Homeಅಂಕಣಗಳುಪುಸ್ತಕ ಪರಿಚಯ; ಎಡಿತ್ ನೆಸ್ಬೂತರ ಕಾದಂಬರಿ: ‘ರೈಲ್ವೆಮಕ್ಕಳು’

ಪುಸ್ತಕ ಪರಿಚಯ; ಎಡಿತ್ ನೆಸ್ಬೂತರ ಕಾದಂಬರಿ: ‘ರೈಲ್ವೆಮಕ್ಕಳು’

- Advertisement -
- Advertisement -

ಕನ್ನಡದ ಮಕ್ಕಳ ಸಾಹಿತ್ಯ ಹೆಚ್ಚಾಗಿ ಪದ್ಯಕೇಂದ್ರಿತ. ಕಾದಂಬರಿ ಬರೆವ ಕಸುವಿದ್ದವರು ಮಕ್ಕಳಿಗಾಗಿ ಬರೆಯುವುದು ಕಡಿಮೆ. ದೊಡ್ಡ ಕಥನವೊಂದನ್ನು ಕಲ್ಪಿಸಿಕೊಳ್ಳಲು ಅಶಕ್ತರಾಗಿರುವವರು, ಮಕ್ಕಳ ಕಥನಗಳನ್ನು ಸರಳೀಕರಿಸಿ ಯಾಂತ್ರಿಕವಾಗಿ ಬರೆಯುವುದು ಹೆಚ್ಚು. ಈ ಹಿನ್ನೆಲೆಯಲ್ಲಿ ಶತಮಾನದ ಹಿಂದಿನ ಮಕ್ಕಳ ಕೃತಿಯೊಂದು ಕನ್ನಡಕ್ಕೆ ಬಂದಿದೆ. ಅದು ಬ್ರಿಟಿಷ್ ಲೇಖಕಿ ಎಡಿತ್ ನೆಸ್ಬೂತ್ ಅವರ ‘ದ ರೈಲ್ವೆ ಚಿಲ್ದ್ರನ್’ (1906). 19ನೇ ಶತಮಾನದಲ್ಲಿ ಸಮಾಜವಾದಿ ಚಳವಳಿಯಲ್ಲಿ ತೊಡಗಿಕೊಂಡಿದ್ದ ರಾಜಕೀಯ ಕಾರ್ಯಕರ್ತೆಯೂ ಆಗಿದ್ದ ಎಡಿತರ ಈ ಕಾದಂಬರಿ ಬಹಳ ಜನಪ್ರಿಯ. ಇದು ಸಿನಿಮಾ ಕೂಡ ಆಯಿತು. ಇದನ್ನು ವೃತ್ತಿಯಿಂದ ವೈದ್ಯರಾದ ಬಳ್ಳಾರಿ ಡಾ. ಅರವಿಂದ ಪಟೇಲರು ಕನ್ನಡಕ್ಕೆ ತಂದಿದ್ದಾರೆ.

ಎಡಿತ್ ನೆಸ್ಬೂತ್

ಮೂರು ಮಕ್ಕಳು ಮುಖ್ಯ ಪಾತ್ರಗಳಲ್ಲಿ ನಿರೂಪಣೆಗೊಂಡಿರುವ ಈ ಕಾದಂಬರಿ, ಮಕ್ಕಳ ದೃಷ್ಟಿಯಿಂದ ರೋಚಕವೂ ರಾಜಕೀಯ ದೃಷ್ಟಿಯಿಂದ ಐತಿಹಾಸಿಕವೂ ಆದ ಆಯಾಮವುಳ್ಳದ್ದು. ಮೂರು ಮಕ್ಕಳು ನಾಟಕೀಯವಾದ ಸನ್ನಿವೇಶದಿಂದ ರೈಲಿಗೆ ತೆರೆದುಕೊಳ್ಳುವ ಮೂಲಕ ಕಥೆ ಶುರುವಾಗುತ್ತದೆ. ಈ ಮಕ್ಕಳ ತಂದೆಯನ್ನು ಶತ್ರುದೇಶಕ್ಕೆ ಗುಪ್ತಮಾಹಿತಿ ಒದಗಿಸುತ್ತಿದ್ದಾನೆಂದು ಆಪಾದಿಸಿ ಸರ್ಕಾರ, ಸೆರೆಮನೆಗೆ ಹಾಕಿದೆ. ಇದನ್ನು ಮಕ್ಕಳಿಗೆ ತಿಳಿಯದಂತೆ ಗುಟ್ಟಾಗಿಟ್ಟು, ಗಂಡ ಬರುವತನಕ ಕುಟುಂಬ ಸಂಭಾಳಿಸುವ ಹೊಣೆ, ಮಕ್ಕಳ ತಾಯ ಮೇಲೆ ಬೀಳುತ್ತದೆ. ಸನ್ನಿವೇಶ ಪಲ್ಲಟದಿಂದ ಬಡತನಕ್ಕಿಳಿದ ಕುಟುಂಬವು, ಲಂಡನ್ ತೊರೆದು ಹಳ್ಳಿಯೊಂದರಲ್ಲಿ ಬಿಡಾರ ಹೂಡುತ್ತದೆ. ಅದು ಹೊಲ ಕಾಡು ಹೊಳೆಗಳಿಂದ ಕೂಡಿದ ತಾಣ. ಈ ಹೊಸತಾಣದಲ್ಲಿ ಮಕ್ಕಳು ತಮ್ಮ ಸುತ್ತ ತೆರೆದುಬಿದ್ದಿರುವ ನಿಸರ್ಗ ಮತ್ತು ಮನುಷ್ಯ ಪರಿಸರಕ್ಕೆ ಮೆಲ್ಲಗೆ ಬಿಚ್ಚಿಕೊಳ್ಳುತ್ತವೆ. ಮನೆಯ ಬಳಿ ಹಾದುಹೋಗಿರುವ ರೈಲುಹಳಿ, ಓಡಾಡುವ ಬಂಡಿ ಮತ್ತು ರೈಲ್ವೆ ನಿಲ್ದಾಣ ಅವರನ್ನು ಸೆಳೆಯುತ್ತದೆ. ಸ್ಟೇಶನ್‌ಮಾಸ್ತರ್, ಸಿಗ್ನಲ್‌ಮನ್, ಪೋರ್ಟರು ಗೆಳೆಯರಾಗುತ್ತಾರೆ. ಈ ಹೊಸ ಪರಿಸರದಲ್ಲಿ ಮಕ್ಕಳು ಮಾಡುವ ಸಾಹಸ, ಪ್ರಕಟಿಸುವ ಜೀವಂತಿಕೆಗಳನ್ನು ಕಾದಂಬರಿ ಕಾಣಿಸುತ್ತ ಹೋಗುತ್ತದೆ. ಕೊನೆಗೊಂದು ದಿನ ಮಕ್ಕಳ ಅಪ್ಪ ನಿರ್ದೋಷಿಯೆಂದು ಸಾಬೀತಾಗಿ, ಸೆರೆಮನೆಯಿಂದ ಬಿಡುಗಡೆಗೊಂಡು ರೈಲಿನಿಂದ ಇಳಿವ ಮೂಲಕ ಕಾದಂಬರಿ ಮುಗಿಯುತ್ತದೆ.

ಕಾದಂಬರಿಯಲ್ಲಿ ರೈಲುಬಂಡಿಯು ಮಕ್ಕಳ ವಿಸ್ಮಯಕ್ಕೆ ಮಾತ್ರ ಇಂಬಾಗುವುದಿಲ್ಲ. ಅವರಲ್ಲಿ ನೋವಿಗೆ ಮಿಡಿವ ಮನುಷ್ಯತ್ವವನ್ನು ಉದ್ದೀಪಿಸುವ ಸಂಗಾತಿಯಾಗುತ್ತದೆ. ಬೆಟ್ಟ ನದಿ ಕಾಡು ಕಡಲು, ಅವರಲ್ಲಿ ಹುದುಗಿರುವ ಕ್ರಿಯಾಶೀಲತೆಯನ್ನು ಹೊಮ್ಮಿಸುತ್ತವೆ. ಗೋಪಾಲಕೃಷ್ಣ ಅಡಿಗರು ಅನುವಾದಿಸಿದ ಬನದ ಮಕ್ಕಳು ಕಾದಂಬರಿಯಲ್ಲಿ ಮಕ್ಕಳ ಸೃಜನಶೀಲತೆಯನ್ನು ಹೊಮ್ಮಿಸುತ್ತಿರುವುದು ಕಾಡಾದರೆ, ಇಲ್ಲಿ ಆಧುನಿಕ ಯಂತ್ರಜಗತ್ತಿಗೆ ಸಂಬಂಧಿಸಿದ ರೈಲುಗಾಡಿ ಅದಕ್ಕೆ ಅನುವಾಗುತ್ತದೆ. ಕೈಗಾರಿಕೀಕರಣಗೊಂಡ ದೇಶದ ಸಹಜ ಅಭಿವ್ಯಕ್ತಿಯಂತೆ ಈ ವಸ್ತುವಿದೆ. ವಿಶೇಷವೆಂದರೆ ಇಲ್ಲಿನ ರೈಲುಗಾಡಿ ಕೇವಲ ತಂತ್ರಜ್ಞಾನದ ಉತ್ಪನ್ನವಲ್ಲ. ಪರಿಸರದಲ್ಲಿರುವ ಹೊಳೆ ಕಣಿವೆ ಕಾಡು ಮನುಷ್ಯರ ಜತೆ ಬೆರೆತು ತಾನೂ ಒಂದು ಪಾತ್ರ. ಈ ಹಿನ್ನೆಲೆಯಲ್ಲಿ ‘ರೈಲ್ವೆಮಕ್ಕಳು’ ಎಂಬ ಕಾದಂಬರಿ ಶೀರ್ಷಿಕೆ ಅರ್ಥಪೂರ್ಣ. ತಂದೆಯಿಂದ ದೂರವಾಗಿರುವ ಮಕ್ಕಳ ಅನಾಥಪ್ರಜ್ಞೆಯನ್ನು ರೈಲು ನೀಗಿಸುತ್ತದೆ. ಈ ಕಾದಂಬರಿ ಇರಾನಿನ ಮಜೀದ್ ಮಜೀದಿಯವರು ಮಾಡಿರುವ ಮಕ್ಕಳ ಮೇಲಿನ ಸಿನಿಮಾಗಳನ್ನು ನೆನಪಿಸುತ್ತದೆ. ದೈವಿಕವಾದ ಚೆಲುವು ಮುಗ್ಧತೆ ಕರುಣೆ ಪ್ರೀತಿ ನೆಲದ ಮೇಲಿದ್ದರೆ ಅದು ಮಕ್ಕಳಲ್ಲಿದೆ ಎಂದು ಕಾಣಿಸುವ ಸಿನಿಮಾಗಳವು; ‘ನಿಮ್ಮ ಮಕ್ಕಳು ನಿಮ್ಮವು ಮಾತ್ರವಲ್ಲ, ಅವು ಜಗತ್ತಿಗೆ ಸೇರಿದವು’ ಎಂಬ ದಾರ್ಶನಿಕ ಲೇಖಕ ಖಲೀಲ್ ಗಿಬ್ರಾನನ ಹೇಳಿಕೆಗೆ ವ್ಯಾಖ್ಯೆ ಬರೆದಂತೆ ಅವಿವೆ. ಇಂಗ್ಲೆಂಡಿನಲ್ಲಿ ರೈಲ್ವೆಚಿಲ್ದ್ರನ್ ಸಿನಿಮಾ ಕೂಡ ಆಯಿತು.

ಕಾದಂಬರಿಯಲ್ಲಿ ಮಕ್ಕಳನ್ನು ಬಿಟ್ಟರೆ ಮುಖ್ಯ ಪಾತ್ರ ಮಕ್ಕಳ ತಾಯಿಯದು. ಈಕೆಯೊಬ್ಬ ಕರುಣೆ ಪ್ರೀತಿ ತುಂಬಿದ ಮಹಿಳೆ; ಕಂಡವರ ಮಕ್ಕಳನ್ನೂ ತನ್ನವರೆಂದು ವಾತ್ಸಲ್ಯ ತೋರಬಲ್ಲ ಉದಾರೆ; ಕತೆ ಕವಿತೆ ಬರೆದು, ಸಂಭಾವನೆಯಿಂದ ಮನೆ ಸಂಭಾಳಿಸುವ ದಿಟ್ಟೆ. ಮಕ್ಕಳ ವ್ಯಕ್ತಿತ್ವದ ಹಿಂದೆ ಇವಳ ಪ್ರಭಾವವಿದೆ. ಮಕ್ಕಳನ್ನು ಸಮಾಜಜೀವಿಗಳಾಗಿ ಬೆಳೆಸುವುದಕ್ಕೆ ಬೇಕಾದ ಜೀವನ ಮೌಲ್ಯಗಳನ್ನು ಈಕೆ ತುಂಬುತ್ತಾಳೆ. ಬವಣೆ ಕಡಿದುಕೊಂಡು ಮೈಮೇಲೆ ಬಿದ್ದಾಗ ಎದೆಗುಂದದೆ ಬದುಕಿನ ಬಂಡಿ ಎಳೆವ ಆಕೆಯ ಸಹನೆ ವಿವೇಕ ಅಪೂರ್ವ. ಗಾರ್ಕಿಯ ’ಮದರ್’ ತರಹ ಕೃತಿಯಾದ್ಯಂತ ಜೀವಶಕ್ತಿಯಾಗಿ ಹರಡಿಕೊಳ್ಳುವಳು ಈಕೆ.

ಕಾದಂಬರಿಯ ಇಷ್ಟವಾಗುವ ಮತ್ತೊಂದು ಪಾತ್ರ ರೈಲ್ವೆ ಪೋರ್ಟರನದು. ಅವನೊಬ್ಬ ಬಡವ. ಸ್ವಾಭಿಮಾನಿ. ತನಗೆ ನೆರವಾಗುವ ನೆಪದಲ್ಲಿ ಉಳ್ಳವರು ಸಹಾನುಭೂತಿಯನ್ನು ತೋರಿಸಿ ಆತ್ಮಗೌರವಕ್ಕೆ ಧಕ್ಕೆ ತರುವ ಬಗ್ಗೆ ಎಚ್ಚರವುಳ್ಳವನು. ಮಕ್ಕಳಾದರೂ ಅವನ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಪ್ರೀತಿ ತೋರುವರು. ಕರುಣೆ-ದಾನಗಳನ್ನು ಧಾರ್ಮಿಕ ಮೌಲ್ಯವಾಗಿಸಿಕೊಂಡ ಸಮಾಜಗಳಲ್ಲಿ, ಅವು ಉಳ್ಳವರ ಹೆಚ್ಚುಗಾರಿಕೆಯ ಪ್ರದರ್ಶನಗಳೂ ಆಗುತ್ತವೆ. ಅವಕ್ಕೆ ಬಡವರ ಕಷ್ಟ ಗೊತ್ತಾಗಬಹುದು. ಸ್ವಾಭಿಮಾನ ಅರ್ಥವಾಗುವುದಿಲ್ಲ. ಇಂತಹ ಸಮಾಜಗಳಲ್ಲಿ ಬಡವರ ದೈನ್ಯಕ್ಕಿಳಿದುಬಿಡುವರು. ಆದರೆ ಖಾಸಗಿತನವನ್ನು ಮೌಲ್ಯವಾಗಿಸಿಕೊಂಡು ಬದುಕುವ, ದುಃಖವನ್ನು ಸಾರ್ವಜನಿಕವಾಗಿಯೂ ಭಾವುಕವಾಗಿಯೂ ಪ್ರದರ್ಶಿಸದೆ ಒಳಗೇ ಅನುಭವಿಸುವ ಯೂರೋಪಿಯನ್ ಸಮಾಜದಲ್ಲಿ, ಸುತ್ತಮುತ್ತಲಿನವರ ಕಷ್ಟಸುಖದಲ್ಲಿ ಭಾಗಿಯಾಗದಿದ್ದರೆ ನಮ್ಮ ಬದುಕಿಗೆ ಅರ್ಥವಿಲ್ಲ ಎಂಬ ಆಶಯವನ್ನು ಕಾದಂಬರಿ ಹೊಮ್ಮಿಸುವುದು ಮಹತ್ವದ ಸಂಗತಿ.

ಕಾದಂಬರಿ ಇಂಗ್ಲೆಂಡಿನ ಹಳ್ಳಿಬಾಳಿನ ಸೂಕ್ಷ್ಮ ವಿವರಗಳ ಸಮೇತವಾದ ಜೀವಂತ ಚಿತ್ರವನ್ನು ಕಟ್ಟಿಕೊಡುತ್ತದೆ. ಕಥೆಯಲ್ಲಿ ಪತ್ತೇದಾರಿ ಗುಣವಿದ್ದು, ಕುತೂಹಲ ಹುಟ್ಟಿಸಿಕೊಂಡು ಹೋಗುತ್ತದೆ. ಬಹುಮಟ್ಟಿಗೆ ಕಥೆಯನ್ನು ಮಕ್ಕಳ ದೊಡ್ಡವರ ಸಂಭಾಷಣೆಯ ಮೂಲಕ ಕಟ್ಟಿರುವುದರಿಂದ ಓದಲು ಸರಾಗವಾಗಿದೆ. ಇಂಗ್ಲೆಂಡಿನ ಮಕ್ಕಳ ವರ್ತನೆ ಜಗಳ ಆಲೋಚನೆ ಪ್ರೀತಿಗಳನ್ನು ಕಾಣುವಾಗ, ನಮ್ಮ ಕುಟುಂಬಗಳಲ್ಲೂ ಹೀಗೆ ಅಲ್ಲವೇ ಎಂಬ ಆಪ್ತಭಾವ ಬರುತ್ತದೆ. ದೇಶ ಭಾಷೆ ಸಂಸ್ಕೃತಿಗಳು ಬೇರೆ; ಆದರೆ ಮಾನವ ಸ್ವಭಾವಗಳು ಬಹುತೇಕ ಒಂದೇ. ಕಾದಂಬರಿ, ಕೇವಲ ಮಕ್ಕಳ ಲೋಕದ ರೊಮ್ಯಾಂಟಿಕ್ ಜಗತ್ತನ್ನು ಒಳಗೊಂಡಿಲ್ಲ. ದುಷ್ಟ ಪ್ರಭುತ್ವದ ವಿರುದ್ಧ ನಾಗರಿಕ ಸಮಾಜದಲ್ಲಿರುವ ಪ್ರಜ್ಞಾವಂತರು ಪ್ರತಿರೋಧ ಮಾಡಿದಾಗ, ಅವರಿಗೆ ಅದು ಕೊಡುವ ಕಿರುಕುಳ, ಅವರು ಅದನ್ನು ಹಲ್ಲುಕಚ್ಚಿ ಎದುರಿಸುವ ಘಟನೆಗಳು ಇಲ್ಲಿವೆ. ರಷ್ಯಾ ದೇಶದಲ್ಲಿ ಝಾರ್ ದೊರೆಗಳನ್ನು ಟೀಕಿಸಿ ಬರೆದು ದೇಶಭ್ರಷ್ಟನಾದ ಲೇಖಕನೊಬ್ಬನ ಪಾತ್ರವೂ ಇದೆ. ಹೀಗಾಗಿ ಕಾದಂಬರಿಗೆ ರಾಜಕೀಯ ಆಯಾಮವೂ ಪ್ರಾಪ್ತವಾಗಿದೆ. ಆದರೆ ಈ ಕಾದಂಬರಿ ರಚಿತವಾದ ಕಾಲಕ್ಕೆ ಇಂಗ್ಲೆಂಡು ಜಗತ್ತಿನ ಹಲವಾರು ದೇಶಗಳನ್ನು ಆಕ್ರಮಿಸಿಕೊಂಡಿತ್ತು. ಅಲ್ಲಿ ಪ್ರತಿಭಟನೆ ಮಾಡುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರನ್ನು ರಾಜದ್ರೋಹದ ಆಪಾದನೆ ಹೊರಿಸಿ ಜೈಲಿಗೆ ಅಟ್ಟುತ್ತಿತ್ತು. ಕೊಲ್ಲುತ್ತಿತ್ತು. ಇಂಗ್ಲಿಷ್ ಲೇಖಕರು ಈ ಬಗ್ಗೆ ಪರಿತಾಪ ಪ್ರಜ್ಞೆಯಿಲ್ಲದೆ ಲೇಖಕರ ಅಭಿವ್ಯಕ್ತಿ ಸ್ವಾತಂತ್ರ್ಯ, ನಾಗರಿಕ ಪ್ರತಿರೋಧ, ಸಮಾಜವಾದದಂತಹ ಮೌಲ್ಯಗಳ ಬಗ್ಗೆ ಬರೆಯುವುದು ಸೋಜಿಗ ಮತ್ತು ವೈರುಧ್ಯವೆನಿಸುತ್ತದೆ. ಇಂತಹುದೇ ವೈರುಧ್ಯ, ಭಾರತದಲ್ಲಿ ಪ್ರಭುತ್ವಗಳು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವಾಗ ನಿರ್ಲಿಪ್ತವಾಗಿದ್ದು, ಬೇರೆ ದೇಶಗಳ ಸರ್ವಾಧಿಕಾರಿ ಸರ್ಕಾರಗಳ ವಿರುದ್ಧ ತಮ್ಮ ಡೆಮಾಕ್ರಟಿಕ್ ಆಕ್ರೋಶ ಹರಿಸುತ್ತಿರುವ ನಮ್ಮ ಕೆಲವು ಲೇಖಕರ ವಿಷಯದಲ್ಲಿಯೂ ಕಾಣುವುದು. ಈ ಕಾರಣದಿಂದಲೂ ‘ರೈಲ್ವೆಮಕ್ಕಳು’ ಕಾದಂಬರಿಯ ಪ್ರಕಟಣೆಯು ಪ್ರಸ್ತುತವೆನಿಸುತ್ತದೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ’ನಾವೂ ಇತಿಹಾಸ ಕಟ್ಟಿದೆವು- ಅಂಬೇಡ್ಕರ್ ಚಳವಳಿಯಲ್ಲಿ ಮಹಿಳೆಯರು’ ಪುಸ್ತಕದಿಂದ ಆಯ್ದ ಭಾಗ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...