ಒಕ್ಕೂಟ ಸರ್ಕಾರ ಎಲ್ಲ ನಾಗರಿಕರಿಗೂ ಉಚಿತವಾಗಿ ಲಸಿಕೆಯನ್ನು ನೀಡುವುದಾಗಿ ಘೋಷಿಸಿದೆ. ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆಂದು ಗ್ರಾಮ ಗ್ರಾಮಗಳಿಗೆ ತೆರಳಿ ಲಸಿಕೆ ನೀಡುವ ಪ್ರಯತ್ನವನ್ನೂ ಮಾಡುತ್ತಿರುವುದು ಸಂತೋಷದ ಸಂಗತಿ. ಆದರೆ ಕಾರ್ಮಿಕರಿಗೆ ಲಸಿಕೆ ನೀಡಲು ಕಾರ್ಮಿಕರ ನಿಧಿಯನ್ನು ರಾಜ್ಯ ಸರ್ಕಾರ ಬಳಕೆ ಮಾಡುತ್ತಿರುವುದೇಕೆ? ಇತರರಿಗೆ ಉಚಿತವಾಗಿ ನೀಡುವ ಲಸಿಕೆಯನ್ನು ಕಾರ್ಮಿಕರೇಕೆ ಹಣ ನೀಡಿ ಪಡೆಯಬೇಕು ಎಂಬ ಪ್ರಶ್ನೆಯನ್ನು ಹುಟ್ಟಿಹಾಕಿದೆ ’ದಿ ಪ್ರಿಂಟ್’ ಸುದ್ದಿ ಜಾಲತಾಣದ ವರದಿ.
ಖಾಸಗಿ ಆಸ್ಪತ್ರೆಗಳಿಂದ ಕಟ್ಟಡ ಕಾರ್ಮಿಕರಿಗಾಗಿ ಲಸಿಕೆಯನ್ನು ಖರೀದಿಸಲು ಕಾರ್ಮಿಕ ನಿಧಿಯನ್ನು ಸರ್ಕಾರ ಬಳಸುತ್ತಿದೆ ಎಂದು ಕಾರ್ಮಿಕ ಸಂಘಟನೆಗಳು ಈಗಾಗಲೇ ಆಕ್ರೋಶ ವ್ಯಕ್ತಪಡಿಸಿವೆ. ಆ.27ರಂದು ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಕಾರ್ಯಾದೇಶ ಹೊರಡಿಸಿದ್ದು, “ಪ್ರತಿ ಡೋಸ್‌ಗೆ 780 ರೂ. ಪಡೆದು, ಕೋವಿಶೀಲ್ಡ್ ಲಸಿಕೆಯ 2 ಲಕ್ಷ ಡೋಸ್ ಗಳನ್ನು ಪೂರೈಸುವಂತೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಗಳ ಸಂಘಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಅದಕ್ಕಾಗಿ 15.60 ಕೋಟಿ ರೂ. ವಿನಿಯೋಗಿಸಲು ಯೋಜಿಸಲಾಗಿದೆ” ಎಂದು ‘ದಿ ಪ್ರಿಂಟ್’ ವರದಿ ಮಾಡಿದೆ.
ಜುಲೈ 20, 2021ರಂದು ಉನ್ನತ ಮಟ್ಟದ ಸಭೆ ನಡೆದಿದ್ದು, ಕಾರ್ಮಿಕರಿಗೆ ಲಸಿಕೆ ನೀಡುವುದಕ್ಕಾಗಿ ಕಾರ್ಮಿಕ ನಿಧಿಯನ್ನು ಬಳಸುವ ಚರ್ಚೆಯಾಗಿತ್ತು. ಅದರಂತೆ ಮುಖ್ಯಕಾರ್ಯದರ್ಶಿಯವರು ಕಾರ್ಮಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿ, ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ಖರೀದಿಸಲು ಸೂಚಿಸಿದ್ದಾರೆ ಎಂದು ವರದಿ ಹೇಳಿದೆ.
ಕಾರ್ಮಿಕರಿಗೆ ಹಾಗೂ ಕಾರ್ಮಿಕರ ಕುಟುಂಬದವರಿಗಾಗಿ ಪಿಂಚಣಿ, ಸಾಲ, ವಿದ್ಯಾರ್ಥಿ ವೇತನ ಇತ್ಯಾದಿ ಕಾರ್ಯಕ್ರಮಗಳಿಗಾಗಿ ಇರುವ ನಿಧಿಯನ್ನು ಸರ್ಕಾರ ಕೋವಿಡ್ ಹೆಸರಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ.
ಇದನ್ನೂ ಓದಿ: ಲಸಿಕೆ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳ ಪಾಲಾಗುತ್ತಿರುವ ಕಟ್ಟಡ ಕಾರ್ಮಿಕರ ನಿಧಿ – AICCTU ಆಕ್ರೋಶ
“ಇದು ಸರ್ಕಾರದ ಹಣವಲ್ಲ. ಕಟ್ಟಡ ಕಾರ್ಮಿಕರಿಗೆ ಇನ್ಶೂರೆನ್ಸ್, ಪರಿಹಾರ, ಟೂಲ್ ಕಿಟ್, ಪಿಂಚಣಿಗಳನ್ನು ಒದಲಿಸಲೆಂದು ಬಿಲ್ಡರ್ ಗಳು ನೀಡುವ ಸೆಸ್ ನಿಂದ ಸಂಗ್ರಹವಾಗುವ ನಿಧಿ ಇದು” ಎಂದು ಪ್ರಗತಿಪರ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಹಾಗೂ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿನ್ ಆಫ್ ಟ್ರೆಂಡ್ ಯೂನಿಯನ್ ಸದಸ್ಯ ಪಿ.ಪಿ.ಅಪ್ಪಣ ಹೇಳಿದ್ದಾರೆ.