ಉಳಿದಿರುವ ಹಾದಿ ಇದೊಂದು ಈಗ
ಈ ಹಾದಿಯಿಂದಲೆ ಸಾಗಬೇಕಾಗಿದೆ ನಾನು
ಸಾಗಬೇಕು, ಚಲಿಸಬೇಕು,
ಎದ್ದೆದ್ದು ಬಿದ್ದು ಪಾರಾಗಬೇಕು

ರಮಣಿಸುವ ಕಾಲುಹಾದಿಗಳು
ನನ್ನ ಅಕ್ಕ-ಪಕ್ಕ, ಸುತ್ತ-ಮುತ್ತ
ಅಲ್ಲಲ್ಲಿ ಕಗ್ಗಂಟಾಗಿರುವ ಮುಳ್ಳಿನ ಪೊದೆಗಳು
ಬರೀ ಪೊದೆಗಳು
ತೀವ್ರ ವಿಷಕರ ಮುಳ್ಳುಗಂಟೆಗಳು
ಅವತಿಕೊಂಡ ಹಾವು, ಚೇಳು
ಮೋಹಿನಿ-ಭೂತ ಪ್ರೇತಗಳು
ರಂಜಿಸುವ ಮೋಹ-ಮಾಯೆಗೆ ಸಿಲುಕದೆ
ಸಾಗುತ್ತಿರುವೆ ಇತ್ತ ನೇರ ನಾನು

ಎಲ್ಲಾದರೊಂದು ಸಿಕ್ಕೆ ಸಿಗುವುದು
ಲಕ್ಷ್ಯದ ಘಟಕಗಳು
ಇಲ್ಲಿಯೇ ನಿಂತು ಮರಳಿ ಬಾರದೆಂದು
ಇಲ್ಲಿಂದಲೆ ಅಜ್ಹಾಂ, ಇಲ್ಲಿಯೇ ಗಂಟೆಯ ನಾದಸ್ವರ
ಮೌನಧರಿಸಿದ ಮೀನಾರದಿಂದ ಕೊಳೆತ ಕುರುಹುಗಳ
ಅರ್ತನಾದ
ಇಲ್ಲಿಯೇ ಹಗಲಿರುಳು
ಕ್ಷಣ ಕ್ಷಣಕ್ಕೂ ಧಗಧಗಿಸುತ್ತಿರುವ
ಹವನದ ತಾಜಾ ತಾಜಾ
ನೀಲಿ ನೀಲಿ ಹೊಗೆ ಹೊರಸೂಸುತ್ತಿದೆ
ಇಲ್ಲಿಯೇ ಕಂಪಿಸುತ್ತಿರುವ ಗಗನದ ನಿರರ್ಥಕ ದೆಸೆಯಲ್ಲಿ
ನನ್ನ ನಿನ್ನ ಕಣ್ಣೀರಿನ ಎತ್ತೆರೆತ್ತರಕ್ಕೇರುವ ನಿರಂತರ ಬಳ್ಳಿ
ಹಬ್ಬಿರಲಿ ನಂದನವನದಲ್ಲಿ

ಉಳಿದಿರುವ ಇದೇ ತಾನೆ ಏಕೈಕ ಹಾದಿ
ಇದರಿಂದ ಪಾರಾಗಲೇಬೇಕಿದೆ ನಾನು
ಒಮ್ಮೆ ನಿನ್ನ ಸನಿಹದೊಂದಿಗೆ
ಇನ್ನೊಮ್ಮೆ ಒಬ್ಬಂಟಿಯಾಗಿ
ಒಮ್ಮೆ ಜನಜಂಗುಳಿಯೊಂದಿಗೆ
ನನ್ನ ಅಸ್ಮಿತೆಯ ಪಾಪ-ಪುಣ್ಯವ
ಸತ್ಯ-ಮಿಥ್ಯವ ಏನಾದರೊಂದು ನಾನೇ ಅವಲೋಕಿಸಿಕೊಳ್ಳುತ್ತಾ
ನುಡಿಯಲೇಬೇಕು, ಪಠಿಸಲೇಬೇಕು
ಈ ಚೂರು-ಪಾರನ್ನು ಬರಿದಾದ ಹವೆಯಲ್ಲಿ ಹಾರಿಸುತ್ತಾ
ಆರಾಧನೆಯ ಹೊದಿಕೆಯಿಂದ ಹೊದಿಸಿ
ನೈಜತೆಯೋ ಅಥವಾ ಭ್ರಾಂತಿಯೋ
ದಾನಶೂರನೋ-ತಿರುಕನೋ
ತುಂಬಿ ತುಳುಕುತ್ತಿರುವುದೋ
ಅಥವಾ ಬರಿದು ಬರಡಾಗಿರುವುದೋ
ಉಳಿದಿರುವುದು ಇದೇ ಒಂದು ದಾರಿ

ಇಲ್ಲಿಯೇ ಚಂದಿರನ ಮಿಂಚಿನ ಕಾಂತಿ
ಕಂಬನಿಯ ಮುಸುಕುಗಟ್ಟಿದ ಕಾರ್ಮೋಡಗಳು
ಸರ್ವಶಕ್ತತೆಯಿಂದ ಸುರಿಯುತ್ತಿರುವ
ಮನೋ-ಸಲ್ವಾವಿನ(1) ಮಳೆಯು
ನನ್ನ ನಿನ್ನ ಹಸ್ತದೊಂದಿಗೆ
ಅಥವಾ
ಪರಹಸ್ತದಲ್ಲಿ
ಅಥವಾ
ನನ್ನೊಡನೆಯೋ
ಇಲ್ಲಿಯೇ ತೆರೆದಿರುವುದು ನಮ್ಮ
ಅಂತರಂಗದ ಕಣ್ಣುಗಳು
ಇಲ್ಲಿಯೇ ನಮ್ಮ ಸಂಗಮ ಇಲ್ಲಿಯೇ ನಮ್ಮ ವಿದಾಯ

ಒಗ್ಗೂಡುವುದಿಲ್ಲ
ಮತ್ತೆ ನಾವೆಂದಿಗೂ
ಚಂಚಲ ರಾತ್ರಿ ಸಾಕಷ್ಟು ನವರಾತ್ರಿಗಳನ್ನು ಬಿಟ್ಟು
ಎಲ್ಲಿಗೆ ಸಾಗುವೆ, ಯಾರಿಗೆ ಕೂಗುವೆ
ಯಾವ ಅಲ್ವಂದ್(2) ಪರ್ವತದಿಂದಲೂ
ಮರಳಿ ಬರುವುದುಂಟೆ ಕೂಗು

ನನ್ನ ಗದ್ಗದಿತ ಯಾವ ಶ್ರವಣಕ್ಕೂ ಕೇಳಿಸದೆ
ಇದೇ ಹಾದಿಯಲ್ಲಿ ಸಾಗುತ್ತಾ ಜೀವಿಸುವೆ,
ಮರಣಿಸುವೆ, ಕಾದಾಡುವೆ
ಮತ್ತು ಇಲ್ಲಿಯೇ ಆಲಂಗಿಸಿಕೊಳ್ಳುವೆ
ಇದೇ ಹಾದಿ ತಾನೇ ನನ್ನ ಏಕೈಕೆ ಸರ್ವಸ್ವ
ಇದರ ಹೊರತು ಅನ್ಯಕ್ಕೆ ಕಣ್ಣಾಡಿಸುವುದೇಕೆ
ನಿದ್ದೆ ಮಂಪರಿಸಿದರೆ ನಿದ್ದೆಗೆ ಜಾರೋಣ
ಆಯಾಸಕ್ಕೆ ತುತ್ತಾಗಿದ್ದರೆ ಕುಳ್ಳಿರಿಸೋಣ

ಎಂದಾದರೊಮ್ಮೆ ಇದೇ ಹಾದಿಯಿಂದ
ನನ್ನೆಡೆಗೆ ಯಾರಾದರೂ ಬಂದು ಸಂತೈಸಬಹುದು
ಮರಳಿ ಎಚ್ಚರಿಸಿ ತನ್ನೊಡನೆಯೇ
ಅಂತಿಮ ಗುರಿಯೆಡೆಗೆ
ಕರೆದೊಯ್ಯಬಹುದು

ಎಂದಾದರೊಮ್ಮೆ ಯಾರಾದರೂ ಬರುವರು.

ಅಡಿ ಟಿಪ್ಪಣಿ

1) ’ಮನೋ-ಸಲ್ವಾ’ ಎಂಬುದು ಖುರಾನ್‌ನಲ್ಲಿ ಉಲ್ಲೇಖಗೊಂಡಿರುವ ಪದ. ಪ್ರವಾದಿ ಮೂಸಾ ಅವರ ಕಾಲದಲ್ಲಿ ಭೀಕರವಾದ ಬರಗಾಲ ಬಂದಿತ್ತು. ಮೂಸಾ ಅವರು ಅಲ್ಹಾಗೆ ಪ್ರಾರ್ಥಿಸಿದಾಗ ಸ್ವರ್ಗದಿಂದ ಜನರ ಹಸಿವನ್ನು ತಣಿಸುವ ಸಲುವಾಗಿ ಜೇನಿನಂತೆ ಸಿಹಿಯಾಗಿರುವ ಮತ್ತು ಹಾಲಿನಂತೆ ಬೆಳ್ಳಗಾಗಿರುವ ಪದಾರ್ಥವನ್ನು ಭೂಮಿಗೆ ಕಳುಹಿಸಲಾಯಿತು. ಇದರ ಜೊತೆಗೆ Quail (ಕ್ವೇಲ್) ಎಂಬ ಪಕ್ಷಿಯನ್ನು ಕಳುಹಿಸಲಾಗಿತ್ತು. ಸಾಂಕೇತಿಕವಾಗಿ ಇದೊಂದು ಅಲ್ಹಾನ ವರದಾನ ಎಂದೇ ಭಾವಿಸಲಾಗಿದೆ.

2) ಇರಾನ್‌ನಲ್ಲಿ ಅತಿ ಎತ್ತರವಾದ ಪರ್ವತವೇ ಅಲ್ವಂದ್.

ಮೂಲ ಉರ್ದು : ಖಲೀಲ್ ಮಾಮೂನ್
ಅನುವಾದ : ಡಾ. ತಸ್ನೀಮ್ ತಾಜ್


ಇದನ್ನೂ ಓದಿ: ನಾವೂ ನೋಡುತ್ತೇವೆ, ಸಾಕ್ಷಿಯಾಗುತ್ತೇವೆ: ಈ ದುರಿತ ಕಾಲದಲ್ಲಿ ಮತ್ತೆ ನೆನಪಾಗುವ ಫೈಜ್‌ ಕವನ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಖಲೀಲ್ ಮಾಮೂನ್

LEAVE A REPLY

Please enter your comment!
Please enter your name here