Homeಅಂಕಣಗಳುಬೆನ್ನು ಸೀಳುವ ರಾಮ ಧನಸ್ಸೇ: ಯಾರನ್ನು ಕೂಗಲಿ? ರಾಮಧನಸ್ಸೇ ನಟ್ಟಿರುವಾಗ? ವಿನಯಾ ಒಕ್ಕುಂದರವರ ಅಂಕಣ

ಬೆನ್ನು ಸೀಳುವ ರಾಮ ಧನಸ್ಸೇ: ಯಾರನ್ನು ಕೂಗಲಿ? ರಾಮಧನಸ್ಸೇ ನಟ್ಟಿರುವಾಗ? ವಿನಯಾ ಒಕ್ಕುಂದರವರ ಅಂಕಣ

ಧರ್ಮೋನ್ಮಾದದ ದುರಂತವು ಎಲ್ಲ ಒಮ್ಮೆ ಆಕಸ್ಮಿಕವಾಗಿ ನಡೆದು ಮುಗಿದುಹೋಗುವಂತದ್ದಲ್ಲ. ಇದು ಸಹಜೀವಿಗಳನ್ನು ಭಯಗೊಳಿಸಿ ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ನಡೆಸುವ ಆಂತರಿಕ ಯುದ್ಧ. ಈ ಕಾರ್ಯಾಚರಣೆ ದೇಶದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ನಡೆಯುತ್ತಿರುತ್ತದೆ.

- Advertisement -
- Advertisement -

ರಾಷ್ಟ್ರೀಯತೆ ಎನ್ನುವುದು ಬಹು ದೊಡ್ಡ ಅಪಾಯವಾಗಬಹುದು. ‘ಒಬ್ಬ ವ್ಯಕ್ತಿ ತಾನು ಪ್ರಬಲನಾಗಲು ಎಂತಹ ಅನೈತಿಕ ಕೆಲಸಗಳನ್ನು ಮಾಡಬಲ್ಲನೋ ಹಾಗೆ ಒಂದು ಸಮುದಾಯ ತಾನು ಪ್ರಬಲವಾಗಲು ಅನೈತಿಕವಾಗಿ ವರ್ತಿಸಬಲ್ಲದು’ ಎಂದಿದ್ದರು ರವೀಂದ್ರನಾಥ ಠಾಗೋರ್.

ನನ್ನ ದೇಶದಲ್ಲೀಗ ರಾಷ್ಟ್ರೀಯತೆಯ ಹೆಸರಿನಲ್ಲಿ ಮತೀಯ ಉನ್ಮಾದ ಹೆಚ್ಚುತ್ತಿದೆ. ರಾಷ್ಟ್ರ ಮತ್ತು ಧರ್ಮಗಳನ್ನು ಒಂದಾಗಿಸುವ ಪ್ರಯತ್ನದಲ್ಲಿ ಬಹುತ್ವದ ಬೇರು ಕತ್ತರಿಸಲಾಗುತ್ತಿದೆ. ಗಾಂಧೀಜಿ ತಮ್ಮ ಹಿಂದ್ ಸ್ವರಾಜ್‍ನಲ್ಲಿ ಯಾವ ಧರ್ಮಾಧಾರಿತ ರಾಷ್ಟ್ರೀಯತೆಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದರೋ ಅದನ್ನೇ ರಾಷ್ಟ್ರೀಯ ಸ್ವಯಂಸೇವಕ ಸಂಘವು ಹರಡಲು ಯತ್ನಿಸುತ್ತಿದೆ. ಒಂದೇ ಧರ್ಮವಿದ್ದರೆ ಒಂದು ರಾಷ್ಟ್ರ ಎನ್ನುವುದು ಸರಿಯಾದದ್ದಲ್ಲ, ಪ್ರತಿಯೊಂದು ಪ್ರಬಲ ಧರ್ಮವೂ ಪ್ರತ್ಯೇಕ ರಾಷ್ಟ್ರದ ತುಡಿತ ಹೊಂದಿದರೆ ಮುಂದೇನು? ಎಂದು ಪ್ರಶ್ನಿಸಿದ್ದರು. ಧರ್ಮ ಬೇರೆಯಿದೆ ಎಂದ ಕ್ಷಣ ಯಾರೂ ವೈರಿಗಳಾಗುವುದಿಲ್ಲ ಎಂದಿದ್ದರು.

ಗಾಂಧೀ ಹತ್ಯೆ ವಾರಸುದಾರರು ಗಾಂಧೀ ಸಾಮರಸ್ಯದ ಚಿಂತನೆಯ ಹತ್ಯಾರರಾಗಿ ಬೆಳೆಯತೊಡಗಿದರು. ಭಾರತಮಾತೆಯ ಜಾಗದಲ್ಲೀಗ ಶ್ರೀರಾಮ ಬಂದು ಕೂತಿದ್ದಾನೆ. ಪ್ರಭುತ್ವದ ಸಂಗೋಪನೆಗಾಗಿ ಎದುರಾದ ಬಿಕ್ಕಟ್ಟುಗಳನ್ನು ನಿವಾರಿಸಲು ಚಾರಿತ್ರಿಕ ತಪ್ಪುಗಳನ್ನು ಮಾಡಿದ್ದ ಶ್ರೀರಾಮ ಆ ನಂತರದಲ್ಲಿ ತನ್ನ ಕೃತ್ಯಗಳಿಗಾಗಿ ಪರಿತಪಿಸಿದವನು. ಮರಣ ಮುಖದಲ್ಲಿದ್ದ ವಾಲಿಯ ಎದುರು ಮೊಣಕಾಲೂರಿ ತಪ್ಪೊಪ್ಪಿಕೊಂಡವನು. ಆ ಶ್ರೀರಾಮನನ್ನು ಕರೆತಂದು ಇತ್ತೀಚೆಗೆ ಜೈಶ್ರೀರಾಮ್ ಘೋಷಣೆ ಕೂಗದ ಕಾರಣಕ್ಕೆ ಹಲ್ಲೆಗೀಡಾಗಿ ಶವವಾಗಿದ್ದ ಮಗನ ಪಕ್ಕ ಶೂನ್ಯ ದಿಟ್ಟಿಸುತ್ತಾ ಕೂತಿದ್ದ ಅಪ್ಪನ ಎದುರು ತಂದು ನಿಲ್ಲಿಸಬೇಕು. ಈ ತಂದೆಯ ದಿಗ್ಭ್ರಾಂತ ದೈನ್ಯಕ್ಕೆ ಶ್ರೀರಾಮ ಏನೆನ್ನಬಹುದು? ಖಂಡಿತ, ಮಗನ ಅಗಲಿಕೆಯ ನೋವಿನ ತೀವ್ರತೆಯನ್ನು ತಾಳದೆ ಮರಣಿಸಿದ ಅಪ್ಪ ದಶರಥನ ಕಣ್ಣಾಳದಲ್ಲಿ ಹೆಪ್ಪುಗಟ್ಟಿದ ಮಮತೆಯ ಸೆಳೆಯನ್ನವನಿಲ್ಲಿ ಕಾಣುತ್ತಿದ್ದನು. ಕರುಣಾಳು ರಾಘವನಿಗೆ ಖಂಡಿತ ಆ ಕಾಣ್ಕಿಯಿತ್ತು.

ಧರ್ಮೋನ್ಮಾದದ ದುರಂತವು ಎಲ್ಲೋ ಒಮ್ಮೆ ಆಕಸ್ಮಿಕವಾಗಿ ನಡೆದು ಮುಗಿದುಹೋಗುವಂತದ್ದಲ್ಲ. ಇದು ಸಹಜೀವಿಗಳನ್ನು ಭಯಗೊಳಿಸಿ ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ನಡೆಸುವ ಆಂತರಿಕ ಯುದ್ಧ. ಈ ಕಾರ್ಯಾಚರಣೆ ದೇಶದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ನಡೆಯುತ್ತಿರುತ್ತದೆ. ಜೈಶ್ರೀರಾಮ್ ಘೋಷಣೆ ಕೂಗಿಲ್ಲದ ಕಾರಣಕ್ಕೆ ಜಾರ್ಖಂಡ್‍ನಲ್ಲಿ ಯುವಕನ ಹತ್ಯೆಯಾಗಿದೆ. ಜಾರ್ಖಂಡ್‍ನ ಮುಸ್ಲಿಂ ಶಾಸಕರೊಬ್ಬರಿಗೆ ಈ ಘೋಷಣೆ ಕೂಗಲು ಒತ್ತಾಯಿಸುವ ವಿಡಿಯೋ ವೈರಲ್ ಆಗಿದೆ. ಕಲ್ಕತ್ತದಲ್ಲಿ ಶಿಕ್ಷಕರೊಬ್ಬರನ್ನು ರೈಲು ಪ್ರಯಾಣದಲ್ಲಿ ಹೀಗೆ ಪೀಡಿಸಲಾಗಿದೆ. ವರದಿಯಾಗಿರುವ ಘಟನೆಗಳನ್ನು ಗಮನಿಸಿದರೆ ದೇಶವೀಗ ಕುದಿಯುತ್ತಿದೆ. ದೇವರು ಧರ್ಮ ಎಂಬ ಜೀವಪ್ರೇಮದ ಸಂಕೇತಗಳನ್ನು ದ್ವೇಷದ ಕಾರಣವಾಗಿ ಬದಲಿಸುವುದು ಎಂದರೆ ಜೀವಪೋಷಕ ಜಲವನ್ನು ವಿನಾಶಕ್ಕೆ ಉದ್ದೀಪಿಸಿದಂತೆ.

ಈ ಉನ್ಮತ್ತತೆ ಎಳೆಎಳೆಯ ಯುವಕರ ಬೆನ್ನಿನ ಮೇಲೆ ‘. . . . .ಹುಲಿ ಮುಟ್ಟಿದರೆ ಬಲಿ’ ಎಂಬ ಹಿಂಸಾಶಾಸನವಾಗಿ ರಾರಾಜಿಸುತ್ತಿದೆ. ಇಂತಹ ಸಂದರ್ಭಗಳನ್ನು ತಹಬಂದಿಗೆ ತರಬೇಕಾದ ನಿಷ್ಠುರ ಕಾನೂನು ರಕ್ಷಣೆಯೂ ಕಾಣುತ್ತಿಲ್ಲ. ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ 15 ವರ್ಷದ ಬಾಲಕ ಇದೇ ಹಿಂಸೆಯಿಂದ ಆಸ್ಪತ್ರೆ ಸೇರಿ ಪೊಲೀಸರು ಬಾಲಕನ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಬಾಲಕನ ಮಾತುಗಳು ಆಸ್ಪತ್ರೆಯ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಆದರೆ ಪೊಲೀಸರು ‘ಬಾಲಕ ವ್ಯತಿರಿಕ್ತ ಹೇಳಿಕೆಗಳನ್ನು ಕೊಡುತ್ತಿದ್ದಾನೆ. ಅವನೂ ಅವನ ತಾಯಿಯೂ ಒತ್ತಡಕ್ಕೆ ಮಣಿಯುತ್ತಿದ್ದಾರೆ’ ಎನ್ನುತ್ತಿದ್ದಾರೆ. ಪೊಲೀಸರ ಈ ಪಕ್ಷಪಾತ ವರ್ತನೆಯ ಕಾರಣಗಳು ಸ್ಪಷ್ಟ. ಅವರು ಆರೋಪಿಗಳ ರಕ್ಷಕರಾಗಿರುವ ಪ್ರಭುತ್ವದ ಪರವಾಗಿರಲು ಯತ್ನಿಸುತ್ತಾರೆ. ಇಂತಹ ಘಟನೆಗಳು ಯಾವ ದೇಶದ ಆಂತರಿಕ ವಿಕಾಸಕ್ಕೂ ತಕ್ಕುದಲ್ಲ. ಆದರೇನು? ಪ್ರಜಾಪ್ರಭುತ್ವವನ್ನೇ ಆರಾಣೆ-ಬಾರಾಣೆಗೆ ಮಾರಿಕೊಳ್ಳಲು ನಿಂತ ಮೇಲೆ ಅದರ ಘನತೆಯ ಮಾತೇನು?

ನಾವೀಗ ಚಲಾವಣೆಗೆ ತಂದುಕೊಂಡಿರುವುದು ಬಂಡವಾಳಶಾಹಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು. ಇದರಲ್ಲಿ ಪ್ರಜಾಪ್ರಭುತ್ವದ ಆಶಯಗಳು ಕ್ವಚಿತ್ತಾಗಿ ಆಕಸ್ಮಿಕವಾಗಿ ನಡೆಯುತ್ತವೆ. ಬಂಡವಾಳಶಾಹಿ ಹಿತಾಸಕ್ತಿಗಳೇ ಕಾರ್ಯರೂಪದಲ್ಲಿರುತ್ತವೆ. ನಮ್ಮ ಚುನಾವಣೆಗಳು ಬಹುಕೋಟಿ ಹೂಡಿಕೆಯ ಉದ್ಯಮವಾಗಿದೆ. ನಮ್ಮ ಸಂಸತ್ತುಗಳಲ್ಲಿ ಪ್ರವೇಶ ಪಡೆಯುವವರು ಕೋಟ್ಯಾಧಿಪತಿಗಳೂ, ಕ್ರಿಮಿನಲ್ ಹಿನ್ನೆಲೆಯವರೂ ಆಗಿರುವುದನ್ನು ಸಹಜ ಎಂದು ಒಪ್ಪಿಕೊಳ್ಳುತ್ತಿದ್ದೇವೆ. ಬಂಡವಾಳಪರ ರಾಜಕಾರಣ ಉಗ್ರ ಬಲಪಂಥೀಯ ರಾಷ್ಟ್ರೀಯವಾದವನ್ನು ಬೆಳೆಸುತ್ತದೆ. ಸಾದತ್ ಹಸನ್ ಮಾಂಟೋ ಕಥೆ ‘ಕಾರ್ಯಾಚರಣೆ’ ಈ ಮತೀಯ ಉನ್ಮಾದ ಮತ್ತು ಬಂಡವಾಳೋದ್ಯಮದ ಬಿಗಿತವನ್ನು ಹೇಳುತ್ತದೆ. ಈ ಕಥೆ ಹೀಗಿದೆ ‘ರಾತ್ರಿಯೆಲ್ಲ ಆ ಓಣಿ ಬೆಂಕಿಯಲ್ಲಿ ಬೆಂದುಹೋಯಿತು. ಒಂದು ಅಂಗಡಿ ಸುಡದೇ ಉಳಿದಿತ್ತು. ಬೆಳಗ್ಗೆ ಅಂಗಡಿಯ ಮುಂದಿನ ಬೋರ್ಡಿನಲ್ಲಿ ಇಲ್ಲಿ ಮನೆ ರಿಪೇರಿಯ ಸಾಮಗ್ರಿಗಳು ಮಾರಾಟಕ್ಕಿದೆ ಎಂದು ಬರೆದಿತ್ತು.’ ಮತೀಯ ಹಿಂಸೆ ಮತ್ತು ಬಂಡವಾಳದ ಬೆರಕೆಯನ್ನು ಇನ್ನೂ ಸಂಕೀರ್ಣ ರೂಪಕದಲ್ಲಿಡಲು ಸಾಧ್ಯವಿಲ್ಲ. ಇಂತಹ ಸ್ಥಿತಿಯಲ್ಲಿ ಪ್ರಜಾಪ್ರಭುತ್ವ ಉಸಿರುಗಟ್ಟುತ್ತದೆ. ‘ಜೈಶ್ರೀರಾಮ್’ ಘೋಷಣೆಯನ್ನೂ ಭಾರತದಲ್ಲಿ ಕೂಗದೆ ಪಾಕಿಸ್ತಾನದಲ್ಲಿ ಕೂಗಲು ಸಾಧ್ಯವೇ? ಎಂದು ದೇಶದ ಗೃಹಮಂತ್ರಿಗಳು ಹೇಳಲು ಸಾಧ್ಯವಾಗುತ್ತದೆ.

ವಾಲ್ಮೀಕಿ ಹೇಳುವ ರಾಮಕಥೆಯೊಂದು ಹೀಗಿದೆ. ‘ರಾಮ ಸೀತೆಯರು ವನವಾಸದ ಸೌಖ್ಯದಲ್ಲಿದ್ದ ಕಾಲ. ಅರೆ ಸಂಜೆ ಕಲ್ಲು ಬಂಡೆಯ ಮೇಲೆ ಕುಳಿತು ಹರಟೆ. ರಾಮಧನಸ್ಸು ನೆಲಕ್ಕೆ ಚುಚ್ಚಿತ್ತು. ಎದ್ದು ಹೊರಟು ಬಿಲ್ಲು ಎತ್ತಿದರೆ, ಬಿಲ್ಲಿನ ಮೊನೆಗೆ ಚುಚ್ಚಿದ್ದ ಮಂಡೂಕ ಜಟ್ಟಿಯಾಗಿ ವಿಲಗೂಡುತ್ತಿತ್ತು. ಸೀತೆ ಗಾಬರಿಯಿಂದ ಕೇಳಿದಳಂತೆ ಯಾಕೆ ಸುಮ್ಮನಿದ್ದೆ? ಕೂಗಬಾರದೆ? ಮಂಡೂಕ ವಿಷಾದದಿಂದ ಉಸುರಿತಂತೆ. ಯಾರನ್ನು ಕೂಗಲಿ? ರಾಮಧನಸ್ಸೇ ನಟ್ಟಿರುವಾಗ?’ ಈ ಘಟನೆ ಸೀತೆಗೆ ಅವಳ ಮುಂದಿನ ದಿನಗಳಲ್ಲಿ ಪದೇಪದೇ ನೆನಪಾಗುತ್ತದೆ. ರಾಮನನ್ನು ಪ್ರೀತಿಸಿದ ಭಾರತೀಯ ಮನಸ್ಸೀಗ ಈ ಸ್ಥಿತಿಯಲ್ಲಿಯೇ ಇದೆಯೇ?

ಇದೀಗ ಪ್ರತಿರೋಧವನ್ನು ಉಸುರುವುದೂ ಅಪರಾಧವಾಗಿದೆ. ‘ಜೈರಾಮ್ ಘೋಷಣೆ ಯುದ್ಧದ ಘೋಷಣೆಯಂತೆ ಬಳಕೆಯಾಗುತ್ತಿದೆ. ರಾಮನ ಹೆಸರು ಅಪವಿತ್ರಗೊಳ್ಳುತ್ತಿದೆ’ ಎಂದು ದೇಶದ 49 ಚಿಂತಕರು, ಸೃಜನಶೀಲರು ಪ್ರಧಾನಮಂತ್ರಿಯವರಿಗೊಂದು ಪತ್ರ ಬರೆದರು. ಅದರೀಗ ಅವರ ಕಳಕಳಿಯನ್ನೇ ತಪ್ಪೆಂದು ಸಾಧಿಸುವ ಪ್ರಯತ್ನ ನಡೆಯುತ್ತಿದೆ. 62 ಸೆಲೆಬ್ರಿಟಿಗಳಿಂದ ‘ಈ ಪತ್ರ ದೇಶದ್ರೋಹ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ’ ಎಂದು ಮರುಪತ್ರ ಹೋಯಿತು. ಇದರ ಆಧಾರದಿಂದ ಬಿಹಾರದ ಕೋರ್ಟಿನಲ್ಲಿ ಪ್ರಕರಣ ದಾಖಲಿಸಲಾಯಿತು. ದೇಶಪ್ರೇಮದ ನಿಜವಾದ ಆಯಾಮವನ್ನು ದ್ರೋಹವೆಂದು ತಿರುಚುವ ಸ್ಥಿತಿಯಿದು.

ಕೇರಳದ ಬಿಜೆಪಿಯವರು ತಮ್ಮ ನಾಡಿನ ಹೆಮ್ಮೆಯಾದ ಪದ್ಮವಿಭೂಷಣ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ಪಡೆದ ಗೋಪಾಲಕೃಷ್ಣ ಆಡೂರರಿಗೆ ಭಾರತ ಬಿಟ್ಟು ಚಂದ್ರಗ್ರಹಕ್ಕೆ ಹೋಗುವಂತೆ ಹೀನಾಯಿಸಿದರು. ಪಶ್ಚಿಮ ಬಂಗಾಳದಲ್ಲಿ ನಟ ಕೌಶಿಕ್ ಸೇನರಿಗೆ ಜೀವಬೆದರಿಕೆಯ ಕರೆಗಳು ಬಂದವು. ಏನಾಗುತ್ತಿದೆ ನಮ್ಮ ದೇಶಕ್ಕೆ? ರಾಷ್ಟ್ರಧ್ವಜದ ಕೆಳಗೆ ನಿಂತು ಜನಗಣಮನ ಹಾಡುವಾಗ ನಮ್ಮನ್ನು ನಾವು ಕೇಳಿಕೊಳ್ಳಬೇಕಿದೆ. ಈ ದುರಂತದಲ್ಲಿ ನನ್ನ ಪಾಲೆಷ್ಟು?

ಯಾವ ವ್ಯಕ್ತಿಗೂ ಯಾವ ನೆಪದಿಂದಲೂ ಇನ್ನೊಬ್ಬರ ವ್ಯಕ್ತಿ ಸ್ವಾತಂತ್ರ್ಯವನ್ನು ಅಪಹರಿಸುವ ಹಕ್ಕಿಲ್ಲ – ಎಂದಿದ್ದರು ಶಿವರಾಮ ಕಾರಂತರು. ಬೇಂದ್ರೆಯವರು ಓರಿಯೆಂಟಲ್ ಹಿಸ್ಟರಿಯ ವಿರುದ್ಧ ಜನಕಥನಕ್ಕೆ ಕಿವಿಗೊಡಿ ಎಂದಿದ್ದರು.
ಭರತಖಂಡ ಬದನಿಕಾಯಿ,
ಭರತಾ ಮಾಡಬ್ಯಾಡ ತಮ್ಮಾ
ಸುರತದ ಕಲಹ ಮೆತ್ತಬ್ಯಾಡ,
ಒಮ್ಮನವಿರದೆ ನಮ್ಮ ನಿಮ್ಮ
ಎಂದು ತಿಳಿಸಿದ್ದರು.

ನವೋದಯದ ಸಾಹಿತ್ಯದಲ್ಲಿ ದೇಶಪ್ರೇಮ ತೊಟ್ಟಿಕ್ಕುತ್ತದೆ. ದೇಶವಿಭಜನೆಯ ಹಿಂಸೆಯಲ್ಲಿ ದೇಶಪ್ರೇಮದ ಬೆಳಕಿನ ಕಿರಣದ ಶೋಧನೆಯಿದೆ. ದೇಶಪ್ರೇಮ ಮತ್ತು ಮತೀಯ ಉನ್ಮಾದಗಳು ಪರಸ್ಪರ ವಿಮುಖವಾದದೆಂಬ ತಿಳಿವಿದ್ದ ಕಾಲವದು. ಆದರೀಗ ದೇಶಪ್ರೇಮವು ಉನ್ಮಾದವನ್ನು ಉದ್ದೀಪಿಸುವ ಸರಕಾಗಿದೆ. ಅದರೊಳಗಿದ್ದ ಮತಧರ್ಮ ಪ್ರೇಮವು ಚರ್ಮಕಿತ್ತು ಹೊರಗಿಣುಕುತ್ತಿದೆ. ರಾಷ್ಟ್ರಭಕ್ತಿ–ರಾಷ್ಟ್ರ ಚಾರಿತ್ರ್ಯದ ವಿಷಯದಲ್ಲಿ ತಪ್ಪು ಕಲಿತು, ತಪ್ಪು ಬೆಳೆಸಿ, ತಪ್ಪು ವಿಜೃಂಭಿಸುತ್ತಿರುವ ವರ್ತಮಾನವಿದು ಕವಿ ಆರ್.ವಿ.ಭಂಡಾರಿಯವರ ‘ಇತಿಹಾಸ’ ಪದ್ಯ ನೆನಪಾಗುತ್ತಿದೆ.
ನೇಗಿಲ ಮೊನೆಯಿಂದ ಇತಿಹಾಸ ಕೊರೆಯಲ್ಪಟ್ಟಿತು
ಕಿರೀಟದ ವಜ್ರದ ಮೊನೆಯಿಂದ ಎಂದು ಕಲಿಸಿದರು
ಗೆಯ್ಮೆಯ ಕೈಯಿಂದ ಇತಿಹಾಸ ನಿರ್ಮಾಣವಾಯಿತು
ಆದರೆ ಪುರೋಹಿತರ ಮಂತ್ರದಿಂದ ಎಂದು ಕಲಿಸಿದರು.
ನಮ್ಮನ್ನು ತಪ್ಪಾಗಿ ಕಲಿಸಿದ ಪಾಠಗಳಿಂದ ಬಿಡುಗಡೆಗೊಂಡು, ನಿಜದ ಬೆಳಕಿನಲ್ಲಿ ಇತಿಹಾಸ -ವರ್ತಮಾನಗಳನ್ನು ಕಾಣುವ, ಸತ್ಯದ ವಿಷದ ಬಟ್ಟಲುಗಳಲ್ಲಿ ನಮ್ಮ ಪಾಲೂ ಇರಲಿ ಎಂದು ಧ್ವಜಕ್ಕೆ ನಮಿಸುವಾ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಮೂಲಕ ಕೇಂದ್ರ ಸರ್ಕಾರ ಪ್ರಜಾತಂತ್ರ ವ್ಯವಸ್ಥೆಯನ್ನು ನಾಶ ಮಾಡಲು ಹೊರಟಿದೆ: ಮಾಜಿ ಸಚಿವ ಬಿ.ಬಿ.ಲಿಂಗಯ್ಯ ಆಕ್ರೋಶ

ಕೇಂದ್ರದ ಬಿಜೆಪಿ ಸರ್ಕಾರವು ‘SIR’ ಜಾರಿಯ ಮೂಲಕ ಜನರ ಮತದಾನದ ಹಕ್ಕನ್ನು ಕಿತ್ತುಕೊಳ್ಳಲು ಮತ್ತು ಪ್ರಜಾತಂತ್ರ ವ್ಯವಸ್ಥೆಯನ್ನು ಕಗ್ಗೊಲೆ ಮಾಡಲು ಸಂಚು ರೂಪಿಸಿದೆ ಎಂದು ಮಾಜಿ ಸಚಿವ ಬಿ.ಬಿ. ಲಿಂಗಯ್ಯ ತೀವ್ರ ಆಕ್ರೋಶ...

ಖ್ಯಾತ ಪತ್ರಕರ್ತ ಪಿ. ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

ಕನ್ನಡ ಪತ್ರಿಕೋದ್ಯಮದ ಧ್ರುವತಾರೆ, ದಿವಂಗತ ಪಿ. ಲಂಕೇಶ್ ಅವರ ಧರ್ಮಪತ್ನಿ ಹಾಗೂ ದಿವಂಗತ ಪತ್ರಕರ್ತೆ ಗೌರಿ ಲಂಕೇಶ್ ಅವರ ತಾಯಿಯಾದ ಇಂದಿರಾ ಲಂಕೇಶ್ (84) ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ...

ಬಾಗಲಕೋಟೆಯ ವಿವಿಧ ಪ್ರದೇಶಗಳಲ್ಲಿ ಎಸ್‌ಐಆರ್‌ ವಿರುದ್ಧ ಜನಜಾಗೃತಿ ಜಾಥಾ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಬಾಗಲಕೋಟೆ ನಗರದ ವಿವಿಧ ಭಾಗಗಳಲ್ಲಿ ಭಾನುವಾರ (ಜೂ.14) ಜಾಗೃತಿ ಜಾಥಾ ನಡೆಯಿತು. ನವನಗರದ ವಿದ್ಯಾಗಿರಿ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಸರ್ಕಲ್‌ನಿಂದ ಪ್ರಾರಂಭವಾದ ಜಾಥಾ...

SIR ವಿರೋಧಿ ಜನಜಾಗೃತಿ ಜಾಥಾ: ಕಾಫಿ ನಾಡು ಚಿಕ್ಕಮಗಳೂರಲ್ಲಿ ಅದ್ದೂರಿ ಸ್ವಾಗತ

ಚಿಕ್ಕಮಗಳೂರು: ರಾಜ್ಯಾದ್ಯಂತ ಐದು ವಿಭಾಗಗಳಲ್ಲಿ ಸಂಚರಿಸುತ್ತಿರುವ 'SIR ವಿರೋಧಿ ಜನಜಾಗೃತಿ ಜಾಥಾ'ದ 3ನೇ ಮಾರ್ಗದ ತಂಡಕ್ಕೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಭಾನುವಾರ ಬೆಳಗ್ಗೆ ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ಆಗಮಿಸಿದ ಜಾಥಾ...

ಚಿಕ್ಕಮಗಳೂರಿನಲ್ಲಿ ಎಸ್‌ಐಆರ್ (SIR) ವಿರೋಧಿ ಜಾಥಾ: ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಆಕ್ರೋಶ

ಭಾರತ ಚುನಾವಣಾ ಆಯೋಗವು ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ....

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...