂಟೆಗಳಲ್ಲಿ ಆರೋಪಿಗಳ ಬಂಧನವಾಗುವಂತೆ ಮಾಡಿದ್ದರು. ಇದಕ್ಕೆ ರಾಜ್ಯವೇ ಅವರಿಗೆ ಶಹಬ್ಬಾಶ್‌ಗಿರಿ ನೀಡಿತ್ತು. ಅದಾದ ನಂತರ ಬೆಳಗಾವಿಯಲ್ಲಿ ಪಾರ್ಕ್‌ಗೆ ಹೊರಟಿದ್ದ ಹುಡುಗ-ಹುಡುಗಿಗೆ ಥಳಿಸಲಾಯಿತು. ಮಂಗಳೂರಿನಲ್ಲಿ ಹೋಟೆಲ್‌ಗೆ ನುಗ್ಗಿ ಜೋಡಿಗೆ ಹಲ್ಲೆ ನಡೆಸಲಾಯಿತು. ಅದೇ ಮಂಗಳೂರಿನಲ್ಲಿ ಗೆಳತಿಯನ್ನು ಡ್ರಾಪ್ ಮಾಡುತ್ತಿದ್ದ ಯುವನಕ ಮೇಲೆ ಹಲ್ಲೆ ನಡೆಸಿ ಮತೀಯ ಗೂಂಡಾಗಿರಿ ಮೆರೆಯಲಾಯಿತು. ಪುತ್ತೂರಿನಲ್ಲಿ ಬಸ್‌ನಲ್ಲಿ ವಿಭಿನ್ನ ಧರ್ಮದ ಹುಡುಗ ಹುಡುಗಿ ತೆರಳುತ್ತಿದ್ದಾರೆ ಎಂದು ಆರೋಪಿಸಿ ಅವರಿಗೆ ಕಿರುಕುಳ ನೀಡಲಾಯಿತು.  ಒಂದೇ ಕಾರಿನಲ್ಲಿ ಹಿಂದೂ ಮುಸ್ಲಿಮರು ತೆರಳುತ್ತಿದ್ದಾಗ ಅದನ್ನು ತಡೆದು ಹಿಂಸೆ ನೀಡಲಾಗಿತ್ತು. ಮುಸ್ಲಿಂ ಸಹೋದ್ಯೋಗಿಯೊಂದಿಗೆ ಹೋಟೆಲ್‌ನಲ್ಲಿ ಆಹಾರ ಸೇವಿಸುತ್ತಿದ್ದ ಮಹಿಳೆಗೆ ಬೆದರಿಕೆ ಹಾಕಲಾಯ್ತು. ಈ ರೀತಿಯ ಹತ್ತಾರು ಮಾರೆಲ್ ಪೊಲೀಸಿಂಗ್ ಘಟನೆಗಳು ಎರಡು ತಿಂಗಳಲ್ಲಿ ವರದಿಯಾದವು. ಆದರೆ ಬೊಮ್ಮಾಯಿಯವರು ತುಟಿ ಬಿಚ್ಚಲಿಲ್ಲ. ಏಕೆಂದರೆ ಇಲ್ಲಿ ಆರೋಪಿಗಳು ಹಿಂದುತ್ವ ಕಾರ್ಯಕರ್ತರಾಗಿದ್ದರು.

2. ಮತಾಂತರ ನಿಷೇಧ ಕಾಯ್ದೆ

ಅಲ್ಪಸಂಖ್ಯಾತ ಸಮುದಾಯವನ್ನು ಟಾರ್ಗೆಟ್ ಮಾಡುವುದು ಮುಂದುವರಿಯಿತು. ಕ್ರಿಶ್ಚಿಯನ್ನರ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿಗಳಾಗುತ್ತಿರುವುದು ಕಂಡು ಬಂದರೂ ಸರ್ಕಾರ ನಿಷ್ಕ್ರಿಯವಾಗಿತ್ತು.‌‌ ಬಲವಂತವಾಗಿ, ಆಮಿಷವೊಡ್ಡಿ ದಲಿತರನ್ನು ಮತಾಂತರ ಮಾಡಲಾಗುತ್ತಿದೆ ಎಂಬ ವಾದವನ್ನು ತೇಲಿಬಿಡಲಾಯಿತು.‌ ದಲಿತರು ಅನುಭವಿಸುತ್ತಿರುವ ಅಸ್ಪೃಶ್ಯತೆಯ ನೋವು, ಸರ್ವರ್ಣೀಯರಿಂದ ಆಗುತ್ತಿರುವ ದೌರ್ಜನ್ಯಗಳ ಕುರಿತ ಪ್ರಶ್ನೆಗಳಿಗೆ ಈಗಲೂ ಬಿಜೆಪಿ ಹಾಗೂ ಸಂಘಪರಿವಾರದಿಂದ ಉತ್ತರವಿಲ್ಲ.‌‌ ಇದರ ನಡುವೆ ಮತಾಂತರ ನಿಷೇಧ ಮಸೂದೆಯನ್ನು ಜಾರಿಗೊಳಿಸಿ, ಶ್ರೇಣೀಕೃತ ಸಮಾಜದ‌ ಯಥಾಸ್ಥಿತಿಗೆ‌ ಸರ್ಕಾರ ಪ್ರಯತ್ನಿಸಿತು.‌ ಆದರೆ ಕೊನೆ ಕ್ಷಣದ ಹಿನ್ನಡೆಯಿಂದ ಮಸೂದೆ ವಾಪಸ್ ಪಡೆದರು. ಆನಂತರದಲ್ಲಿ ಸುಗ್ರೀವಾಜ್ಞೆ ಜಾರಿಗೆ ತಂದಿದ್ದು ಅದಕ್ಕೆ ರಾಜ್ಯಪಾಲರ ಅಂಕಿತವೂ ಬಿದ್ದಿದೆ.

3. ಈಶ್ವರಪ್ಪನವರ ‘ಭಗವಾದ್ವಜ’ ಪ್ರಕರಣ

ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಒಂದಲ್ಲ‌ ಒಂದು ದಿನ‌ ಹಾರಿಸುತ್ತೇವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಲಾಗಿದೆ ಎಂದು ಕಾಂಗ್ರೆಸ್ ಧ್ವನಿ ಎತ್ತಿತು. ಸದನದಲ್ಲಿ‌ ತ್ರಿವರ್ಣ ಧ್ವಜ ಹಿಡಿದು ಕಾಂಗ್ರೆಸ್ ಶಾಸಕರು ಪ್ರತಿಭಟಿಸಿದರು.‌ ಈಶ್ವರಪ್ಪನವರ ಹೇಳಿಕೆಯನ್ನು ಸದನದಲ್ಲಿಯೇ ಬಿಜೆಪಿ ನಾಯಕರು ಸಮರ್ಥಿಸಲು ಯತ್ನಿಸಿದರು. ಇಷ್ಟೇ ಅಲ್ಲದೆ, ಇತ್ತೀಚೆಗೆ ಆರ್.ಎಸ್.ಎಸ್. ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟ ಅವರು ಕೇಸರಿ ಧ್ವಜವನ್ನು‌ ಕೆಂಪು ಕೋಟೆಯಲ್ಲಿ‌ ಹಾರಿಸುವ ಸಂಘ ಪರಿವಾರದ‌ ಇಂಗಿತವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಮತ್ತೊಂದು ಗಮನಾರ್ಹ ಸಂಗತಿ ಏನೆಂದರೆ, 2021, ಜನವರಿ 26ರಂದು ದೆಹಲಿಯಲ್ಲಿ ರೈತರು ಟ್ರಾಕ್ಟರ್ ರ್ಯಾಲಿ ನಡೆಸಿದಾಗ ಕೆಲವು ಕಿಡಿಗೇಡಿಗಳು ಕೆಂಪುಕೋಟೆಗೆ ನುಗ್ಗಿ ಬೇರೊಂದು ಧ್ವಜ ಹಾರಿಸಿದ್ದನ್ನು ದೊಡ್ಡ ಮಟ್ಟದಲ್ಲಿ ಪ್ರಶ್ನಿಸಿದ್ದ ಮುಖ್ಯವಾಹಿನಿ ಮಾಧ್ಯಮಗಳೂ ಈಗ ಮೌನವಹಿಸಿದ್ದವು. ರೈತರನ್ನು ಖಲಿಸ್ತಾನಿಗಳು, ಪ್ರತ್ಯೇಕತಾವಾದಿಗಳು ಎಂದಿದ್ದವರು ಇಂದು ತುಟಿಬಿಚ್ಚುತ್ತಿಲ್ಲ! ಭಗವಾಧ್ವಜದ ಬಗ್ಗೆ ಒಲವು ತೋರಿದವರು ಇಂದು ತ್ರಿವರ್ಣಧ್ವಜದ ಕುರಿತು ಮಾತನಾಡುತ್ತಿದ್ದಾರೆ.

4. ಹಿಜಾಬ್ v/s ಕೇಸರಿ ಶಾಲು ವಿವಾದ

ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತಗಳನ್ನು‌ ಧರಿಸಬಾರದು, ಏಕರೂಪತೆ ಪಾಲಿಸಬೇಕೆಂದು‌ ಆರಂಭವಾದ ಪ್ರಕರಣ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು, ಹೈಕೋರ್ಟ್ ಮೆಟ್ಟಿಲೇರಿ ಈಗ ಸುಪ್ರೀಂಕೋರ್ಟ್ ವರೆಗೆ ಹೋಗಿದೆ.‌ ಹಿಜಾಬ್ ಧರಿಸುವುದು ಇಸ್ಲಾಂನಲ್ಲಿ ಕಡ್ಡಾಯ‌‌ ಆಚರಣೆಯಲ್ಲ ಎಂದಿರುವ ಕರ್ನಾಟಕ ಹೈಕೋರ್ಟ್ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ. ತಲೆಯ ಮೇಲೆ ಧರಿಸುವ ಬಟ್ಟೆಯೊಂದನ್ನು ವಿರೋಧಿಸಿ, ಅದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸುತ್ತೇವೆಂದು ಉಡುಪಿಯ ಕಾಲೇಜೊಂದರಲ್ಲಿ ಆರಂಭವಾದ ವಿವಾದ ಇಡೀ ರಾಜ್ಯವನ್ನು ವ್ಯಾಪಿಸಿತು.

ಹಿಜಾಬ್ ವಿಚಾರಣೆ ನಡೆಯುವಾಗ ಮಧ್ಯಂತರ ಆದೇಶವಿದ್ದಾಗಲಂತೂ ಮಕ್ಕಳ ಹಕ್ಕುಗಳ ಉಲ್ಲಂಘನೆಯಾದವು.‌ ಯಾವುದೇ ಸ್ಪಷ್ಟೀಕರಣ ನೀಡದೆ ಶಿಕ್ಷಣ ಇಲಾಖೆ ಮೌನವಹಿಸಿತ್ತು.‌ ಈಗ ಹಿಜಾಬ್ ನೆಪದಲ್ಲಿ ವಿದ್ಯಾರ್ಥಿನಿಯರ ಶಿಕ್ಷಣವನ್ನೇ ವಂಚಿಸಲಾಯಿತು. ಶಿಕ್ಷಣ ಮೂಲಭೂತ ಹಕ್ಕೆಂಬುದನ್ನು ಸರ್ಕಾರ ಮರೆತಿದೆ. ಹಿಜಾಬ್ ಪ್ರಕರಣ ಮುನ್ನಲೆಗೆ ಬಂದಾಗ ಹೊರಗಿನ ಶಕ್ತಿಗಳು ವಿದ್ಯಾರ್ಥಿಗಳನ್ನು ಪ್ರಚೋದಿಸಿ ಕೇಸರಿ ಶಾಲು ನೀಡಿದ್ದು ದಾಖಲೆ ಸಮೇತ ವರದಿಯಾದರೂ ಸರ್ಕಾರ‌ ಮೆಜಾರಿಟೇರಿಯನ್ ನಿಲುವಿಗೆ ಅಂಟಿ ಕುಳಿತಿತ್ತು. ಪ್ರಜೆಗಳೆಲ್ಲ ಒಂದೇ ಎಂಬುದನ್ನು ಸರ್ಕಾರ ಮರೆತಿದೆ. ಇಲ್ಲಿಯವರೆಗೆ ಇರದಿದ್ದ ಹಿಜಾಬ್ ಸಮಸ್ಯೆಯನ್ನು ಬೇಕಂತಲೇ ಸೃಷ್ಟಿಸಿದ್ದು ಬೊಮ್ಮಾಯಿ ಸರ್ಕಾರದ ಮಹಾನ್ ಸಾಧನೆ. ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರ ಕೊಡುಗೆ ಇದರಲ್ಲಿ ಮಹತ್ವದ ಪಾತ್ರ ವಹಿಸಿದೆ.

5. ಹರ್ಷ ಕೊಲೆ ಪ್ರಕರಣ

ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಕೆಲವು ಮುಸ್ಲಿಂ ಯುವಕರಿಂದ ಕೊಲೆಯಾದ ಬಳಿಕ ಹೆಣದ ರಾಜಕಾರಣಕ್ಕೆ ರಾಜ್ಯ ಸಾಕ್ಷಿಯಾಯಿತು.‌ ಕೊಲೆಗೆ ಕಾರಣ ಬಹಿರಂಗವಾಗುವ ಮುನ್ನವೇ ಹೆಣವನ್ನು ಇಟ್ಟುಕೊಂಡು ಮಾಡಿದ ರಾಜಕಾರಣವನ್ನು ಮಾತ್ರ ಮರೆಯಲಾಗದು.‌ ಕೋಮುಸೂಕ್ಷ್ಮತೆ ಬಲ್ಲವರು ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದರು. ಯಾರೂ ಇಂತಹ ಪ್ರಕರಣದ ಸಂದರ್ಭದಲ್ಲಿ ಹೆಣದ ಮೆರವಣಿಗೆಗೆ ಅವಕಾಶ ನೀಡುವುದಿಲ್ಲ. ಆದರೆ‌ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಅವರೇ ಮೆರವಣಿಗೆಗೆ ನೇತೃತ್ವ ವಹಿಸಿದ್ದರು.‌ ಅದರಲ್ಲೂ ನಿಷೇದಾಜ್ಞೆಯ ನಡುವೆ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು.‌‌ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಮೆರವಣಿಗೆ ಸಾಗಿತು.‌ ಮುಸ್ಲಿಂ ಮನೆಗಳನ್ನು, ಮದ್ರಾಸಾಗಳನ್ನು‌ ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸಿದರು.‌ ನಿರಪರಾಧಿ ಮುಸ್ಲಿಮರು ಗಾಯಗೊಂಡರು. ಸಾರ್ವಜನಿಕ ಆಸ್ತಿ ಹಾನಿ ಮಾಡಲಾಯಿತು. ಅಲ್ಲಲ್ಲಿ ಬೆಂಕಿ ಹಚ್ಚಲಾಯಿತು‌. ಪೊಲೀಸರ ಎದುರೇ ಈ ದೌರ್ಜನ್ಯಗಳು ನಡೆದವು. ಈಶ್ವರಪ್ಪ, ಸಿ.ಟಿ.ರವಿಯಂಥವರು ಎಂದಿನಂತೆ ವಿಷ ಉಗುಳುವ, ಮನಸ್ಸುಗಳನ್ನು ಒಡೆಯುವ ಮಾತುಗಳನ್ನು ಮುಂದುವರಿಸಿದ್ದರು.

ಇದನ್ನೂ ಓದಿರಿ: ಸಿದ್ದರಾಮಯ್ಯ 75: ಹಳೇ ರಾಜಕಾರಣದ ಕಡೇ ವರಸೆ

ಹರ್ಷನ ಮೇಲೆಯೂ ಪ್ರಕರಣಗಳಿದ್ದವು.‌ ಆತನ ಕೊಲೆ ಪ್ರಕರಣ ತನಿಖೆಯಾಗುತ್ತಿದೆ. ಸ್ಥಿತಿ ಹೀಗಿರುವಾಗ ಮುಖ್ಯಮಂತ್ರಿ ಬೊಮ್ಮಾಯಿಯವರು‌ ಸಿಎಂ ನಿಧಿಯಿಂದ ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ನೀಡಿದರು. ಇದೇ ಸಮಯದಲ್ಲಿ ಕೋಮು ಕಾರಣಕ್ಕೆ, ಬಜರಂಗದಳ ಯುವಕರಿಂದ ಕೊಲೆಯಾದ ನರಗುಂದದ ಸಮೀರ್ ಶಹಾಪುರನನ್ನು ಕಳೆದುಕೊಂಡ ಮುಸ್ಲಿಂ ಕುಟುಂಬ ದುಃಖಿಸುತ್ತಿತ್ತು.‌ ಸರ್ಕಾರ ಈ ಕುಟುಂಬದತ್ತ ಕಣ್ಣೆತ್ತಿಯೂ ನೋಡಲಿಲ್ಲ. ಅಷ್ಟೇ ಏಕೆ, ಧರ್ಮಸ್ಥಳದ ಕನ್ಯಾಡಿಯಲ್ಲಿ ದಲಿತ ಯುವಕ ದಿನೇಶ್ ಅವರನ್ನು ಬಜರಂಗದ ಮುಖಂಡ ಕೃಷ್ಣ ಎಂಬಾತ ಕೊಂದು ಹಾಕಿದ. ಆದರೆ ದಿನೇಶ್ ಜೀವಕ್ಕೆ ಯಾವ ಬೆಲೆಯೂ ಇಲ್ಲವಾಗಿತ್ತು.

6. ಕಾಶ್ಮೀರ್ ಫೈಲ್ಸ್ ಗೆ ತೆರಿಗೆ ವಿನಾಯಿತಿ

ಬಿಜೆಪಿ ಪ್ರೊಪಗಾಂಡಕ್ಕೆ ಅವಕಾಶ ನೀಡಿರುವ, ಕಾಶ್ಮೀರಿ ಪಂಡಿತರ ಕೊಲೆ ಹಾಗೂ ವಲಸೆಗೆ ಸಂಬಂಧಿಸಿದಂತೆ ಅರ್ಧ ಸತ್ಯವನ್ನು ಹೇಳುವ ‘ಕಾಶ್ಮೀರ್ ಫೈಲ್ಸ್’ ಸಿನಿಮಾಕ್ಕೆ ಆರು ತಿಂಗಳ ತೆರಿಗೆ ವಿನಾಯಿತಿಯನ್ನು ಬೊಮ್ಮಾಯಿ ಘೋಷಿಸಿದ್ದರು. ಇಡೀ ಮುಸ್ಲಿಂ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ, ಕಾಶ್ಮೀರಿಯತ್ (ಬಹುತ್ವವನ್ನು ಸಾರುವ ಕಾಶ್ಮೀರಿ ಅಸ್ಮಿತೆ) ನಿರ್ಲಕ್ಷಿಸುವ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾಕ್ಕೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಲಾಯಿತು. ಬೊಮ್ಮಾಯಿ ಒಂದು ಹೆಜ್ಜೆ ಮುಂದೆ ಹೋಗಿ ಆರು ತಿಂಗಳ ವಿನಾಯಿತಿ ಘೋಷಿಸಿದರು.

7. ಮುಸ್ಲಿಂ ಸಮುದಾಯಗಳನ್ನು ವ್ಯಾಪಾರದಿಂದ ಹೊರಗಿಡುವ ಪ್ರವೃತ್ತಿ

ಹಿಜಾಬ್ ತೀರ್ಪು ವಿರೋಧಿಸಿ ಮುಸ್ಲಿಂ ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಒಂದು ದಿನದ ಬಂದ್ ಆಚರಿಸಿದರು.‌ ಕರಾವಳಿ ಭಾಗದಲ್ಲಿ ಯಶಸ್ವಿ ಕೂಡ ಆಗಿತ್ತು. ಪ್ರತಿಭಟನೆ ನಡೆಸುವುದು ಎಲ್ಲರ ಸಾಂವಿಧಾನಿಕ ಹಕ್ಕು ಕೂಡ. ಹಿಜಾಬ್ ಪ್ರಕರಣ ಸುಪ್ರೀಂನಲ್ಲಿದೆ.‌ ಹೀಗಾಗಿ‌ ಹೈಕೋರ್ಟ್ ತೀರ್ಪು ಅಂತಿಮವೇನಲ್ಲ.‌ ಸುಪ್ರೀಂ ಕೋರ್ಟ್ ಶಬರಿಮಲೆಗೆ ಮಹಿಳೆಯರ ಪ್ರವೇಶ ಸಂಬಂಧ ತೀರ್ಪು ನೀಡಿದಾಗ ಸಂಘ ಪರಿವಾರ ಪ್ರತಿಭಟಿಸಿತ್ತು. ಆದರೆ‌ ಹಿಜಾಬ್ ನಿಷೇಧ ವಿರೋಧಿಸಿ ಮುಸ್ಲಿಂ ವರ್ತಕರು ಪ್ರತಿಭಟನೆ ಮಾಡಿದರೆಂಬ ಒಂದೇ ಕಾರಣಕ್ಕೆ ಹಿಂದೂಗಳ ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಂ ವರ್ತಕರು ಭಾಗವಹಿಸುವಂತಿಲ್ಲ‌ ಎಂದು ನಿರ್ಬಂಧ ಹೇರುವ ಪ್ರವೃತ್ತಿಗಳು ಕಂಡು ಬಂದವು. ಇದನ್ನೂ ಬಿಜೆಪಿ ಸರ್ಕಾರ ಸಮರ್ಥನೆ ಮಾಡಿಕೊಂಡಿತು. ಹಿಂದೂ ದೇವಾಲಯಗಳ ಪ್ರಾಂಗಣದಲ್ಲಿ ಬೇರೆ ಧರ್ಮಿಯರ ವ್ಯಾಪಾರವನ್ನು ಈ ಹಿಂದೆಯೇ ನಿಷೇಧಿಸಲಾಗಿದೆ ಎಂದು ಬೊಮ್ಮಾಯಿ ಸರ್ಕಾರ ಹೇಳಿತು.‌ 2021 ಡಿಸೆಂಬರ್ ತಿಂಗಳಲ್ಲಿ ಸುಪ್ರೀಂ ಈ ವಿಚಾರವಾಗಿ ತೀರ್ಪು ನೀಡಿದ್ದು, ದೇವಾಲಯ ಸಮೀಪ ಇತರ ಧರ್ಮದವರಿಗೆ ಅವಕಾಶ ನಿರಾಕರಿಸಬಾರದು ಎಂದು‌ ಆದೇಶಿಸಿರುವುದು ಗಮನಾರ್ಹ.

8. ಪಠ್ಯಪುಸ್ತಕ ಕೇಸರೀಕರಣ

ರಾಷ್ಟ್ರಕವಿ ಕುವೆಂಪು ಅವರು ಬರೆದ ನಾಡಗೀತೆಯನ್ನು ತಿರುಚಿದ ಆರೋಪವನ್ನು ಎದುರಿಸುತ್ತಿರುವ, ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗಳಿಗೆ ಹೆಸರಾದ ರೋಹಿತ್‌ ಚಕ್ರತೀರ್ಥ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಪಠ್ಯಪುಸ್ತಕ ಪರಿಶೀಲನಾ ಸಮಿತಿಯನ್ನು ರಚಿಸಿತು. ಆದರೆ ಯಾವುದೇ ಆದೇಶವಿಲ್ಲದೆ ಈ ಸಮಿತಿಯು ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಿತ್ತು. ಬಹುತೇಕ ಒಂದೇ ಸಮುದಾಯದ ಜನರಿದ್ದ ಈ ಸಮಿತಿಯು ಒಂದರಿಂದ ಹತ್ತನೇ ತರಗತಿವರೆಗಿನ ಪಠ್ಯಪುಸ್ತಕಗಳಲ್ಲಿ ಮಾಡಿದ್ದ ಪರಿಷ್ಕರಣೆಗಳು ಆತಂಕಕಾರಿಯಾಗಿದ್ದವು. ಯಾವುದೇ ಆದೇಶವಿಲ್ಲದೆ ಆಗಿದ್ದ ಪರಿಷ್ಕರಣೆಯನ್ನು ಘಟನೋತ್ತರ ಆದೇಶದ ಮೂಲಕ ಸರ್ಕಾರ ಒಪ್ಪಿಕೊಂಡಿತ್ತು. ಮಕ್ಕಳ ಮನಸ್ಸಿನಲ್ಲಿ ಹಿಂದುತ್ವವನ್ನು ತುಂಬುವ, ವೈದಿಕತೆಯನ್ನು ವೈಭವೀಕರಣ ಮಾಡುವ ಪಠ್ಯಗಳ ಕುರಿತು ಆಕ್ಷೇಪಗಳು ಬಂದವು. ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡಗೇವಾರ್‌ ಪಾಠವನ್ನು ಸೇರಿಸಲಾಗಿತ್ತು. ಭಗವಾಧ್ವಜದ ಕುರಿತು ಹೆಡಗೇವಾರ್‌ ಹೇಳಿದ್ದನ್ನು ಧ್ವಜ ಎಂದು ತಿದ್ದಲಾಗಿತ್ತು. ಬಸವಣ್ಣನವರನ್ನು ವೈದಿಕತೆಯ ಕಣ್ಣಿನಲ್ಲಿ ನೋಡಲಾಗಿತ್ತು. ಪೆರಿಯಾರ್‌, ನಾರಾಯಣಗುರುಗಳ ಪಾಠವನ್ನು ಹತ್ತನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಕೈಬಿಡಲಾಗಿತ್ತು. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಎಂಬ ಸಾಲನ್ನು ಕಿತ್ತುಬಿಸಾಡಲಾಗಿತ್ತು. ಮಕ್ಕಳ ಮನಸ್ಸಿನಲ್ಲಿ ಸಂಕುಚಿತ ದೃಷ್ಟಿಕೋನವನ್ನು ತುಂಬುವ ಪಠ್ಯಪುಸ್ತಕದ ಕುರಿತು ಬರೆಯುತ್ತಾ, ಮಾತನಾಡುತ್ತಾ ಹೋದರೆ- ಅದು ನಿಲ್ಲದ ಕಥೆಯಾಗುತ್ತದೆ. ನಾಡಿನ ದೌಭಾರ್ಗದ ಕುರಿತು ವಿಷಾದ ಆವರಿಸುತ್ತದೆ.

ಪಠ್ಯಪುಸ್ತಕದಲ್ಲಿ ಆಗಿರುವ ಸಾಲು ಸಾಲು ಎಡವಟ್ಟುಗಳನ್ನು ವಿಚಾರವಂತರು ಎತ್ತಿ ಹಿಡಿದರು. ದೊಡ್ಡ ಮಟ್ಟದ ಹೋರಾಟಗಳು ನಡೆದ ಬಳಿಕ ಸರ್ಕಾರ ತನ್ನ ತಪ್ಪುಗಳನ್ನು ತಿದ್ದುಕೊಳ್ಳುವ ಭರವಸೆ ನೀಡಿತು. ಆದರೆ ಪಠ್ಯಪುಸ್ತಕದಲ್ಲಿ ಕೇವಲ ಎಂಟು ತಪ್ಪುಗಳನ್ನು ತಿದ್ದಿಕೊಳ್ಳುವ ಆದೇಶ ಹೊರಡಿಸಿತು. (ಪಠ್ಯಪುಸ್ತಕ ವಿವಾದದ ಕುರಿತು ‘ನಾನುಗೌರಿ.ಕಾಂ’ ನಿರಂತರವಾಗಿ ವರದಿ ಮಾಡಿದ್ದು, ನಮ್ಮ ವೆಬ್‌ಸೈಟ್‌ನಲ್ಲಿ ‘ಪಠ್ಯ’ ಎಂದು ಸರ್ಚ್ ಮಾಡಿದರೆ ಸಾಕು ನೂರಕ್ಕೂ ಹೆಚ್ಚು ವರದಿಗಳು ಓದಲು ಲಭ್ಯವಿವೆ.)

9. ಮಸೂದ್‌, ಪ್ರವೀಣ್‌, ಫಾಝಿಲ್‌ ಹತ್ಯೆ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಇತ್ತೀಚೆಗೆ ಮಸೂದ್ ಎಂಬ ಮುಸ್ಲಿಂ ಯುವಕನನ್ನು ಕೊಲೆ ಮಾಡಲಾಯಿತು. ಕ್ಷುಲ್ಲಕ ಕಾರಣಕ್ಕೆ ಮಸೂದ್ (18) ಮೇಲೆ ಕೆಲವರು ಹಲ್ಲೆ ನಡೆಸಿ ಕೊಂದಿದ್ದರು. ನಂತರದಲ್ಲಿ ಅದೇ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಎಂಬ ಯುವಕನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದರು. ಇಷ್ಟಕ್ಕೆ ನಿಲ್ಲದೆ ಒಂದು ದಿನದ ನಂತರದಲ್ಲಿ ಮಂಗಳೂರಿನ ಸುರತ್ಕಲ್‌ನಲ್ಲಿ ಫಾಝಿಲ್‌ ಎಂಬ ಅಮಾಯಕನನ್ನು ಕೊಲ್ಲಲಾಯಿತು. ಈ ಪ್ರಕರಣಗಳ ಹಿಂದೆ ಕೋಮುದ್ವೇಷ ಇರುವ ಸಾಧ್ಯತೆಗಳು ದಟ್ಟವಾಗಿವೆ. ಪ್ರಕರಣದ ತನಿಖೆ ಮುಂದುವರಿದಿದೆ. ಆದರೆ ಈ ಪ್ರಕರಣಗಳಲ್ಲಿ ಸರ್ಕಾರ ಇಟ್ಟಿರುವ ಹೆಜ್ಜೆ ಮಾತ್ರ ಸಂವಿಧಾನವನ್ನು ಅಣಕಿಸುವಂತಿದೆ.

ಇದನ್ನೂ ಓದಿರಿ: ಕೋಮುದ್ವೇಷ: ಕಾಳಿ ಸ್ವಾಮಿ ಮಾಡಿದ ಸಾಲುಸಾಲು ಪ್ರಚೋದನೆಗಳಿವು!

ಕೊಲೆಯಾದ ಮಸೂದ್‌ಗಾಗಲೀ, ಫಾಝಿಲ್‌ಗಾಗಲೀ ಸರ್ಕಾರ ಪರಿಹಾರವನ್ನು ಘೋಷಿಸಲಿಲ್ಲ. ಸರ್ಕಾರ ಇಲ್ಲಿಯೂ ತಾರತಮ್ಯ ನೀತಿ ಅನುಸರಿಸಿತು. ಪ್ರವೀಣ್‌ ಮನೆಗೆ ಬಿಜೆಪಿಯ ಜನಪ್ರತಿನಿಧಿಗಳು ಭೇಟಿ ನೀಡಿದರು. ಆದರೆ ಅಮಾಯಕರಾದ ಮಸೂದ್‌, ಫಾಝಿಲ್‌ ಕುಟುಂಬವನ್ನು ಭೇಟಿ ಮಾಡಿ ಕನಿಷ್ಠ ಸಂತ್ವಾನವನ್ನು ಹೇಳುವ ಸೌಜನ್ಯವನ್ನೂ ತೋರಲಿಲ್ಲ. ಸಂವಿಧಾನವನ್ನು ಪಾಲಿಸುವುದಾಗಿ, ಯಾವುದೇ ಜಾತಿ, ಮತದ ಆಧಾರದಲ್ಲಿ ಅಧಿಕಾರ ನಡೆಸುವುದಿಲ್ಲವೆಂದು ಪ್ರಮಾಣ ವಚನ ಸ್ವೀಕರಿಸಿದ ಸಿಎಂ ವರ್ತನೆ ಅತ್ಯಂತ ಬಾಲಿಶವಾಗಿತ್ತು. ಈ ಕೊಲೆಗಳಿಂದ ಜರ್ಜರಿತವಾದ ಪೋಷಕರ ನೋವಿಗೆ ಧರ್ಮ, ಜಾತಿಯ ಸೋಂಕು ಇರುವುದಿಲ್ಲ ಎಂಬ ಕನಿಷ್ಠ ಅಂತಃಕರಣವೂ ರಾಜ್ಯವನ್ನಾಳುವ ಪಕ್ಷಕ್ಕೆ ಇಲ್ಲವೇ ಎಂಬ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ.

(ಮತ್ತೊಂದು ವಿಷಯ, “ಬಿಜೆಪಿ ಅಧಿಕಾರವಧಿಯಲ್ಲಿಯೂ ಹಿಂದೂಗಳ ಕೊಲೆಯಾಗುತ್ತಿದೆ” ಎಂದು ಬೀದಿಗಿಳಿದ ಕಾರ್ಯಕರ್ತರು, ತನ್ನದೇ ಪಕ್ಷದ ಮುಖಂಡ ಸಂತೋಷ್ ಪಾಟೀಲ್‌, ನಲವತ್ತು ಪರ್ಸೆಂಟ್ ಕಮಿಷನ್‌ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಾಗ ಎಲ್ಲಿದ್ದರು ಎಂಬ ಪ್ರಶ್ನೆಯೂ ಮುಖ್ಯವಾಗುತ್ತದೆ)

ಇದನ್ನೂ ಓದಿರಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಸೊರಬ: ಬಂಗಾರಪ್ಪ ಪುತ್ರರ ಕಲಹದಲ್ಲಿ ಕೇಸರಿ ಕಸರತ್ತು!

ಕೊನೆಯದಾಗಿ,

ಇಷ್ಟೆಲ್ಲ‌ ದ್ವೇಷಕಾರುವ ಪ್ರವೃತ್ತಿ ಹೆಚ್ಚಾಗುತ್ತಿರುವಲ್ಲಿ ಪೊಲೀಸ್ ಇಲಾಖೆಯ ನಿಷ್ಕ್ರಿಯತೆಯೂ ಇದೆ ಎಂಬ ಮಾತುಗಳು ಬರುತ್ತಿವೆ. ಬೊಮ್ಮಾಯಿ ಮತ ರಾಜಕಾರಣದ ಲೆಕ್ಕಾಚಾರ ಹಾಕುತ್ತ ರಾಜ್ಯದ ಅಭಿವೃದ್ದಿಯನ್ನು ಮರೆತ್ತಿದ್ದಾರೆ. ಮುಸ್ಲಿಂ ದ್ವೇಷದ ರಾಜಕಾರಣಕ್ಕೆ ಗೊಬ್ಬರ, ನೀರು ಎರೆಯುತ್ತಿದ್ದಾರೆ.

ಇಲ್ಲಿ ಮುಖ್ಯವಾದ ಘಟನೆಗಳನ್ನು ಮಾತ್ರ ಪಟ್ಟಿ ಮಾಡಲಾಗಿದೆಯಷ್ಟೇ… ಸರ್ಕಾರದ ವಿವಿಧ ಕಾರ್ಯಕ್ರಮಗಳಲ್ಲಿ ‌ಹೇಗೆ ಕೋಮುದ್ವೇಷ ಹೊಗೆಯಾಡುತ್ತಿದೆ ಎಂಬುದನ್ನು ಬರೆಯುತ್ತಾ ಹೋದರೆ ಇದು ಮುಗಿಯದ ಪುರಾಣವಾಗುತ್ತದೆ…‌

ಬೆಲೆ ಏರಿಕೆ, ನೀಟ್, ಎನ್ಇಪಿಯಿಂದ ವಿದ್ಯಾರ್ಥಿಗಳ ಹೈರಾಣು, ಶಿಕ್ಷಣ, ನಿರುದ್ಯೋಗ, ಬಡತನ, ಹಸಿವು, ದಲಿತ, ರೈತ, ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯದಗಳ ನಿಜದ ನೋವು, ಬೆಲೆ ಏರಿಕೆಯ ಬಿಸಿ- ಎಲ್ಲವೂ ಸರ್ಕಾರಕ್ಕೆ ಬೇಡವಾದ ಸಂಗತಿಗಳಾಗಿವೆ. ಸರ್ಕಾರಕ್ಕೆ ಜನಸಾಮಾನ್ಯ ಮೇಲೆ ಕಾಳಜಿ ಇಲ್ಲವೇನೋ ಎಂಬ ಅನುಮಾನಗಳು ಮೂಡುತ್ತಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...