Homeಆರೋಗ್ಯಮದುಮೇಹ ವಿರುದ್ಧ ರಾಜಕೀಯ ಹೋರಾಟ ಅಗತ್ಯ: ಡಾ.ಸಂದೀಪ್ ಸಾಮೆತ್ತಡ್ಕ ನಾಯಕ್

ಮದುಮೇಹ ವಿರುದ್ಧ ರಾಜಕೀಯ ಹೋರಾಟ ಅಗತ್ಯ: ಡಾ.ಸಂದೀಪ್ ಸಾಮೆತ್ತಡ್ಕ ನಾಯಕ್

ಎಲ್ಲಿ ಬಡತನವಿರುತ್ತದೆಯೊ ಅಲ್ಲಿ ಅಪೌಷ್ಠಿಕತೆ ಇರುತ್ತದೆ. ಎಲ್ಲಿ ಅಪೌಷ್ಟಿಕತೆ ಇರುತ್ತದೆಯೋ ಅಲ್ಲಿ ರೋಗಗಳಿರುತ್ತವೆ. ಬಡತನ ಮತ್ತು ರೋಗಗಳು ಎರಡು ಜೊತೆಗೆ ಇರುತ್ತವೆ.

- Advertisement -
- Advertisement -

ವಿಶ್ವ ಮದುಮೇಹ ದಿನದ ಅಂಗವಾಗಿ ಅಮೆರಿಕದ ನ್ಯೂಯಾರ್ಕ್ ಮೆಟ್ರೋಪಾಲಿಟನ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಸಂದೀಪ್ ಸಾಮೆತ್ತಡ್ಕ ನಾಯಕ್‌ರವರು ಬರೆದ ವಿಶೇಷ ಲೇಖನವಿದು.

ಮದುಮೇಹ ಒಂದು ಜೀವನ ಶೈಲಿಯ ರೋಗ. ಅದರಲ್ಲೂ, ನಾವು ತಿನ್ನುವ ಆಹಾರ ನಮ್ಮ ಚಯಾಪಚಯವನ್ನು ನಿರ್ಧರಿಸುತ್ತದೆ. ಆದ್ದರಿಂದ ಮದುಮೇಹವನ್ನು ಮಟ್ಟ ಹಾಕಲು ಸಹಜ ಚಯಾಪಚಯಕ್ಕೆ ಪೂರಕವಾದ ಆಹಾರ ಅಗತ್ಯ.

ಆಹಾರದ ಆಯ್ಕೆಯು ವಯಕ್ತಿಕ ನಿರ್ಧಾರಕ್ಕೆ ಮಾತ್ರ ಸೀಮಿತವಾಗಿಲ್ಲ. ನಮ್ಮ ಸಂಸ್ಕೃತಿ, ಪೂರ್ವಾಗ್ರಹಗಳು, ನಂಬಿಕೆಗಳು, ಆಹಾರವನ್ನು ಖರೀದಿಸುವ ಅಥವಾ ಉತ್ಪಾದಿಸುವ ಸಾಮಾಜಿಕ ತಾಕತ್ತು.. ಹೀಗೆ ಹಲವು ಅಂಶಗಳು ಕೆಲಸ ಮಾಡುತ್ತವೆ. ಯಾವಾಗ ಪೌಷ್ಟಿಕ ಆಹಾರ ಸೇವನೆಗೆ ಈ ಎಲ್ಲ ಅಂಶಗಳು ತಡೆಗೋಡೆಯಾಗುತ್ತವೆಯೋ, ಆವಾಗ ಅಪೌಷ್ಟಿಕತೆ ನೆಲೆಯೂರಿ ಚಯಾಪಚಾಕ ನಿಯಂತ್ರಣವನ್ನು ಕಳೆದುಕೊಳ್ಳುತ್ತದೆ. ಪರಿಣಾಮವಾಗಿ, ಸ್ಥೂಲಕಾಯತೆ, ಮದುಮೇಹ, ಅಧಿಕ ರಕ್ತಒತ್ತಡ ಇಂತಹ ಮಾರಕ ರೋಗಗಳು ಕಾಣಿಸಿಕೊಳ್ಳುತ್ತವೆ.

ಒಂದು ಸಮಾಜದಲ್ಲಿ ಇಂತಹ ರೋಗಗಳು ಹೆಚ್ಚಾಗಿ ಕಾಣಸಿಗುವಾಗ, ಪ್ರಬಲ ಸಾಮಾಜಿಕ ಬದಲಾವಣೆ ಅಗತ್ಯ ಬೀಳುತ್ತದೆ. ಈ ಸಾಮಾಜಿಕ ಬದಲಾವಣೆಗಳು ಜನರಲ್ಲಿ ಆಹಾರ ಭದ್ರತೆಯನ್ನು ಒದಗಿಸುವ ಕಡೆಗೆ ಹೋಗಬೇಕು.

ಯಾವುದೇ ಸಾಮಾಜಿಕ ವರ್ತನೆಗಳ ಬದಲಾವಣೆಯಲ್ಲಿ ರಾಜಕೀಯ ಇಚ್ಚಾಶಕ್ತಿ ಪ್ರಮುಖ ಪಾತ್ರ ವಹಿಸುತ್ತದೆ. ಆಹಾರ ಭದ್ರತೆಯ ಮುಖೇನ ಮಟ್ಟ ಹಾಕುವ ಪ್ರಕ್ರಿಯೆ ಇದಕ್ಕೆ ಹೊರತಾಗಿಲ್ಲ. ಇಂತಹ ರಚನಾತ್ಮಕ ಹೋರಾಟದಲ್ಲಿ ಸಾಮೂಹಿಕ ಮತ್ತು ಸಂಘಟನಾತ್ಮಕ ಭಾಗವಹಿಸುವಿಕೆ ಅಗತ್ಯ. ಇದು ಸಾಮಾಜಿಕ ಬಂಡವಾಳವನ್ನು ಬಲಪಡಿಸುತ್ತದೆ ಮತ್ತು ಬದಲಾವಣೆಯನ್ನು ಸುಲಭಗೊಳಿಸುತ್ತದೆ.

ಮದುಮೇಹ ಎಂದರೆ ನಾವು ರೋಗ ಮತ್ತು ಚಿಕಿತ್ಸೆ ಎಂಬುದಾಗಿ ಯೋಚನೆ ಮಾಡುತ್ತೇವೆ. ಒಬ್ಬ ರೋಗಿ ಮತ್ತು ಒಬ್ಬ ವೈದ್ಯರಿದ್ದು ಅದಕ್ಕೆ ಔಷಧಿ ನೀಡುವ ಮೂಲಕ ನಿಭಾಯಿಸಿಕೊಂಡು ಹೋಗುತ್ತಿದ್ದೇವೆ. ಆದರೆ ಇದು ಧೀರ್ಘಕಾಲಿಕವಾಗಿ ಸುಸ್ಥಿರವಲ್ಲ. ಏಕೆಂದರೆ ಈಗ ನಮ್ಮ ಕರ್ನಾಟಕದಲ್ಲಿ ಸ್ಥೂಲಕಾಯತೆ, ಆಧಿಕ ರಕ್ತದ ಒತ್ತಡ ಮತ್ತು ಕೊಲೆಸ್ಟ್ರಾಲ್, ಡಯಾಬಿಟಿಸ್ ಇವೆಲ್ಲವುಗಲನ್ನು ಗಮನದಲ್ಲಿಟ್ಟುಕೊಂಡರೆ ಶೇ. 25% ರಿಂದ 30% ಜನರಲ್ಲಿ ಈ ಮೇಲಿನವುಗಳಲ್ಲಿ ಯಾವುದಾದರೂ ಒಂದು ಅಥವಾ ಎರಡು ರೋಗಗಳು ಇರುತ್ತವೆ. ಈ 30% ಜನರಿಗೆ ಸದಾ ಔ‍ಷಧ ನೀಡುತ್ತಾ ನಾವು ನಿಭಾಯಿಸಿಕೊಂಡು ಹೋಗಲು ಸಾಧ್ಯವಿಲ್ಲ. ಅದರ ಅಗತ್ಯವೂ ನಮಗಿಲ್ಲ. ಬದಲಿಗೆ ನಾವು ಬಹಳ ಸರಳವಾಗಿ ಇದನ್ನು ನಿಭಾಯಿಸಬಹುದು ಹಾಗೂ ನಿಯಂತ್ರಣ ಮಾಡಬಹುದು. ಅದನ್ನು ಮಾಡಲಿಕ್ಕೆ ನಮಗೆ ಮುಖ್ಯವಾಗಿ ಸಾಮಾಜಿಕ ಬದಲಾವಣೆ ಬೇಕಿದೆ. ಅಂದರೆ ಆಹಾರದಲ್ಲಿ ಬರಬೇಕಾದ ಬದಲಾವಣೆಗಳನ್ನು ನಾವು ಚಾಚೂತಪ್ಪದೆ ಮಾಡುತ್ತಾ ಹೋಗಬೇಕು.

ಆಹಾರದ ಬದಲಾವಣೆಯು ಆಹಾರದ ಭದ್ರತೆಯ ಕಡೆಗೆ ಹೋಗಬೇಕಾದರೆ ಅದಕ್ಕೊಂದು ರಾಜಕೀಯ ಬದಲಾವಣೆ ಅಗತ್ಯವಿದೆ. ಈ ರಾಜಕೀಯ ಬದಲಾವಣೆ ಏಕೆಂದರೆ ನಮ್ಮ ಆಹಾರ ಕೊಳ್ಳುವ ಶಕ್ತಿ ಸಾಮಾಜಿಕ, ಆರ್ಥಿಕ ಸ್ಥಿತಿಯ ಮೇಲೆ ಹಾಗೂ ಸರ್ಕಾರದ ನೀತಿಗಳ ಮೇಲೆ ಅವಲಂಬಿತವಾಗಿದೆ. ಈ ನೀತಿಗಳಲ್ಲಿ ಬದಲಾವಣೆ ಮಾಡುವುದರ ಮೂಲಕ, ವೈಜ್ಞಾನಿಕ ರೀತಿಯಲ್ಲಿ ಸಬ್ಸಿಡಿ ಕೊಡುವುದರ ಮೂಲಕ ನಾವು ಆಹಾರ ಬದಲಾವಣೆ ಮತ್ತು ಭದ್ರತೆಯನ್ನು ಸಾಧಿಸಬಹುದು. ಡಯಾಬಿಟೀಸ್ ನಂತಹ ಹಲವು ರೋಗಗಳನ್ನು ಎದುರಿಸಬಹುದು.

ಉದಾಹರಣೆಗೆ ನಾವು ಈಗ ಸಬ್ಸಿಡಿಯಲ್ಲಿ ಕೊಡುತ್ತಿರುವ ಪಡಿತರಗಳೆಂದರೆ ಮುಖ್ಯವಾಗಿ ಅಕ್ಕಿ, ಗೋದಿ ಮತ್ತು ಸಕ್ಕರೆ. ಇವು ಮೂರು ಕೂಡ ಮಾನವನಿಗೆ ಬೇಕಾದಂತಹ ಪಕೃತಿ ಸಹಜ ಆಹಾರವಲ್ಲ. ಅಂದರೆ ಧಾನ್ಯಗಳು ಜನರಿಗೆ ಬೇಕಾದಂತಹ ಆಹಾರ ಅಲ್ಲ. ಜನರಿಗೆ ಬೇಡದಂತ ಆಹಾರವನ್ನು ಸಬ್ಸಡಿ ಮೂಲಕ ಕೊಟ್ಟಾಗ ಬಡವರು, ದುರ್ಬಲರು, ಅಂಚಿಗೆ ತಳ್ಳಲ್ಪಟ್ಟವರು ಆಹಾರವಲ್ಲದ ಧಾನ್ಯವನ್ನು ಅನಿವಾರ್ಯವಾಗಿ ಅಧಿಕವಾಗಿ ಸೇವಿಸುತ್ತಾರೆ. ಇದರಿಂದಾಗಿ ಅವರ ಚಯಾಪಚಯ ಅನಿಯಮಿತವಾಗುತ್ತದೆ. ಪರಿಣಾಮವಾಗಿ ಸ್ಥೂಲಕಾಯತೆ, ಮದುಮೇಹ, ಅಧಿಕ ರಕ್ತಒತ್ತಡ ಇಂತಹ ಮಾರಕ ರೋಗಗಳು ಕಾಣುತ್ತವೆ. ಆದ್ದರಿಂದ ವೈಜ್ಞಾನಿಕವಾದ ಸಬ್ಸಿಡಿ ಆಹಾರಗಳನ್ನು ಕೊಡುವುದು ಪ್ರಭುತ್ವದ ಪ್ರಾಥಮಿಕ ಕರ್ತವ್ಯವಾಗಬೇಕು. ಅದಕ್ಕಾಗಿ ನಾವು ಹೋರಾಟ ಮಾಡಬೇಕು.

ವೈಜ್ಞಾನಿಕ ಸಬ್ಸಿಡಿ ಆಹಾರ ಎಂದರೆ ಮರದಲ್ಲಿ ಬೆಳೆಯುವ ಬೀಜ ಕಾಳುಗಳು, (ಗೇರು ಬೀಜ, ಬಾದಾಮಿ, ಪಿಸ್ತ) ಇವುಗಳೆಲ್ಲ ಒಂದು ಭಾಗ. ಎರಡನೇಯದು ಹಸಿರು ತರಕಾರಿಗಳು. ಮೂರನೇಯದು ಮೊಟ್ಟೆ ಮತ್ತು ನಾಲ್ಕನೆಯದು ತಾಜಾ ಮಾಂಸ ಮತ್ತು ಮೀನು. (ಪ್ಯಾಕ್ ಮಾಡಿರುವುದು, ಫ್ರೀಜರ್ ನಲ್ಲಿಟ್ಟು ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿ ತಿನ್ನುವುದು ಒಳ್ಳಯದಲ್ಲ. ಅಂದರೆ ಕೈಗಾರಿಕೆ ಆಧಾರಿತ ಮಾಂಸ ಒಳ್ಳೆಯದಲ್ಲ) ಇವುಗಳನ್ನು ಜನರಿಗೆ ತುಂಬಾ ಅಗ್ಗವಾಗಿ, ಕೈಗೆಟುಕುವ ಬೆಲೆಯಲ್ಲಿ ಕೊಟ್ಟಾಗ ಸ್ವಾಭಾವಿಕವಾಗಿ ಬಡವರು, ದುರ್ಬಲರು ಅದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಿಂದ ಅವರ ಚಯಾಪಚಾಯ ಅಭಿವೃದ್ದಿಗೊಂಡು ಉತ್ತಮ ಜೀವನಶೈಲಿ ರೂಡಿಯಾಗುತ್ತದೆ. ಆಗ ನಮ್ಮ ದೇಶದಲ್ಲಿ ಮೇಲಿನ ರೋಗಗಳು ಕಡಿಮೆಯಾಗುತ್ತವೆ. ಇದಕ್ಕೆ ಸಂಘಟನಾತ್ಮಕ ಒತ್ತಾಯ ಅಗತ್ಯ.

ಅಕ್ಕಿ ಗೋಧಿಯಂತಹ ‌ ಸಕ್ಕರೆ ಅಂಶ ತುಂಬಿಕೊಂಡಿರುವ ಧಾನ್ಯಗಳಿಗೆ ಸರ್ಕಾರಗಳು ಸಬ್ಸಿಡಿ ಕೊಡುವುದರಲ್ಲಿ ಯಾವುದೇ ರೀತಿಯ ವೈಜ್ಞಾನಿಕ ತಳಹದಿ ಇಲ್ಲ. ಬದಲಿಗೆ ಸಸಾರಜನಕ ಆಹಾರ ಪದಾರ್ಥ ಅಧಿಕವಾಗಿರುವ ಆಹಾರಗಳು ಬಡವರಿಗೆ ಸುಲಭವಾಗಿ ಸಿಗುವಂತೆ ವೈಜ್ಞಾನಿಕ ಸಬ್ಸಿಡಿ ಕೊಡಬೇಕಾದರೆ ಸಂಘಟನಾತ್ಮಕ, ರಾಜಕೀಯ, ಶೈಕ್ಷಣಿಕ ಹೋರಾಟದ ಅನಿವಾರ್ಯತೆ ಇದೆ.

ಎರಡನೇಯದು ಸಮಾನ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ದಿಯ ವಿಷಯ. ಎಲ್ಲಿ ಬಡತನವಿರುತ್ತದೆಯೊ ಅಲ್ಲಿ ಅಪೌಷ್ಠಿಕತೆ ಇರುತ್ತದೆ. ಎಲ್ಲಿ ಅಪೌಷ್ಟಿಕತೆ ಇರುತ್ತದೆಯೋ ಅಲ್ಲಿ ರೋಗಗಳಿರುತ್ತವೆ. ಆದ ಕಾರಣ ಬಡತನ ಮತ್ತು ರೋಗಗಳು ಎರಡು ಜೊತೆಗೆ ಇರುತ್ತವೆ. ಈ ವಿಷವರ್ತುಲವನ್ನು ನಾವು ತುಂಡರಿಸಬೇಕಾದರೆ ಸಮಾಜದಲ್ಲಿ ಬಡತನವನ್ನು ಮೊದಲು ತೆಗೆಯಬೇಕು. ಈ ಹೋರಾಟ ಕೂಡ ಡಯಾಬಿಟಿಸ್ ನಿರ್ಮೂಲನೆ ಮಾಡುವುದಕ್ಕೆ ಪ್ರಯೋಜನವಾಗುತ್ತದೆ ಎಂಬುದನ್ನು ನಾವು ಸಮಾಜಕ್ಕೆ, ಸರ್ಕಾರಗಳಿಗೆ ಮನವರಿಕೆ ಮಾಡಬೇಕು.

ಅವೈಜ್ಞಾನಿಕ ಮತ್ತು ಸಕ್ಕರೆ ಭರಿತ ಆಹಾರ ಸಬ್ಸಿಡಿಯಿಂದಲೇ ಮೊದಲು ಶ್ರೀಮಂತರಲ್ಲಿ ಹೆಚ್ಚಾಗಿ ಇದ್ದ ಈ ರೋಗಗಳು ಇತ್ತೀಚೆಗೆ ಬಡವರಲ್ಲಿ ಮತ್ತು ದುರ್ಬಲರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಒಂದು ವೈಜ್ಞಾನಿಕವಾದ ಆಹಾರ ಸಬ್ಸಿಡಿ ಮತ್ತು ಸಮಾನ ಸಾಮಾಜಿಕ, ಆರ್ಥಿಕ ಅಭಿವೃದ್ದಿ ಸಾಧಿಸಬೇಕಾಗಿರುವುದು ತುರ್ತು ಅಗತ್ಯವಾಗಿದೆ. ಅಂದರೆ ಸಮಗ್ರ ಮತ್ತು ಸಂಪೂರ್ಣ ಕ್ರಾಂತಿಯಾಗಬೇಕಿದೆ. ಈ ಎರಡನ್ನೂ ಒಟ್ಟೊಟ್ಟಿಗೆ ಮಾಡಲು ಹೊರಟಾಗ ಸಮಾಜದಲ್ಲಿ ಈ ಡಯಾಬಿಟಿಸ್ ಮತ್ತು ಸ್ಥೂಲಕಾಯತೆಯ ಪ್ರಮಾಣವನ್ನು ತಗ್ಗಿಸಬಹುದು. ಇದು ನಮ್ಮ ಪ್ರಾಥಮಿಕ ಅಗತ್ಯತೆಯಾಗಿರಬೇಕು.

ಇದಕ್ಕೆ ಯಾವುದೇ ಆಧುನಿಕ ತಂತ್ರಜ್ಞಾನದ ಅಗತ್ಯವಿಲ್ಲ. ದೊಡ್ಡ ಬಂಡವಾಳ ಹೂಡಿಕೆ ಬೇಕಿಲ್ಲ ಮತ್ತು ಮುಖ್ಯವಾಗಿ ಕಾರ್ಪೊರೇಟ್‌ಗಳ ಅನಿವಾರ್ಯತೆ ಇರುವುದಿಲ್ಲ. ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮೂಲಕ ಸುಲಭವಾಗಿ ಸಾಧಿಸಬಹುದಾಗಿದೆ. ಈ ದೃಷ್ಟಿಕೋನದಲ್ಲಿ ನಾವು ನಮ್ಮ ರಾಜಕೀಯ ಚಿಂತನೆಗಳು, ಹೋರಾಟಗಳು ಮತ್ತು ಮತದಾನದ ಆದ್ಯತೆ ಬದಲಿಸಿಕೊಳ್ಳಬೇಕಿದೆ. ಆರೋಗ್ಯಕರ ದೇಹ, ಆರೋಗ್ಯಕರ ಮನಸ್ಸುಗಳನ್ನು ಸೃಷ್ಟಿಸಲು ಪ್ರತಿಯೊಬ್ಬರು ಇದಕ್ಕೆ ಆದ್ಯತೆ ಕೊಡಬೇಕೆಂಬುದು ನನ್ನ ಕಳಕಳಿಯ ವಿನಂತಿ.

ಡಾ.ಸಂದೀಪ್ ಸಾಮೆತ್ತಡ್ಕ ನಾಯಕ್

(ತಜ್ಞ ವೈದ್ಯರು ಮತ್ತು ಸಂಶೋಧಕರು. ನ್ಯೂಯಾರ್ಕ್ ಮೆಟ್ರೋಪಾಲಿಟನ್ ಆಸ್ಪತ್ರೆ, ನ್ಯೂಯಾರ್ಕ್ ನಗರ)


ಇದನ್ನೂ ಓದಿ: ಕರ್ನಾಟಕದ ಆರ್ಥಿಕ ಚಿಂತನೆಯ ಕೊಡುಗೆ ಮತ್ತು ಸಾರ್ವಜನಿಕ ವಲಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ತುಂಬಾ ಉತ್ತಮವಾದ ವಿಚಾರನೇ. ಸರಕಾರ ಉಚಿತವಾಗಿ ಬಡ ಜನರಿಗೆ ಆಹಾರ ಪೂರೈಕೆ ಮಾಡುವುದರಲ್ಲಿ ಯಾವ ರೀತಿ ಮನಸ್ಸು ಅಥವಾ ಯೋಜನೆ ರೂಪಿಸುತ್ತದೆಯೋ ಇದರೊಂದಿಗೆ ಗುಣಮಟ್ಟದ ಆಹಾರ ಸಾಮಾಗ್ರಿಗಳ ಪೂರೈಕೆಯಲ್ಲೂ ಗಮನ ನೀಡಬೇಕಾಗಿದೆ. ಬಹುತೇಕ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬ ಬಡತನದಲ್ಲಿರಲು ಕಾರಣ; ಮೌಢ್ಯತೆಯ ನಂಬಿಕೆಗಳು. ದೇವರ ಪ್ರಸಾದ ರೂಪದಲ್ಲಿ ತಿನ್ನುವ ಆಹಾರ. ಯಾವ ಆಹಾರದಲ್ಲಿ ಎಷ್ಟು ತೊಂದರೆ ಇದೆ ಎಂಬುದು ಗೊತ್ತಿದ್ದರೂ ಆಚಾರ ಪದ್ಧತಿಗಳಿಗೆ ತೊಂದರೆ ಆಗುತ್ತದೆ ಎಂಬ ಭ್ರಮೆಯೂ ಇದೆ.

    ಉದಾಹರಣೆಗೆ ಅಂಗನವಾಡಿ ಎಂಬುದು ಒಂದು ಮಗುವಿಗೆ ಶೈಕ್ಷಣಿಕ ಸಂಸ್ಥೆಯ ತಳಹದಿ. ಇಲ್ಲಿ ಅಂಗನವಾಡಿ ಟೀಚರ್ ಎಂಬ ದೇವರು ಅವರ ಔದ್ಯೋಗಿಕ ನೆಲೆಯಲ್ಲಿ ಮಕ್ಕಳೊಂದಿಗೆ ಮತ್ತು ಹೊರಗಿನ ವಾತಾವರಣದಲ್ಲಿ ಆಡುವ ಮಾತುಗಳಲ್ಲೂ ಗೌರವಯುತವಾಗಿರುವ ಸಂಸ್ಕಾರ ಸೃಷ್ಟಿ ಆಗಿರಬೇಕು. ಟೀಚರ್ ಮಾತಿನ ಕ್ರಮದಲ್ಲೂ ಆಹಾರ ಪದ್ಧತಿಯ ಕ್ರಮದಲ್ಲೂ ಅರಿವು ಇರುವ ವ್ಯಕ್ತಿ ಆಗಿದ್ದು ಶಿಕ್ಷಣದಲ್ಲಿ ಜ್ಞಾನವಂತರಾಗಿ ಸರಕಾರದಿಂದ ಉತ್ತಮ ವೇತನ ಪಡೆಯುವುದರೊಂದಿಗೆ ಇದ್ದರೆ ಬಡತನ ನಿರ್ಮೂಲನೆ ಆಗಬಹುದು. ಟೀಚರ್ ಸಂಸ್ಕಾರವಂತರಾದರೆ ಮಕ್ಕಳು ಚೆನ್ನಾಗಿರುತ್ತಾರೆ. ಮಕ್ಕಳು ಉತ್ತಮರಾದರೆ ಮನೆಯೂ ಅಭಿವೃದ್ಧಿ ಹೊಂದುತ್ತದೆ. ಮನೆ ಅಭಿವೃದ್ಧಿ ಆದರೆ ಸಮಾಜ, ಗ್ರಾಮ, ದೇಶ ಎಲ್ಲಾ ಚೆನ್ನಾಗಿರುತ್ತದೆ.

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...