ಮಹಾರಾಷ್ಟ್ರದಿಂದ ಹರಿದುಬರುತ್ತಿರುವ ಜಲದೊಂದಿಗೆ ಬೆಳಗಾವಿಯಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಅಕ್ಷರಶಃ ಪ್ರವಾಹ ಉಂಟಾಗಿದೆ. ಈ ನಡುವೆ ಧುಪದಾಳ ಸೇರಿದಂತೆ ಹಲವು ಜಲಾಶಯಗಳಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಹೊರಬಿಡುತ್ತಿದ್ದು ಕಾಲುವೆ ತೀರಗಳಲ್ಲಿ ಜನ ಓಡಾಡಬಾರದೆಂದು ಕರ್ನಾಟಕ ನಿರಾವರಿ ನಿಗಮ ನಿಯಮಿತ ವತಿಯಿಂದ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ತುರ್ತು ಪತ್ರ ಬರೆಯಲಾಗಿದೆ.
ಈಗಾಗಲೇ ಧುಪದಾಳ ಜಲಾಶಯಕ್ಕೆ ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿಯಿಂದ ಭಾರೀ ನೀರು ಹರಿದುಬರುತ್ತಿರುವುದರಿಂದ ಕಾಲುವೆಗಳಿಗೆ ಮತ್ತಷ್ಟು ನೀರು ಬಿಡುವುದು ಅನಿವಾರ್ಯವಾಗಿದ್ದು ಜನ ಎಚ್ಚರಿಕೆಯಿಂದರಬೇಕು ಮತ್ತು ಜನ ಜಾನುವಾರುಗಳ ಪ್ರಾಣ ಕಾಪಾಡಲು ನಿಗಾ ವಹಿಸಲು ಕೋರಿದ್ದಾರೆ.
ತುಂಬಿ ಹರಿಯುತ್ತಿದೆ ಭೀಮಾತೀರ: ಬರ ಎದುರಿಸುತ್ತಿರುವ ಬಿಜಾಪುರ
ಉತ್ತರ ಕರ್ನಾಟಕ, ಮಲೆನಾಡು ದಕ್ಷಿಣ ಕನ್ನಡ ಉತ್ತರ ಕರ್ನಾಟಕ ಎಲ್ಲೆಡೆ ವರುಣನ ಆರ್ಭಟ ಹೆಚ್ಚಾಗಿದ್ದು, ಬೆಳಗಾವಿ ಜಿಲ್ಲೆಯ ಎಲ್ಲೆಡೆ ಪ್ರವಾಹ ಉಂಟಾಗಿ ಜನರನ್ನು ಗಂಜಿ ಕೇಂದ್ರಕ್ಕೆ ರವಾನಿಸಲಾಗಿದೆ. ಮತ್ತು ಇದುವರೆಗೆ 60 ಕ್ಕೂ ಹೆಚ್ಚು ಜನ ಬೆಳಗಾವಿ ಪ್ರವಾಹದಲ್ಲಿ ಕಾಣೆ ಆಗಿದ್ದು, ಶಿವಮೊಗ್ಗ ಜಿಲ್ಲೆಯ ಓರ್ವ ಮಹಿಳೆ ತುಂಗೆಯಲ್ಲಿ ಹರಿದು ಹೋಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಇನ್ನು ಭೀಮಾ ತೀರಕ್ಕೆ ಬರುವುದಾದರೆ ದೇವಣಗಾಂವ, ತಾರಾಪೂರ, ತಾವರಖೇಡ, ಬ್ಯಾಡಗಿಹಾಳ, ಕಡ್ಲೇವಾಡ, ಶಂಬೇವಾಡ, ಬಗಲೂರ, ಗ್ರಾಮಗಳು ಭೀಮಾ ನದಿ ನೀರಿನ ಪ್ರವಾಹದಲ್ಲಿ ಸಿಲುಕುವ ಅಪಾಯದಲ್ಲಿವೆ. ದೇವಣಗಾಂವ ಭೀಮಾ ಸೇತುವೆ ಮಾಪನ ಪಟ್ಟಿ ಯಲ್ಲಿ ಸದ್ಯ 7.5 ಮೀ.ನೀರು ಹರಿಯುತ್ತಿದ್ದು ಹಂತ ಹಂತವಾಗಿ ನೀರು ಏರುತ್ತಾ ಸಾಗಿರುವದರಿಂದ ಸಂಜೆ ವೇಳೆಗೆ 8 ಮೀ ದಾಟುವ ಸಾಧ್ಯತೆ ಇದೆ 8 ಮೀ.ಕ್ಕೂ ಹೆಚ್ಚು ನೀರು ನದಿಯಲ್ಲಿ ಹರಿದರೆ ಅದು ಅಪಾಯದ ಮಟ್ಟ ಎಂದು ಗುರುತಿಸಲಾಗಿದೆ. ಆದ್ದರಿಂದ ಭೀಮಾ ನದಿ ತೀರದ ಜನರಲ್ಲಿ ಆತಂಕ ಮನೆ ಮಾಡಿದೆ. ಮತ್ತು ಉಳಿದಂತೆ ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಏರಿಕೆ ಕಂಡಿದೆ.
ಬಿಜಾಪುರ ಜಿಲ್ಲೆಯಲ್ಲಿ ಮಳೆನೇ ಇಲ್ಲ?
ಇನ್ನೂ ಉತ್ತರ ಕರ್ನಾಟಕದ 4 ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಇದ್ದರೆ ಗುಮ್ಮಟ ನಗರಿ ವಿಜಯಪುರದಲ್ಲಿ ಮಳೆ ಆಗುವ ಯಾವ ಲಕ್ಷಣ ಕಾಣುತ್ತಿಲ್ಲ ಸ್ಥಳೀಯರು ಹೇಳುತ್ತಿದ್ದಾರೆ.