Homeಕರ್ನಾಟಕಬೆಲೆ ಏರಿಕೆ- ಬಸವಳಿದ ಸಾಮಾನ್ಯ; ತರಕಾರಿ-ದಿನಸಿ: ವ್ಯಾಪಾರ, ಹೋಟೆಲ್ ಉದ್ಯಮಕ್ಕೂ ತಟ್ಟಿದ ಬಿಸಿ

ಬೆಲೆ ಏರಿಕೆ- ಬಸವಳಿದ ಸಾಮಾನ್ಯ; ತರಕಾರಿ-ದಿನಸಿ: ವ್ಯಾಪಾರ, ಹೋಟೆಲ್ ಉದ್ಯಮಕ್ಕೂ ತಟ್ಟಿದ ಬಿಸಿ

- Advertisement -
- Advertisement -

ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಸೇರಿದಂತೆ ಇಂಧನ ಬೆಲೆಗಳ ತೀವ್ರ ಹೆಚ್ಚಳದ ಪರಿಣಾಮ ಇವುಗಳನ್ನು ಬಳಸುವವರಿಗೆ ಮಾತ್ರ ಸೀಮಿತವಾಗಿಲ್ಲ. ಇದು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುವುದರಿಂದ ಸಮಸ್ತ ಜನರನ್ನೂ ತಟ್ಟುತ್ತಿದೆ.

ತರಕಾರಿ ಜನ ಸಾಮಾನ್ಯರ ದಿನ ನಿತ್ಯದ ಅಗತ್ಯ ಇರುತ್ತದೆ. ಕಳೆದ ಮೂರು ತಿಂಗಳಿಗೆ ಹೋಲಿಸಿದರೆ ಪ್ರಸ್ತುತ ತರಕಾರಿ ಬೆಲೆ ಕಡಿಮೆಯಾಗಿದೆ. ಆದರೆ, ಇಂಧನ ಬೆಲೆ ಏರಿಕೆ, ಇದರಿಂದ ಸಾರಿಗೆ ವ್ಯವಸ್ಥೆ ಪ್ರಯಾಣ ದರಗಳ ಏರಿಕೆ, ಬೇರೆ ಅಗತ್ಯ ವಸ್ತುಗಳ ತುಟ್ಟಿ, ಲಾಕ್‌ಡೌನ್ ಕಾರಣದಿಂದ ಉಂಟಾಗಿರುವ ಸಮಸ್ಯೆಗಳು ಒಟ್ಟಾರೆ ಪರಿಸ್ಥಿತಿಯನ್ನು ಬಿಗಡಾಯಿಸಿವೆ.

ಕಳೆದ 20 ವರ್ಷದಿಂದ ತರಕಾರಿ ವ್ಯಾಪಾರ ಮಾಡುತ್ತಿರುವ ರವಿರಾವ್ ಮತ್ತು ಜಗದೀಶ್ ಹೇಳುವುದು ಹೀಗೆ, “ಲಾಕ್‌ಡೌನ್ ಮುಗಿದ ಮೇಲೆ ತರಕಾರಿ ವ್ಯಾಪಾರ ಕೊಂಚ ಮಟ್ಟಿಗೆ ಆರಂಭವಾಗಿತ್ತು. ಆದರೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ, ಅದರಲ್ಲೂ ಅಡುಗೆ ಎಣ್ಣೆಯ ಬೆಲೆ ಏರಿಕೆ ನಮ್ಮ ವ್ಯಾಪಾರದ ಮೇಲೆ ತೀವ್ರ ಪ್ರಭಾವ ಬೀರಿದೆ” ಎನ್ನುತ್ತಾರೆ.

“ಅಡುಗೆ ಮಾಡಲು ತರಕಾರಿ ಬೇಕು, ಎಣ್ಣೆ, ಸಿಲಿಂಡರ್ ಬೆಲೆ ಗಗನಕ್ಕೆ ಏರಿರುವುದರಿಂದ ಕೊಳ್ಳುವವರ ಮೊದಲಿನ ಮಟ್ಟದಲ್ಲಿ ಖರೀದಿ ಮಾಡುತ್ತಿಲ್ಲ. ಅವರ ಸಂಖ್ಯೆಯೂ ಕಡಿಮೆಯಾಗಿದೆ. ಮೊದಲು ಆಟೋದವರಿಗೆ ಬಾಡಿಗೆ ಕೊಟ್ಟರೆ ಸಾಕಿತ್ತು. ಆದರೆ, ಈಗ ಬಾಡಿಗೆ ಜೊತೆಗೆ 50, 100 ಎಕ್ಸ್ಟ್ರಾ ನೀಡಲೇಬೇಕು” ಎನ್ನುತ್ತಾರೆ.

ಐದು ವರ್ಷದಿಂದ ತಿಲಗ ಅವರು ಶ್ರೀನಿವಾಸ ನಗರದ ಬಸ್ ನಿಲ್ದಾಣದ ಬಳಿ ತರಕಾರಿ ಮಾರಾಟ ಮಾಡುತ್ತಾರೆ. ತಿಲಗ ಅವರ ಪತಿ ಚಪ್ಪಲಿ ಹೊಲಿಯುವ ಕೆಲಸ ಮಾಡುತ್ತಾರೆ. ಪಕ್ಕದಲ್ಲೇ ತಿಲಗ ತರಕಾರಿ ವ್ಯಾಪಾರ ಮಾಡುತ್ತಾರೆ. ಆದರೆ, ಲಾಕ್‌ಡೌನ್ ನಮ್ಮ ವ್ಯಾಪಾರಕ್ಕೆ ಕುತ್ತು ತಂದಿದೆ ಎನ್ನುತ್ತಾರೆ.

“ದಿನ ಬೆಳಗ್ಗೆ ಬೇಗನೇ ಎದ್ದು ಮಾರ್ಕೆಟ್‌ಗೆ ಹೋಗಿ ತರಕಾರಿ ತರುತ್ತೇನೆ. ಮೊದಲು 150 ರೂಪಾಯಿ ಕೊಟ್ಟರೆ ಬರುತ್ತಿದ್ದ ಆಟೋದವರು, ಇಂದು 300 ರೂಪಾಯಿ ಕೇಳುತ್ತಾರೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 9.30ರವರೆಗೆ ವ್ಯಾಪಾರ ಮಾಡುತ್ತೇನೆ ಆದರೆ, ಎಷ್ಟೋ ಬಾರಿ ತಂದ ತರಕಾರಿ ಮಾರಾಟವಾಗಲು ಕೆಲವೊಮ್ಮೆ ಮೂರು ದಿನ ತೆಗೆದುಕೊಳ್ಳುತ್ತದೆ. ಮೊದಲೆಲ್ಲ ಒಂದೇ ದಿನದಲ್ಲಿ ಖಾಲಿಯಾಗುತ್ತಿತ್ತು. ಈಗ ಕೊಳ್ಳುವವರೆ ಇಲ್ಲವಾಗಿದ್ದಾರೆ” ಎನ್ನುತ್ತಾರೆ.

ತಳ್ಳುವ ಗಡಿಯಲ್ಲಿ ವ್ಯಾಪಾರ ಮಾಡುವ ಮೀತೇಶ್ ಹೇಳುವುದು ಕೂಡ ಇವೇ ಮಾತುಗಳನ್ನು. “ತರಕಾರಿಗಿಂತ ಆಟೋ ಬಾಡಿಗೆ ಜಾಸ್ತಿ ಆಗಿದೆ. ಯಾವಾಗ ಪೆಟ್ರೋಲ್, ಡಿಸೇಲ್, ಆಟೋ ಗ್ಯಾಸ್ ಬೆಲೆ ಕಡಿಮೆಯಾಗುತ್ತದೋ” ಎನ್ನುತ್ತಾರೆ.

ಇನ್ನು ಕಿರಾಣಿ-ದಿನಸಿ ಅಂಗಡಿಗಳ ವಿಷಯಕ್ಕೆ ಬಂದರೆ, ಬೇಳೆ, ಎಣ್ಣೆ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ ಎನ್ನುವುದು ಸಾಮಾನ್ಯ ಅಭಿಪ್ರಾಯ. “ವ್ಯಾಪಾರವಿಲ್ಲ, ಆದರೆ, 30 ವರ್ಷದಿಂದ ಇದೆ ಕೆಲಸ ಮಾಡುತ್ತಿರುವ ನಮಗೆ ಬೇರೆ ಮಾರ್ಗವಿಲ್ಲ ಎನ್ನುವುದು ಹಲವರ ಅಳಲು.

ಎಪಿಎಂಸಿ ಒಕ್ಕೂಟ ಅಧ್ಯಕ್ಷ ರಮೇಶ್ ಚಂದ್ರ ಲಾಹೋಟಿ ಅವರು ಹೇಳುವಂತೆ, “ಎಪಿಎಂಸಿಯಲ್ಲಿ ಬೇಳೆ ಪದಾರ್ಥಗಳಲ್ಲಿ ಹೆಚ್ಚಿನ ಏರಿಕೆಯಾಗಿಲ್ಲ. ಸಕ್ಕರೆ ಒಂದೆರಡು ರೂಪಾಯಿಯ ವ್ಯತ್ಯಾಸ ಕಂಡಿದೆ. ಆದರೆ ಎಣ್ಣೆ ಪದಾರ್ಥದ ಬೆಲೆ ಹೆಚ್ಚಾಗಿದೆ. ಹೋಲ್‌ಸೇಲ್ ಮತ್ತು ರಿಟೇಲ್ ಮಾರಾಟಕ್ಕೆ ಸ್ವಲ್ಪ ವ್ಯತ್ಯಾಸವಿದೆ” ಎನ್ನುತ್ತಾರೆ.

ಸೆಪ್ಟೆಂಬರ್ ಮಾಸಿಕದಲ್ಲಿ ಬೆಲೆ

ಲಾಕ್‌ಡೌನ್ ಸಮಯದಲ್ಲಿ ಚಿಲ್ಲರೆ ವ್ಯಾಪಾರದಲ್ಲಿ ಆಹಾರ ಧಾನ್ಯಗಳ ಬೆಲೆ ಭಾರಿ ಏರಿಕೆ ಕಂಡಿತ್ತು. ಈಗ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಇದಕ್ಕೆ ಕಾರಣ. ಲಾಕ್‌ಡೌನ್‌ನಿಂದ ಜನ ಅಂಗಡಿಗಳಿಗೆ ಬರುವುದು ಕಡಿಮೆಯಾಗಿದೆ. ಈಗ ಬೆಲೆ ಏರಿಕೆಯಿಂದ ಸಾರಿಗೆ ವ್ಯವಸ್ಥೆಯ ದರ ಕೂಡ ಏರಿಕೆಯಾಗಿರುವುದರಿಂದ ಚಿಲ್ಲರೆ ವ್ಯಾಪಾರಿಗಳಿಗೆ ಮತ್ತಷ್ಟು ಸಂಕಷ್ಟಕ್ಕೆ ನೂಕಿದೆ.

ಇನ್ನು ಹೋಟೆಲ್ ಉದ್ಯಮದ ಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಮತ್ತು ಅಡುಗೆ ಎಣ್ಣೆಯ ತೀವ್ರ ಬೆಲೆ ಏರಿಕೆ ಹೋಟೆಲ್ ಉದ್ಯಮಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

“ಅಡುಗೆ ಎಣ್ಣೆ ಜಾಸ್ತಿ ಆಗಿದೆ, ಗ್ಯಾಸ್ ರೇಟ್ ಜಾಸ್ತಿ ಆಯ್ತು ಅಂತಾ ನಾವು ರೇಟ್ ಜಾಸ್ತಿ ಮಾಡುವ ಹಾಗಿಲ್ಲ. ಹಾಗೆ ಮಾಡಿದ್ರೆ ಜನ ಹೋಟೆಲ್‌ಗೆ ಬರಲ್ಲ” ಎನ್ನುತ್ತಾರೆ ಕಳೆದ 40 ವರ್ಷಗಳಿಂದ ಪುಟ್ಟ ಹೋಟೆಲ್ ನಡೆಸುತ್ತಿರುವ ಶ್ರೀನಿವಾಸ್ ಮತ್ತು ಅವರ ಪುತ್ರ ಕುಲೋತ್ತಮ್.

“ಲಾಕ್‌ಡೌನ್‌ಗೆ ಮೊದಲು 700 ರೂಪಾಯಿ ಕೊಟ್ಟು ಒಂದು ಟಿನ್ ಎಣ್ಣೆ ತರುತ್ತಿದ್ದೆ. ಈಗ 1,300 ರೂಪಾಯಿ ಕೊಡ್ತಾ ಇದ್ದೇವೆ. ಗ್ಯಾಸ್ ರೇಟ್ ಕೂಡ ಜಾಸ್ತಿ ಆಗ್ತಾನೆ ಇದೆ. ಹದಿನೈದು ದಿನಕ್ಕೆ ಒಂದೊಂದು ರೇಟ್ ಹೇಳ್ತಾರೆ. ಹಾಗಂತ ನಾವು ಕ್ವಾಲಿಟಿ ಕಡಿಮೆ ಮಾಡುವಂತಿಲ್ಲ. ತಿಂಡಿಗಳ ಸಂಖ್ಯೆಯನ್ನು ಕಡಿಮೆ ಮಾಡುವಂತಿಲ್ಲ. ಯಾಕೆಂದರೆ ಗ್ರಾಹಕರು ಬೇರೆಡೆಗೆ ಹೋಗುತ್ತಾರೆ. ಗ್ರಾಹಕರಿಲ್ಲದೆ ಕಷ್ಟ ಅನುಭವಿಸುತ್ತಿದ್ದೆವೆ. ಇರುವವರನ್ನು ಕಳೆದುಕೊಂಡರೆ ಹೋಟೆಲ್ ನಡೆಸುವುದೆ ಕಷ್ಟ. ಮೊದಲು ಬರುತ್ತಿದ್ದ ಬ್ಯಾಚಲರ್ಸ್ ಈಗ ಇಲ್ಲ. ಆನ್‌ಲೈನ್ ಕ್ಲಾಸ್, ವರ್ಕ್ ಫ್ರಂ ಹೋಮ್‌ಗಳಿಂದ ಜನ ಮನೆಬಿಟ್ಟು ಹೊರಬರುತ್ತಿಲ್ಲ” ಎನ್ನುತ್ತಾರೆ ಕುಲೋತ್ತಮ್.

ಬೆಲೆ ಏರಿಕೆ ಬಗ್ಗೆ ಮಾತನಾಡಿದ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್, “ಬೆಲೆ ಏರಿಕೆ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ. ಇಂಧನ ಬೆಲೆಗಳ ಏರಿಕೆಯಾಗಿದೆ. ಇವುಗಳಿಂದ ಸಾರಿಗೆ ವೆಚ್ಚ ಹೆಚ್ಚಾಗಿದೆ. ಬೇಳೆ ಕಾಳುಗಳು, ಅದರಲ್ಲೂ ಮುಖ್ಯವಾಗಿ ಅಡುಗೆ ಎಣ್ಣೆ ಶೇಕಡಾ 120% ಏರಿಕೆಯಾಗಿದೆ. ಮೂರು ತಿಂಗಳ ಹಿಂದೆ ವಿದ್ಯುತ್ ದರ ಕೂಡ ಏರಿಕೆಯಾಗಿದೆ. ಇವುಗಳಿಂದ ನಮ್ಮ ಉದ್ಯಮದ ಮೇಲೆ ತುಂಬಾ ಹೊಡೆತ ಬಿದ್ದಿದೆ” ಎನ್ನುತ್ತಾರೆ.

“ಕೊರೊನಾದಿಂದ ಈಗಷ್ಟೇ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದೇವೆ. ಹೀಗಾಗಿ ನಾವು ಬೆಲೆ ಏರಿಕೆ ಮಾಡುತ್ತಿಲ್ಲ. ಇದು ಬೆಲೆ ಏರಿಕೆ ಮಾಡುವ ಸಂದರ್ಭ ಅಲ್ಲ ಅಂತ ನಮ್ಮ ಕಮಿಟಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಐಟಿ ಕಂಪನಿಗಳು ಆರಂಭವಾಗಬೇಕು, ಜನರಿಗೆ ಕೆಲಸ ಸಿಗಬೇಕು. ವರ್ಕ ಫ್ರಂ ಹೋಮ್ ಮುಗಿದ ಮೇಲೆ ಈ ಬಗ್ಗೆ ಯೋಚಿಸಬೇಕು. ಮುಂದಿನ ಜನವರಿಯವರೆಗೂ ಹೋಟೆಲ್ ಪದಾರ್ಥಗಳ ಬೆಲೆ ಏರಿಕೆ ಮಾಡಬಾರದು ಎಂಬ ನಿರ್ಧಾರ ಆಗಿದೆ” ಎಂದಿದ್ದಾರೆ.

“ಈಗ 50 ಸಾವಿರ ವ್ಯಾಪಾರ ಆಗುವ ಜಾಗದಲ್ಲಿ ತಿಂಡಿ-ಊಟದ ಬೆಲೆಯನ್ನು 5% ಏರಿಕೆ ಮಾಡಿದ್ರೆ, ವ್ಯಾಪಾರ 45 ಸಾವಿರಕ್ಕೆ ಕುಸಿಯುವ ಸಾಧ್ಯತೆ ಇದೆ. ಹಾಗಾಗಿ ನಾವು ಬೆಲೆ ಏರಿಕೆ ಮಾಡಲ್ಲ. ಗ್ರಾಹಕರನ್ನು ಉಳಿಸಿಕೊಳ್ಳಬೇಕು. ನಮ್ಮ ಖರ್ಚು ನಮಗಿದ್ದೆ ಇರುತ್ತದೆ. ಮುಖ್ಯವಾಗಿ ಅಡುಗೆ ಎಣ್ಣೆ ಬೆಲೆ ಹತೋಟಿಗೆ ತರಬೇಕು” ಎನ್ನುತ್ತಾರೆ ಪಿ.ಸಿ.ರಾವ್.

“ಬೆಂಗಳೂರಿನಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಸಣ್ಣ ಅಂಗಡಿಗಳು ಬಂದ್ ಆಗಿವೆ. ಒಂದು ಅಂಗಡಿಯಲ್ಲಿ ಇಬ್ಬರು, ಮೂವರು ಕೆಲಸಗಾರರು ಇರುತ್ತಿದ್ದರು. ಹೋಟೆಲ್ ವ್ಯಾಪಾರಕ್ಕೆ ಈ ಸಣ್ಣ ಸಣ್ಣ ಅಂಗಡಿಗಳು ಕಾರಣ ಆಗಿದ್ದವು. ಇವುಗಳು ಬಂದ್ ಆದ ಕಾರಣ ನಮ್ಮ ವ್ಯಾಪಾರಕ್ಕೆ ತೊಂದರೆ ಆಗಿದೆ. ಬೆಲೆ ಹತೋಟಿ ಇದ್ದಿದ್ರೆ ನಮಗೆ ಸಹಾಯವಾಗ್ತಾ ಇತ್ತು” ಎಂದು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.

ಮುಖ್ಯವಾಗಿ ತರಕಾರಿ ಮಾರಾಟಗಾರರು, ದಿನಸಿ ಅಂಗಡಿ, ಸಣ್ಣ ಸಣ್ಣ ಹೋಟೆಲ್‌ಗಳು, ಕಿರಾಣಿ ಅಂಗಡಿಗಳು, ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರ ಮೇಲೆ ಈ ಇಂಧನದ ಬೆಲೆ ಏರಿಕ ತೀವ್ರವಾದ ಸಮಸ್ಯೆ ಒಡ್ಡಿದೆ. ಅಡುಗೆ ಎಣ್ಣೆಯನ್ನು ಪ್ರತಿ ಮನೆಯಲ್ಲೂ ಈಗ ಎಚ್ಚರದಿಂದ ಬಳಸುವಂತಾಗಿದೆ. ಒಟ್ಟಾರೆ ಬೆಲೆ ಏರಿಕೆ ಎಲ್ಲಾ ಕಾರ್ಮಿಕ ವರ್ಗದವರ ಮೇಲೂ ಪ್ರತ್ಯಕ್ಷ ಮತ್ತು ಪರೋಕ್ಷ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗಿದೆ.


ಇದನ್ನೂ ಓದಿ: ಬೆಲೆ ಏರಿಕೆ-ಬಸವಳಿದ ಸಾಮಾನ್ಯ; ಪೆಟ್ರೋಲ್-ಡೀಸೆಲ್ ದರದಲ್ಲಿ ನಿರಂತರ ಏರಿಕೆ; ಬಡತನದತ್ತ ಭಾರತ

ಇದನ್ನೂ ಓದಿ: ಬೆಂಗಳೂರು: ಮರ ಕಡಿಯದಂತೆ ಸರ್ಕಾರಿ ಶಾಲಾ ಮಕ್ಕಳಿಂದ ಅಪ್ಪಿಕೊ ಚಳವಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...