Homeಅಂಕಣಗಳುಮೂರು ಪಾರ್ಟಿಯವರೂ ಅಳುತ್ತಿದ್ದಾರಲ್ಲಾ!

ಮೂರು ಪಾರ್ಟಿಯವರೂ ಅಳುತ್ತಿದ್ದಾರಲ್ಲಾ!

- Advertisement -
- Advertisement -

ಕರ್ನಾಟಕದ ರಾಜಕಾರಣ ಭಲೇ ಮಜವಾಗಿದೆಯಲ್ಲಾ. ಈ ಹುಚ್ಚರ ಸಂತೆಯನ್ನು ನೋಡಿ ಜನ ಎಲ್ಲಾ ಪಕ್ಷದವರನ್ನು ಶಪಿಸುವಂತಾಗಿದ್ದಾರಂತಲ್ಲಾ. ಇದಕ್ಕೆ ಹಲವಾರು ಪಕ್ಷಾಂತರಿಗಳ ಉದಾಹರಣೆ ನೋಡಬಹುದು. ಕಾಂಗ್ರೆಸ್, ಬಿಜೆಪಿ, ದಳ ಮೂರು ಪಾರ್ಟಿಗಳು ಒಂದಾದ ಸಮಯ ಇದು. ಎಲ್ಲರೂ ಒಂದೇ ತರಹ ಮಾತನಾಡುತ್ತಿದ್ದಾರೆ. ಆದರೆ ಈ ನಡುವೆ ನಡ್ಡಾ, ಶಾ, ಮೋದಿ ಕರ್ನಾಟಕದ ಕೆಲವು ರಾಜಕಾರಣಿಗಳನ್ನು ಗೋಶಾಲೆಗೆ ದೂಡಿದ್ದು ನೋಡಿದರೆ ಶಾನೆ ಅನುಮಾನವಾಗುತ್ತಿದೆಯಲ್ಲಾ. ಜನರ ತಲೆಯಲ್ಲಿ ತುಂಬಿರುವ ದೊಡ್ಡ ಅನುಮಾನವೆಂದರೆ ಇವಿಎಂ ಬಗೆಗಿನ ಸಂಶಯ. ಹೀಗಿದ್ದರೂ, ಹಳೆ ತಲೆಗಳು ಪಾರ್ಟಿಯನ್ನು ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ತರುವುದಿಲ್ಲ, ಮಾಗಿದ ರಾಜಕಾರಣಗಳಿಂದ ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಮನೆಹಾಳ ಕಾರ್ಯಕ್ರಮಗಳ ಅನುಷ್ಠಾನ ಕಷ್ಟ; ಇಂತಲ್ಲಿ ಜಗದೀಶ್ ಶೆಟ್ಟರ್‌ನಂತವರ ಅಗತ್ಯವಿಲ್ಲ. ಅದಿರಲಿ ಒಮ್ಮೆ ಮುಖ್ಯಮಂತ್ರಿಯಾಗಿದ್ದ ಶೆಟ್ಟರ್ ತನಗಿಂತ ಕಿರಿ ಹುಡುಗನ ಆಡಳಿತದಲ್ಲಿ ಕೇವಲ ಶಾಸಕನಾಗಿದ್ದು ಮುಂದೆಯೂ ಹಾಗೇ ಇರುತ್ತೇನೆಂದು ಹೇಳಿ ಟಿಕೆಟ್‌ಗಾಗಿ ರಚ್ಚೆ ಹಿಡಿದಿರುವುದು ಅಚ್ಚರಿಯಾಗಿದೆಯಲ್ಲಾ ಥೂತ್ತೇರಿ.

*****

ಪಾರ್ಟಿಯಿಂದ ಟಿಕೆಟ್ ಸಿಗದ ಹಲವಾರು ಜನ ಕೋಣವನ್ನು ಕಳೆದುಕೊಂಡ ಎಮ್ಮೆಯಂತೆ ಅಳುತ್ತಿದ್ದಾರೆ. ಈ ಪೈಕಿ ಉಡುಪಿ ಭಟ್ಟನ ಅಳು ನೋಡಿ ಕೃಷ್ಣನೇ ಅತ್ತ ತಿರುಗಿದನಂತೆ. ಇನ್ನ ಜಗದೀಶ್ ಶೆಟ್ಟರ ಅಳಲು ಜನಗಳನ್ನೇ ಬಿಟ್ಟಿದ್ದಾರೆ. ಎ.ಟಿ ರಾಮಸ್ವಾಮಿ ಮತ್ತು ಮುದ್ದಹನುಮೇಗೌಡರು ಒಳದುಃಖಿಗಳಾದ್ದರಿಂದ ದುಃಖ ಬಹಿರಂಗವಾಗಿ ಕಾಣಲಿಲ್ಲ. ಇನ್ನು ಶಿವಮೊಗ್ಗದ ಈಶ್ವರಪ್ಪನ ಸೊಸೆ ಅಳುವುದನ್ನು ಕೇಳಿ ಬಹಳ ಜನ ಮನೆಯ ಬಳಿಗೆ ಓಡಿಬಂದರಂತೆ. ಅಲ್ಲಿ ಈಶ್ವರಪ್ಪನೂ ದಂಗಾಗಿ ಕೂತಿದ್ದರಂತೆ. ಹೆಂಡತಿ ಆಸ್ಪತ್ರೆಯಲ್ಲಿರುವುದನ್ನಾದರೂ ಪಾರ್ಟಿ ಗ್ರಹಿಸಬೇಕಿತ್ತು; ಈಶ್ವರಪ್ಪನಿಗೆ ಎಷ್ಟು ಸಿಟ್ಟು ಬಂದಿತೆಂದರೆ ರಾಜಕಾರಣಕ್ಕೆ ನಿವೃತ್ತಿಯನ್ನೇ ಘೋಷಿಸಿಬಿಟ್ಟರು.

ಕೆ.ಎಸ್.ಈಶ್ವರಪ್ಪ

ಈ ತ್ಯಾಗ ಮಗನ ಭವಿಷ್ಯಕ್ಕಾಗಿ ನಡೆದದು ಎಂದೂ ಜನ ಆಡಿಕೊಂಡರು. ಇನ್ನು ಮುಂದೆ ರಾಜಕಾರಣದ ವೇದಿಕೆಯಿಂದ ’ದನ ತಿನ್ನುವವರ ಗಂಟಲು ಸೀಳಬೇಕು, ಕೈ ಕತ್ತರಿಸಬೇಕು, ಆ ಸಿದ್ದರಾಮಯ್ಯ ನಾಯಿ ಇದ್ದಂತೆ, ಆ ಡಿ.ಕೆ.ಶಿ ಹಂದಿಯಿದ್ದಂತೆ, ಮುಸ್ಲಿಂ ಗೂಂಡಾಗಳಿಗೆ ತಕ್ಕಪಾಠ ಕಲಿಸಬೇಕು, ಹೆಣ್ಣು ಮಕ್ಕಳು ರೇಪಾದ್ರೆ ನಾವೇನು ಮಾಡಕಾಗತ್ತೆ, ನಲವತ್ತು ಪರಸೆಂಟು ಕೊಡಕ್ಕಾಗದೋನು ಸುಸೈಡ್ ಮಾಡಿಕತ್ತನೆ ಅಂತ ನನಿಗೇನು ಕನಸುಬಿದ್ದಿತ್ತೆ’ ಇಂತ ಮಾತುಗಳು ಒಡಕಲು ಸೈಲೆಂನ್ಸರ್ ಪೈಪಿನಂತ ಗಾಡಿಯಿಂದ ಹೊರಬರುವುದಿಲ್ಲ ಎಂಬ ಸಮಾಧಾನ ನಾಡಿನಲ್ಲಿ ಹರಡಿದೆಯಂತಲ್ಲಾ ಥೂತ್ತೇರಿ.

*****

ಟಿಕೆಟ್ ಸಿಗದವರೆಲ್ಲಾ ತಮ್ಮದೇ ಸಾವಿನ ಸಂದೇಶ ಬಂದಂತೆ ಅಳುತ್ತಿರುವಾಗ ಪ್ರಳಯವೇ ಸಂಭವಿಸಿದರೂ ಅಳಲಾರದ ರೇವಣ್ಣನವರು ಭವಾನಿಗೆ ಟಿಕೆಟ್ ಸಿಗದ ಕಾರಣಕ್ಕೆ ಅತ್ತಿರಬಹುದೆ ಎಂಬ ಗುಮಾನಿಯಾಯ್ತು. ಅವರನ್ನೇ ಕೇಳಿದರೆ ಹೇಗೆ ಎಂದು ಫೋನ್ ಮಾಡಲಾಗಿ ರಿಂಗಾಯ್ತು. ರಿಂಗ್ ಟೋನ್ ಟಕ್ ಟಕ್ ಟಕ್ ಟಕ್ ಟಕ್ ಟಕ್.. ಹಲೋ

“ಯಾರ್ರಿ ಅದು?”

“ನಮಸ್ಕಾರ ಸಾರ್ ನಾನು ಯಾಹು.”

“ಯಾವು ಅಂದ್ರೆ ಯಾರ್ರಿ?”

“ಪತ್ರಕರ್ತ ಸಾರ್.”

“ನಿಮ್ಮಿಂದ್ಲೆ ಕಂಡ್ರಿ ಹಿಂಗಾಗಿದ್ದು, ದಿನ ಬರದು ಬರದು ಮಡಗಿದ್ರಿ. ಈಗೇನು ಬರಿತಿರಿ?”

“ಭವಾನಿಯಕ್ಕನಿಗೆ ಟಿಕೆಟ್ ಸಿಗಲಿಲ್ಲ ಅಂತ ಬೇಜಾರಾಯ್ತ ಸಾ?”

“ಆಗದಿಲವೇನ್ರಿ? ನನ್ನಂಥೋನಿಗೇ ಅಳು ಬತ್ತದೆ.”

“ಅಳು ಅದಿಮಿಕ್ಕಬಾರ್ದು ಸಾ, ಮನಸೋಯಿಚ್ಚೆ ಅತ್ತಬುಡಬೇಕು.”

“ಜನ ಏನಂತರ್ರೀ.. ನೀವೇಳಿದಂಗೆ ಅಳಕ್ಕಾಯ್ತದ?”

ಇದನ್ನೂ ಓದಿ: “ಸುದೀಪನೂ ನಲವತ್ತು ಪರಸೆಂಟಾದ ಅಂತಾರಲ್ಲಾ ಸಾರ್”

“ಸಾರ್ ಭವಾನಿಯಕ್ಕ ಒಳ್ಳೆ ಆಡಳಿತಗಾರ್ತಿ. ನಿಜಕ್ಕೂ ಆ ಭವಾನಿದೇವಿಯಂಗೆ ಕಾಣ್ತರೆ. ಕುಮಾರಣ್ಣನ ಹೆಂಡ್ತಿ ಶಾಸಕರಾಗಬಹುದು, ಅದೇ ಭವಾನಿಯಕ್ಕ ಆಗಕ್ಕಾಗಲ್ಲ ಅಂದ್ರೆ ಇದ್ಯಾವ ನ್ಯಾಯ ಸಾ?”

“ನಾನು ನಿಮ್ಮಂಗೆ ಕೇಳಿದೆ ಕಂಡ್ರಿ, ಆದ್ರೆ ಕುಮಾರ ಹಟಹಿಡಿದುಬುಟ್ಟ. ಪ್ರಕಾಸ ಅಂತ ಹಾಸನದ ಎಮ್ಮೆಲ್ಲೆ ಇದ್ದ ನೋಡು, ಅವುಂದು ಕುಮಾರಂದು ಏನೂ ಯವಾರಿತ್ತಂತೆ, ಅವುನು ಸತ್ತೋದ, ಆ ರುಣ ತೀರಿಸಕ್ಕೆ ಅವುನ ಮಗನಿಗೇ ಟಿಕೆಟ್ ಕೊಟ್ಟ. ನಾವೇನು ಮಾಡಕಾಯ್ತದೆ. ನಾನೆ ಪಾರ್ಟಿ ಪ್ರಸಿಡೆಂಟಾಗಿದ್ರೆ ಮದ್ಲು ಭವಾನಿಗೆ ಟಿಕೆಟ್ ಕೊಟ್ಟು ಅಮ್ಯಾಲೆ ಉಳದೋರಿಗೆ ಕೊಡತ್ತಿದ್ದೆ.”

“ಈ ವಿಷಯದಲ್ಲಿ ದೇವೇಗೌಡ್ರು ನಿಮ್ಮ ಪರ ಇರಲಿಲ್ವ ಸಾ?”

“ಇದ್ರು ಕಂಡ್ರೀ. ಪಾಪ ಅವುರ ತಾನೆ ಏನು ಮಾಡ್ಯಾರು, ಕುಂತು ಬುಟ್ಟವುರೆ. ಮದ್ಲಿನಂಗಿದ್ರೆ ಬುಡತಿದ್ವ ನಾವೂ”

“ಅದು ಪತ್ತೆ ಆಯ್ತ ಸಾ?”

“ಯಾವುದ್ರಿ?”

“ದೇವೇಗೌಡ್ರ ಮ್ಯಾಲೆ ಯಾವುದೋ ಕ್ಯಟ್ಟ ಕಣ್ಣು ಬಿದ್ದಿದೆ ಅಂತ ಕುಮಾರಣ್ಣ ಅತ್ತರಲ್ಲ, ಅದು ಸಾರ್.”

“ಈ ಎಲಕ್ಸನ್ ಗಲಾಟಿಲಿ ಅದ ಯಾರೂ ಅಂತ ಕಂಡಿರಲಿಲ್ಲ ಕಂಡ್ರಿ.”

ರೇವಣ್ಣ

“ಅಂಜನ ಹಾಕಿ ನೋಡಿದ್ರೆ ಗೊತ್ತಾಗದು ಸಾ. ಉಡುಪಿ ಕಡೆ ಬನ್ನಂಜೆ ಗೋವಿಂದಾಚಾರಿ ಅಂತ ಇದ್ದರು. ಅವುರ ಮನೆಲಿ ಒಂದು ಪುಸ್ತಕ ಕಳೆದೋಗಿತ್ತಂತೆ, ಅಂಜನ ಹಾಕಿ ನೋಡಿದಾಗ ಅದಿದ್ದ ಜಾಗ ಕಾಣತಂತೆ. ಅಂಗೆ ನೀವೂ ಅಂಜನ ಹಾಕಬೇಕಾಗಿತ್ತು.”

“ಅಂಗೈ ಹುಣ್ಣಿಗೆ ಕನ್ನಡಿ ಬೇಕೇನ್ರಿ! ನಮ್ಮಪ್ಪನಿಗೆ ಏನು ವಸಿ ಜನ ಆಗದೋರಿದ್ದರೆ, ದೇವರು ನಮ್ಮಪ್ಪ ಕಡೆ ಇದ್ದಿದ್ರಿಂದ ಅವುರೆಲ್ಲ ತೀರೋದ್ರು. ನಮ್ಮಪ್ಪ ಇನ್ನು ಗಟ್ಟಿ ಮುಟ್ಟಾಗವುರೆ.”

“ಗಟ್ಟಿ ಜೀವ ಸಾರ್ ಅದು, ಪುನಃ ತನ್ನ ಕುಟುಂಬನ ಕರ್ನಾಟಕದ ಸಿಂಹಾಸನದ ಮೇಲೆ ಕೂರಿಸೆ ಹೋಗದದು.”

“ನಮ್ಮಾಸೆನೂ ಅದೆ ಅಲವೇನ್ರಿ! ಕುಮಾರ ಮತ್ತೆ ಮುಖ್ಯಮಂತ್ರಿ ಆಗಬೇಕು, ನಾನು ಪಿಡಬ್ಲುಡಿ ಮಂತ್ರಿ ಆಗಬೇಕು ಅಂತ ಹೋರಾಡ್ತಯಿರದು.”

“ಜೊತೆಗೆ ಇಂಧನ ಖಾತೆ, ಕೆಎಂಎಫ್‌ನೂ ನೀವೇ ವಹಿಸಿಕೋಬೇಕು ಸಾರ್. ಯಾವುದೇ ಖಾತೆ ಕೊಟ್ರು ಚನ್ನಾಗಿ ನಿಭಾಯಿಸ್ತಿರಿ ನೀವು. ಆ ಶಕ್ತಿ ಇವತ್ತು ಯಾವನಿಗೂ ಇಲ್ಲ.”

“ಅಲ್ಲ ಕಂಡ್ರೀ ನಾನು ಪಿಡಬ್ಲುಡಿ ಮಂತ್ರಿಯಾಗಿದ್ದಾಗ ಬೆಂಗಳೂರು ರೋಡು ಯಂಗಿದ್ದೋ.. ಒಂದೆಒಂದು ಬಟನ್ನು (ಗುಂಡಿ) ರಸ್ತೆಲಿ ಕಾಣತಿರಲಿಲ್ಲ. ಈ ಬಿಜೆಪಿಗಳು ಬಂದು ರೋಡು ತುಂಬ ಬರೀ ಬಟನ್ನಗಳೇಯ. ಪಾರ್ಟಿ ಪರಸೆಂಟು ಅಂದ್ರೆ ಯಾವು ರೋಡು ಚನ್ನಾಗಿರತವುರಿ?”

“ನೀವು ಪುನಃ ಮಂತ್ರಿಯಾಗಿ ಪಿಡಬ್ಲುಡಿ, ಇಂಧನ ಖಾತೆ ಮತ್ತು ಕೆಎಂಎಫ್ ಪಡಕೋಬೇಕು ಸಾರ್. ಅಂಗೆ ಭವಾನಿಯಕ್ಕನ್ನ ಎಮ್ಮೆಲ್ಸಿ ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮಾಡಬೇಕು ಸಾ.”

“ಆದ್ಕೆ ನಿಮಗೆ ತಲೆಯಿಲ್ಲ ಅನ್ನದು.”

“ಯಾಕ್ ಸಾ?”

“ಅಲ್ಲಕಂಡ್ರಿ ಅವುಳು ಜಿಲ್ಲಾ ಪಂಚಾಯ್ತಿ ಆಡಳಿತ ಮಾಡುವಾಗಲ್ವಾ, ಇಸುಗೂಲುಡುಗ್ರು ವಳ್ಳೆ ನಂಬರ್ ತಗಂಡಿದ್ದೂ, ಆದ್ಕೆ ಎಜುಕೇಶನ್ ಮಂತ್ರಿ ಮಾಡನ ಅಂತ ಇದ್ದಿನಿ. ಆ ಮಹಿಳೆ ಮಕ್ಕಳು ಕಲ್ಯಾಣ ಇಲಾಖೆ ಯಾರಿಗೆ ಬೇಕ್ರಿ?”

“ಥೂತ್ತೇರಿ.”

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...