ಸ್ವಾತಂತ್ರ್ಯ ದೊರಕಿದ ವರ್ಷಗಳು. ದೇಶವನ್ನು ಕಟ್ಟುವ ಕಾಲಘಟ್ಟ. ಅಂಬೇಡ್ಕರ್ ಅವರು ಭಾರತದ ಪ್ರಜಾಪ್ರಭುತ್ವಕ್ಕೆ ಅಗತ್ಯವಾದ, ಒಕ್ಕೂಟ ವ್ಯವಸ್ಥೆ ಸುಗಮವಾಗಿ ಕಾರ್ಯನಿರ್ವಹಿಸಲು ಅನುವಾಗುವಂತಹ ಸಂವಿಧಾನ ರೂಪಿಸುವ ಜವಾಬ್ದಾರಿ ಹೊತ್ತಿದ್ದರು. ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಒಂದು ನೀತಿಯ ಅವಶ್ಯಕತೆಯನ್ನು ಆಗಿನ ಪ್ರಧಾನಿ ನೆಹರೂ ಅವರು ಮನಗಂಡಿದ್ದರು. ಇದಕ್ಕೂ ಮೊದಲು ನಲವತ್ತರ ದಶಕದಲ್ಲಿ ಆಗಿನ ಬ್ರಿಟೀಷ್ ಸರ್ಕಾರವು ಶಿಕ್ಷಣದ ಸಲಹೆಗಾರರಾಗಿದ್ದ ಜಾನ್ ಸಾರ್ಜೆಂಟ್ ಅವರಿಗೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಂದು ಸಮಗ್ರ ವರದಿ ನೀಡುವಂತೆ ಆದೇಶಿಸಿತ್ತು. ಇದಕ್ಕಾಗಿ 22 ಸದಸ್ಯರ ಕಮಿಟಿಯನ್ನು ರಚಿಸಿತ್ತು. 1944ರಲ್ಲಿ ಮಂಡಿತವಾದ ಈ ವರದಿಯನ್ನು ‘ಸಾರ್ಜೆಂಟ್ ಯೋಜನೆಯ ಶಿಕ್ಷಣ’ ಎಂದು ಸಹ ಕರೆಯಲಾಗುತ್ತದೆ. ಇದು ಆಧುನಿಕ ಭಾರತದಲ್ಲಿ ಶಿಕ್ಷಣಕ್ಕಾಗಿ ರಾಷ್ಟ್ರೀಯ ವ್ಯವಸ್ಥೆಯನ್ನು ರೂಪಿಸಿದ ಮೊದಲ ವರದಿಯೆಂದೇ ಕರೆಯಬಹುದು. ಈ ಸಾರ್ಜೆಂಟ್ ವರದಿಯು 3-6 ವಯಸ್ಸಿನ ಮಕ್ಕಳಿಗೆ ಮತ್ತು 6-14 ವಯಸ್ಸಿನ ಬಾಲಕ/ಬಾಲಕಿಯರಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು (ಪೂರ್ವ ಪ್ರಾಥಮಿಕ, ಪ್ರಾಥಮಿಕ) ನೀಡಲೇಬೇಕು ಎಂದು ಶಿಫಾರಸ್ಸು ಮಾಡುತ್ತದೆ. ಮಕ್ಕಳಿಗೆ ಸಾಂಪ್ರದಾಯಿಕ ಶಿಕ್ಷಣವನ್ನು ಕೊಡುವುದಕ್ಕಿಂತಲೂ ಸಾಮಾಜಿಕ ಜವಾಬ್ದಾರಿಯನ್ನು ಅರಿಯುವಂತಹ ಶಿಕ್ಷಣವನ್ನು ನೀಡಬೇಕೆಂದು ಹೇಳುತ್ತದೆ. ಇದು ಸಾರ್ವಜನಿಕ ಶಿಕ್ಷಣ ನೀತಿಯ ಕುರಿತು ಎಲ್ಲಿಯೂ ನೇರವಾಗಿ ಪ್ರಸ್ತಾಪಿಸದಿದ್ದರೂ ಶಿಕ್ಷಣದ ಖಾಸಗೀಕರಣವನ್ನು ಎಲ್ಲಿಯೂ ಬೆಂಬಲಿಸಿರಲಿಲ್ಲ. ಆದರೆ ಇದನ್ನು ಒಂದು ಕಲೋನಿಯಲ್ ವ್ಯವಸ್ಥೆ ರೂಪಿಸಿದ್ದು ಎನ್ನುವ ಆಕ್ಷೇಪಣೆಗಳನ್ನು ಮುಂದಿಟ್ಟು, ರಾಷ್ಟ್ರೀಯವಾದದ ಹೆಸರಿನಲ್ಲಿ ನಿಜಕ್ಕೂ ಪ್ರಗತಿಪರವಾದ ಒಂದು ಶಿಕ್ಷಣದ ನೀತಿಯನ್ನು ತಿರಸ್ಕರಿಸಲಾಯಿತು.
ನೆಹರೂ ಅವರಿಗೆ ಶಿಕ್ಷಣದಲ್ಲಿ ಅದರಲ್ಲೂ ಉನ್ನತ ಶಿಕ್ಷಣ ಕುರಿತಂತೆ ಹಲವಾರು ಕನಸುಗಳಿದ್ದವು. ಅತ್ಯುನ್ನತ ಮಟ್ಟದ, ವಿಶ್ವದರ್ಜೆಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಬೇಕೆನ್ನುವ ಇಚ್ಛಾಶಕ್ತಿ ಅವರಲ್ಲಿತ್ತು. ಆಗ 1948-49ರಲ್ಲಿ ರಾಧಾಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗ ರಚನೆಯಾಯಿತು. ಫ್ರೊ. ಅನಿತ ರಾಂಪಾಲ್ ಅವರು ‘ಈ ಆಯೋಗಕ್ಕೆ ಜಾಕಿರ್ ಹುಸೇನ್ ಇದರ ಸದಸ್ಯರಾಗಿದ್ದರು. ಒಂದು ವರ್ಷದೊಳಗೆ ಈ ಆಯೋಗವು ತನ್ನ ವರದಿಯನ್ನು ಸಲ್ಲಿಸಿತು. ಆ ವರದಿಯಲ್ಲಿರುವ ಉನ್ನತ ಶಿಕ್ಷಣ ನೀತಿ ನಿಯಮಾವಳಿಗಳು ಇಂದಿಗೂ ಒಂದು ಮಾನದಂಡವಾಗಿದೆ. ಈ ವರದಿಯಲ್ಲಿ ವಿಶ್ವವಿದ್ಯಾಲಯಗಳು ನಾಗರಿಕತೆಯ ಅವಯವಗಳು, ದೇಶದ ಒಳಗಿನ ಬದುಕಿನ ಅಭಯಧಾಮಗಳು. ಸಾಮಾಜಿಕ ನ್ಯಾಯವಿಲ್ಲದೆ ಪ್ರಜಾಪ್ರಭತ್ವದ ಸ್ವಾತಂತ್ರಕ್ಕೆ ಅರ್ಥವಿರುವುದಿಲ್ಲ, ವೈಯಕ್ತಿಕ ಸ್ವಾತಂತ್ರವೇ ಪ್ರಜಾಪ್ರಭುತ್ವದ ತಳಹದಿ. ಈ ವಿವಿಗಳು ಮನುಷ್ಯ ಸಂಬಂಧಗಳನ್ನು ಬೆಸೆಯಬೇಕು, ವಿಚ್ಚಿದ್ರ ಶಕ್ತಿಗಳ ವಿರುದ್ದ ಒಗ್ಗಟ್ಟಾಗುವ ಐಕ್ಯತೆಯನ್ನು ಕಲಿಸಬೇಕು. ಉನ್ನತ ಶಿಕ್ಷಣವು ರಾಜ್ಯಗಳ ಬಾಧ್ಯತೆಯಾಗಿದೆ. ಅದರೆ ಈ ಹೊಣೆಗಾರಿಕೆಯನ್ನು ರಾಜ್ಯಗಳು ನಿಯಂತ್ರಣವೆಂದು ದುರುಪಯೋಗಪಡಿಸಿಕೊಳ್ಳಬಾರದು’ ಎಂದು ಆಶಿಸಿದೆ.’ ಎಂದು ಬರೆಯುತ್ತಾರೆ.
80ರ ದಶಕದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಪ್ರಧಾನಿ ರಾಜೀವ್ ಗಾಂಧಿಯವರ ಮಹತ್ವಾಕಾಂಕ್ಷೆಯಾಗಿದ್ದ “ಹೊಸ ಶಿಕ್ಷಣ ನೀತಿ” (ಎನ್‍ಇಪಿ 86) ಮತ್ತು “ಕಾರ್ಯಸೂಚಿ ಕ್ರಮಗಳು” ಮೇ, 1986 ರಂದು ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿತು ಮತ್ತು 1992ರಲ್ಲಿ ತಿದ್ದುಪಡಿಗೊಂಡಿತು. ಅದರಲ್ಲಿ ‘ಆರ್ಥಿಕ ವ್ಯವಸ್ಥೆಯ ವಿವಿಧ ದರ್ಜೆಗಳಿಗೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ಶಿಕ್ಷಣ ನೀತಿಯು ರೂಪಿಸುತ್ತದೆ. ಶಿಕ್ಷಣ ವರ್ತಮಾನ ಮತ್ತು ಭವಿಷ್ಯದ ಹೂಡಿಕೆಯಾಗಿದೆ’ ಎನ್ನುವುದು ಎನ್‍ಇಪಿ 86ರ ಮುಖ್ಯ ವ್ಯಾಖ್ಯಾನವಾಗಿತ್ತು. ವಿವಿಧ ಖಾಸಗಿ ಸಂಸ್ಥೆಗಳಿಂದ ಹಣಕಾಸಿನ ಅನುದಾನದ ಸಂಗ್ರಹಣೆ, ಶುಲ್ಕ ಹೆಚ್ಚಳ, ತೆರಿಗೆ ವಿಧಿಸವುದು ಇನ್ನೂ ಮುಂತಾದವುಗಳ ಮೂಲಕ ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಹಣಕಾಸನ್ನು ಕ್ರೋಢಿಕರಿಸಬೇಕೆಂದು ವಿವರಿಸಲಾಗಿತ್ತು. ಇದರ ಜೊತೆಗೆ ಒಟ್ಟು ರಾಷ್ಟ್ರೀಯ ಆದಾಯದ ಮೊತ್ತದ ಶೇಕಡಾ 6 ಪ್ರಮಾಣಕ್ಕಿಂತಲೂ ಹೆಚ್ಚಿನ ಹಣವನ್ನು ಬಳಸಿಕೊಂಡು ಪಂಚವಾರ್ಷಿಕ ಯೋಜನೆಗಳಿಂದಲೇ ಶಿಕ್ಷಣಕ್ಕೆ ಬೇಕಾದ ಒಟ್ಟು ಖರ್ಚುವೆಚ್ಚವನ್ನು ಭರಿಸಬೇಕೆಂದು ಸಹ ಪ್ರಸ್ತಾಪಿಸಿದೆ. ಆದರೆ ಇಲ್ಲಿಯವರೆಗೂ ಇದು ಸಾಧ್ಯವಾಗಿಲ್ಲ. ಮೇಲಿನ ಅಂಕಿಅಂಶಗಳನ್ನು ಅವಲೋಕಿಸಿದಾಗ ಶಿಕ್ಷಣ ವಲಯದಲ್ಲಿ ಸರಕಾರದ ಆರ್ಥಿಕ ಅನುದಾನವು ಕಡಿತಗೊಳ್ಳುತ್ತಲೇ ಇದೆ.
ಆದರೆ ಕೇಂದ್ರದ ಬಿಜೆಪಿ ಸರಕಾರ 27, ಜೂನ್ 2018ರಂದು ‘ಯುಜಿಸಿ’ (ವಿಶ್ವವಿದ್ಯಾಲಯ ಧನಸಹಾಯ ಆಯೋಗ) ಯನ್ನು ವಿಸರ್ಜಿಸಿ ಅದರ ಜಾಗದಲ್ಲಿ ‘ಭಾರತೀಯ ಉನ್ನತ ಶಿಕ್ಷಣ ಆಯೋಗ’ವನ್ನು (ಎಚ್‍ಇಸಿಐ) ಸ್ಥಾಪಿಸಲಾಗುವುದು ಎಂದು ಪ್ರಕಟಿಸಿದೆ. ಇದನ್ನು ಶಿಕ್ಷಣ ಕ್ಷೇತ್ರದಲ್ಲಿನ ಬಲು ದೊಡ್ಡ ಸುಧಾರಣೆ ಎಂದು ಮೋದಿ ಸರಕಾರ ಬಣ್ಣಿಸಿದೆ. ಈ ಹೊಸದಾದ ‘ಉನ್ನತ ಶಿಕ್ಷಣ ಆಯೋಗ’ದ ನೀತಿನಿಯಮಾವಳಿಗಳು ಮೇಲಿನ 1948-49ರ ಶಿಕ್ಷಣ ಆಯೋಗದ ಆಶಯಗಳೊಂದಿಗೆ ಯಾವುದೇ ಸಾಮ್ಯತೆ ಇಲ್ಲ. ತಾತ್ವಿಕವಾಗಿ ಮತ್ತು ಸೈದ್ಧಾಂತಿಕವಾಗಿ ವಿರುದ್ದ ದಿಕ್ಕಿನಲ್ಲಿದೆ. ಬದಲಾವಣೆಗೊಂಡ ಈ ಕರಡಿನಲ್ಲಿ ಉನ್ನತ ಶಿಕ್ಷಣ ಆಯೋಗದ ಸ್ವರೂಪದೊಳಗೆ ಘಟಕವಾಗಿ ಮತ್ತೊಂದು ಆಯೋಗವಿರುತ್ತದೆ. ಇದಕ್ಕೆ ಆಡಳಿತಾತ್ಮಕ ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿರುತ್ತದೆ. ಇದರಲ್ಲಿ ಒಬ್ಬ ಅಧ್ಯಕ್ಷ, ಉಪಾಧ್ಯಕ್ಷ ಮತ್ತು 12 ಸದಸ್ಯರಿರುತ್ತಾರೆ. ಮಾನವ ಸಂಪನ್ಮೂಲ ಇಲಾಖೆಯಿಂದ ಒಬ್ಬ ನಿಯೋಜಿತ ಅದಿಕಾರಿ ಅದಿಕೃತ ಸದಸ್ಯರಾಗಿರುತ್ತಾರೆ. ಇದರ ಅದ್ಯಕ್ಷ ಭಾರತ ಸರಕಾರದ ಕಾರ್ಯದರ್ಶಿ ಮಟ್ಟದ ಅದಿಕಾರಿಯಾಗಿರುತ್ತಾರೆ. ಈ ಸದಸ್ಯರ ಪೈಕಿ 3 ಕೇಂದ್ರ ಸರಕಾರದ ವಿವಿದ ಇಲಾಖೆಗಳ ಕಾರ್ಯದರ್ಶಿಗಳಿರುತ್ತಾರೆ, ಂIಅಖಿಇ ಚಿಟಿಜ ಓಅಖಿಇ ಗಳಿಂದ 2 ಸದಸ್ಯರಿರುತ್ತಾರೆ. ನ್ಯಾಕ್‍ನಿಂದ 2 ಸದಸ್ಯರಿರುತ್ತಾರೆ. ಉದ್ಯಮ ವಲಯದ ಹಿರಿಯ ಬಂಡವಾಳಶಾಹಿ ಒಬ್ಬರು ಸದಸ್ಯರಿರುತ್ತಾರೆ. ಉಳಿದಂತೆ ಕೇವಲ 2 ಅಧ್ಯಾಪಕರು ಸದಸ್ಯರಾಗಿರುತ್ತಾರೆ. ಹಿಂದಿನ ಯುಜಿಸಿ ಆಕ್ಟ್‍ನ ಪ್ರಕಾರ 10 ಅಧ್ಯಾಪಕರು ಸದಸ್ಯರಾಗಬೇಕಿತ್ತು. ಆಯೋಗದ ಅಧ್ಯಕ್ಷರು ಭಾರತೀಯ ಅಥವಾ ಅನಿವಾಸಿ ಭಾರತೀಯನಾಗಿರಬಹುದು. ಅಂದರೆ ಮೋದಿ ಸರಕಾರವು ಎಚ್‍ಸಿಐ ಮೂಲಕ ಶೈಕ್ಷಣಿಕ ಸುಧಾರಣೆಯ ಬದಲಾಗಿ ಆಡಳಿತ ಸುಧಾರಣೆಯನ್ನು ಆದ್ಯತೆಯಾಗಿ ಪರಿಗಣಿಸಿದಂತಿದೆ. ಇಲ್ಲಿ ಮಾನವ ಸಂಪನ್ಮೂಲ ಇಲಾಖೆಯು ಸಹ ಈ ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಭಾಗವಾಗಿರುತ್ತದೆ. ಈ ಅಧ್ಯಕ್ಷರನ್ನು ಆಯ್ಕೆ ಮಾಡಲು ಕ್ಯಾಬಿನೆಟ್ ಕಾರ್ಯದರ್ಶಿ, ಉನ್ನತ ಶಿಕ್ಷಣ ಕಾರ್ಯದರ್ಶಿಗಳನ್ನು ಒಳಗೊಂಡ ಶೋಧನೆ ಮತ್ತು ಆಯ್ಕೆ ಸಮಿತಿ ರಚಿಸಲಾಗುತ್ತದೆ. ಆಡಳಿತದಲ್ಲಿರುವ ಪಕ್ಷವು ಸಂಪೂರ್ಣ ಅಧಿಕಾರವನ್ನು ಪಡೆದುಕೊಳ್ಳುತ್ತದೆ. ಈ ರಾಜಕೀಯ ಮಧ್ಯಪ್ರವೇಶದಿಂದ ಇಡೀ ಆಯ್ಕೆಯ ಪ್ರಕ್ರಿಯೆ ಪಾರದರ್ಶಕವಾಗಿರುವ ಸಾಧ್ಯತೆಗಳು ಕಡಿಮೆ. ಸದ್ಯಕ್ಕೆ ಬಿಜೆಪಿ ಅದಿಕಾರದಲ್ಲಿರುವ ಕಾರಣಕ್ಕೆ ಇಲ್ಲಿ ಆರೆಸ್ಸಸ್ ಹಿನ್ನೆಲೆಯವರು ಅಧ್ಯಕ್ಷರಾಗುವ, ಸದಸ್ಯರಾಗುವ ಎಲ್ಲಾ ಸಾದ್ಯತೆಗಳಿವೆ. ಅಲ್ಲದೆ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯದ ಸ್ವರೂಪವನ್ನು, ನೀತಿ ನಿಯಮಾವಳಿಗಳನ್ನು ಎಲ್ಲಿಯೂ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಅದ್ಯಕ್ಷರ, ಸದಸ್ಯರ ಆಯ್ಕೆ ನೇಮಕಾತಿ ದಲಿತ, ತಳ ಸಮುದಾಯ, ಅಲ್ಪ ಸಂಖ್ಯಾತರನ್ನು ಒಳಗೊಂಡಂತೆ ನೇಮಕವಾಗುತ್ತದೆಯೇ ಎನ್ನುವುದರ ಕುರಿತು ಈ ಕರಡು ಮಸೂದೆ ಮೌನವಾಗಿದೆ.
ಈ ಹೊಸ ಉನ್ನತ ಶಿಕ್ಷಣ ಆಯೋಗದ ಶಿಫಾರಸ್ಸುಗಳನ್ನು ನೋಡಿದಾಗ ಇದು ನವ ಉದಾರೀಕರಣದ ನೀತಿನಿಯಮಾವಳಿಗಳನ್ನು ತರಲು ಹವಣಿಸುತ್ತಿದೆ. ಈ ಹೊಸದಾದ ‘ಉನ್ನತ ಶಿಕ್ಷಣ ಆಯೋಗ’ಕ್ಕೆ ಹಣಕಾಸಿನ ಜವಾಬ್ದಾರಿ ನೀಡಿಲ್ಲ. ಎಚ್‍ಇಸಿಐ ಆಡಳಿತ ಮತ್ತು ಶೈಕ್ಷಣಿಕ ಗುಣಮಟ್ಟದ ಮೇಲೆÀ ಮಾತ್ರ ಹೆಚ್ಚಿನ ಸುಧಾರಣೆಗಳನ್ನು ತರಬೇಕು, ಅದಕ್ಕೆ ಹಣಕಾಸಿನ ನಿರ್ವಹಣೆ ಹೆಚ್ಚುವರಿ ಹೊರೆಯಾಗುತ್ತದೆ ಎಂದು ಪ್ರತಿಪಾದಿಸಿರುವ ಮಾನವ ಸಂಪನ್ಮೂಲ ಇಲಾಖೆ ಆಡಳಿತ/ಶೈಕ್ಷಣಿಕ ಹಾಗೂ ಹಣಕಾಸಿನ ನಿರ್ವಹಣೆ ಎರಡನ್ನು ಪ್ರತ್ಯೇಕಿಸಿದೆ. ಧನಸಹಾಯದ ಜವಾಬ್ದಾರಿಯನ್ನು ಸ್ವತಃ ಮಾನವ ಸಂಪನ್ಮೂಲ ಇಲಾಖೆ ಹೊತ್ತುಕೊಂಡಿದೆ. ಆದರೆ ಈ ನಿರ್ಣಯವು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ನಿರಂಕುಶವಾದ ಅಧಿಕಾರವನ್ನು ನೀಡುತ್ತದೆ. ರಾಜ್ಯ ವಿವಿಗಳು, ಕಾಲೇಜುಗಳು, ಕೇಂದ್ರ ವಿವಿಗಳೊಂದಿಗೆ, ರಾಜ್ಯ ಸರಕಾರಗಳೊಂದಿಗೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಮುಂದಿಟ್ಟುಕೊಂಡು ಇಲಾಖೆಯು ಅವುಗಳಿಗೆ ಧನಸಹಾಯದ ಅನುದಾನವನ್ನು ಸ್ಥಗಿತಗೊಳಿಸುವ ಸಾಧ್ಯತೆಗಳು ದಟ್ಟವಾಗಿವೆ.
ಈ ಹಿಂದೆ ಈ ಹಣಕಾಸಿನ ವ್ಯವಹಾರದ ಜವಾಬ್ದಾರಿ ಹೊತ್ತಿದ್ದ ಯುಜಿಸಿ ಒಂದು ಶೈಕ್ಷಣಿಕ ಸಂಸ್ಥೆಯಾಗಿತ್ತು. ಅಲ್ಲಿ ಅಧ್ಯಾಪಕರು, ಶಿಕ್ಷಣತಜ್ಞರಿದ್ದರು, ಆಡಳಿತ ಮತ್ತು ಶೈಕ್ಷಣಿಕ ಎರಡರ ಸಮತೋಲನವಿತ್ತು. ಆದರೆ ಈ ಹೊಸ ಆಯೋಗದಲ್ಲಿ ಧನಸಹಾಯ ಮಾಡುವ ಮಾನವ ಸಂಪನ್ಮೂಲ ಇಲಾಖೆಯ ಅಧಿಕಾರಶಾಹಿಯು ನಿಯಂತ್ರಣ ಸಾಧಿಸುತ್ತದೆ. ಇಲ್ಲಿ ಶಿಕ್ಷಣತಜ್ಞರು, ಪ್ರಾಧ್ಯಾಪಕರ ಅನುಭವ ಮತ್ತು ಮುನ್ನೋಟಗಳಿಗೆ ಅವಕಾಶವಿರುವುದಿಲ್ಲ. ಸ್ವಾಯತ್ತತೆ ಮತ್ತು ಸ್ವತಂತ್ರ ಅದಿಕಾರ ಹೊಂದಿದ್ದ ಯುಜಿಸಿಯನ್ನು ವಿಸರ್ಜಿಸಿ ಈ ಹೊಸ ಆಯೋಗದ ಮೂಲಕ ಇಡೀ ಉನ್ನತ ಶಿಕ್ಷಣವು ತನ್ನ ಸ್ವಾಯತ್ತತೆಯನ್ನು ಕಳೆದುಕೊಂಡು ಕೇಂದ್ರ ಸರಕಾರದ ವ್ಯಾಪ್ತಿಗೆ ಒಳಪಡಲಿದೆ ಎನ್ನುವುದು ಈ ಕರಡನ್ನು ವಿಶ್ಲೇಷಿಸಿದಾಗ ಗೊತ್ತಾಗುತ್ತದೆ. ಒಮ್ಮೆ ನೀತಿ ನಿಯಮಾವಳಿಗಳನ್ನು ರೂಪಿಸುವ ಅಧಿಕಾರ ಪಡೆದ ನಂತರ ಕೇಂದ್ರ ಸರಕಾರವು ಶಿಕ್ಷಣದ ಖಾಸಗೀಕರಣದ ಕಡೆಗೆ ಒಲವು ತೋರಿಸುತ್ತದೆ. ಈಗಿರುವ ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾಲಯಗಳು ಅನುತ್ಪಾದಕಗಳಾಗಿವೆ, ಪ್ರಸ್ತುತ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ಶಿಕ್ಷಣ ನೀಡುತ್ತಿಲ್ಲ ಎಂದು ಏಕಪಕ್ಷೀಯವಾಗಿ ನಿರ್ಧರಿಸುವ ಕೇಂದ್ರ ಸರಕಾರ ಉನ್ನತ ಶಿಕ್ಷಣವನ್ನು ಉತ್ಪಾದಕ ಉದ್ಯಮವನ್ನಾಗಿ ಮಾರ್ಪಡಿಸುತ್ತದೆ. ಅಲ್ಲಿ ಜಾಗತಿಕ ಮಾರುಕಟ್ಟೆಗೆ ಅವಶ್ಯಕವಾದ, ನೇರವಾದ ಉದ್ಯೋಗಕ್ಕೆ ನಂಟು ಕಲ್ಪಿಸುವ ಶಿಕ್ಷಣದ ಪಠ್ಯವನ್ನು ರಚಿಸುತ್ತದೆ. ಅಲ್ಲಿಗೆ ಶಿಕ್ಷಣದ ವ್ಯಾಪಾರೀಕರಣ ಒಂದು ತಾರ್ಕಿಕ ಅಂತ್ಯಕ್ಕೆ ಬಂದು ತಲುಪಿದಂತಾಗುತ್ತದೆ.
ಈ ಹಿಂದೆ ಯುಜಿಸಿಯು, 2018ರ ಮಾರ್ಚ್ 20ರಂದು 60 ಕೇಂದ್ರ, ರಾಜ್ಯ ವಿಶ್ವವಿದ್ಯಾಲಯಗಳು, ಕಾಲೇಜುಗಳಿಗೆ ಗುಣಾಂಕ ಸ್ವಾಯತ್ತತೆ (ಉಡಿಚಿಜeಜ ಚಿuಣoಟಿomಥಿ) ಕೊಡಲಾಗುವುದೆಂದು ಪ್ರಕಟಣೆ ಹೊರಡಿಸಿದೆ. ‘ದೇಶದ 52 ಕೇಂದ್ರ, ರಾಜ್ಯ ವಿಶ್ವವಿದ್ಯಾಲಯಗಳು, 8 ಉನ್ನತ ಶಿಕ್ಷಣ ಕಾಲೇಜುಗಳಿಗೆ ಅವುಗಳ ಕಾರ್ಯನಿರ್ವಹಣ ಸಾಮಥ್ರ್ಯದ ಮೇಲೆ ಸ್ವಾಯತ್ತತೆಯನ್ನು ನೀಡಲಾಗುವುದು. ಈ ಸಾಮಥ್ರ್ಯವನ್ನು ನ್ಯಾಕ್ (ಓಂಂಅ) ಮಾಡುವ ಮೌಲ್ಯಮಾಪನ ಮತ್ತು ಆ ಮೂಲಕ ಗಳಿಸುವ ಗುಣಾಂಕಗಳ ಆಧಾರದ ಮೇಲೆ ನಿರ್ಧರಿಸಲಾಗುವುದು. ಇಲ್ಲಿ ಕಾಲೇಜುಗಳು ಮತ್ತು ವಿವಿಗಳನ್ನು ನಮೂನೆ 1 (3.5 ಮತ್ತು ಅಧಿಕ ನ್ಯಾಕ್ ಗುಣಾಂಕ) ಮತ್ತು ನಮೂನೆ 2 (3,26 – 3,5 ನ್ಯಾಕ್ ಗುಣಾಂಕ) ಎಂದು ವರ್ಗೀಕರಿಸಲಾಗುವುದು. ಈ ವರ್ಗೀಕರಣವು ಸ್ವಾಯತ್ತತೆಯ ವ್ಯಾಪ್ತಿ ಮತ್ತು ದರ್ಜೆಯನ್ನು ನಿರ್ಧರಿಸುತ್ತದೆ’ ಎಂದು ತನ್ನ ಪ್ರಕಟಣೆಯಲ್ಲಿ ವಿವರಿಸಿದೆ. ಈ 60 ಶಿಕ್ಷಣ ಸಂಸ್ಥೆಗಳಲ್ಲಿ ಕೇಂದ್ರ ವಿವಿಗಳಾದ ಜೆಎನ್‍ಯು, ಬಿಎಚ್‍ಯು (ಬನಾರಸ್) , ಎಎಮ್‍ಯು (ಅಲಿಘರ್), ಇತರೆ ವಿವಿಗಳು ಮತ್ತು ರಾಜ್ಯ ವಿವಿಗಳಾದ ಮದ್ರಾಸ್, ಉಸ್ಮಾನಿಯ, ಜಾಧವಪುರ ಪಂಜಾಬ್ ವಿವಿಗಳು, ಇತರೆ ವಿವಿಗಳು ಮತ್ತು ಕೆಲ ಖಾಸಗಿ ಸಂಸ್ಥೆಗಳಾದ ಜಿಂದಾಲ್ ಗ್ಲೋಬಲ್, ದೀನ್ ದಯಾಳ್ ಪೆಟ್ರೋಲಿಯಂನಂತಹ ಖಾಸಗಿ ವಿವಿಗಳು ಒಳಗೊಂಡಿವೆ. ಮೊದಲ ಹತ್ತು ವರ್ಷಗಳಿಗೆ ಈ ಸ್ವಾಯತ್ತತೆಯನ್ನು ಸೀಮಿತಗೊಳಿಸಲಾಗಿದೆ, ಅವಶ್ಯಕತೆ ಬಿದ್ದರೆ ಅವಧಿಯನ್ನು ವಿಸ್ತರಿಸಬಹುದಾಗಿದೆ. ಮೀಸಲಾತಿ ಕಾರ್ಯನೀತಿಯು ಅನ್ವಯವಾಗುತ್ತದೆ. ಈಗ ಯುಜಿಸಿಯನ್ನು ವಿಸರ್ಜಿಸಿ ಅದರ ಸ್ಥಾನದಲ್ಲಿ ಉನ್ನತ ಶಿಕ್ಷಣ ಆಯೋಗವನ್ನು ತರಲು ಹೊರಟಿರುವ ಬಿಜೆಪಿ ಸರಕಾರವು ಇಲ್ಲಿಯವರೆಗಿನ ಸ್ವಾಯತ್ತತೆಯ ಸ್ವರೂಪವನ್ನೇ ಬದಲಾಯಿಸಿ ಮೇಲಿನ ಗುಣಾಂಕ ಆಧರಿತ ಸ್ವಾಯತ್ತತೆಯನ್ನು ಜಾರಿಗೊಳಿಸಿ ಉನ್ನತ ಶಿಕ್ಷಣವನ್ನೇ ಲಾಭದಾಯಕ ಉದ್ಯಮವನ್ನಾಗಿಸಲು ಮುಂದಾಗಿದೆ
ಈ ಹೊಸ ಪ್ರಸ್ತಾಪದಂತೆ ಇಲಾಖೆಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿಯನ್ನು ರಚಿಸಲಾಗುತ್ತದೆ. ಶಿಫಾರಸ್ಸುಗಳನ್ನು ಮಾಡುವ ನೆಪದಲ್ಲಿ ಈ ಸಚಿವರು ಉನ್ನತ ಶಿಕ್ಷಣ ಆಯೋಗದ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುತ್ತಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ನೀತಿನಿಯಮಾವಳಿಗಳನ್ನು ರೂಪಿಸುವ ಸಂದರ್ಬದಲ್ಲಿ ರಾಜ್ಯಗಳಿಗೆ ಮುಕ್ತ ಅವಕಾಶ ಕಲ್ಪಿಸಬೇಕಾಗಿತ್ತು. ಉನ್ನತ ಶಿಕ್ಷಣ ಆಯೋಗದಲ್ಲಿ ರಾಜ್ಯಗಳಿಗೆ ಯಾವುದೇ ಪ್ರಾತಿನಿದ್ಯ ನೀಡಿಲ್ಲ. ಇದು ಒಕ್ಕೂಟ ವ್ಯವಸ್ಥೆಯನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ. ಆದರೆ ಸಲಹಾ ಸಮಿತಿಯಲ್ಲಿ ರಾಜ್ಯಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಇಲ್ಲಿ ಕೇವಲ ತಮ್ಮ ಅಭಿಪ್ರಾಯಗಳನ್ನು ಮಂಡಿಸಬಹುದು. ಅದನ್ನು ಅನುಮೋದಿಸುವ ಅದಿಕಾರ ಅಧ್ಯಕ್ಷರಾಗಿರುವ ಸಚಿವರ ಕೈಯಲ್ಲಿರುವುದರಿಂದ ಇದು ಪಕ್ಷ ರಾಜಕಾರಣಕ್ಕೆ ದಾರಿ ಮಾಡಿಕೊಡುತ್ತದೆ. ತಮ್ಮ ಪ್ರತಿಸ್ಪರ್ಧಿ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಸಲಹೆ, ಶಿಫಾರಸ್ಸುಗಳನ್ನು ಕಡೆಗಣಿಸುವ, ತಿರಸ್ಕರಿಸುವ ಅಧಿಕಾರ ಸಲಹಾ ಸಮಿತಿಯ ಅಧ್ಯಕ್ಷರಿಗಿರುತ್ತದೆ.
ಈಗಾಗಲೇ ಮೋದಿ ಸರಕಾರ ಶಿಕ್ಷಣದಲ್ಲಿ ಆರ್ಥಿಕ ಅನುದಾನವನ್ನು ಕಡಿತಗೊಳಿಸುತ್ತ ಬಂದಿರುವುದರಿಂದ ಆ ಜಾಗದಲ್ಲಿ ಬಂಡವಾಳ ಆಧರಿಸಿದ ಹಣಕಾಸು ವ್ಯವಸ್ಥೆ ಪ್ರವೇಶ ಪಡೆಯಲಿದೆ. ಸಾರ್ವಜನಿಕ-ಖಾಸಗಿ-ಸಹಭಾಗಿತ್ವವೇ (ಪಿಪಿಪಿ) ವಿಶ್ವ ವಿದ್ಯಾಲಯಗಳ ನೀತಿನಿಯಮಾವಳಿಯಾಗಲಿದೆ. ಮತ್ತೊಂದೆಡೆ ಕೇಂದ್ರ, ರಾಜ್ಯ ವಿಶ್ವವಿದ್ಯಾಲಯಗಳು ಆರ್ಥಿಕ ಅನುದಾನಕ್ಕಾಗಿ ಸದಾ ಸರಕಾರವನ್ನು ಸಂಪ್ರೀತಿಗೊಳಿಸುತ್ತಲೇ ಇರಬೇಕಾಗುತ್ತದೆ, ಗುಣಮಟ್ಟದ ಹೆಸರಿನಲ್ಲಿ, ಕಲಿಕೆಯ ಹೆಸರಿನಲ್ಲಿ, ಮೂಲಭೂತ ಸೌಕರ್ಯದ ನೆಪದಲ್ಲಿ ಉನ್ನತ ಶಿಕ್ಷಣವು ಅತ್ಯಂತ ದುಬಾರಿಯಾದ ಶಿಕ್ಷಣವಾಗಲಿದೆ. ದುಬಾರಿಯಾದ ಶುಲ್ಕವನ್ನು ಭರಿಸಲು ಈ ಬಂಡವಾಳ ಹಣಕಾಸು ವ್ಯವಸ್ಥೆಯು ಸಾಲದ ರೂಪದಲ್ಲಿ ಆರ್ಥಿಕ ನೆರವನ್ನು ಒದಗಿಸುತ್ತದೆ. ಅಮಿತಾಬ್ ಭಟ್ಟಾಚಾರ್ಯ ಅವರು ‘ವಿದ್ಯಾರ್ಥಿ/ವಿದ್ಯಾರ್ಥಿನಿಯರು ಸಬ್ಸಿಡಿ ರೂಪದಲ್ಲಿ ವಿದ್ಯಾರ್ಥಿ ಸಾಲವನ್ನು ಪಡೆಯಲೇಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ ಮತ್ತು ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾರೆ. ಈ ಕಾರಣಕ್ಕೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಾಲ ಮರುಪಾವತಿಸಲಾಗದೆ, ತಲೆಗಂದಾಯದ ಚಕ್ರವ್ಯೂಹಕ್ಕೆ ಸಿಲುಕಿ ತಮ್ಮ ಕಲಿಕೆಯೆ ಮೊಟಕುಗೊಳಿಸುವ ಅಪಾಯಕ್ಕೆ ಗುರಿಯಾಗಲಿದ್ದಾರೆ’ ಎಂದು ವಿಮರ್ಶಿಸುತ್ತಾರೆ. ಎಚ್‍ಇಸಿಐ ಸ್ಥಾಪನೆಯ ಮೂಲಕ ಸಾಲದ ಬಂಡವಾಳ ವ್ಯವಸ್ಥೆ ಕ್ರಮಬದ್ದಗೊಳ್ಳುತ್ತದೆ ಮತ್ತು ಕಾನೂನು ಚೌಕಟ್ಟಿನ ಅಡಿಯಲ್ಲಿ ತರಲಾಗುತ್ತದೆ
ಮರೆಯುವ ಮುನ್ನ
ಭಾರತ ಸ್ವಾತಂತ್ರ ಗಳಿಸಿದ ನಂತರ ಮಾಡಿದ ಭಾಷಣದಲ್ಲಿ ನೆಹರೂ ಅವರು “ವಿಶ್ವವಿದ್ಯಾಲಯವು ಮಾನವೀಯತೆಗೆ, ಸಹಿಶ್ಣತೆಗೆ, ಚಿಂತನೆಗಳ ನಿಕಶನಕ್ಕೆ, ಸತ್ಯದ ಅನ್ವೇಷಣೆಗೆ ವೇದಿಕೆಯಾಗಬೇಕು. ಉನ್ನತ ಗುರಿಗಳನ್ನು ಸಾದಿಸುವ ಕಡೆಗೆ ಚಲಿಸುವ ಹೆಜ್ಜೆಗಳೊಂದಿಗೆ ಜೊತೆಗೂಡಬೇಕು. ವಿಶ್ವವಿದ್ಯಾಲಯಗಳು ತಮ್ಮ ಜವಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದರೆ ಆಗ ದೇಶ ಮತ್ತು ಜನತೆ ಸುರಕ್ಷಿತವಾಗಿರುತ್ತದೆ” ಎಂದಿದ್ದರು. ನೆಹರೂ ಅವರ ಈ ಕನಸು ಮತ್ತು ದರ್ಶನವು ಸಾಕಾರಗೊಳ್ಳಬೇಕಾದರೆ ಉನ್ನತ ಶಿಕ್ಷಣವು ವಿಸ್ತಾರಗೊಳ್ಳುತ್ತಲೆ ಇರಬೇಕು. ಸದಾ ಪ್ರಯೋಗಾತ್ಮಕವಾದ ಕಲಿಕೆಯರಿಮೆಯನ್ನು ರೂಪಿಸುತ್ತಲೇ ಇರಬೇಕಾಗುತ್ತದೆ. ಶೈಕ್ಷಣಿಕ ಅಧ್ಯಯನ, ಸಂಶೋಧನೆಗಳು ಹಳೆಯ ಸಂಕೋಲೆಗಳಿಂದ ಕಳಚಿಕೊಂಡು ಪ್ರಸ್ತುತ ಸಂದರ್ಭಕ್ಕೆ ಅನುಗುಣವಾಗಿ ಪುನರೂಪಿಸಿಕೊಳ್ಳುತ್ತಲೆ ಇರಬೇಕು. ಮತ್ತು ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗದಂತೆ ಹಣಕಾಸಿನ ವ್ಯವಸ್ಥೆಯನ್ನು ಹೊಂದಿರಬೇಕು. ಆದರೆ ಇವೆಲ್ಲ ಇಂದು ಕೇವಲ ಆದರ್ಶದ ಮಾತುಗಳಾಗಿ ಉಳಿದಿವೆ. ಇಂದು ಭಾರತದ ಉನ್ನತ ಶಿಕ್ಷಣ ಆಳವಾದ ಬಿಕ್ಕಟ್ಟಿನಲ್ಲಿದೆ. ಇತ್ತೀಚಿನ ಉನ್ನತ ಶಿಕ್ಷಣದ ಸಮೀಕ್ಷೆಯ ಪ್ರಕಾರ 799 ವಿಶ್ವವಿದ್ಯಾಲಯಗಳಲ್ಲಿ, 39000 ಕಾಲೇಜುಗಳಲ್ಲಿ ಸುಮಾರು 3.5 ಕೋಟಿ ವಿದ್ಯಾರ್ಥಿ/ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಇವರ ಭವಿಷ್ಯವು ನಿಖರವಾಗಿ ಯಾವ ದಿಕ್ಕಿನಲ್ಲಿದೆ ಎಂದು ಸ್ಪಷ್ಟವಾಗಿ ವಿವರಿಸುವ ಸ್ಥಿತಿಯಲ್ಲಿ ಯಾರೂ ಇಲ್ಲ. ಇಂತಹ ಡೋಲಾಯಮಾನದ ಪರಿಸ್ಥಿತಿಯಲ್ಲಿ ಮೋದಿ-ಆರೆಸ್ಸಸ್ ಸರಕಾರವು ಉನ್ನತ ಶಿಕ್ಷಣವನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ನೇರವಾಗಿ ಮಾಡಲು ಸಾದ್ಯವಿಲ್ಲದ ಕಾರಣ ಯುಜಿಸಿಯನ್ನು ವಿಸರ್ಜಿಸಿ ಉನ್ನತ ಶಿಕ್ಷಣ ಆಯೋಗದ ರಚನೆಯ ಮೂಲಕ ಈ ನವಉದಾರೀಕರಣ, ಖಾಸಗೀಕರಣ, ಜಾಗತೀಕರಣದ ಮುಕ್ತ ಮಾರುಕಟ್ಟೆ ನೀತಿಗಳನ್ನು ತರಲು ಹೊರಟಿದೆ. ಇದರ ಜೊತೆಗೆ ಮತೀಯವಾದದ ಸಿದ್ದಾಂತಗಳನ್ನು ಸಹ ಸಂಸ್ಥೀಕರಣಗೊಳಿಸಲು ಹವಣಿಸುತ್ತಿದೆ.
ನಮ್ಮ ಮುಂದೆ ಹೆಚ್ಚಿನ ಆಯ್ಕೆಗಳಿಲ್ಲ. ಜನಾಂದೋಲನವೊಂದೆ ಉಳಿದಿರುವ ಮಾರ್ಗ

– ಬಿ. ಶ್ರೀಪಾದ ಭಟ್

LEAVE A REPLY

Please enter your comment!
Please enter your name here