ಕಾಂಗ್ರೆಸ್‌ನ ಆಂತರಿಕ ಜಗಳದಿಂದಾಗಿ ಶಿರಾ ಕ್ಷೇತ್ರದಲ್ಲಿ 25 ಸಾವಿರ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ 40 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಹಾಗೆಯೇ ವಿಧಾನ ಪರಿಷತ್ ನ ನಾಲ್ಲು ಕ್ಷೇತ್ರಗಳು ಬಿಜೆಪಿ ಪಾಲಾಗಲಿವೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅತೀವ ವಿಶ್ವಾಸ ವ್ಯಕ್ತಪಡಿಸಿದರು.

ತುಮಕೂರಿನ ಮಾಧ್ಯಮಗಳೊಂದಿಗೆ ಮಾತನಾಡಿ ಅವರು ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್ ಗೌಡ, ವಿಜಯೇಂದ್ರ ಮತ್ತು ಸ್ಥಳೀಯ ಮುಖಂಡರು ಸಕ್ರಿಯವಾಗಿ ತೊಡಗಿಸಿಕೊಂಡ ಕೆಲಸ ಮಾಡಿದ ಪರಿಣಾಮ ಪಕ್ಷದ ಅಭ್ಯರ್ಥಿ ರಾಜೇಶ್ ಗೌಡ 25 ಸಾವಿರ ಮತಗಳ ಅಂತರಿಂದ ಆಯ್ಕೆಯಾಗಲಿದ್ದಾರೆ ಎಂದರು.

ಆರ್.ಆರ್. ನಗರದಲ್ಲಿ ಮುಖ್ಯಮಂತ್ರಿಗಳ ಪ್ರಚಾರ ಮತ್ತು ಸಚಿವರ, ಮುಖಂಡರ ಪ್ರಚಾರದಿಂದ ಬಿಜೆಪಿ 40 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರ್. ಆರ್ ನಗರವನ್ನು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿರಾ ಕ್ಷೇತ್ರವನ್ನು ಹಂಚಿಕೊಂಡಿದ್ದಾರೆ ಎಂದಿದ್ದಾರೆ.

ಡಿ.ಕೆ. ಶಿವಕುಮಾರ್ ಅವರು ಟಿ.ಬಿ.ಜಯಚಂದ್ರ ಅವರನ್ನು ಸೋಲಿಸಲು ಪಣ ತೊಟ್ಟಿದ್ದಾರೆ. ಹಾಗೆಯೇ ಸಿದ್ದರಾಮಯ್ಯ ರಾಜರಾಜೇಶ್ವರಿ ನಗರ ಕ್ಷೇತ್ರದ ಕುಸುಮಾ ಅವರನ್ನು ಸೋಲಿಸಲು ಪ್ರಯತ್ನ ನಡೆಸಿದ್ದಾರೆ. ಇದು ಕಾಂಗ್ರೆಸ್ ಒಳ ಜಗಳವಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಶಿರಾ ಉಪಚುನಾವಣೆ: ಚುನಾವಣೋತ್ತರ ಸಮೀಕ್ಷೆಗಳು ಏನು ಹೇಳುತ್ತವೆ?

ಕಾಂಗ್ರೆಸ್ ನಲ್ಲಿರುವ ಆಂತರಿಕ ಜಗಳ ಬಿಜೆಪಿಗೆ ವರದಾನವಾಗಲಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಸೋಲುವ ಭಯದಿಂದಲೇ ಸಿದ್ದರಾಮಯ್ಯ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಕೆಲವೇ ದಿನಗಳಲ್ಲಿ ಕಳೆದು ಹೋಗಲಿದ್ದಾರೆ. ಅವರನ್ನು ಮೂಲೆಗುಂಪು ಮಾಡಲು ಯತ್ನ ನಡೆಯುತ್ತಿದೆ. ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ನಾಯಕತ್ವಕ್ಕಾಗಿ ಪೈಪೋಟಿ ನಡೆಯುತ್ತಿದೆ. ಈ ಒಳಜಗಳ ಶೀಘ್ರವೇ ಬೀದಿಗೆ ಬರಲಿದೆ ಎಂದು ಟೀಕಿಸಿದರು.

ಶಿರಾದಲ್ಲಿ ಟಿ.ಬಿ.ಜಯಚಂದ್ರ ಸೋಲುವುದು ಖಚಿತ. ಸೋಲಿನ ಭೀತಿಯಿಂದಲೇ ಇವಿಎಂ ದೋಷದ ಬಗ್ಗೆ ಮಾತನಾಡುತ್ತಾರೆ. ಸೋಲಿನ ಸಂದೇಶವನ್ನು ಅವರೇ ನೀಡಿದ್ದಾರೆ. ಈಗಾಗಲೇ ಇವಿಎಂ ದೋಷದ ಕುರಿತು ಚುನಾವಣಾ ಆಯೋಗ ಮತ್ತು ಸುಪ್ರೀಂಕೋರ್ಟ್ ಕಾಂಗ್ರೆಸ್‌ಗೆ ಛೀಮಾರಿ ಹಾಕಿವೆ. ಆದರೂ ಇವಿಎಂ ದೋಷದ ಕುರಿತು ಕಾಂಗ್ರೆಸ್ ಮುಖಂಡರು ಮಾತನಾಡುತ್ತಿದ್ದಾರೆ ಎಂದು ಗೇಲಿ ಮಾಡಿದರು.


ಇದನ್ನೂ ಓದಿ:ಕಟೀಲ್ ವಿರುದ್ಧ ಟೀಕಾಸ್ತ್ರ: ಸಿದ್ದರಾಮಯ್ಯ ಕಾಂಗ್ರೆಸ್ ’ವಿದೂಷಕ’ ಎಂದ ಬಿಜೆಪಿ!

2 COMMENTS

  1. ಬಿ ಜೆ ಪಿಯಲ್ಲಿ ಈಗಾಗಲೇ ಅದು ನಡೆಯುತ್ತಿದೆ.
    ಈಗಾಗಲೇ ಹೇಳಿಕೆ ಬರುತ್ತಿದೆ

  2. ನಿಮಗೆ ನಾಚಿಕೆ ಆಗಬೇಕು ಇಷ್ಟೆಲ್ಲ ಹಣ ಸಂದಾಯ ವಾದರೂ ಬೆಲೆ ಏರಿಕೆ ಕಡಿಮೆ ಯಾಗಲಿಲ್ಲ..

LEAVE A REPLY

Please enter your comment!
Please enter your name here