Homeಮುಖಪುಟಕನ್ನಡದಲ್ಲಿನ ಕ್ವೀರ್ ಶಬ್ದಗಳ ಸುತ್ತ..

ಕನ್ನಡದಲ್ಲಿನ ಕ್ವೀರ್ ಶಬ್ದಗಳ ಸುತ್ತ..

- Advertisement -
- Advertisement -

ಹೊಸ ಸಂವೇದನೆಯನ್ನ ಕನ್ನಡ ಲೋಕ ಮುಕ್ತವಾಗಿ ಸ್ವಾಗತಿಸಿಕೊಳ್ಳುವ ಕಾಲದಲ್ಲಿರುವಾಗ ಈಗ ಅನ್ಯಭಾಷೆಯಲ್ಲಿ ಮುಖ್ಯವಾಗಿ ಆಂಗ್ಲ ಭಾಷೆಯಿಂದ ಬರುವ ಪದಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕೋ ಅಥವಾ ಅದಕ್ಕೊಂದು ಕನ್ನಡ ಪದವನ್ನು ಹುಡುಕಿ ತೆಗೆದು ಅಥವಾ ಹೊಸದಾದ ಮೂಲ ಶಬ್ದಕ್ಕೆ ಹತ್ತಿರವಿರುವ ಶಬ್ದವನ್ನು ಕೊಟ್ಟು ಬಳಸಲು ಶುರುಮಾಡಬೇಕೋ ಎನ್ನುವ ಪ್ರಶ್ನೆ ಎದುರಾಗುತ್ತದೆ. ಕನ್ನಡದ ಆ ಶಬ್ದಗಳು ಬಳಸು ಭಾಷೆಯಾಗಿ ಹೇಗೆ ಕೇಳಿಸುತ್ತವೆ? ಆಗ ನಮ್ಮ ತಲೆಯಲ್ಲಿಯೇ ಶಬ್ದಗಳಿಗೆ ನಾವು ಅಂಟಿಸಿರುವ ಮೈಲಿಗೆಯಿಂದ ಹೇಗೆ ಹೊರಬರುತ್ತೇವೆ? ಗ್ರಾಂಥಿಕ ಸ್ವರೂಪದ ಕನ್ನಡ ಶಬ್ದಗಳು ಬಳಸುವ ಮಟ್ಟಕ್ಕೆ ಬರಲು ಅದೆಷ್ಟು ಸಮಯ ತೆಗೆದುಕೊಳ್ಳುತ್ತದೆ?

ಈ ಪ್ರಶ್ನೆಯನ್ನು ಹೊತ್ತು ತಂದ ಪ್ರಸಂಗವಿದೆ. ಇತ್ತೀಚಿಗೆ ಒಂದು ಅನುವಾದ ಬಂದಿತ್ತು. ಆ ಕಡತದಲ್ಲಿ ಒಂದಷ್ಟು ಕ್ವೀರ್ ಸಮುದಾಯದ ಕುರಿತ ಶಬ್ದಗಳಿದ್ದವು.

ಉದಾಹರಣೆಗೆ ಗೇ, ಲೆಸ್ಬಿಯನ್, ಬೈ ಸೆಕ್ಷುಯಲ್, ಕ್ವೀರ್, ಟ್ರಾನ್ಸ್ ಮ್ಯಾನ್, ಟ್ರಾನ್ಸ್ ವುಮನ್, ಅಸೆಕ್ಷುಯಲ್, ಪ್ಯಾನ್ ಸೆಕ್ಷುಯಲ್, ಪಾಲಿ ಅಮೋರಿ, ಟ್ರಾನ್ಸ್ ಫೋಬಿಯಾ, ಹೋಮೋ ಫೋಬಿಯಾ, ಆಂಡ್ರೋಜೀನಸ್ ಇತ್ಯಾದಿ.

ಆ ಶಬ್ದಗಳಿಗೆ ಇದುವರೆಗೂ ಕನ್ನಡದಲ್ಲಿ ಚಾಲ್ತಿಯಲ್ಲಿರುವ ಪದಗಳನ್ನು ಗಮನಿಸಿದರೆ ಅವುಗಳನ್ನು ಬಳಸದೆ ಇದ್ದರೇನೇ ಚೆನ್ನ ಎನಿಸುವಷ್ಟು ಅಸೂಕ್ಷ್ಮವಾಗಿವೆ ಎನಿಸುತ್ತವೆ. ಹಲವು ಸಂದರ್ಭಗಳಲ್ಲಿ ಪದಗಳು ಅವುಗಳ
ಕಠಿಣತೆಯಿಂದ ಮತ್ತು ಗ್ರಾಂಥಿಕತೆಯಿಂದ ದಿನನಿತ್ಯದ ಜನಬಳಕೆಯಲ್ಲಿ ಬರದೆ ಹೋಗಬಹುದು ಎನ್ನುವ ಆತಂಕವೂ ಇತ್ತು. ಉದಾಹರಣೆಗೆ ಮೊಬೈಲು ಪದದ ಕನ್ನಡ ಪದ ಜಂಗಮವಾಣಿ. ಜನಬಳಕೆಯಲ್ಲಿ ಬರದೆ ಕಾಗದದಲ್ಲಿಯೇ ಉಳಿಯಿತು. ಅಬ್ಬಬ್ಬಾ ಎಂದರೆ ಕಾರ್ಯಕ್ರಮ ನಿರೂಪಣೆಯಲ್ಲಿ ಬಳಸುವುದಕ್ಕಷ್ಟೇ ಸೀಮಿತವಾಯಿತು.

ಕನ್ನಡ ಸಾಹಿತ್ಯ ಕೃತಿಗಳಲ್ಲಿ ಕ್ವೀರ್ ಸಮುದಾಯಕ್ಕೆ ಸೇರಿದ ಈ ಶಬ್ದಗಳಿಗೆ ಯಾವ ಅರ್ಥಗಳನ್ನು ಬಳಸಿದ್ದಾರೆ ಎಂದು ಅವಲೋಕಿಸಿದರೆ ಬಹಳಷ್ಟು ಕಡೆ ಆಂಗ್ಲಪದಗಳನ್ನೇ ಯಥಾವತ್ತಾಗಿ ಬಳಸಿರುವುದು ಕಂಡುಬರುತ್ತದೆ. ಉದಾಹರಣೆಗೆ ಕನ್ನಡದಲ್ಲಿ ಕ್ವೀರ್ ಸಮುದಾಯದ ಬಗೆಗಿನ ಕೃತಿಗಳನ್ನು ಮೊಟ್ಟಮೊದಲಿಗೆ ಧೈರ್ಯದಿಂದ ಹೊರತಂದ ವಸುದೇಂಧ್ರ ಅವರ ’ಮೋಹನಸ್ವಾಮಿ’ ಮತ್ತು ’ವಿಷಮಭಿನ್ನ ರಾಶಿ’ ಪುಸ್ತಕವನ್ನೇ ಗಮನಿಸುವುದಾದರೆ ಅಲ್ಲಿ ಅವರು ’ಗೇ’ ಹಾಗೂ ’ಟ್ರಾನ್ಸ್’ ಮುಂತಾದ ಪದಗಳನ್ನೇ ಉಳಿಸಿಕೊಂಡಿದ್ದಾರೆ. ಕ್ವೀರ್ ಡೇಟಿಂಗ್ ತಾಣಗಳ ಶೃಂಗಾರ ಪರಿಭಾಷಾ ಪದಗಳಾದ ಟಾಪ್ ಮತ್ತು ಬಾಟಮ್ ಎನ್ನುವುದನ್ನು ಕನ್ನಡದಲ್ಲಿ ತರವುದರ ಮೂಲಕ ಅದನ್ನು ಸಾಮಾನ್ಯಕರಿಸುವ ಮತ್ತು ಆ ಶಬ್ದಗಳಿಗಂಟಿದ ಅಶ್ಲೀಲತೆಯನ್ನು ಬಳಸುವ ಮೂಲಕ ಪ್ರತಿರೋಧಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಇದು ಮತ್ತೊಂದು ಪ್ರಶ್ನೆಯತ್ತ ನಮ್ಮ ಗಮನ ಸೆಳೆಯುತ್ತವೆ. ಇತ್ತೀಚಿಗೆ ಹಿಂದಿ ಭಾಷೆಯಲ್ಲಿ ’ಗೆಹರಾಯಿಯ’ ಎನ್ನುವ ಅಷ್ಟೇನೂ ಕಲಾತ್ಮಕವಲ್ಲದಿದ್ದರೂ ಉತ್ತಮ ಎನ್ನಬಹುದಾದ ಸಿನಿಮಾ ಬಿಡುಗಡೆಯಾಯಿತು. ಆ ಸಿನಿಮಾದಲ್ಲಿ ಬರುವ ಎಲ್ಲಾ ಜನರೂ ಕೂಡ ’ಫಕ್’ ಎನ್ನುವ ಪದವನ್ನು ಮತ್ತೆಮತ್ತೆ ಬಳಸುತ್ತಿರುತ್ತಾರೆ.

ಅದು ಕನ್ನಡಕ್ಕೆ ಹಲವು ಜನರಿಗೆ ’ಅಶ್ಲೀಲ’ ಎನಿಸುತ್ತಿರುತ್ತದೆ. ಆದರೆ ಧಾರವಾಡ, ಗದಗ, ಬೆಳಗಾವಿ ಮುಂತಾದ ಉತ್ತರ ಕರ್ನಾಟಕದ ಭಾಗದಲ್ಲಿ ಜನನುಡಿಯಲ್ಲಿ ’ಹಟ್ರಲೇಪ!’ ಎನ್ನುವ ಪದವನ್ನು ಬಳಸುವುದನ್ನು ಕೇಳುತ್ತೇವೆ. ಇದು ಕ್ರಿಯೆಗೆ ಸಂಬಂಧಿಸಿದ್ದರಿಂದ ಭಾಷಾಸೊಬಗು ಎಂದು ಒಪ್ಪಿಕೊಳ್ಳಬಹುದು.

ಇಲ್ಲಿ ಇನ್ನೊಂದು ಸೂಕ್ಷ್ಮವನ್ನು ಗಮನಿಸಿ ಪ್ರತ್ಯೇಕಿಸಬೇಕಾದ ಅವಶ್ಯಕತೆ ಇದೆ. ಪ್ರಾಣೇಶ್ ಮುಂತಾದ ಹಾಸ್ಯ ಭಾಷಣಕಾರರು ’ಸೂಳೆಮಗ’ ’ಬೋಳಿಮಗ’ ’ರಂಡಿಮಗ’ ಮುಂತಾದ ಸ್ತ್ರೀಯರನ್ನೇ ಹೀಯಾಳಿಸುವ ಪದಗಳನ್ನು ಭಾಷಾಸೊಬಗಿನ ಅಡಿಯಲ್ಲಿ ತಂದು ಜೋಕು ಹೇಳಿ ನಗಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳುವುದು ಉಂಟು; ನಮ್ಮಲ್ಲಿ ಅದರಲ್ಲೇನು ತಪ್ಪು ಎನ್ನುವ ಭಾವ ಗುಪ್ತಗಾಮಿನಿಯಾಗಿ ಹರಿಯುತ್ತಲಿರುತ್ತದೆ. ಆದರೆ ಇದು ಆತ್ಮವಿಮರ್ಶೆಯಿಂದ ಮಾತ್ರ ಹಂತಹಂತವಾಗಿ ಸರಿಹೋಗಬಹುದಾದ ಕಾಯಿಲೆ ಎನ್ನಬಹುದು.

ಒಂದಿಷ್ಟು ಕನ್ನಡದ ಅರ್ಥಗಳನ್ನು ಗಮನಿಸೋಣ. ’ಗೇ’ ಎನ್ನುವ ಪದಕ್ಕೆ ಸಲಿಂಗಕಾಮಿ ಎನ್ನುವ ಪದ ಇದೆ. ’ಕಾಮ’ ಎನ್ನುವ ಪದವೇ ನಮ್ಮ ತಲೆಯಲ್ಲಿ ಅಶ್ಲೀಲ ಎನ್ನುವಂತೆ ಆಳವಾಗಿ ಬೇರೂರಿಬಿಟ್ಟಿರುವಾಗ ಸಲಿಂಗಕಾಮಿ ಪದ ಅಷ್ಟು ಸೂಕ್ತವೆನಿಸುವುದಿಲ್ಲ. ಕೆಲವರು ಅದರ ಬದಲಾಗಿ ’ಸಲಿಂಗ ಪ್ರೇಮಿ’ ಎಂದು ಬಳಸುತ್ತಾರೆ. ಈ ಬಗ್ಗೆ ನಾನು ನನ್ನ ಪರಿಚಯದ ಒಬ್ಬ ಕ್ವೀರ್ ಸಮುದಾಯದವರೆ ಆದ ಮನಶಾಸ್ತ್ರಜ್ಞರನ್ನು ಮಾತನಾಡಿಸಿದಾಗ ಅವರು ಹೇಳಿದ ಮಾತು ಹೊಸ ಹೊಳಹನ್ನು ಕೊಟ್ಟಿತು. ಅವರು ಹೇಳಿದ್ದಿಷ್ಟು: ’ಭೇಟಿಯಾಗುವ ಎಲ್ಲರೂ ಪ್ರೇಮಿಗಳಾಗಬೇಕೆಂದಿಲ್ಲ. ಮೊದಮೊದಲ ಹಂತದ ಆಕರ್ಷಣೆಯನ್ನು ಹಾಗೆಯೇ ಬಳಸಿದರೆ ಸೂಕ್ತ. ಹಾಗಾಗಿ ಅದಕ್ಕೆ ಸಲಿಂಗಾಕರ್ಷಿತ ಎಂದು ಬಳಸುವುದು ಹೆಚ್ಚು ಸೂಕ್ತ’ ಎಂದರು. ಇದನ್ನೇ ಮುಂದುವರೆಸಿ ’ಪ್ಯಾನ್ ಸೆಕ್ಷುಯಲ್’ಗೆ  ’ಸರ್ವಲಿಂಗಾಕರ್ಷಿತ’ ಎಂದೂ ’ಬೈ ಸೆಕ್ಷುಯಲ್’ಗೆ ’ಉಭಯಲಿಂಗಾಕರ್ಷಿತ’ ಎಂದೂ ’ಅಸೆಕ್ಷುಯಲ್’ ಎಂಬ ಪದಕ್ಕೆ ’ಅಲೈಂಗಿಕ’ ಎಂಬ ಪದವನ್ನು ಬಳಸಬಹುದು. ಗೇ ಎನ್ನುವ ಪದಕ್ಕೆ ಶಬ್ದಾರ್ಥ ಪದಕೋಶದಲ್ಲಿ ’ಆನಂದ’, ’ಸಂತೋಷ’, ’ಆರಾಮ’ ಎನ್ನುವ ಅರ್ಥವಿದೆ.
ಲೈಂಗಿಕ ಸಾಮಾನ್ಯತೆಯ ದೃಷ್ಟಿಕೋನಕ್ಕೆ ಹೊಂದಿಕೊಳ್ಳದವರನ್ನು ’ಅನ್ಯರು’ ಎಂದು ಹೊರಗಿಡುವ ಸಂದರ್ಭದಲ್ಲಿ ತುಂಬಾ ಹಿಂದೆ ಆಸುಪಾಸಿನಲ್ಲಿ ವಿದೇಶಿ ಟೆಲಿವಿಷನ್ ಪಾತ್ರವೊಂದು ’ಐ ಆಮ್ ಗೇ!’ ಎಂದು ಹೇಳುತ್ತದೆ. ಅಂದರೆ ನಾನು ನಾನಿರುವ ಹಾಗೆ ಖುಷಿಯಾಗಿದ್ದೇನೆ ಎನ್ನುವ ಅರ್ಥ ಹೊಳೆಯಿಸುತ್ತದೆ. ಶಬ್ದಕೋಶದಲ್ಲಿ ಗೇ ಎಂದರೆ ಖುಷಿ ಎಂದೆ ಅರ್ಥವಿದೆ.

ಇನ್ನೊಂದು ಮುಖ್ಯ ಸಮಸ್ಯೆ ’ಟ್ರಾನ್ಸ್ ಫೋಬಿಯಾ’ ಮತ್ತು ’ಹೋಮೋ ಫೋಬಿಯಾ’ ಪದಗಳನ್ನು ಅನುವಾದಿಸುವಾಗ ಎದುರಾಯಿತು. ಅದಕ್ಕೆ ’ಭೀತಿ ಅಥವಾ ಭಯ’ ಎಂಬ ಪದವೇ ಬಳಕೆಯಲ್ಲಿದೆ. ಆದರೆ ಅದು ಫೋಬಿಯಾ ಪದಕ್ಕೆ ಸಂವಾದಿಯಾಗುವುದಿಲ್ಲ ಎನಿಸುತ್ತದೆ. ಮನಶಾಸ್ತ್ರಜ್ಞರು ಕೂಡ ಇದನ್ನು ಒಪ್ಪುತ್ತಾರೆ. ನನಗೆ ಹಾವನ್ನು ಕಂಡರೆ ಭಯ ಎನ್ನುವುದನ್ನು ಅವಲೋಕಿಸಿದಾಗ ನನಗೆ ಟ್ರಾನ್ಸ್ ಜನರನ್ನು ಕಂಡರೆ ಭಯ ಎನ್ನಲಾಗುವುದಿಲ್ಲ. ಫೋಬಿಯಾ ಎಂದಾಗ ನಮ್ಮ ಊಹೆಯಲ್ಲಿಯೇ ಒಂದೇನೋ ಹೆದರಿಕೆ ಇದೆ. ಹಾಗಾಗಿ ’ಟ್ರಾನ್ಸ್ ಫೋಬಿಯಾ’, ’ಹೋಮೋ ಫೋಬಿಯಾ’- ಇವುಗಳನ್ನು ಬಳಸುವಾಗ ನಿಖರವಾದ ಕನ್ನಡ ಪದವೇ ದೊರೆತಿಲ್ಲ.

ಕ್ವೀರ್ ಎನ್ನುವ ಪದಕ್ಕೆ ಚಾಲ್ತಿಯಲ್ಲಿರುವ ಭಿನ್ನ ಅಥವಾ ವಿಭಿನ್ನ ಪದಗಳು ’ಹ್ಯಾಂಡಿಕ್ಯಾಪ್’ ಪದಕ್ಕೆ ’ದಿವ್ಯಾಂಗ’ ಎಂದು ಬಳಸಿದಷ್ಟೇ ಅಪೂರ್ಣ ಮತ್ತು ಅಸೂಕ್ಷ್ಮ ಎನ್ನಿಸತೊಡಗಿತು. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ, ಕ್ವೀರ್ ಆಕ್ಟಿವಿಸಮ್‌ಅನ್ನು ಕಲೆಯ ಮೂಲಕ ಅಭಿವ್ಯಕ್ತಿಸುತ್ತಿರುವ ಒಬ್ಬ ರಂಗಸ್ನೇಹಿತ ಕ್ವೀರ್ ಎಂಬ ಪದಕ್ಕೆ ’ಭಿನ್ನ ಸಾಮಾನ್ಯ’ ಎನ್ನುವ ಪದವನ್ನು ಸೂಚಿಸಿದ. ಅದು ಒಂದು ಮಟ್ಟಿಗೆ ಸೂಕ್ತ ಎನಿಸಿತು.

ಸರ್ವಲಿಂಗಾಕರ್ಷಿತ, ಉಭಯಲಿಂಗಾಕರ್ಷಿತ, ಸಲಿಂಗಾಕರ್ಷಿತ ಪದಗಳೂ ಕೂಡ ಬಳಸುವ ದೃಷ್ಟಿಯಿಂದ ಕಷ್ಟವೇ ಎನ್ನಿಸಬಹುದು. ಆಗ ಆಂಗ್ಲ ಭಾಷೆಯ ಪದಗಳನ್ನೇ ಕನ್ನಡದವನ್ನಾಗಿ ಮಾಡಿಕೊಂಡು ಬಳಸುವುದೇ ಸೂಕ್ತವಾಗಬಹುದು. ಇದನ್ನೆಲ್ಲಾ ಬರೆಯುವುದರ ಮುಖ್ಯ ಉದ್ದೇಶ ಕ್ವೀರ್ ಸಮುದಾಯದ ಕುರಿತಾದ ಪದಗಳ ಕನ್ನಡರ್ಥಗಳಿಗೆ ಇರುವ ಕಠಿಣತೆ ಬಗ್ಗೆ ಗಮನಹರಿಸುವುದು ಮತ್ತು ಆಂಗ್ಲಭಾಷೆಯಿಂದ ಕನ್ನಡಕ್ಕೆ ಬರುವಾಗ ಅಥವಾ ಹೊಸ ಪದಗಳನ್ನು ಟಂಕಿಸುವಾಗ ಎದುರಿಸುವ ಸಮಸ್ಯೆಗಳ ಬಗ್ಗೆ ಹೇಳುವುದೇ ಆಗಿತ್ತು.

ಕ್ವೀರ್ ಸಮುದಾಯದವರ ಕುರಿತು ಹೆಣ್ಣಿಗ, ಒಂಭತ್ತು, ಮಾಮಾ, ಚಕ್ಕಾ ಮತ್ತು ಫ್ಯಾಗಟ್ ಮುಂತಾದ ಅವಹೇಳನಕಾರಿ ಶಬ್ದಗಳೇ ಜನರ ಬಾಯಲ್ಲಿ ಬಳಕೆಯಲ್ಲಿರುವಾಗ ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಮುಂತಾದ ಕಲಾಪ್ರಕಾರಗಳಲ್ಲಿ ಹೆಚ್ಚೆಚ್ಚು ಸೂಕ್ಷ್ಮ ಪದಗಳು ಬಳಸಿದಲ್ಲಿ ಸಮುದಾಯದ ಕುರಿತಾದ ನಮ್ಮ ಗ್ರಹಿಕೆಗಳು ಧನಾತ್ಮಕವಾಗಿ ಬದಲಾಗುತ್ತದೆ. ಒಮ್ಮೆ ಪದಗಳು ಸೂಕ್ಷ್ಮವಲ್ಲದಿದ್ದರೂ, ಅವು ನಿಖರ ಎಂದೆನಿಸದಿದ್ದರೂ ಅದರ ಹಿಂದಿನ ಭಾವ ಪ್ರೀತಿ ತುಂಬಿದ ವಿಶಾಲತೆಯದ್ದಾಗಿರಬೇಕು. ಅದು ಜನರಿಗೆ ಬಿಟ್ಟಿದ್ದು. ಉತ್ತರ ಕರ್ನಾಟಕ ಭಾಗದಲ್ಲಿ ಚಿಕ್ಕ ಮಕ್ಕಳು ಟ್ರಾನ್ಸ್ ಸಮುದಾಯದವರನ್ನು ನೋಡಿ ಆಡಿಕೊಂಡರೆ ನಕ್ಕರೆ ದೊಡ್ಡವರು ’ಅವರು ಮಂಗಳಮುಖಿಯರು. ಹಂಗೆಲ್ಲಾ ಅನ್ನಬಾರದು’ ಎಂದು ಬುದ್ಧಿ ಹೇಳುತ್ತಾರೆ. ಇಲ್ಲಿ ಮಂಗಳಮುಖಿ ಪದವನ್ನು ಬಳಸುವಲ್ಲಿ ಟ್ರಾನ್ಸ್ ಸಮುದಾಯದವರಿಗೆ ಹಲವು ಆಕ್ಷೇಪಗಳಿವೆ. ಅದನ್ನು ಒಂದು ಕ್ಷಣ ಬದಿಗಿಟ್ಟು ನೋಡುವುದಾದರೆ ಜನಸಮೂಹ ಕೂಡ ನಿಧಾನವಾಗಿಯಾದರು ಅವರನ್ನು ತಮ್ಮ ಲೋಕದಲ್ಲಿ ಮುಕ್ತವಾಗಿ ಒಳಗೊಳ್ಳುವಲ್ಲಿ ಮಾಡುವ ಪ್ರಯತ್ನವನ್ನು ನಾವು ಅಲ್ಲಗಳೆಯಬಾರದಲ್ಲವೇ?

’ಘನತೆ’ ’ಅಸ್ಮಿತೆ’ ’ಸಮತೆ’ ಈ ಮೂರಕ್ಕಾಗಿ ವ್ಯಕ್ತಿಮಟ್ಟದ ಹೋರಾಟ ನಿರಂತರವಾಗಿಯೇ ಇರುತ್ತದೆ. ಭಾಷೆ ಮತ್ತು ಭಾವ ಎರಡೂ ಕೂಡಿದಾಗ ಶಬ್ದಗಳಿಗೆ ಸೂಕ್ಷ್ಮತೆ ತನ್ನಿಂದ ತಾನಾಗಿಯೇ ಬರುತ್ತದೆ. ಮುಖ್ಯವಾಗಿ ಆಗಬೇಕಾಗಿರುವುದು ಅದೇ! ಹಾಗಲ್ಲದಿದ್ದರೆ ಭಾವವಿಲ್ಲದೆ ಕೇವಲ ಶಬ್ದಗಳ ಬಳಕೆಯಿಂದ ಆಗಬಹುದಾದರೂ ಏನು?

ದಾದಾಪೀರ್ ಜೈಮನ್

ದಾದಾಪೀರ್ ಜೈಮನ್
ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯವರಾದ ದಾದಾಪೀರ್ ಜೈಮನ್ ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕಕರು. ಕತೆ ಮತ್ತು ಕಾವ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಹೊಸ ತಲೆಮಾರಿನ ಲೇಖಕರು. ನೀಲಕುರಿಂಜಿ ಇವರ ಪ್ರಕಟಿತ ಕಥಾಸಂಕಲನ.


ಇದನ್ನೂ ಓದಿ: ಜೂನ್ ’ಸ್ವಾಭಿಮಾನದ ತಿಂಗಳು’: ಎಲ್‌ಜಿಬಿಟಿಕ್ಯೂ ಸಮುದಾಯದ ಬಗ್ಗೆ ತಿಳಿವಳಿಕೆ ಹೆಚ್ಚಿದೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಇದಕ್ಕೆ ಮುಖ್ಯ ಕಾರಣ ಕನ್ನಡದಲ್ಲಿ ಹೊಸ ಪದಗಳನ್ನು ಟಂಕಿಸುವಾಗ ಮಾಡುವ “ಅತಿಚಿಂತನೆ”. ಇಂಗ್ಲಿಷಿನಲ್ಲಿ ಅವರು ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಯಾವುದಾದರೂ ಹಳೆಯ ಪದವನ್ನು ಇವತ್ತಿನಿಂದಲೇ ಹೊಸ ಅರ್ಥದಲ್ಲಿ ಬಳಸಲು ಅವರಿಗೆ ಯಾವ ಭಿಡೆಯೂ ಇಲ್ಲ. ಉದಾ ಗೇ . ಅದು ಪುರಾತನ ಪದ ಶೇಕ್ಸ್ಪಿಯರ್ ಕಾಲದ್ದು. ನಿಮ್ಮ ಲೀಲಖಣದಲ್ಲಿ ಉದಾಹರಿಸಿರುವ ಎಲ್ಲಾ ಇಂಗ್ಲಿಷ್ ಪದಗಳು ಹಳೆಯವೇ ಹೊಸ ಅರ್ಥದಲ್ಲಿ ಬಳಸಲು ಪ್ರಾರಂಭಿಸಿರುವುವು. ಇಂಗ್ಲಿಷ್ ಭಾಷೆಯ ಆಳವಾದ ಜ್ಞಾನ ಇಲ್ಲದ ಸಾಮಾನ್ಯರಿಗೆ ಅದರ ನೈತಿಕತೆಯ ಭಾರವಿಲ್ಲದೆ ಬಳಸುವುದು ಸುಲಭ. ಕನ್ನಡದ ಪದಗಳ ಅರ್ಥ ಮತ್ತು ಅವುಗಳಿಗೆ ಸಮಾಜ ವಿಧಿಸಿರುವ ನೈತಿಕತೆ ಎರಡೂ ಎಲ್ಲರಿಗೂ ಗೊತ್ತಿರುವುದರಿಂದ ನಿಮಗೆ ಬಂದಂಥ ಸಮಸ್ಯೆ ಎದುರಾಗುತ್ತದೆ. ಆಗ ಅವರು ಅವುಗಳಿಗೆ ಇಂಗ್ಲಿಷಿನ ಸಂವಾದಿ ಪದವನ್ನು ಹುಡುಕಿ ಅನುವಾದಿಸಲು ಹೊರಡುತ್ತಾರೆ. ಈಗ ಕ್ವೀ ರ್ ಪದಕ್ಕೆ ಇಂಗ್ಲಿಷಿನ ಮೂಲ ಅರ್ಥ ವಿಲಕ್ಷಣ/ ಎಡಬಿಡಂಗಿ. ಅದನ್ನು ಅವರು ಟ್ರಾನ್ಸ್ ಜೆನ್ಡರ್ ಎನ್ನುವುದಕ್ಕೆ ಸಂವಾದಿಯಾಗಿ ಬಳಸಲು ತೊಡಗಿದರು. ಅದಕ್ಕೆ ಅವರಿಗೆ ಯಾವ ಸಂಕೋಚವೂ ಇರಲಿಲ್ಲ. ಅಷ್ಟೇ ಅಲ್ಲ ಅದರೊಳಗೆ ಸಲಿಂಗಿಗಳನ್ನೂ ಒಳಗೊಂದು ಕ್ವೀ ರ್ ಕಮ್ಯುನಿಟಿ ಅಂತ ಎಗ್ಗಿಲ್ಲದೆ ಬಳಸಲು ತೊಡಗಿದರು. ಕನ್ನಡದಲ್ಲಿ ಅದನ್ನು ಹಾಗೆಯೇ ಅನುವಾದಿಸಿ ಬಳಸಿದರೆ ನಮಗೆ ಅರ್ಥ ಆಗುವುದರಿಂದ ಮುಜುಗರ ಆಗುತ್ತದೆ. ಇಂಗ್ಲಿಷಿನಲ್ಲೂ ಕ್ವಿ ರ್ ಕಮ್ಯುನಿಟಿಯ ಎಲ್ಲ ಪದಗಳು ಲೈಂಗಿಕತೆಗೆ ಸಂಬಂಧಪಟ್ಟವೇ ಆಗಿವೆ. ಹಾಗೆ ನೋಡಿದರೆ ಎಲ್ ಜಿ ಬಿ ಟಿ ಕ್ಯೂ ನ ವ್ಯಾಖ್ಯಾನ ನಿಂತಿರುವುದೇ ಲೈಂಗಿಕತೆಯ ವ್ಯಾಖ್ಯಾನದ ಮೇಲೆ. ಅವೆರಡನ್ನೂ ಪ್ರತ್ಯೇಕಿಸುವುದು ಸಾಧ್ಯವಿಲ್ಲ. ಐ ಯಾಮ್ ಗೇ ಎಂದು ಒಬ್ಬ ಹೇಳಿಕೊಂಡ ಕೂಡಲೇ ನಾನು ಸಲಿಂಗಿ ಎಂದು ಹೇಳಿಕೊಂಡಂತೆ. ಲೈಂಗಿಕತೆ ಬಿಟ್ಟು ಬೇರೆ ವ್ಯಾಖ್ಯಾನ ಸಾಧ್ಯವಿಲ್ಲ. ಕನ್ನಡದಲ್ಲಿ ಅದನ್ನು ಕೇಳಿದಾಗ ಉಂಟಾಗುವ ಇರಿಸುಮುರಿಸನ್ನು ಇಂಗ್ಲೀಷಿನವರಂತೆಯೇ ತೊಡೆದು ಹಾಕದ ಹೊರತು ಬೇರೆ ದಾರಿ ಇಲ್ಲ. ಕನ್ನಡದಲ್ಲಿ ಬಹಳ ಹಿಂದಿನಿಂದಲೂ ಪ್ರಚಾರದಲ್ಲಿರುವ ಪದಗಳನ್ನು ಮತ್ತೆ ಬಳಕೆಗೆ ತಂದು ಅದಕ್ಕೆ ಅಂಟಿರುವ ನೈತಿಕತೆಯ ಪದರವನ್ನು ಅಳಿಸಿ ಹಾಕಬೇಕು ಅಷ್ಟೇ. ಇದೇ ರೀತಿ ‘ಸೂಳೆ’ ಪದ. ಅದೊಂದು ಸಕಲ ಅರ್ಥಗಳನ್ನು ಹೊಮ್ಮಿಸುವ ಪರಿಪೂರ್ಣ ಪದ. ಅದಕ್ಕೆ ಸಮಾಜದ ನೈತಿಕತೆಯ ಅರ್ಥದ ಭಾರವನ್ನು ಹೊರಿಸಿ “ಲೈಂಗಿಕ ಕಾರ್ಯಕರ್ತೆ” ಅನ್ನುವ ಪದ ಚಾಲನೆಗೆ ತಂದರು. ಅದೊಂದು ವಿಪರ್ಯಾಸ!. ಇದೊಂದು ದೊಡ್ಡ ಚರ್ಚೆ ಹಲವು ಆಯಾಮಗಳಲ್ಲಿ ಮಾಡಬೇಕಾಗಿದೆ. ಸುಮ್ಮನೆ ನಿಮ್ಮ ಲೇಖನಕ್ಕೆ ಪ್ರತಿಕ್ರಿಯಿಸಿದೆ ಅಷ್ಟೇ.

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದ 2,200ಕ್ಕೂ...

0
ರಾಜಸ್ಥಾನದ ಬನ್ಸ್ವಾರದಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆಗಳನ್ನು ನೀಡಿದ ಬಿಜೆಪಿಯ ಸ್ಟಾರ್ ಪ್ರಚಾರಕ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ 2,200ಕ್ಕೂ ಹೆಚ್ಚು ನಾಗರಿಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದರೆ...