ಒಂದು ಲೀಟರ್ ಪೆಟ್ರೋಲ್‌ನ ಮೂಲ ಬೆಲೆ 36 ರೂಪಾಯಿಗಳಿದ್ದರೆ ಅದರ ಮೇಲೆ ಕೇಂದ್ರ ಸರ್ಕಾರವೊಂದೇ 32.90 ರೂ ಅಬಕಾರಿ ಸುಂಕ ವಿಧಿಸುತ್ತದೆ. ರಾಜ್ಯಗಳು ಸುಮಾರು 27 ರೂಪಾಯಿಯಷ್ಟು ತೆರಿಗೆ ವಿಧಿಸುತ್ತವೆ. ಸಾಗಣೆ, ಸಂಸ್ಕರಣೆ ಮತ್ತು ಡೀಲರ್ ಕಮಿಷನ್ 8ರೂ ಆಗುತ್ತದೆ. ಅಲ್ಲಿಗೆ ಪೆಟ್ರೋಲ್ ಬೆಲೆ 104ರೂ ದಾಟುತ್ತದೆ. ನಾವು ವಾಹನಗಳನ್ನು ಬಳಸುತ್ತಿಲ್ಲ, ಹೀಗಾಗಿ ಪೆಟ್ರೋಲ್ ಬೆಲೆ ಏರಿಕೆಯಿಂದ ನಮಗೆ ತೊಂದರೆ ಇಲ್ಲ ಎಂದು ಯಾರಾದರೂ ಅಂದುಕೊಂಡರೆ ಅವರ ತಿಳಿವಳಿಕೆ ತಪ್ಪು ಎನ್ನುವುದರಲ್ಲಿ ಎರಡು ಮಾತಿಲ್ಲ. ಬೇಡಿ ಬದುಕುವವರೂ ಸೇರಿದಂತೆ ಈ ದೇಶದ ಪ್ರತಿಯೊಬ್ಬ ಪ್ರಜೆಯ ಜೀವನವೂ ಪ್ರತಿದಿನ ತುಟ್ಟಿಯಾಗುತ್ತಿದೆ.
ಕರ್ನಾಟಕದಲ್ಲಿ 2 ಕೋಟಿಗೂ ಅಧಿಕ ನೋಂದಾಯಿತ ವಾಹನಗಳಿವೆ. ಇವುಗಳ ಮಾಲಿಕರು ನೇರವಾಗಿ ಪೆಟ್ರೋಲ್ ಬೆಲೆ ಏರಿಕೆಯಿಂದ ಬಾಧಿತರಾದರೆ ಕರ್ನಾಟಕದ ಉಳಿದ 5 ಕೋಟಿ ಜನರು ಸಹ ಪೆಟ್ರೋಲ್ ಬೆಲೆ ಏರಿಕೆಯ ದುಷ್ಪರಿಣಾಮಗಳನ್ನು ಅನುಭವಿಸಬೇಕಾಗಿದೆ.
ನೇರ ಪರಿಣಾಮ
* ಇಂಧನ ಬೆಲೆ ಏರಿಕೆಯಿಂದಾಗಿ ಬಸ್, ರೈಲು, ಆಟೋ, ಟ್ಯಾಕ್ಸಿ ದರಗಳು ಹೆಚ್ಚಾಗುತ್ತವೆ.
* ಸ್ವಂತ ವಾಹನಕ್ಕೆ ದುಬಾರಿ ಬೆಲೆ ತೆತ್ತು ಪೆಟ್ರೋಲ್ ಹಾಕಿಸಬೇಕಾಗುತ್ತದೆ. ನನ್ನದೇ ಸ್ವಂತ ಉದಾಹರಣೆಯ ಮೂಲಕ ಹೇಳುವುದಾದರೆ 2020ರ ಜೂನ್‌ನಲ್ಲಿ ಬೈಕ್ ಫುಲ್‌ಟ್ಯಾಂಕ್ ಮಾಡಲು 882ರೂ ತಗುಲುತ್ತಿತ್ತು (73.55ರೂ 12ಲೀ). ಆಗಸ್ಟ್ 2021ರಲ್ಲಿ ಫುಲ್‌ಟ್ಯಾಂಕ್ ಮಾಡಲು 1,260ರೂ ತಗುಲುತ್ತಿದೆ (105-12ಲೀ). ಅಂದರೆ 378ರೂ ಹೆಚ್ಚಾಗಿದೆ. ತಿಂಗಳಿಗೆ ಎರಡು ಬಾರಿ ಫುಲ್ ಟ್ಯಾಂಕ್ ಮಾಡಿಸಿದರೆ 756ರೂ ಹೆಚ್ಚು ಪಾವತಿಸಬೇಕಾಗಿದೆ. ಇದು ನನ್ನ ಪರಿಸ್ಥಿತಿಯಾದರೆ ಬಹುದೂರ ಪ್ರಯಾಣಿಸುವವರ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಯೋಚಿಸಿ.
* ಡೀಸೆಲ್ ಬೆಲೆಯಲ್ಲಿನ ಹೆಚ್ಚಳದಿಂದಾಗಿ ಎಲ್ಲಾ ಸಾಗಣೆ ವಾಹನಗಳು ಬಾಡಿಗೆ ಏರಿಸಬೇಕಾಗುತ್ತದೆ. ಇದರಿಂದ ಆಹಾರ, ತರಕಾರಿ, ದಿನಸಿ, ಹಣ್ಣು ಸೇರಿದಂತೆ ದಿನಬಳಕೆಯ ಪ್ರತಿಯೊಂದು ವಸ್ತುಗಳ ಬೆಲೆ ಏರುತ್ತದೆ.
* ಟ್ರ್ಯಾಕ್ಟರ್, ಟಿಲ್ಲರ್, ಲಗೇಜ್ ವಾಹನಗಳಿಗೆ ಡೀಸೆಲ್ ಬೇಕಿರುವುದರಿಂದ ಕೃಷಿಯ ಮೇಲಿನ ಹೂಡಿಕೆ ಹೆಚ್ಚಾಗುತ್ತದೆ. ರೈತರಿಗೆ ಹೊರೆಯಾಗುತ್ತದೆ.
ಕಳೆದ ಹನ್ನೊಂದು ವರ್ಷಗಳ ಸರಾಸರಿ ದರ (ದೆಹಲಿಯಲ್ಲಿ ಪ್ರತಿ ಲೀಟರ್‌ಗೆ)
ಓಲಾ ಉಬರ್ ಚಾಲಕರ ದುಸ್ಥಿತಿ
ಕೊರೊನಾ ಬರುವ ಮೊದಲು ಡೀಸೆಲ್ ಲೀಟರ್‌ಗೆ ಸುಮಾರು 60ರೂ ಇತ್ತು. 100% ಪ್ಯಾಸೆಂಜರ್‌ಗಳು ಸಿಗುತ್ತಿದ್ದರು. ಪ್ರತಿ ದಿನ, ಶ್ರಮವಹಿಸಿ ಕೆಲಸ ಮಾಡಿ, 1000 ರುಪಾಯಿಗೆ ಡೀಸೆಲ್ ಹಾಕಿಸಿದರೆ ಎಲ್ಲಾ ಖರ್ಚು ಕಳೆದು ಸರಾಸರಿ 1000ರೂನಿಂದ 2000ದವರೆಗೂ ನಮ್ಮ ಡ್ರೈವರ್‌ಗಳು ಲಾಭ ಗಳಿಸುತ್ತಿದ್ದರು. ಈಗ ಡೀಸೆಲ್ ಲೀಟರ್‌ಗೆ 95ರೂ ತಲುಪಿದೆ. ಆದರೆ ಹಲವು ಕಾರಣಗಳಿಂದ 25% ಪ್ಯಾಸೆಂಜರ್‌ಗಳೂ ಸಿಗುತ್ತಿಲ್ಲ. ಈಗ ದಿನವೆಲ್ಲಾ ದುಡಿದರೂ ಡೀಸೆಲ್ ಮತ್ತಿತರ ಎಲ್ಲಾ ಖರ್ಚು ಕಳೆದು 300-500ರೂ ಉಳಿಸುವುದೇ ಕಷ್ಟವಾಗುತ್ತಿದೆ. ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ವಾಹನ ಲೋನ್ ಕಟ್ಟಿ ನಮ್ಮ ಕುಟುಂಬವನ್ನು ಸಾಕುವುದು ಹೇಗೆ ಎನ್ನುತ್ತಾರೆ ಓಲಾ-ಉಬರ್ ವಾಹನ ಚಾಲಕರ ಅಸೋಸಿಯೇಷನ್ ಅಧ್ಯಕ್ಷರಾದ ತನ್ವೀರ್.
ನಾವು ಅಂದು ದುಡಿದು ಅಂದು ಬದುಕುವ ಸ್ಥಿತಿಯವರು. ಆದರೆ ಕೊರೊನಾ ಲಾಕ್‌ಡೌನ್ ನಂತರ ಚಾಲಕರ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಹಿಂದೆ ಕಾರು ಓನರ್ ಅಂದ್ರೆ ಗೌರವ ಇತ್ತು. ಈಗ ನಮ್ಮ ಕಾರು ಕೊಂಡುಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಇತ್ತ ಬಾಡಿಗೆ ಸಹ ಸಿಗುತ್ತಿಲ್ಲ. ಇನ್ಷುರೆನ್ಸ್ ಹಣ ಕಟ್ಟಲಾಗದೆ, ಲೋನ್ ಕಟ್ಟಲಾಗದೇ ಒದ್ದಾಡುತ್ತಿದ್ದೇವೆ. ನಾವು ಸ್ವಯಂ ಉದ್ಯೋಗ ಮಾಡಿಕೊಂಡು ನಿರುದ್ಯೋಗ ಸಮಸ್ಯೆ ನಿವಾರಿಸುತ್ತಿದ್ದೇವೆ ಎಂಬ ಹೆಮ್ಮೆಯಿತ್ತು. ಬೆಂಗಳೂರಿನಲ್ಲಿ 1 ಲಕ್ಷದಷ್ಟು ಕಾರುಗಳಿದ್ದವು. ಈಗ 30,000 ಇದ್ದರೆ ಹೆಚ್ಚು. ಅರ್ಧ ಸೀಜ್ ಆಗಿವೆ, ಇನ್ನರ್ಧ ಹಳ್ಳಿಗಳಲ್ಲಿವೆ. ಆಟೋಗಳು 50% ನಿಂತು ಹೋಗಿವೆ. ಕೆಲವರು ಹೊಟೆಲ್‌ಗಳಲ್ಲಿ ಕೆಲಸಕ್ಕೆ ಸೇರಿದರೆ ಕೆಲವರು ಬೀದಿಗಳಲ್ಲಿ ಮಾಸ್ಕ್ ಮಾರುತ್ತಿದ್ದಾರೆ. ಡೀಸೆಲ್ ದರ ಕಡಿಮೆ ಇದ್ದರೆ ಬಿಸಿನೆಸ್ ಕಡಿಮೆ ಇದ್ದರೂ ಹೇಗಾದರೂ ಬದುಕಿಕೊಳ್ಳಬಹುದಿತ್ತು. ಆದರೆ ಈಗ ದುಡಿದಿದ್ದರಲ್ಲಿ ಮುಕ್ಕಾಲು ಪಾಲು ಡೀಸೆಲ್‌ಗೆ ಸುರಿಯಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
– ಮುತ್ತುರಾಜು
ಇದನ್ನೂ ಓದಿ: ‘ಪೆಟ್ರೋಲ್ ಬೆಲೆ ಹೆಚ್ಚುತ್ತಿದೆ’ ಎಂದರೆ ಅಫ್ಘಾನ್‌ಗೆ ಹೋಗಿ ಎಂದ ಬಿಜೆಪಿ ನಾಯಕ!