Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆಪುಸ್ತಕ ಪರಿಚಯ: ನನ್ನ ಸಂಗೀತ ವ್ಯಾಸಂಗ (ಆತ್ಮಕಥೆ)

ಪುಸ್ತಕ ಪರಿಚಯ: ನನ್ನ ಸಂಗೀತ ವ್ಯಾಸಂಗ (ಆತ್ಮಕಥೆ)

- Advertisement -
- Advertisement -

19ನೇ ಶತಮಾನದ ಕೊನೆಯ ಮತ್ತು 20ನೇ ಶತಮಾನದ ಮೊದಲ ಭಾಗ. ಆಗಿನ ಮುಂಬೈ ಪ್ರಾಂತ್ಯದಲ್ಲಿ ಸಂಗೀತ ಮತ್ತು ರಂಗಭೂಮಿಯ ಲೋಕದಲ್ಲಿ ಅನೇಕ ಪ್ರಖ್ಯಾತರು ಆಗಿಹೋದರು. ಭೂಗಂಧರ್ವ ರೆಹಮತ್ ಖಾನ್, ಅಬ್ದುಲ್ ಕರೀಂಖಾನ್, ಉಸ್ತಾದ್ ಅಲ್ಲಾದಿಯಾ ಖಾನ್, ಭಾತಖಂಡೆ, ಹೀರಾಬಾಯಿ ಬಡೋದೆಕರ್, ಭಾಸ್ಕರರಾವ್ ಬಖಲೆ, ವಿಷ್ಣುಪಂಥ ಛತ್ರೆ, ಸವಾಯಿ ಗಂಧರ್ವ, ಬಾಲಗಂಧರ್ವ, ನತ್ಥನ್ ಖಾನ್, ಬರ್ಕತ್‌ಉಲ್ಲಾ ಖಾನ್- ಹೀಗೆ ಹಲವಾರು ಪ್ರಭೃತಿಗಳು ತಮ್ಮ ಪ್ರತಿಭೆ-ಪ್ರಯೋಗಗಳನ್ನು ಕಾಣಿಸಿದರು. ಇವರಲ್ಲಿ ಗಾಯಕರೂ ನಟರೂ ಮುಖ್ಯವಾಗಿ ಹಾರ್ಮೊನಿಯಂ ವಾದಕರೂ ಆಗಿದ್ದ ಗೋವಿಂದರಾವ್ ಟೇಂಬೆಯವರದೂ ಒಬ್ಬರು. ಅವರ ಆತ್ಮಕಥೆಯಿದು- ‘ಮಾಝಾ ಸಂಗೀತ ವ್ಯಾಸಂಗ್’.

ನಟ, ಗಾಯಕ, ನಾಟಕಕಾರ, ಲೇಖಕ, ಹಾರ್ಮೊನಿಯಂ ವಾದಕ ಆಗಿದ್ದ ಗೋವಿಂದರಾವ್ ಟೇಂಬೆ (1881-1955), ಕೊಲ್ಹಾಪುರದವರು. ಶಾಹು ಮಹಾರಾಜರ ಆಸ್ಥಾನದಲ್ಲಿದ್ದ ಅಲ್ಲಾದಿಯಾಖಾನ್ ಹಾಗೂ ಅವರ ಶಿಷ್ಯ ಭಾಸ್ಕರರಾವ್ ಬಖಲೆ ಅವರಿಂದ ಸಂಗೀತ ಕಲಿತವರು. ಮರಾಠಿಯ ಮೊದಲ ಟಾಕಿ ‘ಅಯೋಧ್ಯಾಚ ರಾಜಾ’ದಲ್ಲಿ ನಟಿಸಿದವರು. ‘ಶಿವಾಜಿ ನಾಟಕ ಮಂಡಳಿ’ ಎಂಬ ಕಂಪನಿಯನ್ನೂ ಅವರು ಕಟ್ಟಿ ನಡೆಸಿದವರು. ಟೇಂಬೆಯವರಿಗೂ ಕರ್ನಾಟಕಕ್ಕೂ ಬಹಳ ಲಗತ್ತಿತ್ತು. ಅವರು ನಾಲ್ವಡಿ ಕೃಷ್ಣರಾಜ ಒಡೆಯರ ಸೋದರ ಕಂಠೀರವ ನರಸರಾಜ ಒಡೆಯರ ಆಪ್ತ ಒಡನಾಡಿ. ಇಬ್ಬರೂ ಸೇರಿ ಸಂಗೀತದ ರಂಗಭೂಮಿಯ ಪ್ರದರ್ಶನ ನೋಡಲು ಒಟ್ಟಿಗೆ ಹೋಗುತ್ತಿದ್ದವರು. ವಿದೇಶ ಪ್ರವಾಸ ಮಾಡುತ್ತಿದ್ದರು. ಕನ್ನಡಿಗರ ನಾಟಕ ಕಂಪನಿಗಳಲ್ಲೂ ಟೇಂಬೆಯವರು ಗವಾಯಿಯಾಗಿ ಕೆಲಸ ಮಾಡಿದರು.

ಗೋವಿಂದರಾವ್ ಟೇಂಬೆ

ಟೇಂಬೆಯವರ ಆತ್ಮಕಥೆಯ ವಿಶೇಷವೆಂದರೆ, ಇದು ಅವರ ತಂದೆ ತಾಯಿ, ಮಡದಿ ಮಕ್ಕಳು, ಗೆಳೆಯರು ಬಂಧುಗಳನ್ನು ಕುರಿತು ಹೇಳುವುದಿಲ್ಲ. ಬದಲಿಗೆ ಅವರ ಜೀವಿತ ಕಾಲದಲ್ಲಿ ಸಂಗೀತ ಲೋಕದಲ್ಲಿ ನಡೆದ ವಿದ್ಯಮಾನಗಳನ್ನು ಕಟ್ಟಿಕೊಡುತ್ತದೆ. ಈ ಕೃತಿಯಲ್ಲಿ, ಹಿಂದೂಸ್ತಾನಿ ಸಂಗೀತ ಮತ್ತು ಮರಾಠಿ ರಂಗಭೂಮಿ, ಮುಂಬೈ ಚಲನಚಿತ್ರ ರಂಗಗಳನ್ನು ಹೇಗೆ ಎಲ್ಲ ಧರ್ಮದ ಪ್ರತಿಭಾವಂತರು ಸೇರಿ ಬೆಳೆಸಿದರು ಎಂಬುದರ ಅಪೂರ್ವ ಚರಿತ್ರೆ ಸಿಗುತ್ತದೆ. ಅದರಲ್ಲೂ ಅಬ್ದುಲ್ ಕರೀಂಖಾನ್, ಅಲ್ಲಾದಿಯಾ ಖಾನ್, ನತ್ಥನ್‌ಖಾನ್ ಮೊದಲಾದವರ ಅದ್ಭುತವಾದ ವ್ಯಕ್ತಿಚಿತ್ರಗಳು ಸಿಗುತ್ತವೆ. ಸಂಗೀತ ಲೋಕದಲ್ಲಿದ್ದ ಸ್ಪರ್ಧೆ ಅಸೂಯೆ ಸಣ್ಣತನಗಳ ಚಿತ್ರಗಳೂ, ಉದಾರತೆ ಪ್ರೀತಿ ಬೆಳೆಸುವಿಕೆಯ ಚಿತ್ರಗಳೂ ಇಲ್ಲಿವೆ. ಶ್ರವ್ಯಾನುಭವಕ್ಕೆ ಸಂಬಂಧಿಸಿದ ಸಂಗೀತದ ಸೊಗಸನ್ನು ಬಣ್ಣಿಸಲು ಟೇಂಬೆಯವರು ಬಳಸಿರುವ ರೂಪಕಗಳು ವಿಶೇಷವಾಗಿವೆ. ಒಂದು ರೂಪಕ ನನಗೆ ಬಹಳ ಸೆಳೆಯಿತು. ಅದು ಪಶ್ಚಿಮದ ವಾದ್ಯವಾದ ಹಾರ್ಮೊನಿಯಂಅನ್ನು ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಪಳಗಿಸುವಾಗ ಟೇಂಬೆಯವರು ಪಟ್ಟ ಕಷ್ಟವನ್ನು ಕುರಿತದ್ದು. ಅದನ್ನವರು “ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಎರಕ ಹೊಯ್ದ ನರ್ತಕಿಗೆ ಭಾರತೀಯ ಕುಲವಧುವಿನ ಆಭರಣಗಳನ್ನು ತೊಡಿಸಿದಷ್ಟು ಕಠಿಣವಾದ ಕಾರ್ಯ” ಎನ್ನುತ್ತಾರೆ. ಇದು, ಬಿಎಂಶ್ರೀಯವರು ‘ಇಂಗ್ಲಿಷ್ ಗೀತಗಳು’ ಅನುವಾದವನ್ನು ಮಾಡುವಾಗ, ‘ಇವಳ ಸೊಬಗನವಳು ತೊಟ್ಟು ನೋಡಬಯಸಿದೆ. ಅವಳ ತೊಡುಗೆ ಇವಳಿಗಿಟ್ಟು ಹಾಡಬಯಸಿದೆ’ ಎಂದು ಬಣ್ಣಿಸಿದ ರೂಪಕವನ್ನು ನೆನಪಿಸುತ್ತದೆ. ಹೀಗಾಗಿ ಈ ಕೃತಿ ಪಶ್ಚಿಮದ ಸಂಸ್ಕೃತಿ ನಾಗರಿಕತೆಗಳ ಜತೆ, ಭಾರತೀಯ ಸಮಾಜವು ಅನುಸಂಧಾನ ಮಾಡುತ್ತಿದ್ದ ಚರಿತ್ರೆಯ ಕೃತಿಯೂ ಆಗಿದೆ. ಇದು ವಿಶೇಷ ತಜ್ಞತೆಯಿರುವ ಕ್ಷೇತ್ರದ ಅನುಭವವಿರುವ ಕೃತಿಯಾದರೂ ಸಾಮಾನ್ಯರೂ ಕಾದಂಬರಿಯಂತೆ ಓದಬಹುದು.

ಇದನ್ನೂ ಓದಿ: ’ನದಿಯೊಂದು ನಿದ್ರಿಸಿದಾಗ’: ವಿಶಿಷ್ಟ ಆಚರಣೆಗಳು, ನಂಬಿಕೆಗಳು, ಪೂರ್ವಜರ ಆರಾಧನೆಯೇ ಕಾಪಾಡುವ ಬುಡಕಟ್ಟು ಚಿತ್ರಣ

ಭಾರತದಲ್ಲಿ ಚರಿತ್ರೆ ಎಂದರೆ ಹಿಂದಿನ ರಾಜರು ಚಕ್ರವರ್ತಿಗಳು ಆಳಿದ, ಯುದ್ಧಮಾಡಿದ, ಮಡಿದ ಕಥನಗಳು ಎಂಬಂತಾಗಿದೆ. ಇವು ವರ್ತಮಾನದಲ್ಲಿ ಸಮುದಾಯಗಳ ನಡುವೆ ವೈಮನಸ್ಸನ್ನು ಹರಡಲು ಹತ್ಯಾರಗಳಾಗಿವೆ. ಇಂತಹ ಚರಿತ್ರೆಯನ್ನು ಬ್ರಿಟಿಷರು ಆರಂಭಿಸಿದರು. ಮತೀಯವಾದವು ಇದನ್ನು ಮುಂದುವರಿಸಿತು. ಅದೀಗ ನಮ್ಮ ಪಠ್ಯಪುಸ್ತಕಗಳನ್ನು ಆಳವಾಗಿ ಹೊಕ್ಕಿದೆ. ಆದರೆ ಚರಿತ್ರೆಯಲ್ಲಿ ಸಾಹಿತ್ಯದ ಸಂಗೀತದ ನೃತ್ಯದ ಸಿನಿಮಾದ ಭಾಷೆಗಳ ರಂಗಭೂಮಿಯ ಅಧ್ಯಾಯಗಳೂ ಇವೆ. ಜಾತಿಮತಗಳ ಹಂಗಿಲ್ಲದ ಆದಿಮಾನವರ ಚರಿತ್ರೆಯೂ ಇದೆ. ಇವನ್ನು ನಮ್ಮ ಗತಕಾಲದ ಮತ್ತು ವರ್ತಮಾನದ ತಿಳಿವಳಿಕೆ ರೂಪಿಸಲು ಬಳಸುವುದು ಕಡಿಮೆ. ಈ ಚರ್ಚೆಯ ಹಿನ್ನೆಲೆಯಲ್ಲಿ ಟೇಂಬೆಯವರ ಕೃತಿಯು ಇಂತಹ ಪರ್ಯಾಯ ಚರಿತ್ರೆಯನ್ನು ನಮ್ಮ ಮುಂದಿಡುತ್ತದೆ. ಗುಬ್ಬಿವೀರಣ್ಣನವರ ‘ಗುಬ್ಬಿಕಂಪನಿ’, ಬಿ.ವಿ ಕಾರಂತರ ‘ಇಲ್ಲಿರಲಾರೆ’ ಮೊದಲಾದ ಕಲಾಲೋಕದ ಆತ್ಮಚರಿತ್ರೆಯನ್ನಾಗಲಿ, ಸಿನಿಮಾ ಸಂಗೀತ ರಂಗಭೂಮಿ ಚಿತ್ರಕಲೆ ವಾಸ್ತುಶಿಲ್ಪ ಕುರಿತ ಕೃತಿಗಳನ್ನಾಗಲಿ ಇಲ್ಲಿ ಸ್ಮರಿಸಬೇಕು.

ಇಂತಹ ಅಮೂಲ್ಯವೂ ಚಾರಿತ್ರಿಕ ಮಹತ್ವವೂ ಇರುವ ಕೃತಿಯನ್ನು ಮರಾಠಿಯಿಂದ ಬೆಳಗಾವಿಯ ಸಂಗೀತ ಚರಿತ್ರೆಕಾರ ಶಿರೀಷ್ ಜೋಶಿ ಕನ್ನಡಕ್ಕೆ ತಂದಿದ್ದಾರೆ. ಅವರ ಅನುವಾದ ಬಹಳ ಆಪ್ತವಾಗಿದೆ. ಅವರು ಸ್ವತಃ ಸಂಗೀತದವರು. ಕುಮಾರ ಗಂಧರ್ವ, ಬಸವರಾಜ ರಾಜಗುರು ಜೀವನ ಚರಿತ್ರೆಗಳನ್ನು ಬರೆದವರು. ಗಡಿಜಗಳ, ನದಿಜಗಳಗಳಲ್ಲಿ ಎರಡು ಭಾಷಿಕ ಸಮುದಾಯಗಳ ನಡುವೆ ಸದಾ ಕಿಡಿ ಹಾರುವ ಸಮಯದಲ್ಲಿ, ಇಂತಹ ಪುಸ್ತಕಗಳು ಎರಡು ಭಾಷಿಕರ ನಡುವೆ ನಡೆದಿರುವ ಸಾಂಸ್ಕೃತಿಕ ಕೊಡುಕೊಳೆಗಳನ್ನು ಕಾಣಿಸುತ್ತವೆ. ಶಂಬಾ ಜೋಶಿ, ದ.ರಾ. ಬೇಂದ್ರೆ, ರಾ.ಚಿಂ. ಢೇರೆಯವರು ಕರ್ನಾಟಕ-ಮಹಾರಾಷ್ಟ್ರಗಳ ಚಾರಿತ್ರಿಕ ಸಾಂಸ್ಕೃತಿಕ ಸಾಹಿತ್ಯಕ ಸಂಬಂಧಗಳನ್ನು ಶೋಧಿಸಿದವರು. ಚಂದ್ರಕಾಂತ ಪೋಕಳೆ, ಡಿ.ಎಸ್.ಚೌಗಲೆ, ಸರಜೂ ಕಾಟ್ಕರ್, ಶಿರೀಷ ಜೋಶಿ ಮೊದಲಾದವರು ಮರಾಠಿಯಿಂದ ಅತ್ಯುತ್ತಮ ಕೃತಿಗಳನ್ನು ಕನ್ನಡಕ್ಕೆ ತರುವ ಮೂಲಕ ತಿಳಿವನ್ನು ಉಣಿಸುತ್ತಿರುವವರು. ಇವರಿಗೆ ಕೃತಜ್ಞತೆ ಸಲ್ಲಬೇಕು.

ನನ್ನ ಸಂಗೀತ ವ್ಯಾಸಂಗ (ಆತ್ಮಕಥೆ)
ಪಂಡಿತ ಗೋವಿಂದರಾವ್ ಟೇಂಬೆ,
ಅನು: ಶಿರೀಷ ಜೋಶಿ, ಕನ್ನಡ ಜಾಗೃತ್ತಿ ಪುಸ್ತಕ ಮಾಲೆ, ಅಲ್ಲಮ ಪ್ರಭು ಜನಕಲ್ಯಾಣ ಸಂಸ್ಥೆ,
ಚಿಂಚಣಿ

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...