Homeಮುಖಪುಟಪ್ರಸಕ್ತ ಸಂದಿಗ್ಧವನ್ನು ಪರಿಹರಿಸಿಕೊಳ್ಳುವುದಕ್ಕೆ, ಸನಾತನದಲ್ಲಿ ಅಡಗಿರುವ ಹಿಂಸೆಯನ್ನು ಎದುರುಗೊಳ್ಳುವ ಅಗತ್ಯ

ಪ್ರಸಕ್ತ ಸಂದಿಗ್ಧವನ್ನು ಪರಿಹರಿಸಿಕೊಳ್ಳುವುದಕ್ಕೆ, ಸನಾತನದಲ್ಲಿ ಅಡಗಿರುವ ಹಿಂಸೆಯನ್ನು ಎದುರುಗೊಳ್ಳುವ ಅಗತ್ಯ

- Advertisement -
- Advertisement -

ಅವತ್ತು ಸಿಂಧಗಿಯ ಬಸ್ ಸ್ಟಾಪಿನ ಬಳಿಯ ಚಾ ಅಂಗಡಿಯಲ್ಲಿ ಕೂತು ಗೌರಿ ಲಂಕೇಶರಿಗೆ ಗುಂಡು ಹೊಡೆದ ಹುಡುಗ ಪರಶುರಾಮ ವಾಘ್ಮೋರೆಯ ಸ್ನೇಹಿತ ರಾಕೇಶ್ ಸಿದ್ಧರಾಮಯ್ಯಮಠ ಬಳಿ ಮಾತಾಡುತ್ತಿದ್ದೆ. ಶ್ರೀರಾಮಸೇನೆಯ ಹುಡುಗರು ಇಬ್ಬರೂ 2012ರಲ್ಲಿ ಸಿಂಧಗಿಯ ತಾಲೂಕು ಕಚೇರಿಯ ಮೇಲೆ ಹಸಿರು ಬಾವುಟ ಹಾರಿಸಿ, ಮುಸ್ಲಿಮರು ಪಾಕಿಸ್ತಾನದ ಬಾವುಟ ಹಾರಿಸಿದ್ದಾರೆ ಅಂತ ಅವರ ಮೇಲೆ ಗೂಬೆ ಕೂರಿಸಿ ದೊಂಬಿ ಎಬ್ಬಿಸಿದ ಪ್ರಕರಣದಲ್ಲಿ ಜೈಲು ನೋಡಿ ಬಂದಿದ್ದರು. ರಾಕೇಶನಿಗೆ ಅದರ ಬಗ್ಗೆ ಎಳ್ಳಷ್ಟೂ ಮುಜುಗರವಿರಲಿಲ್ಲ. “ಅವತ್ತು ಮುಸ್ಲಿಮರದು ಭಾಳ ಆಗಿತ್ತು ಸರ್, ನಾವು ಮಾಡಿದ್ದು ಅವರನ್ನು ಒಂದು ಅಂಕೆಗೆ ತರಲಿಕ್ಕಾಯಿತು” ಅಂತಂದ. ಗೌರಿ ಹತ್ಯೆಗೂ ಮುಂಚೆ ಆತನಿಗೇನೂ ತಿಳಿದಿರಲಿಲ್ಲ. ಆದರೆ ಆ ಹತ್ಯೆಯ ಬಗ್ಗೆ ಅವನ ತಕರಾರೇನೂ ಇರಲಿಲ್ಲ. “ಹಿಂದೂ ಧರ್ಮದ ಬಗ್ಗೆ ಎಲ್ಲರೂ ಬಾಯಿಗೆ ಬಂದಂಗೆ ಮಾತಾಡ್ತಾರೆ, ಇವರಿಗೆಲ್ಲಾ ಬುದ್ಧಿ ಕಲಿಸೋದು ಬೇಡ್ವಾ? ಆವ ಭಗವಾನನ್ನೂ ಹೊಡೀಬೇಕಿತ್ತು” ಅಂದವನು ಅವನು ಬಿಡಿ ಸರ್ ಹೀರೋ “ಸಿಂಧಗಿ ಕಾ ಘೋಡ್ಸೆ” ಅಂತ ತುಂಬು ಮೆಚ್ಚುಗೆಯಿಂದ ಪರಶುರಾಮ ವಾಘ್ಮೋರೆಯ ಬಗ್ಗೆ ಮಾತಾಡಿದ.

ಗೌರಿ ಲಂಕೇಶ್ ಸತ್ತ ಕೆಲವೇ ನಿಮಿಷಗಳಲ್ಲಿ “ಗಾಂಧಿಯನ್ನು ಕೊಂದವರೇ, ಗೌರಿಯನ್ನೂ ಕೊಂದರು” ಎಂಬ ಘೋಷಣೆ ಹುಟ್ಟಿಕೊಂಡಿತ್ತು. ಅತ್ತ ಗೌರಿಯ ಸಾವನ್ನು ಸಂಭ್ರಮಿಸುತ್ತಿದ್ದ ಹಿಂದುತ್ವವಾದಿಗಳು ತನಿಖೆಗೆ ಮುಂಚೆಯೇ ತೀರ್ಮಾನ ಎಂದು ಈ ಘೋಷಣೆಯನ್ನು ಜರಿದಿದ್ದರು. ಆದರೆ ಸಿಂಧಗಿಯ ಆ ಚಾ ಅಂಗಡಿಯಲ್ಲಿ ಇತಿಹಾಸ ಮರುಕಳಿಸಿದ್ದು ದಿಟ ಎಂಬುದಕ್ಕೆ ಸ್ಪಷ್ಟ ಪುರಾವೆ ಸಿಕ್ಕಿತ್ತು.

ಇವತ್ತು ಸಂಘಪರಿವಾರವು ಹಿಂದೂಗಳು ಭಯೋತ್ಪಾದಕರಾಗಲು ಸಾಧ್ಯವಿಲ್ಲ ಎಂಬುದನ್ನು ಒಂದು dogma ರೀತಿಯಲ್ಲಿ ಪ್ರತಿಪಾದಿಸುತ್ತದೆ. ಹಿಂದೂಗಳು ಸಹನಶೀಲರು, ಅವರು ಅಹಿಂಸಾತತ್ಪರರು ಅವರು ಭಯೋತ್ಪಾದಕರಾಗಲಾರರು ಎಂಬುದು ಅವರ ವಾದ. ಅಲ್ಲದೆ, ಅದೇನಿದ್ದರೂ ಮುಸ್ಲಿಮರಿಗೆ ಮಾತ್ರ ಸಾಧ್ಯ ಯಾಕೆಂದರೆ ಅವರ ಧರ್ಮದಲ್ಲೇ ಹಿಂಸೆ ಇದೆ ಎಂಬುದು ಹೇಳದೇ ಉಳಿದ ಮಾತು. ಯುಪಿಎ ಆಡಳಿತಾವಧಿಯಲ್ಲಿ ಹೇಮಂತ ಕರ್ಕರೆ ಬಯಲು ಮಾಡಿದ ಅಸೀಮಾನಂದ್-ಸಾಧ್ವಿ ಪ್ರಜ್ಞಾಸಿಂಗ್ ಅವರ ನೇತೃತ್ವದ ಸರಣಿ ಬಾಂಬ್ ದಾಳಿ ಪ್ರಕರಣಗಳನ್ನು ಅವರು ಇಂದಿಗೂ ಒಪ್ಪುವುದಿಲ್ಲ. ಪ್ರಜ್ಞಾಸಿಂಗಳನ್ನು ಇವತ್ತು ಅವರು ಸಂಸದೆಯನ್ನಾಗಿ ಮಾಡಿಕೊಂಡಿದ್ದಾರೆ. ಆಕೆ ಆಗಾಗ ಗಾಂಧಿಯನ್ನು ಕೊಂದ ನಾಥೂರಾಮ್ ಘೋಡ್ಸೆಯನ್ನು ಸಾರ್ವಜನಿಕವಾಗಿ ಆರಾಧಿಸುತ್ತಲೇ ಇರುತ್ತಾಳೆ.

ಮತ್ತಿದು ಭಯೋತ್ಪಾದನೆಯಲ್ಲವೇ? ಅಲ್ಲ. ಅದರಲ್ಲೇ ಅಡುಗಿದೆ ಈ ಹಿಂಸೆ-ಅಹಿಂಸೆಯ ಗುಟ್ಟು. ಇದನ್ನು ಎದುರುಗೊಳ್ಳುವುದರಿಂದ, ಇವತ್ತು ನಮ್ಮ ಸಮಾಜದಲ್ಲಿನ ಹಿಂಸೆ-ಕ್ರೌರ್ಯಗಳನ್ನು ಎದುರಿಸಲು ನಮಗೆ ಒಂದು ಸ್ಪಷ್ಟತೆ ಒದಗಿಸುತ್ತದೆ ಎನಿಸುತ್ತದೆ.

ಹಿಂದೂ ಧರ್ಮವು ವ್ಯಕ್ತಿಗೆ ಮುಕ್ತಿಮಾರ್ಗದ ಆಯ್ಕೆಯ ಸ್ವಾತಂತ್ರ್ಯವನ್ನು ನೀಡುತ್ತದೆ, ಅಬ್ರಹಾಮಿಕ್ ಧರ್ಮಗಳಲ್ಲಂತೆ dogmaಗಳಿಲ್ಲ, ಈ ಧರ್ಮದಲ್ಲಿರುವಷ್ಟು ವೈವಿಧ್ಯ-ವೈರುಧ್ಯಪೂರ್ಣವಾದ ತತ್ವಶಾಸ್ತ್ರಗಳು ಇನ್ನೆಲ್ಲೂ ಇಲ್ಲ, ಇದುವೇ ಈ ಧರ್ಮದ ಮೂಲಸೆಲೆ. – ಇವೆಲ್ಲವೂ ಒಂದು ಮಟ್ಟಿಗೆ ನಿಜವೇ ಆದರೂ ಈ ಧರ್ಮದಲ್ಲಿ ಹಿಂಸೆಯನ್ನು ಹಿಂಸೆಯೇ ಅಲ್ಲ ಎಂದು ವ್ಯಾಖ್ಯಾನಿಸುತ್ತಾ ಮುಚ್ಚಿಟ್ಟ ಅಗಣಿತ ಹಿಂಸೆ, ಯುದ್ಧ ಮತ್ತು ಕ್ರೌರ್ಯ ಇದೆ. ಕೆಲವು ದಿನಗಳ ಹಿಂದೆ ಮಂತ್ರಾಲಯ ಮಠದ ಪೀಠಾಧಿಪತಿಗಳು ಬ್ರಾಹ್ಮಣರಿಗೆ ಇತ್ತೀಚೆಗೆ ’ಶಾಪಾನುಗ್ರಹ ಶಕ್ತಿ’ ನಶಿಸಿದೆ ಅಂತ ಹಲುಬಿದ್ದರು. ಶಾಪಾನುಗ್ರಹ ಎಂಬ ಪದ ನಮ್ಮ ವೈದಿಕದ ಒಳಗನ್ನು ಒಡೆದು ಅರಿಯಲು ಹೆಚ್ಚು ಸಹಕಾರಿ. ಬ್ರಾಹ್ಮಣರು ನೀಡುವ ಶಾಪವೂ ಅನುಗ್ರಹವೇ! ಹೀಗೇ ನಮ್ಮ ಪುರಾಣಗಳಲ್ಲಿ ಹಿಂಸೆಯನ್ನು ಮರೆಮಾಚಲಾಗಿದೆ. ಶಂಭೂಕ, ಏಕಲವ್ಯ, ಬಲಿ ಚಕ್ರವರ್ತಿ, ಬಾರ್ಬರೀಕ -ಇವು ಈಗಾಗಲೇ ನಾವು ಒಡೆದು ನೋಡಿರುವ ಪ್ರತಿಮೆಗಳು.

ಆದರೆ ನಮ್ಮ ಪುರಾಣಗಳು, ಇಂದು ನಾವು ಆಚರಿಸುವ ಅನೇಕ ಹಬ್ಬಗಳು ಮೂಲದಲ್ಲಿ ಜನಾಂಗೀಯ ದ್ವೇಷ, ಹಿಂಸೆ ಮತ್ತು ಯುದ್ಧೋನ್ಮಾದ, ಸಾವನ್ನು ಸಂಭ್ರಮಿಸುವವೇ ಅಲ್ಲವೇ? ಪ್ರಖರ ಮಾನವ ಹಕ್ಕು ಹೋರಾಟಗಾರು ಆರ್ಯ ಸಮಾಜದ ಸನ್ಯಾಸಿಯೂ ಆಗಿದ್ದ ಸ್ವಾಮಿ ಅಗ್ನಿವೇಶ್ ಅವರು ತೀರಿಕೊಂಡಾಗ ಮಾಜಿ ಸಿಬಿಐ ಮುಖ್ಯಸ್ಥರಾದ, ಹಿಂದುತ್ವವಾದಿಯಾದ ನಾಗೇಶ್ವರ ರಾವ್ ಅವರು ಆ ಸಾವನ್ನು ಸಂಭ್ರಮಿಸಿ ಟ್ವೀಟ್ ಮಾಡಿದರು. ಗೌರಿ ಅವರ ಕೊಲೆ ಆದಾಗಲೂ ಸ್ವತಃ ಪ್ರಧಾನಿ ಮೋದಿ ಅವರು ಫಾಲೋ ಮಾಡುವ ಅನೇಕರು ಗೌರಿಯವರ ಸಾವನ್ನು ಸಂಭ್ರಮಿಸಿ ಟ್ವೀಟಿಸಿದ್ದರೂ ಪ್ರಧಾನಿಗಳು ಚಕಾರವೆತ್ತಿಲ್ಲ. ಆ ಕೊಲೆಯನ್ನು ಇವತ್ತಿನವರೆಗೂ ಖಂಡಿಸಿಯೂ ಇಲ್ಲ. ಇರಲಿ. ನಾಗೇಶ್ವರ ರಾವ್ ಅವರ ಸಂಭ್ರಮವನ್ನು ಅನೇಕರು ಇದು ಹಿಂದೂ ಸಂಸ್ಕೃತಿಯಲ್ಲ ಎಂದು ಖಂಡಿಸಿದರು. ವಿಚಲಿತರಾಗದ ಅವರು “ಇಲ್ಲ ಇದುವೇ ನನ್ನ ಹಿಂದೂ ಸಂಸ್ಕೃತಿ, ನಮ್ಮಲ್ಲಿ ’ಈವಿಲ್’ನ ಅಂದರೆ ಅಸುರರ ಸಂಹಾರವನ್ನು ಹಬ್ಬಗಳಾಗಿ ಆಚರಿಸುತ್ತೇವೆ; ದಸರಾ, ದೀಪಾವಳಿ ಹೀಗೆ, ನನ್ನ ಪ್ರಕಾರ ಅಗ್ನಿವೇಶ್ ರಾಕ್ಷಸರು” – ಎಂದು ವೈದಿಕ ಸಂಸ್ಕೃತಿಯ ಬಗ್ಗೆ ಒಂದು ಒಳನೋಟ ನೀಡಿದ್ದರು. ಹೌದಲ್ಲವೇ?

ನಮ್ಮ ಪುರಾಣಗಳು ಸುರಾಸುರರ ನಡುವಿನ ಕಾಳಗ, ಅಸುರರ ಮೇಲೆ ಸುರರ ವಿಜಯದ ಸಂಭ್ರಮಗಳಿಂದ ತುಂಬಿಹೋಗಿವೆ. ಇವು ಬರೀ ಕಥೆಗಳಲ್ಲ, ವೈದಿಕದ ಆರ್ಯರಿಗೂ ಮುನ್ನಾ ಇಲ್ಲಿ ನೆಲೆಸಿದ್ದ ನಾಗರು, ದ್ರಾವಿಡರು, ದಾಸ್ಯುಗಳಿಗೂ ಮತ್ತು ಆರ್ಯರಿಗೂ ನಡೆದ ಕಾಳಗಗಳ ಉಪಮಾರೂಪವೇ ಆಗಿದೆ. ಅಸುರ ಎಂದರೆ ಈಗ ಅರ್ಥವಾಗುವಂತೆ ರಾಕ್ಷಸ ಅಲ್ಲ. ಅಸು ಎಂದರೆ ಉಸಿರು, ಉಸಿರನ್ನು ನೆಲೆಸುವವ ಎಂಬ ಅರ್ಥ ಬರುತ್ತದೆ, ಅಂದರೆ ರಾಜ. ಇರಾನಿನ ಪ್ರಾಚೀನ ದೇವತೆಯ ಹೆಸರು ಅಹುರ ಮಜ್ದಾ. ಇವರನ್ನು ಎದುರಿಸಿ, ಯುದ್ಧದಲ್ಲಿ ಗೆದ್ದು ನೆಲೆಸಿದ ಆರ್ಯರು ಇವರನ್ನು ರಾಕ್ಷಸರು, ದಾನವರು, ಕೇಡುಗರು, ಈವಿಲ್ ಎಂದು ಕಥೆ ಕಟ್ಟಿ ನಡೆಸಿದ ಪ್ರಪೋಗಾಂಡವೇ ನಮ್ಮ ಪುರಾಣಗಳಲ್ಲವೇ? ಈ ಜನಗಳ ವಿರುದ್ಧ ನಡೆಸಿದ ಹಿಂಸೆಯು ಹಿಂಸೆಯೇ ಅಲ್ಲ ಎಂದು ಅದೇ ಜನರನ್ನು ನಂಬಿಸಿದ್ದಾರೆ. ಹಿಂಸೆಯನ್ನು ’ಇನ್‌ವಿಸಿಬಲೈಸ್’ ಮಾಡುವುದು ಹೀಗೆ. ಅದು ಕಥನದ ಶಕ್ತಿ. ಇದನ್ನು ಇವತ್ತು ಇಷ್ಟೇ ಶಕ್ತವಾಗಿ ಅನುಷ್ಠಾನ ಮಾಡುತ್ತಿರುವುದು ಯಾರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಈಗ ದಸರಾವನ್ನೇ ತೆಗೆದುಕೊಳ್ಳಿ – ಇವತ್ತಿನ ಮೈಸೂರು ಭಾಗದಲ್ಲಿ ಮಹಿಷಮಂಡಲ ಎಂಬುದೊಂದು ರಾಜ್ಯ ಇತ್ತು. ಅಶೋಕನು ಈ ರಾಜ್ಯಕ್ಕೆ ಬೌದ್ಧ ಪ್ರಚಾರಕರನ್ನು ಕಳಿಸಿದ ಎಂಬುದಕ್ಕೆ ಐತಿಹಾಸಿಕ ಪುರಾವೆಗಳು ದೊರೆಯುತ್ತವೆ. ಮೌರ್ಯ ಸಾಮ್ರಾಜ್ಯವು ಬೌದ್ಧ ಧರ್ಮದ ಉಚ್ಛ್ರಾಯದ ಕಾಲಘಟ್ಟ. ಮಹಿಷಮಂಡಲವು ಅದರ ಸಮಕಾಲೀನ. ಮೌರ್ಯ ಸಾಮ್ರಾಜ್ಯದ ಪತನವಾಗಿದ್ದು ಅಲ್ಲೇ ಸೇನಾಪತಿಯಾಗಿದ್ದ ಪುಷ್ಯಮಿತ್ರ ಶುಂಗ ಎಂಬ ಬ್ರಾಹ್ಮಣನು ಮೌರ್ಯರನ್ನು ಸದೆಬಡಿದು ಅಧಿಕಾರಕ್ಕೆ ಬರುವ ಮೂಲಕ. ಶುಂಗನು ಬೌದ್ಧ ಧರ್ಮವನ್ನು ಸದೆಬಡಿದು ವೈದಿಕ ವ್ಯವಸ್ಥೆಯನ್ನು ಪುನಃಸ್ಥಾಪಿಸಲು ತುದಿಯೊತ್ತಿದನೆಂಬುದು ವಿದ್ವಾಂಸರ ಅಭಿಪ್ರಾಯ. ಬಹುಶಃ ಮಹಿಷಮಂಡಲವು ಇದೇ ಅವಧಿಯಲ್ಲಿ ಅವಸಾನವಾಗಿರಬೇಕು. ಮಹಿಷಾಸುರ ಎಂಬ ರಾಜನಿದ್ದ ಎಂಬುದಕ್ಕೆ ಐತಿಹಾಸಿಕ ಪುರಾವೆ ಇಲ್ಲ.

ಆದರೆ ಮಹಿಷರು ಎಮ್ಮೆಯನ್ನು ಸಾಕುತ್ತಿದ್ದ, ಪೂಜಿಸುತ್ತಿದ್ದ, ಅದನ್ನು ಟೋಟೆಮ್ ಆಗಿ ಬಳಸುತ್ತಿದ್ದ ಜನ, ಮತ್ತವರ ಉಪಮಾರೂಪವೇ ಮಹಿಷಾಸುರ ಎಂದು ವಾದಿಸಲು ಗಟ್ಟಿ ನೆಲೆಗಟ್ಟಿದೆ. ಚಾಮುಂಡಿಯು ಮಹಿಷಾಸುರನನ್ನು ಕೊಲ್ಲುವುದು, ಆರ್ಯರು ಮಹಿಷರ ಮೇಲಿನ ಯುದ್ಧದಲ್ಲಿ ಗೆದ್ದದರ ಉಪಮಾರೂಪವೇ ಆಗಿದೆ. ಇದನ್ನು ದುಷ್ಟ ಶಿಕ್ಷಣ, ಶಿಷ್ಟ ರಕ್ಷಣ ಎಂದು ನಾವು ನಂಬಿದ್ದೇವೆ. ಮಹಿಷಾಸುರ ಯಾಕೆ ದುಷ್ಟ, ಈವಿಲ್ ಎಂದರೆ ಅದಕ್ಕೆ ಸ್ಮಷ್ಟ ಉತ್ತರವಿಲ್ಲ. ಆತ ಆರ್ಯರನ್ನು ಎದುರಿಸಿದ್ದ ಎನ್ನುವುದಷ್ಟೇ ವಾಸ್ತವ. ಇನ್ನು ಬಲಿ-ವಾಮನರ ಕಥೆ ನಮಗೆ ತಿಳಿದಿರುವುದೇ. ಪುರಾಣ ಕಥೆಗಳೂ ಬಲಿಯನ್ನು ಒಳ್ಳೆಯ ರಾಜನೆಂತಲೇ ಬಣ್ಣಿಸುತ್ತವೆ. ಹಾಗಾದರೆ ಆತ ಮಾಡಿದ ತಪ್ಪಾದರೂ ಏನು? ಅಸುರನಾಗಿದ್ದುಕೊಂಡೂ ಧರ್ಮವನ್ನು ಪಾಲಿಸುತ್ತಿದ್ದರಿಂದ ಇಂದ್ರ ಪದವಿಗೆ ಅಪಾಯ ಬಂದದ್ದು. ಅಸುರನು ಧರ್ಮ ಪಾಲಿಸುವುದೂ ಅಧರ್ಮ ಎನ್ನುವುದು ಕಥೆ.

’ದುಷ್ಟ ಶಿಕ್ಷಣ, ಶಿಷ್ಟ ರಕ್ಷಣ’ ಎಂಬುದು ’ದೇವರ’ ಕಾಸ್ಮಿಕ್ ಕರ್ತವ್ಯವಾಗಿದೆ. ಗೀತೆಯಲ್ಲಿ ಕೃಷ್ಣ ಅದನ್ನೇ ಹೇಳುತ್ತಾನೆ ’ಪರಿತ್ರಾಣಾಯ ಸಾಧೂನಾಂ, ವಿನಾಶಾಯಚ ದುಷ್ಟ್ಕೃತಾಂ, ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ’. ಶಸ್ತ್ರ ಹೂಡದಾದ ಕ್ಷತ್ರಿಯ ಅರ್ಜುನನಿಗೆ ಯುದ್ಧ ಮಾಡುವುದೇ ತನ್ನ ಧರ್ಮವೆಂತಲೂ ತಾನು ಕೊಲ್ಲುವುದು ಹಿಂಸೆ ಅಲ್ಲವೆಂತಲೂ ಕೃಷ್ಣ ಹೇಳುತ್ತಾನೆ. ಇಲ್ಲಿ ಧರ್ಮ ಸಂಸ್ಥಾಪನೆಗೆ ಮಾಡುವ ಹಿಂಸೆ, ಹಿಂಸೆಯೇ ಅಲ್ಲ, ಬದಲಿಗೆ ಪವಿತ್ರ ಕರ್ತವ್ಯ ಎಂಬ ವಾದವಿದೆ. ಅದಕ್ಕೆ ಕರ್ಮದ ಹೊದಿಕೆ ಇದೆ. ಭಗವದ್ಗೀತೆಯನ್ನು ಪುಷ್ಯಮಿತ್ರ ಶುಂಗನ ಕಾಲದಲ್ಲಿ, ಅಹಿಂಸೆಯೇ ಪರಮ ತತ್ವವಾಗಿದ್ದ ಬೌದ್ಧ ಧರ್ಮದಿಂದ ಜನರನ್ನು ವಾಪಸ್ ಸೆಳೆಯಲು ಬರೆದದ್ದು ಎಂಬುದು ಬಾಬಾಸಾಹೇಬರ ವಾದ.

ಗೌರಿ ಲಂಕೇಶರನ್ನು ಕೊಂದ ಜನ ಗೋವೆಯ ಸನಾತನ ಸಂಸ್ಥಾ ಎಂಬ ಉಗ್ರ ಬಲಪಂಥೀಯ ಹಿಂದೂ ಸಂಘಟನೆಯಿಂದ ಪ್ರೇರೇಪಿತರು. ಮುಖ್ಯವಾಗಿ ಈ ಸಂಸ್ಥೆಯ ಗುರು ಡಾ. ಜಯಂತ ಬಾಲಾಜಿ ಅಥಾವಳೆ ಬರೆದ ’ಕ್ಷಾತ್ರ ಧರ್ಮ ಸಾಧನಾ’ ಎಂಬ ಪುಸ್ತಕದ ಆಧಾರದ ಮೇಲೆಯೇ ಅವರು ನಾಲ್ಕು ಜನರ- ನರೇಂದ್ರ ದಭೋಲ್ಕರ್, ಗೋವಿಂದ ಪಾನ್ಸರೆ, ಎಂ ಎಂ ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ – ಕೊಲೆಗಳನ್ನು ಮಾಡಿದರು ಎಂದು ಪೊಲೀಸರ ಆರೋಪಪಟ್ಟಿ ತಿಳಿಸುತ್ತದೆ. ಈ ಪುಸ್ತಕವನ್ನು ನಾವು ಓದಬೇಕಿದೆ. ಹಿಂದೂಗಳಲ್ಲಿ ’ಕ್ಷಾತ್ರವು ಕಣ್ಮರೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸುವ ಅಠಾವಳೆ ಕಲಿಯುಗಾಂತ್ಯ ಮಾಡಿ, ಸತ್ಯಯುಗ – ಅಂದರೆ ಭಾರತದಲ್ಲಿ ’ಈಶ್ವರೀರಾಜ್ಯ’ ಅಂದರೆ ಹಿಂದೂ ರಾಷ್ಟ್ರ – ಸ್ಥಾಪಿಸಲು ಕ್ಷಾತ್ರದ ಅವಶ್ಯಕತೆಯನ್ನು ಮನಗಾಣಿಸುತ್ತಾರೆ – ಪುರಾಣಗಳು, ಗೀತೆ ಮತ್ತು ಈ ಹಿಂದೆ ಆಗಿ ಹೋದ ಹಿಂದೂ ಸನ್ಯಾಸಿಗಳ ಜೀವನ ದೃಷ್ಟಾಂತಗಳ ಮೂಲಕ. ಗೀತೆ ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸತ್ಯಯುಗ, ಈಶ್ವರೀ ರಾಜ್ಯ ಸ್ಥಾಪಿಸುವುದು ಹೇಗೆ? – ’ದುಷ್ಟ ಶಿಕ್ಷಣ, ಶಿಷ್ಟ ರಕ್ಷಣ’. ಈ ಕಾಸ್ಮಿಕ್ ಆದ ದೈವ ಕರ್ತವ್ಯವನ್ನು ಅವರು ತಮ್ಮ ಕೈಗೆ ತೆಗೆದುಕೊಳ್ಳುತ್ತಾರೆ. ’ಈಶ್ವರೀರಾಜ್ಯ’ ಸ್ಥಾಪನೆಗೆ ಅಡ್ಡಿಯಾಗಿರುವ ’ದುಷ್ಟರು’, ’ದುರ್ಜನರು’, ’ಧರ್ಮದ್ರೋಹಿಗಳು’ ಯಾರು ಎಂದು ಈ ಪುಸ್ತಕ ಚರ್ಚಿಸುತ್ತದೆ. ಇದರಿಂದ ಪ್ರೇರಿತರಾದ ಕೆಲ ಕಾರ್ಯಕರ್ತರು ಈ ಕೊಲೆಗಳನ್ನು ಮಾಡಿದ್ದಾರೆ. ಅವರು ಹತ್ಯೆ ಮಾಡಿದವರನ್ನು ದುರ್ಜನರು ಯಾ ಅಸುರರು ಎಂದು ಪರಿಗಣಿಸಿದ್ದಾರೆ.

ಗೋವೆಯಲ್ಲಿ ದೀಪಾವಳಿಗೆ ನಡೆಯುವ ನರಕಾಸುರನ ಪ್ರತಿಮಾ ಸ್ಪರ್ಧೆಯಲ್ಲಿ ಬಾಂಬಿಟ್ಟು ಈ ಸಂಘಟನೆ ತನ್ನ ಹಿಂಸಾ ಕೃತ್ಯಗಳ ಸರಮಾಲೆಯನ್ನು ಶುರುಮಾಡಿತು. ಈ ಸ್ಪರ್ಧೆಯು ಅಸುರರ ವಿಜೃಂಭಣೆ ಎಂಬುದು ಅವರ ಆಕ್ಷೇಪ. ಅಸುರರ ಸಂಹಾರದಿಂದ ಧರ್ಮಸ್ಥಾಪನೆ ಎಂಬ ಪೌರಾಣಿಕ ಹಿಂದೂ ಧರ್ಮದ ಪರಿಕಲ್ಪನೆಗೂ ಇವತ್ತಿನ ಈ ಸರಣಿ ಕೊಲೆಗಳಿಗೂ, ನಾಗೇಶ್ವರ ರಾವ್ ಅವರು ಸ್ವಾಮಿ ಅಗ್ನಿವೇಶರ ಸಾವನ್ನು ಸಂಭ್ರಮಿಸಿದ್ದು ಎಲ್ಲವೂ ಒಂದೇ ನೆಲೆಯಿಂದ ಬಂದವುದಾಗಿದೆ. ಸನಾತನ ಸಂಸ್ಥೆಯ ಘೋಷವಾಕ್ಯ ಯಾವುದೇ ಮುಚ್ಚುಮರೆ ಮಾಡುವುದಿಲ್ಲ ’ಆರ್ಯ ಸನಾತನ ವೈದಿಕ ಹಿಂದೂ ಧರ್ಮಕೀ ಜೈ’, ’ಜಯತು ಜಯತು ಹಿಂದೂ ರಾಷ್ಟ್ರ’. (ಇತ್ತೀಚೆಗೆ ಮೋದಿಯವರು ಭಗವದ್ಗೀತೆಯ ಬಗೆಗಿನ ಒಂದು ಕಾರ್ಯಕ್ರಮದಲ್ಲಿ ಇದೇ ರೀತಿಯಲ್ಲಿ ದೇಶದ ಆಂತರಿಕ ಮತ್ತು ಬಾಹ್ಯ ಶತ್ರುಗಳ ವಿರುದ್ಧ ಹೋರಾಡುವುದು ದೈವ ಕಾರ್ಯ ಎಂದು ಗೀತೆಯನ್ನು ಉದ್ಧರಿಸಿ ಸಮರ್ಥಿಸಿಕೊಂಡಿದ್ದರು).

ಇನ್ನು ಹಿಂಸೆಯ ಅದರ್ಶೀಕರಣ, ಅಹಿಂಸೆಯ ಅಪಮೌಲ್ಯೀಕರಣವೂ ಇವರ ಪ್ರಮುಖ ನೆಲೆ. ಮಹಾರಾಷ್ಟ್ರದ ಸಂತೋಷ ಪವಾರ್ ಎಂಬ ನಾಟಕಕಾರನ ಪ್ರಸಿದ್ಧ ನಾಟಕ ’ಆಮಿ ಪಚ್ಪುತೆ’ ಪ್ರದರ್ಶನವಾಗುತ್ತಿದ್ದ ಕಡೆ ಬಾಂಬಿಟ್ಟಿತು ಸನಾತನ ಸಂಸ್ಥಾ. ಸಂತೋಷ ಪವಾರರಿಗೆ ಅದೇಕೆ ತನ್ನ ತಮಾಷೆಯ ಲಹರಿಯ, ಸ್ಕಿಟ್ ಮಾದರಿಯ ನಾಟಕಕ್ಕೆ ಬಾಂಬಿಟ್ಟರು ಅಂತ ಇವತ್ತಿಗೂ ಸರಿಯಾಗಿ ಅರ್ಥವಾಗಿಲ್ಲ. ಆ ನಾಟಕದ ಕ್ಲೈಮಾಕ್ಸಿನಲ್ಲಿ ಅರ್ಜುನನ್ನು ಯುದ್ಧಕ್ಕೆ ಅಣಿ ಮಾಡುವ ಕೃಷ್ಣನ ಗೀತೋಪದೇಶವನ್ನು ಗಾಂಧಿ ಅಹಿಂಸೆಯ ನೆಲೆಯಲ್ಲಿ ಪ್ರಶ್ನಿಸುತ್ತಾರೆ. ಆಶಿಶ್ ನಂದಿ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಮ ಘೋಡ್ಸೆಯ ಮನೋವಿಶ್ಲೇಷಣೆ ಮಾಡುತ್ತಾ, ಗಾಂಧಿಯ ಅಹಿಂಸೆ ಮತ್ತು ಪೆಸಿಫಿಸಂ ಹಿಂದುತ್ವದವರಿಗೆ ನಿಶ್ಶಕ್ತಿಯಾಗಿ, ಹಿಂದೂಗಳು ಕಳಕೊಂಡ ಕ್ಷಾತ್ರವಾಗಿ, ಹೆಣ್ತನವಾಗಿ ಕಂಡಿತ್ತು ಎಂದು ವ್ಯಾಖ್ಯಾನಿಸುತ್ತಾರೆ. ಸನಾತನ ಸಂಸ್ಥೆ ಹೇಳುತ್ತಿರುವುದೂ ಅದನ್ನೇ, ಅವರದು ಕ್ಷಾತ್ರ ಧರ್ಮ ಸಾಧನಾ.

ಬರಗೂರು ರಾಮಚಂದ್ರಪ್ಪನವರು 2005ರಲ್ಲಿ ಮಾಡಿದ ದಸರಾ ಉದ್ಘಾಟನಾ ಭಾಷಣ “ಸಂಹಾರ ಸಂಸ್ಕೃತಿಯ ಆಚೆ-ಈಚೆ”ಯನ್ನು ನಾವಿಂದು ಮತ್ತೆ ಓದಬೇಕಿದೆ. ದಸರೆಯ ಮೂಲದಲ್ಲಿರುವ ಕತೆಯನ್ನು, ಅದರ ಆದರ್ಶವನ್ನು ಪ್ರಶ್ನಿಸುತ್ತಾ: “ಸಂಹಾರವು ಇವತ್ತಿನ ಆದರ್ಶವೇ ಎಂಬ ಪ್ರಶ್ನೆ ಮುಖ್ಯ. ಐತಿಹ್ಯ ಮತ್ತು ಪುರಾಣಗಳ ದೈವೀಶಕ್ತಿ, ದಾನವಶಕ್ತಿಗಳಾಗಲಿ, ಚರಿತ್ರೆಯ ರಾಜ ಮತ್ತು ಪ್ರತಿರಾಜರಾಗಲಿ ಮನುಷ್ಯರೂಪದಲ್ಲೇ ಕಾಣಿಸಿಕೊಂಡಿದ್ದರು. ಒಂದು ಮನುಷ್ಯರೂಪ ಇನ್ನೊಂದು ಮನುಷ್ಯರೂಪವನ್ನು ಸಂಹಾರ ಮಾಡುವ ಮೂಲಕ ತನಗೆ ಆಗದ, ತನಗೆ ಸಲ್ಲದ ಗುಣ-ದುರ್ಗುಣಗಳ ವ್ಯಕ್ತಿತ್ವವನ್ನು ಸಂಹಾರ ಮಾಡಿದ್ದಾಗಿ ಅರ್ಥೈಸಬಹುದು. ಆದರೆ ಕಡೆಗೆ ಯುದ್ಧ ನಡೆದದ್ದು ಮನುಷ್ಯರೂಪಗಳ ನಡುವೆಯೇ ಆಗಿತ್ತು. ಸತ್ತವರು, ಗೆದ್ದವರು ಮನುಷ್ಯರೂಪಿಗಳೇ ಆಗಿದ್ದರು. ಆದ್ದರಿಂದ ಯುದ್ಧ ಮತ್ತು ಸಂಹಾರಗಳು ಇಂದು ಬೇಕೆ? ಇವು ಜನರ ನಂಬಿಕೆಯಲ್ಲಿರುವ ದೈವೀಶಕ್ತಿಗೆ ಪೂರಕವಾಗಿವೆಯೇ? ಆಯುಧಗಳು ನಮ್ಮ ಆದರ್ಶವೇ?….

ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದವರೆಗೆ ಬೆಳೆದು ಬಂದ ಆಯುಧಗಳ ಅದರ್ಶೀಕರಣವನ್ನು ಪ್ರಶ್ನೆಗಳ ಮೂಲಕ ಪರಿಶೀಲನೆಗೊಡ್ಡಬೇಕಿದೆ. ಆಯುಧಗಳೆ ಇರದ ಸಮಾಜವೊಂದು ಇರಲು ಅಸಾಧ್ಯ,
ಆದರೆ ಆಯುಧಗಳ ಬಳಕೆಯಲ್ಲಿ ಯಾರು ದುಷ್ಟರು, ಯಾರು ಶಿಷ್ಟರು ಎಂಬ ಪ್ರಶ್ನೆ ಏಳುತ್ತದೆ. ಎಲ್ಲರೂ ತಮ್ಮನ್ನು ಶಿಷ್ಟಶಕ್ತಿಗಳೆಂದೇ ಕರೆದುಕೊಳ್ಳುತ್ತಾರೆ, ಎದುರಾಳಿಗಳನ್ನು ದುಷ್ಟಶಕ್ತಿಗಳನ್ನುತ್ತಾರೆ; ಪರಸ್ಪರ ಹಿಂಸೆಯ ಆರೋಪ ಮಾಡುತ್ತಾರೆ…. ರಾಜ್ಯಾಧಿಕಾರವೂ ಒಳಗೊಂಡಂತೆ ಯಾರಿಗೂ ಆಯುಧ ಆದ್ಯತೆಯಾಗಬಾರದು,
ಆದರ್ಶವಾಗಬಾರದು. ಆಯುಧಗಳು ಆದರ್ಶವಾಗದ, ಆದ್ಯತೆ ಪಡೆಯದ, ಸಮಾನತೆಯ ಸಮಾಜ ನಿರ್ಮಾಣವೇ ನಮ್ಮ ಆದ್ಯತೆ ಮತ್ತು ಆದರ್ಶವಾಗಬೇಕು. ಆದ್ದರಿಂದ ನಾವೀಗ ಮಹಿಷಾಸುರ, ರಾವಣ, ದುರ್ಯೋಧನರ ಸಂಹಾರದ ನೆನಪುಗಳಲ್ಲಿ ಸಂಭ್ರಮಿಸುವುದು ಅರ್ಥಪೂರ್ಣವಲ್ಲ…” ಎಂದು ಹೇಳುತ್ತಾರೆ. ಈ ಭಾಷಣವನ್ನು ಇಂದು ದಸರಾ ವೇದಿಕೆಯಲ್ಲಿ ಕಲ್ಪಿಸಿಕೊಳ್ಳುವುದಾದರೂ ಸಾಧ್ಯವೇ? ಹತಾಶೆಯ ನಗೆ ನಕ್ಕರು ಬರಗೂರರು. ಅವರು ಈಗಾಗಲೇ ಗೌರಿ ಹಂತಕರ ಹಿಟ್‌ಲಿಸ್ಟ್‌ನಲ್ಲಿದ್ದಾರೆ.

ಕನ್ನಡದ ಮತ್ತೊಬ್ಬ ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರು ಕಳೆದ ವರ್ಷ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಸಂದರ್ಭ ಪ್ರಜಾವಾಣಿಯವರು ನಡೆಸಿದ ಸಂದರ್ಶನದಲ್ಲಿ, “ಪುರುಷನಿಗೆ ಸ್ತ್ರೀತ್ವದ ಸಾಧನೆ ಅನಿವಾರ್ಯ ಎಂದು ನಂಬಿದವನು ನಾನು. ಪ್ರತಿಯೊಬ್ಬ ಪುರುಷನು ಕೂಡಾ ಹೆಣ್ತನವನ್ನು ಸಾಧಿಸಬೇಕು. ಅದು ಮಾನಸಿಕವಾಗಿ. ಆಗ ಕರುಳು ಎನ್ನುವುದು ಹೆಂಗರುಳು ಎನ್ನುವ ಸ್ತ್ರೀವಾಚಕವಾಗುತ್ತದೆ. ಇದು ಆಂತರಿಕವಾದ ಕರುಳು ಮತ್ತು ಹೃದಯಕ್ಕೆ ಸಂಬಂಧಿಸಿದ ನಿರ್ವಚನ. ಗಂಡು ತಾಯ್ತನವನ್ನು ಸಾಧಿಸಬೇಕು. ಹಾಗೆಯೇ ಹೆಣ್ಣು ಕೂಡಾ ಸ್ವಲ್ಪ ಪುರುಷತ್ವವನ್ನು ಪಡೆಯಬೇಕಾದ ಅಗತ್ಯವಿದೆ. ಅರ್ಧನಾರೀಶ್ವರನ ಕಲ್ಪನೆ… ಯಾವ ರೂಪಕವನ್ನು ಸೃಷ್ಟಿ ಮಾಡಿದ್ದೇವಲ್ಲ ಅದು ಇವತ್ತಿನ ಅಗತ್ಯ. ನಮ್ಮ ಶಿಲ್ಪಗಳಲ್ಲೇ ಗಮನಿಸಿ, ಪುರುಷ ವಿಗ್ರಹಗಳ ಮುಖ ನೋಡಿದಾಗ ಒಂದು ಸ್ತ್ರೀಭಾವ ಕಾಣಿಸುತ್ತದೆ. ಕೋಮಲವಾದ ಆರ್ದ್ರಭಾವವಿದು.

ದೇವತೆಗಳನ್ನು ಸಂಪೂರ್ಣವಾಗಿ ಹೊರಗಿಡುವುದು ಅಥವಾ ದೇವಸ್ಥಾನಗಳನ್ನು ಬಹಿಷ್ಕರಿಸುವ ಕರೆಯನ್ನು ಕುವೆಂಪು ನಮಗೆ ಕೊಟ್ಟರು. ಇದು ಅತ್ಯಂತ ಆಧುನಿಕವಾದ ವೈಚಾರಿಕ ನಿಲುವು. ಸಮಾಜ ದೇವಸ್ಥಾನವನ್ನು ಹೊರಗಿಡಲಿಲ್ಲ ಎಂದಾದರೆ ಅಲ್ಲಿರುವ ಪ್ರತಿಮೆಗಳನ್ನು ಬದಲಾಯಿಸಬೇಕು. ಅದು ಹೇಗೆ ಎಂದರೆ ಕತ್ತಿ ಹಿಡಿದ, ಬಿಲ್ಲು ಹಿಡಿದ ದೇವತೆಗಳಿಗಿಂತ ನೇಗಿಲು ಹಿಡಿದ, ಕೊಳಲು ಹಿಡಿದ, ಸೌಟು ಹಿಡಿದ ದೇವತೆಗಳು ಮುಖ್ಯವಾಗ್ತಾರೆ. ದೇವತೆಗಳ ಕಲ್ಪನೆಯಲ್ಲಿ ಕೂಡಾ ನಾವು ರೂಪಕಾತ್ಮಕವಾದ ಬದಲಾವಣೆಗಳನ್ನು ತಂದರೆ ಅದು ಒಂದು ರೀತಿಯ ಸಾತ್ವಿಕ ಭಾವನೆಗಳನ್ನು ಅಲ್ಲಿಗೆ ಹೋಗುವವರಲ್ಲಿ ಪ್ರಚೋದಿಸಲು ಸಾಧ್ಯವಾಗುತ್ತದೆ. ತಾವೇ ಕತ್ತಿ ಹಿಡಿದ ದೇವರು ನಮಗೆ ಶಾಂತಿಯನ್ನು ಕೊಡ್ತಾರಾ?” ಎನ್ನಲು, ಲಕ್ಷ್ಮಣರಾಯರು “ಕೇಡನ್ನು ಸಂಹರಿಸಬೇಕು ಎನ್ನುವ ಕಾರಣಕ್ಕೆ ಈ ರೀತಿ ಇದೆಯಲ್ವಾ?” ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಮೂರ್ತಿಗಳು, “ಆದರೆ ಆ ರೂಪಕ ತಪ್ಪು ಸಂದೇಶ ಕಳಿಸುತ್ತದೆ” ಎಂದು ಉತ್ತರಿಸುತ್ತಾರೆ.

ಇಲ್ಲಿ ಕವಿಗಳು ನಮ್ಮ ದೇವತಾ ಕಲ್ಪನೆಗೂ ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ಹಿಂಸೆಗೂ ನಡುವೆ ಸ್ಪಷ್ಟವಾದ ಸಂಬಂಧವನ್ನು ಗುರುತಿಸುತ್ತಾರೆ. ಅವರು ಅದಕ್ಕೆ ರೂಪಕಾತ್ಮಕವಾದ ಉತ್ತರವನ್ನು ಸೂಚಿಸುತ್ತಾರೆ. ಅದನ್ನು ನಾವು ಒಪ್ಪಬಹುದು, ಒಪ್ಪದಿರಬಹುದು. ಐತಿಹಾಸಿಕವಾಗಿ ಈ ಸಂಧಿಗ್ಧಕ್ಕೆ ಉತ್ತರವಾಗಿ ಹುಟ್ಟಿದ್ದು ಬೌದ್ಧ ಧರ್ಮ, ಬಾಬಾಸಾಹೇಬರು ಕಡೆಗೆ ಅಪ್ಪಿದ್ದೂ ಬೌದ್ಧ ಧರ್ಮವನ್ನೇ. ವೆಂಕಟೇಶಮೂರ್ತಿಗಳೂ ಸಹ ಬುದ್ಧಚರಣ ಎಂಬ ಮಹಾಕಾವ್ಯವನ್ನು ರಚಿಸಿದ್ದಾರೆ ಎಂಬುದು ಮುಖ್ಯವಾದ ಸಂಗತಿ. ಇನ್ನೊಂದು ತುದಿಯಲ್ಲಿ ಇವತ್ತು ದಲಿತರು, ಆದಿವಾಸಿಗಳು ತಮ್ಮ ಸಂಸ್ಕೃತಿಯನ್ನು ಮರಳಿ ಸ್ಥಾಪಿಸುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಅದು ಮಹಿಷ ದಸರಾ ಇರಬಹುದು, ಭೀಮ-ಕೋರೆಗಾಂವ್ ವಿಜಯೋತ್ಸವ ಇರಬಹುದು.

ಎ.ಕೆ. ರಾಮಾನುಜಂ ಅವರು ತಮ್ಮ “Is there an Indian Way of Thinking?” ಎಂಬ ಪ್ರಬಂಧದಲ್ಲಿ ಭಾರತವು ಒಬ್ಬ ಮನುಷ್ಯನ ಹುಟ್ಟು, ಜಾತಿ, ಲಿಂಗದ ಅನುಸಾರದ ಮೇಲೆ ಆತನ ಧರ್ಮವನ್ನು ನಿರ್ಣಯಿಸುವುದರಿಂದ ಅದನ್ನು “context sensitive society” ಎಂದು ಗುರುತಿಸುತ್ತಾರೆ. ಅದೇ ಪಶ್ಚಿಮದ ನಾಗರಿಕತೆಯಲ್ಲಿ ಎಲ್ಲರ ಸಮಾನತೆಯ ಮೇಲೆ ಒತ್ತಿರುವುದರಿಂದ ಅದನ್ನು “predominantly context free society” ಎಂದು ಗುರುತಿಸುತ್ತಾರೆ. ಮುಂದುವರೆದು: “In predominantly ‘context-free’ societies, the counter movements tend to be towards the context sensitive…. In `traditional’ cultures like India, where context-sensitivity rules and binds, the dream is to be free of context”, ಎಂದು ತಮ್ಮ ವಾದ ಮಂಡಿಸುತ್ತಾರೆ. ಹಾಗಾಗಿಯೇ ಭಾರತದಲ್ಲಿ ನಡೆದ ಎಲ್ಲ ಕ್ರಾಂತಿಗಳೂ ಸಮಾನತೆಯೆಡೆಗೆ – ಅದು ಬೌದ್ಧ ಧರ್ಮ ಆಗಿರಬಹುದು, ನಂತರ ಬಂದ ಭಕ್ತಿ ಪರಂಪರೆ, ವಚನ ಚಳುವಳಿ ಮತ್ತು ಸಂವಿಧಾನವೇ ಆಗಿರಬಹುದು, ಎಲ್ಲವೂ ‘context free’ ಆಗಲಿಕ್ಕೆ ತುಡಿದವುಗಳೇ.

ಈ ಎಲ್ಲ ಕ್ರಾಂತಿಗಳ ಮತ್ತೊಂದು ಮೌಲ್ಯ ಅಹಿಂಸೆ. ಈ ಎಲ್ಲ ಕ್ರಾಂತಿಗಳೂ ಅಹಿಂಸೆಗೆ ಅಷ್ಟು ಒತ್ತು ಕೊಡಲು ಕಾರಣ ವೈದಿಕ ಪ್ರಣೀತ ಸಮಾಜದಲ್ಲಿ ಅಡಕವಾಗಿರುವ ಹಿಂಸೆಯೇ ಆಗಿದೆ. ಮತ್ತೆ ಈ ಎಲ್ಲ ಕ್ರಾಂತಿಗಳನ್ನು ವೈದಿಕವು ಅಪಾರವಾದ ಹಿಂಸೆಯಿಂದಲೇ ಎದುರುಗೊಂಡಿದೆ. ಆರ್ಯರು ಪಾಸ್ಟೋರಲ್ ಸ್ಟೆಪ್ ಪ್ರಾಂತ್ಯದಿಂದ ಇಲ್ಲಿಗೆ ಬಂದಾಗ ಇಲ್ಲಿದ್ದ ನಾಗ ಜನಾಂಗ, ಅಸುರರನ್ನು ಅಪಾರ ಹಿಂಸೆಯ ಯುದ್ಧದಲ್ಲಿ ಗೆದ್ದರಷ್ಟೇ ಅಲ್ಲ, ಅವರ ನೆನಪನ್ನು ಭ್ರಷ್ಟಗೊಳಿಸಿಬಿಟ್ಟರು. ಅವರನ್ನು ರಾಕ್ಷಸರಂತೆ, ಈವಿಲ್ ಎಂದು ಅವರ ಸಂಹಾರವನ್ನು ಪುರಾಣ-ಪುಣ್ಯಕತೆಗಳಾಗಿ ಪ್ರಚುರಪಡಿಸಿದರು, ಹಬ್ಬಗಳಾಗಿ ಆಚರಿಸಿದರು. ಅವರ ಕುರುಹುಗಳನ್ನು ಅಳಿಸಿಹಾಕಿದರು. ಮುಂದೆ ನಡೆದ ಬೌದ್ಧಕ್ರಾಂತಿಯದೂ ಇದೇ ಕಥೆ. ಮೌರ್ಯ ಸಾಮ್ರಾಜ್ಯದ ಕಾಲದಲ್ಲಿ ಬೌದ್ಧ ಧರ್ಮವು ದೇಶವ್ಯಾಪಿ ಹರಡಿತ್ತು, ವೈದಿಕಕ್ಕೆ ಅತೀವ ಅಭದ್ರತೆ ಉಂಟಾಗಿತ್ತು.

ಆದರೆ ಬ್ರಾಹ್ಮಣ ದೊರೆಗಳ ಶುಂಗ ಸಾಮ್ರಾಜ್ಯ ಸ್ಥಾಪನೆಯಾದಾಗಿನಿಂದ ಮೊದಲಾಗಿ ಶಂಕರಾಚಾರ್ಯರ ಕಾಲದವರೆಗೂ ಬೌದ್ಧರನ್ನು ಇನ್ನಿಲ್ಲದ ಹಿಂಸೆ ನೀಡಿ ದೇಶಬಿಟ್ಟು ಹೊರಗಟ್ಟಲಾಯಿತು. (ಗಾಂಧಿ ತನ್ನನ್ನು ತಾನು ಸನಾತನಿ ಎಂದು ಕರೆದುಕೊಳ್ಳುತ್ತಲೇ ಅಹಿಂಸೆಯನ್ನು ಪರಮಮೌಲ್ಯವಾಗಿಸಿದರು. ಅಹಿಂಸೆ ಸನಾತನದ ಮೌಲ್ಯ ಅಲ್ಲವೇ ಅಲ್ಲ, ಅದು ಬೌದ್ಧ ಮೌಲ್ಯ. ಇರಲಿ.) ಮುಂದೆ ನಮ್ಮ ನಾಡಿನಲ್ಲೇ ಹುಟ್ಟಿದ ವಚನ ಚಳುವಳಿಯಿಂದ ವರ್ಣಸಂಕರವಾಯಿತೆಂದು ವೈದಿಕರು ನಡೆಸಿದ ಅಪಾರ ಹಿಂಸೆಯಿಂದ ಕೊನೆಗೊಂಡಿತು. ಈ ಎಲ್ಲವನ್ನೂ ವೈದಿಕವು ಮರೆಗೆ ಸರಿಸಿಬಿಟ್ಟಿತ್ತು. ಬುದ್ಧ, ಅಶೋಕ, ವಚನಗಳನ್ನು ನಾವು ತೀರಾ ಇತ್ತೀಚೆಗೆ discover ಮಾಡಿಕೊಂಡೆವು, ಅಸುರ ಸಂಸ್ಕೃತಿಯ ಬಗ್ಗೆ ಇನ್ನೂ discover ಮಾಡುವುದು ಬಹಳಷ್ಟಿದೆ, ಎಂಬ ಸಂಗತಿ ವೈದಿಕವು ನಮ್ಮ ಸಮಾಜದ ಕಥನದ ಮೇಲೆ ಎಂಥ ಬಿಗಿಪಟ್ಟು ಹೊಂದಿದೆ ಮತ್ತು ಈ ಕಥನವೂ ಹೇಗೆ ಕ್ರೌರ್ಯದ ನೆಲೆಯಾಗಿದೆ ಎಂಬುದನ್ನು ತೋರಿಸುತ್ತದೆ.

ಸಂವಿಧಾನವು ಇತ್ತೀಚೆಗೆ ನಮ್ಮಲ್ಲಿ ನಡೆದ context free societyಯೆಡೆಗಿನ ಅತಿ ದೊಡ್ಡ ಕ್ರಾಂತಿಯಾಗಿದೆ. ಸಂವಿಧಾನದ ಪ್ರಕಾರ ಎಲ್ಲರೂ ಜಾತಿ, ಮತ, ಅಂತಸ್ತು, ಲಿಂಗದ ಅಥವಾ ಇನ್ಯಾವುದೇ ತಾರತಮ್ಯವಿಲ್ಲದಂತೆ ಎಲ್ಲರೂ ಸಮಾನರು. ಹಿಂದುತ್ವವು ಮೂಲದಲ್ಲಿ ಬ್ರಾಹ್ಮಣತ್ವವೇ ಆಗಿದೆ. ಅದು ಹುಟ್ಟಿದ್ದೇ ಮಹಾರಾಷ್ಟ್ರದ ಬ್ರಾಹ್ಮಣ ಪೇಶ್ವೆಗಳ ನರಕಸದೃಶ ಆಡಳಿತವನ್ನು ದಲಿತರು ಭಿಮಾ-ಕೋರೆಗಾಂವ್‌ದಲ್ಲಿ ಬ್ರಿಟಿಷರ ಜೊತೆ ಸೇರಿ ಕೊನೆಗೊಳಿಸಿದ ನಂತರ – ಸಮಾಜದ ಮೇಲೆ ತಮ್ಮ ಹಿಡಿತ ತಪ್ಪಿಹೋಗುತ್ತಿದೆಯೆಂಬ ಅಭದ್ರತೆಯಲ್ಲಿ. ಹಾಗಾಗಿಯೇ ಅದು ನಮ್ಮ ಸಂವಿಧಾನವನ್ನು ಮನಸಾರೆ ಒಪ್ಪಿಯೇ ಇಲ್ಲ. ಶೂದ್ರ-ದಲಿತರು ಸಮಾಜದಲ್ಲಿ ತಮ್ಮ ಸ್ಥಾನವನ್ನು assert ಮಾಡಿಕೊಂಡಾಗಲೆಲ್ಲಾ ಹಿಂದುತ್ವವು ಅದನ್ನು ಸದೆಬಡೆಯಲು ಹಿಂಸೆಗಿಳಿದಿದೆ, ಅದಕ್ಕೀಗ ಪ್ರಭುತ್ವದ ಬಲವೂ ಇದೆ. 80ರ ದಶಕದ ಮಂಡಲ್ ಚಳುವಳಿಗೆ ಎದುರಾಗಿ ರಾಮ ಜನ್ಮಭೂಮಿಯ ಚಳವಳಿ ರೂಪಿಸಿತು ಹಿಂದುತ್ವ. ಇತ್ತೀಚಿನ ಉದಾಹರಣೆ ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಸರ್ಕಾರ ಸುಳ್ಳು ಕೇಸುಗಳನ್ನು ದಾಖಲಿಸಿ ಅನೇಕ ಜನಪರ ಹೋರಾಟಗಾರರನ್ನು ಬಂಧಿಸಿರುವುದು. ಇವರೂ ಸೇರಿದಂತೆ, ಹತ್ಯೆಗೀಡಾದ ನರೇಂದ್ರ ಧಭೋಲ್ಕರ್, ಗೋವಿಂದ ಪಾನ್ಸರೆ, ಕಲ್ಬುರ್ಗಿ, ಗೌರಿ ಲಂಕೇಶ್ ಮತ್ತು ಕೊಲೆಗಾರರ ಹಿಟ್‌ಲಿಸ್ಟ್‌ನಲ್ಲಿದ್ದ ಅನೇಕ ಬರಹಗಾರರು ಕೂಡಾ ಸಂವಿಧಾನದ ನಿಜ ಅನುಷ್ಠಾನಕ್ಕೆ ಹೋರಾಡುತ್ತಿದ್ದವರೇ ಅಲ್ಲವೇ?

ಹಾಗಾಗಿ ಈ ಕೊಲೆಗಳು ಆಶ್ಚರ್ಯವಲ್ಲ. ಈ ಸತ್ಯ ಮತ್ತು ಒಳನೋಟವು ಈ ಹಿಂಸೆಯನ್ನು ನಾವು ಎದುರುಗೊಳ್ಳಲು ಸಜ್ಜಾಗಿಸುತ್ತೆ ಎಂಬ ಆಶಾವಾದ ನನ್ನದು.


ಇದನ್ನೂ ಓದಿ: RSS ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿ ವಿವಾದ ಸೃಷ್ಟಿಸಿದ ಸುಪ್ರೀಂಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...