HomeUncategorizedಉನ್ನಾವ್ ಅತ್ಯಾಚಾರ ಆರೋಪಿ ಶಾಸಕನೂರಲ್ಲಿ ಸೆಂಗರ್ ಕುಟುಂಬದ್ದೇ ಪಾಳೇಗಾರಿಕೆ: ಇಲ್ಲಿದೆ ಗ್ರೌಂಡ್ ರಿಪೋರ್ಟ್

ಉನ್ನಾವ್ ಅತ್ಯಾಚಾರ ಆರೋಪಿ ಶಾಸಕನೂರಲ್ಲಿ ಸೆಂಗರ್ ಕುಟುಂಬದ್ದೇ ಪಾಳೇಗಾರಿಕೆ: ಇಲ್ಲಿದೆ ಗ್ರೌಂಡ್ ರಿಪೋರ್ಟ್

- Advertisement -
- Advertisement -

ಅತ್ಯಾಚಾರ ಮತ್ತು ಕೊಲೆಯತ್ನ ಆರೋಪ ಎದುರಿಸುತ್ತಿರುವ ಬಿಜೆಪಿಯ ಉಚ್ಛಾಟಿತ ಶಾಸಕ ಕುಲದೀಪ್ ಸೆಂಗರ್ ನ ಉನ್ನಾವ್ ಗ್ರಾಮಕ್ಕೆ ‘ದಿ ಕ್ವಿಂಟ್’ ತಂಡ ಭೇಟಿ ನೀಡಿ ಅಲ್ಲಿನ ಭಯಭೀತ ವಾತಾವರಣವನ್ನು ತೆರೆದಿಟ್ಟಿದೆ.

‘ಸೆಂಗರ್ ಗಳ ಹುಕುಂ ಇಲ್ಲದೇ ಇಲ್ಲಿ ಹುಲ್ಲುಕಡ್ಡಿ ಕೂಡ ಚಲಿಸುವಂತಿಲ್ಲ. ಅವರ ಒಪ್ಪಿಗೆಯಿಲ್ಲದೇ ತುಂಡುಭೂಮಿ ಮಾರಂಗಿಲ್ಲ, ಕೊಳ್ಳಂಗಿಲ್ಲ….’ – ಎನ್ನುತ್ತಾನೆ ಗ್ರಾಮದ ಯುವಕ ಅಜೀತ್.

ಇದು ಉನ್ನಾವ್. ಅತ್ಯಾಚಾರ ಮತ್ತು ಕೊಲೆಯತ್ನದ ಆರೋಪಿ ಶಾಸಕ ಕುಲದೀಪ್ ಸೆಂಗರ್ ನ ಗ್ರಾಮ. ಇಲ್ಲಿ ಶಾಸಕ ಮತ್ತು ಕುಟುಂಬದ ವಿರುದ್ಧ ಯಾರೂ ಮಾತಾಡುವಂತಿಲ್ಲ. ಈ ಕುಟುಂಬದ ನಜರ್ ಇಲ್ಲದೇ ಏನೂ ನಡೆಯುವಂತಿಲ್ಲ. ಒಂಥರಾ ಹಳೇ ಸಿನಿಮಾಗಳಲ್ಲಿ ಗೌಡರ ದರ್ಪ, ಪಾಳೇಗಾರಿಕೆಯಡಿ ನಲುಗುವ ಊರಿನಂತಿದೆ ಉನ್ನಾವ್.

ಸತತ ಸಾರ್ವಜನಿಕ ಒತ್ತಾಯ ಮತ್ತು ಒತ್ತಡಗಳ ಪರಿಣಾಮವಾಗಿ ಈಗ ಬಿಜೆಪಿ ಕುಲದೀಪ್ ಸೆಂಗರ್ ನನ್ನು ಪಕ್ಷದಿಂದ ಉಚ್ಛಾಟಿಸಿದೆ. ಅತ್ಯಾಚಾರ ಆರೋಪಕ್ಕೆ ಸಿಕ್ಕ 14 ತಿಂಗಳ ಬಳಿಕ ಬಿಜೆಪಿ ಈ ಕ್ರಮಕ್ಕೆ ಮುಂದಾಗಿದೆ. ಈ ಶಾಸಕರ ಉನ್ನಾವ್ 30 ಸಾವಿರದಷ್ಟು ಜನಸಂಖ್ಯೆ ಹೊಂದಿರುವ ದೊಡ್ಡ ಗ್ರಾಮವಾಗಿದ್ದು ಇಲ್ಲಿ ಯಾರೂ ಶಾಸಕರಿಗೆ ಅಹಿತ ಅನಿಸುವುದನ್ನು ಮಾತಾಡಲು ಒಲ್ಲರು, ಶಾಸಕರ ನಜರ್ ಗೆ ಬೀಳದಂತೆ ಬದುಕಲು ಯತ್ನಿಸುವವರು.

60 ವರ್ಷದಿಂದ ಸೆಂಗರ್ ಕುಟುಂಬದ್ದೇ ರಾಜಕೀಯ ಪಾರುಪತ್ಯ!

ಶಾಸಕ ಸೆಂಗರ್ ಅಜ್ಜ (ತಾಯಿಯ ತಂದೆ) 37 ವರ್ಷಗಳವರೆಗೆ ಗ್ರಾಮದ ಮುಖ್ಯಸ್ಥನಾಗಿದ್ದ. ನಂತರ ಕುಲದೀಪ್ ರಾಜಕೀಯ ಶುರು ಮಾಡಿದ. ಈಗ 4ನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದಾನೆ. ಸೆಂಗರ್ ತಾಯಿ ಎರಡು ಸಲ ಗ್ರಾಮ್ ಪ್ರಧಾನ್ ಆಗಿದ್ದರೆ, ಸಂಗರ್ ಸೊಸೆ, ಸಹೋದರನ ಪತ್ನಿ-ಹೀಗೆ ಗ್ರಾಮ್ ಪ್ರಧಾನ್ ಅಧಿಕಾರ ಅವರ ಕುಟುಂಬದ ಬಳಿಯೇ ಇದೆ ಎಂದು ಅಲ್ಲಿನ ಕೆಲವರು ಹೇಳುವಾಗ, ತಮ್ಮನ್ನು ಯಾರೂ ಗಮನಿಸುತ್ತಿಲ್ಲ ಎಂಬುದನ್ನು ಖಚಿತ ಮಾಡಿಕೊಳ್ಳುತ್ತಾರೆ.

ಆರಂಭದಲ್ಲಿ ಕಾಂಗ್ರೆಸ್‍ನಲ್ಲಿದ್ದ ಕುಲದೀಪ್ ಪಾರ್ಟಿಗಳನ್ನು ಬದಲಿಸುತ್ತಲೇ ಬಂದು ಈಗ ಬಿಜೆಪಿಯ ಪ್ರಭಾವಿ ಶಾಸಕನೂ, ಮುಖ್ಯಮಂತ್ರಿ ಯೋಗಿಯವರಿಗೆ ಆಪ್ತನೂ ಆಗಿದ್ದಾನೆ. ಅಕ್ರಮ ಕಲ್ಲು ಗಣಿಗಾರಿಕೆಯಿಂದ ಲೂಟಿ ಮಾಡುತ್ತಿರುವ ಈ ಕುಟುಂಬ ಪೊಲೀಸ್ ಅಧಿಕಾರಿಗಳ ಮೇಲೆಯೇ ದಾಳಿಗಳನ್ನು ಮಾಡುತ್ತ ಬಂದಿದೆ. 2004ರಲ್ಲಿ ಕುಲದೀಪ್ ಸೆಂಗರ್ ಸಹೋದರ ಅತುಲ್ ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ರಾಮಲಾಲ್ ವರ್ಮಾ ಅವರ ಹೊಟ್ಟೆಗೆ ಗುಂಡು ಹೊಡೆದಿದ್ದ. ಈ ಕುಟುಂಬದ ಒತ್ತಡಕ್ಕೆ ಮಣಿದು ರಾಮಲಾಲ್ ವರ್ಮಾರೇ ದೂರು ಹಿಂಪಡೆಯಬೇಕಾಗಿತು.

ಪೊಲೀಸ್ ಅಧಿಕಾರಿಗಳ ಮೇಲೆಯೇ ಏರಿ ಹೋಗುವ ಈ ಕುಟುಂಬ ಸಾಮಾನ್ಯ ಜನರನ್ನು ಅದೆಷ್ಟು ಭಯಭೀತಿಯಲ್ಲಿ ಇಟ್ಟಿರಬಹುದು ಎಂದು ಊಹಿಸಿ. ಈ ಭೇಟಿಯ ವೇಳೆ ನಮ್ಮ ತಂಡಕ್ಕೆ ಅದರ ದರ್ಶನವೂ ಆಯಿತು. ‘ಪರಿಸ್ಥಿತಿ ಹೀಗಿರುವಾಗ ಅತ್ಯಾಚಾರ ಸಂತ್ರಸ್ತೆಯ ಕುಟುಂಬಕ್ಕೆ ಎಂತಹ ಹಿಂಸೆ ಕೊಟ್ಟಿರಬಹುದು ಊಹಿಸಿ’ ಎಂದ ಯುವಕ ಅಜಿತ್. (ಹೆಸರು ಬದಲಿಸಿದೆ).

2018ರಲ್ಲಿ ಇದೇ ಅತುಲ್ ಸೆಂಗರ್ ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಮರಕ್ಕೆ ಕಟ್ಟಿ ವಿಪರೀತ ಹಡೆದಿದ್ದ ಎಂದು ಹೆಸರು ಹೇಳಲು ಇಚ್ಛಿಸದ ಜನ ಹೇಳುತ್ತಾರೆ. ಆಗ ಬಹುಶಃ ಒಳಗಾಯಗಳಾಗಿದ್ದವು ಎನಿಸುತ್ತದೆ. ಮುಂದೆ ಐದೇ ದಿನದಲ್ಲಿ ಆಕೆಯ ತಂದೆ ಪೊಲೀಸ್ ಲಾಕಪ್ಪಿನಲ್ಲಿ ಮೃತಪಟ್ಟರು. ಪೊಲೀಸ್ ಸ್ಟೇಷನ್ನಿನಲ್ಲೂ ಅತುಲ್ ಒತ್ತಡ ಹೇರಿ ಮತ್ತೆ ದೌರ್ಜನ್ಯ ನಡೆಸಿದ್ದಾನೆ ಎಂಬ ಆರೋಪವೂ ಇದೆ. ಈ ಕುರಿತು ದೂರು ದಾಖಲಾಗಿದೆ.

ಅತುಲ್ ಮರಕ್ಕೆ ಕಟ್ಟಿ ದೌರ್ಜನ್ಯ ನಡೆಸಿದಾಗ ದೂರು ಕೊಟ್ಟರೂ ಬಂಧಿಸದ ಪೊಲೀಸರು, ಸಂತ್ರಸ್ತೆಯ ತಂದೆಯನ್ನೇ, ‘ ಅಕ್ರಮವಾಗಿ ಶಸ್ತ್ರಾಸ್ತ ಹೊಂದಿದ್ದ’ ಎಂದು ಆರೋಪಿಸಿ ಬಂಧಿಸಿದ್ದರು. ಶಾಸಕ ಮತ್ತು ಆತನ ಇಬ್ಬರು ಸಹೋದರರ ಈ ದರ್ಪ ಮತ್ತು ಪಾಳೇಗಾರಿಕೆಯ ಬಗ್ಗೆ ಭಯದಿಂದಲೇ ಇಲ್ಲಿನ ಜನರು ಹೇಳುತ್ತಾರೆ.

ಈಗ ಶಾಸಕನ ಅತ್ಯಾಚಾರ, ಕೊಲೆಯತ್ನ, ಸಂಚು ಕೇಸುಗಳಲ್ಲಿ, ಇನ್ನಿಬ್ಬರು ಸಹೋದರರು ಕೊಲೆಯತ್ನ ಕೇಸು ಎದುರಿಸುತ್ತಿದ್ದಾರೆ. ಇಷ್ಟೆಲ್ಲದರ ನಂತರವೂ ಶಾಸಕನ ವಿರುದ್ಧ ಇಲ್ಲಿ ಯಾರೂ ಸೊಲ್ಲೆತ್ತುವಂತಿಲ್ಲ. ಉತ್ತರ ಪ್ರದೇಶದ ಪಕ್ಷೇತರ ಶಾಸಕ, ಡಾನ್ ‘ರಾಜಾ ಭಯ್ಯಾ’ನ ಮಾದರಿಯಲ್ಲೇ ಕುಲದೀಪ್ ಕೂಡ ಜನರನ್ನು ಭಯದಲ್ಲಿಟ್ಟು ನಾಲ್ಕು ಸಲ ಗೆದ್ದಿದ್ದಾನೆ.

ಆಧಾರ: ದಿ ಕ್ವಿಂಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...